ನಮ್ಮದು ಬೇಸಾಯದ ಮನೆ, ಜೊತೆಗೆ ಮನೆ ಕಟ್ಟಿದ ಸಾಲ ತೀರಲು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲೇ
ದಿನಸಿ ಅಂಗಡಿ ಹೆಚ್ಚಿನದು.
ಬೇಸಾಯದ ಮನೆ ಅಂದ ಮೇಲೆ ಗಂಟಿ ಕಟ್ಕಂಬದೇ. ಹಾಲಿಗೆ ಎಮ್ಮಿ ದನ, ಗೆದ್ದಿ ಹೂಡುಕೆ ಕೋಣ ಇಪ್ಪುದೇ. ಗುಡ್ಡ ಹೆಚ್ಚ್ ದಿನ ಇಪ್ಪುದಿಲ್ಲ, ಮಾರಿ ಹೋತಿತ್! ಕೋಣ ಇದ್ರ್ ಶೀಲ ಮಾಡ್ಸು ಕೆಲ್ಸ, ಎಮ್ಮಿ ದನಕ್ ಗಬ್ಬ ಆಪುಕ್ ಕ್ವಾಟಕ್ ಹೋಯ್ ಇಂಜೆಕ್ಷನ್ ಹಾಕ್ಸು ಕೆಲ್ಸ. ಗಬ್ಬ ನಿಂತ್ ಮೇಲ್ ಕರು ಹಾಕು ದಿನ ಬತ್, ಒಂಭತ್ ತಿಂಗಳ್ ಕಾಯ್ಕ್. ಆಮೇಲ್ ದಿನಾ
ಗಮನ ಇಡ್ಕ್, ಪಚ್ಚಲ್ ನೋಡಿ ಹೇಳ್ಲಕ್, ಇವತ್ತಾ ನಾಳಿಯಾ ಅಂತ್. ಕರು ಹಾಕಿಕೂಡ್ಲೇ ಎರಡ್ ಜಾಗ್ರತಿ ಮಾಡ್ಕ್. ಒಂದ್ ಕರುವಿಂದ್ ಬಿಳಿ ಉಗರ್ ಒಣುಗು ಮೊದ್ಲೇ ಕೆತ್ತಿ ನಡುಕೆ ಸುಲಭ ಮಾಡಿ ಕೊಡುದು. ಇನ್ನೊಂದ್ ತಾಯಿದ್ ಕಸ ಬೀಳುದ್ ಕಾಯುದ್, ತಾಯಿ ಕಸ ತಿನ್ನು ಸಾಧ್ಯತೆ ಇತ್, ಕಸ ತಿಂದ್ರ್ ಹಾಲು ಕೊಡುದು ಗೋವಿಂದ, ಹಾಂಗಾಯ್! ಕಸ ಬಿದ್ ಮೇಲ್ ನಾಯಿ ತಿನ್ನದಿದ್ದಾಂಗ್ ಹುಗಿಕ್, ನಾವ್ ನಮ್ ಗೊಬ್ರ ಗುಂಡಿಲೇ ಹುಗುದ್
ಕಲ್ತ್ಕಂತ್.
ನಮ್ಮನಿಲ್ ಹೆಚ್ ಹಾಲ್ ಕೊಡು ದನಗಳೇ ಇಪ್ಪುದ್. ಒಂದ್ ಹಾಲೆಸ್ಟೀನ್ ದನ ದಿನಕ್ ೨೫ ಲೀಟರ್ ಹಾಲ್ ಕೊಡುದ್ ಇದ್ದಿತ್ತ್, ದಿನಕ್ ಮೂರ್ ಸರಿ ಕರ್ದರೂ ಹಾಲ್ ಹರ್ಕಂಡ್ ಬಪ್ಪಾಂಗ್. ಇಂಥಾ ಒಂದ್ ದನ ಗಬ್ಬ ಕಟ್ಟಿ ಕರು ಹಾಕು ದಿನ ಬಂತ್. ರಾತ್ರಿನೇ ಕರು ಹಾಕತ್ ಅಮಿಗ್ ಆಯ್ತ್. ಅಪ್ಪಯ್ಯ ರಾತ್ರಿ ೧೨ ಗಂಟಿಗೇ ಹೋಯ್ ಕಾಂತ್ರ್ ಕರು ಹೊರ ಬಪ್ ಸನ್ನಿ ಆಯ್ತ್. ಗರ್ಭದ ಚೀಲ ಒಡ್ದ್ ಕರುವಿನ ಮುಖ ಕಾಂಬು ಸುರುವಾಯ್ತ್. ರಾತ್ರಿ ಎರಡ್ ಗಂಟಿ ಆದ್ರೂ ಕರು ಹೊರಗ್ ಬರ್ಲಿಲ್ಲ, ಕರುವಿನ ಮುಖ ಎರಡ್ ಕಾಲ್ ಮಾತ್ರ ಸ್ವಲ್ಪ ಹೊರಗ್ ಬಂದ್ ನೇತ್ಕಾಡ್ಕಂಡಿತ್, ತಾಯಿ ಆಕಡಿ ಈಕಡಿ ಒಂದೇ ಸಮ್ನಿ ತಿರ್ಗುದು, ಅದ್ಕೂ ನೋವ್ ತಡ್ಕಂಬಕ್ ಆಪುದಲ್ಲ!
ನಮ್ಮ ಅಪ್ಪಯ್ಯಂಗ್ ಎಲ್ಲಾ ಕೆಲ್ಸ ಬತ್, ಆದ್ರ್ ಇದ್ ಮಾತ್ರ ಸಲ್ಪ ಫಜೀತಿ ಆಯ್ತ್. ಇನ್ನೆಂತ ಮಾಡುದ್, ಸದಿಮಾಷ್ಟ್ರನ್ನೇ ಏಳ್ಸುದ್. ಅವರ್ ಮನಿಗ್ ಹೋಯ್ ಅವರನ್ ಏಳ್ಸಿ ಕರ್ಕಂಬಪ್ಪತಿಗೆ ರಾತ್ರಿ ಎರಡೂವರಿ ಗಂಟಿ. ಸದಿ ಮಾಷ್ಟ್ರದ್ ಒಂದ್ ಕುಸಕ್ ಇಲ್ಲಾ, "ಹಾಂ ಹಾಃ, ಬಂದೆ ಬಂದೆ ಬಂದೆ", ಬಂದೇ ಬಿಟ್ರ್, ಒಂದ್ ಸರಿ ಕಂಡ್ರ್, ಹೀಂಗ್ ಮಾಡುದ್ ಅಂದ್ರ್. ಮುಖ ಮತ್ತ್ ಕಾಲ್ ಒಟ್ಟಿಗೇ ಎಳ್ದ್ರೆ, ಕರುಗೆ ಪೆಟ್ ಆಪುದಿಲ್ಲ ಅಂದ್ರ್. ನಾವ್ ಅಪ್ಪ ಮಕ್ಳ್ ಸೇರಿ ಕರುವಿನ್ ಮುಖ ಕಾಲ್ ಹಿಡ್ಕಂಡ್ ನಿಧಾನ ಸಲ್ಪ ಸಲ್ಪ ಎಳ್ದ್
ಮೇಲ್ ಕೊನೆಗೇ ಒಂದೇ ಸರಿ ಕರು ಹೊರ ಬಂದ್, ಹಾಕಿದ್ ಹುಲ್ಲಿನ್ ಮೇಲ್ ಬಿದ್ ಮೇಲ್ ಅಯ್ಯಬ್ಬಾ! ಗಂಟಿ ಮೂರ್ ಆಯಿತ್. ಸದಿ ಮಾಷ್ಟ್ರಿಗ್ ಒಂದ್ ಬಿಸಿ ಹಾಲೋ ಕಾಪಿಯೋ ಕೊಡುಕ್ ಇನ್ನೂ ಬೆಳಗ್ ಆಯಿಲ್ಲ, ಅವರ್ ಹಾಂಗೇ ಮಿಣ್ಣಗ್ ಹೋಯ್ ಮನಿಲ್ ಮತ್ ಮನ್ಕಂಡ್ರ್! ನಮ್ಮ ಅಮ್ಮನಿಗ್ ಸಂಭ್ರಮ ತಡುಕ್ ಎಡಿಯ, ದೊಡ್ಡ್ ಕಪ್ ಕರು, ಹೆಣ್ ಬೇರೆ. ಕರು ಹೆಚ್ ದೊಡ್ಡದ್ ಆಪುಕೆ ಹೋಯ್ ಇಷ್ಟ್ ರಾಮಾಯಣಾ ಆದ್, ಸದಿ ಮಾಷ್ಟ್ರ್ ಬಪ್ಕೋಯ್ ಎಲ್ಲಾ ಸಸೂತ್ರ, ಅರ್ಧ ರಾತ್ರಿ ಡಾಕ್ಟ್ರನ್ ಹುಡ್ಕಂಡ್ ಕ್ವಾಟಕ್ ಹೋಪು ತಾಪತ್ರಯ ತಪ್ಪತ್ (ಫೋನ್ ಇಲ್ಲಾ)!
ಸದಿ ಮಾಷ್ಟ್ರದ್ ದನ ಕರುದ್ ವಿಷ್ಯದಲ್ ಸಿದ್ಧ ಹಸ್ತ, ಸಣ್ಣಾ ಪುಟ್ಟದ್ ಎಲ್ಲಾ ನಾಟಿ
ಔಷಧದಲ್ಲೇ ಆತ್, ಡಾಕ್ಟ್ರ್ ಬಪ್ಪುಲೊರಿಗೆ ಇಲ್ಲಾ ಡಾಕ್ಟ್ರ್ ಬರ್ದಿದ್ ಹಾಂಗ್. ಗಂಡಸ್ ಆಪುಕೋಯ್ ಹೆಂಗಸರ್ ಹೆರುಕ್ ಒಂದ್ ಕರಿಲಿಲ್ಲ, ಇಲ್ದಿದ್ರ್ ಅದೂ ಆತಿತ್ತೋ ಏನೋ, ಮಿಡ್ಬಾಯಿ ಕೆಲ್ಸಕ್ ಸಿಕ್ತಿದ್ರ್! ಇನ್ನ್ ಮನ್ಷರಿಗೂ ಸಣ್ ಮಟ್ಟಕ್ ಔಷಧಿ ಹೇಳ್ತಿದ್ರ್. ಕೆಲವ್ ಖಾಯಿಲಿಗೆ ಅವ್ರ್ ಕೇಣ್ಕಾತ್, "ಹೂಸ್ ಹ್ಯಾಂಗಿತ್" ಅಂತ್, ಆ ಪ್ರಶ್ನಿಗ್ ಎಲ್ಲಾ ಉತ್ತರ ಕೊಡು ಧೈರ್ಯ ಇಲ್ದಿರೋ ಹೆಂಗಸ್ರ್ ಔಷಧಿ ಕೇಂಬುಕ್ ಹೋತಿಲ್ಲ!
ಶಾಲಿ ಕೆಲ್ಸ ಬಿಟ್ ಮೇಲ್ ಸದಿ ಮಾಷ್ಟ್ರನ್ ಗದ್ದಿ ಬದಿ ಹೆಚ್ಚ್ ಕಾಂಬುಕ್ ಆತಿತ್. ಎಂದಿನ್ ಬ್ಯಾಸಾಯ ಅಲ್ದೇ ತರ್ಕಾರಿದ್ ಒಂದ್ ಸಣ್ ಗದ್ದಿ ಇತ್. ಅಲ್ ಎಲ್ಲ ಕೆಲ್ಸ ಅವ್ರದ್ದೇ, ಕಳಿ ಕೀಳುದ್ ಸೇರಿ. ಬೆಳಿಗ್ ೧೧ ಗಂಟಿವರಿಗೂ ಗದ್ದಿ ಕೆಲ್ಸವೇ, ಕಡಿಗ್ ಸ್ನಾನ, ಪೂಜಿ,
ಊಟ, ನಿದ್ರಿ, ಕಾಫಿ, ಪ್ಯಾಟಿಗ್ ಹೋಪುದ್, ಊರಿನ್ ಬೇರೆ ಬೇರೆ ಹರ್ಬ್, ಪುರ್ಸೊತ್ತಿಲ್ಲ!
ನಾವ್ ಹೈಸ್ಕೂಲಿಗ್ ಬಪ್ಪತಿಗೆ ನಮ್ ಅಜ್ಜಯ್ಯ ಎಲ್ಲಾ ಬಿಟ್ ವೈರಾಗ್ಯದ್ ಆಧ್ಯಾತ್ಮ
ಮಾಡ್ತೆ ಅಂತ್ ಮನಿ ಬಿಟ್ ಶ್ರಂಗೇರಿಗ್ ಹೋಯ್, ಅಲ್ ಇಪ್ಪೋರಿಗ್ ಇವ್ರದ್ ಸರಿ ಬರ್ದೇ ಮಡ್ರಾಸ್ ಮಗ್ಳ್ ಮನಿಗ್ ಹೋದವ್ರನ್ ನಮ್
ಅಪ್ಪಯ್ಯ ಮನಿಗ್ ಕರ್ಕಂಬಂದ್ ನಮ್ಮನಿಲೇ ಆಧ್ಯಾತ್ಮ ಮಾಡಿ ಅಂಬುದನ್ ಮನ್ಸಿಲ್ಲದ್
ಮನ್ಸಲ್ ಒಪ್ಪಿ, ಆಧ್ಯಾತ್ಮ ಮತ್ ನಮ್ ಅಂಗಡಿಗ್ ಎಲ್ಲಾ ತೂಕ ಮಾಡಿ ಪಟ್ಟಣ ಮಾಡು
ಕೆಲ್ಸ ಅಲ್ದೇ ಸಿಕ್ಕಿಯವ್ರಿಗ್ ಕೆಲ್ಸ ಊಟದ್ ಮಧ್ಯೆ ಆಧ್ಯಾತ್ಮದ್ ಬೋಧನೆ ಅವ್ರದ್ ಜೋರಾಗಿತ್. ಅವ್ರ್ ಓದು ಪುಸ್ತಕ ಎಲ್ಲಾ ಅದ್ವೈತದ್, ಸಾಯಿಬಾಬಂದ್ ಮ್ಯಾಗಜಿನ್, ಸಾಂಖ್ಯಶಾಸ್ತ್ರ ಹೀಂಗಿಂದ್ ಕಗ್ಗಂಟ್, ಭಗವದ್ಗೀತಿ ಇತ್ಯಾದಿ ಇತ್ಯಾದಿ. ನಮಗ್ ಹೈಸ್ಕೂಲಲ್ ಸಿಕ್ಕಿದ್ ಪರೀಕ್ಷೆ ಎಲ್ಲ ಕಟ್ಟು ಹುಚ್. ಹಿಂದಿ ಪರೀಕ್ಷಿ, ಸಂಸ್ಕೃತದಲ್ ಹಾಂಗಿದೇ ಪರೀಕ್ಷಿ ಎಲ್ಲಾ ಎಸ್ಸೆಸ್ಸೆಲ್ಸಿ ಮುಗುದ್ರೊಳ್ಗ್ ಆ ಲೆವಲ್ ಒರಿಗಿದ್
ಎಲ್ಲಾ ಕಟ್ಟಿ ಪಾಸಾಯಿತ್. ನಾ ಪಿಯುಸಿಗ್ ಬಪ್ಪತಿಗೆ ಉಡುಪಿ ಮಠದವ್ರದ್ ಒಂದ್ ಭಗವದ್ಗೀತೆದ್ ಪರೀಕ್ಷಿ ಇತ್, ನಾವೆಲ್ಲ ಕಟ್ಟಿ ಕೂತ್ಕಂತ್. ಅದ್ರದ್ದೇ ಒಂದ್ ಪುಸ್ತಕ ಇತ್, ಅದನ್ ಓದಿದ್ರೆ ತಲಿ
ಹನ್ನೆರೆಡಾಣಿ ಆಪಂಗಿತ್. ನಾ ಎಂತ ಮಾಡ್ಯೆ ಅಂದ್ರ್, ನಮ್ಮಜ್ಜಯ್ಯ ಹೇಳಿದ್ ಅಷ್ಟೂ ಸೇರ್ಸಿ, "ಆತ್ಮ ಪರಮಾತ್ಮ ಎರಡೂ ಬೇರೆ ಬೇರೆ" ಅಂಬ ಮಸಾಲಿ ಮಾತ್ರ ಬದ್ಲಾಯ್ಸಿ, ಬರು ಪೇಪರ್ ಜಾಸ್ತಿ ಕೇಂಡ್ ಕೇಂಡ್ ಬರ್ದ್ ಬರ್ದ್ ಹಾಕಿಯೇ, ನಮ್ಮಲ್ ಎಲ್ಲರೂ ಸೆಕಂಡ್ ಕ್ಲಾಸ್ ಪಾಸ್, ನಾ ಒಬ್ನೇ ಫಷ್ಟ್ ಕ್ಲಾಸ್ ಪಾಸ್, ನಮ್ಮಜ್ಜಯ್ಯನ್ ಸರ್ಕ್ ಬರ್ದ್, ಪುಸ್ತಕದ್ ಬದ್ನಿ ಕಾಯ್ ಬರಿದೇ, ಪರೀಕ್ಷೆ ತಿದ್ದಿಯವ್ರಿಗ್ ಬರದ್ ಎಷ್ಟ್ ಅರ್ಥ ಆಯ್ತೋ ಇಲ್ವೋ, ಬಡ್ಡಿ ಮಗ ಸುಮಾರ್ ಬರಿಕಾರೆ ಮಾರ್ಕ್ ಕೊಡ್ಕೆ ಅಂತ್ ಕೊಟ್ಟಿರ್ಕ್!
ಸದಿ ಮಾಷ್ಟ್ರ್ ನಂಗ್ ಲೌಕಿಕದಲ್ ಭಾರೀ ಮೆಚ್ಚಿಗಿ ಆದವ್ರ್. ಇತ್ ನಮ್ ಅಜ್ಜಯ್ಯ, "ಮಾರಾಯ, ನಂಗೆಲ್ಲ ೭೦ ದಾಟಿದ್ ಮೇಲ್ ಆಧ್ಯಾತ್ಮ ತಾಗಿದ್, ನಿಂಗ್ ನಲ್ವತ್ರಲ್ಲೇ ತಾಗತ್" ಅಂತ ವರವೋ ಶಾಪವೋ ಕೊಟ್ಟವ್ರ್, ಅವ್ರ್ ಹ್ಯಾಂಗಿದ್ರೂ ಹೇಳಿದ್ದೇ ಹೇಳಿ ನಮ್ ತಲಿ ತಿಂಬವ್ರ್, ಸುಮ್ನೇ ಕೇಳು ಬದ್ಲ್ ನಾ ಅಡ್ಡ್ ಕೊಕ್ಕಿ ಪ್ರಶ್ನಿ ಎಲ್ಲಾ ಹಾಕಿ, ಅವ್ರ್ ಆಧ್ಯಾತ್ಮದ್ ಜ್ನಾನ ಸರಿ ಇತ್ ಅಂತ್ ಗೊತ್ತಾದವ, ನಡತಿಲೂ ತಿಳದ್ದನ್ ಮಾಡುವವರೇ. ಹಾಂಗಾಯ್, ಆಧ್ಯಾತ್ಮದ್ ನಮ್ ಅಜ್ಜಯ್ಯ ಲೌಕಿಕದ್ ಸದಿ ಮಾಷ್ಟ್ರ್ ಒಟ್ಟಾದ್ರ್ ಹ್ಯಾಂಗಿತ್ ಕಾಂಬಾ
ಅಂಬ್ ಕುತೂಹಲ ನಂದ್.
ನಮ್ ಅಜ್ಜಯ್ಯ ಸದಿ ಮಾಷ್ಟ್ರಿಗಿಂತ ಹತ್ರತ್ರ ಎಂಟ್ ಹತ್ ವರ್ಷ ದೊಡ್ಡವ್ರ್, ಹಾಂಗಾಯ್ ದೊಡ್ಡವ್ರ್ ಗೌರವ ಸದಿ ಮಾಷ್ಟ್ರ್ ಕೊಡುವವರೇ. ಒಂದೆರೆಡ್ ಮುಖಾಮುಖಿಲ್
ಕಂಡೆ, ನಮ್ಮಜ್ಜಯ್ಯನ್ ಆಧ್ಯಾತ್ಮದ್ ಪ್ಲೇಟಿಗ್ ಸದಿ ಮಾಷ್ಟ್ರದ್ ಒಂದೇ ಬಾಣ, "ನೀವ್ ಹೇಳುದ್ ಎಲ್ಲಾ ಸರಿ, ಆದ್ರ್ ಗ್ರಹಸ್ಥಾಶ್ರಮದಲ್ ಇದ್ದವ್ನಿಗ್ ಸನ್ಯಾಸ ಕೂಡದು, ಹಾಂಗಾಯ್ ನಿಮ್ದ್ ನಮ್ಗ್ ಅನ್ವಯಿಸುವುದಿಲ್ಲ" ಅಂತ್ ಒಂದೇ ಸರಿ ಬಾಯ್ ಕಟ್ಸಿ ಬಿಟ್ರ್. ನಮ್ ಅಜ್ಜಯ್ಯ ಸದಿ ಮಾಸ್ಟ್ರ್ ಹೋದ್ ಮೇಲ್ ನಂಗ್ ಹೇಳ್ತ್ರ್, "ಸದಿಯ ಭಾರೀ ಯೋಗ್ಯ, ಆದ್ರೂ ಈ ವಯಸ್ಸಲ್ ಅವನಿಗೆ ಆಧ್ಯಾತ್ಮ ತಾಗುದಿಲ್ಲಾ, ಬೇಕುಗಳನ್ನ ಸಾಕುದ್ ಬಿಟ್ ಸಾಕು ಅಂಬುದನ್ ಸಾಕುಕ್ ಅವನ್ ಇನ್ನೂ ಕಲೀ ಬೇಕ್" ಅಂತ ಕೈತೊಳ್ಕಂಡ್ರ್. ಇವರಿಬ್ಬರೂ ಮನಿಲೋ ಇಲ್ಲಾ ಊಟಗಳಲ್ಲಿ ಮುಖಾಮುಖಿ ಆದಾಗ ನನ್ ಕುತೂಹಲ ಹೆಚ್, ಹ್ಯಾಂಗಿರತ್ ಇವ್ರಿಬ್ರದ್ ಅಂತ, ಕಾರಣ ಸದಿ ಮಾಷ್ಟ್ರ್ ಊಟಗಳಲ್ ಅಗ್ರ ಪಂಕ್ತಿಯವ್ರೇ! ಸಲಹೆ, ನಿರ್ವಹಣೆ, ಬೆಳಿಗ್ಗೆ ತರ್ಕಾರಿ ಕತ್ತರ್ಸುವುದ್ರಲ್ ಯಜಮಾನಿಕಿ, ಚೂರ್ಣಿಕಿ ಇತ್ಯಾದಿ. ನಮ್ಮಜ್ಜಯ್ಯ ಹಿರುಯವ್ರ್, ಆಧ್ಯಾತ್ಮದ್ ಗಾಳಿಯವ್ರ್, ವೈದಿಕ ಮಂತ್ರ ಹೇಳುವವರ್, ಮಾತ್ಗಿ ಅವ್ಕಾಶ ಸಿಕ್ಕಿರ್ ಬಿಡದಿರುವವರ್, ಇಬ್ರದ್ದೂ ಪ್ಲೇಟ್ ಒಂದಕ್ಕೊಂದ್ ತಾಳಿ ಇಲ್ಲ, ಹ್ಯಾಂಗಾತ್ ಅಂತ್ ಕಾಂಬಾ ಅಂತ್. ಸದಿ ಮಾಷ್ಟ್ರ್ ಬುದ್ಧಿವಂತ್ರ್, ಆಧ್ಯಾತ್ಮದ್ ಮಾತುಗಳ್ ಬಂದಾಗ ಬಾಯಿ ಬಿಡುದಿಲ್ಲ, ದೊಡ್ಡದಾಗಿ ಹಾ ಹಾ ಹಾ ಅಂತ್ ನಕ್ಕ್ ಬಿಟ್ ಕಣ್ ಮಿಟ್ಕಿಸಿ, ಕುತ್ತಿಗಿ ಹಾರ್ಸಿ ನಂಗೆಲ್ಲಾ ಸೂಚನೆ ಕೊಡ್ತಿದ್ರ್, ಎಲ್ಲಾ ಸರಿ ಆದ್ರ್ ಇದೆಲ್ಲಾ "ನಮ್ ಬದುಕಿನ ಸಿಲೆಬಸ್ಸಿಗೆ ಮೀರಿದ್" ಅಂತ. ಸದಿ ಮಾಷ್ಟ್ರ್ ತಮ್ಮ ನಿಲುವಿಗೂ ಅನ್ಯಾಯ ಆಗದೇ ಇದ್ ಹಾಂಗ್, ಹಿರಿಯರೊಬ್ಬರ ಜೊತಿಗಿನ ಭಿನ್ನಾಭಿಪ್ರಾಯವೂ ಕಟಿಪಿಟಿಯಾಗದ ಹಾಂಗ್ "ರಾಯಭಾರ" ಮತ್ ಹಾಸ್ಯದಲ್ ತಕ್ಕಂಡ್ ಹೋಪುದ್ ಇನ್ನೂ ಕಣ್ಣಿಗ್ ಕಟ್ಟಿಹಾಂಗ್ ಇತ್. ನಾ ಮಾತ್ರ ಸದಿ ಮಾಷ್ಟ್ರದ್ ಲೌಕಿಕ, ನಮ್ಮಜ್ಜಯ್ಯಂದ್ ಆಧ್ಯಾತ್ಮ ಎರಡಕ್ಕೂ ಒಟ್ಟಿಗೇ ಜೋತ್ ಬಿದ್ದ್ ನನ್ನದೇ ಆದ
ತ್ರಿಶಂಕುವಿನಲ್ಲಿ ನೇತಾಡುದ್ ಕಲ್ತ್, ಅದೇ ನನ್ ಬದುಕಿನ ಉದ್ದಕ್ಕೂ ನಡ್ಕಂಡೇ ಬಂದ್, ಈ ನೇತಾಡುದನ್ ಉಯ್ಯಾಲಿ ಮಾಡ್ಕಂಡ್ ಸಲ್ಪ್ ಹಾಯಾಗಿ ಇಪ್ಪುಕಾತ್ತಾ ಕಾಂತೆ ಅಷ್ಟೇ!
ಇಲ್ ಸದಿ ಮಾಷ್ಟ್ರ್ "ಬ್ವಾಡಿ ಲ್ಯಂಗ್ವೇಜ್" ನಲ್ ನಾ ಕಲ್ತ್ ದೊಡ್ ಅಂಶ ಏನೆಂದ್ರೆ, ಬದುಕಲ್ ಎಲ್ಲಾ ಗೆಲ್ಲುಕಾತ್ತಿಲ್ಲ, ಆದ್ರ್ "ಸಮನ್ವಯ" ಕಲೆಯನ್ ಕಲ್ತ್ಕಂಡ್ರ್ ಎಲ್ಲಾ ಸಲೀಸ್! ಇದ್ ದೊಡ್ಡ ಪಾಠ! ಸದಿ ಮಾಷ್ಟ್ರ್ ಆಸ್ತಿಕರೇ, ಲೌಕಿಕದಲ್ಲೂ ಮುಳುಗಿಯವ್ರೇ, ಎರಡನ್ನೂ ಚೆನ್ನಾಗಿ ಸಂಭಾಳಿಸಿ, ಸಮನ್ವಯದಲ್ಲಿ ಸಾಗುವಾಗ ವಿಪರೀತವಾಗುವುದನ್ನು ಗೆರೆಹಾಕಿಕೊಂಡು ಬಿಟ್ಟವರು, ತನಗೆ ಹೊಂದದ ವಿಚಾರಧಾರೆಗೆ ಸರಿ ಇಲ್ಲಾ ತಪ್ಪು ಅನ್ನದೇ ಜಾರಿಕೊಂಡು ಸ್ನೇಹದ
ಸಂಬಂಧಕ್ಕೆ ಚ್ಯುತಿ ಬಾರದಂತೆ ಉಳಿಸಿಕೊಂಡು ಬೆಳೆಸಿಕೊಂಡವರು. ನಮ್ಮಜ್ಜಯ್ಯನೂ ಸದಿ ಮಾಷ್ಟ್ರ್ ಎದ್ರ್ ಆಧ್ಯಾತ್ಮದ್ ಪ್ಲೇಟ್ ಹಾಕುದ್ ಬಿಟ್ರ್, ಸದಿ ಮಾಷ್ಟ್ರ್ ಗೆರಿಗೆ ಬೆಲಿ ಕೊಟ್ರ್, ಅವ್ರ್ ಆಧ್ಯಾತ್ಮವೂ ನೈಜ ಆದ್ರಿಂದ! ಆಧ್ಯಾತ್ಮ ಬಿಟ್ ಬೇರೆ ವಿಷಯ ಇಬ್ರೂ ಮಾತಾಡುದ್ ಒಂದ್ ಚೆಂದವೇ ಇತ್.
ನಮ್ಮಜ್ಜಯ್ಯನ ಅಪ್ಪಯ್ಯನ ಕಾಲದಲ್, ಸದಿ ಮಾಷ್ಟ್ರ್ ಅಪ್ಪಯ್ಯನೂ ನಮ್ಮಜ್ಜಯ್ಯನ ಅಪ್ಪಯ್ಯನೂ ಇಲ್ಲಾ ಅವ್ರಿಗಿಂತ
ಹಿಂದಿನವ್ರ್ ಜಗಳದಲ್ ಧರ್ಮಸ್ಥಳದ್ ದೇವ್ರನ್ ಕರ್ದ್ ಪರಸ್ಪರ ಊಟ ಬಿಟ್
ದಾಯಾದಿಗಳಾದ್ ಕಾರಣ,ನಮ್ ಮನಿಗಳ ಮಧ್ಯೆ ಎಷ್ಟೇ ಅನ್ಯೋನ್ಯತೆ ಇದ್ರೂ
ಪರಸ್ಪರ ಊಟವಿಲ್ಲದೇ ಇರುದ್ ಕೊರತಿಯೇ. ನಮ್ಮನಿಲ್ ಪ್ರಯೋಜನ ಆದಾಗ, ಬೆಳಿಗ್ಗೆ ತರಕಾರಿ ಕತ್ತರ್ಸು ಗಲಾಟಿಲ್ ಸದಿ ಮಾಷ್ಟ್ರೇ ಮುಂದಿದ್ ತಿಂಡಿ ತಿನ್ಬಹುದೇ ಹೊರತ್, ಮಧ್ಯಾಹ್ನ ಊಟಕ್ಕಿಲ್ಲ, ಊಟಕ್ ಬಂದ್ ಉಪಚಾರ ಚೂರ್ಣಿಕೆ ಇದ್ರೂ ಉಂಬುವ ಹಾಂಗ್ ಇಲ್ಲ, ಈ ಕೊರತೆ ತುಂಬುಕ್ ಒಂದ್ ಊಟದ್ ತಿಂಡಿದ್ ಸೇವೆ ಆತಿತ್, ಈ ಸಿಸ್ಟಮ್ ನಮ್ಮ ಮನಿ ಈಚಿ ಗಣಪಯ್ಯ ಉಪಾಧ್ಯರ್ ಮನಿ ಜೊತಿಗೂ ಇಪ್ಪುದ್. ನಮ್ ಅಜ್ಜಯ್ಯ ಅಪ್ಪಯ್ಯ ಅಜಾತಶತ್ರುವಾಗಿ ಬದುಕಿಯವ್ರ್, ಹಾಂಗಾಯ್ ನಮ್ ನಮ್ ಮಧ್ಯ ಈ ಊಟ ಇಲ್ದೇ ಇಪ್ ಕೊರತಿ ಊಟದ್ ನಂತ್ರದ್
ಈ ತಿಂಡಿಯಲ್ ತುಂಬಿ ಬರ್ತಿತ್. ಆಧ್ಯಾತ್ಮದ್ ನಮ್ಮ ಅಜ್ಜಯ್ಯ ನಮ್ಮನಿಗ್ ಬಂದ್ ಮ್ಯಾಲ್, ಅವ್ರ ಶಿಫಾರಸ್ಸಲ್ಲೂ ಧರ್ಮಸ್ಥಳಕ್ ಹೋಗ್ದೇ (ಮಾರಾಯಾ, ದೇವ್ರ್ ಎಲ್ಲಾ ಕಡಿ ಇದ್ದಾನಲ್ಲ, ಧರ್ಮಸ್ಥಳಕ್ ಹೋಪುದೇನ್ ಬ್ಯಾಡ!), ಇಲ್ಲಿಂದ್ಲೇ ಮಾನಸಿಕವಾಗಿ ಕಿತ್ತ್ ಹಾಕಂತ್. (ಧರ್ಮಸ್ಥಳಕ್ ಹೋದಾಗ, ನಮ್ಮಮ್ಮ ಅಪ್ಪಯ್ಯ ಮಿಣ್ಣಗ್ ತಪ್ ಕಾಣಿಕಿ ಹಾಕಿ
ಕಡ ತೀರ್ಸಿಕ್ ದೇವ್ರಿಗ್). ಇತ್ ರಮೇಶ್ ಉಪಾಯ್ದ್ರ್, ಸದಿ ಮಾಷ್ಟ್ರ್ ಮಗ ಊರಿಗ್ ಬಂದವ್ರೂ ಇದನ್ ಮೀರಿ ಬದುಕದನ್ ತೋರ್ಸಿ ಕೊಟ್ರ್, ಕ್ರಮೇಣ ನಾವ್ ಎಲ್ಲಾ ಮೀರಿ ಸಂಬಂಧಕ್ ಸರಿಯಾಯಿ ಊಟ ಮಾಡುಕ್ ಸುರು ಮಾಡ್ತ್.
ಸದಿ ಮಾಷ್ಟ್ರ್ ಶ್ರಾದ್ಧ ಸೆಪ್ಟೆಂಬರ್ ಹತ್ರ ಬತ್. ಅವ್ರ್ ಮಕ್ಳೆಲ್ಲಾ ಸೇರಿ ಯೋಗೀಶ್ ಉಪಾಧ್ಯರ್ ಮನಿಲ್ ಭರ್ಜರಿ ಶ್ರಾದ್ಧ ಮಾಡ್ಸತ್ರ್. ಅಡಿಗಿ ಸಕತ್ ಇರತ್, ಸದಿ ಮಾಷ್ಟ್ರ್ ಇದ್ರೆ ಬಾಯ್ ಚಪ್ಪರ್ಸ್ಕಂಡ್ ತಿಂಬುದ್ ಅಲ್ದೇ ಒತ್ತಾಯಕ್ ಹಾಕ್ಸಿ
ಘಂ ಗೈಲ್ ಮಾಡುವ್ ಹಾಂಗೇ ಇರ್ತ್. ಸದಿ ಮಾಷ್ಟ್ರದ್ ಶ್ರಾದ್ಧ, ಸದಿ ಮಾಷ್ಟ್ರಿಗ್ ಸಲ್ಲು ಹಾಂಗ್ ಶ್ರಾದ್ಧ ಎರಡೂ ಸೇರಿ ನನಗಂತೂ ಹಬ್ಬ, ನಮ್ಮನ್ ಹಳೆಯದ್ ಊಟ ಇಲ್ಲದ್ ಗೆರಿ ಮೀರಿ ಕರುದ್ ಇನ್ನೂ ದೊಡ್ಡದ್, ನಾ ಹೋಪುದ್ ತಪ್ಸ್ಕಂಬುದೇ ಇಲ್ಲ, ಉಂಬುಕ್ ಮದ್ಲ್ ಸದಿ ಮಾಷ್ಟ್ರನ್ ನೆನಸ್ಕಂಡ್ ಕಪ್ಪ ಕೊಡದೇ ಇದ್ರ್ ಈ
ಅಪೂರ್ವದ್ ಊಟ ಸೇರ್ಲಿಕ್ ಇಲ್ಲ, ಮೈಗ್ ಹಿಡಿಲಿಕ್ ಇಲ್ಲ!
ನನ್ ಬದುಕಲ್ ನಮ್ಮೂರಿನವ್ರ್ ಪ್ರಭಾವ ನನ್ ಮೇಲ್, ನಮ್ಮ ಅಪ್ಪ ಅಮ್ಮ ಅಜ್ಜಯ್ಯಂದ್, ಕೋಟೇಶ್ವರ ಅಜ್ಜ ಅಜ್ಜಿದ್, ಸದಿ ಮಾಷ್ಟ್ರದ್, ಅದ್ರ್ ಮೇಲ್ ಶಿವರಾಮ ಕಾರಂತರದ್. ವಾಸುದೇವ ಕಾರಂತ್ರದ್ ಪುಸ್ತಕ ಎಲ್ಲಾ ಓದಿದ್ದೆ, ವಿಚಾರ ಎಲ್ಲಾ ಸರಿ, ಯಾವ್ದೂ ತಾಗ್ಲಿಲ್ಲ, ಇದಕ್ ಕಾರಣ, ಶಿವರಾಮ ಕಾರಂತ್ರಿಗಿಂತ, ಸದಿ ಮಾಷ್ಟ್ರದ್ "ಲೌಕಿಕ ಮತ್ತು ದೇವರ ಸಂಬಂಧಗಳ ನಡುವಿನ ಸಮನ್ವಯ" ಕ್ಕೆ ಮೀರಿದ್ದನ್ ಕೈಬಿಡುವ ಬುದ್ಧಿವಂತಿಕೆಯೇ!
ನಾನೀಗ ಯೋಚಿಸುವುದು, ಸದಿ ಮಾಷ್ಟ್ರ್ ಬದುಕು ಮತ್ ಶಿವರಾಮ ಕಾರಂತ್ರ ಬದುಕಲ್ಲಿ ಮಾನಸಿಕ ಸ್ತರದಲ್ಲಿ
ವ್ಯತ್ಯಯ ಬಿಟ್ರೆ, ಇಬ್ಬರ ಬದುಕೂ ಅತೀ ಅಪ್ಯಾಯಮಾನವಾದದ್ದೇ, ಒಬ್ಬ ಮನುಷ್ಯನನ್ನ ನಾವು ಬರೇ ಸಾಧನೆಯಲ್ಲಿ ಗುರುತಿಸುವುದಕ್ಕಿಂತ ಆತನ ಬದುಕಿನಲ್ಲಿ, ಅವನ ಇತಿಮಿತಿಯಲ್ಲಿ ಆತ ಬದುಕಿದ ಕಲೆಗೆ ಕಪ್ಪ ಕೊಡುವುದಾದರೆ, ಇಬ್ಬರಿಗೂ ಒಂದೇ ಮಣೆ ಹಾಕುವುದು ಅನಿವಾರ್ಯ!
ನಮ್ ಕೇರಿಲೇ ಇನ್ನೊಬ್ರು ದೊಡ್ಡ್ ಮಾಷ್ಟ್ರ್, ಮಹಾಬಲ ಉಪಾಧ್ಯರ್. ಅವರ್ ಸದಿ ಮಾಷ್ಟ್ರಿಗಿಂತ ಹೆಚ್ಚಿನ ಘನತೆ, ಗಾಂಭೀರ್ಯ, ಉದಾರತೆಯವರಾದರೆ, ಸದಿ ಮಾಷ್ಟ್ರದ್ ಸಮನ್ವಯ, ಜೀವನ ಉಲ್ಲಾಸ, ಸ್ನೇಹ, ರಾಯಭಾರ, ಸಮಾಜಸೇವೆ ಇತ್ಯಾದಿಗಳಿಂದ ಅವ್ರಿಗೆ ಸರಿ ಸಮಾನ ಆದವರು. ನನಗೆ ಸದಿ ಮಾಷ್ಟ್ರೇ ಮೊದಲ ಮಾಷ್ಟ್ರ್ ಆದ ಕಾರಣ, ಸದಿ ಮಾಷ್ಟ್ರ ಕಥೆಯ ಮೂಲಕವೇ ಮಹಾಬಲ ಮಾಷ್ಟ್ರಿಗೆ ನನ್ನ ಪ್ರಣಾಮ ಮತ್ತು
ಧನ್ಯತೆಯ ಧನ್ಯವಾದ ದೀನತೆಯಲ್ಲಿ.
ಸದಿಮಾಷ್ಟ್ರ ವಿಷಯದಲ್ಲಿ ದೀನತೆ ಇಲ್ಲಾ, ಕಾರಣ ಎಲ್ಲವನ್ನೂ ಮೀರಿದ ಸ್ನೇಹವನ್ನು ಎಲ್ಲರಿಗೂ ಕೊಟ್ಟವರು, ಅಸಮಾನತೆಯ ಈ ಸ್ನೇಹದಲ್ಲಿ ಸಮಾನತೆಯ ಸಮನ್ವಯವನ್ನು ನೈಜವಾಗಿ ಮೆರೆಸಿದವರು. ಈ ಸ್ನೇಹವನ್ನೇ ಇಂದು ಎಲ್ಲರಿಗೂ, ಮನೆಯ ಸುತ್ತಿನ ಗತಿಯಿಲ್ಲದ ನಾಯಿ ಬೆಕ್ಕುಗಳಿಗೂ, ಮನೆಯ ಮೇಲಿನ ಕಾಡಿಗೆ ಸ್ನೇಹದಲ್ಲಿ ಬರುವ ಹುಳ ಹುಪ್ಪಟೆ, ಚಿಟ್ಟೆ, ಜೇನು, ಹಕ್ಕಿ,
ಅಳಿಲು, ಬಾವಲಿ, ಮಂಗಗಳಿಗೂ ಭಿಕ್ಷುಕರಿಗೂ ಧಾರೆ ಎರೆಯುವುದು ನಾ ಕೊಡುವ ಕಿರಿದಾದ ಗುರು ಕಾಣಿಕೆ, ಇಲ್ಲಾ ನನ್ನಿಂದ ಎಂದಿಗೂ ಮುಲಾಜಿಲ್ಲದೇ ಕೊಡಿಸುವ ಸದಿ ಮಾಷ್ಟ್ರ ಕೊನೆಯಿಲ್ಲದ ಕರಾಮತ್ತು!
ಜೀವನೋಲ್ಲಾಸ, ನಂಬಿಕೆ, ಆತ್ಮ ವಿಶ್ವಾಸ, ಪ್ರೀತಿ, ಸ್ನೇಹ, ಸಮನ್ವಯ ಇತ್ಯಾದಿ ಎಲ್ಲವೂ ಸೇರಿದ ಪಂಚಕಜ್ಜಾಯವೇ ಸದಿ ಮಾಷ್ಟ್ರು, ಅದನ್ನ ಸವಿದವರು ಮಾಡಬೇಕಾದ್ದು ಇಷ್ಟೇ, ತಮ್ಮಲ್ಲೂ ಅದೇ ಪಂಚಕಜ್ಜಾಯವನ್ನ ತಯಾರಿಸಿ ಸದಾ ಹಂಚುವುದು!
ನಮ್ಮ ಬದುಕು, ಸಂಸ್ಕೃತಿ, ಸಂಬಂಧ, ಮನೋಭಾವ ಎಲ್ಲಾ ಬದಲಾಗುತ್ತಲೇ ಇದೆ, ಇರಲಿ, ಈ ಪಂಚಕಜ್ಜಾಯ ಮಾತ್ರ ನಮ್ಮ ಬದುಕಲ್ಲಿ ಸದಾ ಇರಲಿ, ಪಂಚಕಜ್ಜಾಯ ಇಲ್ಲದೇ ಹೋದಲ್ಲಿ ಸದಿ ಮಾಷ್ಟ್ರರರ ಸವಿ ನೆನಪು ಅದನ್ನು
ಮತ್ತೆ ಮತ್ತೆ ಹುಟ್ಟಿಸುತ್ತಲೇ ಇರಲಿ!
(ಮುಗಿಯಿತು, ಈ ಕಥೆಯನ್ನು ಹೇಳಿದವರಿಗೆ, ಕೇಳಿದವರಿಗೆ, ಕೇಳಿಸಿದವರಿಗೆ ಸದಿಮಾಸ್ತರರ ಆಶೀರ್ವಾದ ಮತ್ತು ಅವರು ನಂಬಿದ ದೇವರ ಕೃಪಾಕಟಾಕ್ಷದ ಸಿರಿವಂತಿಕೆ ಸದಾ ಸಿಗಲಿದೆ!)

No comments:
Post a Comment