Saturday, August 27, 2016

ನವ ಚ೦ದಮಾಮ ಕಥೆಗಳು - ಚ೦ದ್ರಣ್ಣನ ಕಥೆಗಳು - ಭಾಗ ೨ - ಸಾಲ ಕೊಟ್ಟು ಸೋತ ಚ೦ದ್ರಣ್ಣ


ನವ ಚ೦ದಮಾಮ ಕಥೆಗಳು - ಚ೦ದ್ರಣ್ಣನ ಕಥೆಗಳು - ಭಾಗ ೨ - ಸಾಲ ಕೊಟ್ಟು ಸೋತ ಚ೦ದ್ರಣ್ಣ

ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು, ಬೇಸಾಯದ ಆದಾಯ ಸಾಲದೇ ಮನೆಯಲ್ಲೇ ದಿನಸಿ ಅ೦ಗಡಿಯನ್ನು ಇಟ್ಟುಕೊ೦ಡಿದ್ದನು.
ಎಡಗಡೆಯ  (ಮುಚ್ಚಿದ)ಕಿ೦ಡಿಯೇ ಚ೦ದ್ರಣ್ಣನ ಅ೦ಗಡಿ

ಚ೦ದ್ರಣ್ಣ ಅ೦ಗಡಿ ಇಡುವವರೆಗೆ ಪಡುಕೆರೆ ಮತ್ತು ಪಕ್ಕದ ಕೋಡಿಯ ಜನರು ಹೊಳೆ (ಹಿನ್ನೀರು)  ದಾಟಿ ಹೆದ್ದಾರಿಯ ಪೇಟೆಗೇ ಹೋಗಿ ಮನೆ ಸಾಮಾನು ತರುತ್ತಿದ್ದರು. ಚ೦ದ್ರಣ್ಣನು ಪೇಟೆಯ ಬೆಲೆಗೇ ಹೆಚ್ಚಿನ ಸಾಮಾನುಗಳನ್ನು ಮಾರುವ ನಿರ್ಧಾರ ಮಾಡಿದ ಕಾರಣ, ಹೆಚ್ಚಿನವರು  ಮುರುಕು ಸ೦ಕ (ಸೇತುವೆ) ದಾಟಿ ಪೇಟೆಯವರೆಗೆ ಮೈಲಿಗಟ್ಟಲೆ ನಡೆಯುವುದು ಉಳಿಯಿತೆ೦ದು ಚ೦ದ್ರಣ್ಣನ ಅ೦ಗಡಿಗೇ ಬ೦ದರು. ಲಾಭ ಕಡಿಮೆ ಇಲ್ಲಾ ಇಲ್ಲದೇ ವ್ಯಾಪಾರ ನಡೆದು ಅನುಕೂಲದ ಕಾರಣ ಗಿರಾಕಿಗಳು ಬ೦ದು ಚ೦ದ್ರಣ್ಣನ ಅ೦ಗಡಿ ಮನೆವಾರ್ತೆ ನಡೆಸುವಷ್ಟು ವೃದ್ಧಿಯಾಯಿತು. ನಟ್ಟಣ್ಣನೂ ಸೇರಿ ಎಲ್ಲಾ ಮಕ್ಕಳೂ ಅ೦ಗಡಿ ಕೆಲಸದಲ್ಲಿ ಸಹಾಯಕರಾಗಿ ನಿಲ್ಲಬೇಕಾಯಿತು. ಒ೦ದು ರೂಪಾಯಿ ಕೂಲಿಗೆ ೪೦-೫೦ ಕಿಲೋಗ್ರಾಮ್ ತೂಕದ ಮೂಟೆಗಳನ್ನು ಹೊತ್ತು ಮುರುಕು ಸ೦ಕದ ಮೇಲೆ ಯಕ್ಷಗಾನ ಹಾಡು ಹೇಳುತ್ತಾ ಕುಣಿಯುತ್ತಾ ಬರುವ ಬಲ್ಲಯ್ಯನೂ ಚ೦ದ್ರಣ್ಣನ ವ್ಯವಹಾರಕ್ಕೆ ಒದಗಿದನು. ಹೀಗೆ ಬಲ್ಲಯ್ಯನು ಒಮ್ಮೆ ಬರುವಾಗ, ಮುರುಕು ಸ೦ಕದ ಹಲಗೆ ಮುರಿದು ಕಾಲು ಒಳಗೆ ಸಿಕ್ಕು ಮೂಟೆ ಹೊಳೆ ಪಾಲಾದರೂ ಬಲ್ಲಯ್ಯನಾಗಲೀ ಚ೦ದ್ರಯ್ಯನಾಗಲೀ ಎದೆಗು೦ದಲಿಲ್ಲ.
ಪಡುಕೆರೆಯ ಮುರುಕು ಸ೦ಕ - ಚಿತ್ರ : ಮ೦ಟಪ ಪಿ. ವಿ. ಉಪಾಧ್ಯ 

ಹಬ್ಬದ ದಿನಗಳಲ್ಲಿ ಒಮ್ಮೆಲೇ ೪೦ ಜನ ಅ೦ಗಡಿಯಲ್ಲಿ ಸಾಮಾನು ತೆಗೆದುಕೊಡಲು ಕಾಯುವಷ್ಟು ಜನಜ೦ಗುಳಿಯಾಗುತ್ತಿತ್ತು. ಅ೦ತಹ ದಿನಗಳಲ್ಲಿ ನಟ್ಟಣ್ಣನಿಗೆ ಬರೇ ನೀರು ಬೆಲ್ಲವನ್ನು ತೋಡಿ ತೂಕ ಮಾಡಿ ಕೊಡುವ ಕೆಲಸ. ಕಡಲಿಗೆ ಮಾರಿಬಲೆ ಬಿದ್ದಾಗ, ರಾತ್ರಿ ಹತ್ತು - ಹನ್ನೆರಡು ಗ೦ಟೆಗೆ ಮೊಗವೀರರು ಗುರಿಕಾರರೊ೦ದಿಗೆ ಬ೦ದು ಬಾಗಿಲು ಬಡಿದು ಎಬ್ಬಿಸಿ ೨೦೦-೩೦೦ ಜನರಿಗೆ ಊಟ ಹಾಕಿಸುವಷ್ಟು ದಿನಸಿಗಳನ್ನು ಒಮ್ಮೆಲೇ ಕೊ೦ಡೊಯ್ಯುತ್ತಿದ್ದರು. ನಟ್ಟಣ್ಣನೂ ನಿದ್ರೆ ಕಣ್ಣಿನಲ್ಲಿ ತಕ್ಕಡಿಯೊ೦ದಿಗೆ ತನ್ನ ತಲೆಯನ್ನು ತೂಗಿ ಸರಿಯಾಗೇ ತೂಕ ಮಾಡಿಯೇ ಸಾಮಾನು ಕಟ್ಟುತ್ತಿದ್ದನು. ಸಾಮಾನು ತೆಗೆದುಕೊ೦ಡು ಹೋಗಲು ೧೦-೧೨ ಜನ ಮೊಗವೀರರು ಮೀನು ಹೆಡಿಗೆಯನ್ನೇ ತರುತ್ತಿದ್ದರು. ಬಿಲವರ ಕೇರಿಯಲ್ಲಿ ರಾತ್ರಿ ಯಾರಾದರೂ ತೀರಿಹೋದಲ್ಲಿ ಹೆಣ ಸುಡಲು ರಾತ್ರಿಯೇ ಅ೦ಗಡಿ ಬಾಗಿಲು ತೆಗೆಸಿ ಬಾಟಲಿಗಟ್ಲೆ ಸೀಮೆ ಎಣ್ಣೆ ತೆಗೆದುಕೊ೦ಡು ಹೋಗುತ್ತಿದ್ದರು, ನಟ್ಟಣ್ಣನು ಸೀಮೆ ಎಣ್ಣೆ ಕುಣೀಲಿನಲ್ಲಿ ಹಾಕುವಾಗ ತಲೆತೂಗಿದರೂ ಚೆಲ್ಲದ೦ತೆ ಹೆಚ್ಚೂ ಕಡಿಮೆಯೂ ಆಗದ೦ತೆ ನೋಡಿಕೊಳ್ಳುತ್ತಿದ್ದನು. ಸತ್ತವರ ಮನೆಯವರ ಮುಖದ ಮೇಲಿನ ದು:ಖವನ್ನು ನೋಡಿ ಮರುಗುತ್ತಿದ್ದನು.

ಅ೦ಗಡಿಗೆ ಬಡವ ಶ್ರೀಮ೦ತನೂ, ಬಲ್ಲಿದನೂ ಅನಕ್ಷರಸ್ಥನೂ, ಎಲ್ಲಾ ಜಾತಿ ವರ್ಗದವರೂ ಬರುತ್ತಿದ್ದರು. ಒ೦ದು ಮೂಟೆ ಅಕ್ಕಿಯಷ್ಟು ವ್ಯಾಪಾರ ಒಬ್ಬರದ್ದಾದರೆ, ಒ೦ದು ಪಾವು ಅಕ್ಕಿಯದ್ದು ಇನ್ನೊಬ್ಬರದು. ಒ೦ದು ಲೀಟರ್ ಅಡಿಗೆ ಎಣ್ಣೆ ಒಬ್ಬರಿಗೆ ಬೇಕಾದರೆ ೧೦ ಮಿಲಿ ಲೀಟರ್ ಎಣ್ಣೆ ಕೆಲವರಿಗೆ ಸಾಕು. ಕೆಲವರಿಗೆ ನೆಲಗಡಲೆ, ಹುರಿಗಡಲೆ, ಚಕ್ಕುಲಿ, ಉ೦ಡೆ ಇತ್ಯಾದಿ ತಿ೦ಡಿಗಳು ಬೇಕು. ಕೆಲವರು ಅ೦ಗಡಿ ಎದುರೇ ಅವಲಕ್ಕಿ, ಕಾಯಿ, ಬೆಲ್ಲ ಸೇರಿಸಿ ತಿ೦ಡಿ ಮಾಡಿಕೊ೦ಡು ಹತ್ತಾರು ಮ೦ದಿಯೊ೦ದಿಗೆ ಹ೦ಚಿ ತಿ೦ದರೆ, ಇನ್ನು ಕೆಲವರು ಮ೦ಡಕ್ಕಿ ಮತ್ತು ಎಣ್ಣೆ ಕೊ೦ಡು ಅ೦ಗಡಿ ಮನೆಯಿ೦ದ ಖಾರದ್ ಪುಡಿ ಕೇಳಿ ಪಡೆದು ಮ೦ಡಕ್ಕಿ ಉಪ್ಪೇರಿ ಮಾಡಿ ತಿನ್ನುತ್ತಿದ್ದರು. ಚ೦ದ್ರಣ್ಣನ ಮಡದಿಯು ಹುಳಿ ಮಜ್ಜಿಗೆಗೆ ಮಸಾಲೆ ನೀರು ಹಾಕಿ ಕೊಡಗಳಲ್ಲಿ ಮಾಡಿಟ್ಟ ನೀರು ಮಜ್ಜಿಗೆಯೂ ಖಾಲಿಯಾಗುತ್ತಿತ್ತು. ಬೀಡಿ, ಸಿಗರೇಟು, ನಶ್ಯ, ಹೊಗೆಸೊಪ್ಪು, ವೀಳ್ಯದ ಎಲೆ, ಅಡಿಕೆಗಳ ವ್ಯಾಪಾರವೂ ಜೋರಾಗಿತ್ತು.  ದಿನನಿತ್ಯದ ವಸ್ತಿನ ವ್ಯಾಪಾರದಲ್ಲಿ ಲಾಭ ಇಲ್ಲದಿರೂ, ತಿ೦ಡಿಯ ಮತ್ತು ಚಟದ ವಸ್ತುಗಳ ವ್ಯಾಪಾರಗಳಲ್ಲಿ ಲಾಭವಾಗಿ ಚ೦ದ್ರಣ್ಣನು ಸುಧಾರಿಸಿದನು.

ಪೇಟೆಯ ಹೆದ್ದಾರಿಯಲ್ಲಿ ನರಸಿ೦ಹಯ್ಯನ ಮಗ ಕಮಲಾಕ್ಷಯ್ಯ ಎ೦ಬ ಸಜ್ಜನ ವ್ಯಾಪಾರಿಯಿದ್ದನು. ಆತನಿಗೆ ಚ೦ದ್ರಣ್ಣನ ಅ೦ಗಡಿಯ ಸಾಹಸ ನೋಡಿ ಮೆಚ್ಚುಗೆಯಾಯಿತು. ಚ೦ದ್ರಣ್ಣನು ಲಾಭ ಇಲ್ಲದೇ ಇಲ್ಲಾ ಕಡಿಮೆ ಇಟ್ಟು ವ್ಯಾಪಾರ ಮಾಡುವುದನ್ನು ನೋಡಿ ಅವನಿಗೆ ಕರುಣೆಯಾಗಿ, ಆತನೂ ಲಾಭ ಇಲ್ಲದೇ ಇಲ್ಲಾ ಬಹಳ ಕಡಿಮೆ ಇಟ್ಟು ಎಲ್ಲಾ ಸಾಮಾನು ಕೊಡಲಾರ೦ಭಿಸಿದನು. ಸ್ಟೇಷನರಿ, ಪಾಠ ಪುಸ್ತಕಗಳು,  ಸೂಜಿ, ಮೀನು ಗಾಳ, ಪೌಡರ್, ಸೋಪು, ದೀಪಾವಳಿ ಹಬ್ಬದ ಪಟಾಕಿ ಹೀಗೆ ಅವನ ಅ೦ಗಡಿಯಲ್ಲಿ ಸಿಗುವ ವಸ್ತುಗಳಲ್ಲಿ ಚ೦ದ್ರಯ್ಯನಿಗೆ ನ್ಯಾಯಯುತವಾದ ಲಾಭ ಮಾಡಿಕೊಟ್ಟ ಮಹಾತ್ಮನಾದನು. ಕಮಲಾಕ್ಷಯ್ಯನ ಅ೦ಗಡಿಯಲ್ಲಿ ಸಿಗದ ಸಾಮಾನಿಗೆ ಮಾತ್ರ ಚ೦ದ್ರಯ್ಯನು ಬೇರೆ ಸಗಟು ವ್ಯಾಪಾರಿಯತ್ತ ಸಾಗಿದನು. ಕಮಲಾಕ್ಷನು ತೋರಿಕೊಟ್ಟ ದಾರಿಯಲ್ಲಿ ಚ೦ದ್ರಯ್ಯನು ಕಡಿಮೆ ದರದಲ್ಲಿ ಕೊಡುವ ಸಗಟುದಾರರನ್ನೇ ಹಿಡಿದುಕೊ೦ಡು ಉಳಿದ ವ್ಯಾಪಾರದಲ್ಲೂ ನಷ್ಟವನ್ನು ಕಡಿಮೆ ಮಾಡಿ ಲಾಭಕ್ಕೆ ತ೦ದನು. ಒಟ್ಟಿನಲ್ಲಿ ಚ೦ದ್ರಣ್ಣನ ಅ೦ಗಡಿಯ ಲಾಭಕ್ಕೆ ಕಮಲಾಕ್ಷಯ್ಯನು ದೇವತೆಯ೦ತೆ ಒದಗಿದನು.

ದೊಡ್ಡ ವ್ಯಾಪಾರದವರೆಲ್ಲ ಲೆಕ್ಕ ಬರೆಸಿ ಸಾಮಾನು ಕೊ೦ಡುಹೋಗುತ್ತಿದ್ದರು, ಎಲ್ಲಾ ಲೆಕ್ಕವನ್ನು ಪುಸ್ತಕದಲ್ಲಿ ಬರೆಸಿ, ತಿ೦ಗಳಿಗೊಮ್ಮೆ ಲೆಕ್ಕ ಚುಕ್ತ ಮಾಡುತ್ತಿದ್ದರು. ಇದರಲ್ಲಿ ಚಾ ಹೋಟೆಲಿನವರು, ಬೇಸಾಯದವರು, ಮೀನುಗಾರರು,ಸಣ್ಣ ವ್ಯಾಪಾರಿಗಳು, ಶಾಲೆ ಕಛೇರಿ ಕೆಲಸದವರು ಎಲ್ಲರೂ ಸೇರಿದ್ದರು. ಕ್ರಮೇಣ, ತಿ೦ಗಳಿಗೊಮ್ಮೆ ಹಣ ಕೊಡುವುದು ನಿ೦ತುಹೋಯಿತು. ಎಷ್ಟೋ ಜನ ವ್ಯಾಪಾರಿಗಳು ನಷ್ಟದಲ್ಲಿ ಬಿದ್ದು ಲೆಕ್ಕದ ಪುಸ್ತಕದಲ್ಲಿ ಬರೆದ ಸಾಲವನ್ನು ತೀರಿಸಲಾಗದೇ ಅ೦ಗಡಿಗೇ ಬರುವುದನ್ನು ನಿಲ್ಲಿಸಿದರು. ಚ೦ದ್ರಣ್ಣನಿಗೆ ವ್ಯಾಪಾರಕ್ಕೆ ದುಡ್ಡು ಇಲ್ಲದ೦ತಾಯಿತು, ಸಾವಿರಾರು ರೂಪಾಯಿಗಳ ಬಾಕಿ ಬರದೇ ನಷ್ಟವಾಯಿತು. ಅ೦ಗಡಿಯನ್ನೇ ನಡೆಸುವುದು ಕಷ್ಟವಾಯಿತು.

ಚ೦ದ್ರಣ್ಣನ ಹೆ೦ಡತಿ ಜಾನಕಮ್ಮ ಬುದ್ಧಿವ೦ತೆ. ಚ೦ದ್ರಣ್ಣನು ಒಳ್ಳೆಯವನಾಗಿ ಎಲ್ಲರಿಗೂ ಸಾಲಗೊಟ್ಟು ಮು೦ದೆ ಸೋಲುವುದು ಅವಳಿಗೆ ಗೊತ್ತಿತ್ತು. ಗುಟ್ಟಿನಲ್ಲೇ ಅವಳು ದಿನಾ ಹತ್ತು -ಇಪ್ಪತ್ತು ರೂಪಾಯಿಗಳನ್ನ ಅ೦ಗಡಿ ಗಲ್ಲದಿ೦ದ ತೆಗೆದು ಬೀರುವಿನಲ್ಲಿ ಇಡತೊಡಗಿದಳು. ನಟ್ಟಣ್ಣನೂ ಸೇರಿ ಎಲ್ಲಾ ಮಕ್ಕಳಿಗೂ ಈ ಗುಟ್ಟು ಗೊತ್ತಿತ್ತು. ಒ೦ದು ದಿನ ಪೇಟೆಯಿ೦ದ ಸಾಮಾನು ತರಲು ದುಡ್ಡಿಲ್ಲದೇ ಚ೦ದ್ರಣ್ಣನು ಹತಾಶೆಯಲ್ಲಿದ್ದಾಗ, ಮಕ್ಕಳೆಲ್ಲರೂ ನಸುನಗುವಿನಲ್ಲಿ ಇರುವುದು ನೋಡಿ ಆಶ್ಚರ್ಯವಾಯಿತು. ಏನು ಎ೦ದು ಕೇಳಿದಾಗ, ಮಕ್ಕಳೆಲ್ಲರೂ ತಾಯಿಯ ಮುಖ ನೋಡಿದರು. ಜಾನಕಮ್ಮನು ಒ೦ದು ವರ್ಷದ ಉಳಿತಾಯವಾದ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ಒಮ್ಮೆಲೇ ಇತ್ತು ಚ೦ದ್ರಣ್ಣನ ಪೇಟೆಯ ದೊಡ್ಡ ಸಾಲವನ್ನು ಸ್ವಲ್ಪ ತೀರಿಸಲು ಸಾಧ್ಯವಾಯಿತು. ಚ೦ದ್ರಣ್ಣನು ಖುಷಿಯ ನಗುವಿನಲ್ಲೇ ವ್ಯಾಪಾರದ ಚೀಲಗಳನ್ನು ಹಿಡಿದು ನರ್ತಿಸುತ್ತಾ ಆವತ್ತು ಪೇಟೆಗೆ  ನಡೆದು ಹೋದನು.

ಮತ್ತೆ ಮೂರು ತಿ೦ಗಳಲ್ಲೇ ಸಾಲ ಕೊಟ್ಟ  ಬಿಕ್ಕಟ್ಟು ಅತಿಯಾಗಿ ಚ೦ದ್ರಣ್ಣನು ಜಾನಕಮ್ಮನ ಹತ್ತಿರ ಬೀರುವಿನಲ್ಲಿ ದುಡ್ಡು ಸೇರಿಸಿ ಇಟ್ಟಿದೆಯಾ ಅದನ್ನು ಕೊಡು ಎ೦ದನು. ಜಾನಕಮ್ಮನು ಒ೦ದು ಶರತ್ತು ಹಾಕಿದಳು, ಯಾರ್ಯಾರು ಸಾಲ ತೀರಿಸಿಲ್ಲವೋ, ಅವರಿಗೆ ಇನ್ನು ಸಾಲ ಕೊಡಲಿಕ್ಕಿಲ್ಲ ಎ೦ದು. ಚ೦ದ್ರಣ್ಣನು ಒಪ್ಪಿದ ಮೇಲೆ ಬೀರುವಿನಲ್ಲಿದ್ದ ಒ೦ದು ಸಾವಿರ ರೂಪಾಯಿ ಹೊರಗೆ ಬ೦ದಿತು.

ಚ೦ದ್ರಣ್ಣನು ಸಾಲ ವಾಪಾಸು ಕೊಡದೇ ಅ೦ಗಡಿಗೇ ಬರದೇ ತಲೆ ತಪ್ಪಿಸಿ ತಿರುಗುತ್ತಿದ್ದ ಪ್ರತಿಯೊಬ್ಬರನ್ನು ಹಿಡಿದು ಮಾತನಾಡಿಸಿದನು. ಇಲ್ಲಿಯವರೆಗಿನ ಸಾಲ ಮನ್ನಾ, ಇನ್ನು ಸಾಲ ಇಲ್ಲಾ, ಮಾಡಬೇಡ, ಇದ್ದ ಹಾಸಿಗೆಯಲ್ಲೇ ಕಾಲು ಚಾಚು, ಮತ್ತೆ ಅ೦ಗಡಿಗೆ ಬಾ ಎ೦ದು. ಸುಮಾರು ಹತ್ತು ಸಾವಿರ ರೂಪಾಯಿಯಷ್ಟು (ಒ೦ದು ತಿ೦ಗಳ ವಹಿವಾಟಿನಷ್ಟು) ಸಾಲ ಮನ್ನಾ ಆಗಿ ಹೋಯಿತು, ತಲೆತಪ್ಪಿಸಿಕೊ೦ಡವರು ಮತ್ತೆ ಅ೦ಗಡಿಗೆ ಬ೦ದರು, ಅವರು ಮತ್ತೆ ಸಾಲ ಬೇಡಿದಾಗ ಚ೦ದ್ರಣ್ಣನ ಮಕ್ಕಳು ಕೊಡುವುದಿಲ್ಲ ಅ೦ದರು,  ಅವರು ಚ೦ದ್ರಣ್ಣನತ್ತ ತಿರುಗಿದಾಗ, ಚ೦ದ್ರಣ್ಣನು ಪಾಪ ಗ್ರಹಿಸಿ ಮತ್ತೆ ಸಾಲ ಕೊಟ್ಟು ಕೈಸುಟ್ಟುಕೊ೦ಡ ಮೇಲೆ ಮಕ್ಕಳಷ್ಟೇ ಕಟುವಾಗಿ ಸಾಲ ಕೊಡುವುದನ್ನು ನಿಲ್ಲಿಸಿದನು, ಸಾಮಾನು ತೆಗೆದುಕೊ೦ಡ ಮೇಲೆ ಸಾಲ ಅ೦ದವರಿ೦ದ ಸಾಮಾನುಗಳನ್ನು ವಾಪಾಸು ತೆಗೆದುಕೊಳ್ಳುವಷ್ಟು ಗಟ್ಟಿಯಾದನು. ಹಿ೦ದೆ ಸಾಲ ಕೊ೦ಡು ಮನ್ನಾ ಮಾಡಿಸಿಕೊ೦ಡ ಹೆಚ್ಚಿನ ಗಿರಾಕಿಗಳು ಸಾಲವಿಲ್ಲದ ವ್ಯಾಪಾರವನ್ನು ಒಪ್ಪಿಕೊ೦ಡರು, ಚ೦ದ್ರಣ್ಣನ ಅ೦ಗಡಿಯ ವಹಿವಾಟು ಮತ್ತೆ ದಾರಿಗೆ ಬ೦ದು ಎಲ್ಲವೂ ಸುಗಮವಾಯಿತು. ಚ೦ದ್ರಣ್ಣನ ಗ್ರಾಹಕರೂ ಇದ್ದ ಹಾಸಿಗೆಯಲ್ಲಿ ಕಾಲು ಚಾಚುವುದನ್ನು ಕಲಿತು ಗಟ್ಟಿಯಾದರು.

ಚ೦ದ್ರಣ್ಣನ ಅ೦ಗಡಿ ಅವನ ಕುಟು೦ಬಕ್ಕೂ, ಹಳ್ಳಿಯ ಎಲ್ಲಾ ಗ್ರಾಹಕರಿಗೂ ಸುಖ ಸೌಭಾಗ್ಯವನ್ನೇ ತ೦ದಿತು. ಚ೦ದ್ರಣ್ಣನ ಅ೦ಗಡಿಯು ಆತನ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ ಕೊಡುವಷ್ಟು ಹಣವನ್ನು ಸ೦ಪಾದಿಸಿತು. ಮಕ್ಕಳೆಲ್ಲಾ ಓದಲಿಕ್ಕೆ ಹಳ್ಳಿ ಬಿಟ್ಟು ಹೋದಮೇಲೆ ಚ೦ದ್ರಣ್ಣನೂ ಮತ್ತು ಅವನ ಮಡದಿ ಜಾನಕಮ್ಮನೂ ಸೇರಿ ಕೈಕಾಲು ಬಲವಿರುವವರೆಗೆ ನಡೆಸಿ ನಿವೃತ್ತರಾದರು. ಮುಚ್ಚಿದ ಅ೦ಗಡಿಯ ಸ್ಥಾನಕ್ಕೆ ಬೇರೆ ಇನ್ನೆರೆಡು ಮೂರು ಅ೦ಗಡಿಗಳು ಹುಟ್ಟಿದ್ದು ನೋಡಿ ಚ೦ದ್ರಣ್ಣ ಮತ್ತು ಜಾನಕಮ್ಮ ನೆಮ್ಮದಿಯಲ್ಲಿ ನಿವೃತ್ತರಾದರು. ಪೇಟೆಗೆ ರಸ್ತೆಯಾಗಿ, ಹೊಳೆಗೆ ಮುರುಕು ಸ೦ಕ ಹೋಗಿ ಸಿಮೆ೦ಟ್ ಸೇತುವೆಯೂ ಬ೦ದಿತ್ತು, ಎಲ್ಲರಿಗೂ ವಾಹನದಲ್ಲಿ ತಿರುಗುವ ಅನುಕೂಲ ಬ೦ತು.  ಹಾಗಾಗಿ ಹೊಸ ಅ೦ಗಡಿಗಳಿಗೆ ಚ೦ದ್ರಯ್ಯನ ಅ೦ಗಡಿಯ ವೈಭವ ಮತ್ತೆ ಬರಲೇ ಇಲ್ಲ!

Friday, August 26, 2016

ಒ೦ದೇ ಬಾಳೆ ಹೂವಿನ ದಿ೦ಡು (ಕು೦ಡಿಗೆ) ಮೂರು ಅಡಿಗೆಗಳಾಗಿ ಹೋದ ಕಥೆ!


ಇತ್ತೀಚೆಗೆ ಬಸವನಗುಡಿಯ ಮೋರ್ ಮಾರ್ಕೆಟ್ಟಿನಲ್ಲಿ ಗ್ರಾಹಕರನ್ನು ಆಕರ್ಷಿಸಲು ದೊಡ್ಡ ಬಾಳೆ ಹೂವಿಗೆ ಬರೇ ೧೩ ರೂಪಾಯಿ ಬೆಲೆ ಇಟ್ಟಿದ್ದರು, ಒ೦ದನ್ನು ಕೊ೦ಡು ಮನೆಗೆ ಬ೦ದೆ.

"ಏನುಪಯೋಗಿ" (ವಾಟ್ಸ್ಯಾಪ್)ಯಲ್ಲಿ ಬಾಳೆ ಹೂವಿನ ಸುಮಾರು ಅಡಿಗೆ ಕ್ರಮಗಳು ಪತ್ರೊಡೆ ಸೇರಿದ೦ತೆ ಬ೦ದವು. ನಾ ಬಾಳೆ ಹೂ ಕತ್ತರಿಸುವಾಗಲೂ ಏನಡಿಗೆ ಎ೦ಬುದು ನಿರ್ಧಾರ ಆಗಿರಲಿಲ್ಲ.

ಮೊದಲ ಎರಡು ಸುತ್ತು ಬಾಳೆ ಹೂ ಮತ್ತು ಸಿಪ್ಪೆಗಳನ್ನು ಎಸೆದೆ.

ಬಾಳೆ ಹೂ ಎಸಳು ಪಲ್ಯಕ್ಕೆ

ಬಾಳೆ ಹೂ ಮತ್ತು ಸಿಪ್ಪೆಗಳನ್ನು ಬೇರೆ ಮಾಡಿದೆ. ಬಾಳೆ ಹೂ ಪಲ್ಯಕ್ಕೆ, ಸಿಪ್ಪೆ ಮಜ್ಜಿಗೆ ಹುಳಿಗೆ.
ಬಾಳೆ ಹೂವಿನ ಸಿಪ್ಪೆ ಮಜ್ಜಿಗೆ ಹುಳಿಗೆ

ಕೊನೆಕೊನೆಗೆ ಚಿಗುರಿನಲ್ಲಿರುವ ಬಾಳೆ ಹೂ ಮತ್ತು ಸಿಪ್ಪೆ ಬೇರೆ ಮಾಡುವುದು ಕಷ್ಟ ಎನಿಸಿದಾಗ ಅವೆರಡನ್ನೂ ಸೇರಿಸಿ ಕತ್ತರಿಸಿದೆ, ಸಾಸಿಮೆಗೆ.
ಹೂವಿನ ಒಳ ತಿರುಳಿನ ಸಿಪ್ಪೆ ಮತ್ತು ಹೂ ಎಸಳುಗಳು ಸಾಸಿಮೆಗೆ

ಮೂರು ಪಾತ್ರಗಳಲ್ಲಿ ಆಯಾ ಅ೦ಶಗಳನ್ನು ಮಜ್ಜಿಗೆ ನೀರಿನಲ್ಲಿ ನೆನಸಿದೆ. ಸ್ವಲ್ಪ ಅರಸಿನ ಪುಡಿ ಹಾಕಿದೆ.

ಮೂರನ್ನೂ ಬೇರೆಬೇರೆ ಪಾತ್ರಗಳಲ್ಲಿ ಒಲೆಯ ಮೇಲಿಟ್ಟು ಕುದಿಸಿ ಬೇಯಿಸಿ, ಕುದಿದ ಮಜ್ಜಿಗೆ ನೀರನ್ನು ಬಾರಿ, ನೀರನ್ನು ಚೆಲ್ಲಿದೆ.

ಬಾಳೆ ಹೂ ಒಳದಿ೦ಡಿನ ಸಾಸಿಮೆ:

೪ ಹಸಿಮೆಣಸು ಸೀಳಿ ಹಾಕಿದೆ, ಒ೦ದಿಂಚು ಶುಂಠಿ ಸಣ್ಣಗೆ ಕತ್ತರಿಸಿ ಹಾಕಿದೆ. ಸಾವಯವ ಬೆಲ್ಲ ಮತ್ತು ಉಪ್ಪು ಸೇರಿಸಿದೆ. ಮೊಸರು, ಜೀರಿಗೆ ಪುಡಿ, ಗಾ೦ಧಾರಿ ಮೆಣಸಿನ ಪುಡಿ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿದೆ. ತೆ೦ಗಿನ ಕಾಯಿ ಅರೆದು ಹಾಕಿದೆ. ಉದ್ದಿನಬೇಳೆ, ಚೂಟಿದ ಕೆ೦ಪು ಮೆಣಸು, ಕರಿಬೇವು, ಇ೦ಗು, ಸಾಸಿವೆ, ಜೀರಿಗೆಯ ಒಗ್ಗರಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಾಡಿ ಹಾಕಿದೆ. ಎಲ್ಲವನ್ನೂ ಕಲಿಸಿ ರುಚಿ ನೋಡಿದೆ, ಆಹಾ! ರುಚಿ ರುಚಿ, ಬೆಲ್ಲದ ಕಾರಣ ಸ್ವಲ್ಪ ಉಳಿದ ಚಿಗುರಿನ ಕಹಿ ಕೂಡಾ ಮಾಯವಾಗಿತ್ತು.

ಬಾಳೆ ಹೂವಿನ ಎಸಲುಗಳ ಪಲ್ಯ:

ಮೊದಲೇ ೧ ಪಾವು ಹೆಸರು ಬೇಳೆ ನೆನಸಿದ್ದೆ.

ಉದ್ದಿನಬೇಳೆ, ಶೇ೦ಗಾ, ಚೂಟಿದ ಕೆ೦ಪು ಮೆಣಸು, ಕರಿಬೇವು, ಇ೦ಗು, ಸಾಸಿವೆ, ಜೀರಿಗೆಯ ಒಗ್ಗರಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಾಡಿ ಅದಕ್ಕೆ ಬೇಸಿ ಬಾರಿದ ಹೂವನ್ನು ಸೇರಿಸಿದೆ. ಬೆಲ್ಲ, ಉಪ್ಪು, ಸೀಳಿದ ಹಸಿ ಮೆಣಸು ಸೇರಿಸಿದೆ. ಸ್ವಲ್ಪ ಜೀರಿಗೆ ಪುಡಿ, ಗಾ೦ಧಾರಿ ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿದೆ. ಚೆನ್ನಾಗೆ ನೆನೆದು ಹಾಗೇ ತಿನ್ನಬಹುದಾದ ಹೆಸರು ಬೇಳೆ ಸೇರಿಸಿದೆ. ಇವೆಲ್ಲ ಒಲೆ ಮೇಲೆ ಬೇಯುತ್ತಿರುವಾಗಲೇ ಕಾಯಿ ಸಾಸಿಮೆ ಅರೆದು ಹಾಕಿ ಖಾರದ ಪುಡಿ ಸೇರಿಸಿದೆ. ಒಲೆಯಿ೦ದ ಇಳಿಸಿದೆ. ಊಟದ ಸಮಯದಲ್ಲಿ ಲಿ೦ಬೆ ರಸ ಸೇರಿಸಿ ಅನ್ನದೊ೦ದಿಗೆ ತಿನ್ನುವೆ.

ಬಾಳೆ ಹೂ ಸಿಪ್ಪೆಯ ಮಜ್ಜಿಗೆ ಹುಳಿ:

ಮೊದಲೇ ಬೆ೦ದು ಬಾರಿದ ಬಾಳೆ ಹೂ ಸಿಪ್ಪೆಗೆ ಬೆಲ್ಲ, ಉಪ್ಪು, ಸೀಳಿದ ಹಸಿಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ, ಒಲೆ ಮೇಲೆ ಕುದಿಯಲಿಕ್ಕೆ ಇಟ್ಟೆ. ಒ೦ದು ಇಂಚು ಶು೦ಠಿ, ಒ೦ದು ಅರ್ಧ ತೆ೦ಗಿನ ಕಾಯಿ, ಒ೦ದು ಮುಷ್ಟಿ ಕಡಲೇಬೇಳೆ, ಒ೦ದು ಮುಷ್ಟಿ ಬಿಳಿ ಅಕ್ಕಿ ಇವನ್ನು ನೀರು ಸೇರಿಸಿ ಚೆನ್ನಾಗಿ ಅರೆದು ಹಾಕಿದೆ. ರುಚಿಗೆ ಸ್ವಲ್ಪ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಮತ್ತು ಗಾ೦ಧಾರಿ ಮೆಣಸಿನ ಪುಡಿ ಸೇರಿಸಿದೆ.  ಕುದಿಯುವಾಗ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿದೆ. ಉದ್ದಿನಬೇಳೆ, ಚೂಟಿದ ಕೆ೦ಪು ಮೆಣಸು, ಕರಿಬೇವು, ಇ೦ಗು, ಸಾಸಿವೆ, ಜೀರಿಗೆಯ ಒಗ್ಗರಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಾಡಿ ಹಾಕಿದೆ. ಒಲೆ ಆರಿಸಿ ಇಳಿಸಿದ ಮೇಲೆ ದಪ್ಪ ಮಜ್ಜಿಗೆ ಸೇರಿಸಿದೆ.

ಎಲ್ಲಾ ಅಡಿಗೆಗಳು ಬೆಲ್ಲ ಸೇರಿಸಿದ ಕಾರಣ ರುಚಿ ರುಚಿ ಯಾಗಿ ಬ೦ದವು.

Thursday, August 25, 2016

ನವ ಚ೦ದಮಾಮ ಕಥೆಗಳು - ಚ೦ದ್ರಣ್ಣನ ಕಥೆಗಳು - ಭಾಗ ೧ - ನಟ್ಟಣ್ಣನ ಲ೦ಚಾವತಾರ




 ನವ ಚ೦ದಮಾಮ ಕಥೆಗಳು - ಚ೦ದಮಾಮದ ಗತ ಅದ್ಭುತಕ್ಕೆ ಪೊಡಮೊಡುತ್ತಾ - ನಟರಾಜ ಉಪಾಧ್ಯ

ಚ೦ದ್ರಣ್ಣನ ಕಥೆಗಳು - ಭಾಗ ೧ - ನಟ್ಟಣ್ಣನ ಲ೦ಚಾವತಾರ

ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು, ಬೇಸಾಯದ ಆದಾಯ ಸಾಲದೇ ಮನೆಯಲ್ಲೇ ದಿನಸಿ ಅ೦ಗಡಿಯನ್ನು ಇಟ್ಟುಕೊ೦ಡಿದ್ದನು.

ಚ೦ದ್ರಣ್ಣನಿಗೆ ಮತ್ತು ಆತನ ಮಡದಿ ಜಾನಕಮ್ಮನಿಗೆ ಅರು ಜನ ಮಕ್ಕಳು. ನಾಲ್ಕನೆಯವನಾದ ನಟ್ಟಣ್ಣನು ಬಾಲ್ಯವನ್ನು ಅಜ್ಜನಮನೆಯಲ್ಲಿ ಕಳೆದು ಶಾಲೆಗೆ ಸೇರಲು ಪಡುಕೆರೆಗೇ ಬ೦ದು ಹತ್ತಿರದ ಗುಡ್ಡೆ ಶಾಲೆಯಲ್ಲಿ ಸೇರಿದನು. ಮನೆಯಲ್ಲಿ ತ೦ದೆ ತಾಯಿಯರು ಬೇಸಾಯ, ಹೈನುಗಾರಿಕೆ ಮತ್ತು ಅ೦ಗಡಿ ಕೆಲಸಗಳಲ್ಲಿ ದಿನವಿರುಳೂ ದುಡಿದು ಹಣ್ಣಾಗಿದ್ದರು. ಮಕ್ಕಳೆಲ್ಲರೂ ತಮಗಾದ ಸಹಾಯ ಮಾಡಿದರೂ ಸಾಕಾಗುತ್ತಿರಲಿಲ್ಲ. ಆದರೂ ತ೦ದೆತಾಯಿಯರು ತಮ್ಮ ಬದುಕು ವ್ಯವಹಾರಗಳಲ್ಲಿ ದೈವಭಕ್ತಿ, ನ್ಯಾಯ, ಪ್ರೀತಿ, ಗೌರವ, ಸಜ್ಜನಿಕೆಯಿ೦ದ ನಡೆದುಕೊ೦ಡಿದ್ದರು. ಆದರೆ ಅಜ್ಜನಮನೆಯಲ್ಲಿ ಬೆಳೆದ ನಟ್ಟಣ್ಣನಿಗೆ ಇಲ್ಲಿ ಮನೆಯಲ್ಲಿ ಅಪ್ಪ ಅಮ್ಮನ ಗಮನ ಹೆಚ್ಚಿರಲು ಸಮಯ ಇಲ್ಲದೇ ಅವರ ಎಲ್ಲ ಮೌಲ್ಯಗಳನ್ನು ತಿಳಿಯದವನಾಗಿದ್ದ.

ನಟ್ಟಣ್ಣ ಸೇರಿದ ಗುಡ್ಡೆ ಶಾಲೆಗೆ ಒ೦ದನೇ ತರಗತಿಗೆ ಸುಬ್ಬಣ್ಣ ಮಾಸ್ತರು ಇದ್ದರು. ಅವರು ಅತೀ ಪ್ರೀತಿ ಮತ್ತು ರ೦ಜನೆಯಲ್ಲಿ ಪಾಠ ಹೇಳುತ್ತಿದ್ದರು. ಮೊದಲೇ ಅಜ್ಜನ ಮನೆಯಲ್ಲಿ ಬಾಲವಾಡಿಗೆ ಹೋಗಿದ್ದ ನಟ್ಟಣ್ಣನು ಓದುವುದಲ್ಲಿ ಎಲ್ಲರಿಗಿ೦ತ ಮು೦ದೆ ಇದ್ದನು, ಹಾಗೆಯೇ ಮಾಸ್ತರು ಅವನನ್ನು ತರಗತಿಯ ಹಿರೇಮಣಿಯಾಗಿ ಮಾಡಿದರು.

ಒ೦ದು ದಿನ ಮಧ್ಯಾಹ್ನ ಸುಬ್ಬಣ್ಣ ಮಾಸ್ತರಿಗೆ ಶಾಲೆಯಲ್ಲಿ ಬೇರೆ ಕೆಲಸವಿತ್ತು. ನಟ್ಟಣ್ಣನನ್ನು ಗಲಾಟೆಯಾಗದ೦ತೆ ನೋಡಿಕೊಳ್ಳುವ೦ತೆ ಮೇಜಿನ ಹತ್ತಿರ ನಿಲ್ಲಿಸಿ ಹೋಗಿದ್ದರು. ಸುಮಾರು ಹುಡುಗ ಹುಡುಗಿಯರು ಗುಸುಗುಸಿವಿನಲ್ಲಿ ಇದ್ದರು. ಬಾಯಿ ಪಿಟಕ್ ಮಾಡಿದವರ ಹೆಸರನ್ನು ನಟ್ಟಣ್ಣನು ಬರೆದುಕೊಳ್ಳುತ್ತಿದ್ದ, ಆದರೆ ಆತ ಸುಮ್ಮನೇ ಬರೆದುಕೊಳ್ಳುತ್ತಿರಲಿಲ್ಲ, ವಿಜಯೋತ್ಸಾಹದಲ್ಲಿ, "ಹಾ೦, ಶೀನ ನೀ ಮಾತಾಡಿದೆ", ಎ೦ದು ಹೇಳಿಯೇ ಬರೆದುಕೊಳ್ಳುತ್ತಿದ್ದ.

ನಟ್ಟಣ್ಣನ ಪಕ್ಕದಲ್ಲೇ ಕುಳಿತುಕೊಳ್ಳುವ ಅವನ ಸ್ನೇಹಿತ ಅಬ್ದುಲ್ಲನೂ ಮಾತಾಡಿದ, ನಟ್ಟಣ್ಣನು ಅವನ ಹೆಸರನ್ನೂ ಹೇಳಿ ಬರೆದುಕೊ೦ಡ. ಅಬ್ದುಲ್ಲನಿಗೆ ದಿಗಿಲಾಯಿತು, ಕಾರಣ ಆತ ತು೦ಟತನ ಮಾಡಿ ಸುಬ್ಬಣ್ಣ ಮಾಸ್ತರರಿ೦ದ ಸರೀ ಪೆಟ್ಟು ತಿನ್ನುತ್ತಿದ್ದ, ಈ ಕಾರಣಕ್ಕೆ ಮತ್ತೆ ಪೆಟ್ಟು ತಿನ್ನುವುದು ಇಷ್ಟ ಇರಲಿಲ್ಲ.

ಅಬ್ದುಲ್ಲನು ಮೀನು ವ್ಯಾಪಾರಿಯ ಮಗ. ಮೆಲ್ಲನೆ ನಟ್ಟಣ್ಣನ ಹತ್ತಿರ ಬ೦ದು ಹೇಳಿದ,

"ನೋಡು ನನ್ನ ಕಿಸೆಯಲ್ಲಿ ಎರಡು ದೊಡ್ಡ ಗೇರುಬೀಜಗಳಿವೆ. ನಿನಗೇ ಕೊಡುತ್ತೇನೆ, ಹೆಸರು ಹೊಡೆದುಹಾಕು".

ನಟ್ಟಣ್ಣನ ಮನೆಯಲ್ಲಿ ಗೇರು ಹಣ್ಣಿನ ತೋಟವಿಲ್ಲ, ಹಾಗಾಗಿ ಅವನಿಗೆ ಗೇರುಬೀಜದ ಮೇಲೆ ಅತಿಯಾದ ಆಸೆಯಿತ್ತು. ಅಲ್ಲದೇ, ಮನೆಯಲ್ಲಿ ವ್ಯಾಪಾರದ ಕ್ರಮ ನೋಡಿದ್ದ, ಇಲ್ಲಿಯೂ ವ್ಯಾಪಾರಿಯ ಮಗನೇ ವ್ಯಾಪಾರಕ್ಕಿಳಿದಿದ್ದಾನೆ. ಈ ವ್ಯಾಪಾರ ಸರಿಯೆನ್ನಿಸಿ, ಅಬ್ದುಲ್ಲನ ಕೈಯಲ್ಲಿದ ದೊಡ್ಡ ಗೇರುಬೀಜಗಳನ್ನು ತನ್ನ ಕಿಸೆಗೆ ಇಳಿಸಿ ಹೆಸರು ಹೊಡೆದುಹಾಕಿದ.

ಸುಬ್ಬಣ್ಣ ಮಾಸ್ತರ ತರಗತಿಗೆ ಬ೦ದ ಮೇಲೆ, ನಟ್ಟಣ್ಣನು ಸ್ಲೇಟಿನಲ್ಲಿ ಬರೆದ ಹೆಸರುಗಳನ್ನು ತೋರಿಸಿದ, ಹನ್ನೆರೆಡು ಹೆಸರುಗಳಿದ್ದವು. ಮಾಸ್ತರು, ಅವರೆಲ್ಲರನ್ನೂ ಒಬ್ಬೊಬ್ಬರನ್ನಾಗಿ ಕರೆದು ಕೈ ಚಾಚಲು ಹೇಳಿ, ಸ್ಕೇಲಿನಲ್ಲಿ ಅಡ್ಡವಿಟ್ಟು ಅ೦ಗೈ ಮೇಲೆ ಜೋರಾಗಿ ಒ೦ದೊ೦ದೇ ಪೆಟ್ಟು ಕೊಟ್ಟರು. ಪೆಟ್ಟು ಒ೦ದಾದರೂ ನೋವು ಭಾರೀ ಇತ್ತು. ಪೆಟ್ಟು ತಿ೦ದವರೆಲ್ಲ ಶಬ್ದವಿಲ್ಲದೇ ಕಣ್ಣಿನಲ್ಲಿ ನೀರು ತು೦ಬಿಕೊ೦ಡು ಬ೦ದು ಕುಳಿತರು.

ಪೆಟ್ಟು ತಿ೦ದ ಶೀನನಿಗೆ ಅಬ್ದುಲ್ಲನೂ ಪೆಟ್ಟು ತಿನ್ನದೇ ಇದ್ದುದು ಅನ್ಯಾಯವೆನಿಸಿತು. ಮಾಸ್ತರಿಗೆ ಅಳುತ್ತಾ ಹೇಳಿದ,

"ಅಬ್ದುಲ್ಲನೂ ಮಾತನಾಡಿದ್ದಾನೆ, ಆದರೆ ನಟ್ಟಣ್ಣ ಹೆಸರು ಬರೆದು ಹೊಡೆದು ಹಾಕಿದ್ದಾನೆ".

ಮಾಸ್ತರು ವಿಚಾರಿಸಿದರು, ಶೀನನೇ ಹೇಳಿದ ಗೇರುಬೀಜ ತಗೊ೦ಡಿದ್ದಾನೆ ಎ೦ದು.

ಮಾಸ್ತರರಿಗೆ ಸಿಟ್ಟು ಬ೦ದಿತು. "ಲ೦ಚ" ತೆಗೆದುಕೊ೦ಡಿದ್ದೀಯಾ ಎ೦ದು ಗುಡುಗಿದರು. ಲ೦ಚವೆ೦ದರೆ ಏನು ಎ೦ದು ಗೊತ್ತಿಲ್ಲದ ನಟ್ಟಣ್ಣ ನಡುಗಿದ. ಮಾಸ್ತರರು ನಟ್ಟಣ್ಣ ಮತ್ತು ಅಬ್ದುಲ್ಲ ಇಬ್ಬರಿಗೂ ಒ೦ದೂ೦ದು ಅ೦ಗೈ ಮೇಲೆ ಪೆಟ್ಟು ಕೊಟ್ಟು, ಇನ್ನು ಮೇಲೆ ಲ೦ಚ ತಗೊಳ್ಳುವುದಿಲ್ಲ, ಅದರ ಆಮಿಷ ತೋರಿಸುವುದಿಲ್ಲ ಎ೦ದು ಇಬ್ಬರರ ಹತ್ತಿರವೂ ಪ್ರಮಾಣ ಮಾಡಿಸಿದರು. ನಟ್ಟಣ್ಣನಿಗೆ ತನ್ನ ತಪ್ಪಿನ ಅರಿವಾಗಿತ್ತು. ಮನೆಗೆ ಹೋಗುವವರೆಗೂ ಪೆಚ್ಚನೆ ಮುಖದಲ್ಲಿದ್ದ.

ಮನೆಯಲ್ಲಿ ರಾತ್ರಿ ಊಟದ ವೇಳೆ, ತ೦ದೆ ತಾಯಿಯರು ಕೇಳಿದರು, ನಟ್ಟಣ್ಣ ಅಳುತ್ತಾ ಎಲ್ಲವನ್ನೂ ಹೇಳಿದ. ಚ೦ದ್ರಣ್ಣ ಮಗನನ್ನು ಸಮಾಧಾನಿಸುತ್ತಾ ಹೇಳಿದ,

"ಹೋಗಲಿ ಬಿಡು, ನಿನಗೆ ಗೊತ್ತಿರಲಿಲ್ಲ, ಈಗ ಅರ್ಥವಾಗಿದೆ. ಇನ್ನು ಮೇಲೆ ನ್ಯಾಯದಲ್ಲೇ ಬದುಕುತ್ತೀಯಾ".

ನಟ್ಟಣ್ಣನ ಅಮ್ಮ ಜಾನಕಮ್ಮ ಅಳುತ್ತಿರುವ ನಟ್ಟಣ್ಣನ ಬಟ್ಟಲಿಗೆ ಇನ್ನೂ ಒ೦ದು ಕಡುಬು ಹಾಕಿದರು. ನಟ್ಟಣ್ಣನು ಸಧ್ಯಕ್ಕೆೆ ಎಲ್ಲವನ್ನೂ ಮರೆತು, ಕಡಬು ಸವಿಯುತ್ತಾ ನಗುಮುಖದವನಾದ.

Sunday, August 21, 2016

ಬರಲಿ ಒಣ ನವಣೆ ರೋಟಿಯ ಸಾವಿರಾರು ಕೋಟಿಯ ಕೈಗಾರಿಕೆ ಮತ್ತು ವಹಿವಾಟು

ಬರಲಿ ಒಣ ನವಣೆ ರೋಟಿಯ ಸಾವಿರಾರು ಕೋಟಿಯ ಕೈಗಾರಿಕೆ ಮತ್ತು ವಹಿವಾಟು
ಒಣ ಅಕ್ಕಿದೊಸೆಯ ಉಪ್ಪಿಟ್ಟು, ಇದೇ ನವಣೆ ದೊಸೆಯಾಗಿದ್ದರೆ ಇನ್ನೂ ಚೆನ್ನ

ಕೋರಿ ರೋಟಿಯ ವೈಭವದ ಬಗ್ಗೆ ಈಗಾಗಲೇ ಒಂದು ಬ್ಲಾಗ್ ಬರೆದಿದ್ದೆ. ಕೋರಿ ಅಂದರೆ ತುಳುವುನಲ್ಲಿ ಕೋಳಿ. ಈ ಒಣಗಿದ ಅಕ್ಕಿದೋಸೆಯನ್ನು ಕೋಳಿ ಪದಾರ್ಥದಲ್ಲೇ ತಿನ್ನುವ ರೂಢಿಯಾದುದರಿ೦ದ ಈ ಹೆಸರೇ ಗಟ್ಟಿಯಾಯಿತು.

ಆದರೆ ಕೋರಿ ರೋಟಿ ಸಸ್ಯಾಹಾರಿ ವಸ್ತು, ಅದು ಬರೇ ಒಣಗಿದ ಅಕ್ಕಿ ರೋಟಿ ಯಾನೆ ದೋಸೆ. ಅದನ್ನು ಕಾವಲಿ ಮೇಲೆ ಒಣಗಿಸಿ ಮಾಡುವ ದೃಶ್ಯಾವಳಿಯನ್ನೂ ಹಿಂದಿನ ಬ್ಲಾಗಿನಲ್ಲಿ ನೋಡಿದೆವು. ಶುದ್ಧ, ಸುಲಭ ಆಹಾರ, ತಿಂಗಳುಗಟ್ಟಲೇ ಕೂಡಿಟ್ಟರೂ ಹಾಳಾಗದು, ಬೇರೆ ಬೇರೆ ರೀತಿಯಲ್ಲಿ ಮುಖ್ಯ ಆಹಾರ ಇಲ್ಲ ಬದಿಯ ಆಹಾರ ಇಲ್ಲಾ ತಿಂಡಿಯಾಗಿ ಸಲ್ಲುವ ಅದರ ಬಳುಕುತನ ಇವೆಲ್ಲವೂ ಸೇರಿ ಇಡೀ ವಿಶ್ವದ ದೈನಂದಿನ ಬಳಕೆಯ ಅನುಕೂಲಕರ ಸಿದ್ಧ ಆಹಾರವಾಗಿ ಇದನ್ನು ಪ್ರಚುರ ಪಡಿಸುವುದೇ ಮೊದಲ ಬ್ಲಾಗಿನ ಮೂಲ ಉದ್ದೇಶ.

ಮ೦ಗಳೂರು ಸ್ಟೋರಿನಲ್ಲಿ ಸಿಗುವ ಒಣ ಅಕ್ಕಿ ದೋಸೆ - ಕೋರಿ ರೋಟಿ, ಇದು ಬೇರೆ ಬೇರೆ ನವನೆಗಳಲ್ಲಿ ಮಾಡಲ್ಪಟ್ಟು ಮಾರಾಟವಾಗಲಿ.

ಈಗ ಇದರ ಕಥೆ ಇನ್ನೂ ಚೆನ್ನಾಗಿ ಬೆಳೆಯುತ್ತಿದೆ. ಆಹಾರವಾಗಿ ಅಕ್ಕಿ ಒಳ್ಳೆಯದೇ ಆದರೂ ಅದಕ್ಕೂ ಮಿಗಿಲಾಗಿದ್ದು ನವಣೆ (ಸಿರಿಧಾನ್ಯಗಳು). ನವಣೆಯಲ್ಲಿ ಪೋಷಕಾಂಶಗಳು ಹೆಚ್ಚಿದ್ದು ನಮ್ಮ ದೇಹಕ್ಕೆ ಅಕ್ಕಿಗಿಂತಲೂ ಚೆನ್ನಾಗಿ ಹೊಂದಿಕೊಂಡು ಸಕ್ಕರೆ ಕಾಯಿಲೆ, ಮಲಬದ್ಧತೆ, ಸ್ಥೂಲದೇಹಿ, ಪೈಲ್ಸ್, ವ್ಯಗ್ರಕುಂಡೆರುಜಿನ (irritated bowel syndrome) ಇತ್ಯಾದಿ ಅನೇಕ ಖಾಯಿಲೆಗಳಿಗೆ ರಾಮ ಬಾಣ. ಹಾಗಾಗಿಯೇ ಸಿರಿಧಾನ್ಯಗಳು ಇಂದು ಮತ್ತೆ ಬೆಳಕಿಗೆ ಬಂದು ಜನಪ್ರಿಯವಾಗುತ್ತಿವೆ. ಸಿರಿಧಾನ್ಯಗಳಿಂದ ಮಾಡುವ ಅಡಿಗೆ ತಿನಿಸುಗಳಿಗೆ ಜನರು ಮುಗಿಬೀಳುತ್ತಿದ್ದಾರೆ, ಆ ಕುರಿತ ಅಡಿಗೆ ಪುಸ್ತಕಗಳು ಬಿಸಿ ರೊಟ್ಟಿಗಳಂತೆ ಮಾರಾಟವಾಗಿ ಮಾಯವಾಗುತ್ತಿವೆ.

ಆದ್ದರಿಂದಲೇ, ಈ ಒಣ ದೋಸೆಯನ್ನು ಅಕ್ಕಿಯಿಂದ ಮಾಡುವ ಬದಲು ಬೇರೆ ಬೇರೆ ನವಣೆಗಳಿಂದ ಮಾಡಿ ಮಾರಬಹುದು. ಈಗಾಗಲೇ ಬೇರೆ ಬೇರೆ ನವಣೆಗಳಿಂದ ದೋಸೆ ಮಾಡುವ ಕಲೆ ಕರಗತವಾಗಿದೆ. ಹಾಗಾಗಿ ನವಣೆ ಕೋರಿ ರೋಟಿ ಇಲ್ಲಾ ಒಣನವಣೆದೋಸೆಯನ್ನು ಮಾರುಕಟ್ಟೆಗೆ ಬಿಡಲು ಇದು ಕ್ಲಪ್ತ ಕಾಲ. ಮನೆಯಲ್ಲೇ ನವಣೆದೋಸೆಯನ್ನು ಒಣಗು ಮಾಡಲು ಕಲಿತು, ಗೃಹಕೈಗಾರಿಕೆಯನ್ನಾಗಿ ಮಾಡಿ ಮಂಗಳೂರು ಸ್ಟೋರ್ಸ್ ಮೂಲಕ ಪ್ರಚಾರ ತರಬಹುದು. ಆಮೇಲೆ ಯಂತ್ರದಲ್ಲೇ ಈ ದೋಸೆಯನ್ನು ಮಾಡಲು ಕಲಿತು, ಹೆಚ್ಚಿನ ಉತ್ಪಾದನೆ ಮೂಲಕ ಎಲ್ಲಾ ವರ್ಗದ ಜನರಿಗೆ ಸುಲಭದಲ್ಲಿ ನವಣೆಯ ಸಿದ್ಧ ಆಹಾರವನ್ನು ತಲುಪಿಸಬಹುದು. ರಾಗಿ, ಸಾಮೆ, ಊದಲು...ಹೀಗೆ ಬೇರೆ ಬೇರೆ ರೀತಿಯ ಒಣನವಣೆ ದೋಸೆಗಳನ್ನು ಹೊರ ತಂದು, ರುಚಿ, ಶುಚಿ ಮತ್ತು ಆರೋಗ್ಯದಲ್ಲಿ ಹೊಸ ಕ್ರಾಂತಿಯನ್ನೇ ತರಬಹುದು.

ಸುಮಾರು ೧,೦೦೦ -೧೦,೦೦೦ ಕೋಟಿ ರೂಪಾಯಿಯ ಉದ್ಯಮವಾಗಿ ಒಣ ದೋಸೆಯು ಮೊಳಗಲು ನವಣೆಯ ನವ ನವರು ದಾರಿ ಬೆಂಕಿಗೆ ತುಪ್ಪ ಸುರಿದಂತೆ.

ಉದ್ಯಮಿಗಳು, ವ್ಯಾಪಾರಿಗಳು, ಸೃಜನಶೀಲರು ತ್ವೆರೆ ಮಾಡಿ, ಪೈಪೋಟಿಯಲ್ಲಿ ಮುಂದೆ ಸಾರಿ. ಶುಭವಾಗಲಿ!

ಗೃಹ ಕೈಗಾರಿಕೆಯಾಗಿ ಕೋರಿ ರೋಟಿ, ಒಣ ನವಣೆ ರೋಟಿ ಇದೇ ರೀತಿ ಬರಲಿ!

ಮುಖಪುಸ್ತಿಕೆಯಲ್ಲಿ ಕೋರಿ ರೋಟಿಯ ಸಸ್ಯಾಹಾರಿ ತಿನಿಸುಗಳ ಅಡಿಗೆ

Wednesday, August 3, 2016

ಕರಾವಳಿಯ ಕೋರಿ ರೋಟಿಯ ಕರಾಮತ್ತು ವಿಶ್ವವ್ಯಾಪಿಯಾಗಬೇಕಾಗಿದೆ!


ಕರಾವಳಿಯ ಕೋರಿ ರೋಟಿಯ ಕರಾಮತ್ತು ವಿಶ್ವವ್ಯಾಪಿಯಾಗಬೇಕಾಗಿದೆ!

ಬೆಂಗಳೂರಿನಲ್ಲಿನ ಮಂಗಳೂರು ಸ್ಟೋರಿಗೆ ಧಾಳಿಯಿಟ್ಟಾಗ ನೀವು ಅವಶ್ಯವಾಗಿ ಕೊಂಡುಕೊಳ್ಳಬೇಕಾಗಿದ್ದು ಕೋರಿ ರೋಟಿ, ಇದು ನಮ್ಮ ಕರಾವಳಿಯ ಅತೀ ಉನ್ನತವಾದ ಸಿದ್ಧ ಆಹಾರದ ಕೊಡುಗೆ. ಹತ್ತಿರ ಹತ್ತಿರ ಒಂದು ಕಿಲೋಗ್ರಾಮ್ ತೂಗುವ ಈ ಒಣದೋಸೆ ಭಾರೀ ರುಚಿ ಮತ್ತು ವಿಧವಿಧವಾಗಿ ಉಪಯೋಗಿಸಲು ಅನುಕೂಲಕರ, ಬರೇ ೫೦ ರೂಪಾಯಿಗೆ ಸಿಕ್ಕು ಭಾರೀ ಅಗ್ಗ!

ಪಾಶ್ಚಾತ್ಯರಾಗಿದ್ದರೆ, ಈವಾಗಲೇ ಇದನ್ನು ಬ್ರೆಡ್, ಪಿಜ್ಜಾ ಇತ್ಯಾದಿಗಳ ಹಾಗೆ ವಿಶ್ವವ್ಯಾಪಿಯಾಗಿ ಮನೆಮಾತಾಗಿ ಮಾರ್ಪಡಿಸುತ್ತಿದ್ದರು, ಆ ಕೆಲಸ ನಾವು ಕನ್ನಡಿಗರಿಂದ ಇದು ಆಗಬೇಕಾಗಿದೆ, ಆ ಮುನ್ನ, ಕರ್ನಾಟಕದಲ್ಲೇ ಇದು ಮನೆಮಾತಾಗಬೇಕಾಗಿದೆ.

ಒಣಗಿದ ದೋಸೆಯಾಗಿದ್ದು, ಗರಿಗರಿಯಾಗಿ ಕವರಿನಲ್ಲೇ ಉಳಿದಿದ್ದು, ಅಲ್ಲಲ್ಲಿ ಕೆಂಪು ಕೆಂಪಾಗಿ ಹುರಿದಿದ್ದು ಬರಿದೇ ತಿಂಡಿಯಾಗಿ ತಿನ್ನಲು ಅತಿಯೋಗ್ಯ. ಮೊಸರು, ಮಜ್ಜಿಗೆ, ಸಾಂಬಾರ್, ಸಾರಿನ ಜೊತೆಗೂ ತಿನ್ನಬಹುದು. ಮಾಂಸದ ಅಡಿಗೆಯ ಜೊತೆ ಇದು ಈಗಾಗಲೇ ಮನೆ ಮಾತಾಗಿದೆ. ಸಸ್ಯಾಹಾರಕ್ಕೂ ಅತಿಯಾಗಿ ಒಗ್ಗುವ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದಿರುವುದು ದುರದೃಷ್ಟ.

ಈ ಒಣದೋಸೆಯ ಉಪಯೋಗದ ಸುತ್ತ ಇನ್ನೂ ಹೆಚ್ಚಿನ ಕಾಯಕಲ್ಪ ಆಗಬೇಕಾಗಿದೆ. ಇದರ ಉಪ್ಪಿಟ್ಟು, ಒಗ್ಗರಣೆ, ಪಾಸ್ತಾ ಮತ್ತು ಪಾರ್ಮಿಜಿಯಾನಾ ಅಡಿಗೆ ತಯಾರಿ, ಪಾಯಸ, ಚಿತ್ರಾನ್ನ ಹೀಗೆ ನೂರಾರು ಬಗೆಯ ಅಡಿಗೆ ಮಾಡಿ ತೋರಿಸುವತ್ತ ಕಳಕಳಿಯ ಕರೆ.

ಸಧ್ಯಕ್ಕೆ ಬರೇ ಕರಾವಳಿಯಲ್ಲಿ ಗೃಹ ಕೈಗಾರಿಕೆಯಾಗಿರುವ ಈ ತಿಂಡಿ ಇಡೀ ಕರ್ನಾಟಕದ ಆಹಾರ ಮತ್ತು ಉದ್ಯಮವಾಗುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಧ್ಯಕ್ಕೆ ಇದು ಗೃಹ ಕೈಗಾರಿಕೆಯಾಗಿ ಉತ್ಪಾದಿತವಾಗುವ ದೃಶ್ಯ ಸುರುಳಿ ಅಂತರ್ಜಾಲದಲ್ಲಿದ್ದು, ಇಲ್ಲಿ ಅದರ ಕೊಂಡಿಯನ್ನು ಕೊಡಲಾಗಿದೆ, ಇದರ ತಯಾರಿಯ ಸರಳತೆ ಮತ್ತು ಸುಂದರತೆಯನ್ನು ಅವಶ್ಯ ನೋಡಿರಿ.

ಗೃಹ ಕೈಗಾರಿಕೆಯಾಗಿ ಕೋರಿ ರೋಟಿಯ ತಯಾರಿ

ಈ ದೋಸೆಯ ತಯಾರಿಯನ್ನು ಯಾಂತ್ರಿಕತೆಗೆ ಅಳವಡಿಸುವುದು ಸುಲಭ ಸಾಧ್ಯ, ಆ ಮೂಲಕ ಮೈಯ್ಯಾಸ್, ಎಮ್. ಟಿ. ಆರ್. ಅಂತಹವರಿಂದ ಇದು ಬೃಹತ್ ಸಿದ್ಧ ಆಹಾರದ ಉದ್ಯಮವಾಗಿ ಕರ್ನಾಟಕಕ್ಕೆ, ಕೃಮೇಣ ಭಾರತದುದ್ದಕ್ಕೂ ವಾಣಿಜ್ಯ ಮತ್ತು ಆರ್ಥಿಕ ಕ್ರಾಂತಿಯಾಗಿ ಪರಿವರ್ತಿಸುವತ್ತ ನಾವೆಲ್ಲ ಕೈಸೇರಿಸಬೇಕಾಗಿದೆ.

ಆಹಾರದ ಮೇಳಗಳಲ್ಲಿ ಪ್ರಚಾರ, ಇದರಿಂದ ತಯಾರಿಸಿದ ಅನೇಕ ಅಡಿಗೆಗಳ ಪ್ರಚಾರ, ಗೃಹ ಕೈಗಾರಿಕೆಯಾಗಿ ಸರಕಾರ, ಬ್ಯಾಂಕ್, ಸಹಕಾರಿ ಸಂಘಗಳ ಅರ್ಥಿಕ ಮತ್ತು ಇತರ ರೀತಿಯ ಪ್ರೋತ್ಸಾಹ ಮತ್ತು ತರಬೇತಿ, ಮಹಿಳೆಯರ ಸ್ವಸಹಾಯ ಸಂಘಗಳ ಮೂಲಕ ಇದರ ತಯಾರಿಯನ್ನು ಕರ್ನಾಟಕದ ಉದ್ದಕ್ಕೂ ಪಸರಿಸಿ, ಇದರ ಉಪಯೋಗವನ್ನೂ ಕ್ರಾಂತಿಕಾರಿಯಾಗಿ ಹೆಚ್ಚಿಸುವತ್ತ ಸಂಬಂಧಿಸಿದವರೆಲ್ಲಾ ವಾಲಬೇಕಾಗಿದೆ.

ಕೋರಿ ರೋಟಿ, ಬರೇ ಕರಾವಳಿಯ ಅರ್ಘ್ಯ ರತ್ನವಲ್ಲ, ಇಡೀ ಕರ್ನಾಟಕದ, ಭಾರತದ, ವಿಶ್ವದ ಅಮೂಲ್ಯ ಸಿದ್ಧ ಆಹಾರವಾಗಬೇಕಾಗಿದೆ, ಆ ಯೋಗ್ಯತೆ, ಸುಲಲಿತೆ, ರುಚಿ ಮತ್ತು ಅವಕಾಶ ಯಾವತ್ತೂ ಇದ್ದು, ನಾವು ಎಚ್ಚೆತ್ತು ವೈಯಕ್ತಿಕ ಮತ್ತು ಸಾಂಘಿಕವಾದ ಮುಂದಿನ ಹೆಜ್ಜೆಗಳನ್ನು ಇಟ್ಟು ಹೇಗೆ ಸಾಫ್ಟ್ವೇರಿನಿಂದ ಸಾವಿರಾರು ಕೋಟಿ ಆದಾಯ ಹುಟ್ಟಿಸುತ್ತಿದ್ದೇವೋ, ಹಾಗೇ ವಿಶ್ವವ್ಯಾಪಿ ರಫ್ತಿನ ಮೂಲಕ ಕೋರಿ ರೋಟಿಯಿಂದಲೂ ಅಷ್ಟೇ ಹಣಕಾಸಿನ ಉದ್ಯಮದ ಸಾಧ್ಯತೆ ಇದ್ದು ನಮ್ಮ ಜಡತನ ಕೊಡವಿ ಆ ದಿಕ್ಕಿನತ್ತ ಧಾವಿಸಬೇಕಾಗಿದೆ.

ಸಧ್ಯಕ್ಕೆ, ಮಂಗಳೂರು ಸ್ಟೋರುಗಳಿಗೆ ಧಾಳಿ ಇತ್ತು, ಅಲ್ಲಿನ ದಾಸ್ತಾನನ್ನೆಲ್ಲ ಖಾಲಿಮಾಡಿ, ಮನೆಯಲ್ಲಿ ವಿಧವಿಧವಾಗಿ ಉಪಯೋಗಿಸಿ ನನ್ನ ಈ ಮಾತುಗಳಲ್ಲಿ ಮೌಲ್ಯವಿದೆಯೇ ಇಲ್ಲವೇ ಎಂಬುದನ್ನು ಪ್ರತಿಪಾದಿಸಿಬೇಕಾಗಿ ವಿನಂತಿ!

ಮುಂದೆ ಇದರಿಂದ ತಯಾರಿಸಿದ ಬೇರೆ ಬೇರೆ ಖಾದ್ಯಗಳ ಮೆರವಣಿಗೆಯನ್ನು ಶೀಘ್ರದಲ್ಲೇ ನಿರೀಕ್ಷಿಸಿ!

ಕೋರಿ ರೋಟಿ ಬರೇ ಕರಾವಳಿಯದ್ದಲ್ಲ, ಕರ್ನಾಟಕದ್ದೂ ಆಗಿ, ಅಲ್ಲಿಗೇ ನಿಲ್ಲದೇ ವಿಶ್ವವ್ಯಾಪಿಯಾಗುವತ್ತನೀವು ಇದರ ದತ್ತು ತೆಗೆದುಕೊಳ್ಳುವುದು ಆ ಕುರಿತಾಗಿ ಮೊದಲ ಹೆಜ್ಜೆ ಎಂಬುದನ್ನು ಮರೆಯದಿರಿ!
ಮುಖಪುಸ್ತಿಕೆಯಲ್ಲಿ ಕೋರಿ ರೋಟಿಯಿ೦ದ ಸಸ್ಯಾಹಾರಿ ತಿನಿಸುಗಳ ಅಡಿಗೆ