ಸೋಣೆ ಆರತಿಯ ಸವಿ ನೆನಪುಗಳು - ಭಾಗ ಎರಡರಲ್ಲಿ ಒಂದು
(ಇತ್ತೀಚೆಗೆ ಜೀರ್ಣೋದ್ಧಾರಗೊಂಡ ನಮ್ಮೂರಿನ ಈಶ್ವರ ಮಠ. ಚಿತ್ರ ಕೃಪೆ: ಕೋ. ಚ ನಾವಡ)
https://www.facebook.com/photo.php?fbid=3019079901694397&set=pb.100007772508060.-2207520000..&type=3
ನಾನು ಪಾರಂಪಳ್ಳಿ ಪಡುಕೆರೆಯ ಉಪಾಧ್ಯರ ಕೇರಿಯ ತೆಂಕಿನ ಕೇರಿಯವನು. ಅತ್ತ ಅಜ್ಜಿಬೆಟ್ಟು ದಾಟಿ ಮಾಸ್ಟರ ಮನೆಯವರೆಗೆ ಹರಡಿರುವ ಬಡಾ ಕೇರಿಯಲ್ಲಿನ ಕೇಂದ್ರ ಬಿಂದು ಕಟ್ಟೆ ದೇವರ (ಇಷ್ಟ ದೇವತೆ) ಮನೆಯಾದರೆ, ಇತ್ತ ವಾಸುಪಾಧ್ಯರ ಮನೆ ನಂತರದ ಗುಡ್ಡೆ ದಾಟಿದರೆ ಸಿಗುವುದೇ, ತೆಂಕಣ ನಾವಡರ ಕೇರಿ, ಅಲ್ಲಿನ ಕೇಂದ್ರ ಬಿಂದು ಈಶ್ವರ ಮಠ (ಇಂದಿನ ಉಮಾಮಹೇಶ್ವರ ದೇವಸ್ಥಾನ). ನಮ್ಮ ತೆಂಕಿನ ಕೇರಿಯಲ್ಲಿ ಹೊಳೆ ಈಚೆಗೆ ಹೆಚ್ಚಿನ ಸಾಮಗ್ರಿ ಸಿಗುವ ಒಂದೇ ಅಂಗಡಿ ಇರುವ ನಮ್ಮ ಮನೆಯೇ ಕೇಂದ್ರ ಬಿಂದು, ನನಗಂತೂ ಮನೆಯಾಗಿ ಅದು ಕೇಂದ್ರ ಬಿಂದು.
ಈ ಬರಹ ಈಶ್ವರ ಮಠದ ಸೋಣೆ ಆರತಿಯ ಅನುಭವದ ಸುತ್ತಲಿನ ಸವಿ ನೆನಪುಗಳನ್ನು ಕದಡುವುದಕ್ಕಾಗಿ ಮಾತ್ರ.
ಈಶ್ವರ ಮಠದಲ್ಲಿ ಶ್ರಾವಣ ತಿಂಗಳಲ್ಲಿ ನಡೆಯುವ ಸೋಣೆ ಆರತಿ, ಮಕ್ಕಳಾದ ನಮಗೆ ದಿನಾ ಹೋಗಿ ಬರುವಷ್ಟು ಆಕರ್ಷಕವಾಗಿತ್ತು. ನಮ್ಮ ಮನೆಯಿಂದಲೂ ವರ್ಷಕ್ಕೊಮ್ಮೆ ಸೋಣೆ ಆರತಿ ನಡೆಯುತ್ತಿತ್ತು. ಅಪರೂಪಕ್ಕೆ ನಮ್ಮ ಅಮ್ಮ ರಂಗಪೂಜೆ ಹೇಳಿಕೊಂಡದ್ದೂ ಬೇರಂದು ತಿಂಗಳಲ್ಲಿ (ಬಹುಶ: ಕಾರ್ತಿಕ ಮಾಸದಲ್ಲಿ) ನಡೆಯುತ್ತಿತ್ತು.
ಪೂರ್ವರಂಗ:
ಸೋಣೆ ಆರತಿಗೆ ಬರುವ ಮುನ್ನ ನಮ್ಮ ಮನೆಯ ಒಂದು ರಂಗಪೂಜೆಯ ಘಟನೆ ಒಂದನ್ನು ಹೇಳಲೇ ಬೇಕು. ಈ ರಂಗಪೂಜೆಗೆ ಪ್ರಸಾದವಾಗಿ ನಮ್ಮಮ್ಮ ಗಾರಿಗೆ ಮಾಡಿದ್ದರು, ಅಷ್ಟೊಂದು ಗಾರಿಗೆ ಅಮ್ಮ ಮಾಡಿದ್ದು ನಾನು ನೋಡಿದ್ದು ಬಹುಶ: ಅದೇ ಮೊದಲು ಮತ್ತು ಕೊನೆ. ಅದನ್ನು ದೇವಸ್ಥಾನದಲ್ಲಿ ನೈವೇದ್ಯ ಆಗದೇ ತಿನ್ನುವಂತಿಲ್ಲ. ಅಮ್ಮ ಗಾರಿಗೆ ಮಾಡುವುದು ಅಪರೂಪವಿತ್ತು, ರುಚಿ ಮಾತ್ರ ಸ್ವರ್ಗ ಸದೃಶ. ಅಮ್ಮ ಕಷ್ಟ ಪಟ್ಟು ಸಮಾರು ಗಾರಿಗೆ ಮಾಡಿ ಹಾಕುವಾಗ, ಅದರ ಪರಿಮಳ ತಲೆ ಕೆಡಿಸುವಷ್ಟಿತ್ತು. ಬೇರೆ ಸಮಯಗಳಲ್ಲಿ, ಅಮ್ಮ, “ತಕಣಿ ಮಕ್ಕಳೇ” ಎಂದು ಮಾಡುತ್ತಿರುವಾಗಲೇ ತಿಂಡಿಯನ್ನು ನಮಗೆ ಹಂಚಿ ಕೊಡುವುದಿದ್ದರೆ, ಈ ಬಾರಿ ಮಾತ್ರ ನಾವು ತಿನ್ನುವಂತಿರಲಿಲ್ಲ. ಆಗ ನಾನು ಬಹುಶ: ಒಂದನೇ ಅಥವಾ ಎರಡನೇ ಕ್ಲಾಸಿನಲ್ಲಿ ಇದ್ದಿರಬಹುದು, ರಂಗಪೂಜೆಯ ಇಡೀ ಘಟನೆಯಲ್ಲಿ ನನಗೆ ನೆನಪಿರುವುದು ಗಾರಿಗೆ ಮಾತ್ರ, ಅಂದರೆ ನನ್ನ ತಲೆ ಕಣ್ಣುಗಳು ರಂಗಪೂಜೆ ನಡೆಯುವಾಗಲೂ ಗಾರಿಗೆ ಬುಟ್ಟಿಯ ಮೇಲೆ ಮಾತ್ರ ಇತ್ತು ಅಂತ ಈಗ ಅನಿಸುತ್ತಿದೆ.
ಅಂತೂ ರಂಗಪೂಜೆ ಮುಗಿಯಿತು. ಮನೆಗೆ ಹೋಗುವ ಸಮಯ, ಕತ್ತಲಾಗಿತ್ತು, ಅಮಾವಾಸ್ಯೆಯಂತೆ ಕತ್ತಲಿತ್ತು. ಮನೆ ಕಡೆ ಹೊರಟಿದ್ದಾಗ, ಗುಡ್ಡೆಯ ದಾರಿಯಲ್ಲಿ ತಮ್ಮಯ್ಯ ಐತಾಳರ ಮನೆ ದಾಟಿದ್ದಷ್ಟೇ, ಗಾರಿಗೆ ಹೊತ್ತ ನಮ್ಮ ಅಣ್ಣಂದಿರಲ್ಲೊಬ್ಬರು ಕತ್ತಲೆಯಲ್ಲಿ ಎಡವಿ, ಎಲ್ಲಾ ಗಾರಿಗೆಯು ಗುಡ್ಡೆಯ ಹೊಯಿಗೆಗೆ ಸೇರಿತು. ಅಮ್ಮನೂ ಸೇರಿ, ನಮ್ಮೆಲ್ಲರ ಜೀವ ಬಾಯಿಗೆ ಬಂದಿತ್ತು. ಸುಮಾರು ಕಷ್ಟ ಪಟ್ಟ ನಮ್ಮ ಅಮ್ಮನಿಗೆ ಗಾರಿಗೆ ಕಳೆದುಕೊಳ್ಳಲು ಇಷ್ಟವಿರಲಿಲ್ಲ, ನಮಗಂತೂ ಅದು ಮುಂದಿನ ಹದಿನೈದು ದಿನಗಳ ಸ್ವರ್ಗಕ್ಕೆ ರಹದಾರಿ ಪತ್ರವಿದ್ದಂತಿತ್ತು. ಒಬ್ಬರು ಬ್ಯಾಟರಿ ಹಿಡಿದರು, ಎಲ್ಲರೂ ಅವರವರ ಹೆಗಲ ಮೇಲಿದ್ದ ಟವೆಲಿನಲ್ಲಿ ಹೊಯಿಗೆ ಅಂಟಿದ ಗಾರಿಗೆ ಗೋರಿದರು. ಹೊಯಿಗೆ ಮಳೆ ಬಂದು ಹೋಗಿ, ಒಣಗಿ ಶುದ್ಧವಿತ್ತು. ಅಂಟಿದ ಹೊಯಿಗೆ, ಬಹಳ ಸುಲಭದಲ್ಲಿ ಹೋಗುವಂತಿತತ್ತು. ಮನೆಗೆ ತಂದು, ಹೊಯಿಗೆ ಎಲ್ಲಾ ಗಾಳಿಸಿ, ಊದಿಸಿ, ಅಂತೂ ಗಾರಿಗೆಯನ್ನು ಸಂಫೂರ್ಣವಾಗಿ ಉಳಿಸಿದೆವು, ಹದಿನೈದು ದಿನ ಇಟ್ಟುಕೊಂಡು ತಿಂದೆವು, ಬಾಯಿಗೆ ಹೊಯಿಗೆ ಬರಲೇ ಇಲ್ಲ ಎಂಬುದು ಒಂದು ಪವಾಡವೇ. ಅಲ್ಲಿಗೆ ಈ ರಂಗಪೂಜೆ ನನಗೆ ಸಾರ್ಥಕವಾಗಿತ್ತು, ಇಡೀ ಜೀವಮಾನಕ್ಕೆ ಈ “ಗಾರಿಗೆ” ಎಂಬುದು ಅತೀ ಆಕರ್ಷಕ ತಿಂಡಿಯಾಗಿ ಉಳಿದು ಹೋಗಿತ್ತು. ಆದರೆ ಆ ಬಾರಿ ತಿಂದ ಗಾರಿಗೆಯಷ್ಟು ರುಚಿ ಮತ್ತೆ ಬದುಕಲ್ಲಿ ಸಿಗಲೇ ಇಲ್ಲ ಎಂದೇ ಹೇಳಬಹುದು.
ಈಗ ಸೋಣೆ ಆರತಿಗೆ ಬರೋಣ. ಸೋಣೆ ಆರತಿ ಮಾಡಿಸುವ ಪೂಜೆಯ ಹಕ್ಕು ಸುಮಾರು ನಾಲ್ಕು ಐದು ಮನೆಯವರಿಗಿದ್ದು, ಅದು ಸರದಿಯಂತೆ ವರ್ಷಕ್ಕೊಮ್ಮೆ ಬದಲಾಗುತ್ತಿತ್ತು. ಆದರೆ ನನ್ನ ನೆನಪಲ್ಲಿ, ಅಂದಿನ ದಿನಗಳಲ್ಲಿ ಪೂಜೆ ಮಾಡುವವರು ಒಂದೋ ಸುಬ್ರಾಯ ಐತಾಳರು ಇಲ್ಲಾ ನಾರಾಯಣ ಐತಾಳರು ಇರುತ್ತಿದ್ದರು. ತಮ್ಮಯ್ಯ ಐತಾಳರು, ಹಾಗೂ ದೇವಸ್ಥಾನಕ್ಕೆ ತಾಗಿಕೊಂಡು ವಾಸ ಐತಾಳರು ಕೆಲವೇ ಬಾರಿ ಪೂಜೆ ಮಾಡಿದ್ದನ್ನು ನೋಡಿದ ನೆನಪಿದೆ ಅಷ್ಟೇ.
ಸೋಣೆ ಆರತಿ - ಸಂಧಿ ಒಂದು
ಸೋಣೆ ಆರತಿಯ ಮಹಾ ಮಂಗಳಾರತಿ, ಕತ್ತಲಾಗುವಾಗ ನಡೆಯುವುದು, ಸುಮಾರು ಸಾಯಂಕಾಲ ಆರು ಮೂವತ್ತಕ್ಕೆ. ಎಲ್ಲಾ ಮುಗಿಸಿ, ಮನೆಗೆ ಬರುವಾಗ ಸುಮಾರು ಏಳು ಕಾಲು ಗಂಟೆ ಆಗುತ್ತಿತ್ತು. ಆದರೆ, ನಾವು ಮಾತ್ರ ಸೋಣೆ ಆರತಿಗೆ ಆದಷ್ಟು ಬೇಗ ಹೋಗುತ್ತಿದ್ದೆವು. ಶಾಲೆ ಮುಗಿಸಿ, ಮನೆಗೆ ಬಂದು ಹಾಲು ಕುಡಿದ ಶಾಸ್ತ್ರ ಮಾಡಿ, ಈಶ್ವರ ಮಠಕ್ಕೆ ಓಡಿ ಸುಮಾರು ಐದೂವರೆಯ ಹಾಗೆ ಹಾಜರು. ಪೂಜೆಯವರು ಒಂದಷ್ಟು ನೀರಲ್ಲಿ ಕಲಸಿದ ಇಲ್ಲಾ ನೆನಸಿ ಗಟ್ಟಿಯಾಗಿ ಅರೆದ ಅಕ್ಕಿ ಹಿಟ್ಟು, ಬತ್ತಿಗೆ ಎಣ್ಣೆ ಹಾಗೂ ಹಳೆಯ ವೇಷ್ಠಿಯೊಂದಿಗೆ ಹಾಜರು. ಅವರೊಂದಿಗೆ ಒಬ್ಬ ಅವರೇ ಆರಿಸಿಕೊಂಡ, ಕೇರಿಯ ಹತ್ತಿರದ ಮನೆಯ ಹುಡುಗನೇ ತೈನಾತಿ, ಮಕ್ಕಳಿಗೆಲ್ಲಾ ಹಿರೇಮಣಿ.
ಸೋಣೆ ಆರತಿಯ ಮುಖ್ಯ ಆಕರ್ಷಣೆಯಲ್ಲಿ ಒಂದು, ಮಕ್ಕಳಾದರೂ ಆರತಿಯನ್ನು ತಯಾರಿ ಮಾಡುವಲ್ಲಿ ನಮಗೆ ಸಿಗುವ ಅವಕಾಶ. ಹೆಚ್ಚಾಗಿ ಸುಮಾರು ನಾಲ್ಕನೇ ಕ್ಲಾಸು ದಾಟಿದವರಿಗೆ ಮಾತ್ರ ಈ ಅವಕಾಶ, ಸುಮಾರು ಹನ್ನೆರಡನೇ ಕ್ಲಾಸಿನವರ ತನಕ ಸ್ವಯಂಸೇವಕರು. ಹಾಗಾಗಿ, ದೊಡ್ಡ ಆರತಿಗಳು ದೊಡ್ಡವರಿಗೆ, ಸಣ್ಣ ಆರತಿಗಳು ಸಣ್ಣವರಿಗೆ.
ಆರತಿಯಲ್ಲಿ ಎರಡು ವಿಧ, ಹಿಟ್ಟಿನ ಬತ್ತಿಯ ಆರತಿ, ಹಾಗೂ ಸಾಮನ್ಯ ಎಣ್ಣೆಯ ಬತ್ತಿಯ ಆರತಿ. ಹಿಟ್ಟಿನ ಆರತಿ ಸಾಮಾನ್ಯವಾಗಿ ಹತ್ತು. ಸೋಣೆ ತಿಂಗಳ ಕೊನೆಗೆ ಒಂದೇ ದಿನದಲ್ಲಿ ಎರೆಡೆರೆಡು ಹರಕೆಗಳು ನಡೆವ ಸಮಯದಲ್ಲಿ ಹೆಚ್ಚಿನ ಹಿಟ್ಟಿನ ಆರತಿಗಳು, ಅಟ್ಟದಿಂದ ಇಳಿದು, ಮೂರು-ನಾಲ್ಕು ಸೇರಿಕೊಳ್ಳುತ್ತಿದ್ದವು. ಈ ಹಿಟ್ಟಿನ ಆರತಿಯಲ್ಲಿ ಅತೀ ವೈಭವದ್ದು ಹತ್ತನೇ ಆರತಿ. ಹತ್ತರ ನಂತರ ಸೇರುವ ಹೆಚ್ಚುವರಿ ಆರತಿಗಳು ಹತ್ತನೇ ಆರತಿಯ ವೈಭವವನ್ನು ಮೀರಿದ್ದು ಅಪರೂಪವೇ.
ಹಿಟ್ಟಿನ ಆರತಿ ಮಾಡುವುದು ಬಹಳ ಕಲಾತ್ಮಕವಾದದ್ದು. ಪೂಜೆಯವರು ಮನೆಯಿಂದ ಅಂಟಾಗಿ ಸಿದ್ಧವಾಗಿರುವ ಅಕ್ಕಿ ಹಿಟ್ಟನ್ನು ತರುತ್ತಿದ್ದರು. ಎಲ್ಲಾ ಆರತಿಗೆ ತಂದ ಹಿಟ್ಟು ಸರಿ ಹೋಗುವಂತೆ, ಆರತಿಯ ದೊಡ್ಡತನಕ್ಕೆ ಸರಿಯಾಗಿ ಹಿಟ್ಟಿನ ಉಂಡೆಗಳನ್ನು ಮೊದಲು ಮಾಡಿಕೊಳ್ಳುತ್ತಿದ್ದರು. ಒಂದನೇ ಆರತಿಯಿಂದ ಶುರು ಮಾಡಿ, ಹಿಟ್ಟನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ಆರತಿಯ ಹಲಗೆಗೆ ಹಚ್ಚಿ ಮಕ್ಕಳಿಗೆ ಬತ್ತಿ ಮಾಡಲು ಮುಂದೂಡುತ್ತಿದ್ದರು. ಹಿರೇಮಣೆ ಯಾವ ಆರತಿಗೆ ಯಾವ ಮಾಣಿ ಬತ್ತಿ ಹಚ್ಚುವುದು ಎಂಬುದನ್ನು ಮೊದಲೇ ಖಚಿತ ಪಡಿಸಿರುವ ಕಾರಣ, ಆಯಾ ಸ್ವಯಂಸೇವಕ ಬತ್ತಿ ಹಚ್ಚಲು ತಯಾರಾಗುತ್ತಿದ್ದನು.
ಹಿಟ್ಟಿನ ಆರತಿಗೆ ಬತ್ತಿ, ಹಳೆಯ ವೇಷ್ಟಿಯಿಂದ ತಯಾರಾಗುತ್ತಿತ್ತು. ಅದು ಹಳೆಯದಾದರೂ, ತೊಳೆದು ಒಣಗಿಸಿಕೊಂಡು ಬಂದು ಶುದ್ಧವಾಗಿರುತ್ತಿತ್ತು. ಪುರೋಹಿತರು ಇಡೀ ವೇಷ್ಟಿಯ ತುಂಡನ್ನು ದೀಪದ ಎಣ್ಣೆಯಲ್ಲಿ ಅದ್ದಿ ಹಿಂಡಿದಾಗ, ಸುಮಾರು ಅಷ್ಟೂ ಎಣ್ಣೆ ಮತ್ತೆ ಪಾತ್ರಕ್ಕೇ ಸೇರುವುದು ಒಂದು ಇಂದ್ರಜಾಲದಂತೆ ಕಾಣಿಸುತ್ತಿತ್ತು. ಬಟ್ಟೆಯೋ, ದೀಪದ ಎಣ್ಣೆ ಸೇರಿಕೊಂಡು ತಿಳಿ ಹಸಿರು ಹಳದಿಯ ಬಣ್ಣದಲ್ಲಿ ಹೊಳೆದು ಕಂಗೊಳಿಸುತ್ತಿತ್ತು. ಈ ದೀಪದಲ್ಲಿ ಅದ್ದಿದ ಬಟ್ಟೆಯನ್ನು ಪುರೋಹಿತರು ಲೀಲಾಜಾಲದಲ್ಲಿ ಉದ್ದಕ್ಕೆ ಪರಪರನೆ ಹರಿದು ಕೊಡುತ್ತಿದ್ದರು. ಯಾವ ಯಾವ ಆರತಿಗೆ ಎಷ್ಟು ಉದ್ದದ ಎಷ್ಟು ಬಾಲಗಳು ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುವುದು. ಹಾಗಾಗಿ, ಬತ್ತಿ ಹಚ್ಚುವವನಿಗೆ ಹಿಟ್ಟು ಹಚ್ಚಿದ ಆರತಿ, ಹಾಗೂ ಎಣ್ಣೆಯಲ್ಲಿ ಅದ್ದಿ ಹಿಂಡಿದ ಬಟ್ಟೆಯ ಬಾಲಗಳು ಸಿಗುತ್ತಿದ್ದವು. ಹಿಟ್ಟಿನ ಆರತಿಯಲ್ಲಿ ಹಿಟ್ಟಿನ ಎಷ್ಟು ತುಂಡುಗಳು ಹಚ್ಚಲ್ಪಡುತ್ತಿದ್ದವೂ ಅಷ್ಟು ಬಟ್ಟೆಯ ತುಂಡುಗಳನ್ನು ನಾವು ಬಟ್ಟೆಯ ಬಾಲಗಳನ್ನು ಕೈಯಲ್ಲೇ ಹಿಸಿದು ತುಂಡು ಮಾಡಿಕೊಳ್ಳುತ್ತಿದ್ದೆವು, ತೀರಾ ಕಿರಿಯರಿಗೆ ಹಿರಏಮಣಿಯು ತುಂಡು ಮಾಡಿ ಕೊಡುತ್ತಿದ್ದನು. ಪ್ರತೀ ತುಂಡನ್ನು ಗುಲಾಬಿ ಹೂವಿನಂತೆ ಮಡಚಿ, ಅಂದರೆ ಕೆಳ ಭಾಗ ಸಾಂದ್ರವಾಗಿ, ಮೇಲ್ಭಾಗ ಅರಳಿದ ಹೂವಿನಂತೆ ಅರಳಿಸಿ, ಕೊನೆಗೆ ಹಿಟ್ಟಿನಲ್ಲಿ ಹುಗಿದು ನಿಲ್ಲಿಸುತ್ತಿದ್ದೆವು. ಆರತಿ ಸಿದ್ಧವಾದ ಮೇಲೆ, ಆರತಿಯನ್ನು ಕೈಯಲ್ಲಿ ಆಡಿಸಿ ಬತ್ತಿ ಬೀಳುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದೆವು, ಇಲ್ಲವಾದರೆ ಹಿರೇಮಣಿ ಯಾ ಪುರೋಹಿತರಿಂದ ಬೈಗಳ ಖಂಡಿತಾ.
ಪುರೋಹಿತರು ನಮಗೆ ಕೊಡುವ ಬಟ್ಟೆಯ ತುಂಡು ಸಾಕಷ್ಟಿದ್ದರೂ, ನಮಗೆನೋ ಅವರದ್ದೊಂದು ಪಿಟ್ಟಾಸಿ ಅಂತನಿಸುವುದು. ಕಾರಣ, ನಮಗೆ ನಾವು ಮಾಡಿದ ಆರತಿಯು ವೈಭವಪೂರಿತವಾಗಿ, ಉಜ್ವಲವಾಗಿ ಉರಿಯಬೇಕು, ಹಾಗಾಗಬೇಕಾದರೆ ಬಟ್ಟೆ ಜಾಸ್ತಿ ಸಿಕ್ಕಬೇಕು. ಪುರೋಹಿತರ ಸಮಸ್ಯೆ, ಬತ್ತಿ ಆರತಿ ಮಾಡುವಾಗ ಬೀಳಬಾರದು ಮತ್ತು ಅಳತೆ ಮೀರಿ ಉರಿದು ಬೆಂಕಿಯ ಅವಘಡ ಆಗಬಾರದು. ಈ ಮಿತಿಯಲ್ಲಿ ನಾವು ಕೆಲವೊಂದು ಆವಿಷ್ಕಾರ ಮಾಡುತ್ತಿದ್ದೆವು. ಪುರೋಹಿತರು ಕೊಟ್ಟ ಎಣ್ಣೆಯ ಬಟ್ಟೆಯ ತುಂಡುಗಳಿಂದ ಆದಷ್ಟು ತುಂಡು ನೂಲುಗಳನ್ನು ತೆಗೆದಿಟ್ಟುಕೊಂಡು, ಆರತಿ ಸಿದ್ಧವಾದ ಮೇಲೆ ಈ ನೂಲುಗಳನ್ನು ಹೂವಿನಂತೆ ಅರಳಿದ ಬತ್ತಿಗಳ ಮೇಲೆ ಹರಡಿ ಒಂದು ಚಪ್ಪರದಂತೆ ಸಿದ್ಧ ಮಾಡುತ್ತಿದ್ದೆವು. ಈ ಚಪ್ಪರವು ಆರತಿ ಮಾಡುವಾಗ ಬೀಳದಂತಿದೆ ಎಂಬುದನ್ನು ಹಿರೇಮಣಿ ಪರಿಶೀಲಿಸುತ್ತಿದ್ದನು. ಅಕಸ್ಮಾತ್, ಆರತಿ ಆಗುವಾಗ ಈ ಚಪ್ಪರದ ವ್ಯವಸ್ಥೆ ಧೊಪ್ಪನೆ ಬಿದ್ದರೆ, ಮರುದಿನ ವಿಚಾರಣೆ ಇರುತ್ತಿತ್ತು, ಮುಂದಿನ ಆರತಿ ತಯಾರಿಗೆ ಅಂತಹವನ ಉತ್ಸಾಹಕ್ಕೆ ಕಡಿವಾಣ ಇರುತ್ತಿತ್ತು, ಆರತಿಯ ಸಂಖ್ಯೆಯಲ್ಲಿ ಅವನಿಗೊಂದು ಹಿಂಬಡ್ತಿಯ ಶಿಕ್ಷೆಯೂ ಇರುತ್ತಿತ್ತು. ಒಟ್ಟಿನಲ್ಲಿ ಆರತಿ ಸಿದ್ಧವಾದಾಗ, ನೆಟ್ಟಿ ಮಾಡಿದ ಭತ್ತದ ಗದ್ದೆಯಂತೆ ಕಾಣಿಸಿದರೆ, ಮೇಲೆ ಹಾಕಿದ ಹೆಚ್ಚಿನ ದಾರಗಳು ಭತ್ತದ ಗದ್ದೆಯನ್ನು ಜೇಡರ ಬಲೆಗಳು ಆವರಿಸಿಕೊಂಡಂತೆ ಕಾಣಿಸುತ್ತಿತು.
ಪ್ರತೀ ದಿನವೂ ಎಲ್ಲಾ ಸ್ವಯಂ ಸೇವಕರು ಬಂದರೆ, ಕಿರಿಯರಿಗೆ ಹಿರಿಯ ಅವಕಾಶ ಸಿಗುವುದೇ ಇಲ್ಲ, ಆಗ ಕಿರಿಯರಾದವರು, ನಮಗೆ ಮುಂಭಡ್ತಿಯ ಅವಕಾಶ ಕೊಡಿ ಎಂದು ಪ್ರತಿದಿನವೂ ಗೋಗರೆಯಬೇಕಾಗುತ್ತಿತ್ತು. ಕುತ್ತಿಗೆ ಉದ್ದ ಮಾಡಿ ಅಳುವ ಮರಿಗೆ ಹೆಚ್ಚು ಆಹಾರ ತಾಯಿ ಹಕ್ಕಿ ಕೊಟ್ಟಂತೆ, ಇಲ್ಲಿ ಹೆಚ್ಚು ಅತ್ತವನಿಗೆ ಗೆಲುವಾಗುತ್ತಿತ್ತು. “ಎಂತಾ ಮಣಿ, ನಿನ್ ರಗಳಿ, ಸರಿ ಇವತ್ ಹತ್ತನೇ ಆರತಿ ನಿಂದೇ” ಎಂದು ಅವಕಾಶ ಪಡೆದ ಕಿರಿಯವನು ಕೂತಲ್ಲೇ ಅಂತರಿಕ್ಷದಲ್ಲಿ ತೇಲುತ್ತಿದ್ದನು.
ಹಿಟ್ಟಿನ ಆರತಿಯ ಅವಕಾಶ ಸಿಗದವರು ತೀರಾ ನಿರಾಶರಾಗಬೇಕಾಗಿರಲ್ಲಿಲ್ಲ. ಸಾದಾ ಎಣ್ಣೆ ಬತ್ತಿಯ ಆರತಿಗಳೂ ಆಕರ್ಷಕವಾಗಿರುತ್ತಿದ್ದವು. ಅದರಲ್ಲಿ, ಒಂದು ಆರತಿಗಂತೂ ಬತ್ತಿಯನ್ನು ಸಣ್ಣ ಸಣ್ಣ ಹೊಂಡದಲ್ಲಿ ಕಡ್ಡಿಯ ಮೂಲಕ ಹುಗಿದು ಕೂಡಿಸುವುದು ಮುದ ಕೊಡುತ್ತಿತ್ತು. ಮೂರು ರಥದ ಆರತಿಗಳಿದ್ದವು, ಅವಕ್ಕೆ ಬತ್ತಿ ಹಚ್ಚುವಾಗ, ಆ ಆರತಿಗಳ ಸೌಂದರ್ಯ ಸುಖ ಕೊಡುತ್ತಿತ್ತು. ಎಣ್ಣೆ ಬತ್ತಿಯ ಆರತಿಗಳು ಸಮಾರು ಹತ್ತು ಇರುತ್ತಿದ್ದವು.
ಅಪರೂಪಕ್ಕೆ ಆರತಿಯನ್ನು ಸಿದ್ಧ ಪಡಿಸಲು ಬೇಕಾದ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ, ಒಬ್ಬೊಬ್ಬರಿಗೆ ಎರಡು ಮೂರು ಆರತಿ ಸಿದ್ಧ ಪಡಿಸುವ ಭಾಗ್ಯ. ಇಲ್ಲಾ, ಎಲ್ಲಾ ಮಕ್ಕಳಿಗೆ ಹೆಚ್ಚು ಆಕರ್ಷಕವಾದ ಹಿಟ್ಟಿನ ಆರತಿಗಳನ್ನು ಬಿಟ್ಟು, ಪುರೋಹಿತರು ಕಡಿಮೆ ಆಕರ್ಷಣೆಯ ಸಾದಾ ಎಣ್ಣೆ ಬತ್ತಿಯ ಆರತಿಗಳನ್ನು ತಾವೇ ಸಿದ್ಧ ಪಡಿಸಿಕೊಳ್ಳುತ್ತಿದ್ದರು.
ಎಲ್ಲಾ ಆರತಿಗಳು ಸಿದ್ಧವಾದ ಮೇಲೆ, ಅವುಗಳನ್ನು ಗರ್ಭಗುಡಿಯ ಎದುರಿನ ಪ್ರಾಂಗಣದಲ್ಲಿ ಸರದಿಯಲ್ಲಿ ಜೋಡಿಸುವಲ್ಲಿ ನಾವೆಲ್ಲಾ ಹಿರೇಮಣಿಗೆ ಸಹಕಾರ ಕೊಡುವಲ್ಲಿ, ಸೋಣೆ ಆರತಿಯ ಮೊದಲ ಸಂಧಿ ಮುಗಿಯುತ್ತಿತ್ತು. ಎರಡನೇ ಸಂಧಿ ಪ್ರಾರಂಭವಾಗುವ ಮೊದಲು ನಮಗೊಂದು ಹದಿನೈದು ಇಪ್ಪತ್ತು ನಿಮಿಷ ಆಡುವ ಅವಕಾಶ. ದೇವಸ್ಥಾನದ ಮುಂದೆ, ಹೆಚ್ಚಾಗಿ ಕುಂಟುಬಿಲ್ಲೆ, ಗೋಲಿಯಾಟ, ಪಕ್ಕದ ತೊರೆಗೆ ತಾಗಿಕೊಂಡ ಮಣ್ಣಿನಲ್ಲಿ ಪಪಾಯ ಎಲೆಯ ದಂಟುಗಳನ್ನುಪಯೋಗಿಸಿ ನೀರಾವರಿಯ ಆಟ, ಕಬಡ್ಡಿ, ಖೋ ಖೋ, ಬೆನ್ನಿಗೆ ಹೊಡೆವ ಚೆಂಡಾಟ, ಲಗೋರಿ ಇತ್ಯಾದಿ ವಯಸ್ಸಿಗೆ ಹೊಂದಿಕೊಂಡು ಸ್ನೇಹ ವಲಯವನ್ನು ಹೊಂದಿಕೊಂಡು ಬೇರೆಬೇರೆಯಾಗಿ ಆಡುತ್ತಿದ್ದೆವು.
ಸೋಣೆ ಆರತಿ - ಸಂಧಿ ಎರಡು
ಎರಡನೇ ಸಂಧಿಯೇ, ಸೋಣೆ ಆರತಿಯ ಮಂಗಳಾರತಿಯ ವೈಭವದ್ದು. ಆರತಿಗಳು ಸಿದ್ಧವಾದ ಮೇಲೆ, ಪುರೋಹಿತರು ಛಕ್ಕನೇ ಮನೆಗೆ ಹೋಗಿ, ಬಾವಿಕಟ್ಟೆಯಲ್ಲಿ ಎರಡು ಮೂರು ಕೊಡಪಾನ ನೀರನ್ನು ಹೊಯ್ದುಕೊಂಡು ಮಡಿಯಲ್ಲಿ ಬಂದು ಗರ್ಭಗುಡಿ ಸೇರುತ್ತಿದ್ದರು. ಹಿರೇಮಣಿ ಪುರೋಹಿತರಿಗೆ ಸಿದ್ಧ ಪಡಿಸಿದ ಆರತಿಗೆ ಬೆಂಕಿ ಹಚ್ಚಿ ಒಂದೊಂದನ್ನೇ ಕೊಡಲು ಎಡ ಬದಿಯಲ್ಲಿ ಕುಳಿತರೆ, ಎರಡನೇ ಸ್ಥಾನವು ಬಲಬದಿಯಲ್ಲಿ, ಆರತಿ ಸೇವೆಯಾದ ನಂತರ ಪುರೋಹಿತರು ದೂಡುವ, ಇನ್ನೂ ಬೆಂಕಿ ಇರುವ ಆರತಿಯನ್ನು ಹೊರಗೆ ಎಳೆದುಕೊಂಡು, ಮೂಲೆಯಲ್ಲಿ ಆರತಿಯನ್ನು ಶುದ್ಧಗೊಳಿಸುವವನಿಗೆ ಸರಿಸಿ ಕೊಡುವ ಬಲಬದಿಯ ಬಂಟನದ್ದು. ಮೂರನೆಯ ಖಾತೆ, ಆರತಿ ಶುದ್ಧಗೊಳಿಸುವವನದ್ದು, ಅವನಿಗೆ ಸಿಕ್ಕ ಕೆಲಸವೂ ಬಹು ಹೆಮ್ಮೆಯದು. ಅವನು ಆರತಿ ಶುದ್ಧಗೊಳಿಸಲು ಉಪಯೋಗಿಸುವುದು, ಮೊದಲನೇ ಸುತ್ತಿನಲ್ಲಿ ಬರುವ, ಮೂರು ನಾಲ್ಕು ಬತ್ತಿ ಇರುವ ಚಪ್ಪಟೆ ಇರುವ ಹಿತ್ತಾಳೆ ಆರತಿಯದ್ದು. ಮೊದಲು ಮೊದಲು ಬರುವ ಆರತಿಗಳಲ್ಲಿ ಒಂದೆರೆಡು ಬತ್ತಿಗಳು ಮಾತ್ರ ಇದ್ದು, ಅದನ್ನು ಕೈಯಲ್ಲೇ ತೆಗೆದು ಶುದ್ಧಗೊಳಿಸುವುದು. ಆರತಿಯನ್ನು ಶುದ್ಧಗೊಳಿಸುವಾಗ, ಸುಡುವ ಎಣ್ಣೆ, ಸುಟ್ಟ ಎಣ್ಣೆ ಬಟ್ಟೆಯ ಕರಕಲು, ಹಲಗೆಗೆ ಅಂಟಿ ಅರ್ಧ ಬೆಂದ ಹಸಿ ಹಿಟ್ಟು, ಹಾಗೂ ಆರುವ ಬೆಂಕಿಯ ಹೊಗೆ ಇವೆಲ್ಲ ಸೇರಿ ಸಿಗುವ ಸಂಯುಕ್ತ ಸುವಾಸನೆಯ ಸುಖ ಗರ್ಭಗುಡಿಯ ಗೋಡೆಗೆ ಮುಖ ಹಾಕಿಕೊಂಡವನಿಗೆ ಶುದ್ಧಗೊಳಿಸುವವನಿಗೆ ಸಿಕ್ಕಷ್ಟು ಮತ್ತಾರಿಗೂ ಇಲ್ಲ. ಹೆಚ್ಚಾಗಿ ಈ ಕೆಲಸವು ಮುಡಿಪಿನಲ್ಲಿ ಇರುವ ಕಿರಿಯನಿಗೇ ಸಿಕ್ಕು, ಮುಂದಿನ ದಿನಗಳಲ್ಲಿ ಹಿರೇಮಣಿ ಆಗುವಷ್ಟು ಸ್ಫೂರ್ತಿ ಈ ಸಂಯುಕ್ತ ಸುವಾಸನೆಯಲ್ಲಿ ಅಡಗಿರುತ್ತದೆ.
ಆರತಿ ಆಗುವಾಗ, ಸಿಗುವ ಸ್ವಯಂಸೇವೆಯಲ್ಲಿ ನಾಲ್ಕನೇ ಸ್ಥಾನ, ಸರದಿಯಲ್ಲಿ ಏರ್ಪಡಿಸಿದ ಆರತಿಗಳನ್ನು ಹಿರೇಮಣಿಗೆ ತಂದುಕೊಡುವವನದ್ದು. ಈವರೆಗೆ ಅವಕಾಶ ಸಿಗದೇ ಇರುವ ಕಿರಿಯರು ಅವನಿಗೆ ತೈನಾತಿಯಾಗಿ ಆರತಿಯನ್ನು ದೂಡಿಕೊಡುವಲ್ಲಿ ಸಹಕರಿಸಿ ಧನ್ಯರಾದರೆ, ಇತ್ತ ಐದನೇ ಸ್ಥಾನ, ಹಿರೇಮಣಿಯ ಪಕ್ಕದಲ್ಲಿರುವವನಿಗೆ. ಅವನು ರಥದ ಆರತಿಯಂತಹ ದೊಡ್ಡ ಆರತಿಗಳ ಬತ್ತಿಗಳಿಗೆ ಬೆಂಕಿ ಹಚ್ಚಿಸುವಲ್ಲಿ ಹಿರೇಮಣಿಗೆ ಸಹಕರಿಸುವುದಲ್ಲದೇ, ಹಿಂದೆ ಆರತಿ ದೂಡಿ ಕೊಡುವವನ ಇಲ್ಲಾ ಅವನ ತೈನಾತಿಗಳ ಮೇಲೆ ಹಿರೇಮಣಿಯ ಪರವಾಗಿ ಸವಾರಿ ಮಾಡುವ ಯಜಮಾನಿಕೆಗೂ ಅವಕಾಶ ಇರುತ್ತದೆ. ಆರನೇ ಸ್ಥಾನದಲ್ಲಿ, ಬಲಬದಿಯಲ್ಲಿ ಆರತಿ ಹೊರಗೆ ಎಳೆಯುವನ ಪಕ್ಕ ಕುಳಿತವನಿಗೆ, ಇವನಿಗೇ ಏನೂ ಕೆಲಸವಿಲ್ಲ, ಮುಂದೊಂದು ದಿನ ಆರತಿ ಏಳೆಯುವ ಮುಂಭಡ್ತಿಯ ಹಗಲು ಕನಸು ಕಾಣುವುದು ಹಾಗೂ ಹತ್ತಿರದಿಂದ ಗರ್ಭಗುಡಿಯಲ್ಲಿನ ಆರತಿಯ ವೈಭವವನ್ನು ನೋಡಿದ ತೃಪ್ತಿ ಅಷ್ಟೇ. ಕೆಲವೊಮ್ಮೆ ಈ ತೃಪ್ತಿ ಸಾಕಾಗದೇ, ಆರತಿ ಶುದ್ಧ ಗೊಳಿಸುವನ ಹತ್ತಿರ ಅರ್ಧ ಆರತಿ ನಾನೇ ಶುದ್ಧಗೊಳಿಸುವೆ ಎಂಬ ಕರಾರು ಮಾಡಿಕೊಂಡು ಜಾಗ ಅದಲುಬದಲು ಮಾಡಿಕೊಳ್ಳಬೇಕಷ್ಟೇ. ಮೊದಲು ಈ ಕರಾರಿಗೆ ಒಪ್ಪಿದ ಆರತಿಯನ್ನು ಶುದ್ಧ ಮಾಡುವವನು ನಂತರ ಕೈ ಕೊಡುವ ಸಾಧ್ಯತೆಯೂ ಇದೆ, ಇಲ್ಲಾ “ಇನ್ನೊಂದು, ಇನ್ನೊಂದು” ಅಂದು ಹೇಳುತ್ತಾ, ತನ್ನ ಸೇವಾ ಭಾಗವನ್ನು ಹೆಚ್ಚಿಸುವ ಬುದ್ಧಿವಂತಿಕೆಯನ್ನೂ ಕಾಣಬಹುದು. ಇತ್ತ, ಇವನು, “ಎಂತಾ ಮಾರಾಯ ನೀನು” ಎಂದು ನಿರಾಶೆಯನ್ನು ವ್ಯಕ್ತ ಪಡಿಸಿ, ದೇವರಿಗೆ ಮುಗಿದ ಕೈಗಳನ್ನು ಇನ್ನಷ್ಟು ಬಲಪಡಿಸಿ, ಸೋಲನ್ನು ಮರೆಯಲೆತ್ನಿಸುವನು.
ಬತ್ತಿ ಹಾಕಲು ಸಹಕರಿಸಿದ ಎಲ್ಲಾ ಮಕ್ಕಳು ಗರ್ಭಗುಡಿಯ ಪ್ರಾಂಗಣದಲ್ಲಿ ಎಡಬಲದಲ್ಲಿ ಸಾಲಾಗಿ ಕುಳಿತುಕೊಳ್ಳುವರು. ಸ್ವಯಂಸೇವಕರು ಜಾಸ್ತಿಯಾದಾಗ, ಕಿರಿಯರು, ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವರು. ಒಬ್ಬ ಹಿರಿಯನಿಗೆ ಬಲಬದಿಯಲ್ಲಿ ಹಿಂದಿನಿಂದ ನಿಂತು ಜಾಗಟೆ ಬಾರಿಸುವ ಸೌಭಾಗ್ಯ, ಈ ಸೌಭಾಗ್ಯವನ್ನು ಎರಡು ಮೂರು ಜನ ಹಂಚಿಕೊಳ್ಳುವುದೂ ಉಂಟು. ಈ ಹಂಚಾಟದಲ್ಲಿ ಜಗಳವಾಗಿ, ಇಬ್ಬರು ಹಿರಿಯ ಹುಡುಗರಲ್ಲಿ ಜಾಗತಿಕ ಯುದ್ಧ ಆರಂಭವಾಗಿ, ಹೊಡೆದಾಡಿಕೊಂಡು ಜೀವಮಾನದ ತನಕ ಮಾತನಾಡದೇ ಇರದಷ್ಟು ದೋಸ್ತಿ ಮಾಯವಾದ್ದೂ ಉಂಟು. ಮಹಾಮಂಗಳಾರತಿಯ ಸಂಯುಕ್ತ ಸ್ವರಗಳು ಆವರಿಸುವಾಗ, ಈ ಜಗಳಗಳು ಪುರೋಹಿತರಿಗೂ ಹೊರಗೆ ನರೆತ ಹಿರಿಯರಿಗೂ ಕಾಣಿಸದೇ, ಪ್ರಾಂಗಣದಲ್ಲಿ ನೆರೆತ ಮಕ್ಕಳಿಗೆ ಮಾತ್ರ ಖಾಸಗಿಯಾಗಿ ಉಳಿದುಹೋಗುವವು.
ಆರತಿ ಮಾಡುವಾಗ, ಗರ್ಭಗುಡಿಯ ಪ್ರಾಂಗಣದಲ್ಲಿ ಅವಕಾಶ ಸಿಗದವರಿಗೆ, ಪ್ರಾಂಗಣದ ಹೊರಗೆ, ಎಡಬಲಗಳಲ್ಲಿ ಗಂಟೆಗಳನ್ನು ಹೊಡೆಯುವ ಅವಕಾಶ ಇರುತ್ತದೆ, ಕನಿಷ್ಠ ನಾಲ್ಕು ಗಂಟೆಗಳು ಇದ್ದೇ ಇರುತ್ತವೆ. ಪೂಜೆಯ ಮಹಾಮಂಗಳಾರತಿ ಸುಮಾರು ಹದಿನೈದು ನಿಮಿಷ ನಡೆಯುವುದರಿಂದ, ಗಂಟೆ ಬಾರಿಸುವಲ್ಲಿ ಕೈ ಬತ್ತಿ ಹೋಗುವ ಕಾರಣ, ಈ ಸ್ವಯಂಸೇವೆಯನ್ನು ಇನ್ನೊಬ್ಬನೊಂದಿಂಗೆ ಹಂಚಿಕೊಳ್ಳುವುದು ಸುಲಭ ಮಾರ್ಗವಾಗಿರುತ್ತದೆ.
ಸೋಣೆ ಆರತಿ - ಸಂಧಿ ಮೂರು
ಸೋಣೆ ಆರತಿಯ ಮೂರನೇ ಸಂಧಿಯೇ ಪ್ರಸಾದ ಮತ್ತು ಪನ್ಯಾರದ ಹಂಚಿಕೆ. ಸ್ವಯಂಸೇವೆಯಲ್ಲಿ ತೊಡಗಿದವನಿಗೆ ಈಗಾಗಲೇ ಎರಡು ಸಂಧಿಗಳಲ್ಲಿ ಬೇರೆ ಬೇರೆ ಧನ್ಯತೆಗಳು ಸಿಕ್ಕು ಒಂದು ರೀತಿಯ ಸಂತೃಪ್ತಿ ಈಗಾಗಲೇ ಮುಖದಲ್ಲಿ ರಾರಾಜಿಸುತ್ತಿರುತ್ತದೆ. ಹಿರೇಮಣಿಯಾದವನು ಆರತಿಯನ್ನು ಎಲ್ಲರಿಗೂ ತೋರಿಸಿ, ಹೆಬ್ಬಾಗಿಲನ್ನು ದಾಟಿ, ನೆರೆದಿರುವ ಇತರ ಜಾತಿಯವರಿಗೂ ತೋರಿಸಿ ಒಳಬರುವನು. (ಇಂದು ಅನಿಷ್ಟವಾಗಿ ಕಾಣುವ ಅಸ್ಪರ್ಶ್ಯತೆ ಅಂದಿನ ದಿನಗಳಲ್ಲಿ ಸಮಾಜವು ಒಪ್ಪಿಕೊಂಡ ಹೊಂದಾಣಿಕೆಯಾಗಿತ್ತು.)
ತೀರ್ಥ ಪ್ರಸಾದಗಳನ್ನು ಪಡೆಯಲು ದೊಡ್ಡವರು ಪುರೋಹಿತರ ಸುತ್ತ ನೆರೆದರೆ, ಸ್ವಯಂಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಅದು ಗೌಣವಾದರೂ, ಶುದ್ಧ ತೀರ್ಥ ಗಂಧಗಳ ಪರಿಮಳ ಮತ್ತು ರುಚಿ ಕರೆ ಮಾಡಿ ಕರೆಸಿಕೊಂಡೇ ಬಿಡುತ್ತವೆ. ಪುರೋಹಿತರು ಕೊಟ್ಟ ಹೂವು ಬಲಕಿವಿಗೆ ಸೇರಿಕೊಂಡು, ಗಂಧ ಹಣೆಗೇರಿ ಮುಖದಲ್ಲಿ ಹೊಸ ಝಲಕ್ ಮೂಡುತ್ತದೆ. ಎಲ್ಲರೂ ಶಾಂತವಾಗಿ ಎಡ ಬದಿಯ ಚಾವಡಿಯಲ್ಲಿ ಸಾಲಾಗಿ ಕುಳಿತು ಪನ್ಯಾರಕ್ಕಾಗಿ ಕಾಯುತ್ತ, ಅಂದಿನ ದಿನದ ಅನುಭವ ವೈಭವಗಳ ಸುತ್ತ ಮಾತುಗಳು ತುಂಬಿರುತ್ತದೆ. ಇತ್ತ ಬಲ ಬದಿಯ ಚಾವಡಿಯಲ್ಲಿ ಹೆಂಗಸರು ಕುಳಿತಿದ್ದರೆ, ಗಣ್ಯರಾದವರು, ಸೋಣೆ ಆರತಿ ಮಾಡಿಸುವ ಮನೆಯವರೆಲ್ಲ ಎಡಬಲ ಬದಿಗಳಲ್ಲಿ ಕೈ ಮುಗಿದು ನಿಂತಿರುತ್ತಾರೆ.
ಪನ್ಯಾರವನ್ನು ಹಂಚುವುದೂ ಒಂದು ಕಲೆ, ಇದು ಪುರೋಹಿತರಿಗೆ ಪೂರ್ಣ ಕರಗತವಾದದ್ದು. ಅವರು ಸ್ವಲ್ಪ ಪನ್ಯಾರವನ್ನು ಮನೆಯವರಿಗೆ ಪ್ರಸಾದ ರೂಪದಲ್ಲಿ ಕೊಡಲು ಮೊದಲೇ ತೆಗೆದಿಟ್ಟುಕೊಂಡು, ಶುದ್ಧೀಕರಿಸಿದ ಸಣ್ಣ ಹೆಡಿಗೆ ಯಾ ಬುಟ್ಟಿಯ ಮೇಲೆ ಬಾಳೆ ಎಲೆಯಿಟ್ಟು ತುಂಬಿ ಹರಡಿಸಿ,ಇಲ್ಲಾ ಹಿತ್ತಾಳೆಯ ದೊಡ್ಡ ಪಾತ್ರದಲ್ಲಿ ತುಂಬಿಸಿ ತರುತ್ತಾರೆ. ಮೊದಲು ನಿಂತ ಗಣ್ಯರಿಗೆ, ಮನೆಯವರಿಗೆ ಹಂಚಿ, ನಂತರ ಎಡ ಬದಿಯ ಜಗಲಿಯಲ್ಲಿ ಕುಳಿತ ಮಕ್ಕಳಿಗೆ ಹಂಚಿ, ನಂತರ ಬಲಬದಿಯಲ್ಲಿ ಕುಳಿತಿದ್ದ ಹೆಂಗಸರಿಗೆ ಹಂಚಿ, ಕೊನೆಯಲ್ಲಿ ಹೆಬ್ಬಾಗಿಲು ದಾಟಿ, ನೆರೆದಿರುವ ಇತರ ಜಾತಿಯವರಿಗೆ ಹಂಚುವರು. ಇವರು ಹೆಚ್ಚಾಗಿ, ಮಂಗಳಾರತಿಯ ಶಬ್ದ ಕೇಳಿದ ಮೇಲೆ, ಹತ್ತಿರದ ಮನೆಗಳಿಂದ ಹೊರಟು ಬರುವರು. ದೇವಸ್ಥಾನದ ಮುಂದಿನ ಭಾಗದಲ್ಲಿರು ತೋಟಗಳಲ್ಲಿ ತುಂಬಿಕೊಂಡಿರುವ ಕಾಟುಕೆಸುವಿನ ಎಲೆಯನ್ನು ಕೊಯ್ದು, ಸಾಲಾಗಿ ಅದನ್ನು ನೆಲಕ್ಕಿಟ್ಟು ಅದರ ಹಿಂದೆ ನಿಲ್ಲುವರು. ಪುರೋಹಿತರು ಎಲ್ಲಾ ಎಲೆಗಳಿಗೆ ಪನ್ಯಾರ ತುಂಬಿ ಒಳಗೆ ಬರುವರು. ಪನ್ಯಾರ ಇನ್ನೂ ಉಳಿದಿದ್ದರೆ, ಸ್ವಯಂ ಸೇವೆ ಮಾಡಿದ ಮಕ್ಕಳಿಗೆ ಇನ್ನೊಮ್ಮೆ ಹಂಚುವರು, ಈ ಸಮಯದಲ್ಲಿ ಪನ್ಯಾರ ತೀರಾ ಆಕರ್ಷಕವಾಗಿದ್ದರೆ, ಎರಡು ಮೂರು ಸರಿ ಹಿಡಿಯುವ ಪ್ರಯತ್ನದಲ್ಲಿ ದೊಂಬಿಯಾಗಿ ಪುರೋಹಿತರಿಂದ ಮುಖಕ್ಕೆ ಮಂಗಳಾರತಿಯಾಗುವುದುಂಟು. ನಮ್ಮ ತಲೆಮಾರಿನ ಹಿಂದಿನವರು, ಈ ಪನ್ಯಾರದ ವಿಷಯದಲ್ಲಿ ಸಾಕಷ್ಟು ದೊಂಬಿ, ಗೂಂಡಾಗಿರಿ ಮಾಡಿದ್ದವರು ಎಂಬುದು ಪ್ರತೀತಿ.
ಶ್ರಾವಣ ತಿಂಗಳು ಮುಗಿಯುತ್ತಾ ಬಂದಾಗ, ಒಂದು ದಿನಕ್ಕೆ ಎರಡೆರೆಡು ಮನೆಯವರ ಸೇವೆ ಮಾಡುವ ಪರಿ ಬಂದಾಗ, ಹೆಚ್ಚಿನ ಗಮ್ಮತ್ತು. ಒಂದೆಡೆ ಹಿಟ್ಟಿನ ಆರತಿ ಹತ್ತಕ್ಕಿಂತ ಹೆಚ್ಚಾಗಿ, ಬತ್ತಿಯ ಆರತಿಗಳೂ ಹೆಚ್ಚುವರಿಯಾಗಿ, ಇನ್ನೆರೆಡು ದೊಡ್ಡ ರಥದ ಆರತಿಗಳ ಅವತರಣವಾಗಿ, ಮೊದಲ ಹಾಗೂ ಎರಡನೇ ಸಂಧಿಯ ವೈಭವ ಹೆಚ್ಚಿದರೆ, ಮೂರನೇ ಸಂಧಿಯಲ್ಲಿ ಎರೆಡೆರೆಡು ಪನ್ಯಾರವಾಗಿ, ಇವೆರೆಡೂ ಕುಸುರಿಯಾಗಿ ಮತ್ತೆ ಸಿಕ್ಕರೆ, ರಾತ್ರಿ ಊಟಕ್ಕೆ ಹೊಟ್ಟೆಯಲ್ಲಿ ಜಾಗ ಖೋತಾ ಆಗುವುದು ಖಂಡಿತವೇ.
ಮನೆಗೆ ಹೋಗುವ ಮುನ್ನ, ಬತ್ತಿ ಹಚ್ಚುವಲ್ಲಿ ಮುಂಭಡ್ತಿ ಬೇಕಿದ್ದವರು ತಮ್ಮ ಅವಹಾಲುಗಳನ್ನು ಹಿರೇಮಣಿಗೆ ಒಪ್ಪಿಸಿ ಹೋಗುವರು, ಇಲ್ಲಾ ಕೆಲವೊಂದು ಖಾತೆಯಲ್ಲಿ ಪರ್ಮನೆಂಟ್ ಮಂತ್ರಿ ಎನ್ನಿಸಿದವರ ಹತ್ತಿರ ಸರದಿ ತಪ್ಪಿಸಿ, ನಾಳೆ ನನಗೊಂದು ಛಾನ್ಸ್ ಕೊಡು ಎಂದು ನೆನಪಿಸಿವರು. ಪರೀಕ್ಷೆ, ಮನೆಯಲ್ಲಿ ಕಾರ್ಯಕ್ರಮ, ಪ್ರವಾಸ ಇತ್ಯಾದಿ ಕಾರಣಗಳಿಂದ ಮರುದಿನ ಬರಲಾಗದವರು ಪರ್ಯಾಯವಾದ ತಾತ್ಕಾಲಿಕ ವ್ಯವಸ್ಥೆಯನ್ನು ಹಿರೇಮಣಿಗೂ, ಉತ್ಸುಕ ಬದಲಿ ಸ್ವಯಂಸೇವಕನಿಗೂ ತಿಳಿಸಿ ಮರೆಯಾಗುವರು.
ಮನೆಗೆ ವಾಪಾಸಾಗುವ ಸಮಯ ಈಗ. ಎಲ್ಲರೂ ಗುಂಪಿನಲ್ಲೇ, ತುಂಬಿದ ಉತ್ಸಾಹ, ಮಾತುಗಳಿಂದ ಮನೆಯತ್ತ ಧಾವಿಸುವರು, ಅಲ್ಲಲ್ಲಿ ಮೊದಲೇ ಮನೆ ಸೇರುವವರನ್ನು ಬೀಳ್ಕೊಂಡು ಅಂತಿಮವಾಗಿ ಮನೆ ಸೇರುವಾಗ, ಮನೆಯಲ್ಲಿ ಸಂಜೆಯ ದೇವರ ದೀಪ ಹಚ್ಚಿಯಾಗಿರುತ್ತಿತ್ತು, ಮನೆಯ ಹೊರಗೆ ಒಳಗೆ ದೀಪಗಳು (ಹೆಚ್ಚಿನವರಿಗೆ ವಿದ್ಯುತ್, ಕೆಲವರಿಗೆ ಚಿಮಣಿ ದೀಪ) ಉರಿಯುತ್ತಾ ಬರಮಾಡಿಕೊಳ್ಳುತ್ತಿದ್ದವು. ಮನೆಗೆ ಬಂದ ಕೂಡಲೇ ಮಾಡಬೇಕಾದ ಜಪ, ಇಲ್ಲಾ ಭಜನೆಯ ಕುರಿತು ತಾಕೀತು ಅಮ್ಮನಿಂದ ಬರುತ್ತಿತ್ತು. ಅಂದಿನ ಸೋಣೆ ಆರತಿಯ ವೈಭವದ ಮೆಲುಕು ಕ್ರಮೇಣ ಮರೆಯಾಗಿ, ಮನೆಯ, ಮರುದಿನದ ಶಾಲೆಯ ವಾಸ್ತವಗಳು ಮತ್ತೆ ಮುತ್ತುತ್ತಿದ್ದವು. ಮರುದಿನ ಶಾಲೆ ಬಿಟ್ಟಾಗಲೇ, ಆ ದಿನದ ಸೋಣೆ ಆರತಿಯು ಹೊಸ ಅವತಾರದಂತೆ ಆರ್ಭವಿಸಿ ಉತ್ಸಾಹವನ್ನು ಮತ್ತೆ ತುಂಬುತ್ತಿತ್ತು.
ಮನೆಯ ಅಂಗಡಿಯ ಕೆಲಸದಲ್ಲಿ ನಾನು ನಾಲ್ಕನೇ ಕ್ಲಾಸಿನಿಂದ ಸೇರಿಕೊಳ್ಳ ಬೇಕಾಗಿದ್ದು, ನಾನು ಸೋಣೆ ಆರತಿಗೆ ಹೋಗುವ ಅವಕಾಶಗಳು ಕಡಿಮೆಯಾಗಿ ಕೊನೆಗೆ ಸುಮಾರು ಏಂಟನೇ ಕ್ಲಾಸಿಗೆ ಬರುವಾಗ ಪೂರ್ಣ ನಿಂತೇ ಹೋಯಿತು. ಈ ವಿಷಯವು ನನಗೆ ಹದಿಹರೆಯದಲ್ಲಿ ಬದುಕಿನ ಕೊರತೆಗಳಲ್ಲಿ ಒಂದಾಗಿ ಮಾನಸಿಕವಾಗಿ ಕಾಡಿತ್ತು. ಶ್ರೀ ಕೋಟ ವಾಸುದೇವ ಕಾರಂತರ ಆಸ್ತಿಕತೆ ಹಾಗೂ ಅವರ ತಮ್ಮ ಡಾ. ಶಿವರಾಮ ಕಾರಂತರ ಉದಾಸೀನತೆ (ನಾಸ್ತಿಕತೆ ಅಲ್ಲ, more agnostic )ಯ ನಡುವಿನ ವೈಚಾರಿಕತೆ ಇವೆರೆಡಕ್ಕೂ ತೆರೆದುಕೊಂಡ ನನಗೆ, ಈ ಗೊಂದಲದಲ್ಲಿ ಹೆಚ್ಚಾಗಿ ಡಾ. ಶಿವರಾಮ ಕಾರಂತರತ್ತ ವಾಲುವಂತಾಗಿತ್ತು. (ಇದಕ್ಕೆ ಸಾಮಾಜಿಕ ಅಸ್ಪ್ರಶ್ಯತೆಯ ಶಾಪವೂ ಕಾರಣವಾಗಿತ್ತು). ಮುಂದೆ ಯೌವನದಲ್ಲಿ ಬದುಕಿನ ಅರ್ಥ, ಆಧ್ಯಾತ್ಮಗಳ ವಿಷಯಗಳಲ್ಲಿ ತೊಡಗಿಸಿಕೊಂಡರೂ, ಆಚಾರಗಳ ವಿಷಯದಲ್ಲಿ ವೈಯಕ್ತಿಕವಾಗಿ ತೀರ ಉದಾಸೀನನಾಗಿಯೇ ಉಳಿದೆನು. ಅಂತಿಮವಾಗಿ ದೇವರನ್ನು ಹುಡುಕಿ ಹೊರಟು, ಅಂತರಂಗದಲ್ಲಿ ಹಿಡಿದು ಪಡೆದ ನಂತರ, ದೇವರನ್ನು ಹೊರಗೆ ಕಾಣುವ ಕುರಿತು ಉದಾಸೀನತೆ ಮತ್ತೆ ಮುಂದುವರಿಯುವಂತಾಯಿತು. ವೈಯಕ್ತಿಕವಾಗಿ ದೇವಸ್ಥಾನಗಳನ್ನು, ಧಾರ್ಮಿಕ ಆಚರಣೆಗಳನ್ನು ಸಾಮಾಜಿಕ ಕರ್ತವ್ಯದ ಆಧಾರದಲ್ಲಿ ಗೌರವಿಸಿ ಹೊಂದಿಕೊಂಡಿರುವನಾಗಿದ್ದೇನೆ. ಇಂತಹ ಹಿನ್ನಲೆಯಲ್ಲೂ ಬಾಲ್ಯದ ಈ ಸೋಣೆ ಆರತಿಯ ಅನುಭವವು, ಕನಕದಾಸರು ರಚಿಸಿದ, ಶ್ರೀ ವಿದ್ಯಾಭೂಷಣರು ಅಫೂರ್ವವಾಗಿ ಹಾಡಿರುವ “ಇಷ್ಟು ದಿನ ಈ ವೈಕುಂಠ ಎಷ್ಟು ದೂರವು ಎನ್ನುತಲಿದ್ದೆ” ಎಂಬ ಮನೋಜ್ಞ ಹಾಡಿನಲ್ಲಿ ಬರುವ ಬೇರೆ ಬೇರೆ ಅನುಭಾವಗಳನ್ನು ಮೀರಿಸುವಂತೆ, ನನ್ನ ವೈಯಕ್ತಿಕ ಬದುಕಿನ ವೈಕುಂಠದ ಅನುಭವಗಳಲ್ಲಿ ಮಂಚೂಣಿಯಲ್ಲಿರುವ ಅನುಭಾವವಾಗಿ ಉಳಿದು ಹೋಗಿದೆ. ಆ ಕಾರಣವೇ, ಎಲ್ಲಾ ತಾರ್ಕಿಕ ಆಲೋಚನೆಗಳನ್ನು ದಾಟಿ, ಅಂತರಂಗದ ನನ್ನ ವೈಕುಂಠದ ವಾಸ್ತವದಲ್ಲಿ ಈ ಈಶ್ವರ ಮಠವನ್ನು ಸ್ಥಾಪಿಸಿಕೊಂಡಿದ್ದೇನೆ. ಧನ್ಯತೆ ಹಾಗೂ ಧನ್ಯವಾದಗಳ ಪ್ರತೀಕವಾಗಿ ಪ್ರತೀ ವರುಷವೂ ಈ ದೇಗುಲದಲ್ಲಿ ನನ್ನ ಹೆಸರಿನಲ್ಲಿ ಸೋಣೆ ಆರತಿಯೊಂದು ನಡೆದು ಹೋಗಲಿ ಎಂಬ ಸಂಕಲ್ಪಕ್ಕೆ ಬದ್ಧನಾಗಿ, ನನ್ನ ಆಂತರಿಕ ವೈಕುಂಠವನ್ನು ಮತ್ತಷ್ಟು ಬೆಳೆಸಲು ಉತ್ಸುಕನಿದ್ದೇನೆ.
ಕೆಳಗಿನ ವಿಡಿಯೋ, ಇಂದಿನ ಸೋಣೆ ಆರತಿಯ ಒಂದು ತುಣಕಷ್ಟೇ, ಬರಹದಲ್ಲಿ ಹೇಳಿದ ವೈಭವ ಇಲ್ಲಿ ಸಿಗದು. ಕೃಪೆ: ಶ್ರೀ ಕೋ. ಚ. ನಾವಡ
https://www.facebook.com/cnavada/videos/1247034106110560
ನಮಸ್ತೆ!
ನಟರಾಜ ಉಪಾಧ್ಯ
ಸೆಪ್ಟೆಂಬರ ೮, ೨೦೨೨
