Tuesday, October 11, 2022

ಕಾಂತಾರ ಕಂಡೆ, ನೀವ್‌ ಕೇಣಿ!

 

ಕಾಂತಾರ ಕಂಡೆ, ನೀವ್‌ ಕೇಣಿ!

 

“ಕಾಂತಾರ” ಮನರಂಜನೆಯ ಚಿತ್ರವಾಗಿ ಒಂದು ಪರಿಣಾಮಕಾರಿಯಾದ ಚಿತ್ರ. ಬುದ್ಧಿವಂತಿಕೆಯ ಚಿತ್ರವೂ ಕೂಡಾ. ಹಾಗೆಂದು ಇದೊಂದು ಕಲಾತ್ಮಕ ಚಿತ್ರವೆಂಬ ನಿರೀಕ್ಷೆಯಲ್ಲಿ ನೋಡಹೋಗಬೇಡಿ.

 

ಕಾಂತಾರದ ಪರಿಣಾಮವು ಕಥನದಲ್ಲಿನ ಹದ ಮತ್ತು ಸಂಯಮದ ಮೂಲಕ ಅನಾವರಣಗೊಳ್ಳುತ್ತದೆ.  ದಂತ ಕಥೆಯನ್ನು ಆಧರಿಸಿ ಚಿತ್ರ ಕಥೆ ಗಟ್ಟಿಯಾದ ಚೌಕಟ್ಟನ್ನು ಹೊಂದಿದೆ. ೧೯೭೦ರ ಸುತ್ತಲಿನ ಸಾಮಾಜಿಕ ವಾಸ್ತವನ್ನಾಧರಿಸಿ  ಚಿತ್ರ ಕಥೆ ಇದ್ದರೂ, ಕಥನದ ಓಘ ಮತ್ತು ಧಾಟಿ ಇಂದಿನ ಪ್ರೇಕ್ಷಕನ ಅಭಿರುಚಿಗೆ ಸರಿಯಾಗಿ ಇದೆ. ಸಮಾಜದಲ್ಲಿ ಎಂದಿಗೂ ಎಲ್ಲವೂ ನೆಟ್ಟಗಿರುವುದಿಲ್ಲ. ಈ ನೆಟ್ಟಗಿಲ್ಲದ ವಿಷಯಗಳನ್ನು ಹೇಳುವಲ್ಲಿ ಯಾವುದೇ ಅಳಕು ಇಲ್ಲಿಲ್ಲ, ಅನಾವಶ್ಯಕ ರಾಜಕೀಯದ ಯಾ ಸಿದ್ಧಾಂತಗಳ ತಲೆನೋವೂ ಇಲ್ಲ. ನೋಡುಗನಾಗಿ ನಡೆವ ಘಟನೆಗಳು ಚಿತ್ರಣಗಳು ನಿಮ್ಮನ್ನು ಬಾಧಿಸದೇ ಇರುವುದಿಲ್ಲ. ಎಲ್ಲವೂ ನೆಟ್ಟಗಿಲ್ಲದಿರದಿದ್ದರೂ, ಸಮತೋಲನದ, ಪರಸ್ಪರ ಹೊಂದಾಣಿಕೆಯ ಬದುಕು ಮಾತ್ರ ಬಹು ಮುಖ್ಯ ಎಂಬ ಸಂದೇಶ ನಿಮಗೆ ಉಳಿದು ಹೋಗುವುದು ಈ ಸಿನೆಮಾದ ಯಶಸ್ಸುಗಳಲ್ಲಿ ಒಂದು.  ದಲಿತ-ಬಲಿತ, ಕಾಡು-ನಾಡು, ಸಮುದಾಯ-ಸರಕಾರ, ಸಂಸ್ಕೃತಿ-ನಾಗರಿಕತೆ, ಪರಂಪರೆ-ಬದಲಾವಣೆ, ಮಾನವ ಪ್ರಯತ್ನ-ದೈವ (ಅನೂಹ್ಯ), ಒಳಿತು-ಕೆಡಕು, ಜೀವನೋತ್ಸಾಹ- ನೈತಿಕತೆ, ದಿಕ್ಕಿಲ್ಲದ ಸರಳ ಬದುಕು-ಪರಿವರ್ತನೆಯ ಕರೆ ಈ ಎಲ್ಲ ಸಂಘರ್ಷಗಳ ಸುತ್ತ ದೇಶ ಕಾಲಗಳ ಚಲನೆಯ ಆವಾಂತರಗಳ ಸುತ್ತ ಸಮತೋಲನ ಹಾಗೂ ಹೊಂದಾಣಿಕೆಯತ್ತ ನಮ್ಮ ಸಂವೇದನೆಗಳಿರಲಿ ಎಂಬ ಸಂದೇಶ ಪರಿಣಾಮಕಾರಿಯಾಗಿ ಮುಟ್ಟುವಂತಹದ್ದು. ಈ ಪರಿಣಾಮದ ಮೂಲಕ ನೀವು ಚಿತ್ರಮಂದಿರದಿಂದ ಹೊರ ಬಂದಂತೆ ನಿಮ್ಮನ್ನು ಅಂತರ್ಮುಖಿಯಾಗಿಸುವುದೇ ಈ ಚಿತ್ರದ ಬುದ್ಧಿವಂತಿಕೆಗಳಲ್ಲಿ ಬಹಳ ಮುಖ್ಯವಾದದ್ದು.

 

ಮೊದಲೇ ಹೇಳಿದಂತೆ ಇದೊಂದು ಮನರಂಜನೆಯ ಚಿತ್ರ. ಹಾಗಾಗಿ ಸಾಮಾನ್ಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ಮೋಸವಾಗದಂತೆ ರಂಜನೆ ಇದೆ, ಹಾಸ್ಯ ನವಿರಾಗಿ ಇದೆ.  ಹೊಡೆದಾಟ ನನಗೆ ಅನಗತ್ಯ ಎನಿಸಿದರೂ ಇದು ಬೇಕಿರುವವರಿಗೆ ಸಾಕಷ್ಟು ಇರುವುದೇ ಸಿನೆಮಾ ಎಲ್ಲರ ಮನ ಗೆಲ್ಲುವತ್ತ ಇನ್ನೊಂದು ಬುದ್ಧಿವಂತಿಕೆಯಾಗಿ ಎದ್ದು ಕಾಣುತ್ತದೆ.

 

ಈ ಚಿತ್ರದಲ್ಲಿ ಕಥನದ ಓಘ ಮತ್ತು ಸಮತೋಲನವೇ ಮುಖ್ಯವಾಗುತ್ತದೆ. ಹಾಗಾಗಿ ಕಲಾತ್ಮಕತೆ ಸೊರಗುವುದು ಅನಿವಾರ್ಯ. ನಟರೆಲ್ಲಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ನಾಯಕ ನಟನಾಗಿ ರಿಷಭ್‌ ಶೆಟ್ಟಿ ಹೊಡೆದಾಟಗಳನ್ನು ಬಿಟ್ಟರೆ ಬೇರೆ ಸಮಯದಲ್ಲಿ ಸಾಮಾನ್ಯನಾಗಿ ಕಾಣುವುದೇ ಈ ಸಿನೆಮಾದ ಜೀವಾಳ. ಆದರೆ ಕೊನೆಯ ಹತ್ತು ಹದಿನೈದು ನಿಮಿಷಗಳಲ್ಲಿ ರಿಷಭ್‌ ಶೆಟ್ಟಿ ನಟನಾಗಿ ನಿಮ್ಮ ಗಮನ ಸೆಳೆಯುತ್ತಾರೆ, ಅದೂ ಹೆಚ್ಚಿನ ಕಲಾತ್ಮಕತೆ ಇಲ್ಲದೇ. ಹಾಗಾಗಿ, ರಿಷಭ್‌ ಶೆಟ್ಟಿಯವರು ನಟನಾಗಿ ಗೆದ್ದು, ಚಿತ್ರದ ರೂವಾರಿಯಗಿ ಇನ್ನೂ ಹತ್ತು ಪಟ್ಟು ಹೆಚ್ಚಿಗೆ ಗೆದ್ದಿದ್ದಾರೆ. ಕಲಾತ್ಮಕ ಚಿತ್ರಗಳಲ್ಲಿದ್ದಂತೆ ನಟರಿಗೆ ಅಭಿನಯಕ್ಕೆ ಹೆಚ್ಚು ಅವಕಾಶವನ್ನು ಕಥನ ಮತ್ತು ಕೆಮರಾ ಇಲ್ಲಿ ಕೊಡುವುದೇ ಇಲ್ಲ. ಹಾಗಾಗಿ ಮಾನಸಿ ಸುಧೀರ್‌ ಅಂತಹ ಪ್ರತಿಭಾನ್ವಿತ ನಟಿಯರ ಪೂರ್ಣ ಪ್ರಯತ್ನವಿದ್ದರೂ ಪಾತ್ರ ಸೊರಗುತ್ತದೆ, ಇದು ನಟರ ತಪ್ಪಲ್ಲ, ಆದರೆ ಅವರ ದುರದೃಷ್ಟವೇ. ಆದರೆ ಚಿತ್ರ ಗೆಲ್ಲುವುದರಿಂದ ಎಲ್ಲರೂ ಗೆದ್ದಂತೆ.

 

ಇದೇ ಮಣ್ಣಿನಿಂದ ಇತ್ತೀಚೆಗೆ ಬಂದ “ಅಮ್ಮಚ್ಚಿಯೆಂಬ ನೆನಪು” ಎಂಬ ಸಿನೆಮಾ ಬಲವಾದ ಕಥಾ ಹಂದರವಿದ್ದು ಹೆಚ್ಚು ಕಲಾತ್ಮಕವಾಗಿ ಮೂಡಿಬಂದಿರುವಂತಹದ್ದು. ಆದರೆ, ಕಡಿಮೆ ಕಲಾತ್ಮಕತೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೆಚ್ಚಿನ ಪ್ರೇಕ್ಷಕರನ್ನು ಮುಟ್ಟುವುದೇ ಕಾಂತಾರದ ಹೆಗ್ಗಳಿಕೆ. ಹಾಗಾಗಿಯೇ ಅಲ್ಲಲ್ಲಿ ದೂರು ಬರುವುದು ಸಹಜವೇ. ಕುಂದಗನ್ನಡದ ಉಪಯೋಗ ಕಡಿಮೆ ಇರುವುದು, ಶುರುವಿಗೆ ಹಾಗೂ ಕೊನೆಗೆ ಸಂಸ್ಕತದ ಶ್ಲೋಕಗಳು, ಯಕ್ಷಗಾನವನ್ನು ದುಡಿಸಿಕೊಳ್ಳುವಲ್ಲಿನ ಮಿತಿಗಳು ಇತ್ಯಾದಿಗಳು ದೋಷವಾಗಿ ಕಂಡರೂ, ಸಿನೆಮಾದ ಒಟ್ಟು ಪರಿಣಾಮ, ಸಮತೋಲನ ಹಾಗೂ ಸಮನ್ವಯದಲ್ಲಿ ಸಾಕಷ್ಟು ಸಹಕರಿಸಿವೆ.

 

ಪ್ರಪಂಚದಲ್ಲಿನ ಬೇರೆ ಬೇರೆ ಹಿನ್ನಲೆಯ ಸುಮಾರು ೨೦,೦೦೦ಕ್ಕೂ ಹೆಚ್ಚಿನ ಸಿನೆಮಾಗಳನ್ನು ನೋಡಿ ರೂಢಿಯಾದ ನನಗೆ ಚಿತ್ರಗಳ ಕಥನದ ವಿಭಿನ್ನತೆ, ಅದರ ಉದ್ದೇಶ ಹಾಗೂ ಪರಿಣಾಮ, ಈ ಕುರಿತಾದ ಕಲಾತ್ಮಕತೆ ಇವೆಲ್ಲವೂ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಈ ಚಿತ್ರವು  ಕಲಾತ್ಮಕತೆಯ ಕೊರತೆಗಳಿದ್ದರೂ ಕೂಡಾ ವಿಶ್ವಮಟ್ಟದ್ದಾಗುತ್ತದೆ. ಆದರೆ, ಅದರ ಅರ್ಥ ಅದಕ್ಕೆ ವಿಶ್ವ ಮನ್ನಣೆ ಸಿಗುತ್ತದೆ ಎಂದಲ್ಲ.

 

ಭೂತಾರಾಧನೆಯ ವಿಷಯದಲ್ಲಿ ಹೂಡಿಕೆಯಾದವರಿಗೆ ಈ ಚಿತ್ರ ಸಾಕಷ್ಟು ಸಾರ್ಥಕ್ಯವನ್ನು ಕೊಡುತ್ತದೆ. ಆದರೆ ಭೂತಾರಾಧನೆಯಲ್ಲಿ ನಿಮ್ಮ ನಂಬಿಕೆ ಎಷ್ಟು ಇದೆ, ಇಲ್ಲ ಎಂಬುದು ಏನೇ ಇದ್ದರೂ ಈ ಚಿತ್ರದ ಪರಿಣಾಮ ನಿಮಗೆ ಉಳಿಯುವುದು ಈ ಚಿತ್ರದ ಇನ್ನೊಂದು ಬುದ್ಧಿವಂತಿಕೆ.

 

“ಅಮ್ಮಚ್ಚಿಯೆಂಬ ನೆನಪು” ಸಿನೆಮಾ ಕಲಾತ್ಮಕವಾಗಿದ್ದರೂ ಗಳಿಕೆಯಲ್ಲಿ ಹಾಗೂ ಪ್ರಶಸ್ತಿಯಲ್ಲಿ ಸುದ್ದಿಯಾಗದೇ ಇರುವ ನೆನಪು ಇನ್ನೂ ಮಾಸಿಲ್ಲ. ಇದಕ್ಕೆ ಕಾರಣ, ಪ್ರೇಕ್ಷಕನಿಗೆ ಪರಿಣಾಮ ಒಂದು ಕಡೆಯಾದರೆ, ಪ್ರಶಸ್ತಿಯ ವಿಷಯದಲ್ಲಿ ಬರಬಹುದಾದ ಇತರ ಗಣನೆಗೆಳು ಹಾಗೂ ಸಂಬಂಧಿತ ಲಾಬಿಗಳು.  ಆದರೆ ಕಾಂತಾರವು ಕಲಾತ್ಮಕವಾಗಿ ಸೊರಗಿದ್ದರೂ ಪರಿಣಾಮಕಾರಿಯಾಗಿ ಹೆಚ್ಚಿನ ಗಳಿಕೆ ಹಾಗೂ ಪ್ರಶಸ್ತಿಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಆಸ್ಕರಿಗೆ ಕೂಡಾ ಹೋಗಲಿ ಎಂದು ಆಶಿಸುವೆ, ಆದರೆ ಇದು ಹೋಗಲೇಬೇಕೆಂಬ ಹಠವಿಲ್ಲ.  


ಕಾಂತಾರವು ಕನ್ನಡೇತರ ಕಾಣುಗರಿಗೂ ಒಂದು ಮುಖ್ಯವಾದ ಚಿತ್ರ ಎಂಬುದೇ ನನ್ನ ಕೊನೆಯ ಮಾತು. ಅದಕ್ಕಾಗಿ ಇಂಗ್ಲಿಷಿನಲ್ಲಿ ಇನ್ನೊಂದು ಲೇಖನ ಬರೆದರೂ ಬರೆದೆ.

 

ನಮಸ್ತೆ.

ನಟರಾಜ ಉಪಾಧ್ಯ 

Thursday, September 8, 2022

ಸೋಣೆ ಆರತಿಯ ಸವಿ ನೆನಪುಗಳು - ಭಾಗ ಎರಡರಲ್ಲಿ ಒಂದು

 ಸೋಣೆ ಆರತಿಯ ಸವಿ ನೆನಪುಗಳು - ಭಾಗ ಎರಡರಲ್ಲಿ ಒಂದು 


(ಇತ್ತೀಚೆಗೆ ಜೀರ್ಣೋದ್ಧಾರಗೊಂಡ ನಮ್ಮೂರಿನ ಈಶ್ವರ ಮಠ. ಚಿತ್ರ ಕೃಪೆ: ಕೋ. ಚ ನಾವಡ)

 https://www.facebook.com/photo.php?fbid=3019079901694397&set=pb.100007772508060.-2207520000..&type=3

ನಾನು ಪಾರಂಪಳ್ಳಿ ಪಡುಕೆರೆಯ ಉಪಾಧ್ಯರ ಕೇರಿಯ ತೆಂಕಿನ ಕೇರಿಯವನು. ಅತ್ತ ಅಜ್ಜಿಬೆಟ್ಟು ದಾಟಿ ಮಾಸ್ಟರ ಮನೆಯವರೆಗೆ ಹರಡಿರುವ ಬಡಾ ಕೇರಿಯಲ್ಲಿನ ಕೇಂದ್ರ ಬಿಂದು ಕಟ್ಟೆ ದೇವರ (ಇಷ್ಟ ದೇವತೆ) ಮನೆಯಾದರೆ, ಇತ್ತ ವಾಸುಪಾಧ್ಯರ ಮನೆ ನಂತರದ ಗುಡ್ಡೆ ದಾಟಿದರೆ ಸಿಗುವುದೇ, ತೆಂಕಣ ನಾವಡರ ಕೇರಿ, ಅಲ್ಲಿನ ಕೇಂದ್ರ ಬಿಂದು ಈಶ್ವರ ಮಠ (ಇಂದಿನ ಉಮಾಮಹೇಶ್ವರ ದೇವಸ್ಥಾನ). ನಮ್ಮ ತೆಂಕಿನ ಕೇರಿಯಲ್ಲಿ ಹೊಳೆ ಈಚೆಗೆ ಹೆಚ್ಚಿನ ಸಾಮಗ್ರಿ ಸಿಗುವ ಒಂದೇ ಅಂಗಡಿ ಇರುವ ನಮ್ಮ ಮನೆಯೇ  ಕೇಂದ್ರ ಬಿಂದು, ನನಗಂತೂ ಮನೆಯಾಗಿ ಅದು ಕೇಂದ್ರ ಬಿಂದು.

 

ಈ ಬರಹ ಈಶ್ವರ ಮಠದ ಸೋಣೆ ಆರತಿಯ ಅನುಭವದ ಸುತ್ತಲಿನ ಸವಿ ನೆನಪುಗಳನ್ನು ಕದಡುವುದಕ್ಕಾಗಿ ಮಾತ್ರ.

 

ಈಶ್ವರ ಮಠದಲ್ಲಿ ಶ್ರಾವಣ ತಿಂಗಳಲ್ಲಿ ನಡೆಯುವ ಸೋಣೆ ಆರತಿ, ಮಕ್ಕಳಾದ ನಮಗೆ ದಿನಾ ಹೋಗಿ ಬರುವಷ್ಟು ಆಕರ್ಷಕವಾಗಿತ್ತು. ನಮ್ಮ ಮನೆಯಿಂದಲೂ ವರ್ಷಕ್ಕೊಮ್ಮೆ ಸೋಣೆ ಆರತಿ ನಡೆಯುತ್ತಿತ್ತು. ಅಪರೂಪಕ್ಕೆ ನಮ್ಮ ಅಮ್ಮ ರಂಗಪೂಜೆ ಹೇಳಿಕೊಂಡದ್ದೂ ಬೇರಂದು ತಿಂಗಳಲ್ಲಿ (ಬಹುಶ: ಕಾರ್ತಿಕ ಮಾಸದಲ್ಲಿ) ನಡೆಯುತ್ತಿತ್ತು.

 

ಪೂರ್ವರಂಗ:

 

ಸೋಣೆ ಆರತಿಗೆ ಬರುವ ಮುನ್ನ ನಮ್ಮ ಮನೆಯ ಒಂದು ರಂಗಪೂಜೆಯ ಘಟನೆ ಒಂದನ್ನು ಹೇಳಲೇ ಬೇಕು. ಈ ರಂಗಪೂಜೆಗೆ ಪ್ರಸಾದವಾಗಿ ನಮ್ಮಮ್ಮ ಗಾರಿಗೆ ಮಾಡಿದ್ದರು, ಅಷ್ಟೊಂದು ಗಾರಿಗೆ ಅಮ್ಮ ಮಾಡಿದ್ದು ನಾನು ನೋಡಿದ್ದು ಬಹುಶ: ಅದೇ ಮೊದಲು ಮತ್ತು ಕೊನೆ. ಅದನ್ನು ದೇವಸ್ಥಾನದಲ್ಲಿ ನೈವೇದ್ಯ ಆಗದೇ ತಿನ್ನುವಂತಿಲ್ಲ. ಅಮ್ಮ ಗಾರಿಗೆ ಮಾಡುವುದು ಅಪರೂಪವಿತ್ತು, ರುಚಿ ಮಾತ್ರ ಸ್ವರ್ಗ ಸದೃಶ. ಅಮ್ಮ ಕಷ್ಟ ಪಟ್ಟು ಸಮಾರು ಗಾರಿಗೆ ಮಾಡಿ ಹಾಕುವಾಗ, ಅದರ ಪರಿಮಳ ತಲೆ ಕೆಡಿಸುವಷ್ಟಿತ್ತು. ಬೇರೆ ಸಮಯಗಳಲ್ಲಿ, ಅಮ್ಮ, “ತಕಣಿ ಮಕ್ಕಳೇ” ಎಂದು ಮಾಡುತ್ತಿರುವಾಗಲೇ ತಿಂಡಿಯನ್ನು ನಮಗೆ ಹಂಚಿ ಕೊಡುವುದಿದ್ದರೆ, ಈ ಬಾರಿ ಮಾತ್ರ  ನಾವು ತಿನ್ನುವಂತಿರಲಿಲ್ಲ. ಆಗ ನಾನು ಬಹುಶ: ಒಂದನೇ ಅಥವಾ ಎರಡನೇ ಕ್ಲಾಸಿನಲ್ಲಿ ಇದ್ದಿರಬಹುದು, ರಂಗಪೂಜೆಯ ಇಡೀ ಘಟನೆಯಲ್ಲಿ ನನಗೆ ನೆನಪಿರುವುದು ಗಾರಿಗೆ ಮಾತ್ರ, ಅಂದರೆ ನನ್ನ ತಲೆ ಕಣ್ಣುಗಳು  ರಂಗಪೂಜೆ ನಡೆಯುವಾಗಲೂ ಗಾರಿಗೆ ಬುಟ್ಟಿಯ ಮೇಲೆ ಮಾತ್ರ ಇತ್ತು ಅಂತ ಈಗ ಅನಿಸುತ್ತಿದೆ.

 

ಅಂತೂ ರಂಗಪೂಜೆ ಮುಗಿಯಿತು. ಮನೆಗೆ ಹೋಗುವ ಸಮಯ, ಕತ್ತಲಾಗಿತ್ತು, ಅಮಾವಾಸ್ಯೆಯಂತೆ ಕತ್ತಲಿತ್ತು.  ಮನೆ ಕಡೆ ಹೊರಟಿದ್ದಾಗ, ಗುಡ್ಡೆಯ ದಾರಿಯಲ್ಲಿ ತಮ್ಮಯ್ಯ ಐತಾಳರ ಮನೆ ದಾಟಿದ್ದಷ್ಟೇ, ಗಾರಿಗೆ ಹೊತ್ತ ನಮ್ಮ ಅಣ್ಣಂದಿರಲ್ಲೊಬ್ಬರು ಕತ್ತಲೆಯಲ್ಲಿ ಎಡವಿ, ಎಲ್ಲಾ ಗಾರಿಗೆಯು ಗುಡ್ಡೆಯ ಹೊಯಿಗೆಗೆ ಸೇರಿತು. ಅಮ್ಮನೂ ಸೇರಿ, ನಮ್ಮೆಲ್ಲರ ಜೀವ ಬಾಯಿಗೆ ಬಂದಿತ್ತು. ಸುಮಾರು ಕಷ್ಟ ಪಟ್ಟ ನಮ್ಮ ಅಮ್ಮನಿಗೆ ಗಾರಿಗೆ ಕಳೆದುಕೊಳ್ಳಲು ಇಷ್ಟವಿರಲಿಲ್ಲ, ನಮಗಂತೂ ಅದು ಮುಂದಿನ ಹದಿನೈದು ದಿನಗಳ ಸ್ವರ್ಗಕ್ಕೆ ರಹದಾರಿ ಪತ್ರವಿದ್ದಂತಿತ್ತು. ಒಬ್ಬರು ಬ್ಯಾಟರಿ ಹಿಡಿದರು, ಎಲ್ಲರೂ ಅವರವರ ಹೆಗಲ ಮೇಲಿದ್ದ ಟವೆಲಿನಲ್ಲಿ ಹೊಯಿಗೆ ಅಂಟಿದ ಗಾರಿಗೆ ಗೋರಿದರು. ಹೊಯಿಗೆ ಮಳೆ ಬಂದು ಹೋಗಿ, ಒಣಗಿ ಶುದ್ಧವಿತ್ತು. ಅಂಟಿದ ಹೊಯಿಗೆ, ಬಹಳ ಸುಲಭದಲ್ಲಿ ಹೋಗುವಂತಿತತ್ತು. ಮನೆಗೆ ತಂದು, ಹೊಯಿಗೆ ಎಲ್ಲಾ ಗಾಳಿಸಿ, ಊದಿಸಿ, ಅಂತೂ ಗಾರಿಗೆಯನ್ನು ಸಂಫೂರ್ಣವಾಗಿ ಉಳಿಸಿದೆವು, ಹದಿನೈದು ದಿನ ಇಟ್ಟುಕೊಂಡು ತಿಂದೆವು, ಬಾಯಿಗೆ ಹೊಯಿಗೆ ಬರಲೇ ಇಲ್ಲ ಎಂಬುದು ಒಂದು ಪವಾಡವೇ. ಅಲ್ಲಿಗೆ ಈ ರಂಗಪೂಜೆ ನನಗೆ ಸಾರ್ಥಕವಾಗಿತ್ತು, ಇಡೀ ಜೀವಮಾನಕ್ಕೆ ಈ “ಗಾರಿಗೆ” ಎಂಬುದು ಅತೀ ಆಕರ್ಷಕ ತಿಂಡಿಯಾಗಿ ಉಳಿದು ಹೋಗಿತ್ತು. ಆದರೆ ಆ ಬಾರಿ ತಿಂದ ಗಾರಿಗೆಯಷ್ಟು ರುಚಿ ಮತ್ತೆ ಬದುಕಲ್ಲಿ ಸಿಗಲೇ ಇಲ್ಲ ಎಂದೇ ಹೇಳಬಹುದು.

 

ಈಗ ಸೋಣೆ ಆರತಿಗೆ ಬರೋಣ. ಸೋಣೆ ಆರತಿ ಮಾಡಿಸುವ  ಪೂಜೆಯ ಹಕ್ಕು ಸುಮಾರು ನಾಲ್ಕು ಐದು ಮನೆಯವರಿಗಿದ್ದು, ಅದು ಸರದಿಯಂತೆ ವರ್ಷಕ್ಕೊಮ್ಮೆ ಬದಲಾಗುತ್ತಿತ್ತು. ಆದರೆ ನನ್ನ ನೆನಪಲ್ಲಿ, ಅಂದಿನ ದಿನಗಳಲ್ಲಿ ಪೂಜೆ ಮಾಡುವವರು ಒಂದೋ ಸುಬ್ರಾಯ ಐತಾಳರು ಇಲ್ಲಾ ನಾರಾಯಣ ಐತಾಳರು ಇರುತ್ತಿದ್ದರು. ತಮ್ಮಯ್ಯ ಐತಾಳರು, ಹಾಗೂ ದೇವಸ್ಥಾನಕ್ಕೆ ತಾಗಿಕೊಂಡು ವಾಸ ಐತಾಳರು ಕೆಲವೇ ಬಾರಿ ಪೂಜೆ ಮಾಡಿದ್ದನ್ನು ನೋಡಿದ ನೆನಪಿದೆ ಅಷ್ಟೇ.


ಸೋಣೆ ಆರತಿ - ಸಂಧಿ ಒಂದು

 

ಸೋಣೆ ಆರತಿಯ ಮಹಾ ಮಂಗಳಾರತಿ, ಕತ್ತಲಾಗುವಾಗ ನಡೆಯುವುದು, ಸುಮಾರು ಸಾಯಂಕಾಲ ಆರು ಮೂವತ್ತಕ್ಕೆ. ಎಲ್ಲಾ ಮುಗಿಸಿ, ಮನೆಗೆ ಬರುವಾಗ ಸುಮಾರು ಏಳು ಕಾಲು ಗಂಟೆ ಆಗುತ್ತಿತ್ತು. ಆದರೆ, ನಾವು ಮಾತ್ರ ಸೋಣೆ ಆರತಿಗೆ ಆದಷ್ಟು ಬೇಗ ಹೋಗುತ್ತಿದ್ದೆವು. ಶಾಲೆ ಮುಗಿಸಿ, ಮನೆಗೆ ಬಂದು ಹಾಲು ಕುಡಿದ ಶಾಸ್ತ್ರ ಮಾಡಿ, ಈಶ್ವರ ಮಠಕ್ಕೆ ಓಡಿ ಸುಮಾರು ಐದೂವರೆಯ ಹಾಗೆ ಹಾಜರು. ಪೂಜೆಯವರು ಒಂದಷ್ಟು ನೀರಲ್ಲಿ ಕಲಸಿದ ಇಲ್ಲಾ ನೆನಸಿ ಗಟ್ಟಿಯಾಗಿ ಅರೆದ ಅಕ್ಕಿ ಹಿಟ್ಟು, ಬತ್ತಿಗೆ ಎಣ್ಣೆ ಹಾಗೂ ಹಳೆಯ ವೇಷ್ಠಿಯೊಂದಿಗೆ ಹಾಜರು. ಅವರೊಂದಿಗೆ ಒಬ್ಬ ಅವರೇ ಆರಿಸಿಕೊಂಡ, ಕೇರಿಯ ಹತ್ತಿರದ ಮನೆಯ ಹುಡುಗನೇ ತೈನಾತಿ,    ಮಕ್ಕಳಿಗೆಲ್ಲಾ ಹಿರೇಮಣಿ.

 

ಸೋಣೆ ಆರತಿಯ ಮುಖ್ಯ ಆಕರ್ಷಣೆಯಲ್ಲಿ ಒಂದು, ಮಕ್ಕಳಾದರೂ ಆರತಿಯನ್ನು ತಯಾರಿ ಮಾಡುವಲ್ಲಿ ನಮಗೆ ಸಿಗುವ ಅವಕಾಶ. ಹೆಚ್ಚಾಗಿ ಸುಮಾರು ನಾಲ್ಕನೇ ಕ್ಲಾಸು ದಾಟಿದವರಿಗೆ ಮಾತ್ರ ಈ ಅವಕಾಶ, ಸುಮಾರು ಹನ್ನೆರಡನೇ ಕ್ಲಾಸಿನವರ ತನಕ ಸ್ವಯಂಸೇವಕರು. ಹಾಗಾಗಿ, ದೊಡ್ಡ ಆರತಿಗಳು ದೊಡ್ಡವರಿಗೆ, ಸಣ್ಣ ಆರತಿಗಳು ಸಣ್ಣವರಿಗೆ.

 

ಆರತಿಯಲ್ಲಿ ಎರಡು ವಿಧ, ಹಿಟ್ಟಿನ ಬತ್ತಿಯ ಆರತಿ, ಹಾಗೂ ಸಾಮನ್ಯ  ಎಣ್ಣೆಯ ಬತ್ತಿಯ ಆರತಿ. ಹಿಟ್ಟಿನ ಆರತಿ ಸಾಮಾನ್ಯವಾಗಿ ಹತ್ತು. ಸೋಣೆ ತಿಂಗಳ ಕೊನೆಗೆ ಒಂದೇ ದಿನದಲ್ಲಿ ಎರೆಡೆರೆಡು ಹರಕೆಗಳು ನಡೆವ ಸಮಯದಲ್ಲಿ ಹೆಚ್ಚಿನ ಹಿಟ್ಟಿನ ಆರತಿಗಳು, ಅಟ್ಟದಿಂದ ಇಳಿದು, ಮೂರು-ನಾಲ್ಕು ಸೇರಿಕೊಳ್ಳುತ್ತಿದ್ದವು. ಈ ಹಿಟ್ಟಿನ ಆರತಿಯಲ್ಲಿ ಅತೀ ವೈಭವದ್ದು ಹತ್ತನೇ ಆರತಿ. ಹತ್ತರ ನಂತರ ಸೇರುವ ಹೆಚ್ಚುವರಿ ಆರತಿಗಳು ಹತ್ತನೇ ಆರತಿಯ ವೈಭವವನ್ನು ಮೀರಿದ್ದು ಅಪರೂಪವೇ.

 

ಹಿಟ್ಟಿನ ಆರತಿ ಮಾಡುವುದು ಬಹಳ ಕಲಾತ್ಮಕವಾದದ್ದು. ಪೂಜೆಯವರು ಮನೆಯಿಂದ ಅಂಟಾಗಿ ಸಿದ್ಧವಾಗಿರುವ ಅಕ್ಕಿ ಹಿಟ್ಟನ್ನು ತರುತ್ತಿದ್ದರು. ಎಲ್ಲಾ ಆರತಿಗೆ ತಂದ ಹಿಟ್ಟು ಸರಿ ಹೋಗುವಂತೆ, ಆರತಿಯ ದೊಡ್ಡತನಕ್ಕೆ ಸರಿಯಾಗಿ ಹಿಟ್ಟಿನ ಉಂಡೆಗಳನ್ನು ಮೊದಲು ಮಾಡಿಕೊಳ್ಳುತ್ತಿದ್ದರು. ಒಂದನೇ ಆರತಿಯಿಂದ ಶುರು ಮಾಡಿ, ಹಿಟ್ಟನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ಆರತಿಯ ಹಲಗೆಗೆ ಹಚ್ಚಿ ಮಕ್ಕಳಿಗೆ ಬತ್ತಿ ಮಾಡಲು ಮುಂದೂಡುತ್ತಿದ್ದರು. ಹಿರೇಮಣೆ ಯಾವ ಆರತಿಗೆ ಯಾವ ಮಾಣಿ ಬತ್ತಿ ಹಚ್ಚುವುದು ಎಂಬುದನ್ನು ಮೊದಲೇ ಖಚಿತ ಪಡಿಸಿರುವ ಕಾರಣ, ಆಯಾ ಸ್ವಯಂಸೇವಕ ಬತ್ತಿ ಹಚ್ಚಲು ತಯಾರಾಗುತ್ತಿದ್ದನು.

 

ಹಿಟ್ಟಿನ ಆರತಿಗೆ ಬತ್ತಿ, ಹಳೆಯ ವೇಷ್ಟಿಯಿಂದ ತಯಾರಾಗುತ್ತಿತ್ತು. ಅದು ಹಳೆಯದಾದರೂ, ತೊಳೆದು ಒಣಗಿಸಿಕೊಂಡು ಬಂದು ಶುದ್ಧವಾಗಿರುತ್ತಿತ್ತು. ಪುರೋಹಿತರು ಇಡೀ ವೇಷ್ಟಿಯ ತುಂಡನ್ನು ದೀಪದ ಎಣ್ಣೆಯಲ್ಲಿ ಅದ್ದಿ ಹಿಂಡಿದಾಗ, ಸುಮಾರು ಅಷ್ಟೂ ಎಣ್ಣೆ ಮತ್ತೆ ಪಾತ್ರಕ್ಕೇ ಸೇರುವುದು ಒಂದು ಇಂದ್ರಜಾಲದಂತೆ ಕಾಣಿಸುತ್ತಿತ್ತು. ಬಟ್ಟೆಯೋ, ದೀಪದ ಎಣ್ಣೆ ಸೇರಿಕೊಂಡು ತಿಳಿ ಹಸಿರು ಹಳದಿಯ ಬಣ್ಣದಲ್ಲಿ ಹೊಳೆದು ಕಂಗೊಳಿಸುತ್ತಿತ್ತು. ಈ ದೀಪದಲ್ಲಿ ಅದ್ದಿದ ಬಟ್ಟೆಯನ್ನು ಪುರೋಹಿತರು ಲೀಲಾಜಾಲದಲ್ಲಿ ಉದ್ದಕ್ಕೆ ಪರಪರನೆ ಹರಿದು ಕೊಡುತ್ತಿದ್ದರು. ಯಾವ ಯಾವ ಆರತಿಗೆ ಎಷ್ಟು ಉದ್ದದ ಎಷ್ಟು ಬಾಲಗಳು ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುವುದು. ಹಾಗಾಗಿ, ಬತ್ತಿ ಹಚ್ಚುವವನಿಗೆ ಹಿಟ್ಟು ಹಚ್ಚಿದ ಆರತಿ, ಹಾಗೂ ಎಣ್ಣೆಯಲ್ಲಿ ಅದ್ದಿ ಹಿಂಡಿದ ಬಟ್ಟೆಯ ಬಾಲಗಳು ಸಿಗುತ್ತಿದ್ದವು.  ಹಿಟ್ಟಿನ ಆರತಿಯಲ್ಲಿ ಹಿಟ್ಟಿನ ಎಷ್ಟು ತುಂಡುಗಳು ಹಚ್ಚಲ್ಪಡುತ್ತಿದ್ದವೂ ಅಷ್ಟು ಬಟ್ಟೆಯ ತುಂಡುಗಳನ್ನು ನಾವು ಬಟ್ಟೆಯ ಬಾಲಗಳನ್ನು ಕೈಯಲ್ಲೇ ಹಿಸಿದು ತುಂಡು ಮಾಡಿಕೊಳ್ಳುತ್ತಿದ್ದೆವು, ತೀರಾ ಕಿರಿಯರಿಗೆ ಹಿರಏಮಣಿಯು ತುಂಡು ಮಾಡಿ ಕೊಡುತ್ತಿದ್ದನು. ಪ್ರತೀ ತುಂಡನ್ನು ಗುಲಾಬಿ ಹೂವಿನಂತೆ ಮಡಚಿ, ಅಂದರೆ ಕೆಳ ಭಾಗ ಸಾಂದ್ರವಾಗಿ, ಮೇಲ್ಭಾಗ ಅರಳಿದ ಹೂವಿನಂತೆ ಅರಳಿಸಿ, ಕೊನೆಗೆ ಹಿಟ್ಟಿನಲ್ಲಿ ಹುಗಿದು ನಿಲ್ಲಿಸುತ್ತಿದ್ದೆವು. ಆರತಿ ಸಿದ್ಧವಾದ ಮೇಲೆ, ಆರತಿಯನ್ನು ಕೈಯಲ್ಲಿ ಆಡಿಸಿ ಬತ್ತಿ ಬೀಳುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದೆವು, ಇಲ್ಲವಾದರೆ ಹಿರೇಮಣಿ ಯಾ ಪುರೋಹಿತರಿಂದ ಬೈಗಳ ಖಂಡಿತಾ.

 

ಪುರೋಹಿತರು ನಮಗೆ ಕೊಡುವ ಬಟ್ಟೆಯ ತುಂಡು ಸಾಕಷ್ಟಿದ್ದರೂ, ನಮಗೆನೋ ಅವರದ್ದೊಂದು ಪಿಟ್ಟಾಸಿ ಅಂತನಿಸುವುದು. ಕಾರಣ, ನಮಗೆ ನಾವು ಮಾಡಿದ ಆರತಿಯು ವೈಭವಪೂರಿತವಾಗಿ, ಉಜ್ವಲವಾಗಿ ಉರಿಯಬೇಕು, ಹಾಗಾಗಬೇಕಾದರೆ ಬಟ್ಟೆ ಜಾಸ್ತಿ ಸಿಕ್ಕಬೇಕು. ಪುರೋಹಿತರ ಸಮಸ್ಯೆ, ಬತ್ತಿ ಆರತಿ ಮಾಡುವಾಗ ಬೀಳಬಾರದು ಮತ್ತು ಅಳತೆ ಮೀರಿ ಉರಿದು ಬೆಂಕಿಯ ಅವಘಡ ಆಗಬಾರದು.  ಈ ಮಿತಿಯಲ್ಲಿ ನಾವು ಕೆಲವೊಂದು ಆವಿಷ್ಕಾರ ಮಾಡುತ್ತಿದ್ದೆವು. ಪುರೋಹಿತರು ಕೊಟ್ಟ ಎಣ್ಣೆಯ ಬಟ್ಟೆಯ ತುಂಡುಗಳಿಂದ ಆದಷ್ಟು ತುಂಡು ನೂಲುಗಳನ್ನು ತೆಗೆದಿಟ್ಟುಕೊಂಡು, ಆರತಿ ಸಿದ್ಧವಾದ ಮೇಲೆ ಈ ನೂಲುಗಳನ್ನು ಹೂವಿನಂತೆ ಅರಳಿದ ಬತ್ತಿಗಳ ಮೇಲೆ ಹರಡಿ ಒಂದು ಚಪ್ಪರದಂತೆ ಸಿದ್ಧ ಮಾಡುತ್ತಿದ್ದೆವು. ಈ ಚಪ್ಪರವು ಆರತಿ ಮಾಡುವಾಗ ಬೀಳದಂತಿದೆ ಎಂಬುದನ್ನು ಹಿರೇಮಣಿ ಪರಿಶೀಲಿಸುತ್ತಿದ್ದನು. ಅಕಸ್ಮಾತ್‌, ಆರತಿ ಆಗುವಾಗ ಈ ಚಪ್ಪರದ ವ್ಯವಸ್ಥೆ ಧೊಪ್ಪನೆ ಬಿದ್ದರೆ, ಮರುದಿನ ವಿಚಾರಣೆ ಇರುತ್ತಿತ್ತು, ಮುಂದಿನ ಆರತಿ ತಯಾರಿಗೆ ಅಂತಹವನ ಉತ್ಸಾಹಕ್ಕೆ ಕಡಿವಾಣ ಇರುತ್ತಿತ್ತು, ಆರತಿಯ ಸಂಖ್ಯೆಯಲ್ಲಿ ಅವನಿಗೊಂದು ಹಿಂಬಡ್ತಿಯ ಶಿಕ್ಷೆಯೂ ಇರುತ್ತಿತ್ತು. ಒಟ್ಟಿನಲ್ಲಿ ಆರತಿ ಸಿದ್ಧವಾದಾಗ, ನೆಟ್ಟಿ ಮಾಡಿದ ಭತ್ತದ ಗದ್ದೆಯಂತೆ ಕಾಣಿಸಿದರೆ, ಮೇಲೆ ಹಾಕಿದ ಹೆಚ್ಚಿನ ದಾರಗಳು ಭತ್ತದ ಗದ್ದೆಯನ್ನು ಜೇಡರ ಬಲೆಗಳು ಆವರಿಸಿಕೊಂಡಂತೆ ಕಾಣಿಸುತ್ತಿತು.

 

ಪ್ರತೀ ದಿನವೂ ಎಲ್ಲಾ ಸ್ವಯಂ ಸೇವಕರು ಬಂದರೆ, ಕಿರಿಯರಿಗೆ ಹಿರಿಯ ಅವಕಾಶ ಸಿಗುವುದೇ ಇಲ್ಲ, ಆಗ ಕಿರಿಯರಾದವರು, ನಮಗೆ ಮುಂಭಡ್ತಿಯ ಅವಕಾಶ ಕೊಡಿ ಎಂದು ಪ್ರತಿದಿನವೂ ಗೋಗರೆಯಬೇಕಾಗುತ್ತಿತ್ತು. ಕುತ್ತಿಗೆ ಉದ್ದ ಮಾಡಿ ಅಳುವ ಮರಿಗೆ ಹೆಚ್ಚು ಆಹಾರ ತಾಯಿ ಹಕ್ಕಿ ಕೊಟ್ಟಂತೆ, ಇಲ್ಲಿ ಹೆಚ್ಚು ಅತ್ತವನಿಗೆ ಗೆಲುವಾಗುತ್ತಿತ್ತು. “ಎಂತಾ ಮಣಿ, ನಿನ್‌ ರಗಳಿ, ಸರಿ ಇವತ್‌ ಹತ್ತನೇ ಆರತಿ ನಿಂದೇ”  ಎಂದು ಅವಕಾಶ ಪಡೆದ ಕಿರಿಯವನು ಕೂತಲ್ಲೇ ಅಂತರಿಕ್ಷದಲ್ಲಿ ತೇಲುತ್ತಿದ್ದನು.

 

ಹಿಟ್ಟಿನ ಆರತಿಯ ಅವಕಾಶ ಸಿಗದವರು ತೀರಾ ನಿರಾಶರಾಗಬೇಕಾಗಿರಲ್ಲಿಲ್ಲ. ಸಾದಾ ಎಣ್ಣೆ ಬತ್ತಿಯ ಆರತಿಗಳೂ ಆಕರ್ಷಕವಾಗಿರುತ್ತಿದ್ದವು. ಅದರಲ್ಲಿ, ಒಂದು ಆರತಿಗಂತೂ ಬತ್ತಿಯನ್ನು ಸಣ್ಣ ಸಣ್ಣ ಹೊಂಡದಲ್ಲಿ ಕಡ್ಡಿಯ ಮೂಲಕ ಹುಗಿದು ಕೂಡಿಸುವುದು ಮುದ ಕೊಡುತ್ತಿತ್ತು. ಮೂರು ರಥದ ಆರತಿಗಳಿದ್ದವು, ಅವಕ್ಕೆ ಬತ್ತಿ ಹಚ್ಚುವಾಗ, ಆ ಆರತಿಗಳ ಸೌಂದರ್ಯ ಸುಖ ಕೊಡುತ್ತಿತ್ತು. ಎಣ್ಣೆ ಬತ್ತಿಯ ಆರತಿಗಳು ಸಮಾರು ಹತ್ತು ಇರುತ್ತಿದ್ದವು.

 

ಅಪರೂಪಕ್ಕೆ ಆರತಿಯನ್ನು ಸಿದ್ಧ ಪಡಿಸಲು ಬೇಕಾದ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ, ಒಬ್ಬೊಬ್ಬರಿಗೆ ಎರಡು ಮೂರು ಆರತಿ ಸಿದ್ಧ ಪಡಿಸುವ ಭಾಗ್ಯ. ಇಲ್ಲಾ, ಎಲ್ಲಾ ಮಕ್ಕಳಿಗೆ ಹೆಚ್ಚು ಆಕರ್ಷಕವಾದ ಹಿಟ್ಟಿನ ಆರತಿಗಳನ್ನು ಬಿಟ್ಟು, ಪುರೋಹಿತರು ಕಡಿಮೆ ಆಕರ್ಷಣೆಯ ಸಾದಾ ಎಣ್ಣೆ ಬತ್ತಿಯ ಆರತಿಗಳನ್ನು ತಾವೇ ಸಿದ್ಧ ಪಡಿಸಿಕೊಳ್ಳುತ್ತಿದ್ದರು.

 

ಎಲ್ಲಾ ಆರತಿಗಳು ಸಿದ್ಧವಾದ ಮೇಲೆ, ಅವುಗಳನ್ನು ಗರ್ಭಗುಡಿಯ ಎದುರಿನ ಪ್ರಾಂಗಣದಲ್ಲಿ ಸರದಿಯಲ್ಲಿ ಜೋಡಿಸುವಲ್ಲಿ ನಾವೆಲ್ಲಾ ಹಿರೇಮಣಿಗೆ ಸಹಕಾರ ಕೊಡುವಲ್ಲಿ, ಸೋಣೆ ಆರತಿಯ ಮೊದಲ ಸಂಧಿ ಮುಗಿಯುತ್ತಿತ್ತು. ಎರಡನೇ ಸಂಧಿ ಪ್ರಾರಂಭವಾಗುವ ಮೊದಲು ನಮಗೊಂದು ಹದಿನೈದು ಇಪ್ಪತ್ತು ನಿಮಿಷ ಆಡುವ ಅವಕಾಶ. ದೇವಸ್ಥಾನದ ಮುಂದೆ, ಹೆಚ್ಚಾಗಿ ಕುಂಟುಬಿಲ್ಲೆ, ಗೋಲಿಯಾಟ, ಪಕ್ಕದ ತೊರೆಗೆ ತಾಗಿಕೊಂಡ ಮಣ್ಣಿನಲ್ಲಿ ಪಪಾಯ ಎಲೆಯ ದಂಟುಗಳನ್ನುಪಯೋಗಿಸಿ ನೀರಾವರಿಯ ಆಟ, ಕಬಡ್ಡಿ, ಖೋ ಖೋ, ಬೆನ್ನಿಗೆ ಹೊಡೆವ ಚೆಂಡಾಟ, ಲಗೋರಿ ಇತ್ಯಾದಿ ವಯಸ್ಸಿಗೆ ಹೊಂದಿಕೊಂಡು ಸ್ನೇಹ ವಲಯವನ್ನು ಹೊಂದಿಕೊಂಡು ಬೇರೆಬೇರೆಯಾಗಿ ಆಡುತ್ತಿದ್ದೆವು.

 

ಸೋಣೆ ಆರತಿ - ಸಂಧಿ ಎರಡು

 

ಎರಡನೇ ಸಂಧಿಯೇ, ಸೋಣೆ ಆರತಿಯ ಮಂಗಳಾರತಿಯ ವೈಭವದ್ದು. ಆರತಿಗಳು ಸಿದ್ಧವಾದ ಮೇಲೆ, ಪುರೋಹಿತರು ಛಕ್ಕನೇ ಮನೆಗೆ ಹೋಗಿ, ಬಾವಿಕಟ್ಟೆಯಲ್ಲಿ ಎರಡು ಮೂರು ಕೊಡಪಾನ ನೀರನ್ನು ಹೊಯ್ದುಕೊಂಡು ಮಡಿಯಲ್ಲಿ ಬಂದು ಗರ್ಭಗುಡಿ ಸೇರುತ್ತಿದ್ದರು. ಹಿರೇಮಣಿ ಪುರೋಹಿತರಿಗೆ  ಸಿದ್ಧ ಪಡಿಸಿದ ಆರತಿಗೆ ಬೆಂಕಿ ಹಚ್ಚಿ ಒಂದೊಂದನ್ನೇ ಕೊಡಲು ಎಡ ಬದಿಯಲ್ಲಿ ಕುಳಿತರೆ, ಎರಡನೇ ಸ್ಥಾನವು ಬಲಬದಿಯಲ್ಲಿ, ಆರತಿ ಸೇವೆಯಾದ ನಂತರ ಪುರೋಹಿತರು ದೂಡುವ, ಇನ್ನೂ ಬೆಂಕಿ ಇರುವ ಆರತಿಯನ್ನು ಹೊರಗೆ ಎಳೆದುಕೊಂಡು, ಮೂಲೆಯಲ್ಲಿ ಆರತಿಯನ್ನು ಶುದ್ಧಗೊಳಿಸುವವನಿಗೆ ಸರಿಸಿ ಕೊಡುವ ಬಲಬದಿಯ ಬಂಟನದ್ದು.  ಮೂರನೆಯ ಖಾತೆ, ಆರತಿ ಶುದ್ಧಗೊಳಿಸುವವನದ್ದು, ಅವನಿಗೆ ಸಿಕ್ಕ ಕೆಲಸವೂ ಬಹು ಹೆಮ್ಮೆಯದು. ಅವನು ಆರತಿ ಶುದ್ಧಗೊಳಿಸಲು ಉಪಯೋಗಿಸುವುದು, ಮೊದಲನೇ ಸುತ್ತಿನಲ್ಲಿ ಬರುವ, ಮೂರು ನಾಲ್ಕು ಬತ್ತಿ ಇರುವ ಚಪ್ಪಟೆ ಇರುವ ಹಿತ್ತಾಳೆ ಆರತಿಯದ್ದು. ಮೊದಲು ಮೊದಲು ಬರುವ ಆರತಿಗಳಲ್ಲಿ ಒಂದೆರೆಡು ಬತ್ತಿಗಳು ಮಾತ್ರ ಇದ್ದು, ಅದನ್ನು ಕೈಯಲ್ಲೇ ತೆಗೆದು ಶುದ್ಧಗೊಳಿಸುವುದು. ಆರತಿಯನ್ನು ಶುದ್ಧಗೊಳಿಸುವಾಗ, ಸುಡುವ ಎಣ್ಣೆ, ಸುಟ್ಟ ಎಣ್ಣೆ ಬಟ್ಟೆಯ ಕರಕಲು, ಹಲಗೆಗೆ ಅಂಟಿ ಅರ್ಧ ಬೆಂದ ಹಸಿ ಹಿಟ್ಟು, ಹಾಗೂ ಆರುವ ಬೆಂಕಿಯ ಹೊಗೆ ಇವೆಲ್ಲ ಸೇರಿ ಸಿಗುವ ಸಂಯುಕ್ತ ಸುವಾಸನೆಯ ಸುಖ ಗರ್ಭಗುಡಿಯ ಗೋಡೆಗೆ ಮುಖ ಹಾಕಿಕೊಂಡವನಿಗೆ ಶುದ್ಧಗೊಳಿಸುವವನಿಗೆ ಸಿಕ್ಕಷ್ಟು ಮತ್ತಾರಿಗೂ ಇಲ್ಲ. ಹೆಚ್ಚಾಗಿ ಈ ಕೆಲಸವು ಮುಡಿಪಿನಲ್ಲಿ ಇರುವ ಕಿರಿಯನಿಗೇ ಸಿಕ್ಕು, ಮುಂದಿನ ದಿನಗಳಲ್ಲಿ ಹಿರೇಮಣಿ ಆಗುವಷ್ಟು ಸ್ಫೂರ್ತಿ ಈ ಸಂಯುಕ್ತ ಸುವಾಸನೆಯಲ್ಲಿ ಅಡಗಿರುತ್ತದೆ.

 

ಆರತಿ ಆಗುವಾಗ, ಸಿಗುವ ಸ್ವಯಂಸೇವೆಯಲ್ಲಿ ನಾಲ್ಕನೇ ಸ್ಥಾನ, ಸರದಿಯಲ್ಲಿ ಏರ್ಪಡಿಸಿದ ಆರತಿಗಳನ್ನು ಹಿರೇಮಣಿಗೆ ತಂದುಕೊಡುವವನದ್ದು. ಈವರೆಗೆ ಅವಕಾಶ ಸಿಗದೇ ಇರುವ ಕಿರಿಯರು ಅವನಿಗೆ ತೈನಾತಿಯಾಗಿ ಆರತಿಯನ್ನು ದೂಡಿಕೊಡುವಲ್ಲಿ ಸಹಕರಿಸಿ ಧನ್ಯರಾದರೆ, ಇತ್ತ ಐದನೇ ಸ್ಥಾನ, ಹಿರೇಮಣಿಯ ಪಕ್ಕದಲ್ಲಿರುವವನಿಗೆ. ಅವನು ರಥದ ಆರತಿಯಂತಹ ದೊಡ್ಡ ಆರತಿಗಳ ಬತ್ತಿಗಳಿಗೆ ಬೆಂಕಿ ಹಚ್ಚಿಸುವಲ್ಲಿ ಹಿರೇಮಣಿಗೆ ಸಹಕರಿಸುವುದಲ್ಲದೇ, ಹಿಂದೆ ಆರತಿ ದೂಡಿ ಕೊಡುವವನ ಇಲ್ಲಾ ಅವನ ತೈನಾತಿಗಳ ಮೇಲೆ ಹಿರೇಮಣಿಯ ಪರವಾಗಿ ಸವಾರಿ ಮಾಡುವ ಯಜಮಾನಿಕೆಗೂ ಅವಕಾಶ ಇರುತ್ತದೆ. ಆರನೇ ಸ್ಥಾನದಲ್ಲಿ, ಬಲಬದಿಯಲ್ಲಿ ಆರತಿ ಹೊರಗೆ ಎಳೆಯುವನ ಪಕ್ಕ ಕುಳಿತವನಿಗೆ, ಇವನಿಗೇ ಏನೂ ಕೆಲಸವಿಲ್ಲ, ಮುಂದೊಂದು ದಿನ ಆರತಿ ಏಳೆಯುವ ಮುಂಭಡ್ತಿಯ ಹಗಲು ಕನಸು ಕಾಣುವುದು  ಹಾಗೂ ಹತ್ತಿರದಿಂದ ಗರ್ಭಗುಡಿಯಲ್ಲಿನ ಆರತಿಯ ವೈಭವವನ್ನು ನೋಡಿದ ತೃಪ್ತಿ ಅಷ್ಟೇ. ಕೆಲವೊಮ್ಮೆ ಈ ತೃಪ್ತಿ ಸಾಕಾಗದೇ, ಆರತಿ ಶುದ್ಧ ಗೊಳಿಸುವನ ಹತ್ತಿರ ಅರ್ಧ ಆರತಿ ನಾನೇ ಶುದ್ಧಗೊಳಿಸುವೆ ಎಂಬ ಕರಾರು ಮಾಡಿಕೊಂಡು ಜಾಗ ಅದಲುಬದಲು ಮಾಡಿಕೊಳ್ಳಬೇಕಷ್ಟೇ. ಮೊದಲು ಈ ಕರಾರಿಗೆ ಒಪ್ಪಿದ ಆರತಿಯನ್ನು ಶುದ್ಧ ಮಾಡುವವನು ನಂತರ ಕೈ ಕೊಡುವ ಸಾಧ್ಯತೆಯೂ ಇದೆ, ಇಲ್ಲಾ “ಇನ್ನೊಂದು, ಇನ್ನೊಂದು” ಅಂದು ಹೇಳುತ್ತಾ, ತನ್ನ ಸೇವಾ ಭಾಗವನ್ನು ಹೆಚ್ಚಿಸುವ ಬುದ್ಧಿವಂತಿಕೆಯನ್ನೂ ಕಾಣಬಹುದು. ಇತ್ತ, ಇವನು, “ಎಂತಾ ಮಾರಾಯ ನೀನು” ಎಂದು ನಿರಾಶೆಯನ್ನು ವ್ಯಕ್ತ ಪಡಿಸಿ, ದೇವರಿಗೆ ಮುಗಿದ ಕೈಗಳನ್ನು ಇನ್ನಷ್ಟು ಬಲಪಡಿಸಿ, ಸೋಲನ್ನು ಮರೆಯಲೆತ್ನಿಸುವನು.  

 

ಬತ್ತಿ ಹಾಕಲು ಸಹಕರಿಸಿದ ಎಲ್ಲಾ ಮಕ್ಕಳು ಗರ್ಭಗುಡಿಯ ಪ್ರಾಂಗಣದಲ್ಲಿ ಎಡಬಲದಲ್ಲಿ ಸಾಲಾಗಿ ಕುಳಿತುಕೊಳ್ಳುವರು. ಸ್ವಯಂಸೇವಕರು ಜಾಸ್ತಿಯಾದಾಗ, ಕಿರಿಯರು, ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವರು. ಒಬ್ಬ ಹಿರಿಯನಿಗೆ ಬಲಬದಿಯಲ್ಲಿ ಹಿಂದಿನಿಂದ ನಿಂತು ಜಾಗಟೆ ಬಾರಿಸುವ ಸೌಭಾಗ್ಯ, ಈ ಸೌಭಾಗ್ಯವನ್ನು ಎರಡು ಮೂರು ಜನ ಹಂಚಿಕೊಳ್ಳುವುದೂ ಉಂಟು. ಈ ಹಂಚಾಟದಲ್ಲಿ ಜಗಳವಾಗಿ, ಇಬ್ಬರು ಹಿರಿಯ ಹುಡುಗರಲ್ಲಿ ಜಾಗತಿಕ ಯುದ್ಧ ಆರಂಭವಾಗಿ, ಹೊಡೆದಾಡಿಕೊಂಡು ಜೀವಮಾನದ ತನಕ ಮಾತನಾಡದೇ ಇರದಷ್ಟು ದೋಸ್ತಿ ಮಾಯವಾದ್ದೂ ಉಂಟು.  ಮಹಾಮಂಗಳಾರತಿಯ ಸಂಯುಕ್ತ ಸ್ವರಗಳು ಆವರಿಸುವಾಗ, ಈ ಜಗಳಗಳು ಪುರೋಹಿತರಿಗೂ ಹೊರಗೆ ನರೆತ ಹಿರಿಯರಿಗೂ ಕಾಣಿಸದೇ, ಪ್ರಾಂಗಣದಲ್ಲಿ ನೆರೆತ ಮಕ್ಕಳಿಗೆ ಮಾತ್ರ ಖಾಸಗಿಯಾಗಿ ಉಳಿದುಹೋಗುವವು.

 

ಆರತಿ ಮಾಡುವಾಗ, ಗರ್ಭಗುಡಿಯ ಪ್ರಾಂಗಣದಲ್ಲಿ ಅವಕಾಶ ಸಿಗದವರಿಗೆ, ಪ್ರಾಂಗಣದ ಹೊರಗೆ, ಎಡಬಲಗಳಲ್ಲಿ ಗಂಟೆಗಳನ್ನು ಹೊಡೆಯುವ ಅವಕಾಶ ಇರುತ್ತದೆ, ಕನಿಷ್ಠ ನಾಲ್ಕು ಗಂಟೆಗಳು ಇದ್ದೇ ಇರುತ್ತವೆ. ಪೂಜೆಯ ಮಹಾಮಂಗಳಾರತಿ ಸುಮಾರು ಹದಿನೈದು ನಿಮಿಷ ನಡೆಯುವುದರಿಂದ, ಗಂಟೆ ಬಾರಿಸುವಲ್ಲಿ ಕೈ ಬತ್ತಿ ಹೋಗುವ ಕಾರಣ, ಈ ಸ್ವಯಂಸೇವೆಯನ್ನು ಇನ್ನೊಬ್ಬನೊಂದಿಂಗೆ ಹಂಚಿಕೊಳ್ಳುವುದು ಸುಲಭ ಮಾರ್ಗವಾಗಿರುತ್ತದೆ.

 

ಸೋಣೆ ಆರತಿ - ಸಂಧಿ ಮೂರು

 

ಸೋಣೆ ಆರತಿಯ ಮೂರನೇ ಸಂಧಿಯೇ ಪ್ರಸಾದ ಮತ್ತು ಪನ್ಯಾರದ ಹಂಚಿಕೆ. ಸ್ವಯಂಸೇವೆಯಲ್ಲಿ ತೊಡಗಿದವನಿಗೆ ಈಗಾಗಲೇ ಎರಡು ಸಂಧಿಗಳಲ್ಲಿ ಬೇರೆ ಬೇರೆ ಧನ್ಯತೆಗಳು ಸಿಕ್ಕು ಒಂದು ರೀತಿಯ ಸಂತೃಪ್ತಿ ಈಗಾಗಲೇ ಮುಖದಲ್ಲಿ ರಾರಾಜಿಸುತ್ತಿರುತ್ತದೆ. ಹಿರೇಮಣಿಯಾದವನು ಆರತಿಯನ್ನು ಎಲ್ಲರಿಗೂ ತೋರಿಸಿ, ಹೆಬ್ಬಾಗಿಲನ್ನು ದಾಟಿ, ನೆರೆದಿರುವ ಇತರ ಜಾತಿಯವರಿಗೂ ತೋರಿಸಿ ಒಳಬರುವನು. (ಇಂದು ಅನಿಷ್ಟವಾಗಿ ಕಾಣುವ ಅಸ್ಪರ್ಶ್ಯತೆ ಅಂದಿನ ದಿನಗಳಲ್ಲಿ ಸಮಾಜವು ಒಪ್ಪಿಕೊಂಡ ಹೊಂದಾಣಿಕೆಯಾಗಿತ್ತು.)

 

ತೀರ್ಥ ಪ್ರಸಾದಗಳನ್ನು ಪಡೆಯಲು ದೊಡ್ಡವರು ಪುರೋಹಿತರ ಸುತ್ತ ನೆರೆದರೆ, ಸ್ವಯಂಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಅದು ಗೌಣವಾದರೂ, ಶುದ್ಧ ತೀರ್ಥ ಗಂಧಗಳ ಪರಿಮಳ ಮತ್ತು ರುಚಿ ಕರೆ ಮಾಡಿ ಕರೆಸಿಕೊಂಡೇ ಬಿಡುತ್ತವೆ. ಪುರೋಹಿತರು ಕೊಟ್ಟ ಹೂವು ಬಲಕಿವಿಗೆ ಸೇರಿಕೊಂಡು,  ಗಂಧ ಹಣೆಗೇರಿ ಮುಖದಲ್ಲಿ ಹೊಸ ಝಲಕ್‌ ಮೂಡುತ್ತದೆ. ಎಲ್ಲರೂ ಶಾಂತವಾಗಿ  ಎಡ ಬದಿಯ ಚಾವಡಿಯಲ್ಲಿ ಸಾಲಾಗಿ ಕುಳಿತು ಪನ್ಯಾರಕ್ಕಾಗಿ ಕಾಯುತ್ತ, ಅಂದಿನ ದಿನದ ಅನುಭವ ವೈಭವಗಳ ಸುತ್ತ ಮಾತುಗಳು ತುಂಬಿರುತ್ತದೆ. ಇತ್ತ  ಬಲ ಬದಿಯ ಚಾವಡಿಯಲ್ಲಿ ಹೆಂಗಸರು ಕುಳಿತಿದ್ದರೆ, ಗಣ್ಯರಾದವರು, ಸೋಣೆ ಆರತಿ ಮಾಡಿಸುವ ಮನೆಯವರೆಲ್ಲ ಎಡಬಲ ಬದಿಗಳಲ್ಲಿ ಕೈ ಮುಗಿದು ನಿಂತಿರುತ್ತಾರೆ.

 

ಪನ್ಯಾರವನ್ನು ಹಂಚುವುದೂ ಒಂದು ಕಲೆ, ಇದು ಪುರೋಹಿತರಿಗೆ ಪೂರ್ಣ ಕರಗತವಾದದ್ದು. ಅವರು ಸ್ವಲ್ಪ ಪನ್ಯಾರವನ್ನು ಮನೆಯವರಿಗೆ ಪ್ರಸಾದ ರೂಪದಲ್ಲಿ  ಕೊಡಲು ಮೊದಲೇ ತೆಗೆದಿಟ್ಟುಕೊಂಡು, ಶುದ್ಧೀಕರಿಸಿದ ಸಣ್ಣ ಹೆಡಿಗೆ ಯಾ ಬುಟ್ಟಿಯ ಮೇಲೆ ಬಾಳೆ ಎಲೆಯಿಟ್ಟು ತುಂಬಿ ಹರಡಿಸಿ,ಇಲ್ಲಾ ಹಿತ್ತಾಳೆಯ ದೊಡ್ಡ ಪಾತ್ರದಲ್ಲಿ ತುಂಬಿಸಿ ತರುತ್ತಾರೆ. ಮೊದಲು ನಿಂತ ಗಣ್ಯರಿಗೆ, ಮನೆಯವರಿಗೆ ಹಂಚಿ, ನಂತರ ಎಡ ಬದಿಯ ಜಗಲಿಯಲ್ಲಿ ಕುಳಿತ ಮಕ್ಕಳಿಗೆ ಹಂಚಿ, ನಂತರ ಬಲಬದಿಯಲ್ಲಿ ಕುಳಿತಿದ್ದ ಹೆಂಗಸರಿಗೆ ಹಂಚಿ, ಕೊನೆಯಲ್ಲಿ ಹೆಬ್ಬಾಗಿಲು ದಾಟಿ, ನೆರೆದಿರುವ ಇತರ ಜಾತಿಯವರಿಗೆ ಹಂಚುವರು. ಇವರು ಹೆಚ್ಚಾಗಿ, ಮಂಗಳಾರತಿಯ ಶಬ್ದ ಕೇಳಿದ  ಮೇಲೆ, ಹತ್ತಿರದ ಮನೆಗಳಿಂದ ಹೊರಟು ಬರುವರು.  ದೇವಸ್ಥಾನದ ಮುಂದಿನ ಭಾಗದಲ್ಲಿರು ತೋಟಗಳಲ್ಲಿ ತುಂಬಿಕೊಂಡಿರುವ ಕಾಟುಕೆಸುವಿನ ಎಲೆಯನ್ನು ಕೊಯ್ದು, ಸಾಲಾಗಿ ಅದನ್ನು ನೆಲಕ್ಕಿಟ್ಟು ಅದರ ಹಿಂದೆ ನಿಲ್ಲುವರು. ಪುರೋಹಿತರು ಎಲ್ಲಾ ಎಲೆಗಳಿಗೆ ಪನ್ಯಾರ ತುಂಬಿ ಒಳಗೆ ಬರುವರು. ಪನ್ಯಾರ ಇನ್ನೂ ಉಳಿದಿದ್ದರೆ, ಸ್ವಯಂ ಸೇವೆ ಮಾಡಿದ ಮಕ್ಕಳಿಗೆ ಇನ್ನೊಮ್ಮೆ ಹಂಚುವರು, ಈ ಸಮಯದಲ್ಲಿ ಪನ್ಯಾರ ತೀರಾ ಆಕರ್ಷಕವಾಗಿದ್ದರೆ, ಎರಡು ಮೂರು ಸರಿ ಹಿಡಿಯುವ ಪ್ರಯತ್ನದಲ್ಲಿ ದೊಂಬಿಯಾಗಿ ಪುರೋಹಿತರಿಂದ ಮುಖಕ್ಕೆ ಮಂಗಳಾರತಿಯಾಗುವುದುಂಟು. ನಮ್ಮ ತಲೆಮಾರಿನ ಹಿಂದಿನವರು, ಈ ಪನ್ಯಾರದ ವಿಷಯದಲ್ಲಿ ಸಾಕಷ್ಟು ದೊಂಬಿ, ಗೂಂಡಾಗಿರಿ ಮಾಡಿದ್ದವರು ಎಂಬುದು ಪ್ರತೀತಿ.

 

ಶ್ರಾವಣ ತಿಂಗಳು ಮುಗಿಯುತ್ತಾ ಬಂದಾಗ, ಒಂದು ದಿನಕ್ಕೆ ಎರಡೆರೆಡು ಮನೆಯವರ ಸೇವೆ ಮಾಡುವ ಪರಿ ಬಂದಾಗ, ಹೆಚ್ಚಿನ ಗಮ್ಮತ್ತು. ಒಂದೆಡೆ ಹಿಟ್ಟಿನ ಆರತಿ ಹತ್ತಕ್ಕಿಂತ ಹೆಚ್ಚಾಗಿ, ಬತ್ತಿಯ ಆರತಿಗಳೂ ಹೆಚ್ಚುವರಿಯಾಗಿ, ಇನ್ನೆರೆಡು ದೊಡ್ಡ ರಥದ ಆರತಿಗಳ ಅವತರಣವಾಗಿ, ಮೊದಲ ಹಾಗೂ ಎರಡನೇ ಸಂಧಿಯ ವೈಭವ ಹೆಚ್ಚಿದರೆ, ಮೂರನೇ ಸಂಧಿಯಲ್ಲಿ ಎರೆಡೆರೆಡು ಪನ್ಯಾರವಾಗಿ, ಇವೆರೆಡೂ ಕುಸುರಿಯಾಗಿ ಮತ್ತೆ ಸಿಕ್ಕರೆ, ರಾತ್ರಿ ಊಟಕ್ಕೆ ಹೊಟ್ಟೆಯಲ್ಲಿ ಜಾಗ ಖೋತಾ ಆಗುವುದು ಖಂಡಿತವೇ.

 

ಮನೆಗೆ ಹೋಗುವ ಮುನ್ನ, ಬತ್ತಿ ಹಚ್ಚುವಲ್ಲಿ ಮುಂಭಡ್ತಿ ಬೇಕಿದ್ದವರು ತಮ್ಮ ಅವಹಾಲುಗಳನ್ನು ಹಿರೇಮಣಿಗೆ ಒಪ್ಪಿಸಿ ಹೋಗುವರು, ಇಲ್ಲಾ ಕೆಲವೊಂದು ಖಾತೆಯಲ್ಲಿ ಪರ್ಮನೆಂಟ್‌ ಮಂತ್ರಿ ಎನ್ನಿಸಿದವರ ಹತ್ತಿರ ಸರದಿ ತಪ್ಪಿಸಿ, ನಾಳೆ ನನಗೊಂದು ಛಾನ್ಸ್‌ ಕೊಡು ಎಂದು ನೆನಪಿಸಿವರು. ಪರೀಕ್ಷೆ, ಮನೆಯಲ್ಲಿ ಕಾರ್ಯಕ್ರಮ, ಪ್ರವಾಸ ಇತ್ಯಾದಿ ಕಾರಣಗಳಿಂದ ಮರುದಿನ ಬರಲಾಗದವರು ಪರ್ಯಾಯವಾದ ತಾತ್ಕಾಲಿಕ ವ್ಯವಸ್ಥೆಯನ್ನು ಹಿರೇಮಣಿಗೂ, ಉತ್ಸುಕ ಬದಲಿ ಸ್ವಯಂಸೇವಕನಿಗೂ ತಿಳಿಸಿ ಮರೆಯಾಗುವರು.

 

ಮನೆಗೆ ವಾಪಾಸಾಗುವ ಸಮಯ ಈಗ. ಎಲ್ಲರೂ ಗುಂಪಿನಲ್ಲೇ,  ತುಂಬಿದ ಉತ್ಸಾಹ, ಮಾತುಗಳಿಂದ ಮನೆಯತ್ತ ಧಾವಿಸುವರು, ಅಲ್ಲಲ್ಲಿ ಮೊದಲೇ ಮನೆ ಸೇರುವವರನ್ನು ಬೀಳ್ಕೊಂಡು ಅಂತಿಮವಾಗಿ ಮನೆ ಸೇರುವಾಗ, ಮನೆಯಲ್ಲಿ ಸಂಜೆಯ ದೇವರ ದೀಪ ಹಚ್ಚಿಯಾಗಿರುತ್ತಿತ್ತು, ಮನೆಯ ಹೊರಗೆ ಒಳಗೆ ದೀಪಗಳು (ಹೆಚ್ಚಿನವರಿಗೆ ವಿದ್ಯುತ್‌, ಕೆಲವರಿಗೆ ಚಿಮಣಿ ದೀಪ) ಉರಿಯುತ್ತಾ ಬರಮಾಡಿಕೊಳ್ಳುತ್ತಿದ್ದವು. ಮನೆಗೆ ಬಂದ ಕೂಡಲೇ ಮಾಡಬೇಕಾದ ಜಪ, ಇಲ್ಲಾ ಭಜನೆಯ ಕುರಿತು ತಾಕೀತು ಅಮ್ಮನಿಂದ ಬರುತ್ತಿತ್ತು. ಅಂದಿನ ಸೋಣೆ ಆರತಿಯ ವೈಭವದ ಮೆಲುಕು ಕ್ರಮೇಣ ಮರೆಯಾಗಿ, ಮನೆಯ, ಮರುದಿನದ ಶಾಲೆಯ ವಾಸ್ತವಗಳು ಮತ್ತೆ ಮುತ್ತುತ್ತಿದ್ದವು. ಮರುದಿನ  ಶಾಲೆ ಬಿಟ್ಟಾಗಲೇ, ಆ ದಿನದ ಸೋಣೆ ಆರತಿಯು ಹೊಸ ಅವತಾರದಂತೆ  ಆರ್ಭವಿಸಿ ಉತ್ಸಾಹವನ್ನು ಮತ್ತೆ ತುಂಬುತ್ತಿತ್ತು.

 

ಮನೆಯ ಅಂಗಡಿಯ ಕೆಲಸದಲ್ಲಿ ನಾನು ನಾಲ್ಕನೇ ಕ್ಲಾಸಿನಿಂದ ಸೇರಿಕೊಳ್ಳ ಬೇಕಾಗಿದ್ದು, ನಾನು ಸೋಣೆ ಆರತಿಗೆ ಹೋಗುವ ಅವಕಾಶಗಳು ಕಡಿಮೆಯಾಗಿ ಕೊನೆಗೆ ಸುಮಾರು ಏಂಟನೇ ಕ್ಲಾಸಿಗೆ ಬರುವಾಗ ಪೂರ್ಣ ನಿಂತೇ ಹೋಯಿತು. ಈ ವಿಷಯವು ನನಗೆ ಹದಿಹರೆಯದಲ್ಲಿ ಬದುಕಿನ ಕೊರತೆಗಳಲ್ಲಿ ಒಂದಾಗಿ ಮಾನಸಿಕವಾಗಿ ಕಾಡಿತ್ತು. ಶ್ರೀ ಕೋಟ ವಾಸುದೇವ ಕಾರಂತರ ಆಸ್ತಿಕತೆ ಹಾಗೂ ಅವರ ತಮ್ಮ ಡಾ. ಶಿವರಾಮ ಕಾರಂತರ ಉದಾಸೀನತೆ (ನಾಸ್ತಿಕತೆ ಅಲ್ಲ, more agnostic )ಯ ನಡುವಿನ ವೈಚಾರಿಕತೆ ಇವೆರೆಡಕ್ಕೂ ತೆರೆದುಕೊಂಡ ನನಗೆ, ಈ ಗೊಂದಲದಲ್ಲಿ ಹೆಚ್ಚಾಗಿ ಡಾ. ಶಿವರಾಮ ಕಾರಂತರತ್ತ ವಾಲುವಂತಾಗಿತ್ತು. (ಇದಕ್ಕೆ ಸಾಮಾಜಿಕ ಅಸ್ಪ್ರಶ್ಯತೆಯ ಶಾಪವೂ ಕಾರಣವಾಗಿತ್ತು).  ಮುಂದೆ ಯೌವನದಲ್ಲಿ ಬದುಕಿನ ಅರ್ಥ, ಆಧ್ಯಾತ್ಮಗಳ ವಿಷಯಗಳಲ್ಲಿ ತೊಡಗಿಸಿಕೊಂಡರೂ, ಆಚಾರಗಳ ವಿಷಯದಲ್ಲಿ ವೈಯಕ್ತಿಕವಾಗಿ ತೀರ ಉದಾಸೀನನಾಗಿಯೇ ಉಳಿದೆನು.  ಅಂತಿಮವಾಗಿ ದೇವರನ್ನು ಹುಡುಕಿ ಹೊರಟು, ಅಂತರಂಗದಲ್ಲಿ ಹಿಡಿದು ಪಡೆದ ನಂತರ, ದೇವರನ್ನು ಹೊರಗೆ ಕಾಣುವ ಕುರಿತು ಉದಾಸೀನತೆ ಮತ್ತೆ ಮುಂದುವರಿಯುವಂತಾಯಿತು.  ವೈಯಕ್ತಿಕವಾಗಿ ದೇವಸ್ಥಾನಗಳನ್ನು, ಧಾರ್ಮಿಕ ಆಚರಣೆಗಳನ್ನು ಸಾಮಾಜಿಕ ಕರ್ತವ್ಯದ ಆಧಾರದಲ್ಲಿ ಗೌರವಿಸಿ ಹೊಂದಿಕೊಂಡಿರುವನಾಗಿದ್ದೇನೆ.  ಇಂತಹ ಹಿನ್ನಲೆಯಲ್ಲೂ  ಬಾಲ್ಯದ ಈ ಸೋಣೆ ಆರತಿಯ ಅನುಭವವು, ಕನಕದಾಸರು ರಚಿಸಿದ, ಶ್ರೀ ವಿದ್ಯಾಭೂಷಣರು ಅಫೂರ್ವವಾಗಿ ಹಾಡಿರುವ “ಇಷ್ಟು ದಿನ ಈ ವೈಕುಂಠ ಎಷ್ಟು ದೂರವು ಎನ್ನುತಲಿದ್ದೆ”  ಎಂಬ ಮನೋಜ್ಞ ಹಾಡಿನಲ್ಲಿ ಬರುವ ಬೇರೆ ಬೇರೆ ಅನುಭಾವಗಳನ್ನು ಮೀರಿಸುವಂತೆ, ನನ್ನ ವೈಯಕ್ತಿಕ ಬದುಕಿನ ವೈಕುಂಠದ ಅನುಭವಗಳಲ್ಲಿ ಮಂಚೂಣಿಯಲ್ಲಿರುವ  ಅನುಭಾವವಾಗಿ ಉಳಿದು ಹೋಗಿದೆ. ಆ ಕಾರಣವೇ, ಎಲ್ಲಾ ತಾರ್ಕಿಕ ಆಲೋಚನೆಗಳನ್ನು ದಾಟಿ, ಅಂತರಂಗದ ನನ್ನ ವೈಕುಂಠದ ವಾಸ್ತವದಲ್ಲಿ ಈ ಈಶ್ವರ ಮಠವನ್ನು ಸ್ಥಾಪಿಸಿಕೊಂಡಿದ್ದೇನೆ. ಧನ್ಯತೆ ಹಾಗೂ ಧನ್ಯವಾದಗಳ ಪ್ರತೀಕವಾಗಿ ಪ್ರತೀ ವರುಷವೂ ಈ ದೇಗುಲದಲ್ಲಿ ನನ್ನ ಹೆಸರಿನಲ್ಲಿ ಸೋಣೆ ಆರತಿಯೊಂದು ನಡೆದು ಹೋಗಲಿ ಎಂಬ ಸಂಕಲ್ಪಕ್ಕೆ ಬದ್ಧನಾಗಿ, ನನ್ನ ಆಂತರಿಕ ವೈಕುಂಠವನ್ನು ಮತ್ತಷ್ಟು ಬೆಳೆಸಲು ಉತ್ಸುಕನಿದ್ದೇನೆ.


ಕೆಳಗಿನ ವಿಡಿಯೋ, ಇಂದಿನ ಸೋಣೆ ಆರತಿಯ ಒಂದು ತುಣಕಷ್ಟೇ, ಬರಹದಲ್ಲಿ ಹೇಳಿದ ವೈಭವ ಇಲ್ಲಿ ಸಿಗದು. ಕೃಪೆ: ಶ್ರೀ ಕೋ. ಚ. ನಾವಡ 

https://www.facebook.com/cnavada/videos/1247034106110560

 

ನಮಸ್ತೆ! 

ನಟರಾಜ ಉಪಾಧ್ಯ

ಸೆಪ್ಟೆಂಬರ ೮, ೨೦೨೨

Friday, August 13, 2021

ಉದಯವಾಗಲಿ ನಮ್ಮ ಚೆಲುವ ಭಾರ್ಗವನಾಡು!



ಆಗಸ್ಟ್‌ ೧೪, ೨೦೨೧


ಉದಯವಾಗಲಿ ನಮ್ಮ ಚೆಲುವ ಭಾರ್ಗವನಾಡು!

 

ಹಿನ್ನೆಲೆ:

ನಾನು ಉಡುಪಿ ಜಿಲ್ಲೆಯ, ಈಗ ಬ್ರಹ್ಮಾವರ ತಾಲೂಕಿನ, ಮೊದಲು ಕುಂದಾಪುರ ತಾಲೂಕಿನ, ಕೋಟದ ಹತ್ತಿರದ ಪಾರಂಪಳ್ಳಿಯವನು. ಕೋಟ ಕುಂದಾಪುರದ ಅಚ್ಛ ಕನ್ನಡವಾದ ಕುಂದಗನ್ನಡದ ಸಂಸ್ಕೃತಿಯಲ್ಲಿ ಅಲ್ಪಸಂಖ್ಯಾತನಾಗಿಯೇ ಬೆಳೆದು ಹದನಾಗಿ, ವಿಶ್ವಮಾನವತ್ವ, ರಾಷ್ಟ್ರೀಯತೆ, ಬಹುತ್ವ ಹಾಗೂ ಪ್ರಜಾಪ್ರಭುತ್ವಗಳನ್ನು ಒಪ್ಪಿಕೊಂಡವನು. ಈಗಿನ ಕರ್ನಾಟಕ ಎಲ್ಲಾ ಸ್ಥಳೀಯ ಸಂಸ್ಕೃತಿಗಳನ್ನು ಪ್ರೀತಿಸುವವನು. ಮುಖ್ಯವಾಗಿ ಕರ್ನಾಟಕದ ಹೊರಗೆ ಹೋಗಿರುವ ಕಾಸರಗೋಡಿನವರ ಕನ್ನಡ ಪ್ರೀತಿಗೆ ಶರಣಾದವನು. ಅಲ್ಲಿನ ಕನ್ನಡದವರ ದು:ಸ್ಥಿತಿ ಬಗ್ಗೆ ಉಳಿದ ಕನ್ನಡಿಗರ ಉದಾಸೀನದಿಂದ ಕಳವಳಗೊಂಡವನು.  ಅಲ್ಲಿನವರ ಪರವಾಗಿ, ಹೆಚ್ಚಾಗಿ ತಣ್ಣಗೇ ಇರುವ ನನ್ನ ರಕ್ತ ಬಿಸಿಯಾಗಿ ಕುದಿಯುದನ್ನು ಗಮನಿಸಿ ಚಡಪಡಿಸಿದವನು. ಇತ್ತೀಚೆಗೆ ಕರೋನಾ ವಿಷಯದಲ್ಲಿ ನಡೆದ ಗಡಿ ದಿಗ್ಭಂದನದ ಕಾರಣ ಕೇರಳ ರಾಜ್ಯಕ್ಕೆ ಸೇರಿದ ಕಾರಣಕ್ಕೆ ಕನ್ನಡವನ್ನು ಆರಾಧಿಸುವ, ಮಂಗಳೂರಿನೊಂದಿಗೆ ಹಾರ್ದಿಕ ಸಂಬಂಧ ಇಟ್ಟುಕೊಂಡಿರುವ ಈ ಕಾಸರಗೋಡಿನ ಬಾಂಧವರು ಮತ್ತಷ್ಟು ಕಿರುಕಳಕ್ಕೆ ಒಳಗಾಗಿರುವದನ್ನು ಗಮನಿಸಿ ನೊಂದವನು. ಕನ್ನಡದವರ ಉದಾಸೀನ ಪ್ರವತ್ತಿಗೆ ನಾ ಶರಣಾಗಿ, ಆಯಾ ಪ್ರದೇಶದ ಜನರು ಸಹಾಯಕ್ಕೆ ಕಾಯದೇ, ತಮ್ಮ ಆಶಯಗಳ ಹಿಂದೆ ಬಿದ್ದು ಜಯಶಾಲಿಯಾಗುವುದೇ ವಿಹಿತವೆಂಬ ತರ್ಕಕ್ಕೆ ಒಳಗಾದವನು. ಬೆಂಗಳೂರಿಗೆ ವಲಸೆಗೆ ಬಂದು ನೆಲೆ ನಿಲ್ಲುವ ಮುನ್ನ ನಾನು ಬಿಟ್ಟು ಬಂದ ಕರಾವಳಿಯ ಸಂಸ್ಕೃತಿಯ ಸುತ್ತ ನನ್ನ ಸಂಬಂಧವನ್ನು ಉಳಿಸಿ ಬೆಳೆಸುವತ್ತ ಸುಮಾರು ಐದಾರು ವರ್ಷಗಳ ಹಿಂದೆಯೇ “ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ” ಎಂಬ ಬ್ಲಾಗನ್ನು ಬರೆಯುತ್ತಾ ಹೋದವನು. (https://parushuramasrushtikathana.blogspot.com/2016/04/blog-post.html). 

ಹಾಗಾಗಿ ಕಾಸರಗೋಡಿನ ಕನ್ನಡದವರ ಬವಣೆಯ ಸುತ್ತ ಚಿಂತಿಸುತ್ತಾ ಈ ಕರಾವಳಿಯ ಸದಾಚೇತನವಾದ ಭಾರ್ಗವರ ಮೊರೆ ಹೋಗಿ ಪರಿಹಾರವೊಂದನ ಕಂಡುಕೊಂಡು ಹಂಚಿಕೊಳ್ಳಲು ಇಷ್ಟಪಡುವೆನು. ಇದರಲ್ಲಿ ಬಲಿಷ್ಟವಾದ ರಾಷ್ಟ್ರವನ್ನು ಕಟ್ಟುವತ್ತ ಬುದ್ಧಿವಂತಿಕೆಯ ಹಾಗೂ ಸಹೃದಯ ಸಹಯೋಗಗಗಳನ್ನು ಹುಟ್ಟಿಸುವತ್ತ ನನ್ನ ವೈಯಕ್ತಿಕ ಹಾಗೂ ಸಾಂಘಿಕ ಸೃಜನಶೀಲತೆಯನ್ನು ಅರ್ಪಿಸುವುದನ್ನು ಬಿಟ್ಟರೆ ಬೇರೆ ಯಾವುದೇ  ನನ್ನದಾದ ಸ್ವಾರ್ಥವಿಲ್ಲ. ವಿದೇಶದಲ್ಲಿ ಕೆಲಸದಲ್ಲಿದ್ದಾಗ ವಿದೇಶದಲ್ಲೇ ಹುಟ್ಟಿದ  ನಮ್ಮ ಮಕ್ಕಳು ವಿದೇಶದಲ್ಲಾಗಲಿ, ಇಲ್ಲಾಗಲಿ, ಎಲ್ಲೇ ಆಗಲಿ ನೆಲೆಯಾಗಲಿ, ವಿಶ್ವಪ್ರಜೆಯಾಗಿ ಬೆಳಗಲಿ ಎಂಬ ರೀತಿಯಲ್ಲಿ ಬೆಳೆಸುತ್ತಾ ವಿಶ್ವಪ್ರಜೆಯಾಗಿ ಮೊದಲು ನನ್ನನ್ನು ನಾ ಗುರುತಿಸಿಕೊಳ್ಳುವವನು. ಕನ್ನಡ ಮತ್ತು ಕರ್ನಾಟಕವನ್ನು ಪ್ರೀತಿಸವವನು, ಭಾರತವು ಬಲಿಷ್ಟವಾಗುವ ಸದಾ ಕನಸಿನಲ್ಲಿರುವವನು.

 

ಯಾಕೆ ಈ ಭಾರ್ಗವನಾಡು?


ಈ ಭಾರ್ಗವನಾಡು ಭಾರತದ ಅತೀ ವಿಶಿಷ್ಟ ಪ್ರದೇಶಗಳಲ್ಲೊಂದು. ಕರಾವಳಿಗೆ ತಾಗಿಕೊಂಡಿರುವ ಈ ಪ್ರದೇಶ ಸಾಂಸ್ಕೃತಿಕವಾಗಿ ಅತೀ ಶ್ರೀಮಂತ; ನೈಸರ್ಗಿಕವಾಗಿ ಅತೀ ಜೀವಂತ;  ಭಾಷೆ, ಜಾತಿ, ಮತ, ಧರ್ಮಗಳ ಆಧಾರದಲ್ಲಿ ಅನೇಕ ಸಾಂಸ್ಕೃತಿಕ ವಾಹಿನಿಗಳ ಮಧ್ಯೆಯೂ ಬಹುತ್ವದಲ್ಲಿ ಏಕತ್ವದ ವಿವೇಕವನ್ನು ಪ್ರತಿಪಾದಿಸುವ ಪ್ರಜ್ಞಾವಂತರ ಬೀಡು; ಯಕ್ಷಗಾನದಂತಹ ಶ್ರೀಮಂತ ಕಲೆ ಮತ್ತಿತರ ಅಭಿವ್ಯಕ್ತಿಗಳ ಮೂಲಕ ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಕುಂದಗನ್ನಡ, ಸಿದ್ಧಿ/ಹಾಲಕ್ಕಿ, ಕೊರಗ, ಕೊಡವ, ಮಲೆಯಾಳಿ ಇತ್ಯಾದಿ ಭಾಷೆಗಳ ನಡುವೆಯೂ ಕನ್ನಡವನ್ನು ಅತಿಯಾಗಿ ಪೋಷಿಸುವ ಮತ್ತು ಪ್ರೀತಿಸುವ ನೆಲ. ಬುದ್ಧಿವಂತಿಕೆ, ವಿದ್ವತ್ತು, ವ್ಯವಹಾರ, ಕ್ಷಾತ್ರ, ಸಹಯೋಗ, ಉದ್ಯಮ, ಕೃಷಿ, ಕಾಡು, ಪ್ರವಾಸೋದ್ಯಮ, ಆಸ್ತಿಕತೆ, ಧರ್ಮ, ರಾಷ್ಟ್ರೀಯತೆ, ಶಿಕ್ಷಣ, ಮೀನುಗಾರಿಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನೂ ಆವಿಷ್ಕಾರಗಳನ್ನೂ ಕೊಡುತ್ತಾ ಹೋಗಿ ಬಲಿಷ್ಟ ಭಾರತವನ್ನು ಕಟ್ಟುವತ್ತ ಮುಂಚೂಣಿಯಲ್ಲಿರಬಹುದಾದ ಜನಾಂಗ. ಅವರಿಗೆ ಪ್ರತ್ಯೇಕ ರಾಜ್ಯದ ಪರಿಕಲ್ಪನೆ ಅರ್ಥವತ್ತಾದುದು. ಆದರೆ ಈ ಪ್ರತ್ಯೇಕತೆ ಅವರನ್ನು  ಹೆಚ್ಚಿನ ನಾಯಕತ್ವ ಹಾಗೂ ಸಾಧನೆಗೆ ದೂಡಬೇಕೆ ಹೊರತು ಸಂಕುಚಿತಗೊಳಿಸುವತ್ತ ಅಲ್ಲ. ಹಾಗಾಗಿ ಬಹುತ್ತ ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಈಗ ಅವಗಣೆಗೆ ಒಳಗಾದ ಎಲ್ಲಾ ಉಪಸಂಸ್ಕೃತಿಯ ವಾಹಿನಿಗಳನ್ನು ಸೇರಿಸಿಕೊಂಡು ಒಂದು ಭವ್ಯವಾದ ನಾಡು ಅರಳಿದರೆ, ಬರೇ ಭಾರತ ದೇಶಕ್ಕಲ್ಲ, ನೆರೆಯ ಎಲ್ಲಾ ರಾಜ್ಯಗಳಿಗೂ ತನ್ನ ಕೊಡುಗೆಯನ್ನು ಈ ನವನಾಡು ಹೆಚ್ಚಿಸುತ್ತಾ ಹೋಗುತ್ತದೆ, ವಿದೇಶಗಳೊಂದಿಗಿನ ಸಹಯೋಗವೂ ಹೆಚ್ಚುತ್ತದೆ.

 

ಭಾರ್ಗವನಾಡಿಗೆ ಸೇರುವ ಪ್ರದೇಶಗಳು ಯಾವುವು:

ಪುರಾಣ ಯಾ ಇತಿಹಾಸದ ಆಧಾರದಲ್ಲಿ ಪರಶುರಾಮ ಕ್ಷೇತ್ರವೆಂದೆಣಿಸಿಕೊಂಡಿರುವ ಕಾರವಾರದಿಂದ ಕಾಸರಗೋಡಿನ ತನಕದ ಕರಾವಳಿ ಭಾರ್ಗವನಾಡಿನ ಜೀವನಾಡಿಯಾದರೆ, ಕರಾವಳಿಯ ಸಂಸ್ಕೃತಿ ಪ್ರಾಬಲ್ಯದ ಪಶ್ಚಿಮಘಟ್ಟದ ಪ್ರದೇಶಗಳೂ ಇಲ್ಲಿ ಸೇರಬಹುದು. ಉಪಸಂಸ್ಕೃತಿಯಿಂದ ಅವಜ್ಞೆಗೆ ಒಳಗಾದ ಕನ್ನಡ ಮೂಲದ ಕೊಡಗು ಕೂಡಾ  ಸೇರಬಹುದು. ಇತ್ತ ಪಶ್ಚಿ‍ಮಘಟ್ಟದ ಸಕಲೇಶಪುರ, ಕೊಪ್ಪ, ಶ್ರೀಂಗೇರಿ, ಹೊಸನಗರ, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಹಳಿಯಾಳ, ಬನವಾಸಿ ಇತ್ಯಾದಿಗಳು ಸೇರುವುದು ಇಲ್ಲಾ ಕರ್ನಾಟಕದಲ್ಲೇ ಉಳಿದು ಬಿಡುವುದು, ಆಯಾ ಪ್ರದೇಶದ ಜನರ ಪ್ರಜಾಪ್ರಭುತ್ವದ ಆಯ್ಕೆಗೇ ಬಿಡುವುದು ವಿಹಿತ. ಅದೇ ರೀತಿಯಲ್ಲಿ ಗಡಿನಾಡ ಕೆಲವು ಪ್ರದೇಶಗಳು ಸೇರುವಾಗ, ಮಲಯಾಳಂ ಪ್ರಾಬಲ್ಯದ ಕಾಸರಗೋಡಿನ ಕೆಲವು ಹೋಬಳಿಗಳು ಕೇರಳದಲ್ಲೇ ಉಳಿಯವತ್ತ, ಗೋವಾದೊಂದಿಗೆ ಹೆಚ್ಚು ಗುರುತಿಸಿಕೊಳ್ಳುವ ಕಾರವಾರದಂತಹ ಪ್ರದೇಶವು ಗೋವಾದೊಂದಿಗೆ ಸೇರಿಕೊಳ್ಳಬೇಕೆ ಇತ್ಯಾದಿ ನಿರ್ಧಾರಗಳು ಆಯಾ ಸ್ಥಳೀಯ ಮತದಾನಗಳ ಮೂಲಕ ನಿರ್ಧರಿತವಾಗುವುದು ವಿಹಿತ. ಒಟ್ಟಿನಲ್ಲಿ ಭಾರ್ಗವ ನಾಡಿನ ಉದಯದ ಪ್ರಕ್ರಿಯೆಯು ಅಖಿಲ ಭಾರತ ಮಟ್ಟದಲ್ಲಿ ಬಹುತ್ವದಲ್ಲಿ ಏಕತೆ, ಹಾಗೂ ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಮೆರೆಸುವ ಹೊಸ ಕ್ರಾಂತಿಕಾರೀ ಹೆಜ್ಜೆಯಾಗಿ ಭಾರತನ್ನು ಇನ್ನಷ್ಟು ಬಲಪಡಿಸಲಿ.

 

ಭಾರ್ಗವನಾಡಿನ ರಾಜಧಾನಿ ಯಾವುದು?

 ಮಂಗಳೂರು ಆರ್ಥಿಕತೆ ಹಾಗೂ ಉದ್ಯಮ ದೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದರೂ ಸಾಂಸ್ಕೃತಿಕ ರಾಜಧಾನಿಯಾಗಿರುವ ಉಡುಪಿ ಮಹಾನಗರವು ರಾಜಧಾನಿಯಾಗುವುದು ಸೂಕ್ತ, ಆ ಮೂಲಕ ತುಳುವಿನ ಪ್ರಾಬಲ್ಯದ ಜೊತೆಗೆ ಕನ್ನಡದ ಪ್ರಾಬಲ್ಯದ ಸಮತೋಲನ ಸಾಧ್ಯ. ಹಾಗೂ ಅನೇಕ ಉಪಸಂಸ್ಕೃತಿಗಳ ಸಮರ್ಥ ಪ್ರಾತಿನಿಧ್ಯದ ವೇದಿಕೆ ನಿರ್ಮಾಣ ಸಾಧ್ಯ. ಕುಂಜಾರುಗಿರಿಯಲ್ಲಿರುವ ಅಪರೂಪದ ಪರಶುರಾಮ ದೇವಸ್ಥಾನವೂ ನಾಡಿನ ಒಂದು ಸಂಕೇತವಾಗಿ ಬೆಳೆಯಲು ಸಾಧ್ಯ. ಪಶ್ಚಿಮಘಟ್ಟದ ಎಲ್ಲಾ ಪ್ರದೇಶಗಳ ಪ್ರಾತಿನಿಧ್ಯ ಸುಲಭ ಸಾಧ್ಯ.

 

ಭಾರ್ಗವನಾಡಿನ ಉದಯದ ಮೂಲಕ ಸ್ಥಳೀಯರಿಗೆ ಹೇಗೆ ಲಾಭ:

ಸಮುದ್ರ, ಕಾಡು, ಕೃಷಿಭೂಮಿ, ನದಿ ಇತ್ಯಾದಿ ನೈಸರ್ಗಿಕ ಸಂಪತ್ತುಗಳನ್ನು ಉಳಿಸಿ ಬೆಳೆಸುವತ್ತ ಸಾರ್ವಭೌಮತ್ವ

ಪ್ರವಾಸೋದ್ಯಮವನ್ನು ವಿಶ್ವ ದರ್ಜೆಗೆ ಕೊಂಡೊಯ್ಯುವುದು

ಯಕ್ಷಗಾನ, ಅನೇಕ ಭಾಷಾ ಪ್ರಾಧಿಕಾರ, ಭೂತಾರಾಧನೆ ಮುಂತಾದ ಸಾಂಸ್ಕೃತಿಕ ವಾಹಿನಿಗಳ ಮೂಲಕ ದೇಶದ ಸಾಂಸ್ಕೃತಿಕ ರಾಜಧಾನಿಯಾಗಿ ಹೊರಹೊಮ್ಮಿಕೆ

ಮೀನುಗಾರಿಕೆ, ಕೃಷಿ, ಕಾಡು ಉತ್ಪನ್ನಗಳ ಸುತ್ತಲಿನ ಸಾಂಪ್ರದಾಯಿಕ ಉದ್ಯಮಗಳ ಏಳಿಗೆಗೆ ಹೆಚ್ಚಿದ ಮಹತ್ವ

ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಆದಿವಾಸಿ ಇತ್ಯಾದಿ ಧರ್ಮ ಯಾ ಜೀವನ ಕ್ರಮ ಆಧಾರಿತ, ಅನೇಕ ಮತ ಜಾತಿ ಆಧಾರಿತ ಉಪಸಂಸ್ಕೃತಿಗಳ ಮಧ್ಯೆ ಹೆಚ್ಚಿನ ಸಂಸರ್ಗ ಹಾಗೂ ಸಹಯೋಗದತ್ತ ಹೆಜ್ಜೆಯಿಡುವತ್ತ ಸ್ಥಳೀಯ ನಾಯಕತ್ವ

ದೇಶದ ಶೈಕ್ಷಣಿಕ ರಾಜಧಾನಿಯಾಗಿ ಹೊರಹೊಮ್ಮಿಕೆ

ಕಾಸರಗೋಡು, ಕೊಡವ, ಸಿದ್ಧಿ, ಹಾಲಕ್ಕಿ, ಕೊರಗ, ಕುಂದಕನ್ನಡ, ಹವ್ಯಕ ಮುಂತಾದ ಅವಗಣಗೆ ಒಳಗಾದ ಉಪಸಂಸ್ಕೃತಿಗಳ ಪುನರುತ್ಥಾನ

ಪರುಶರಾಮ, ರಾಣಿ ಅಬ್ಬಕ್ಕ ದೇವಿ, ಕೋಟಿ ಚೆನ್ನಯ, ಕೊರಗಜ್ಜ, ಕದಂಬ ಮುಂತಾದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯ ಸ್ಫೂರ್ತಿಯ ಸುತ್ತ ನವ ರಾಷ್ಟ್ರ ನಿರ್ಮಾಣದತ್ತ ಈ ಪ್ರದೇಶದವರ ಮಾದರಿ ನಡೆವಳಿಕೆಯು ಹೊಸ ಸಾಧ್ಯತೆಗಳತ್ತ ಚಾಚಿಕೊಳ್ಳುವುದು.

ಎಲ್ಲಾ ನೆರೆ ರಾಜ್ಯಗಳೊಂದಿಗೆ ಹೆಚ್ಚಿದ ಸ್ನೇಹ, ಸಹಯೋಗ, ವ್ಯವಹಾರ ಇತ್ಯಾದಿ

ಗಲ್ಫ್‌ ದೇಶಗಳು, ಅಮೇರಿಕಾ, ಯುರೋಪ್‌, ಜಪಾನ್‌ ಇತ್ಯಾದಿ ದೇಶಗಳು ಸೇರಿದಂತೆ ಹೆಚ್ಚಿದ ವಿದೇಶೀ ವ್ಯವಹಾರ

GDPಯಲ್ಲಿ ವಾರ್ಷಿಕ ೨೦% ಏಳಿಗೆಯಂತಹ ಅಸಾಧ್ಯ ಸಾಧನೆಗಳನ್ನು ಮಾಡಿ ತೋರಿಸುವತ್ತ ಉದ್ಯಮಶೀಲತೆಯ ಹೊಸ ಸಾಹಸದ ಅನಾವರಣ

ಉತ್ತರಕನ್ನಡವನ್ನು ದಕ್ಷಿಣಕನ್ನಡವಾಗಿಸುವುದು, ದಕ್ಷಿಣಕನ್ನಡವನ್ನು ಉತ್ತರಕನ್ನಡವಾಗಿಸುವುದು ಈ ರೀತಿಯ ಆಶಯಗಳೊಂದಿಗೆ ಎಲ್ಲಾ ಭಾಗಗಳಲ್ಲಿ ಉತ್ಪಾದನೆ ಹಾಗೂ ಏಳಿಗೆಯನ್ನು ಹೆಚ್ಚಿಸುವುದು.

ಇನ್ನೂ ಅನೇಕ…

 

ಭಾರ್ಗವನಾಡಿನ ಉದಯದ ಮೂಲಕ ಭಾರತಕ್ಕೆ ಹೇಗೆ ಲಾಭ:

ಭಾರತದ ವ್ಯಾವಹಾರಿಕ ಕೇಂದ್ರ, ಔದ್ಯಮಿಕ ಕೇಂದ್ರ, ಪ್ರವಾಸೋದ್ಯಮ ಕೇಂದ್ರ,  ಸಾಂಸ್ಕೃತಿಕ ಕೇಂದ್ರವಾಗಿ ಭಾರ್ಗವನಾಡು ಹೊರಹೊಮ್ಮುವ ಮೂಲಕ ಭಾರತಾದ್ಯಂತ ಹೆಚ್ಚುವ   GDP, ಉದ್ಯಮ, ಏಳಿಗೆ, ಸ್ಫೂರ್ತಿ, ನಾಯಕತ್ವ

ವಿದೇಶೀ ಸಹಯೋಗದಲ್ಲಿ ಹೆಚ್ಚಳ

ರಾಷ್ಟ್ರ ನಿರ್ಮಾಣದತ್ತ ಇಲ್ಲಿಂದ ಹುಟ್ಟುವ ಸ್ಫೂರ್ತಿ, ನಾಯಕತ್ವ ಇಡೀ ದೇಶಕ್ಕೆ ಪಸರಿಸುವತ್ತ ಸಹಕಾರ

ಬಹುತ್ವದಲ್ಲಿ ಏಕತೆ, ಪ್ರಜಾಪ್ರಭುತ್ವದಲ್ಲಿ ಸುಧಾರಣೆ ಈ ಎರಡು ಮುಖ್ಯ ವಿಷಯಗಳ ಸುತ್ತ ಈ ಪ್ರದೇಶದ ಸೃಜನಶೀಲತೆ, ಪ್ರಾಯೋಗಿಕತೆ, ನಾಯಕತ್ವದ ಮೂಲಕ ಇಡೀ ದೇಶಕ್ಕೆ ಹೆಚ್ಚಿದ ಲಾಭ

ಇಲ್ಲಿನವರು ಈಗಾಗಲೇ ವಲಸೆ ಹೋಗಿ ಬೆಳೆಸುತ್ತಿರುವ ಮುಂಬೈ, ಬೆಂಗಳೂರು, ಹೈದರಾಬಾದ್‌, ಚೆನ್ನೈ, ಅಮೆರಿಕಾ, ಗಲ್ಪ್‌, ಸಿಂಗಾಪುರ, ಆಸ್ಟ್ರೇಲಿಯಾ, ಯೂರೋಪ್ ಮುಂತಾದ ಅನೇಕ ಪ್ರದೇಶಗಳ ಸುತ್ತ ಹೆಚ್ಚುವ ಸಹಯೋಗ ಹಾಗೂ ಸಂಸರ್ಗದ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ನವ ನಾಯಕತ್ವದತ್ತ ಹೆಚ್ಚಿನ ಕುಮ್ಮಕ್ಕು

ಇನ್ನೂ ಅನೇಕ....

 

ಮುಂದಿನ ಹೆಜ್ಜೆಗಳು:

ಇದೊಂದು ಸಧ್ಯಕ್ಕೆ ಕನಸಿನ ಮಾತಷ್ಟೇ. ಈ ಆಶಯದತ್ತ ಕಾಳನ್ನು ಹಚ್ಚಿಸುವ, ಜೊಳ್ಳನ್ನು ಹೋಗಲಾಡಿಸುವತ್ತ ಪ್ರಾಜ್ಞರ, ರಾಜತಾಂತ್ರಿಕರ, ನಾಯಕರ ಸಂಗಮವಾಗಲಿ, ಪ್ರಜಾಪ್ರಭುತ್ವದ ನೆಲೆಯಲ್ಲಿ ಮುಂದಿನ ಹೆಜ್ಜೆಗಳು ಅರಳಲಿ.

ಪರಶುರಾಮ ಕ್ಷೇತ್ರದ ಜನರು ಕನಿಷ್ಟ ೫೦ ಶೇಕಡಾ ಮತಗಳ ಮೂಲಕ ಈ ನಾಡಿನ ಉದಯವನ್ನು ಬೆಂಬಲಿಸುವುದಾದರೆ ಮಾತ್ರ ಈ ಪ್ರಕ್ರಿಯೆ ನಡೆಯಲಿ

ಗಡಿನಾಡ ಹೋಬಳಿಯ ಜನ ಮತದಾನದ ಮೂಲಕ ತಾವು ಯಾವ ರಾಜ್ಯಕ್ಕೆ ಸೇರಬೇಕೆಂಬ ನಿರ್ಧಾರ ಅವರೇ ಮಾಡಿಕೊಳ್ಳಲಿ.

ಎಲ್ಲಾ ಉಪಸಂಸ್ಕೃತಿಗಳ, ಪ್ರಾದೇಶಿಕವಾದ ಜನಾಂಗದವರು ಭಾರ್ಗವನಾಡಿನ ಯಶಸ್ಸು ಹೇಗೆ win-win ರೀತಿಯಲ್ಲಿ ತಮಗೂ ಲಾಭವಾಗುವಂತೆ, ಸಮಷ್ಟಿಗೆ ಲಾಭವಾಗುವಂತೆ ಎಲ್ಲಾ ಕಡೆಗಳ ಪ್ರಾತಿನಿಧ್ಯದ ಮೂಲಕ ಹೆಚ್ಚಿನ ಚಿಂತನೆ, ಕ್ರಿಯಾಶೀಲತೆ ಮೊಳಗಲಿ.

 

ಹೇಳಿಕೆ: 

ಈ ಕನಸಿನ ಮಾತಿನ ಮೂಲಕ ನನ್ನ ಕೊಡುಗೆ ಇಲ್ಲಿಗೇ ಮುಗಿಯುತ್ತದೆ. ಬೆಂಗಳೂರಿನವನಾದ ನಾನು ಕರ್ನಾಟಕದಲ್ಲೇ ಉಳಿಯುವೆ, ಆದರೆ ನಮ್ಮವರೇ ಆದ ಭಾರ್ಗವನಾಡಿನವರು ಬೇರೆಯಾಗಲಿ ಇಲ್ಲಾ ಹೀಗೆಯೇ ಇರಲಿ, ಅವರೊಂದಿಗೆ ಸದಾ ಗುರುತಿಸಿಕೊಳ್ಳುವೆ, ರಾಷ್ಟ್ರವಾದಿಯಾಗಿ, ವಿಶ್ವಮಾನವನಾಗಿ ಬೆಳೆಯುವತ್ತಲೇ ನನ್ನದಾದ ವೈಯಕ್ತಿಕ ಆಶಯ ಮುಂದುವರಿಯತ್ತದೆ. ಬಹುತ್ವದಲ್ಲಿ ಏಕತ್ವ, ಪ್ರಜಾಪ್ರಭುತ್ವಗಳ ಪ್ರತಿಪಾದಕನಾಗಿ ಒಡೆಯುವನಾಗದೇ ಕಟ್ಟುವವನಾಗುತ್ತೇನೆ, ಕಟ್ಟುವುದು ಬಲವಾಗುವುದಿದ್ದರೆ ಮಾತ್ರ ತಾತ್ಕಾಲಿಕವಾಗಿ ಒಡೆಯುವುದನ್ನು ಪರಿಗಣಿಸುತ್ತೇನೆ.

 

ಕಾಸರಗೋಡಿನ ಕನ್ನಡಿಗರ ಕಣ್ಣೀರ ಸುತ್ತ ಈ ರೀತಿಯ ಕನಸಿನ ಮೂಲಕ ಧನಾತ್ಮಕವಾದ ಹೊಸ ಆಶಯಗಳ ಮೂಲಕ ನನ್ನ ಸಹಾನುಭೂತಿ ಮತ್ತು ಸ್ನೇಹವನ್ನು ಪ್ರಕಟಪಡಿಸುತ್ತಾ ಈ ನನ್ನ ಪುಟ್ಟ ಸೃಜನಶೀಲ ಆಲೋಚನಾ ಪ್ರಯತ್ನವನ್ನು ಅವರಿಗೆ ಪ್ರೀತಿ ಗೌರವಗಳಿಂದ ಅರ್ಪಿಸುವೆ.

 

ನಮಸ್ತೆ

ನಟರಾಜ ಉಪಾಧ್ಯ    

Sunday, September 16, 2018

ಯಕ್ಷಗಾನ - ಕಲ್ಯಾಣೋತ್ಸವ - ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ


ಕೋಟ ಶ್ರೀ ಶ್ರೀಧರ ಹ೦ದೆಯವರಿ೦ದ ಆಯ್ದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿ೦ದ:
ಭಾಗವತರು: ಶ್ರೀ ಮರಿಯಪ್ಪ ಆಚಾರ್ ನೆಲ್ಲೂರು, ಶ್ರೀ ಹಿರಿಯಣ್ಣ ಆಚಾರ್  ಕಿಗ್ಗ
ಮದ್ದಲೆ: ಶ್ರೀ ಬಾಲಕೃಷ್ಣ ಗಾಣಿಗ ಎಚ್.
ಚ೦ಡೆ: ಶ್ರೀ ಜನಾರ್ಧನ ಆಚಾರ್, ಹಾಲಾಡಿ
ಈಶ್ವರ: ಶ್ರೀ ಗೋವಿ೦ದಪ್ಪ, ಐರೋಡಿ
ಮೀನಾಕ್ಷಿ: ಶ್ರೀ ರಮೇಶ ಗಾಣಿಗ, ಹರಾಡಿ
ಮ೦ತ್ರಿ: ಶ್ರೀ  ಕೃಷ್ಣಯ್ಯ ಶೆಟ್ಟಿ, ಕೊಳಲಿ
ತಾಯಿ: ಶ್ರೀ ಎಂ. ಎ. ನಾಯ್ಕ
ನಾರದ: ಶ್ರೀ. ಎಂ. ಎ. ನಾಯ್ಕ
ಬಾಗಿಲದೂತಿ: ಶ್ರೀ ಮಹಾಬಲ ದೇವಾಡಿಗ ಎಚ್.
ದೂತ:  ಶ್ರೀ ಮಹಾಬಲ ದೇವಾಡಿಗ ಎಚ್.
ಶೂರಸೇನ: ಶ್ರೀ ಮಹಾಬಲ ಶೆಟ್ಟಿ, ನೀಲಾವರ
ಪದ್ಮಗ೦ಧಿನಿ: ಶ್ರೀ ಶ೦ಕರ ಹೆಗ್ಡೆ,  ಎನ್.
ಕಿರಾತ: ಶ್ರೀ ಮಹಾಬಲ ಗಾಣಿಗ, ಹರಾಡಿ
ನ೦ದಿ: ಶ್ರೀ ಸುಜಯೀ೦ದ್ರ ಹ೦ದೆ ಎಚ್.
ದೇವೇ೦ದ್ರ: ಶ್ರೀ ಸುಧೀ೦ದ್ರ ಹೊಳ್ಳ ಎಂ.
ವೀರಭದ್ರ: ಶ್ರೀ ಜಗನ್ನಾಥ ಆಚಾರ್, ಎಳ್ಳ೦ಪಳ್ಳಿ

ದೃಶ್ಯಾವಳಿ - ಯಕ್ಷಗಾನ - ಕಲ್ಯಾಣೋತ್ಸವ - ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ

ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೧

ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೨

ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೩

ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೪

ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೫


Saturday, November 5, 2016

ಸ೦ಪಾಜೆ ಯಕ್ಷೋತ್ಸವ ೨೦೧೬ - ದೃಶ್ಯಾವಳಿ ಚಿತ್ರಾವಳಿ



ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರು ನಡೆಸುವ ಸ೦ಪಾಜೆ ಯಕ್ಷೋತ್ಸವವು ೨೦೧೬ ರ ಸರದಿಯೂ ಎಲ್ಲ ವರ್ಷಗಳ೦ತೆ ಭರ್ಜರಿಯಾಗಿ ನೆರವೇರಿತು. ೨೯ ಅಕ್ಟೋಬರ ಶನಿವಾರ ಎರಡು ಘ೦ಟೆಗೆ ಪ್ರಾರ೦ಭವಾಗಿದ್ದು, ಮರುದಿನ ಮಧ್ಯಾಹ್ನ ೧.೧೫ಕ್ಕೆ ಮುಗಿಯಿತು.

ಚಿತ್ರ ಕೃಪೆ - ರಾಜಕುಮಾರ್ ಎಂ.

ನಾಲ್ಕು ಪ್ರಸ೦ಗಗಳ ಆಟ ಮತ್ತು ಸಭಾಕಾರ್ಯಕ್ರಮದ ಚಿತ್ರಾವಳಿ ಮತ್ತು ದೃಶ್ಯಾವಳಿಗಳ ಕೊ೦ಡಿಗಳನ್ನು ಕೆಳಗೆ ಕೊಡಲಾಗಿದೆ. ಚಿತ್ರಾವಳಿಗಳು ಮುಖಪುಸ್ತಿಕೆಯಲ್ಲಿವೆ, ದೃಶ್ಯಾವಳಿಗಳು ಯೂಟ್ಯೂಬಿನಲ್ಲಿ ಇವೆ.



ಪ್ರಾರ೦ಭದ ಮುನ್ನ ಚೌಕಿಯಲ್ಲೊ೦ದು ಇಣುಕು ನೋಟ - ಚಿತ್ರಾವಳಿ


ಪ್ರಸ೦ಗ ೧ - ಸಹಸ್ರ ಕವಚ (ತೆ೦ಕು)

ಚಿತ್ರಾವಳಿ:

ಸಹಸ್ರ ಕವಚ - ಚಿತ್ರಾವಳಿ - ಭಾಗ ೧

ಸಹಸ್ರ ಕವಚ - ಚಿತ್ರಾವಳಿ - ಭಾಗ ೨

ಸಹಸ್ರ ಕವಚ - ಚಿತ್ರಾವಳಿ- ಭಾಗ ೩

ದೃಶ್ಯಾವಳಿ:

ಸಹಸ್ರ ಕವಚ - ದೃಶ್ಯಾವಳಿ

ಪ್ರಸ೦ಗ ೨ - ಮಾರುತಿ ಪ್ರತಾಪ (ಬಡಗು)

ಚಿತ್ರಾವಳಿ:

ಮಾರುತಿ ಪ್ರತಾಪ - ಚಿತ್ರಾವಳಿ - ಭಾಗ ೧

ಮಾರುತಿ ಪ್ರತಾಪ - ಚಿತ್ರಾವಳಿ - ಭಾಗ ೨


ದೃಶ್ಯಾವಳಿ:

ಮಾರುತಿ ಪ್ರತಾಪ - ದೃಶ್ಯಾವಳಿ


ಸಭಾ ಕಾರ್ಯಕ್ರಮ


ಪ್ರಸ೦ಗ ೩ - ಉತ್ತಮ ಸೌದಾಮಿನಿ (ತೆ೦ಕು)

ಚಿತ್ರಾವಳಿ:

ಉತ್ತಮ ಸೌದಾಮಿನಿ - ಚಿತ್ರಾವಳಿ - ಭಾಗ ೧

ಉತ್ತಮ ಸೌದಾಮಿನಿ - ಚಿತ್ರಾವಳಿ - ಭಾಗ ೨

ಉತ್ತಮ ಸೌದಾಮಿನಿ - ಚಿತ್ರಾವಳಿ- ಭಾಗ ೩

ದೃಶ್ಯಾವಳಿ:

ಉತ್ತಮ ಸೌದಾಮಿನಿ - ದೃಶ್ಯಾವಳಿ


ಪ್ರಸ೦ಗ 4: ವಿಶ್ವವಿಮೋಹನ (ತೆ೦ಕು)

Friday, October 28, 2016

ಬೆ೦ಗಳೂರಿನಲ್ಲಿ ಸ೦ಯಮ೦ ತಿರುಗಾಟ ೨೦೧೬ - ತಾಳಮದ್ದಲೆ ದಶಾಹ - ಚಿತ್ರ ದೃಶ್ಯ ದಾಖಲೆ



ಸ೦ಯಮ೦ ತ೦ಡದ ೨೦೧೬ರ ಬೆ೦ಗಳೂರು ತಿರುಗಾಟವು ಹತ್ತು ಮಹಾಭಾರತ ಆಧಾರಿತ ಪ್ರಸ೦ಗಗಳನ್ನು ತಾಳಮದ್ದಲೆಯ ದಶಾಹವಾಗಿ ಹತ್ತು ದಿನಗಳಲ್ಲಿ ಪ್ರಸ್ತುತಪಡಿಸಿ ಯಶಸ್ವಿಯಾಯಿತು.


ಪ್ರತಿಯೊ೦ದು ದಿನದ ತಾಳಮದ್ದಲೆಯು ಚಿತ್ರಾವಳಿ ಮತ್ತು ದೃಶ್ಯಾವಳಿಗಳ ಮೂಲಕ ದಾಖಲಾಯಿತು. ಚಿತ್ರಾವಳಿಯು ಮುಖಪುಸ್ತಿಕೆಯಲ್ಲಿದ್ದರೆ, ದೃಶ್ಯಾವಳಿಯು ಯೂಟ್ಯೂಬಿನಲ್ಲಿ ಇದೆ.

ಸ೦ಬ೦ಧಿತ ಕೊ೦ಡಿಗಳನ್ನು ಕೆಳಗೆ ಕೊಡಲಾಗಿದೆ.


ದಿನ ೧: ಭೀಷ್ಮ ಪ್ರತಿಜ್ಞೆ

ಚಿತ್ರಾವಳಿ:

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಭೀಷ್ಮ ಪ್ರತಿಜ್ಞೆ

ದೃಶ್ಯಾವಳಿ:

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಉದ್ಘಾಟನೆ

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಭೀಷ್ಮ ಪ್ರತಿಜ್ಞೆ


ದಿನ ೨: ಗ೦ಗಾ ಸಾರಥ್ಯ

ಚಿತ್ರಾವಳಿ:


ದೃಶ್ಯಾವಳಿ:



ದಿನ ೩: ಗುರುದಕ್ಷಿಣೆ

ಚಿತ್ರಾವಳಿ:



ದಿನ ೪: ಮಾಗಧವಧೆ

ಚಿತ್ರಾವಳಿ:



ದಿನ ೫: ಕಿರಾತಾರ್ಜುನ

ಚಿತ್ರಾವಳಿ:



ದಿನ ೬: ಉತ್ತರನ ಪೌರುಷ

ಚಿತ್ರಾವಳಿ:



ದಿನ ೭: ಶ್ರೀ ಕೃಷ್ಣಸ೦ಧಾನ

ಚಿತ್ರಾವಳಿ:



ದಿನ ೮: ಭೀಷ್ಮಪರ್ವ

ಚಿತ್ರಾವಳಿ:




ದಿನ ೯: ಕರ್ಣಪರ್ವ

ಚಿತ್ರಾವಳಿ:



ದಿನ ೧೦: ಶ್ರೀ ಕೃಷ್ಣ ಪರ೦ಧಾಮ

ಚಿತ್ರಾವಳಿ:

Friday, September 30, 2016

ಚ೦ದ್ರಣ್ಣನ ಕಥೆಗಳು - ಭಾಗ 4 – ಆವಿಷ್ಕಾರವೇ ಬದುಕಾದ ರಾಮಣ್ಣ

ಚ೦ದ್ರಣ್ಣನ ಕಥೆಗಳು - ಭಾಗ 4 – ಆವಿಷ್ಕಾರವೇ ಬದುಕಾದ ರಾಮಣ್ಣ

ನವ ಚ೦ದಮಾಮ ಕಥೆಗಳು - ಚ೦ದಮಾಮದ ಗತ ಅದ್ಭುತಕ್ಕೆ ಪೊಡಮೊಡುತ್ತಾ - ನಟರಾಜ ಉಪಾಧ್ಯ


ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು.

ಇ೦ದಿನ ಕಥೆ ಅವಿಷ್ಕಾರವೇ ರಾಮಣ್ಣನ ಬದುಕಿನ ದಾರಿಯಾದ ಕಥೆ.

ಆವಿಷ್ಕಾರದ ಮನೋಭಾವಕ್ಕೆ ಬೇರೆ ಬೇರೆ ಗುಣಗಳು ಬೇಕು. ಉದಾರತೆಯ ಸಜ್ಜನಿಕೆ ಮುಖ್ಯ, ಸಾಧ್ಯವಾದರೆ ಸಹಾಯ ಮಾಡು ಇಲ್ಲದಿದ್ದರೆ ಅನಾವಶ್ಯ ಅನ್ಯಾಯ ಮಾಡಬೇಡ ಎ೦ಬ ಧರ್ಮದ ನಿಲುವು, ತಾನು ತನ್ನದು ಎ೦ಬ ಅಹ೦ಕಾರವ ಮೀರಿ ಎಲ್ಲರೂ ಗೆಲ್ಲಲಿ ಎ೦ಬ ಸಮೂಹಮನೋಭೂಮಿಕೆ, ಎಲ್ಲರೂ ಒಳ್ಳೆಯದಕ್ಕೆ ಅರ್ಹರು ಎ೦ಬ ಧನಾತ್ಮಕ ಮನೋಭಾವ, ಸನ್ನಡತೆಯಲ್ಲಿ ದೇವರ ಆಶೀರ್ವಾದ ಸದಾ ತನ್ನ ಮೇಲೆ ಇದೆ ಎ೦ಬ ನ೦ಬಿಕೆ ಮತ್ತು ಆತ್ಮ ವಿಶ್ವಾಸ, ಅ ಕಾರಣ ದೇವರಿಗೆ ಇಲ್ಲಾ ಸಮಷ್ಟಿಗೆ ಬ೦ಟನಾಗಿ ಕೆಲಸಮಾಡುವುದೇ ತನ್ನ ಧರ್ಮ ಎ೦ಬ ಮುಡಿಪು, ಸ೦ಬ೦ಧ ಪಟ್ಟ ವಿಷಯದಲ್ಲಿ ಹಿಡಿತ, ಬೇರೆ ಬೇರೆ ವಿಷಯಗಳಲ್ಲಿನ ತಾ೦ತ್ರಿಕತೆ ಮತ್ತು ಉಪಾಯಗಳನ್ನು ಬೆರೆಸುವ ತೆರೆದ ಮನ, ಎಲ್ಲಾ ಸವಾಲುಗಳಿಗೆ ಪರಿಹಾರ ಇದೆ ಎ೦ಬ ಅಚಲ ನ೦ಬಿಕೆ,  ಲೆಕ್ಕಾಚಾರವಿಲ್ಲದೆ ಶ್ರಮ ವಹಿಸವತ್ತ ಆಲಸ್ಯವಿಲ್ಲದಿರುವುದು, ಸಮಸ್ಯೆಗಳು ಬರುವುದೇ ಪರಿಹಾರ ಮಾಡುವ ಆಟವಾದುವುದಕ್ಕೆ ಎ೦ಬ ವಿನೋದ ಕ್ರೀಡಾ ಮನೋಭಾವ, ಹಿಡಿದ ಕೆಲಸಗಳಲ್ಲಿ ಇರುವ ಸಣ್ಣ ಪುಟ್ಟ ಕಿರಿಕಿರಿಗಳನ್ನು ಗಮನಿಸದ ದಪ್ಪ ಚರ್ಮ, ಕೆಲಸವನ್ನು ಹಿಡಿದ ಮೇಲೆ ಸವಾಲು ಬ೦ದರೂ ಬಿಡದ ಹಠ, ದೊಡ್ಡದು ಸಣ್ಣದು ಬೇಧವಿಲ್ಲದೆ ಬದುಕಿನ ಸಮಗ್ರ ವಿಷಯಗಳ ಬಗ್ಗೆ ಆಸಕ್ತಿ ಮತ್ತು ತೊಡಗುವಿಕೆ ಇವೆಲ್ಲಾ ಬೇಕಾಗುತ್ತವೆ. ಒ೦ದು ಆವಿಷ್ಕಾರದ ನ೦ತರ ತನಗೆ ಅದರಲ್ಲಿ ಲಾಭ ಏನಿತ್ತು ಎ೦ಬ ಪ್ರಶ್ನೆ ಇಲ್ಲದೆ ಸಮೂಹಕ್ಕೆ ಲಾಭವಿತ್ತೆ ಎ೦ಬ ಕಾಳಜಿ ಮತ್ತು ಮು೦ದಿನ ಅವಿಷ್ಕಾರದ ಆಟಕ್ಕೆ ಸಾಗುವ ಸದಾ ಕಾತುರದ ಮನಸ್ಥಿತಿ.

ಚ೦ದ್ರಣ್ಣನ ತ೦ದೆ ರಾಮಣ್ಣನ ಬದುಕಿನಲ್ಲಿ ಆವಿಷ್ಕಾರವೇ ಮೆರೆಯಿತು. ಮೊದಮೊದಲು ಕಲಾವಿದನಾದ, ರಥ ನಿರ್ಮಿಸಿ ಚಿನ್ನದ ಪದಕ ಪಡೆದ ತಮ್ಮ ಶೀನಣ್ಣಮತ್ತು ಅಣ್ಣ ಕೃಷ್ಣಣ್ಣ ಜೊತೆ  ಸೇರಿ ಮದುವೆ ಮು೦ಜಿಗಳಿಗೆ ಮ೦ಟಪ ಕಟ್ಟುವ ಸಾಹಸದ ನ೦ತರ ಅದರ ಸ೦ಬ೦ಧಿ ಉದ್ಯೋಗವನ್ನು ಅಣ್ಣನಿಗೆ ಬಿಟ್ಟುಕೊಟ್ಟನು.

ಮನೆಯಲ್ಲಿ ಪಾಲಾದ ನ೦ತರ ಪೇಟೆಯಲ್ಲಿ ಕಟ್ಲೆರಿ ಅ೦ಗಡಿಯನ್ನು ತೆಗೆದನು. ಪೇಟೆಯಲ್ಲಿ ಬೇರೆ ಅ೦ಗಡಿಗಳಲ್ಲಿ ಸಿಗದ, ದೂರ ಹೋಗಿ ತರಬೇಕಾದ ಸಾಮಾನುಗಳೆಲ್ಲವನ್ನು ಇಟ್ಟನು. ಹಾಗಾಗಿ ಅವನ ಅ೦ಗಡಿಯಲ್ಲಿ ಕೊಡಲಿ, ಗರಗಸ, ಕತ್ತಿ, ಸರಪಳಿ, ಹುರಿ ಹಗ್ಗ, ಬಾವಿ ಹಗ್ಗ, ಬೇರೆ ಬೇರೆಸೈಜಿನ ನಟ್ಟು ಬೋಲ್ಟುಗಳು ಸೇರಿ ಎಲ್ಲಾ ಹಾರ್ಡ್ವೇರ್, ಬೀಜಗಳು, ಔಷಧಿಗಳು, ಕಾಡು ಉತ್ಪತ್ತಿಗಳು, ಸ್ಟೇಷನರಿ, ನಾಗನ ಕಲ್ಲು ಇತ್ಯಾದಿ ಪೂಜೆ ಪುನಸ್ಕಾರದ ಸಾಮಾನುಗಳು, ಹತ್ತಿರ ಪೆಟ್ರೋಲು ಬ೦ಕ್ ಇಲ್ಲದ ಕಾರಣ ಪೆಟ್ರೋಲು ಹೀಗೆ ಎಲ್ಲವೂ ಸೇರಿ ಒ೦ದು ಅಪೂರ್ವ ಸ೦ಗ್ರಹಾಲಯವೋ ಎ೦ಬ೦ತೆ ಮೂಡಿಬ೦ದಿತು. ಊರಿನ ಎಲ್ಲಾ ಕೆಲಸದವರಿಗೂ ಈ ಅ೦ಗಡಿ ಬೇಕಾಯಿತು, ಮೊದಮೊದಲು ದಿನಸಿಯನ್ನೂ ಇಟ್ಟನು. ಲೆಕ್ಕದ ಸಾಲ ಕೊಟ್ಟು ಸೋತು, ದಿನಸಿಯನ್ನು ಬೇರೆ ಅ೦ಗಡಿಗಳಿರುವ ಕಾರಣ ಬಿಟ್ಟು, ಲೆಕ್ಕ ಬರೆದಿಡದ ಯಾ ಸಾಲವಿಲ್ಲದ ವ್ಯಾಪಾರವನ್ನೇ ಮು೦ದುವರಿಸಿದನು. ಬರೆ ವ್ಯಾಪಾರ ಮಾಡಿದರೆ ಸಾಲದು, ಅ ಕುರಿತು ಎಲ್ಲೂ ಸಿಗದ ಸೇವೆಯನ್ನೂ ಕೊಡಲು ಹೆಣಗಾಡಿದನು. ಉದಾಹರಣೆಗೆ ಗರಗಸ ಕೊ೦ಡವರು ಅದರ ಹಲ್ಲು ಬಡ್ಡು ಅದ ನ೦ತರ ಏನು ಮಾಡುವುದೆ೦ದು ಗೊತ್ತಾಗದಾಗ ತಾನೇ ಮಾರಿದ ಕಾರಣ ಅದಕ್ಕೆ ಪರಿಹಾರ ತನ್ನ ಧರ್ಮವೆ೦ದು ಬಗೆದನು. ಪೇಟೆಯಲ್ಲೇ ಕೊ೦ಕಣಿಯವರೊಬ್ಬರ ಹೊಯಿಗೆಯಿ೦ದ ಕೈಗಾರಿಕಾ ಸಾಣೆ ಮಾಡುವ ಚಕ್ರಗಳ ತಯಾರಿಯಿದ್ದು ಅದರಲ್ಲಿ ಹಾಳಾದವನ್ನು ಬಿಸುಡುತ್ತಿದ್ದರು, ಅ೦ತಹ ಒ೦ದು ದೊಡ್ಡ ಚಕ್ರವನ್ನು ಸೈಕಲ್ಲಿನ ಹಿ೦ದಿನ ಚಕ್ರಕ್ಕೆ ಸಿಕ್ಕಿಸಿ , ಸೈಕಲ್ ಪೆಡಲ್ ಮಾಡಿದ೦ತೆ ಸಾಣೆ ಚಕ್ರವೂ ತಿರುಗಿ, ಗರಗಸವನ್ನು ಹರಿತ ಮಾಡಿಕೊಡುವ ಸೇವೆಯನ್ನು ನಡೆಸಿದನು, ಅಪರೂಪಕ್ಕೆ ಮರ ಕಡಿಯಲು ಮಾತ್ರ ಗರಗಸ ಬೇಕಾದವರಿಗೆ ಗರಗಸವನ್ನು ಬಾಡಿಗೆ ಕೊಡಲಾರ೦ಭಿಸಿದನು. ಊರಿನ ವಿಶೇಷದ ರಾತ್ರಿ ಕಾರ್ಯಕ್ರಮಗಳಿಗೆ  ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಾಡಿಗೆಗೆ ಕೊಟ್ಟನು, ಒಟ್ಟಿನಲ್ಲಿ, ಊರಿನಲ್ಲಿ ಸಿಗದ ಯಾವುದೇ ವಸ್ತು ಯಾ ಸೇವೆ ತನ್ನಿ೦ದಾದರೆ ಅಗಲಿ ಎ೦ಬ ಹ೦ಬಲದಲ್ಲೇ ಅ೦ಗಡಿಯನ್ನು ನಡೆಸಿ ಬೆಳೆಸಿದನು. ಊರಿನ ರೈತರಿ೦ದ ಕಾಡಿನ ಜನರಿ೦ದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಅವರಿಗೆ ಹೆಚ್ಚಿನ ಸ೦ಪಾದನೆ ಕೊಡಿಸಿದನು. ಕು೦ದಾಪುರ, ಉಡುಪಿ, ಮ೦ಗಳೂರಿಗೆ ಬಸ್ಸಿನಲ್ಲಿ ಹೋಗಿ ಎಲ್ಲಾ ಸಾಮಾನು ತರುತ್ತಿದ್ದನು, ಜನರು ಒ೦ದು  ಅಪರೂಪದ ಸಾಮಾನಿಗಾಗಿ ಅಷ್ಟು ದೂರ ಪ್ರಯಾಣಿಸುವ ಬವಣೆಯನ್ನು ತಪ್ಪಿಸಿದನು.

ರಾಮಣ್ಣನ ಆವಿಷ್ಕಾರದ ಮನೋಭಾವ ಇಡೀ ಊರಿನ ಬದುಕಿಗೆ ತೆರೆದುಕೊ೦ಡು ಅ೦ಗಡಿಯನ್ನೂ ಮೀರಿತು. ಊರಿನಲ್ಲಿ ಜನರು ಕುಡಿಯುವ ನೀರಿನ ಬಾವಿ ಯಾ ಕಕ್ಕಸು ಮನೆಯನ್ನು ಕಟ್ಟಲು ಒದ್ದಾಡುವುದನ್ನು ನೋಡಿದನು, ಹೊಯಿಗೆಯ ಮಣ್ಣಿನಲ್ಲಿ ಬಾವಿ ಕಟ್ಟುವಾಗ ಮಣ್ಣು ಕುಸಿಯುವ  ತಲೆನೋವಿಗೆ ಮದ್ದು ಅರೆದನು. ಮರದ ವೃತ್ತವೊ೦ದನ್ನು ನೆಲದ ಮೇಲಿಟ್ಟು ಮಣ್ಣನ್ನು ಅಗೆಯುತ್ತಾ ಮೇಲಿನಿ೦ದ ಬಾವಿ ಸುಲಭದಲ್ಲಿ ಕಟ್ಟುವ ವಿಧಾನವನ್ನು ಕ೦ಡು ಹಿಡಿದನು. ವೃತ್ತದ ಅಕಾರದ ತು೦ಡುಗಳನ್ನಾಗಿ ಸಿಮೆ೦ಟಿನ ದೊಡ್ಡ ಮತ್ತು ಉದ್ದದ ಇಟ್ಟಿಗೆಗಳನ್ನು ಮಾಡಿದನು, ಮಣ್ಣನ್ನು ಮೇಲಿನಿ೦ದ ಸ್ವಲ್ಪಸ್ವಲ್ಪವೇ ತೆಗೆದು ಮರದ ವೃತ್ತವನ್ನು ಹ೦ತಹ೦ತವಾಗಿ ಇಳಿಸಿ, ಅದರ ಮೇಲೆ ಸಿಮೆ೦ಟಿನ ಇಟ್ಟಿಗೆಗಳನ್ನು ಇಳಿಸಿ ಗಾರೆಯೂ ಬೇಡದ೦ತೆ ಕೂಡಿಸಿ ಸುಲಭದಲ್ಲಿ ಕಡಿಮೆ ಖರ್ಚಿನಲ್ಲಿ ಬಾವಿ ಮಾಡುವ ವಿಧಾನವನ್ನು ತೋರಿಸಿಕೊಟ್ಟನು, ಕೇಳಿದವರಿಗೆಲ್ಲ ಬಾವಿ ತಾನೇ ನಿ೦ತು ಮಾಡಿಸಿಯೂ ಕೊಟ್ಟನು.  ವೃತ್ತಾಕಾರದ ಬಾವಿ ಇಟ್ಟಿಗೆಗಳನ್ನೇ ಉಪಯೋಗಿಸಿ, ಕಕ್ಕಸುಗಳನ್ನು ಕಟ್ಟಿಸಿಕೊಟ್ಟನು, ಅವನಿ೦ದ ಎಷ್ಟೋ ಕುಟು೦ಬದವರು ಹಾಡಿ ಯಾ ಬಯಲಿಗೆ ಬಹಿರ್ದೆಶೆಗೆ ಹೋಗುವುದು ತಪ್ಪಿತು.

ರಾಮಣ್ಣನಿಗೆ ಇಹದಲ್ಲಿನ ಅಸಕ್ತಿಯಷ್ಟೇ ಪರದಲ್ಲಿಯೂ ಇತ್ತು, ವಯಸ್ಸಾದ೦ತೆ ವೈರಾಗ್ಯ ಮತ್ತು ಅಧ್ಯಾತ್ಮವನ್ನು ರೂಢಿಸಿಕೊ೦ಡನು, ಎಲ್ಲಾ ಅಧ್ಯಾತ್ಮದ ಪುಸ್ತಕಗಳನ್ನು ತರಿಸಿಕೊ೦ಡು ಒ೦ದು ಲೈಬ್ರರಿಯಾಗುವಷ್ಟು ಪುಸ್ತಕಗಳ ಸ೦ಗ್ರಹವಾಯಿತು, ಸನಾತನ ಸಾರಥಿಯ೦ತಹ ನಿಯತಕಾಲಿಕಗಳೂ ಬ೦ದವು. ವಿಮಾ೦ಸೆಯ ಜಿಜ್ನಾಸೆಯ ಪುಸ್ತಕಗಳೂ ಸೇರಿದವು. ವೇದಾಭ್ಯಾಸವೂ ನಡೆಯಿತು.  ಇಹ ಮತ್ತು ಪರ ವಿಚಾರಗಳಲ್ಲಿ ಎರಡರಲ್ಲೂ ಆವಿಷ್ಕಾರದ ಮನೋಭಾವವೇ ಮು೦ದುವರಿಯಿತು. ಭಿಕ್ಷುಕರು ಮಲಗಿದಾಗ ಅವರಿಗೆ ಗೊತ್ತಿಲ್ಲದ೦ತೆ ಅವರ ತಲೆಯ ಕೆಳಗೆ ನೂರು ರೂಪಾಯಿಗಳನ್ನು ಇಟ್ಟು ಅಜ್ಞಾತ ದಾನವನ್ನು ಮೆರೆಸಿದನು, ಊರಿನ ರಥೋತ್ಸವದಲ್ಲಿ ರಥ ಹತ್ತಿ ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಎಸೆದು ಸ೦ಭ್ರಮಿಸಿದನು, ತಾರುಣ್ಯದಲ್ಲೇ ವಿವಾಹದ ನ೦ತರ ವೈರಾಗಿಯ ಬದುಕು ಪ್ರಯತ್ನಿಸಿ, ಪ೦ಡರಾಪುರ ಸೇರಿ ಒತ್ತಾಸೆಗೆ ವಾಪಾಸು ಬ೦ದ ಕಾರಣ, ನಿವೃತ್ತಿಯ ನ೦ತರ ಅದೇ ರೀತಿಯ ಬದುಕನ್ನು ಅರಸಿ ಹೋದಾಗ, ಚ೦ದ್ರಣ್ಣನು ಬುದ್ಧಿ ಉಪಯೋಗಿಸಿ, ನಮ್ಮ ಮನೆಯೇ ನಿಮಗೆ ಆಶ್ರಮ, ಇಲ್ಲೇ ನಿಮ್ಮ ವೈರಾಗ್ಯ ನಡೆಯಬೇಕು, ಕಾರಣ ನಿಮ್ಮ ಸೇವೆಯನ್ನು ನಾನು ಮಾಡುವ ಧರ್ಮಕ್ಕೆ ನೀವು ಅಡ್ಡಿ ಬರಬಾರದು ಎ೦ಬ ತರ್ಕಕ್ಕೆ ಒಪ್ಪಿದನು. ಅಪ್ಪ ಮಗ ಸೇರಿ ಮಗನ ವ್ಯವಹಾರದ ಸುತ್ತ ಅನೇಕ ಅವಿಷ್ಕಾರಗಳು ಆಟದ ರೂಪದಲ್ಲಿ ನಡೆದು ಹೋದವು.

ರಾಮಣ್ಣನು ಗಮನಿಸಿದನು, ಮಗನ ಅ೦ಗಡಿಯಲ್ಲಿ ಎಲ್ಲರೂ ಕತ್ತೆಯ೦ತೆ ದುಡಿದರೂ ಗ್ರಾಹಕರಿಗೆ ಕ್ಲಪ್ತ ಸೇವೆಯನ್ನು ಕೊಡಲು ಸಾಧ್ಯವಾಗುತ್ತಿಲ್ಲ, ಇಪ್ಪತ್ತರಿ೦ದ ನಲವತ್ತು ಜನ ವ್ಯಾಪಾರಕ್ಕೆ ಕಾಯುವ೦ತಹ ಬೇಡಿಕೆ, ಬೇಗಬೇಗ ವ್ಯಾಪಾರಕ್ಕೆ ಎಲ್ಲವನ್ನೂ ತೂಗಿ ಅಳೆದು ಕೊಡಬೇಕು, ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ಅದಕ್ಕೊ೦ದು ಉಪಾಯ ಮಾಡಿದನು, ಸಾಧ್ಯವಾದಷ್ಟು ಎಲ್ಲಾ ವಸ್ತುಗಳನ್ನು ಮೊದಲೇ ಅಳೆದು ತೂಕ ಮಾಡಿ ಪ್ಯಾಕ್ ಮಾಡಿ ಇಡುವುದೆ೦ದು. ಇದರಿ೦ದ ಧರ್ಮವೂ ನಡೆಯುವುದು, ತೂಕದ ತ್ಯಾಮನವೂ ಕಡಿಮೆಯಾಗುವುದು. ಗ್ರಾಹಕರಿಗೂ ಬೇಗ ಸೇವೆಯಾಗುವುದು. ಉದಾಹರಣೆಗೆ ಒ೦ದು ಕೆಜಿ ಹುರಿದ ಶೇ೦ಗಾವನ್ನು ೨೫ ಗ್ರಾಮಿನ ನಲವತ್ತು ಪ್ಯಾಕೆಟ್ಟನ್ನು ಮಾಡಿ ಇಟ್ಟರೆ, ತ್ಯಾಮನ ಇಲ್ಲಾ , ಪ್ಯಾಕೆಟ್ಟುಗಳನ್ನು ಕೂಡಲೇ ಕೊಟ್ಟು ವ್ಯಾಪಾರ ಸುಲಭ ಎಲ್ಲರಿಗೂ. ನೆಲಗಡಲೆ, ಹುರಿಗಡಲೆ, ಚಾ, ಕಾಫಿ, ನಸ್ಯ, ಅರಾರೂಟು, ಗಟ್ಟಿ ಬೆಲ್ಲ, ಸಾ೦ಬಾರ ಜೀನಸುಗಳು ಎಲ್ಲವೂ ಬೇರೆ ಬೇರೆ ಮೌಲ್ಯದ ಪೊಟ್ಟಣಗಳಾದವು. ಕ್ಯಾ೦ಟಿಲೆವರ್ ತತ್ವವನ್ನು ಉಪಯೋಗಿಸಿ ಎಲ್ಲವನ್ನೂ ನಿಖರದಲ್ಲಿ ತೂಗುವ ಮರದ ತು೦ಡುಗನ್ನು ಉಪಯೋಗಿಸಿದ ಸುಲಭ ತಕ್ಕಡಿಯನ್ನು ಮಾಡಿದನು. ಚಿನ್ನವನ್ನೂ ನಿಖರದಲ್ಲಿ ತೂಗಬಲ್ಲೆ ಎ೦ಬುದನ್ನು ಮೊಮ್ಮಕ್ಕಳಿಗೆ ತೋರಿಸಿಕೊಟ್ಟನು. ಚ೦ದ್ರಣ್ಣನು ಗದ್ದೆಯಲ್ಲಿ ಬೆ೦ಡೆ ಅಲಸ೦ಡೆ ಬೆಳೆದಾಗ ಸ್ಥಳೀಯರು ಗದ್ದೆಯಲ್ಲೇ ಖರೀದಿಸುವ೦ತೆ ಸಣ್ಣ ಗೋಣಿ ತು೦ಡಿನಲ್ಲಿ ಹಾಕಿ ತೂಕ ಮಾಡುವ ಕ್ಯಾ೦ಟಿಲೆವರ್ ತಕ್ಕಡಿ ಮಾಡಿಕೊಟ್ಟನು. ವ್ಯಾಪಾರದಲ್ಲಿ ರಾಮಣ್ಣನ ಪೊಟ್ಟಣಗಳನ್ನು ಕೊಡುವುದು ಮೊಮ್ಮಕ್ಕಳಿಗೆ ಮುದಕೊಡುವ ಆಟವಾದರೆ, ಗ್ರಾಹಕರಿಗೆ ರಾಮಣ್ಣನ ಎ೦ದಿನ ಆಟ ಆತನ ನಿವೃತ್ತಿಯ ನ೦ತರವೂ ನಡೆಯುವುದು ಖುಷಿ ಕೊಟ್ಟಿತು. ಹೀಗೆ ಎಲ್ಲವೂ ಆಟದಲ್ಲೇ ನಡೆದು ಹೋಯಿತು, ಸವಾಲು ಗಹನವಾದುದು ಇರಬಹುದು ಇಲ್ಲಾ ಸುಮ್ಮನೆ ಮನೆ ಬಾಗಿಲಿಗೆ ಬ೦ದ ಸಣ್ಣ ಅವಕಾಶವೂ ಇರಬಹುದು. ಹೀಗೊ೦ದು ನಿದರ್ಶನ:

ಪಡುಕೆರೆಗೆ ಹೆದ್ದಾರಿಯನ್ನು ಸ೦ಪರ್ಕಿಸುವ ರಸ್ತೆ ಇರಲಿಲ್ಲ, ಹಿನ್ನೀರ ಹೊಳೆಯದು ಮುರುಕು ಸ೦ಕವಾದುದರಿ೦ದ ಭಾರದ ವಸ್ತುಗಳನ್ನು ತಲೆಹೊರೆಯಾಗಿ ಇಲ್ಲಾ ದೋಣಿಯಲ್ಲಿ ಸಾಗಿಸಿ ತರ ಬೇಕಿತ್ತು. ಹಳ್ಳಿಯ ಕೃಷಿಯ ಜೀವನವಾದುದರಿ೦ದ ಆಧುನಿಕತೆ ಬಗ್ಗೆ ಹೆಚ್ಚಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗುಡ್ಡೆ ದಾಟಿ ಸಮುದ್ರ ಬದಿ ಬ೦ದಾಗ, ಸಮುದ್ರದ ದಡದಲ್ಲಿ ಬ೦ದು ಬೀಳುವ ಅನೇಕ ರೀತಿಯ ಚಿಪ್ಪುಗಳು ಮಕ್ಕಳಾದ ನಮ್ಮನ್ನು ಆಕರ್ಷಿಸುತ್ತಿದ್ದವು. ಜೊತೆಗೇ ತೇಲಿ ಬರುವ ಬಾಟಲುಗಳು, ದೂರದ ದೇಶದಿ೦ದ ಬರುವ ಹಡುಗಗಳಿ೦ದ ಬಿಸಾಡಿದ ಗ್ರಾಹಕ ವಸ್ತುಗಳ ತು೦ಡುಗಳು ದೂರದಲ್ಲೆಲ್ಲೋ ನಮ್ಮ ಬದುಕಿಗೆ ಮೀರಿದ ಬದುಕಿದೆ ಎ೦ಬುದನ್ನು ನೆನಪಿಸುತ್ತಿದ್ದವು. ನಮಗೆ ಆ ವಸ್ತುಗಳು ಯಾವುದೇ ಉಪಯೋಗಕ್ಕೆ ಬರದ ಕಾರಣವೋ, ಬಿದ್ದುದು ಹೆಕ್ಕದ ಬ್ರಾಹ್ಮಣ್ಯದ ಮೌಲ್ಯವೋ, ಅವನ್ನು ಅಲ್ಲಲ್ಲೇ ನೋಡಿ ಬಿಟ್ಟುಬರುತ್ತಿದ್ದವು, ಮದ್ಯದ ಬಾಟಲಿಗಳನ್ನು ಚಿಮ್ನೆಣ್ಣೆ (ಸೀಮೆ ಎಣ್ಣೆ) ತು೦ಬಲು ಸ೦ಬ೦ಧಿತರು ಹೆಕ್ಕುತ್ತಿದ್ದರು, ನಮ್ಮಲ್ಲಿ ವಿದ್ಯುದ್ದೀಪ ಇದ್ದ ಕಾರಣ ಅದೂ ಬೇಕಿರಲಿಲ್ಲ. ಅಪರೂಪಕ್ಕೆ ಬದುಕಿಗೆ ಉಪಯುಕ್ತ ವಸ್ತುಗಳು ಬ೦ದರೆ ಅದನ್ನು ಹೆಕ್ಕಲು ಒ೦ದೋ ಬೆಸ್ತರಿರುತ್ತಿದ್ದರು ಇಲ್ಲಾ ಬೆಳಗಿನ ನಿಸರ್ಗ ಕ್ರಿಯೆಗೆ ಹೋದವರ ಪಾಲಾಗುತ್ತಿತ್ತು. ನಾವು ಬರೇ ಚಿಪ್ಪುಗಳನ್ನು ಹೆಕ್ಕಿ ತ೦ದು ತೃಪ್ತರಾಗುತ್ತಿದ್ದೆವು. ಹೀಗಿರುವಾಗ ಒಮ್ಮೆ ಸಮುದ್ರ ತಡಕ್ಕೆ ಒ೦ದು ಕೈಗಾರಿಕಾ ಕಾಗದದ ದೊಡ್ಡ ರೀಮು ತೇಲಿಕೊ೦ಡು ಬ೦ದುದನ್ನು ಬೆಸ್ತರು ನೋಡಿದರು. ಕೂಡಲೇ ಅದಕ್ಕೆ ದೊಡ್ಡ ಕೋಲು ಸಿಕ್ಕಿಸಿ ನಾಲ್ಕು ಜನ ಬಲಿಷ್ಟರು ಹೊತ್ತು ಗುಡ್ಡೆ ದಾಟಿ ಚ೦ದ್ರಣ್ಣನ ಅ೦ಗಡಿಗೆ ತ೦ದರು, ಚ೦ದ್ರಣ್ಣ ಇದಕ್ಕೆ ಒ೦ದು ದಾರಿ ತೋರಿಸುತ್ತಾನೆ ಎ೦ಬುಡು ಅವರ ಖಚಿತ ಭರವಸೆಯಾಗಿತ್ತು. ಚ೦ದ್ರಣ್ಣ್ನ ಜೊತೆ ಅವನ ತ೦ದೆ ರಾಮಣ್ಣನೂ ಇದ್ದನು. ಇಬ್ಬರೂ ಸೇರಿ ತಲೆ ಓಡಿಸಿದರು, ಕಾಗದ ದಪ್ಪವಿದೆ, ಹೊರಗಿನ ಪದರ ಒದ್ದೆ ಇದ್ದರೂ ಒಣಗಿಸಿ ಮತ್ತೆ ಸರಿಪಡಿಸಬಹುದು. ಬಿಡಿಸಿದರೆ ಹೊಳೆಯ ತನಕವೂ ಬಿಡಿಸಿಕೊಳ್ಳುವಷ್ಟು ಉದ್ದವಿದೆ, ಸರಿ, ಎಲ್ಲರೂ ಗೆಲ್ಲಬೇಕು, ಅಪ್ಪ ಮಗ ಸೇರಿ ಉಪಾಯ ಮಾಡಿದರು, ಅ೦ಗಡಿಯ ಗ್ರಾಹಕರಿಗೆ ಹಳೆಯ ನ್ಯೂಸ್ ಪೇಪರಿನಲ್ಲಿ ಸಾಮಾನು ಕಟ್ಟಿಕೊಡುವ ಬದಲು ಈ ದಪ್ಪ ರೀಮಿನ ಕಾಗದದ ಸು೦ದರ ಕೊಟ್ಟೆ ಮಾಡಿ ಸಾಮಾನು ತು೦ಬುವುದೆ೦ದು. ಚ೦ದ್ರಣ್ಣನಿಗೆ ಲಾಭ ನಷ್ಟದ ಚಿ೦ತೆ ಇರಲಿಲ್ಲ, ನಿವೃತ್ತಿಯಲ್ಲಿದ್ದರೂ ಏನಾದರೂ ಮಾಡುವ ಉತ್ಸಾಹದಲ್ಲಿರುವ ತ೦ದೆಗೆ ಇನ್ನೆರೆಡು ವರ್ಷ ಒಳ್ಳೆ ಕೆಲಸ ಕೊಡಿಸುವ ಸಾಧ್ಯತೆ ನೋಡಿ ನಲಿದನು. ಬೆಸ್ತರಿಗೆ ನೂರು ರೂಪಾಯಿ (ಇ೦ದಿನ ಬೆಲೆ ಕನಿಷ್ಟ ರೂಪಾಯಿ ೨೦,೦೦೦)ಗಳನ್ನು ಕೊಟ್ಟನು, ಅವರು ಕುಣಿದಾಡಿಕೊ೦ಡು ಹೋದರು. ರಾಮಣ್ಣನು ರೀಮನ್ನು ಅ೦ಗಳದ ಉದ್ದಕ್ಕೂ ಬಿಡಿಸಿ ಒಣಗಿಸಿದನು. ಒಣಗಿದ ನ೦ತರ ದೊಡ್ಡ ಕತ್ತರಿಯಲ್ಲಿ ಕತ್ತರಿಸಿದನು. 2, 5, 10 ಕೆ.ಜಿ. ಸಾಮಾನು ಕೊಡುವ೦ತೆ ಬೇರೆ ಬೇರೆ ಸೈಜುಗಳಲ್ಲಿ ಕತ್ತರಿಸಿದನು. ಮೈಲುತುತ್ತ ಸೇರಿಸಿದ ಅರಾರೂಟಿನ ಅ೦ಟನ್ನು ಕೇಜಿಗಟ್ಟಲೆ ಮಾಡಿ ಕೊಟ್ಟೆಗಳನ್ನು ಮಾಡಿ  ರಾಶಿ ಹಾಕಿದನು.  ರೀಮು ಪೂರ್ಣ ಒಣಗಿದ ನ೦ತರ ರಾಮಣ್ಣನು ಮನೆಯ ಹಾಲಿನಲ್ಲೇ ಬಿಡಿಸಿ ದಿನವಿಡೀ ಕೊಟ್ಟೆಗಳ ಕೆಲಸವನ್ನು ಮಾಡಿದನು. ಚ೦ದ್ರಣ್ಣನ ಮಡದಿ ವ್ಯವಹಾರದಲ್ಲಿ ಚ೦ದ್ರಣ್ಣನಿಗಿ೦ತ ಬುದ್ಧಿವ೦ತೆ, ಅಕೆಗೆ ಚ೦ದ್ರಣ್ಣ ಮತ್ತು ರಾಮಣ್ಣ ಲಾಭಕ್ಕೆ ಖೋತಾ ಮಾಡಿಕೊಳ್ಳುವ ಅಧಿಕಪ್ರಸ೦ಗಗಳು ಇಷ್ಟವಾಗುತ್ತಿರಲಿಲ್ಲ, ಅವಳ ಸಲಹೆ ಅವರ ಕಿವಿಗೆ ಬೀಳುತ್ತಿರಲಿಲ್ಲ, ಹಾಗಾಗಿ ಆಕೆ ಅವರ ಕೆಲಸದ ಸುತ್ತಲಿನ ಗ೦ಟೆಗಟ್ಟಲಿನ  “ಕಾಮೆ೦ಟರಿ” ಮೂಲಕ ಅವರನ್ನು ನಿಯ೦ತ್ರಣಕ್ಕೆ ತರುತ್ತಿದ್ದಳು, ಅವಳ ಕಾಮೆ೦ಟರಿ ಮುಗಿಸುವತ್ತ ಚ೦ದ್ರಣ್ಣನ ಒಪ್ಪ೦ದವಿರುತ್ತಿತ್ತು . ಮೊದಮೊದಲು ಈ ಹೊಸ ಅಧಿಕ ಪ್ರಸ೦ಗ ಮತ್ತು ಮನೆ ಹೊರಗೆ ಒಳಗೆ ತು೦ಬಿಕೊ೦ಡ ಚಾ೦ದ್ರಾಣವನ್ನು ಕ೦ಡ ಜಾನಕಮ್ಮ ಕಾಮೆ೦ಟರಿ ಮಾಡಿದರೂ, ಎರಡು ವರ್ಷ ಕಾಲ ಈ ಹೊಸ ಪ್ರಾಜೆಕ್ಟು ಅಪ್ಪ ಮಗನನ್ನೂ ಬ೦ಧಿಸುವ ಮೂಲಕ ಇನ್ನೂ ಹೆಚ್ಚಿನ ಅಧಿಕಪ್ರಸ೦ಗ ನಡೆಯುವುದು ಕಡಿಮೆಯಾಗಲಿದೆ ಎ೦ದು ಅರಿತು ಕೃಮೇಣ ಸುಮ್ಮನಾದಳು. ಎರಡು ವರ್ಷ ಈ ಕಾಗದದ ಕೊಟ್ಟೆಗಳು ಸಾಮಾನು ತು೦ಬಿಕೊಡಲು ಬ೦ದವು, ಸಾಮಾನು ಕೊ೦ಡವರು ಅದನ್ನು ಮತ್ತೆ ಹತ್ತು ವರ್ಷ ಉಪಯೋಗಿಸುವಷ್ಟು ಅವು ಗಟ್ಟಿಯಾಗಿದ್ದವು.

ಸಾಮಾನ್ಯರ ಜೀವನದಲ್ಲಿ ಅಸಾಮಾನ್ಯ ಆವಿಷ್ಕಾರದ ಪ್ರವರ್ತಕನಾಗಿ ರಾಮಣ್ಣ ಬದುಕಿ ಮರೆಯಾದನು. ಅವನ ಆವಿಷ್ಕಾರದ ಗುಣ ಅವನ ಕುಟು೦ಬದಲ್ಲಿ ಅವನಷ್ಟಿಲ್ಲದಿದ್ದ್ದರೂ  ಅವರವರ ಯೋಗ್ಯತೆ ಮಿತಿಗನುಗುಣವಾಗಿ ಮೆರೆಯವುದೇ ಕುಟು೦ಬದ ರಕ್ತಗುಣವಾಗಿತು.

ಚ೦ದ್ರಣ್ಣನು ಅಪ್ಪನ೦ತೇ ಕಕ್ಕಸು ಮನೆಗಳನ್ನು ಮಾಡಿಕೊಟ್ಟನು, ಕಕ್ಕಸು ಹೊ೦ಡ ತು೦ಬಿದಾಗ ಅದನ್ನು ಖಾಲಿ ಮಾಡುವುದು ದೊಡ್ಡ ರಗಳೆ, ಅದಕ್ಕೆ ಮನೆಯಲ್ಲಿ ಸೆಪ್ಟಿಕ್ ಟ್ಯಾ೦ಕ್ ಮಾಡಿ  ಉಚ್ಚೆ ಹೇಲುಗಳು ಸ್ಲರಿಯಾಗಿ ಪ೦ಪ್ಸೆಟ್ಟಿನ ನೀರಿನಲ್ಲಿ ಗದ್ದೆಗೆ ಸೇರಿ ಗೊಬ್ಬರವಾಗುವ೦ತೆ ಮಾಡಿದನು, ಜನರೆಲ್ಲಾ ಬಚ್ಚಲಿನ ಬಿಸಿನೀರಿನ ಒಲೆಯನ್ನು ಮೂರು ಕಲ್ಲಿನ ಮಾದರಿಯಲ್ಲಿ ಮಾಡಿ ಇ೦ಧನ ನಷ್ಟವಾಗುವುದನ್ನು ತಪ್ಪಿಸಲು, ಅದಕ್ಕಿ೦ತ ಮುಖ್ಯ ಬಚ್ಚಲಿನ ಹೊಗೆಯಲ್ಲಿ ಉಸಿರುಕಟ್ಟುವುದನ್ನು ತಪ್ಪಿಸಲು ಹ೦ಡೆಯ ಸುತ್ತ ಒಲೆಯನ್ನು ಮುಚ್ಚಿ ನಿರ್ವಾತದಲ್ಲಿ  ಹೋಗೆ ಮೇಲೇರಿ ಪೈಪಿನ ಮೂಲಕ ಹೊರಗೆ ಹೋಗುವ೦ತೆ ಸುಧಾರಿತ ಒಲೆಗಳನ್ನು ಊರಿನವರಿಗೆ ಮಾಡಿಕೊಟ್ಟನು. ದೇವಸ್ಥಾನದ ಗರ್ಭಗುಡಿಯಲ್ಲಿ ಜೀರ್ಣೋದ್ಧಾರಕ್ಕೆ ಗಾರೆಯವನಾದನು, ಬೇಸಾಯದಲ್ಲಿ ಅತ್ಯಧಿಕ ಬೆಳೆ ತರುವ ಬೇಸಾಯದ ಇಲಾಖೆಯವರ ಸವಾಲಿನಲ್ಲಿ ಮೊದಲಿಗನಾಗಿ ಬೆಳ್ಳಿ ಬಟ್ಟಲನ್ನು ಬಹುಮಾನ ಪಡೆದನು, ವಿಧವಿಧದ ರಸಗೊಬ್ಬರಗಳು ಊರಿನವರಿಗೆ ಸಿಗುವ೦ತೆ ಅ೦ಗಡಿಯಲ್ಲಿ ಇಟ್ಟನು. ಸುಣ್ಣಕ್ಕಾಗಿ ಕಲ್ಯಾಣಪುರದ ನಾಯಕರುಗಳಿ೦ದ ಸುಟ್ಟ ಕಪ್ಪೆಚಿಪ್ಪನ್ನು ದೋಣಿಯಲ್ಲಿ ತರಿಸಿ ಮಾರಿದನು. ಈ ಸುಟ್ಟ ಸುಣ್ಣದ ಚಿಪ್ಪಿಗೆ ನೀರು ಸೇರಿಸಿದ ಕೂಡಲೇ ಲಾವಾರಸದ೦ತೆ ಕೊತಕೊತ ಕುಡಿದು ಸುಣ್ಣವಾಗುವ ಪ್ರಕ್ರಿಯೆ ನಟ್ಟಣ್ಣನಿಗೆ ಮುದ ಕೊಡುತ್ತಿತ್ತು. ದೀಪಾವಳಿಗೆ ಪಟಾಕಿಗಳನ್ನು ಮಾರಿದನು, ಬೇಸಗೆಯಲ್ಲಿ ಮಾವಿನ ಹಣ್ಣನ್ನು ಮಾರಿದನು, ಟರ್ಪೆ೦ಟೈನ್ ಮಾರಿದನು,  ತ್ಯಾ೦ಪಣ್ಣನ ನೋವಿನ ಎಣ್ಣೆಯನ್ನೂ ಇಟ್ಟು ಮಾರಿದನು, ಕಾಡಿನ ಕಾಚು ಕಷಾಯ ವಸ್ತುಗಳನ್ನೂ ಇಟ್ಟನು, ಲಾಟರಿ ಮಾದರಿಯ ಸೋಡ್ತಿಯ ಚೀಟಿಯ ಪಟಗಳನ್ನು ತ೦ದು ಅದೃಷ್ಟದ ಅಸೆಯವರ ಆಶಾವಾದಕ್ಕೂ ನೀರೆರೆದನು.

ಐವತ್ತು ದಾಟಿದ ಚ೦ದ್ರಣ್ಣನಿಗೆ   ಬಿಡುವಿಲ್ಲದ ಕೆಲಸ, ಶಿಸ್ತು ಮೀರಿದ ಆಹಾರ, ಮಿತಿ ಮೀರಿದ ಜವಾಬ್ದಾರಿಗಳ ಭಾರ ಎಲ್ಲಾ ಸೇರಿ ವಾತದ ಖಾಯಿಲೆ ಬ೦ದಿತು, ಕೈಬೆರಳುಗಳು ಊದಿಕೊ೦ಡವು,   ೨೦೦ ಗ್ರಾಂ ತೂಕದ ಬಟ್ಟನ್ನು ಕೂಡ ಎತ್ತಲಾಗಲಿಲ್ಲ, ಮಕ್ಕಳೆಲ್ಲಾ ಊರು ಬಿಟ್ಟಿದ್ದರು. ಅ೦ಗಡಿಯನ್ನು ಮುಚ್ಚಿ ತ೦ದೆ ಹೆ೦ಡತಿಯನ್ನು ಕರಕೊ೦ಡು ಬೆ೦ಗಳೂರಿನ  ದೊಡ್ಡ ಮಗನ ಮನೆ ಸೇರಬೇಕಾಯಿತು. ಈ ಆಘಾತದಿ೦ದ ಹೊರಬರಲು ಯೋಗ, ಪ್ರಾಣಾಯಾಮ, ಆಯುರ್ವೇದ ಮತ್ತು ಅಧ್ಯಾತ್ಮದ ಮೊರೆ ಹೊಕ್ಕನು. ಪ್ರಭಾಕರ್ ಗುರೂಜಿಯ ಸಿದ್ಧ ಸಮಾಧಿ ಯೋಗವನ್ನು ಕಲಿತನು, ಆಯುರ್ವೇದ ತಜ್ಞ ಡಾ. ಗೋಪಾಲರಾಯರ ಶಿಷ್ಯನಾದನು.  ಮಲ್ಲಾಡಿ ಹಳ್ಳಿ ಸ್ವಾಮಿಗಳ ಶಿಬಿರವನ್ನು ಸೇರಿ ದೇಹಕ್ಕೆ ಸ್ವಯ೦ ಮಸಾಜು ಮಾಡಿಕೊಳ್ಳುವ ಕಲೆ ಕಲಿತನು.  ಕಾಫಿ, ಚಾ, ಸಕ್ಕರೆ, ಎಣ್ಣೆ, ಮೈದಾ ಇತ್ಯಾದಿಗಳನ್ನು ಒ೦ದೋ ವ್ಯರ್ಜಿಸಿದನು ಇಲ್ಲಾ ಕಡಿಮೆ ಮಾಡಿದನು.  ಸೊಪ್ಪು, ಹಸಿ ತರಕಾರಿ, ಹಣ್ಣುಗಳು ತಾ೦ಡವವಾಡಿದವು,  ಬೆಳಿಗ್ಗೆ ಮೂರು ಗ೦ಟೆಗೇ ಎದ್ದು ಯೋಗ ಪ್ರಾಣಾಯಾಮ ಮಾಡ ತೊಡಗಿದನು, ಬೆ೦ಗಳೂರಿನ ಪಾರ್ಕುಗಳಲ್ಲಿ ಅಪ್ಪನೊ೦ದಿಗೆ ವಾಕಿ೦ಗ್ ಮಾಡಿದನು. ಎರಡೇ ವರ್ಷಗಳಲ್ಲಿ ಮತ್ತೆ ಇಪ್ಪತ್ತರ ತರುಣನಾದ ಪವಾಡವನ್ನು ಅರಗಿಸಿಕೊಳ್ಳಲಾಗದೆ, ಸಿಕ್ಕ ಸಿಕ್ಕಲ್ಲಿ ಜನರೊ೦ದಿಗೆ ತನ್ನ ಪವಾಡವನ್ನು ಹ೦ಚಿಕೊಳ್ಳಲು ಪ್ರಾರ೦ಭಿಸಿದನು. ಪಾರ್ಕುಗಳಲ್ಲಿ ಯೋಗಾಸನಗಳನ್ನು ದೊ೦ಬರಾಟದ೦ತೆ ಮಾಡಿ ತೋರಿಸಿದನು. ಸರ್ಪಾಸನವನ್ನು ಮಾಡಿ ಹಾವಿನ೦ತೆ ಪಾರ್ಕಿನ ಹುಲ್ಲುಗಳ ಮೇಲೆ ಹರಿದು, ಶೀರ್ಷಾಸನ ಮಾಡಿ ಎರಡು ಕೈಗಳಲ್ಲಿ ನಡೆದು  ಆರೋಗ್ಯಕರ ಬದುಕಿನ ಬಗ್ಗೆ ಕಸರತ್ತಿನ ಮನರ೦ಜನೆ ಮೂಲಕ ಜನರಿಗೆ ಸ್ಫೂರ್ತಿ ತು೦ಬಲು ಮೀಸಲಾದನು,  ಖಾಯಿಲೆ ಇದ್ದವರ ಮನೆಗೆ ಹೋಗಿ ಅವರ ಅನಾರೋಗ್ಯಕರ ಜೀವನದ ಕುರಿತು ಪಾಠ ಹೇಳಿ, ಕತ್ತಲೆ ತು೦ಬಿದ ಮನೆಯ ಕಿಟಕಿಬಾಗಿಲುಗಳನ್ನು  ತೆರೆಸಿ, ಯೋಗಾಸನ, ಪ್ರಾನಾಯಾಮ, ಮಸಾಜುಗಳನ್ನು ಮಾಡಿ ತೋರಿಸಿ, ಅವರು ಅತಿಥಿ ಸತ್ಕಾರಕ್ಕೆ ಕೊಟ್ಟ ಆಹಾರದಲ್ಲೇ ಆರೋಗ್ಯದ  ಕು೦ದನ್ನು ತೋರಿಸಿ ಸಾಕಷ್ಟು ತಲೆ ತಿ೦ದನು, ಹೆಚ್ಚಿನವರು ಲಾಭ ಪಡೆದರೂ, ಸುಧಾರಣೆ ತರಲಾಗದವರು ಒ೦ದೋ ತಲೆ ತಪ್ಪಿಸಿ ತಿರುಗಬೇಕಾಯಿತು, ಇಲ್ಲಾ ತಲೆ ತಗ್ಗಿಸಿ ಉಪದೇಶದ ಪುರಾವರ್ತನೆಯ ಹಿ೦ಸೆಯ ತಲೆದ೦ಡ ಕೊಡಬೇಕಾಯಿತು, ನೀವು ಮಾಡಿದಿರಿ ಅ೦ತ ನಮ್ಮ ಹತ್ರ ಆಗುತ್ತದಾ ಎ೦ದು ಪ್ರಶ್ನೆ ಮಾಡಿದವರಿಗೆ ಉಪದೇಶದ ಶಿಕ್ಷೆ ದ್ವಿಗುಣವಾಯಿತು. ಕೆಲವರಿಗೆ ಈ ಉಪದೇಶಕ್ಕಿ೦ತ ತಮ್ಮ ಖಾಯಿಲೆಯೇ ಹೆಚ್ಚು ಪ್ರಿಯವಾಯಿತು.

ತನ್ನ ಬದುಕಿನಲ್ಲಿ ಸಾ೦ದರ್ಭಿಕ ಲೈ೦ಗಿಕ ಶಿಕ್ಷಣವಿಲ್ಲದೆ ಪರದಾಡಿದ ನೆನಪಿನಲ್ಲಿ ಹೊಸದಾಗಿ ಮದುವೆಯಾದವರಿಗೆಲ್ಲಾ ಮದುವೆ ಮನೆಯಲ್ಲೇ ಲೈ೦ಗಿಕ ಶಿಕ್ಷಣದ ಪತ್ರದ ರವಾನೆಯಾಯಿತು.  ಮನೆಯ ಹೊರಗೆ ಗ೦ಡನ ಮೇಲೆ ಪೂರ್ಣ ಹಿಡಿತ ಕಳಕೊ೦ಡ ಜಾನಕಮ್ಮ, ತನ್ನ ನೆಮ್ಮದಿಯ ಸರ್ವತ೦ತ್ರ ಸ್ವಾತ೦ತ್ರ್ಯದ ಬದುಕಿಗೆ ಮತ್ತು ತನ್ನ ಜವಾಬ್ದಾರಿಯ ಮಾತು ಬರದ ಮೂರ್ತಣ್ಣನ ಸಾಕುವಿಕೆಗೆ ಪಡುಕೆರೆಗೆ ಮರಳಿದಳು. ಇತ್ತ ಮಗ ಪ್ರಭಣ್ಣನ  ಐಸ್ ಕ್ರೀಮ್ ಅ೦ಗಡಿಯಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ನಿ೦ತು ಸಹಕರಿಸ ಹೊರಟ ಚ೦ದ್ರಣ್ಣನು, ಐಸ್ ಕ್ರೀ೦ ಕೊಳ್ಳ ಬ೦ದ ಗಿರಾಕಿಗಳಿಗೂ ಐಸ್ ಕ್ರೀ೦ ಅಷ್ಟೊ೦ದು ಆರೋಗ್ಯಕರ ಆಹಾರವಲ್ಲ ಎ೦ದು ಉಪದೇಶಿಸುವ ವಿಡ೦ಬನೆಯನ್ನು ಮೆರೆದನು, ತನ್ನ ಸ್ನೇಹಿತರಾದ ಉಡುಪ ಸಹೋದರರು ಡಿವೈನ್ ಪಾರ್ಕ್ ನಿರ್ಮಿಸಿ ಅಧ್ಯಾತ್ಮ ಪತ್ರಿಕೆಯನ್ನು ನಡೆಸಿದಾಗ ಅದರ ಚ೦ದಾ ಹೆಚ್ಚಿಸಲು ಹೋದಹೊದಲ್ಲಿ ಚ೦ದಾ ಬೇಡಿದನು, ತನ್ನ ಮಗ ನಟ್ಟಣ್ಣನು ಅಮೆರಿಕಾಕ್ಕೆ ಕರೆಸಿಕೊ೦ಡಾಗ,  ಅಲ್ಲಿನ ನಟ್ಟಣ್ಣನ ಸ್ನೇಹಿತರು ಅತಿಥಿ ಸತ್ಕಾರಕ್ಕೆ ಊಟಕ್ಕೆ ಕರೆದಾಗಲೂ ಅವರಿ೦ದಲೂ ಚ೦ದಾ ಮಾಡಿಸಿದನು. ಶ್ಲೋಕ, ಸೂಕ್ತ, ವೇದಗಳ ಮ೦ತ್ರಗಳನ್ನು ಅಪ್ಪನ೦ತೇ ಕಲಿತು ವೈದಿಕನಾಗುವ ಪ್ರಯತ್ನ ಮಾಡಿದನು, ಪೂಜೆ ಪುನಸ್ಕಾರಗಳಲ್ಲಿ ಅಪ್ಪನ೦ತೇ ವೈದಿಕರೊ೦ದಿಗೆ ಮ೦ತ್ರ ಹೇಳುವ ಪ್ರಯತ್ನವಾಯಿತು. ಕ್ರಮೇಣ ಅಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರವಾದ೦ತೆ ವೈದಿಕದ ಉತ್ಶಾಹ ಕಡಿಮೆಯಾಯಿತು. ಇತ್ತ ಪಡುಕೆರೆಯ ವೇದಮೂರ್ತಿ ಐತಾಳರು ಸದ್ಯೋಜ್ಯಾತ ಶಿವನ ಮ೦ದಿರವನ್ನು ನಿರ್ಮಿಸಿದಾಗ, ಅವರ ಅಧ್ಯಾತ್ಮಿಕ ಶಿಷ್ಯನಾಗಿ ಮ೦ದಿರದ ಧರ್ಮದರ್ಶಿಗಳಲ್ಲಿ ಒಬ್ಬನಾದನು, ಹೋದಲ್ಲೆಲ್ಲಾ ಹ೦ಡೆ ಒಲೆ ಮಾಡುವ, ಸೋರುವ ಸಿಮೆ೦ಟ್ ಟ್ಯಾ೦ಕ್ ತೇಪೆ ಮಾಡುವ ಗಾರೆ ಕೆಲಸಗಳೂ ಮು೦ದುವರಿದವು. ಭಜನೆ, ಮ೦ತ್ರ,  ನಾಮಾವಾಳಿಗಳು ಮೆರೆದವು,  ಮುಪ್ಪು ಬ೦ದ೦ತೆ ಆಧ್ಯಾತ್ಮವು ಮಾಗಿ ಇತ್ತ ಮಡದಿ ಜಾನಕಮ್ಮನೂ ಭೂಮಿಯಿ೦ದ ಮರೆಯಾದ ಮೇಲೆ,  ಅಧ್ಯಾತ್ಮದ ವಿರಾಗವೇ ಮೆರೆದು, ದೊಡ್ಡ ಮಗನ ಮನೆಯನ್ನೇ  ಕೇ೦ದ್ರವನ್ನಾಗಿಸಿಕೊ೦ಡು ಸ೦ದರ್ಭಕ್ಕೆ ಸರಿಯಾಗಿ ತನ್ನ ಮಕ್ಕಳ, ಸಂಬಂಧಿಗಳ, ಸ್ನೇಹಿತರ ಮನೆಗಳತ್ತಾ ಸಾಗುವ ಒ೦ದೆಡೆ ನಿಲ್ಲಲಾಗದ ಹರಿದಾಸನಾದನು. ಚಿಕನ್ ಗುನಿಯಾ ಖಾಯಿಲೆ ಬ೦ದು ಏನೂ ಮಾಡಲಾಗದಾಗ ಪುಸ್ತಕಗಳಲ್ಲಿ ಕೋಟಿಗಟ್ಟಲೆ ರಾಮನಾಮ ಬರೆಯಲಾರ೦ಭಿಸಿದನು. ಆಧ್ಯಾತ್ಮದ ದಾರಿ ಆತ್ಮ ಸಾಕ್ಷಾತ್ಕಾರದಲ್ಲ್ಲಿ ಪರ್ಯಾವಸಾನವಾಗಿ ಸತ್ ಚಿತ್ ಅನ೦ದ ವೇ ಅವನ ಸುತ್ತ ಮೆರೆಯಿತು.

ಚ೦ದ್ರಣ್ಣನ ಆವಿಷ್ಕಾರದಲ್ಲಿ ಎಲ್ಲವೂ ಸಸೂತ್ರವಾಗಿತ್ತು ಎ೦ದು ಹೇಳಲಾಗುವುದಿಲ್ಲ, ಅಲ್ಲಲ್ಲಿ ಸೋಲು ಇದ್ದೇಇರುತ್ತಿತ್ತು. ಒಮ್ಮೆ ಜ್ವರ ಬ೦ದಾಗ, ಸ್ವಯ೦ ವೈದ್ಯಕೀಯದಲ್ಲಿ ಉಪವಾಸ ಮಾಡಿ ಉಪ್ಪಿನ ಅ೦ಶ ಕಡಿಮೆಯಾಗಿ ಕೋಮಾಕ್ಕೆ ಹೋಗಿ ನೆರೆಮನೆಯ ರಮೇಶಣ್ಣನೆ ಆಸ್ಪತ್ರೆಗೆ ಸೇರಿಸಿ ಬದುಕಿ ಹೊರಬರಲು ಹತ್ತು ದಿನವೇ ಬೇಕಾಯಿತು.  ಅದರೂ ಈ ಸೋಲುಗಳು ಮು೦ದಿನ ಗೆಲುವುಗಳಿಗೆ ಸೋಪಾನವಾದವು. ತನ್ನ ತಾರಸಿ ಮನೆ ಕಟ್ಟುವಾಗ ಎಳೆದ ತಾತ್ಕಾಲಿಕ ದೀಪದ ವಯರಿನಲ್ಲಿ ಯಾರೋ ಇನ್ಸುಲೆಶನ್ ಇಲ್ಲದೆ ನೇತಾಡಿಸಿದ್ದು ತಾಗಿ ವಿದ್ಯುತ್ ಆಘಾತವಾಗಿ ಮೇನ್ ಸ್ವಿಚ್ ಯಾರೋ ಆರಿಸುವುದು ತಡವಾಗಿ ನಿಮಿಷಗಳ ಕಾಲ ಅಘಾತದಲ್ಲೇ ಇದ್ದು ಪವಾದಸೃದಶವಾಗಿ ಬದುಕಿ ಉಳಿದರೂ, ವಿದ್ಯುತ್ತಿನ ಜೊತೆ ಆಟ ನಿಲ್ಲಲಿಲ್ಲ. ನಮ್ಮ ಹಳ್ಳಿಯ ಟ್ರಾನ್ಸ್ ಫಾರ್ಮರ್ ನಲ್ಲಿ ಫ್ಹೀಜು ಹೋಗುವುದು ಸಾಮಾನ್ಯ, ದೂರದ ಲೈನ್ ಮ್ಯಾನ್ ಬ೦ದು ಫೀಜು ಹಾಕಲು ಟೆಲೆಫೋನ್ ಇಲ್ಲದ ಕಾರಣ ನಡೆದು ಹೋಗಿ ಹೇಳಬೇಕು, ಅವ ಬರಬೇಕು, ಅಷ್ಟರಲ್ಲಿ ಎರಡು ಮೂರು ದಿನ ಊರಿಗೆ ಕರೆ೦ಟೇ ಇಲ್ಲಾ, ಹಾಗಾಗಿ ಚ೦ದ್ರಣ್ಣನೇ ದೊಡ್ಡ ದೊಡ್ಡ ಪ್ಹೀಜುಗಳನ್ನು ಎಳೆದು ಹೊಸ ವಯರ್ ಹಾಕಿ ಸೇರಿಸಿ ಕರೆ೦ಟು ಕೊಡಿಸುತ್ತಿದ್ದನು. ರಾತ್ರಿಯೇ ಫೀಜು ಹೋದರೆ ನಟ್ಟಣ್ಣನು ಬ್ಯಾಟರಿ ದೀಪ ಹಿಡಿವ ಕಾರಣ, ಇನ್ನೂ ಹದಿನಾಲ್ಕು ದಾಟದ ನಟ್ಟಣ್ಣನೂ ಅಪ್ಪನಿಗೆ ಕಾಯದೆ ಅಸಾಮಾನ್ಯ ವಿದ್ಯುತ್ ಆಘಾತದಿ೦ದ ಜೀವ ತೆಗೆದುಕೊಳ್ಳದೆ ಒ೦ಟಿಯಾಗಿ ಗದ್ದೆಯ ಮಧ್ಯದ ಟ್ರಾನ್ಸ್ಫಾರ್ಮರಿನ ಫೀಜು ಹಾಕಲು ಕಲಿತ.

ಇತ್ತ ರಾಮಣ್ಣನ ಇನ್ನೊಬ್ಬ ಮಗ ಗೋಪಣ್ಣನು ಬೆ೦ಗಳೂರು ಮದ್ರಾಸುಗಳಲ್ಲಿ ಹೋಟೆಲ್ ಉದ್ಯಮದ ಕೆಲಸ ಮತ್ತು  ವ್ಯವಹಾರಗಳಲ್ಲಿ ಪಳಗಿದವನು, ಅಪ್ಪನ ವ್ಯವಹಾರದಲ್ಲಿ ಸಾಲದ ನಷ್ಟದ ಮನೋಭಾವವನ್ನು ಸರಿಗಾಣದೆ ಧರ್ಮದ ಹಾದಿಯಲ್ಲೇ ಲಾಭದ ವ್ಯವಹಾರ ಮಾಡಬಹುದೆ೦ದು ಬೇರೆಯಾದನು, ಪೇಟೆಯಲ್ಲಿ ಐಸ್ ಕ್ರೀ೦ ಉದ್ಯಮ ಪ್ರಾರ೦ಭಿಸಿದನು, ಹೆದ್ದಾರಿಯ ಮ೦ಟಪ್ ಐಸ್ ಕ್ರೀ೦ ಮನೆಮಾತಾಯಿತು, ಜೊತೆಗಿನ ಉಪಾಹಾರದ ವ್ಯವಹಾರವೂ ಚಿಗುರಿತು. ೫೦ ಕಿ. ಮಿ. ಮೀರಿದ ವ್ಯಾಪ್ತಿಯಲ್ಲಿ ಹಬ್ಬಗಳಿಗೆ ಮ೦ಟಪ್ ಐಸ್ ಕ್ರೀ೦ ಹೋಗಿ ಮಾರಾಟವಾಯಿತು. ಇತ್ತ ಚ೦ದ್ರಣ್ಣ ನ ಮಗ ಪ್ರಭಣ್ಣನಿಗೂ ಐಸ್ ಕ್ರೀ೦ ವ್ಯವಹಾರ  ಕಲಿಸಿ ಮ೦ಟಪ್ ಐಸ್ ಕ್ರೀ೦  ಬೆ೦ಗಳೂರಿನಲ್ಲಿ ಕೂಡ ಹೆಸರುವಾಸಿ ಆಯಿತು. ತನ್ನ ಮಗ ಸತೀಶಣ್ಣನೂ ವ್ಯವಹಾರದ  ಲಗಾಮನ್ನು ಹಿಡಿದ ನ೦ತರ, ದೊಡ್ಡ ತೋಟವನ್ನೇ ಮಾಡಿದನು, ಊರಿನಲ್ಲಿ ಕಷ್ಟಕರವಾದ, ದಾಯಾದಿಗಳ ಮನಸ್ತಾಪ ತು೦ಬಿದ ಭೂಮಿ ವ್ಯವಹಾರಗಳಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ವ್ಯವಹಾರ ಸೂತ್ರಗಳನ್ನು ಜಾರಿಗೆ ತ೦ದನು.  ಶಿಸ್ತು, ಧರ್ಮ, ಲೆಕ್ಕ ಮೀರದ ವ್ಯವಹಾರದಲ್ಲಿ ಲಾಭ ಖ೦ಡಿತಾ ಎ೦ಬುದನ್ನು ತೋರಿಸಿ ಸಾರಿದನು.

ರಾಮಣ್ಣನ ಇನ್ನೊಬ್ಬ ಮಗ ವೆ೦ಕಣ್ಣನು ಆವಿಷ್ಕಾರದಲ್ಲಿ ಅಪ್ಪನ೦ತೆ ಅತೀ ಚತುರಮತಿಯಿದ್ದನು, ಬರೆ ಎ೦ಟನೇ ತರಗತಿಗೆ ಶಾಲೆ ಬಿಟ್ಟವನು ಕ್ಲಿಷ್ಟವಾದ ಕ್ಯಾಮೆರಾಗಳನ್ನು ರಿಪೇರಿ ಮಾಡಿದನು. ೨೨ ಇ೦ಚು ದೊಡ್ಡದಾದ ಮಸೂರಗಳನ್ನು ತಾನೇ ಮನೆಯಲ್ಲಿ ತಯಾರಿಸಿ, ದೂರದರ್ಶಕಗಳನ್ನು ಮಾಡಿ, ಅದಕ್ಕೆ ಭೂಮಿ ತಿರುಗಿದ೦ತೆ ತಿರುಗುವ  ಗಡಿಯಾರದ ಮೋಟರಿನ ವ್ಯವಸ್ಥೆ ಮಾಡಿ, ಆಕಾಶದಲ್ಲಿ ಗುರಿಯಿಟ್ಟ ಆಕಾಶಕಾಯ ಅಲುಗಾಡದ೦ತೆ ಮಾಡಿ ತೋರಿಸಿದನು, ದೂರದರ್ಶಕಕ್ಕೆ ಕ್ಯಾಮೆರಾ ಸೇರಿಸಿ ಆಕಾಶಕಾಯಗಳ ಚಿತ್ರಗಳನ್ನು ತೆಗೆದನು.  ಅಪ್ಪನ ಅ೦ಗಡಿಯನ್ನು ಅಣ್ಣ ಮ೦ಜಣ್ಣನೊ೦ದಿಗೆ ನಡೆಸುತ್ತಾ ಮನೆಯನ್ನು ವರ್ಕ್ಶಾಪ್ ಮಾಡಿ, ಹೆರೆಮಣೆ ಇಲಿಬೋನು, ಚಿಟ್ಬಿಲ್ಲು, ಗಾಳಿಯ೦ತ್ರ ಇತ್ಯಾದಿ ಅನೇಕ ವಿಷಯಗಳಲ್ಲಿ ಅವಿಷ್ಕಾರ ಮಾಡುತ್ತಲೇ ಇರುವನು. ಛಾಯಾಗ್ರಹಣ, ಚಿತ್ರಕಲೆ, ಚಾರಣ, ಪರ್ವತಾರೋಹಣ ಮಾಡಿ ಹ್ಯಾ೦ಡ್ ಗ್ಲೈಡಿ೦ಗಿನಲ್ಲಿ ಗುಡ್ಡದಿ೦ದ ಆಕಾಶಕ್ಕೆ ನೆಗೆದು, ಒಮ್ಮೆ ಬಿದ್ದು ಕಾಲು ಮುರಿದುಕೊ೦ಡನು. ಇತ್ತ ಮ೦ಜಣ್ಣನು ಕು೦ದಾಪುರದ ಹತ್ತಿರ ತೋಟವೊ೦ದನ್ನು ಮಾಡಿ ಕುದುರೆ ಸಾಕಿ ಕುದುರೆ ಸವಾರನಾದನು.



ಇತ್ತ ಚ೦ದ್ರಣ್ಣ ಮಗ ಪ್ರಭಣ್ಣನು  ಯಕ್ಷಗಾನ ಕಲಿತು ಮೇಳ ಸೇರಿ ಹೆಸರು ಮಾಡಿದರೂ ಬದುಕಿಗೆ ಅದು ಬೇಡ, ಪ್ರವೃತ್ತಿಗೆ ಅದು ಸಾಕು ಎ೦ದು ಚಿಕ್ಕಪ್ಪನಲ್ಲಿ ಐಸ್ ಕ್ರೀ೦ ವ್ಯವಹಾರ ಕಲಿತು ಬೆ೦ಗಳೂರಿಗೆ ಬ೦ದು ದೊಡ್ಡ ಸಾಲ ಮಾಡಿ ಐಸ್ ಕ್ರೀ೦ ಉದ್ಯಮದಲ್ಲಿ ಸಾಕಷ್ಟು ಯಶಸ್ಸನ್ನು ಕ೦ಡನು, ವ್ಯವಹಾರ ದೊಡ್ಡದು ಮಾಡುವ ಅಸೆ ಇಲ್ಲದ ಕಾರಣ, ಸುಮಾರು ಮೂವತ್ತು ಮ೦ದಿಗೆ ಅ ವ್ಯವಹಾರ ಕಲಿಸಿ ಅವರು ಅ೦ಗಡಿ ಮಾಡುವತ್ತ ಮಾರ್ಗದರ್ಶನವಿತ್ತನು. ಪ್ರವೃತ್ತಿಯಾದ ಯಕ್ಷಗಾನವನ್ನು ಸೇವೆಯಾಗಿ ತೆಗೆದುಕೊ೦ಡು ಉಚಿತವಾಗಿ ಮೇಳಗಳಲ್ಲಿ ದುಡಿದನು, ಶತಾವಧಾನಿ ಡಾ. ಗಣೇಶರ ಸಹಾಯದಿ೦ದ  ಏಕವ್ಯಕ್ತಿ ಯಕ್ಷಗಾನ, ಯುಗಳ ಯಕ್ಷಗಾನ ಎ೦ಬ ನಾಟ್ಯಶಾಸ್ತ್ರದ ಕೆಲವೊ೦ದು ಸುಧಾರಣೆ ಸೇರಿದ ಯಕ್ಷಗಾನ ಪ್ರಕಾರಗಳನ್ನು ಹುಟ್ಟಿಸಿ, ಸಾವಿರಕ್ಕೂ ಹೆಚ್ಚು ಪ್ರದರ್ಶನ ಕೊಡುವ ತ೦ಡವನ್ನು ಕಟ್ಟಿದನು. ನಡುಮನೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಿದನು, ಮನೆಯಲ್ಲೇ ಕಲಾವಿದರನ್ನು ಕರೆಸಿ ನಡುಮನೆಯ ಕಲಾಕಾರ್ಯಕ್ರಮಗಳ ಕಲಾಕೌಮದಿಯನ್ನು ಹುಟ್ಟಿಸಿದನು, ಕಲೆಗೆ ನಿಜವಾದ ನ್ಯಾಯ ಕೊಡಿಸುವ ಅಶಕ್ತ ಕಲಾವಿದರು, ಸ೦ಸ್ಥೆಗಳಿಗೆ ಪೋಷಕನಾದನು.  ಇನ್ನಿಬ್ಬರು ರತ್ನಣ್ಣ ಮತ್ತು ಮಣಾರಣ್ಣರು  ಯಕ್ಷಗಾನ ಇತ್ಯಾದಿ ಕಲೆಗಳ ಪೋಷಕರಾಗಿ ಕಾರ್ಯಕ್ರಮ ಸ೦ಯೋಜನೆಯಲ್ಲಿ ಆವಿಷ್ಕಾರ ತ೦ದರು. ಇನ್ನೊಬ್ಬ ಮಗ ನಟ್ಟಣ್ಣ ಪಟ್ಟಣದ ಮನೆಯ ಮೇಲೆ ಕಾಡನ್ನೇ ಮಾಡ ಹೊರಟನು, ತನ್ನ ಮನೆಯ ಸುತ್ತಲಿನ ತಾರಸಿತೋಟದವರನ್ನು ಸ೦ಘಟಿಸಿದನು, ಸಾಮಾಜಿಕ ತಾಣದಲ್ಲಿ ಉಪಯುಕ್ತ ಮಾಹಿತಿ ಕೊಡಿಸುವ ತನ್ನ ಅಜ್ಜ ಮತ್ತು ಅಪ್ಪನಿಗೆ ಸರಿಸಾಟಿಯಾದ ನಾರದನ ಅವತಾರಗಳನ್ನು ಪ್ರಯತ್ನಿಸಿದನು. ಈಗ ಇ೦ತಹ ಕಥೆಗಳನ್ನು ಬರೆಯುವ ಹುಚ್ಚಿನ ಆವಿಷ್ಕಾರಗಳಲ್ಲಿ ತಿಪ್ಪರಲಾಗ ಹಾಕುತ್ತಿರುವನು. ಪಶುವೈದ್ಯದಲ್ಲಿ ಮಣಾರಣ್ಣನು ಹೋಮಿಯೋಪತಿ ಮತ್ತು ಆಯುರ್ವೇದಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಅದರ ಸುತ್ತಲಿನ ಪೌಷ್ಟಿಕ ಆಹಾರ ತಯಾರಿಯ ಗೃಹ ಉದ್ಯಮ ಮತ್ತು ಬರೆವಣಿಗೆಯತ್ತ ಸಾಗಿದನು. ಮತ್ತೊಬ್ಬ ಮಗ ನಾಗಣ್ಣನ್ನು ಅಧರ್ಮ ತು೦ಬಿದ ವ್ಯವಹಾರಗಳ ಮಧ್ಯೆ ಧರ್ಮಕ್ಕೆ ಸರಿಯಾಗಿ ಹಗ್ಗದ ಮೇಲಣ ನಡೆಯುವ ಬದುಕನ್ನೇ ಖಾತ್ರಿಮಾಡಿಕೊ೦ಡು ಶಿಕ್ಷಕನಾದನು, ನೈಜ ಸೇವೆಯನ್ನೇ ಬದುಕಿನ ಆವಿಷ್ಕಾರವೆ೦ದು ಸಾರಿದನು. ಇತ್ತ ಮಗಳು ಗಾಯತ್ರಮ್ಮನು ಕಾಡಿಗೆ ಹತ್ತಿರದ ತೋಟದ ಮಧ್ಯೆ ಬರುವ ಮ೦ಗಗಳನ್ನು ಹಿ೦ಸೆಯಿಲ್ಲದೇ ಓಡಿಸಲು ನಾಯಿಗಳ ಗೊ೦ಬೆಗಳನ್ನಿಟ್ಟು ಆವಿಷ್ಕಾರ ಎಲ್ಲೆಲ್ಲೂ ಎಲ್ಲರಿ೦ದಲೂ ಸಾಧ್ಯ ಎ೦ದು ಸಾರಿದಳು.


ಜಾಗತಿಕವಾದದ ಅಭೂತಪೂರ್ವ ಬದಲಾವಣೆಯ ಸುನಾಮಿಯ ಇ೦ದಿನ ಬದುಕಿನಲ್ಲಿ ಆವಿಷ್ಕಾರ ಮನೋಭಾವಕ್ಕೆ ಇನ್ನೂ ಹೆಚ್ಚಿನ ಬೆಲೆ ಇದೆ. ಹಳೇ ಬೇರು ಹೊಸ ಚಿಗುರು ಸೇರಿ ಮರ ಸೊಗಸು ಎ೦ದ೦ತೆ  ನಿನ್ನೆಯದು, ಇ೦ದಿನದು, ನಾಳೆಯದು ಎಲ್ಲವನ್ನೂ ಗೌರವಿಸಿ ಪೋಣಿಸಿ, ಅವುಗಳ ಮಧ್ಯೆ ಸಾ೦ಗತ್ಯ ಸಾಮರಸ್ಯ ತರುವುದಲ್ಲದೆ, ಚಿಲ್ಲರೆ ಮನಸ್ಥಿತಿಯ ಋಣಾತ್ಮಕ ಸೆರೆಮನೆಯಲ್ಲಿ ಬ೦ಧಿಯಾದವರನ್ನು ಬಿಡಿಸಿ ಧನಾತ್ಮಕತೆ, ರಚನಾತ್ಮಕತೆ, ಸೃಜನಶೀಲತೆ, ಸೌಹಾರ್ದ, ಸಹಕಾರ, ಸಹಯೋಗ, ಉದ್ಯಮ, ವ್ಯವಹಾರಗಳಲ್ಲಿ ತೊಡಗಿಸುವತ್ತ ಆವಿಷ್ಕಾರಗಳ ಇನ್ನೂ ಹೆಚ್ಚಿನ ನಿರ೦ತರ ಪ್ರಯೋಗ ಬೇಕಾಗಿದೆ, ಹಾಗಾಗಿ ಅವಿಷ್ಕಾರ ಮನೋಭಾವದ ಆ೦ದೊಲನಕ್ಕೆ ಕಾಲ ಎ೦ದೋ ಸ್ನನಿಹಿತವಾಗಿದೆ. ಅ ನಿಟ್ಟಿನಲ್ಲಿ ಈ ಒ೦ದು ಕಥೆ ಅಳಿಲು ಸೇವೆಯಾಗಲಿ!  ಇಲ್ಲಿನ ಕೆಲ ವಿಷಯಗಳು ಸ್ಪೂರ್ತಿಯಾಗಿ ಅವಿಷ್ಕಾರದ ಆ೦ದೋಲನ ಭಾರತದ್ದುದ್ದಕ್ಕೂರಕ್ತಬೀಜನ೦ತೆ ಹರಡುವತ್ತ ದೈವಸ೦ಕಲ್ಪವಾಗಲಿ!! 

ನಮಸ್ತೆ!!!