(ಹಿಂದೆ ದೊಂದಿಯಾಟದ ದೊಂದಿಯ ಸುತ್ತಲಿನ ಸೊಬಗನ್ನು ಈ ಕೆಳಗಿನ ಕೊಂಡಿಯಲ್ಲಿ ವರ್ಣಿಸಿ ಬರೆದ ನಂತರ ಅದರ ಮೆಲುಕು ಮತ್ತೆ ಇಲ್ಲಿ ಈ ರೀತಿಯಾಗಿ!
ದೀವಟಿಗೆಯ ಆಟ ದೊಂದಿಯಾಟವಾಯಿತು. ಮಂಗಳೂರಿನ ದೊಂದಿಯಾಟದ ಸುತ್ತ ವಾಟ್ಸ್ಯಾಪ್ ಸಮೂಹ ಹುಟ್ಟಿತು. ದೊಂದಿಯಾಟ ಬರುತ್ತಲೇ ಹೋಗುತ್ತಲೇ ಇರುವಾಗ, ಈ ಸಮೂಹದಲ್ಲಿ ಸಮಾನ ಮನಸ್ಕರ ಒಂದು ಸಂಘಟನೆ ರೂಪುಗೊಂಡು ಬೆಳೆಯುತ್ತಲೇ ಇದೆ, ಸಮಾನ ಅಭಿರುಚಿಗಳ ಸುತ್ತ ಮಾಹಿತಿ, ವಿಷಯ ವಿನಿಮಯ ಮತ್ತು ಚರ್ಚೆಗಳು ನಡೆಯುತ್ತಲೇ ಇರುವಾಗ ದೊಂದಿಯ ಸುತ್ತಲಿನ ಹೊಸ ಅರ್ಥಗಳ ಸಾಧ್ಯತೆಯನ್ನು ನಾ ಹುಡುಕಹೊರಟೆ. ಈ ನಿಟ್ಟಿನಲ್ಲಿ ನಾ ಕಂಡುಕೊಂಡದ್ದು, ಧ್ಯೇಯೋದ್ದೇಶಗಳಿಗಿಂತ ಹೆಚ್ಚಿನ ತುಡಿತ ಇಲ್ಲಿ ಸಮಾನ ಮನಸ್ಸು ಮತ್ತು ಹೃದಯದ್ದು, ಆದರ ಸುತ್ತಲೂ ಸಂಬಂಧಿಸಿದ ಎಲ್ಲಾ ಧನಾತ್ಮಕ ತುಡಿತಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ.
ಹಾಗಾಗಿ ನಾನು ದೊಂದಿಯ ಅರ್ಥ ಬಿಟ್ಟು, "ದೊಂದಿಮಾನವ" ನ ಪರಿಕಲ್ಪನೆಗೆ ಹೊರಡುವುದು ಅನಿವಾರ್ಯ.
"ದೊಂದಿ" ಗೆ ನಾನು ಕೊಟ್ಟ ಅರ್ಥ ಆಧ್ಯಾತ್ಮಿಕ ತಳಹದಿಯದ್ದು, ಆದರೆ ಅದಕ್ಕೂ ಮೀರಿದ್ದು. ಆಧ್ಯಾತ್ಮಿಕ ಅರ್ಥವನ್ನು ಸಾರಲು "ಜ್ಯೋತಿ" ಯಾ "ದೀಪ"ದ ಪರಿಕಲ್ಪನೆ ಸಾಕು, ಅದು "ಬೆಳಕು". ಆದರೆ ಇದು ದೊಂದಿ. ದೊಂದಿ ಬೆಳಕನ್ನೂ ಹೊಂದಿದ್ದು, ಅದನ್ನೂ ಮೀರಿದ್ದು. ದೀಪ ಸೌಮ್ಯದಲ್ಲಿ ಬೆಳಗಿದರೆ, ದೊಂದಿ ಹೊತ್ತಿ ಉರಿಯುವಂತಹದ್ದು. ದೊಂದಿಯ ಉರಿಯಲ್ಲೂ ಶಾಂತಿಯ ಜೊತೆಜೊತೆಗೇ ಜೀವನೋತ್ಸಾಹದ ದಣಿವರಿಯದ ನಾಟ್ಯದ ನಿರಂತತೆ ಇದೆ. ದೊಂದಿ ಬರೇ ಬೆಳಕನ್ನು ಕೊಡುವುದಲ್ಲ, ಉರಿಯುತ್ತಲೇ, ಉರಿಯನ್ನು ಹಚ್ಚುತ್ತಾ ಹೋಗುವುದು. ಬೆಳಕನ್ನು ಮೀರಿದ ಉರಿಯ ಜ್ವಾಲೆ ವಾಸ್ತವದ ಕುರಿತಾಗಿ ಶರಣಾಗತಿಯ ವಿನಮ್ರ ಸ್ವೀಕಾರವಿದ್ದರೂ ಜೀವನೋತ್ಸಾಹ, ಅಭಿವ್ಯಕ್ತಿ ಮತ್ತು ಅಭಿಯಾನಗಳ ಕ್ಷಾತ್ರವನ್ನೂ ಸಾರುತ್ತಿದೆ.
ದೊಂದಿಯ ಜ್ವಾಲೆಯಿಂದ ಆವರಿತ ರಂಗಸ್ಥಳವು, ಅಲ್ಲಿ ನಡೆಯುವ ವಿಧವಿಧದ ಆಟವು ದೊಂದಿಯ ಜ್ವಾಲೆಗೆ ಹೆಚ್ಚಿನ ಅರ್ಥವನ್ನು ತರುತ್ತದೆ. ಇಲ್ಲಿ ಕಾಲಚಕ್ರದ ರಥದ ನಿರಂತರ ಅಭಿಯಾನದಲ್ಲಿ ನಡೆವ ದೇವರ ರಥೋತ್ಸವದ ಆಚರಣೆ ಇದೆ, ಈ ರಥೋತ್ಸವದಲ್ಲಿ ಹಳೆಯದು ಮತ್ತು ಹೊಸದು ಎರಡಕ್ಕೂ ಸಮಾನ ಪುರಸ್ಕಾರ ಇದೆ. ಕಾಲಚಕ್ರದ ರಥದ ತಳ್ಳುವಿಕೆಯಲ್ಲಿ ಎಲ್ಲಾ ಸ್ಥಳೀಯ ಬೇಧಗಳನ್ನು ಮೀರಿದ ಕೈಗಳು ಮಿಲಾಯಿಸುವ ಕಾವ್ಯವಿದೆ. ರಥೋತ್ಸವದ ನಿರಂತರತೆಯ ಕುರಿತ ಅಘೋಷಿತ ಮುಡಿಪು ಇದೆ. ಒಂದು ರಥೋತ್ಸವ ದಿಂದ ಇನ್ನೊಂದಕ್ಕೆ ಸಾಗುತ್ತಾ ಹೊಸ ಚಿಗುರು ಹಳೇ ಬೇರುಗಳ ಹೊಸ ಪಾಕದ ಕುರಿತಾಗಿ ನಿರಂತರ ತಪಸ್ಸು, ತಾಲೀಮು ಇದೆ. ಎಲ್ಲಾ ಅಭಿವ್ಯಕ್ತಿಗಳು ಸೇವೆಯ ರೂಪದಲ್ಲಿ ಸಾಗುತ್ತಿರುವುದರಿಂದ ಸೇವಕನಾಗದೇ ಸಲ್ಲುದೇ ಅಂತರಿಕ್ಷದಲ್ಲೇ ಕಣ್ಣಿಟ್ಟು ಹಾರಾಡುವವರ ಕಾಣಿಗೆ ಏನೂ ಕಾಣಿಸದಂತೆ ಎಲ್ಲವೂ ನಡೆಯುತ್ತಿದೆ. ಸೇವಾ ಮನೋಭಾವದವರ ಅನೌಪಚಾರಿಕ ಕೂಡಾಟ ಎಂದಿಗೂ ನಡೆಯುತ್ತಲೇ ಇದೆ, ಸದ್ದು ಗದ್ದಲವಿಲ್ಲದೇ!
ದೊಂದಿ ಸುತ್ತಲೂ ಸೇವೆಗೈಯುವವರೇ ದೊಂದಿಮಾನವರು. ಒಳಗಿನ ದೊಂದಿಯ ಪ್ರಖರತೆ, ಹೊರಗಿನ ಚರ್ಯೆಯಲ್ಲಿ ಕಾಣಸಿಗದು, ದೊಂದಿ ಮಾನವರೆಲ್ಲ ಸೇರಿ ಮಾಡುವ ಸಾಹಸವು ಲಂಕಾದಹನದಂತೆ ಋಣಾತ್ಮಕವನ್ನು ದಹದಹಿಸಿ ಧನಾತ್ಮಕತೆಯ ವಿಜಯಪತಾಕೆಯನ್ನು ಹಾರಿಸುವುದನ್ನು ನೋಡಿದಾಗಲೇ ಈ ದೊಂದಿಮಾನವರೊಳಗಿನ ದೊಂದಿ ರಂಗಸ್ಥಳದ ಮೇಲಿನ ದೊಂದಿಗೂ ಮೀರಿ ಉರಿಯುವುದರ ಅನುಭವ ಸಿಗುತ್ತದೆ.
ದೊಂದಿ ಮಾನವನ ಒಳಗಿನ ಉರಿ, ಹೊರಗಿನ ಅಭಿಯಾನದ ಸಹಕಾರದ ಅಭಿವ್ಯಕ್ತಿಯ ನಡುವೆ ಆತನ ಮುಖ ನಿರ್ವಿಕಾರ ಮತ್ತು ಶಾಂತ. ಎಲ್ಲವೂ ಅಭಿವ್ಯಕ್ತಿಯ ಸುತ್ತಲಿನ ದೊಂದಿಯಾಟದಲ್ಲೇ ಸ್ಪಷ್ಟವಾಗಿ, ಕರಾರುವಕ್ಕಾಗಿ ವ್ಯಕ್ತ. ಸಹನೆಯ ಸಾಕಾರ ಮತ್ತು ಶಾಂತಿಪ್ರಿಯನಾದರೂ ನಮ್ಮ ವಾಸ್ತವದ ಅನ್ಯಾಯಗಳ ಕುರಿತು ಒಳಒಳಗೇ ಉರಿಯುತ್ತಾ ವೇದನೆಯಲ್ಲಿರುವವ. ವೇದನೆಯು ಹೆಚ್ಚಿದಂತೆ ಬರುವ ಕೋಪವನ್ನು ದೊಂದಿಯಾಟದಂತ ಅಭಿಯಾನದಲ್ಲಿ ತರ್ಪಣವಿಟ್ಟು ಘನತೆಯಲ್ಲಿ ನಿರ್ವಹಿಸಿ ಕೈತೊಳೆದುಕೊಳ್ಳುವವ.
ದೊಂದಿಮಾನವ ವಯಕ್ತಿಕವಾಗಿ ಯಾರಿಗೂ ಸಲ್ಲುವನಲ್ಲ, ಆದರೆ ಇಡೀ ಮನುಕುಲಕ್ಕೆ ಸಲ್ಲುವತ್ತ ವಿಶ್ವಮಾನವತೆಯ ತಳಹದಿಯಲ್ಲಿ ಯಾರಿಗೂ ಸಲ್ಲಬಲ್ಲವ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಗೋಡೆಗಳಿಲ್ಲದೇ ಸಂಕಲನವನ್ನು ತರಬಲ್ಲವ.
ದೊಂದಿಮಾನವನದ್ದು ಮನುಷ್ಯತ್ವ ಮೀರಿದ ಸ್ಥಿತಿ ಮತ್ತು ನಡೆ. ದೈವಿಕತೆ, ಮನುಷ್ಯತ್ವ, ಮಕ್ಕಳಾಟಿಕೆ, ಪುರುಷತ್ವ, ಸ್ತ್ರೀಲಾಲಿತ್ಯ, ಯೋಜಕತ್ವ, ಸಾಮಾಜಿಕ ಕಳಕಳಿ, ನಾಗರಿಕ ಸಮಾಜದ ಜವಾಬ್ದಾರಿ, ಧನಾತ್ಮಕ ವಿಷಯಗಳ ಕುರಿತು ಅಭಿಯಾನ ಮತ್ತು ಆವಿಷ್ಕಾರ, ವಾಸ್ತವ ನೆಲೆ, ಸದಾ ಕನಸಿಗೆ ಕೈಗೂಡುವ ಸಾಧ್ಯತೆಗಳ ಸುತ್ತಲಿನ ಯೋಜನೆ, ಯೋಜನೆಗಳ ಸುತ್ತಲಿನ ಸಹಕಾರ ಮತ್ತು ಸಹಯೋಗ, ದೊಂದಿಯಾಟದಂತಹ ವಿಜಯಗಳ ನಂತರ ಮತ್ತೆ ಚೌಕಿಗೆ ಬಂದು ಇನ್ನೊಂದು ಕನಸಿನ ಕೂಸಿನ ಸುತ್ತ ಮತ್ತೆ ತಲೆಕೆಡಿಸಿಕೊಂಡು ಒದ್ದಾಡುವತ್ತ ಮತ್ತೆ ತಹತಹ!
ದೊಂದಿಮಾನವ, ಇಂದಿನ ಮಾನವ ಮತ್ತು ಮುಂದಿನ ಸುಧಾರಿತ ಮಾನವನ ನಡುವಿನ ವಿಕಾಸದ ಸರಪಳಿಯ ಅತೀ ಮುಖ್ಯ ಕೊಂಡಿ!
"ದೊಂದಿ ಬೆಳಕು" ಎಂಬ ವಾಟ್ಸ್ಯಾಪ್ ಸಮೂಹದಲ್ಲಿ ಈ ದೊಂದಿಮಾನವರು ಸಾಕಷ್ಟು ಕಲೆತಿದ್ದಾರೆ. ಸಾವಿರಗಟ್ಟಲೆ ಇನ್ನಷ್ಟು ಸೇರುವತ್ತ ಈ ಸಮೂಹ ಬೆಳೆಯಲಿಕ್ಕಿದೆ! ದೊಂದಿಮಾನವನ ಗಾಥೆ ಇನ್ನು ಶುರುವಷ್ಟೇ, ಇನ್ನೂ ಮುನ್ನುಡಿಯಲ್ಲಿದೆ! ಮಹಾಕಾವ್ಯವಾಗಿ ಹರಿದು ಮೊಳಗಲಿದೆ!
ಬನ್ನಿ, ದೊಂದಿಮಾನವರಾಗೋಣ! ದೊಂದಿಮಾನವರಾಗುವವರು, ಅಪರಿಮಿತ ದೊಂದಿ ಮಾನವ, ಮಹಾಲಿಂಗ ಭಟ್ಟರನ್ನು ಸಂಪರ್ಕಿಸಿ!

No comments:
Post a Comment