ಸದೀ ಮಾಸ್ತ್ರು ಒಂದು ಕಿರು ಕಥೆ
ಸುರೇ೦೧೧
ಪರಶುರಾಮ ಕಿರು ಕಥನಗಳ ಭಾಗವಾಗಿ
ಸದೀ ಮಾಸ್ತ್ರು ಒಂದು ಕಿರು ಕಥೆ
(ನನ್ನ ಧ್ವನಿ ಹಾಗೂ ಧಾಟಿಯಲ್ಲಿ, ಮತ್ತು ಸ್ಟೈಲಿನಲ್ಲಿ)
(Author)
ಇದುವರೆಗೆ ನೀವೆಲ್ಲಾ ಸದೀ ಮಾಸ್ತ್ರು ಭಾಗ-೧, ಭಾಗ-೨, ಭಾಗ-೩ಗಳನ್ನ ಶ್ರೀಯುತರಾದ ಮಂಟಪ ನಟರಾಜ ಉಪಾಧ್ಯರು ಬರೆದದ್ದನ್ನ ಓದಿದಿರಿ . ಅವರು ಕುಂದಾಪುರ ಭಾಷೆಯಲ್ಲಿ ಬಹಳ ಅಂದರೆ ಅತೀ ಉತ್ತಮವಾಗಿಯೇ ಬರೆದಿರುವುದರಲ್ಲಿ ಸಂದೇಹವೇ ಇಲ್ಲ. ಬರಡು ಬಂಜರ ಭೂಮಿಯಲ್ಲಿ ನೀರಿನ ಸೆಲೆಯನ್ನ ಕಂಡಂತೆ, ಅದನ್ನ ಓದಿದ ಪ್ರತೀಯೊಬ್ಬರಿಗೂ ಅನ್ನಿಸುತ್ತೆ. ಈ ಪ್ರಶಂಷೆ ಅತಿಷಯೋಕ್ತಿ ಅನ್ನಿಸದು ಅಂತ ನನ್ನ ಭಾವನೆ. ಯಾವುದೇ ಒಬ್ಬ ವ್ಯಕ್ತಿಯ ವೈಯುಕ್ತಿಕ ಜೀವನದ ರೀತಿ, ನೀತಿಯನ್ನ ಬೇರವರಿಗೆ ರುಚಿ ಹತ್ತುವ ಹಾಗೆ ಬರೆಯುವುದು, ಅದೊಂದು ಉತ್ತಮವಾದ ಕಲೆ ಎಂದು ನಾನು ಭಾವಿಸುತ್ತೇನೆ. ಅದನ್ನ ಅಕ್ಷರ ಸಹ, ಶ್ರೀಯುತರಾದ, ಮಂಟಪ ಚಂದ್ರಶೇಖರ ಉಪಾಧ್ಯರ ನಾಲ್ಕನೇ ಪುತ್ರರಾದ ಶ್ರೀ ನಟರಾಜ ಉಪಾಧ್ಯರು ಬರೆದು ತೋರಿಸಿದರು. ಅದಕ್ಕಾಗಿ ನಾನು ಎಸ್ಟು ಧನ್ಯವಾದಗಳನ್ನ ಹೇಳಿದರೂ ಅದು ಕಮ್ಮಿಯೇ. ಇರಲಿ. ಆದರೆ, ಅವರು ಬರೆದದ್ದು ನನಗೆ ಪ್ರಚೋದನೆ ಸಿಕ್ಕಿದ ಹಾಗಾಯಿತು. ಅವರೇನೋ "ಕುಂದಾಪ್ರ ಭಾಷೆಯೇ ಸರಿ ಬರ್ದ, ಕನ್ನಡ ಬರುಕೇ ಬರ್ದ, ಈ ಬಿಕ್ನಾಶಿ ಬೇವರ್ಸಿ ಇಸ್ಟ್ ಕುಂದಗನ್ನಡದಲ್ಲಿ ಬರೀ ಬೇಕೆಂದರೆ, ಇನ್ನು ಬೇರವರು, ಅವರುಗಳ ವಿಷಯವನ್ನ ಚೆನ್ನಾಗಿ ತಿಳಿದವರು ಯಾಕೆ ಬರೆಯಲು ಮುಂದೆ ಬರಬಾರದೆಂದು ತಮ್ಮನ್ನ ತಾವೇ ಬೈದ ಹಾಗೆ, ಬೇರವರಿಗೆ ಬರೆಯಲು ಪ್ರೋತ್ಸಾಹ ಕೊಡುವಂತೆ ಪ್ರಚೋದನೆ ಸಿಗಲೀ ಎಂಬರ್ಥದಲ್ಲಿ ಆ ಶಬ್ದಗಳ ಬಳಕೆಯನ್ನ ಮಾಡಿದ್ದು ಅವರ ಬುಧ್ಧಿವಂತಿಕೆ, ಶ್ರೀಮಂತಿಕೆ ಹಾಗೂ ಸರಳವಂತಿಕೆಯ ಮನೋಭಾವವಗಳನ್ನ ತೋರಿಸುತ್ತೆ. ಅದು ಏನೇ ಇರಲಿ, ನಾನಂತೂ ಅವರು ಬರೆದದ್ದರಿಂದ, ಅದೂ ನಮ್ಮ ಅಪ್ಪಯ್ಯನ ಬಗ್ಗೆ ಇಸ್ಟೊಂದು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು ನಾನು ಕೂಡಾ ಅವರು ಹಾರಿದಂತಹ ನಮ್ಮೂರ ಅರಬ್ಬೀ ಸಮುದ್ರಕ್ಕೆ ಎದೆಗುಂದದೆ, ಎದೆಯನ್ನ ಮುಂದೆ ಮಾಡಿ ಹಾರಿದೆ. ಎಸ್ಟೊಂದರೂ ನಮ್ಮ ನೆರೆಮನೆಯವನಲ್ಲವೇ? ಹಾಗೆ ಸಮುದ್ರಕ್ಕೆ ಹಾರಿದವನು, ಈಗ ಈಜಾಡುತ್ತಿರುವೆ. ಮಧ್ಯ, ಮಧ್ಯದಲ್ಲಿ ಮುಳುಗುತ್ತಲೂ ಇರುವೆ ಎನ್ನುವ ಭಾಸವೂ ಆಗುತ್ತಿರುತ್ತದೆ. ಅದೇನೇ ಇರಲಿ, ಶ್ರೀಯುತ ನಟರಾಜ ಉಪಾಧ್ಯರಿಗೆ ತಿಳಿಯದ ಕೆಲವೊಂದು ವಿಚಾರಗಳನ್ನ ತಮ್ಮ ಮುಂದೆ ಪ್ರಸ್ತುತ ಪಡಿಸಲು ನಾನೀಗ ಹೊರಟಿದ್ದೇನೆ. ಇದಕ್ಕೆಲ್ಲಾ ನಿಮ್ಮಗಳ ಜಟಿಲ ಪ್ರೋತ್ಸಾಹ ಸಿಗುತ್ತೇ ಅನ್ನುವ ಅಟಲ ವಿಶ್ವಾಸ ಹಾಗೂ ಧೈರ್ಯವೂ ಇದೆ ಅನ್ನಿ! ಒಬ್ಬ ವ್ಯಕ್ತಿಯ ವೈಯುಕ್ತಿಕ ವಿಚಾರಕ್ಕೆ ಕಥೆಯ ರೂಪವನ್ನ ಕೊಡುವುದು ಬಹಳ ಕಸ್ಟ. ಈ ನಿಟ್ಟಿನಲ್ಲಿ ಶ್ರೀಯುತರಾದ ನಟರಾಜ ಉಪಾಧ್ಯರು ಮಾಡಿದ ಸಾಹಸಕ್ಕೆ, ನನ್ನ ಅನಂತಾನಂತ ವಂದನೆಗಳು. ಅವರು ಹೀಗೆಯೇ ಬರೆದು ಒಂದು ಪುಸ್ತಕವನ್ನೇ ತರಲಿ ಹಾಗೂ ಆಪುಸ್ತಕಕ್ಕೆ ಮತ್ತು ಅವರು ಬರೆದ ಪರಿಶ್ರಮಕ್ಕೆ ತಕ್ಕುದಾದ ಫಲ ಆ ದೇವರು ನೀಡಲೀ ಅಂತ ನಾನು ಆದೇವರನ್ನ ಹಾಗೂ ಇಸ್ಟದೇವತೆಯನ್ನ ಪ್ರಾರ್ಥಿಸುತ್ತೇನೇ ವಿನಹ, ಮತ್ತೇನೂ ನಾನು ಮಾಡಲು ಸಾಧ್ಯವಿಲ್ಲ.
ಈಗ ನೀವುಗಳು ಪಾರಂಪಳ್ಳೀ ಸುಬ್ರಾಯ ಉಪಾಧ್ಯರು ಎನ್ನುವ ಹೆಸರು ಅಳಿಸೆ, ಮುಂದೆ ಪರಿವರ್ತಿತಗೊಂಡಂತಹ “ಸದೀಮಾಸ್ತ” ರ ಬಗ್ಗೆ ಇನ್ನು ಹೆಚ್ಚು, ಹೆಚ್ಚಿನ ವಿವರಗಳನ್ನ ನನ್ನಿಂದ ನೀವುಗಳು ಈ ಕಥೆಯ ಮೂಲಕ ನೋಡಲಿಕ್ಕಿರುವಿರಿ. ಶ್ರೀಯುತರಾದ ಸುಬ್ರಾಯ ಉಪಾಧ್ಯರು ಹೇಗೆ ಸದಿಯ ಮಾಸ್ತರು ಆದರು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದಕ್ಕೆ ಮೊತ್ತ ಮೊದಲ ಕಾರಣ ಮಾಸ್ಟ್ರು ಕೃಷ್ಣ ಉಪಾಧ್ಯರ ಉದಾರ ಮನೋಭಾವನೆ. ಇಲ್ಲಾಂದ್ರೆ, ಹೋಟೆಲ್ಲಿಗೆ ಹೋಗಿ, ಮಾಣಿಯಂತೆ ಕೆಲಸವನ್ನ ಮಾಡುತ್ತಿದ್ದಂತಹ ಈ “ಸದಿಯನನ್ನ”, ನಮ್ಮ ಅಜ್ಜ ಹೇಳಿದಮೇರೆಗೆ ಬೆಂಗಳೂರಿನಿಂದ ,ಎಂಕ್ಟೈಯ್ಯನ ಮನೆ ಕೃಷ್ಣ ಉಪಾಧ್ಯರು ಊರಿಗೆ ಕರೆತಂದಿರಬೇಕಾದರೆ ಅದು ಎಸ್ಟು ಕಸ್ಟ ಅಂತ ನಮಗೆ ಗ್ಒತ್ತು. ಕಾರಣ ಹೋಟೇಲಿನಲ್ಲಿ ಉಣ್ಲಿಕ್ಕೆ, ಜಿಲೇಬಿ (ನಮ್ಮ ತಂದೆಯ ಅತೀ ಇಸ್ಟವಾದ ಸಿಹಿ ತಿಂಡಿ. ಹಾಗೆ ನೋಡಿದರೆ ಅವರಿಗೆ ಸಿಹಿಗಳೇ ಜಾಸ್ತಿ ಇಸ್ಟ. ಪಾಯಸವನ್ನು ಮಾಡಿದರೂ ಸಾಮಾನ್ಯವಾಗಿ ಮಿಶ್ರಣ ಮಾಡುವ ಬೆಲ್ಲ ಸಾಕಾಗದೇ ಇನ್ನಸ್ಟು ಮುದ್ದೆ ಬೆಲ್ಲ ಅವರೆದುರು ಹಾಕಲೇ ಬೇಖು. ಇಲ್ಲಾಂದ್ರೇ, ಅವರ ಬಟ್ಟಲಿಗೆ ಹಾಕಲೇ ಬೇಕು.) ಪುಕ್ಕಟೆಯಾಗಿ ಹೊಡೆಯಲಿಕ್ಕೆ ಯಾವ ಅಡ್ಡೀ ಆತಂಕಗಳೂ ಇಲ್ಲ. ಅಂತಹವರನ್ನ ನಮ್ಮ ವರಟು, ಹಟಮಾರಿತನದ ಅಜ್ಜೈಯ್ಯ, ಅವರನ್ನ ಬೆಂಗಳೂರಿಗೆ ಅಟ್ಟಿ, ಕರೆಸಿ, ಗುಡ್ಡೀ ಶಾಲೆಯಲ್ಲಿ (ಇದೊಂದು ಪ್ರೈವೇಟ್ ಶಾಲೆ. ಪಾಪ ಈಗ ಮಕ್ಕಳಿಗಾಗಿ ಈ ಶಾಲೆಯ ಮುಕ್ತೇಷರಾದ ಶ್ರೀಯುತ ಸುಬ್ರಹ್ಮಣ್ಯ ಉಪಾಧ್ಯರು, ಮಾಸ್ಟ್ರ (ಕೃಷ್ಣ ಉಪಾಧ್ಯರು-ಈಗ ಅವರು ಇಲ್ಲ ಅನ್ನಿ.) ಹಿರೇ ಮಗ ಹಾಗೂ ರಿಟಾಯರ್ಡ್ ಪ್ರಾಂಶುಪಾಲ , ಕೋಟ ಜೂನಿಯರ್ ಕಾಲೇಜ್, ಅವರು ಈಗ ಒದ್ದಾಡುವುದನ್ನ ನೋಡಿದರೆ ನನಗೇ ಅಯ್ಯೋ ಪಾಪ ಅನ್ನಿಸುತ್ತೆ. ೩೦೦ ಮಕ್ಕಳಿಂದ, ೭ ಜನ ಅಧ್ಯಾಪಾಕರಿಂದ ತುಂಬಿ ತುಳುಕುತ್ತಿರುವ ಶಾಲೆಯಲ್ಲೀಗ ಬರೇ ೪೦-೫೦ ಮಕ್ಕಳು, ಒಬ್ಬ ಟೀಚರ್! ಅವರ ಸಂಬಳಕ್ಕೂ ಊರವರೊಡನೆ ವಂತಿಕೆ ಹಾಕಬೇಕು.! ಕೆಲಸವನ್ನ ಕೊಟ್ಟಿರುವುದು ಅವರ ದೊಡ್ಡತನವನ್ನ ಸೂಚಿಸುತ್ತೆ. ಅಂತೆಯೇ ನಮ್ಮ ಅಪ್ಪನೂ ಕೂಡ ಈ ಪಡೆದಂತಹ ದೇಣಿಗೆಯನ್ನ ಬಡ್ಡೀ ಸಮೇತವಾಗಿ, ಅವರ ಸಂಸಾರದವರಿಗೆ ಚುಕ್ತ ಮಾಡಿರುತ್ತಾರೆ ಎಂಬುದು ನನಗೆ ಅಥವಾ ನಮಗೆ ಒಂದು ಹೆಮ್ಮೆಯ ವಿಷಯವೇ ಸರಿ. ಹೇಗೆಂದರೆ ಏನು? ಅಂತ ನೀವುಗಳು ಕೇಳಬಹುದು. ಅದು ಹೀಗೆ. ಮಾಸ್ಟ್ರು ಮನೆಯಲ್ಲಿ ನಡೆಯುವಂತಹ ಯಾವುದೇ ಮದುವೆ, ಉಪನಯನ , ವಡ್ಡಂತಿ ಉತ್ಸವ ಹೀಗೇ ಯಾವುದೇ ಸಮಾರಂಭಗಳನ್ನ ನಮ್ಮ ಅಪ್ಪಯ್ಯ ಚಾಚೂ ತಪ್ಪದೆ ಹೋಗಿ ಅದನ್ನ ಒಳ್ಳೇ ರೀತಿಯಲ್ಲಿ ನೆರವೇರುವಂತೆ ನಿಗ್ರಹಿಸುತ್ತಿದ್ದರು. ಮಾಸ್ಟ್ರು ಸತ್ತ ಮೇಲೂ, ಶ್ರೀಯುತ ರಂಗಯ್ಯ ನಾವಡರು ಆ ಹೊರೆಯನ್ನ ತೆಗೆದುಕೊಳ್ಳುವವರೆಗೂ ನಮ್ಮ ಅಪ್ಪಯ್ಯನದ್ದೇ ಘುರಿಕಾರತ್ವ ಎಂದರೆ ತಪ್ಪಾಗದು.(ಇಲ್ಲಿ ಅಪ್ಪೈಯ್ಯನ ಯಾನಾರ ತೊಟ್ಟಂಬೀ ಘುರಿಕಾರ ಪೋಂಕೇ ಅನ್ನುವ ಪದ ನನಗೆ ಜ್ನಾಪಕಕ್ಕೆ ಬರುತ್ತೇ ನೋಡಿ!.) ಅಸ್ಟೊಂದು ಶ್ರಧ್ಧೆ ಹಾಗೂ ಅವರ ಮೇಲಿಟ್ಟ ಅಚಲವಾದ ಭಕ್ತಿ! ಆದರೆ ಇದು ನಮ್ಮ ಅಪ್ಪೈಯ್ಯನದ್ದು ಸ್ವಲ್ಪ ಜಾಸ್ತಿಯೇ ಆಯ್ತೋ ಅಂತ ಅನ್ನಿಸುತ್ತೇ ನನಗೆ. ಕಾರಣ ನಾನ್ ತಾನೇ ಹೆಚ್ಚಿಗೆ ಅವರ ಜೊತೆಯಲ್ಲಿ ಊರಲ್ಲಿ ಇದ್ದವ! ನಮ್ಮ ಅಪ್ಪಯ್ಯ ಮಾತ್ರ ಶಾಲೆಯಲ್ಲಿ ಒಳ್ಳೇ ಶ್ರದ್ಧೆಯಿಂದ, ಪೂರ್ತಿ ತಮ್ಮ ಶಕ್ತಿಯನ್ನ ಹಾಕಿ ಕೆಲಸ ಮಾಡಿ ಹೆಸರನ್ನ ತರಿಸಿಕೊಟ್ಟರಲ್ಲದೆ, ಅತೀ ಹೆಚ್ಚು ಮಕ್ಕಳು ಆ ಬ್ಯಾಳಿ ಗುಡ್ಡಿ ಶಾಲೆಗೆ ಬರುವ ಹಾಗೆ ಮಾಡಿದ್ದು ಇನ್ನೊಂದು ರೀತಿಯಲ್ಲಿ ಮಾಸ್ಟ್ರು ಕೃಷ್ಣ ಉಪಾಧ್ಯರ ಕುಟುಂಬಕ್ಕೆ ಇವರಿಂದ ಒಳ್ಳೇ ಕಪ್ಪ ಸಂದಾಯವೇ ಸರಿ!. ಏನೇ ಇರಲಿ, ಈ ಸದಿಯ (ಆಂಗ್ರೇಜಿಯಲ್ಲಿ ನಿಕ್ ನೇಮ್ ಅನ್ತಾರಲ್ಲಾ ಹಾಗೆ ಇವರಿಗೂ ಪ್ರೀತಿಯಿಂದ ಈ ಹೆಸರಿನಿಂದ ಕರೆಯುತ್ತಿದ್ದದ್ದು) ಎನ್ನುವ ಹೆಸರು ಹೋಗಿ ಕ್ರಮೇಣ ಪ್ರಸಿಧ್ಧವಾದ, ಗೌರವಿತರಾದ “ಸದಿಯ ಮಾಸ್ತರ್” ಆದರು! ಅದೂ ಈ ಹಳ್ಳಿಯಲ್ಲಿ! ಹಾಗೂ ಬ್ಯಾಳಿ ಗುಡ್ಡಿಯಲ್ಲಿ! ಈಗ ಇವರ ಬಾಲ್ಯದ ಕಥೆಗೆ ಬರೋಣ.
ಸದಿಯ ಹಾಗೂ ಒಬ್ಬರೇ ಅಕ್ಕನಾದ ಭೀಮಕ್ಕ ಅಥವಾ ಭೀಮಜ್ಜಿ(ನಮಗೆಲ್ಲಅಂದರೇ ಇಡೀ ಊರವರಿಗೆ ಕೂಡಾ!) ಓಟ್ಟೊಟಿಗೆ ಬೆಳೆದವರು. ಈ ಭೀಮಕ್ಕನ ಮೇಲೆ ಎಲ್ಲಿಲ್ಲದ ಪ್ರೀತಿ ಈ ಸದಿಯನಿಗೆ (ಕ್ಷಮಿಸಿ ಮಗನಾಗಿ ಇಲ್ಲಿ ಏಕವಚನದಲ್ಲಿಯೇ ಬರೆಯುತ್ತಿರುವೆನು. ತಪ್ಪು ತಿಳಿಯದಿರಿ) ಈ ಭೀಮಕ್ಕನ ಪುರಾಣ ಬೆಳಿಗ್ಗೆ ೪ ಗಂಟೆಗೆ ತನ್ನ ತಮ್ಮನ ಹತ್ತಿರ ಶುರುವಾಯಿತೆಂದರೆ ಅದು ಕೊನೆಗಾಗುವುದು ಬೆಳಿಗ್ಗೆ ೬ ಗಂಟೆಗೇ. ಅದೂ ನಮ್ಮ ಅಮ್ಮ ವಾಗಮ್ಮ ಬಯ್ಯುವರೆಗೆ ಆ ಪುರಾಣ ಈ ಸದಿಯನ ಹತ್ತಿರ ನಡೆಯುತ್ತಾ ಇರುತಿತ್ತು. ಆ ಪುರಾಣದಲ್ಲಿ ಹೆಚ್ಚಿನದ್ದು ಭೀಮಕ್ಕನ ಮಗ ಸೋಮಯ್ಯ ಮೈಯ್ಯರ ಮತ್ತು ಅವರ ಹೆಂಡತಿ ಗಂಗಮ್ಮನದ್ದೇ ಜಾಸ್ತಿ ಇರುತಿತ್ತು. ಭೀಮಕ್ಕನು ಬಹು ಬೇಗ ಮುಂಡಿಯಾಗಿದ್ದಳು. ಆದರೆ ನಮ್ಮ ಅಜ್ಜಯ್ಯನಿಗೆ ಅವರೊಬ್ಬರು ಮಗನಿಗಿಂತಲೂ ಹೆಚ್ಚಿಗೆ! ಭೀಮಜ್ಜಿ ಹೇಳಿದ್ದು ಪರಮಜ್ಜನಿಗೆ ವೇದ ವಾಕ್ಯ. ಜಾಸ್ತಿ ಯಾಕೆ, ಪಾರಂಪಳ್ಳಿ, ಪಡುಕೆರೆಯಲ್ಲಿರುವ ,ನಮ್ಮ ಮೂಲ ಮನೆಯ ಇಡೀ ಅಡುಗೆ ಮನೆಯನ್ನ ಕಟ್ಟಿದವರೇ ಭೀಮಜ್ಜಿ. ಅದೂ ಅವರ ಸ್ವಂತ ಖರ್ಚಿನಲ್ಲಿ! ಇವರ ಗಂಡ ಆ ಕಾಲದಲ್ಲಿ ಸರ್ವೇಯರ್ ಆಗಿದ್ದರಂತೆ. ನೂರು ಚಿನ್ನದ ನಾಣ್ಯಗಳನ್ನೂ ಕಲೆ ಹಾಕಿದ್ದರೆಂದು ನಮ್ಮ ಅಪ್ಪನ ವರದಿ! ಅದು ಸುಳ್ಳಾಗಿರಲಿಲ್ಲ ಅನ್ನಿ. ಈ ಸಂಗ್ರಹಿಸಿದಂತಹ ನಾಣ್ಯಗಳು , ಮನೆಯನ್ನ ಅಳಿದು ಕಟ್ಟುವಾಗ, ಮನೆಯ ಹಳೆಯ ಗೋಡೆಯೊಳಗೆ ಸಿಕ್ಕಿತು ಅಂತ ನಮಗ್ ಸಿಕ್ಕಿದ ವರದಿಯಲ್ಲುಂಟೂ ಅನ್ನಿ! ಆ ನಾಣ್ಯಗಳಲ್ಲಿ, ನಮ್ಮ ಅಪ್ಪೈಯ್ಯ ೪ ನಾಣ್ಯಗಳನ್ನ ದುಡ್ಡು ಕೊಟ್ಟು ಕೊಂಡಿದ್ದರು. ಮತ್ತೆ ೨೫ ನಾಣ್ಯಗಳು ಸೋಮೈಯ್ಯ ಮೈಯ್ಯರ , ಅಂದರೆ ಭೀಮಜ್ಜಿಯ ಏಕ ಮಾತ್ರ ಪುತ್ರರ ಮಗಳ ಮದುವೆಗೆ ಸೊಂಟದ ಪಟ್ಟಿಯಿಂದ ಹಿಡಿದು, ಒಡವೆಗಳವರೆಗೆ ಖರ್ಚನ್ನ ಮಾಡಿದರಂತೆ!. ಮತ್ತುಳಿದ ನಾಣ್ಯಗಳ ಕಥೆ ಏನಾಯಿತೋ ಅಂತಾ ಈಗ ಕೇಳಿದರೆ ಅವರ ಯಾರೊಬ್ಬಮಕ್ಕಳಿಗೂ ಗೊತ್ತಿಲ್ಲವಂತೇ! ಬಿಡಿ ನಮಗೇಕೇ? ಬೇರವರ ಮನೆ ವಿಚಾರ? ಭೀಮಜ್ಜಿ ಗಂಡ ಸತ್ತ ಮೇಲೆ, ನಮ್ಮ ಪಡುಕೆರೆಯಲ್ಲಿರುವ ಅನಾದಿ ಮನೆಯಲ್ಲಿಯೇ, ಮನೆಕೆಲಸದಿಂದ ಹಿಡಿದು, ಗದ್ದೆ ಕೆಲಸದವರೆಗೆ ಹಾಗೂ ಸಮುದ್ರಕ್ಕೆ ಜಿಗಿದು ಬಳಿದುಕೊಂಡು ಬರುವಂತಹ ಸಾಮಾನುಗಳನ್ನ ಹಿಡಿದು ತರುವವರೆಗೆ ನಮ್ಮಜ್ಜ ಪರಮಜ್ಜನಿಗೆ ಊರುಗೋಲಾಗಿದ್ದರಂತೆ! ನಮ್ಮ ಊರಿನಲ್ಲಿರುವ ಹಳೇ ಮನೆಯಲ್ಲಿರುವ ಅಡುಗೇ ಮನೆಯನ್ನ ಕಟ್ಟಿಸಲೂ ಭೀಮಜ್ಜಿಯೇ ಕಾರಣೀಭೂತಳಂತೆ. ಹೆಚ್ಚೇಕೆ? ಅದು ಅವಳದ್ದೇ ದುಡ್ಡಂತೆ. ಪರಮಜ್ಜನ ಹಳೇ ಮನೆಯ ಮೇಲಿನ ಉಪ್ಪರಿಗೆಯವರೆಗೆ ಒಂದು ಕೊಗ್ಳ ಕಂಬವನ್ನ ಹಾಕಿರುವುದು ನೀವೆಲ್ಲಾ ಇವತ್ತಿಗೂ ನಮ್ಮ ಊರಿಗೆ ಹೋದಲ್ಲಿ ನೋಡಬಹುದು. ಏನೇ ಇರಲಿ, ಪರಮಜ್ಜ ಕಟ್ಟಿದಂತಹ ಮಣ್ಣಿನ ಮನೆಯ ವಿಚಾರವನ್ನ ಮಾತನಾಡಿದಾವಾಗ, ಇಲ್ಲಿ ಬಂತು ನೋಡಿ ನಮ್ಮ ಪರಮಜ್ಜನ ವಿಚಾರ. ಸದಿಯ ಮಾಸ್ತರ ಬಗ್ಗೆ ಹೇಳಬೇಕೆಂದರೆ, ಅವರ ಅಪ್ಪ, ಅಂದರೆ ನಮ್ಮ ಅಜ್ಜ, ಪರಮಜ್ಜನ ಬಗ್ಗೆ ಹೇಳಲೇ ಬೇಕು.
ಇವರ ಹೆಸರು ಪರಮೇಷ್ವರ ಉಪಾಧ್ಯರು. ಇವರು ಬಹಳ ಕಟ್ಟು ನಿಟ್ಟಿನ, ಸಿಟ್ಟಿನ ಮನುಷ್ಯರು ಹಾಗೂ ಬಹಳ ಕಸ್ಟವಾನಿಗಳು. ಪೂಜೆ ಪುನಸ್ಕಾರದಲ್ಲಿ ಎತ್ತಿದ ಕೈ. ಗ್ರಾಮದ ದೇವತೆಯಾದ ಇಸ್ಟದೇವತೆಗೆ ೧೦೮ ಗಾಯತ್ರೀ ಮಂತ್ರವನ್ನ ಹೇಳಿ ಒಂದು ಚಂಬು ನೀರನ್ನ ಪ್ರತೀ ದಿನವೂ ಹಾಕುವುದೆಂದರೆ, ನಮ್ಮ ಅಜ್ಜ ಪರಮಜ್ಜ ಮಾತ್ರ! ಆ ಪಾರಂಪಳ್ಳೀ , ಪಡುಕೆರೆಯಲ್ಲಿ!. ಆದರೆ ಒಂದೊಮ್ಮೆ, ಗ್ರಾಮ ಪಟೇಲರು, ಕೇರಳದ ಮಲೆಯಾಳೀ ಮಂತ್ರವಾದಿಯನ್ನ ಕರೆದು ಇಸ್ಟದೇವತೆಯ ಬಗ್ಗೆ ಪ್ರಶ್ನೆಯನ್ನ ಕೇಳಿದಾವಾಗ, ಆ ಮಂತ್ರವಾದಿ, ಹೀಗೆ ಹೇಳಿದ:-
" ನಿಮ್ಮಲ್ಲಿ ಯಾರೋ ಒಬ್ಬರು ದೇವರಿಗೆ ಗಾಯತ್ರೀ ಮಂತ್ರವನ್ನ ಹೇಳಿ, ನೀರನ್ನ ಹಾಕುವುದರಿಂದ, ದೇವರ ಕಳೆ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ" ಅಂದನಂತೆ.!"
ಅದು ಯಾರೂ ಎಂದು ಪಟೇಲರು ಯೋಚಿಸಿದಾವಾಗ, ಇದು ಪರಮಜ್ಜನ ಕೆಲಸ ಅಂತ ಗೊತ್ತಾಯುತು. ಒಂದು ದಿನ ಅವರು ಪೂಜೆಯಲ್ಲಿ ಕುಳಿತ್ತಿದ್ದಾವಾಗ, ಪಟೇಲರು ತಮ್ಮ ಇಬ್ಬರು ಆಪ್ತರಿಗೆ "ಅವನ ರೆಟ್ಟೆಯನ್ನ ಹಿಡಿದು ಆಚೆ ದಬ್ಬಿರೋ" ಅಂದರಂತೆ.
ಮುಂದೊಂದು ದಿನ ಇದೇ ರೀತಿ ಶ್ರಿಯುತರಾದ ಕಾಫಿಪುಡಿ ನಾರಾಯಣ ಉಪಾಧ್ಯರು ದಕ್ಕೆ ಬಲಿಯಲ್ಲಿ, ಪಟೇಲರನ್ನ ಎರಡೂ ಕೈಯಿಂದ ಹಿಡಿದು ದೇವಸ್ತಾನಕ್ಕೆ ಕರೆದೊಯ್ದಿದ್ದರು. ಇದು ಏಕೆಂದರೆ ಅವರು ನಾನು ಬರುವುದಿಲ್ಲ ಎಂದು ಹಠ ಮಾಡಿದ್ದಕ್ಕೆ. ಅವರು ಬಾರದೆ ಇಸ್ಟ ದೇವತೆಗೆ ಮಂಗಳಾರತಿ ಆಗುತ್ತಿಲ್ಲ. ಇರಲಿ ಈ ಕಥೆ ಬೇಡ ಈಗ. ಕಾರಣ ಇದನ್ನ ನಾನು ಆವಾಗಲೇ ನಿಮಗೆ ಈ ಬಗ್ಗೆ ಹೇಳಿರುತ್ತೇನೆ. ಪಟೇಲರು ಹೀಗೆ ಹೇಳಿದ್ದೇ ತಡ, ಆ ವ್ಯಕ್ತಿಗಳು ನಮ್ಮ ಅಜ್ಜ ಪೂಜೆಯನ್ನ ಮಾಡುತ್ತಿದ್ದವರ ರೆಟ್ಟೆಯನ್ನ ಹಿಡಿದು ಹೊರಗೆ ಎಳೆದು ಹಾಕಿದರು. ಇದನ್ನ ಸಹಿಸದ ನಮ್ಮ ಅಜ್ಜ, ಪರಮಜ್ಜ, ತಂಬಿಗೆ ನೀರನ್ನ ಮರಳಿನ ಮೇಲೆ ಸಂಪೂರ್ಣ ಸುರಿದು, ನೀವು ಹಾಳಾಗಿ ಹೋಗಿ ಅಂತ ಶಾಪ ಕೊಟ್ಟರಂತೆ. ಆ ಉರಿ ಬಿಸಿಲಿನಲ್ಲಿ, ಅದೂ ಮಟ ಮಟ ಮಧ್ಯಾಹ್ನದಲ್ಲಿ, ಸುಡುತ್ತಿರುವ ಹೊಯಿಗೆಯಲ್ಲಿ, ಸಿಟ್ಟಿನಲ್ಲಿ ಬೇಗನೆ ಒಂದು ಬಿಳಿ ಬೆಣಚು ಕಲ್ಲನ್ನೊಂದು ಹಿಡಿದು, ಮನೆಗೆ ಬಂದು, ಸದಿಯನಿಗೆ, ಹೇಳಿದರು:-ಇನ್ನು ಮುಂದೆ ಇದೇ ಇಸ್ಟದೇವತೆ ಎಂದು ಮನೆಯಲ್ಲಿಯೇ ದೇವರ ಗೂಡಿನಲ್ಲಿಟ್ಟು ಪೂಜೆಯನ್ನ ಮಾಡಿ. ಅದಕ್ಕಾಗಿ ನೀವುಗಳು ದೇವರ ಗುಡಿಗೆ ಹೋಗುವ ಅಗತ್ಯವಿಲ್ಲ ಅಂದರು. ಮರುದಿನದಿಂದ, ನಮ್ಮ ಅಜ್ಜೈಯ್ಯನು, ಆ ಕಲ್ಲನ್ನೇ ಇಸ್ಟದೇವತೆಯೆಂದು ಪೂಜಿಸತೊಡಗಿದರು. ಆದರೆ ಮುಂದೆ ಏನಾಯಿತೆಂದರೆ, ಇಬ್ಬರು ರೆಟ್ಟೆಯನ್ನ ಹಿಡಿದು ಹೊರಗೆ ಹಾಕಿದಂತಹ ಆ ಇಬ್ಬರಲ್ಲಿ ಒಬ್ಬರಿಗೆ ಲಕ್ವ ಹೊಡೆದು, ಕೊನೆಗೆ ಅವರಿಗೆ ಬ್ರಹ್ಮಾವರಕ್ಕೆ ಹೋಗಿ ಪಾರಿವಾಳದ ಎಣ್ಣೆಯನ್ನ ತಂದು ಮೊಸ್ಸೇಜ್ ಮಾಡಲು ನಮ್ಮ ಅಪ್ಪ ಸದಿಯ ಮಾಸ್ತರೇ ಬೇಕಾಯಿತು.! ಅವರ ಮನೆ ಸುಮಾರು ೧೫ ವರುಷಗಳ ಕಾಲ ಭೂತ ಬಂಗ್ಲೆಯಂತೆ ಇದ್ದಿತ್ತು. ಇನ್ನೊಬ್ಬರು ದೈವಾಧೀನರಾದರೆಂದು ವದಂತಿ. ಇದನ್ನ ಯಾಕೆ ಹೇಳಿದೆನೆಂದರೆ, ನಮ್ಮ ಅಜ್ಜನ ಮಾತು ಬಹಳ ಸತ್ಯವಾಗಿ ನಡೆಯುತ್ತಿತ್ತಂತೆ. ಇದಕ್ಕೆ ಅವರು ಮಾಡುವ ಶ್ರಧ್ಧೆಯ ಪೂಜೆಯೇ ಕಾರಣವಂತೆ ಅಂತ ಅಪ್ಪಯ್ಯ ಹೇಳುತ್ತಿದ್ದರು. ಇವರ ಸಿಟ್ಟು ನೆತ್ತಿಯ ಮೇಲೆಯೇ ಇರುತ್ತದಂತೆ. ಈಗ ಅದೇ ಸಿಟ್ಟು ನನಗೆ ಬಂದಿದೆ ಅಂತ ಅಮ್ಮ ಮತ್ತು ಅಪ್ಪಯ್ಯ ಹೇಳುತ್ತಿದ್ದರು. ಇದನ್ನ ನೀವು ಜ್ನಾನ ಪೀಠ ಪುರಸ್ಕರಿತ, ಶ್ರೀ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಅಥವಾ ಮರಳಿ ಮಣ್ಣಿಗೆ ಪುಸ್ತಕದಲ್ಲಿ ವ್ಯಕ್ತವಾಗಿದೆಯಂತೆ. ಅದರಲ್ಲಿ ನಮ್ಮ ಅಜ್ಜನು ಬೇಲಿಯ ಮೇಲೆ ಇರುವಂತಹ ಸರ್ಪದ ಹೆಡೆಯಾಕಾರದಲ್ಲಿ ಬೆಳೆದಿರುವ ಸರ್ಪಕಳ್ಳೀ ಮುಳ್ಳಿನಿಂದ ನಮ್ಮ ಅಜ್ಜಿ ಕಾವೇರಮ್ಮನಿಗೆ ಆ ಸಿಟ್ಟು ಬಂದಾವಾಗ ಹೊಡೆದಿರುವುದು ಉಲ್ಲೇಖಗೊಂಡಿದೆಯಂತೆ. ನಾನಿನ್ನೂ ಆ ಪುಸ್ತಕವನ್ನ ಓದಬೇಕಸ್ಟೆ. ಮೊನ್ನೆಯ ದಿನ ತೆಗೆದುಕೊಂಡು ಬಂದಿದೆ. ಆದರೆ ನಮ್ಮ ಮನೆಯನ್ನ ಕ್ಲೀನ್ ಮಾಡುವ ನಿಟ್ಟಿನಲ್ಲಿ, ನಮ್ಮ ಎರಡೂ ಹೆಣ್ಣು ಮಕ್ಕಳಿಗೆ ಕನ್ನಡ ಬಾರದ ಕಾರಣ, ಎಲ್ಲಾ ನನ್ನ ಕನ್ನಡ ಪುಸ್ತಕಗಳನ್ನ (ಅದರಲ್ಲಿ ಶಿವರಾಮ ಕಾರಂತರ ಪುಸ್ತಕ ಮೂಕಜ್ಜಿಯ ಕನಸುಗಳು ಹಾಗೂ ಮರಳಿ ಮಣ್ಣಿಗೆಯೂ ಇತ್ತು. ಅದನ್ನ ಕೇಜಿಗೆ ರೂಪಾಯಿ ೨೦ ರಂತೆ ಹಳೆ ಪುಸ್ತಕ, ಹಳೆ ಸಾಮಾನೂ ಅಂತ ರಸ್ತೆಯಲ್ಲಿ ಕೂಗುತ್ತಾ ಬರುವಂತಹ ವ್ಯಕ್ತಿಗೆ ಮಾರಿದರು ಅಂದರೆ ಇವರನ್ನ ಏನನ್ನಬೇಕು? ಇವರ ಕಥೆ ಹಾಗೇ ಇರಲಿ. ನಮ್ಮ ಅಪ್ಪೈಯ್ಯನಿಗೆ ಮಾತ್ರ, ಅವರಮ್ಮನ ತಾಳ್ಮೆಯ ಗುಣ ಬಂದಿದೆ ಅಂತ ನಮ್ಮ ಭೀಮಜ್ಜೀ ಹೇಳುತ್ತಿದ್ದರು. ಅದಿರಲಿ, ನಮ್ಮ ಅಪ್ಪಯ್ಯ ಮಾತ್ರ ಆ ಕಾಲದಲ್ಲಿ ಕುಂದಾಪುರ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಸುಮಾರು ೯ ವರುಷಗಳ ಕಾಲ ಬುಕ್ ಬೈಂಡಿಂಗ್ ಮಾಡುತ್ತಿದ್ದರಂತೆ. ಅವರ ಜೊತೆಯಲ್ಲಿ ಕುಂದಾಪುರ ಖ್ಯಾತ ಜ್ಯೋತಿಷ್ಯಗಳಾದ ಯಜ್ನ ಹೊಳ್ಳರೂ ಇದ್ದರಂತೆ. ಆದ್ದರಿಂದ ಅವರಿಗೂ ನಮ್ಮ ಅಪ್ಪಯ್ಯನಿಗೂ ಗಳಸ್ಯ-ಕಂಠಸ್ಯ. ಅವರ ಮಗನಾದ ದಿವಂಗತ ಸೂರ್ಯ ಹೊಳ್ಳರೂ ನನ್ನ ಆಪ್ತ ಸ್ನೇಹಿತರಾಗಿದ್ದರೆನ್ನೀ. ಇದು ಹಾಗೇ ಇರಲಿಇರಲಿ ಈಗ.
ಕೊನೆಗೆ ಒಂದು ದಿನ ನಮ್ಮ ಅಪ್ಪಯ್ಯ ಬೆಳಿಗ್ಗೆ ಎದ್ದು ಬೆಂಗಳೂರಿಗೆ ಪದ್ರಾಡ್ (ಓಡೀ ಹೋದರು). ಇದನ್ನ ನಮ್ಮ ಸೂಲ್ಕನಡಿ ಗೆದ್ದೆಯಲ್ಲಿ ಕೆಲಸವನ್ನ ಮಾಡುತ್ತಿದ್ದ ಭೀಮಜ್ಜಿ ನೋಡಿತಂತೆ. ಣೋದಿ, ಯೋ ಸದಿಯಾ ಎಲ್ಲಿಗೋಡ್ ಹೋಗುತ್ತೀಯಾ? ಮಹಾರಾಯಾ ಎಂತ ಬೊಬ್ಬೆ ಇಟ್ಟಿತಂತೇ ಅದೇ ಗದ್ದೆಯಲ್ಲಿ. ಇದನ್ನ ನೋಡಿದ ಅಪ್ಪೈಯ್ಯ, ಭೀಮಜ್ಜಿಯ ಹತ್ತಿರ ಬಂದು, ಅಪ್ಪಯ್ಯನಿಗೆ ನಾನು ಹೋದ ಮೇಲೆ ಹೇಳು ಅಂತ ಬೆಂಗಳೂರಿನ ಅವೆನ್ಯೂ ರೋಡಿನಲ್ಲಿರುವ ಒಂಟೀ ರಾಮನ ಹೋಟೆಲ್ಲಿಗೆ ಕೆಲಸಕ್ಕೆ ಬಂದರಂತೆ. ಅಲ್ಲಿ ಸ್ವಲ್ಪ ಕಾಲ ಕೆಲಸವನ್ನ ಮಾಡಿ, ಆ ಮೇಲೆ ಬಳೇ ಪೇಟೆ ಕೃಷ್ಣಭವನದಲ್ಲಿ ಸೇರಿಕೊಂಡರು. ಇವರೊಂದಿಗೆ ಈಗಿನ ಮೆಜೆಸ್ಟಿಕ್ನಲ್ಲಿರುವ ರಾಮಕೃಷ್ಣ ಲೋಡ್ಜಿನ ಮಾಲಿಕರಾದ, ಐರೋಡಿಯ ಕಾಡ ಅಲ್ಸೇಯವರು, ಸಿದ್ದಿ ಕಟ್ಟೆ ರಾಮ ಅಲ್ಸೇರು , ಶೇಷಪ್ಪ ಹೊಳ್ಳರು ಹಾಗೂ ಇನ್ನಿತರರು ಇರುತ್ತಿದ್ದರಂತೆ. ಅಲ್ಲಿ ಹಲವು ವರುಷಗಳ ಕಾಲ ಕೆಲಸವನ್ನ ಮಾಡುತ್ತಿದ್ದರಂತೆ. ಇಲ್ಲಿನ ಕೆಲವು ಅನುಭವಗಳನ್ನ ಅವರು ಹೇಳಿದ್ದು ಕೇಳಿದರೆ ನಮಗೂ ಮೈ ರೋಮಾಂಚನವಾಗುತ್ತೆ. ಒಂದೊಮ್ಮೆ ಕೋಂಪಿಟಿಷನ್ನಲ್ಲಿ ೪೪ ಜಿಲೇಬಿಯನ್ನ ತಿಂದು ಆಮೇಲೆ ಪೂರಾ ವಾಂತಿ ಮಾಡಿದ್ದರಂತೆ. ಕುದುರೆ ರೇಸಿಗೆ ಹೋಗಿ ರೂಪಾಯಿ ೧೦ ಹಾಕಿ ೨೦ ಮಾಡಿದ್ದು ಆಮೇಲೆ ಅಲ್ಲಿಗೆ ಹೋಗಲು ನಿಲ್ಲಿಸಿದ್ದರಂತೆ. ಅಸ್ಟೇಕೆ ಪ್ರತಿಜ್ನೆಯನ್ನೇ ಮಾಡಿದ್ದರಂತೆ. ಇವರು ಕಾಣಲು ಸೊಣಕಲು ಇದ್ದರೂ ಊಟ ತಿಂಡಿಯಲ್ಲಿ ಬಕಾಸುರನೇ ಆಗಿದ್ದರು!. ಈ ಹೆಸರನ್ನ ಈಗ ನನಗೂ ಮನೆಯಲ್ಲಿ ಹೇಳುತ್ತಾರೆನ್ನಿ! ಆದರೆ ಎಸ್ಟೇ ತಿಂದರೂ ಅವರಿಗೆ ಹೊಟ್ಟೆ ಬರುತ್ತಿರಲಿಲ್ಲ. ಇದಕ್ಕೆ ಕಾರಣ ಬೆಳಿಗ್ಗೆ, ಅಂದರೆ ಬ್ರಾಹ್ಮ್ಯ ಮುಹೂರ್ಥದಲ್ಲಿ ಬರೀ ಕಾಲಿನಲ್ಲಿ ಗದ್ದೆಗಳಿಗೆ ಸುತ್ತು ಹಾಕಿ ಸುಮಾರು ೪ ರಿಂದ ೫ ಕಿಲೋಮೀಟರ್ ನಡೆಯುತ್ತಿದ್ದರು. ಬೆಳಿಗ್ಗೆ ಎದ್ದು ಕೊಚ್ಚಕ್ಕಿ ಗಂಜಿಯನ್ನ ಊಟ ಮಾಡಿ ಶಾಲೆಗೆ ಹೋಗುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡಿದ್ದು, ಒಂದೂ ಮುಕ್ಕಾಲು ಗಂಟೆಯವರೆಗೆ ನಿದ್ದೆ ಮಾಡಿದ್ದು, ಆ ಮೇಲೆ ಶಾಲೆಗೆ ಹೋಗುತ್ತಿದ್ದರು. ಸಾಯಂಕಾಲ, ಶಾಲೆಯಿಂದ ಬಂದ ಮೇಲೆ ಸಾಲಿಗ್ರಾಮ ಪೇಟೆಗೆ ತಪ್ಪದೆಯೇ ಹೋಗುತ್ತಿದ್ದರು. ರಾತ್ರಿ ೮ ಗಂಟೆಗೆ ಊಟ ಮಾಡಿದ್ದು, ೮.೩೦ ಗೆ ನಿದ್ದೆಗೆ ಶರಣು ಹೋಗುತ್ತಿದ್ದರು!.ಇದು ಅವರ ದೈನಂದಿನ ಕ್ರಮವಾಗಿತ್ತು! ಈ ಒಂದು ಶಿಸ್ತು ಕೊನೆಯವರೆಗೆ ಪಾಲನೆ ಮಾಡಿಕೊಂಡು ಬಂದಿದ್ದರು. ಈವಾಗಲೂ ನಮ್ಮ ಅಣ್ಣ ತಮ್ಮಂದಿರಲ್ಲಿ ಈ ಶಿಸ್ತನ್ನ ನೀವುಗಳು ಕಾಣಬಹುದು. ನಮ್ಮಲ್ಲಿ ಊಟವಿದ್ದಲ್ಲಿ , ಅಂದರೆ ಯಾವುದೇ ಸಮಾರಂಭಗಳಿದ್ದಲ್ಲಿ ಠಣ್ ಎಂದು ೧ ಗಂಟೆಗೆ ಬಾಳೆ ಎಲೆ ಬೀಳುತ್ತದೆ. ಅದು ಸುಮಾರು ೧೯೫೦ಯಿಂದಲೇ ಶುರುವಾದಂತಹ ಒಂದು ಶಿಸ್ತು ಬದ್ಧವಾದ ಕ್ರಮ. ಇದು ಹೀಗೇ ಇರಲಿ. ಈ ಹೋಟೆಲ್ಲಿನಲ್ಲಿರುವ ಖುಷಿಯಿಂದಿರುವ ಈ ಸದಿಯ ಮಾಸ್ತರನ್ನ ಹೇಗೆ ಊರಿಗೆ ಕರೆದು ಗುಡ್ಡೀ ಶಾಲೆಗೆ ಸೇರಿಸಿದರೆಂದು ಈಗ ತಿಳಿಯೋಣ. ಈ ಕೃಷ್ಣ ಭವನ್ನಿಂದ, ಎಂಕ್ಟೈಯ್ಯನ ಮನೆ ಈಗಿನ ವಿವೇಕಾ ಜೂನಿಯರ್ ಕಾಲೇಜಿನ ನಿವ್ರತ್ತ ಪ್ರಾಧ್ಯಾಪಕರಾದ, ಶ್ರೀಯುತರಾದ ಶ್ರೀಧರ ಉಪಾಧ್ಯ ಹಾಗೂ ಅವರ ಅಣ್ಣ ಮಹಾಬಲೇಷ್ವರ ಉಪಾಧ್ಯರ ತಂದೆಯವರಾದ ದಿವಂಗತ ಕೃಷ್ಣ ಉಪಾಧ್ಯರು ನಮ್ಮ ಅಜ್ಜನ ಹೇಳಿಕೆಯ ಮೇರೆಗೆ ಬೆಂಗಳೂರಿಗೆ ಬಂದು ಊರಿಗೆ ಕರೆದುಕೊಂಡು ಹೋದರಂತೆ. ಇವರನ್ನ ಮಾಸ್ಟ್ರು ಕೃಷ್ಣ ಉಪಾಧ್ಯರು ಮಾಡಿದಂತಹ ಗುಡ್ಡೀ ಶಾಲೆಗೆ ರೂಪಾಯಿ ೫.೦೦ ಪ್ರತೀ ತಿಂಗಳ ಸಂಬಳಕ್ಕೆ ಸೇರುವಂತೆ ಮಾಡಿದರು. ಆ ಮೇಲೆ ಇವರು ಟೀಚರ್ ಹುದ್ದೆಗೆ ಟ್ರೈನಿಂಗನ್ನ ಪಡೆದು ಪೂರ್ತಿಯಾಗಿ ಪ್ರಾಧ್ಯಾಪಕರಾಗಿ ಒಂದನೇ ಕ್ಲಾಸಿನಲ್ಲಿ ಪಾಠವನ್ನ ಹೇಳುತ್ತಿದ್ದರು.
ಇವರ ಇನ್ನೊಂದು ವಿಶೇಷವೇನೆಂದರೆ ಪೂರ್ತಿಯಾಗಿ ತಮ್ಮ ಕಾರ್ಯದಲ್ಲಿ ಮಗ್ನನಾಗುವುದು ಹಾಗೂ ಇವರಲ್ಲಿರುವ ಹೊರಹೊಮ್ಮುವಂತಹ ಬಹುಮುಖ ಪ್ರತಿಭೆ. ಇವರಲ್ಲಿ ಹಾಡು ಹೇಳುವ, ಕಥೆ ಹೇಳುವ ಹಾಗೂ ಬರೆಯುವ, ನಾಟಕವನ್ನ ಬರೆಯುವ ಹಾಗೂ ನಿರೂಪಿಸುವ, ನೃತ್ಯವನ್ನ ಹೇಳಿಕೊಟ್ಟು ಮಕ್ಕಳನ್ನ ವಾರ್ಷಿಕೋತ್ಸವದಲ್ಲಿ ಕುಣಿಸುವಂತಹ, ಭಜನೆಯನ್ನ ಹಾಡುವಂತಹ ಹಲವು ಪ್ರತಿಭೆಗಳು ಇರುತ್ತಿದ್ದವು. ಇವಿಸ್ಟೂ ಜನರನ್ನ ರಮಿಸಿ ಹೆಸರನ್ನ ಗಿಟ್ಟಿಸುವ ಹಾಗೂ ಎಲ್ಲರೂ ಸದೀ ಮಾಸ್ತರ್ , ಸದೀ ಮಾಸ್ತರ್ ಅಂತ ಹೇಳಲೀ ಅನ್ನುವ ಒಂದು ದುರಾಸೆಯೂ ಒಳಗೊಳಗೇ ಇರುತ್ತಿರುವುದೇ ಇವರ ಬಹುಮುಖ ಪ್ರತಿಭೆ ಅರಳಲು ಕಾರಣವಾಯಿತು. ಇವರ ಮಕ್ಕಳೆಲ್ಲರನ್ನೂ ಈ ಕಾರ್ಯದಲ್ಲಿ ನಮ್ಮ ಅಪ್ಪಯ್ಯ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಶಾಲಾ ವಾರ್ಷಿಕ ಹಬ್ಬದಲ್ಲಿ, ಹಿರಣ್ಯ ಕಷ್ಯಪುವಿನ ನಾಟಕ, ಸತ್ಯ ಹರಿಚಂದ್ರನ ನಾಟಕ ಇವರದ್ದು ಬಹಳ ಹೆಸರುವಾಸಿ ಆಯಿತು. ಇವರ ಮಗ ಸುರೇಂದ್ರನು, ಅಜ್ಜಿ ವೇಷ, ಸತ್ಯ ಹರಿಶ್ಚಂದ್ರನ ಪಾತ್ರ, ಹಿರಣ್ಯ ಕಷ್ಯಪುವಿನ ಪಾತ್ರ, ಹೆಣ್ಣೀನ ವೇಷ ಹೀಗೆ ವಿವಿಧ ಪಾರ್ಟನ್ನ ಹಾಕಿದ್ದು ಬಹಳ ಹೆಸರುವಾಸಿಯಾದನೆಂದರೆ ಅದು ಅತಿಷಯವಾಗದು. ಅದೇ ನಮ್ಮ ರಮೇಶಣ್ಣನು ಹನುಮಂತನ ವೇಷದಲ್ಲಿ ಮಿಂಚಿದನಂತೆ. ಇದರಿಂದಾಗಿ ಸದೀ ಮಾಸ್ತರ ಮಕ್ಕಳೂ ಕೇರಿಯಲ್ಲಿ, ಊರಿನಲ್ಲಿ ಹೆಸರುವಾಸಿಯಾದರು. ಊಟಕ್ಕೆಲ್ಲಿಯಾದರೂ ಹೋದಲ್ಲಿ, "ಓ ಇವನು ಸದೀ ಮಾಸ್ತರ ಮಗ ಅಲ್ಲವಾ" ಅಂತ ಒಂದು ರೂಪಾಯಿ ಹೆಚ್ಚಿಗೆ ದಕ್ಷಿಣೆಯನ್ನ ಕೊಡುತ್ತಿದ್ದರು. ಅದನ್ನ ಆ ಮೇಲೆ ಮನೆಗೆ ಬಂದಾವಾಗ , ಅಪ್ಪಯ್ಯ ತೆಗೆದುಕೊಳ್ಳುತ್ತಿದ್ದರು. ಕಾರಣ ನನ್ನ ಹೆಸರಿನಿಂದ ನಿನಗೆ ಹೆಚ್ಚಿಗೆ ದಕ್ಷಿಣೆ ಕೊಟ್ರಪ್ಪಾ, ಅಂತ!. ಇದು ಕೂಡ ಬಡತನಕ್ಕೆ ಒಂದು ನಿದರ್ಷನ. ಏಕೆಂದರೆ ಸದೀ ಮಾಸ್ತರ ಹತ್ತಿರ ಇರುವುದು ಬರೇ ಮೂರು ಮುಡಿ ಗದ್ದೆಮಾತ್ರ!. ಆದರೆ ಇವರ ಸಮಯದಲ್ಲಿ, ಅದನ್ನ ಐದು ಮುಡಿಗೆ ಏರಿಸಿದರು. ಅದು ಹೇಗೆಂದರೆ, ಶಾಲೆಯ ಸಂಬಳವಲ್ಲ. ಇವರಿಗೆ ಒಂದು ಚಟವಿತ್ತು. ಅದೇನೆಂದರೆ, ಚಿನ್ನವನ್ನ ಅಡ ಇಟ್ಟುಕೊಂಡು ಅದರ ಮೇಲೆ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ನಮ್ಮೂರ ಶೂದ್ರರೂ, ಮೊಗೇರರೂ ಹಾಗೂ ಬ್ರಾಹ್ಮಣರೂ, ಬೇಧ ಭಾವವಿಲ್ಲದೇ ಇವರ ಹತ್ತಿರ ಬಂದು ಸಾಲವನ್ನ ತೆಗೆದುಕೊಂಡು ಹೋಗುತ್ತಿದ್ದರು. ಅದು ಒಂದು ವೇಳೆ ಮೂಲಕ್ಕೆ ಬಡ್ಡೀ ಸೇರಿ ತೀರಿಸಲು ಅವರಿಗೆ ಕಸ್ಟವಾದಲ್ಲಿ, ಅಡವಿಟ್ಟ ಮಾಲು ಸದೀ ಮಾಸ್ತರಿಗೇ!. ಇದೇ ರೀತಿ ಪಾತ್ರಗಳನ್ನೂ ಅಡವಿಟ್ಟುಕೊಂಡು ದುಡ್ಡು ಕೊಡುತ್ತಿದ್ದರು. ಹೀಗೆ ಇವರ (ನಮ್ಮ)ಮನೆಯಲ್ಲಿ ೫೦೦ ಅಡಿ ಸಂತರ್ಪಣೆ ಮಾಡುವಸ್ಟು ಪಾತ್ರಗಳು ಇರಲು ಕಾರಣ. ನಾಲ್ಕು ಅಕ್ಕಿ ಹಪ್ಪಳ ಇಡುವಸ್ಟು ತಾಮ್ರದ ದೊಡ್ಡ ಹಂಡೆಗಳು ನಮ್ಮ ಮನೆಯಲ್ಲಿದ್ದವು. ಈಗ ಅದು ಎಲ್ಲಿಗೆ ಹೋಯಿತೆಂದು ಮಾತ್ರ ಕೇಳಬೇಡಿ.! ಅದೂ ನಮಗೂ ಬೇಡ ಬಿಡಿ. ಆದರೆ ನಮ್ಮ ಅಪ್ಪಯ್ಯನ ಕಸ್ಟ ಹೀಗುಂಟೂ ಅಂತ ಹೇಳಿದೆ ಅಸ್ಟೆ. ಹೀಗೆ ಸೆಣ್ಸಿಗೆ ಒಂದು ಮುಡಿ ಹೆಚ್ಚು ಭತ್ತ ಬೆಳೆದು, ಬಡ್ಡಿಗೆ ಕೊಟ್ಟು ದುಡ್ಡನ್ನ ಇಮ್ಮಡಿ ಮಾಡಿದ್ದು, ಮನೆಯಲ್ಲಿ ಹದಾ ಖರ್ಚನ್ನ ಮಾಡುತಿದ್ದದ್ದು ಇವರು ಪೈಸಾ, ಪೈಸಾ ಜೋಡಿಸಿದ್ದನ್ನ ನೋಡಿದರೆ, ಜೀವನ ಎಸ್ಟು ಕಸ್ಟ ಅಂತ ಈಗ ನಮಗೆ ತಿಳಿಯುತ್ತದೆ. ಆದರೆ ಇದನ್ನೇ ಜನರು ಸದಿಯ ಮಾಸ್ತರು ಕಂಜೂಸ್ ಅಂತ ಹೇಳಿದ್ದೂ ನನ್ನ ಕಿವಿಗೆ ಬಿದ್ದಿದೆ. ಆದರೆ ಈ ಹೇಳಿದ ವ್ಯಕ್ತಿಗಳು ಏನೂ ಧಾರಾಳಿಗಳಲ್ಲ ಅಂತ ನಿಮಗೆ ನಾನು ಹೇಳುತ್ತೇನೆ. ಊರಿನಲ್ಲಿ ಕೆಲವರು ಬೇರವರಿಗೆ ಹೇಳಲೋಸುಗ ಇರ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಆದರೆ ನಮ್ಮ ಅಪ್ಪಯ್ಯ ವ್ಯರ್ಥ ಖರ್ಚನ್ನ ಯಾವಾಗಲೂ ಮಾಡಲಾರರು ಹಾಗೂ ತಮ್ಮ ಮಕ್ಕಳಿಗೆ ಮಾಡಲು ಬಿಡುವುದಿಲ್ಲ.
ಈ ಬಡ್ಡೀ ವ್ಯವಹಾರ ಬಹಳ ತಪ್ಪು ಅಂತ ತಿಳಿಯಲು ಅವರು ಸುಮಾರು ೬೦ ವರುಷಗಳನ್ನೇ ತೆಗೆದುಕೊಂಡರೆಂದರೆ ಸಖೇದಾಸ್ಚರ್ಯ ಪಡಬೇಕಿಲ್ಲ! ಕಾರಣ ಇವರು ಆ ಕಾಲದಲ್ಲಿ ಸಂಸಾರವನ್ನ ಸಾಗಿಸುವುದೇ ಬಹಳ ಕಸ್ಟಕರವಾಗಿತ್ತು. ಆವಾಗಲೇ ಇವರು ಸುಮಾರಿಗೆ ಮೂರು ಮುಡಿ ಗದ್ದೆಯಿಂದ, ೫ ಮುಡಿ ಗದ್ದೆಯನ್ನ ಬೆಳೆಗೆ ಅಳವಳಿಸಿಕೊಂಡಿದ್ದರು. ವರ್ಷಕ್ಕೆ ಮೂರು ಬೆಳೆಯನ್ನ ತೆಗೆಯುತ್ತಿದ್ದರು. ಮಕ್ಕಳ ಮದುವೆಯೂ ಸುಮಾರಿಗೆ ಮುಗಿಯುತ್ತಾ ಬಂದಿತೆಂದರೆ ತಪ್ಪಾಗದು. ನನ್ನ ಹಾಗೂ ನನ್ನ ತಂಗಿ ಶಾಂತಳ ಮದುವೆ ಮಾತ್ರ ಉಳಿದಿತ್ತು. ಕೊನೆಗೆ, ಮಾಡಿದ ತಪ್ಪಿಗೆ ಪ್ರಾಯಸ್ಚಿತ್ತವಾಗಿ ಹಾಗೂ ಪರಿಹಾರಾರ್ಥವಾಗಿ ಇದಕ್ಕೊಂದು ಶಾಂತಿಯನ್ನ ಮಾಡಿ, ಸುಮಾರು ೩೦೦ ಜನರಿಗೆ ಊಟವನ್ನ ಹಾಕಿ, ಬ್ರಾಹ್ಮಣರಿಗೆ ಕೈ ನೀಡಿ ದಕ್ಷಿಣೆಯನ್ನ ಕೊಟ್ಟಿದ್ದರು. ಸಮಾರಂಭದ ಅಂತ್ಯದಲ್ಲಿ ಇವರೊಂದು ಸಣ್ಣ ಭಾಷಣ ಮಾಡಿದ್ದು, ಅದರಲ್ಲಿ ತನ್ನ ಈ ತಪ್ಪನ್ನ ಸಾರ್ವಜನಿಕರ ಸಮಕ್ಷಮದಲ್ಲಿ ತೋಡಿಕೊಂಡಿದ್ದು, ಇನ್ಮೇಲೆ ಈ ವ್ಯವಹಾರಕ್ಕೆ ತಿಲಾಂಜಲಿಯನ್ನ ಕೊಟ್ಟಿದ್ದೇನೇ ಎಂದರು. ಈ ಮಾಡಿದಂತಹ ತಪ್ಪನ್ನ ಪಬ್ಲಿಕನಲ್ಲಿ ಒಪ್ಪಿಕೊಳ್ಳಲು ಎಸ್ಟು ಮಂದಿಗೆ ಎದೆಗಾರಿಕೆ ಉಂಟೆಂದು ನೀವೇ ಯೊಚಿಸಿ! ಅದಕ್ಕೆ ಗುಂಡ್ಮಿ ಸೋಮಯ್ಯ ಮೈಯರು, ಅರ್ಥಾತ್, ನಮ್ಮ ಭಾವಯ್ಯನವರು, ಭೀಮಜ್ಜಿಯ ಏಕೈಕ ಪುತ್ರರು ಹಾಗೂ ಅಪ್ಪಯ್ಯನ ಏಕೈಕ ಸೋದರ ಅಳಿಯನವರು ಈ ರೀತಿ ನುಡಿದಿದ್ದರು. " ಕಾಣ್, ಮಾವ ಮಾಡಿದ ಪಾಪಕ್ಕೆ ಈಗ ಕೈ ಎಳ್ದೆಳ್ದು ದಕ್ಷಿಣೆ, ದಾನ ಕೊಡ್ತಾನೆ. ಈ ತರ ಮಾಡಿದರೆ ಬೇರವರಿಗೂ ತೊಂದರೆ ಆದೀತು ಅಂತ ಅವನಿಗೆ ಅನ್ನಿಸಲೇ ಇಲ್ಲ!" ಅಂತ ಅಂದದ್ದುಈಗಲೂ ನನಗೆ ಜ್ನಾಪಕ್ಕಿದೆ. ಇದನ್ನ ಅಪ್ಪಯ್ಯನಿಗೆ ಹೇಳಿದರೆ ಹ್ಹಹ್ಹಹ್ಹಹಹಾ ಅಂತ ನಕ್ಕು ಸೋಮೈಯ್ಯಾ ಹಾಗೀ ಬಿಡಪ್ಪಾ ಅಂತ ಸುಮ್ಮನಿರುತ್ತಿದ್ದರು.
ನಾನು ಹುಟ್ಟಿದಾವಾಗ ಬಹುಷ್ಯ ನಮ್ಮ ಅಜ್ಜ ತೀರಿಕೊಂಡ ಹಾಗಿತ್ತು. ಕಾರಣ ನಮ್ಮ ಅಜ್ಜನ ನೆನೆಪು ನನಗಿಲ್ಲ. ಆದರೆ ಅವರ ಸತ್ತದ್ದು ಒಂದು ವಿಚಿತ್ರದ ಸನ್ನಿವೇಷವೆಂದು ಆ ಕಥೆಯನ್ನ ನಮಗೆಲ್ಲಾ ಅಪ್ಪಯ್ಯ ಹೇಳುತ್ತಿದ್ದರು. ಅದೊಂದು ಬಹಳ ವಿಶೇಷ ಸಾವು. ಪರಮಜ್ಜನದ್ದು ಭೀಷ್ಮ ಮರಣ! ಅದೊಂದು ಇಛ್ಛಾಮರಣವಾಗಿತ್ತು. ಇಲ್ಲಿ ಅದರ ಕಥೆಯನ್ನ ಹೇಳ್ತೇನೆ ಕೇಳಿ. ಬೆಳಿಗ್ಗೆ ಬೆಳಿಗ್ಗೆ ಓ ಸದಿಯಾ ಬೇಗ ಗಂಜೀ ಊಟ ಮಾಡು. ಅಪ್ಪಯ್ಯ ಏಕೆ ಅಂತ ಈ ಮಗ, ಸದಿಯ ಕೇಳಿದಾವಾಗ, ನೀ ಸುಮ್ನೆ ಮಾತ್ನಾಡದೆ ಹೋಗಿ ಊಟ ಮಾಡಿ ಬಾರ ಅಂತ ಜೋರು ಮಾಡಿದ್ರು. ಊಟವಾದ ಮೇಲೆ ಮಾಸ್ಟ್ರು ಕೃಷ್ಣ ಉಪಾಧ್ಯರನ್ನ ಕರೆದುಕೊಂಡು ಬಾ. ಕೋಡಿ ಕನ್ಯಾಣಕ್ಕೆ ಹೋಗಿ, ಆ ಯಜ್ನ ಮಾಸ್ಟ್ರಿಗೆ ಬರ ಹೇಳು. ಅವರು ಬಂದ ಮೇಲೆ ತೊರವೇ ರಾಮಾಯಣದ ಸುಂದರ ಕಾಂಡವನ್ನ ಓದಲು ಹೇಳಿದರು. ಈ ಯಜ್ನ ಮಾಸ್ಟ್ರು ಯಾರೂ ಅಂತ ಕೇಳ್ತೀರಾ? ಇವರು ನಮ್ಮ ಅಪ್ಪಯ್ಯನ ಜೊತೆಯಲ್ಲಿಯೇ ಗುಡ್ಡಿ ಶಾಲೆಯಲ್ಲಿ ಮಾಸ್ಟ್ರು ಆಗಿದ್ದರು. ಇವರು ಕ್ಲಾಸಿನಲ್ಲಿ ನಿದ್ದೆ ಹೋಗುವುದು ಜಾಸ್ತಿ! ಅವರು ಮಳೆಗಾಲದಲ್ಲಿ ತಮ್ಮ ಮಕ್ಕಳಾದ ಶೇಷ ಹಾಗೂ ಶೀನರನ್ನ ಕರೆದುಕೊಂಡು ಮನೆ ಮನೆಗೆ ಹೂವಿನ ಕೋಲನ್ನ ಮಾಡುತ್ತಿದ್ದರು. ಎಲ್ಲರ ಮನೆಗೆ ಅವರು ಹೋಗುತ್ತಿರಲಿಲ್ಲ. ಕೇರಿಯ, ಹಾಗೂ ಊರಿನ ಕೆಲವೊಂದು ಮನೆಗೆ ಮಾತ್ರ ಹೋಗಿ, ಅವರು ಕೊಡುವ ದುಡ್ಡಿನಿಂದ ಹಾಗೂ ಶಾಲೆಯವರು ಕೊಡುತ್ತಿರುವ ಕಡಿಮೆ ಸಂಬಳದಿಂದ ಅವರ ಸಂಸಾರ ಸಾಗಬೇಕಿತ್ತು. ಇದೂ ಕೂಡ ಪರಷುರಾಮ ಕ್ಷೇತ್ರದಲ್ಲಿ ಹೇಗೆ ಜೀವನೋಪಾಯವನ್ನ ಮಾಡುತ್ತಿದ್ದರೆನ್ನುವುದು ನಿಮಗೆ ತಿಳಿಯುತ್ತದೆ. ಸಂಸಾರವನ್ನ ತೂಗಿಸಿಕೊಂಡು ಹೋಗುವುದು ಬಹಳ ಕಸ್ಟ. ಎಸ್ಟೇ ದೂರವಿದ್ದರೂ ಊಟಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಮ್ಮ ಅಪ್ಪ ಪಡುಕೆರೆಯಿಂದ ಉಡುಪಿಗೆ ಸಮುದ್ರದ ಬದಿಯಲ್ಲಿ ನಡೆದುಕೊಂಡು ಕೋಡಿಯಲ್ಲಿ ಬರುವ ಅಳಿವೆಯನ್ನ ಹಾರಿಕೊಂಡು ಬೊಜ್ಜದ ಊಟಕ್ಕೆ ಹೋಗುತ್ತಿದ್ದರಂತೆ. ನಮ್ಮ ಮನೆಯಿಂದ ಉಡುಪಿಗೆ ಸುಮಾರು ೩೦ ಕಿಲೋ ಮೀಟರ್ ದೂರವಿದೆ. ನಾನು ಕೂಡಾ ನಮ್ಮ ಮನೆಯಿಂದ ಕಾಳವಾರ ಷೃಷ್ಠಿಗೆ, ಹಬ್ಬದ ಊಟಕ್ಕೆ ಹೋಗುತ್ತಿದ್ದೆನು. ನಮ್ಮದೊಂದು ದೊಡ್ಡ ಗುಂಪೇ ಇದ್ದಿತ್ತು. ಅದು ಸುಮಾರು ೨೦-೨೫ ಕಿಲೋ ಮೀಟರ್ ದೂರವಿರುತಿತ್ತು. ಇರಲಿ, ಈಗ ಮುಖ್ಯ ಸಮಾಚಾರಕ್ಕೆ ಬರೋಣವೇ. ನಮ್ಮ ಅಜ್ಜಯ್ಯನ ಅಪ್ಪಣೆಯ ಮೇರೆಗೆ ನಮ್ಮ ಅಪ್ಪಯ್ಯನ ಬಲ ತೊಡೆಯ ಮೇಲೆ ತಲೆಯನ್ನ ಇಟ್ಟು ಸುಂದರ ಕಾಂಡವನ್ನ ಕೇಳ ತೊಡಗಿದರು. ಈ ಮಧ್ಯೆ ಮಾಸ್ಟ್ರು ಕೃಷ್ಣ ಉಪಾಧ್ಯರು ಬಂದರು. ಅವರನ್ನ ಕರೆದು ಅವರ ಕೈ ಮೇಲೆ ನಮ್ಮ ಅಪ್ಪಯ್ಯನ ಕೈಯನ್ನ ಇಟ್ಟು, ನನ್ನ ಅಸ್ತಿಯನ್ನ ನಾ ಸತ್ತ ಮೇಲೆ ಕಾಶಿಯಲ್ಲಿರುವ ಗಂಗಾ ನದಿಗೆ ವಿಸರ್ಜನೆಯನ್ನ ಮಾಡುತ್ತೇನೆ ಎಂದು ಆಶ್ವಾಸನೆಯನ್ನ ತೆಗೆದುಕೊಂಡರು. ಕೊನೆಗೆ ಗಂಗೆಯ ನೀರನ್ನ ಬಾಯಿಗೆ ಹಾಕಲು ಹೇಳಿದರು. ಎರಡು ಬಿಂದು ಗಂಗೆಯ ನೀರು ಅವರ ಬಾಯಿಗೆ ಬಿದ್ದದ್ದೇ ತಡ, ಅವರು ಸ್ವರ್ಗ ವಾಸಿಯಾದರು.! ಆಶ್ಚರ್ಯ! ಎಂತಹ ಮರಣ! ಸಾಮಾನ್ಯವಾಗಿ ಪುಣ್ಯರಿಗೇ ಬರುವಂತಹ ಮರಣ ಇದು ಎಂದು ನೆರೆದಿದ್ದವರೆಲ್ಲಾ ಆಡುತ್ತಿದರಂತೆ.
ಇನ್ನೊಂದು ವಿಚಾರವನ್ನ ನಿಮ್ಮ ಮುಂದಿಡಬೇಕೆಂದಿರುವೆ. ಅದೇನೆಂದರೆ, ನಾವುಗಳು ಕಮಲಶಿಲೆಯ ಚೋಣುಮನೆ ಉಪಾಧ್ಯಾರಂತೆ. ಅಲ್ಲಿ ನಮಗೆ ಅಡಿಗಳು (ಇದು ಸುಮಾರು ೧೯೬೦ರ ಇಸವಿಯಲ್ಲಿ ನಡೆದದ್ದು. ಅವರಿಗೆ ನಾಲ್ಕು ಮದುವೆ ಆಗಿತ್ತಂತೆ. ನಾವು ಹೋದಾವಾಗ್, ಅವರದ್ದು ನಾಲ್ಕನೇ ಮದುವೆ. ಮದುಕ, ಎಡಬೆಟ್ಟಿನ ನೆಂಟಸ್ಥಿಕೆಯನ್ನ ಮಾಡಿದ್ದ!. ) ಅದೇನೇ ಇರಲಿ, ನಾವು ಚೋಣು ಮನೆ ಉಪಾಧ್ಯರು ಹೋಗಿ ಮಂಟಪ ಉಪಾಧ್ಯರು ಆದವ್ರಂತೆ ಎಂದು ಮೊನ್ನೆ ಮೊನ್ನೆ ಕಮಲಶಿಲೆಗೆ ಭೇಟಿ ಕೊಟ್ಟಾವಾಗ ಪ್ರಧಾನ ಅರ್ಚಕನೊಬ್ಬ ನನಗೆ ಮತ್ತು ನನ್ನ ದೊಡ್ಡಣ್ಣನಿಗೆ ಹೇಳಿದ. ನಮಗೆ ಇದು ಹೌದೆಂದು ಅನ್ನಿಸಿತು. ಕಾರಣ ನಮಗೂ ಮಂಟಪದ ನಮ್ಮ ದೊಡ್ಡಪ್ಪ, ಚಿಕ್ಕಪ್ಪರಿಗೆ ತಲಾ ೧೧ ಎಕ್ರೆ ಜಮೀನು ಕಮಲಶಿಲೆಯಲ್ಲಿದ್ದಿತ್ತು. ಅದಕ್ಕಾಗಿ ವರ್ಷಕ್ಕೆ ಒಂದು ಮುಡಿ ಅಕ್ಕಿಯ ರಂಗಪೂಜೆಯನ್ನ ಅಮ್ಮನವರಿಗೆ ಮಾಡಿಸಬೇಕಿತ್ತು. ಕೊನೆಗೆ ಈ ವಕ್ಕಲು ಮಸೂದೆ ಬಂದು ನಾವೆಲ್ಲರೂ ಸೇರಿ (ಅಂದರೆ ಸುಮಾರು ೧೪ ಜನರಿದ್ದರು) ಈ ಗದ್ದೆಯನ್ನ ಅಲ್ಲಿಯ ಶೆಟ್ಟರಿಗೆ ಬಿಟ್ಟು ಕೊಟ್ಟು, ದೇವಿಗೆ ಕೈ ಮುಗಿದು ಬಂದೆವು. ಆವತ್ತಿನಿಂದ ದೇವಿಗೆ ರಂಗಪೂಜೆಯನ್ನ ಮಾಡುವುದು ನಿಂತು ಹೋಯಿತು. ಆದರೆ ಅದು ನಮ್ಮ ಎರಡನೇ ಅಣ್ಣನ ಮಗ ಗಣೇಷನು,ತನ್ನ ೫ನೇ ವರ್ಷದಲ್ಲಿ ತೀರಿಕೊಂಡಾವಾಗ, ಜ್ಯೋತಿಷ್ಯಗಾರರೊಬ್ಬರಿಂದ ನೀವು ಒಂದು ದೇವಿಗೆ ಹರಕೆಯನ್ನ ಮಾಡುವುದು ನಿಲ್ಲಿಸಿದ್ದೀರಿ ಎಂದು ಹೇಳಿದಾವಾಗ ಗೊತ್ತಾಯುತು ಈ ವಿಚಾರ. ಹಾಗೆ ಆತನೂ ಕಮಲಶಿಲೆಗೆ ಹೋಗತೊಡಗಿದ. ಅಂತೆಯೇ ನಾವೂ ಕೂಡ ಅವನನ್ನೇ ಅನುಸರಿಸಿದೆವು. ಆದರೆ ಈಗಲೂ ನಾವುಗಳು ಆ ದೇವಿಯ ಭೇಟಿಯನ್ನ ಊರಿಗೆ ಹೋದಲ್ಲಿ, ವರ್ಷಕ್ಕೊಮ್ಮೆ ಮಾಡಲು ಮರೆಯುವುದಿಲ್ಲ. ಈ ಭಾರಿಯಂತೂ ಬಹಳ ಜೋರು. ಶ್ರೀಯುತರಾದ ಸಚ್ಚಿದಾನಂದ ಛಾತ್ರರು ವಿಶೇಷ ಸೇವೆಯನ್ನ ಕೊಟ್ಟಂತಹ (ರೂಪಾಯಿ ೫೦೦.೦೦ ಮತ್ತು ಹೆಚ್ಚಿಗೆ) ಜನರಿಗೆ ಕಮಲ ಶಿಲೆಯ ದುರ್ಗಾ ಮಾತೆಯ ಎದಿರುಗಡೆ ನಿಲ್ಲಿಸಿ, ಮಲ್ಲಿಗೆ ಹಾರವನ್ನ ಹಾಕಿ, ರೇಶ್ಮೆ ಶಾಲನ್ನ ಹೊದಿಸಿ, ಊಟ ಮಾಡಿಸಿ, ಒಳ್ಳೇ ಉಪಚಾರದೊಂದಿಗೆ ಕಳುಹಿಸಿದರೆಂದರೆ ನೀವುಗಳು ನಂಬುವಿರಾ?. ಇದು ಆ ದೇವಿಯ ಆಟ. ನಂಬಿದವರನ್ನ ಬಿಡುವುದೇ ಇಲ್ಲ.
ಆ ಮೇಲೆ ಆಶ್ವಾಸನೆ ಕೊಟ್ಟಂತೆ, ನಮ್ಮ ಅಪ್ಪಯ್ಯ, ಅಮ್ಮ, ಭೀಮಜ್ಜಿ, ಸೋಮೈಯ್ಯ ಮೈಯ್ಯರು, ಹಾಗೂ ಮಠದ ಮೋಟ್ ಕಿಸ್ಟೈಯ್ತಾಳರನ್ನೂ ಸೇರಿಸಿ ಕಾಶಿಗೆ ಕರೆದುಕೊಂಡು ಹೋಗಿ, ನಮ್ಮ ಅಜ್ಜಯ್ಯನ ಅಸ್ತಿಯನ್ನ ವಿಸರ್ಜನೆಯನ್ನ ಮಾಡಿ ಬಂದರಂತೆ. ನಮ್ಮ ಅಜ್ಜಯ್ಯನ ಗುಣವೇ ಈಗ ನನ್ನಲ್ಲಿದೆ ಎಂದು ನಮ್ಮ ಅಮ್ಮ ಹಾಗೂ ಅಪ್ಪಯ್ಯ ಹೇಳಿತ್ತಿದ್ದ ನೆನಪು. ಅದೇನೇ ಇರಲಿ, ನಮ್ಮ ಅಪ್ಪಯ್ಯ ಅವರ ಕಾಲದಲ್ಲಿ ಅಜ್ಜ ಮಾಡಿಟ್ಟ ಆಸ್ತಿಗಿಂತ ಹೆಚ್ಚಿಗೆ ಮಾಡಿರುವಂತಹ ಆಸ್ತಿಯನ್ನೆಲ್ಲಾ ಮಾರಿ ಆ ಹಣವನ್ನ ಸ್ಥಿರವಾದ ಡೆಪಾಸಿಟ್ ಇಟ್ಟು ಬಹಳ ಸಂತೋಷಗೊಂಡರು. ಅದು ಬೇರೆ ನಮ್ಮ ಎರಡನೇ ಅಣ್ಣಯ್ಯ ಶ್ರೀ ರಮೇಶ ಉಪಾಧ್ಯರು ದೇವರ ತಲೆಯ ಮೇಲೆ ಹೋವು ಆದರೂ ತಪ್ಪಿ ಹೋದೀತು, ಆದರೆ ಆತ ತಿಂಗಳು ತಿಂಗಳು ಕಳುಹಿಸುವಂತಹ ರೂಪಾಯಿ ೪೦.೦೦ (ನಲವತ್ತು) ರೂಪಾಯಿ ಮಾತ್ರ ಆತ ರಿಟಾಯರ್ಡ ಆಗುವವರೆಗೂ ತಪ್ಪಿಸಲಿಲ್ಲ. ಅದೇ ಆತನನ್ನ ಈವಾಗ ನಡೆಸುತ್ತಿದ್ದದ್ದೆಂದರೆ ತಪ್ಪಾಗದು. ಗಂಡು ಮಕ್ಕಳಿಗೆ ಉತ್ತಮ ನೆಂಟಸ್ಥಿಕೆಯನ್ನ ಮಾಡಿಸಿ ಅದರಲ್ಲೂ ಹೆಸರನ್ನ ಗಳಿಸಿದರೆಂದರೆ ಅತಿಶಯೋಕ್ತಿ ಅನ್ನಿಸದು. ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಸದಿಯ ಮಾಸ್ತರೊಬ್ಬರು ಬಹಳ ಚಿರಪರಿಚಿತ ಹಾಗೂ ಪ್ರಸಿದ್ಧಿಯನ್ನ ಪಡೆದಂತಹ ವ್ಯಕ್ತಿಯಾದರು. ಸೆಣ್ಸಿಗೆ ಒಂದು ಮುಡಿ ಭತ್ತವನ್ನ ಬೆಳೆದು ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಬೇಸಾಯದಲ್ಲಿ ಹೆಸರನ್ನ ಗಳಿಸಿದರು. ನಮ್ಮ ಪಡುಕೆರೆಗೆ ಜಬ್ಬಾದ ಮರದ ಸಂಕದ ಬದಲಿಗೆ ಕಲ್ಸಂಕ ಬರಲೂ ಹಾಗೂ ನಮ್ಮ ಮನೆಯವರೆಗೆ ರಸ್ತೆ ಬರಲು ನಮ್ಮ ಗದ್ದೆಗಳನ್ನ ಶೂದ್ರರ ಗದ್ದೆಗಳೊಂದಿಗೆ ಬದಲಾಯಿಸಿಕೊಂಡು ಪುಕ್ಕಟೆಯಾಗಿ ರಸ್ತೆ ಮಾಡಲೋಸುಗೆ ಬಿಟ್ಟುಕೊಟ್ಟರು. ನಮ್ಮ ೪ ಘನಾ ಗದ್ದೆಗಳು ರಸ್ತೆ ಮಾಡುವುದಕ್ಕೆ ಹೋದವು ಅಂತ ಪಸ್ಚಾತ್ತಾಪ ಪಟ್ಟಿಲ್ಲ. ಹೀಗೆ ಮಾಡದಿದ್ದಲ್ಲಿ, ನಮಗೆ ರಸ್ತೆ ಬರುತ್ತಿರಲಿಲ್ಲ. ಇದು ಎಸ್ಟು ಜನರಿಗೆ ತಿಳಿದಿದೆ ಹೇಳಿ? ಸೇತುವೆಗೆ ಪೂಜೆ ಮಾಡಿದವರೂ ನಮ್ಮ ಅಪ್ಪೈಯ್ಯ ಮತ್ತು ಅಮ್ಮನೇ ಅನ್ನಲಿಕ್ಕೆ ನನಗೆ ಹೆಮ್ಮೆಯನ್ನಿಸುತ್ತೆ!
ಇನ್ನು ರಾಮ ಭಜನೆಯಲ್ಲಿ ಇವರದ್ದೇ ಮೇಲುಗೈ. ಪಡುಕೆರೆ ತಂಡಕ್ಕೆ ಇವರೇ ಮುಖ್ಯಸ್ತರು. ಇವರು "ರಾಮ ರಕ್ಸಿಸೋ, ಪ್ರೇಮದಿಂದಲೀ, ಕಾಮಿತಾರ್ಥ ಫಲವನ್ನಿತ್ತ ಭೂಮಿ ಝಾಪತೇ" ಅಂತ ಅತೀ ಏರಿನ ಧ್ವನಿಯಲ್ಲಿ ಹೇಳಿದೆರೆಂದರೆ, ರಾತ್ರಿಯಲ್ಲಿ ಪಡುಕೆರೆಯಲ್ಲಿ ಹಾಡಿದಂತಹ ಪದ್ಯ, ಗುಂಡ್ಮೀ ಗ್ರಾಮಕ್ಕೆ ಕೇಳುವಂತಿತ್ತು.
ಅದೇ "ನಚ್ಚೇನ ಚರಿತಾ ನಂದೀ ತಾತೈಯ್ಯ ತೈಯ್ಯ" "ನಚ್ಚೇನ ಚರಿತಾ ನಂದೀ ತಾತೈಯ್ಯ ತೈಯ್ಯ"
"ನಾರದಗಾರದ ವೈರೀ ಗಾವೇ, ತುಂಬರು ವೀರಬಜಾವೇ" ಎನ್ನುವ ಪದ್ಯ ಬಹಳ ಪ್ರಸಿದ್ಧಿ ಆಯಿತು.
ಅತೀ ಎತ್ತರದ ಸ್ವರದಲ್ಲಿ ಹಾಡುವಂತಹ "ನೋಡು ನೋಡೂ ಗೋಪೀ ನಿನ್ನಾ ಮಗನ ಲೂಟೀಯಾ’ ಎನ್ನುವ ಪದವು ಅವರ ನೆಚ್ಚಿನ ಪದವಾಗಿ ಹೊರ ಹೊಮ್ಮಿತು.
“ರಾಮನಮೋ ಕೃಷ್ಣನಮೋ, ರಾಮನಮೋ, ಸೀತಾರಾಮನಮೋ”
ಕೃಷ್ಣನಮೋ, ಕೃಷಣನಮೋ, ಕೃಷ್ಣನಮೋ ರಾಧಾ ಕೃಷಣನಮೋ”
ಅನ್ನುವ ಪದಾ ಕೂಡ ಇವರದ್ದೇ ಸಿಕ್ಕಾ ಬಿದ್ದಿತು!.
ಇವರ ಆರತಿ ಹಾಡು ಎಲ್ಲರಿಗೂ ಚಿರ ಪರಿಚಿತವಾಯಿತು. ಕೊನೇ ಕೊನೆಗೆ, ಹೋಯ್ ಸದೀ ಮಾಸ್ಟ್ರೇ, ನೀವ್ ಆ ಆರತೀ ಪದ ಹೇಳಿ ಕಾಂಬಾ ಅನ್ನ ತೊಡಗಿದರು. ಅದೇನೆಂದರೆ
ಹೃದಯ ಕಮಲವೆಂಬ ಹರಿವಾಣದೊಳಗಿರ್ದ,
ಸದಾಮಲ್ ಭಕ್ತಿ ಹೃದಯಾ ತೈಲದಿ
ಪದುಮನಾಭನ ನಾಮವೆಂಬ ಜ್ಯೋತಿಯ ಬೆಳಗಿದೆ,
ಮುದದಿಂದ ಜ್ನಾನದಾರತಿ ಎತ್ತಿರೆ
ರಾಮಚಂದ್ರನಿಗಾರತೀ ಎತ್ತಿರೇ
ಯಾವುದೇ ಭಜನೆಯಲ್ಲಿ ಇದು ಇವರಿಗೇ ಮೀಸಲು.
ಎಲ್ಲೆಯಾದರೂ ಊಟಕ್ಕೆ ಹೋದಲ್ಲಿ (ಅಪರ ಕ್ರಿಯೆಯ ಊಟವಲ್ಲ, ಅಪರ ಕ್ರಿಯೆಯಾದಲ್ಲಿ ವೈಕುಂಠದ ದಿನ ಹೇಳುತ್ತಿದ್ದರು) "ವಿದ್ಯಾ ರತ್ನಂ, ಸರಸಿಜನಿತ್ಯಂ, ಧ್ಯಾನ ರತ್ನಂ ತುರಂಗೋ.....’
ವಾಛಾ ರತ್ನಂ, ಪರಮ ಪದವೀ ಯೋಗ ರತ್ನಂ ಮೃಗಾಕ್ಷೀ..."
“ಅಂಭೋ ರತ್ನಂ ಪರಮ ಪದವೀ, ಭೂರ್ಭ್ವಾ ರತ್ನಂ ಕನಕಶಿಖರೀ
ಭೂಪಾ ರತ್ನಂ ವಿವೇಕಾಹಾಆ ಆಆಆಆಆ ಅನ್ನುವ ಚೂರ್ಣಿಕ ( ಊಟದಲ್ಲಿ ಪಾಯಸವು ಬಂದಾವಾಗ ಹಾಡೂವಂತಹ ನಾಲ್ಕು ಲೈನಿನ ಶ್ಲೋಕ) ಬಹಳ ಪೇಟೆಂಟ್ ಆಯಿತು. ಅದನ್ನ ಈಗ ಸದೀ ಮಾಸ್ತರ ಕಿರೀ ಮಗನಾದ ಸುರೇಂದ್ರ ಉಪಾಧ್ಯರು ಹಾಡುತಿದ್ದಾರೆ. ಇವರಿಗೆ ತಂದೆಯದ್ದೇ ಎಲ್ಲಾ ಗುಣಗಳು ಬಂದಿವೆಯೆಂದು ನಮ್ಮ ಅಡುಗೆಗೆ ಪ್ರಸಿದ್ಧಿಯಾದ ಚಿತ್ರಪಾಡಿ ಗ್ರಾಮದ ಕಾಡ್ ಮಧ್ಯಸ್ಥರ ಮಗ ನರಸಿಂಹ ಮಧ್ಯಸ್ಥರು ಮೊನ್ನೆ ನಮ್ಮ ಮೊನೆಯಲ್ಲಿ ನಡೆದಂತಹ ಅಮ್ಮನ ಶ್ರಾಧ್ಧದಲ್ಲಿ ಹೇಳುತ್ತಿದ್ದರಂತೆ. ಅವರ ಎಲ್ಲಾ ಗುಣವಿಶೇಷಗಳೂ ಈಗ ಇವರಲ್ಲಿ ಗುಣದಿಷೆಯಾಗಿ ಬಳುವಳಿಯಾಗಿ ಬಂದಿವೆ ಎಂದರೆ ಅದು ಒಂದು ಉತ್ತಮವಾದ ಅನುದಾನವೇ ಸರಿ. ಇದು ಅಪ್ಪೈಯ್ಯನ ಆಶೀರ್ವಾದವೆಂದರೂ ತಪ್ಪಾಗದು. ಸುರೇಂದ್ರ ಉಪಾಧ್ಯರೂ ಕೂಡ ೧೪ ವರುಷಗಳ ಕಾಲ ದೇನಾ ಬ್ಯಾಂಕಿನಲ್ಲಿ ಪ್ರಾಧ್ಯಾಪಕರಾಗಿ, ಹಾಗೂ ಪ್ರಾಂಶುಪಾಲರಾಗಿ ಐ.ಟಿ. ಇನ್ಸ್ಟಿಟ್ಯೂಟನ್ನ ಕಾಂಡೀವಲೀ ಮುಂಬೈನಲ್ಲಿ ೧೯೯೭ ರಲ್ಲಿ ಸ್ಥಾಪನೆಯನ್ನ ಮಾಡಿದ್ದಲ್ಲದೆ ಅಲ್ಲಿಯೇ ೭ ವರುಷಗಳು ಕಂಪ್ಯೂಟರಿನಲ್ಲಿ ಬ್ಯಾಂಕಿನ ಕಾರಖೂನನಿಂದ ಹಿಡಿದು ಜನರಲ್ ಮೇನೇಜರ್ ವರೆಗೆ ಟ್ರೈನಿಂಗ್ ಕೊಟ್ಟೂ ಬಹಳ ಹೆಸರುವಾಸಿಯಾಗಿದ್ದರು. ಹಾಗೂ ಕೋಲಕತ್ತ ಮತ್ತು ನಯೀ ದೆಹಲೀ ಟ್ರೈನಿಂಗ್ ಸೆಂಟರಿನಲ್ಲಿ ಕೆಲಸವನ್ನ ಮಾಡಿದ್ದು, ಸುಮಾರು ಮತ್ತುಳಿದ ೨೦೦೦ ಜನರನ್ನ ಕಂಪ್ಯೂಟರಿನಲ್ಲಿ , ಸಾಲವನ್ನ ಕೊಡುವಲ್ಲಿ, ರಿಟೈಲ್ ಕ್ಷೇತ್ರದಲ್ಲಿ ಪಳಗಿಸಿದ್ದಾರೆನ್ನುವುದು ಬಹಳ ಹೆಮ್ಮೆಯ ವಿಷಯವೇ. ಅವರಿಗೂ ದೇನಾ ಬ್ಯಾಂಕಿನಲ್ಲಿ ಒಂದು ವಿಶೇಷ ಸ್ಥಾನ ಮಾನ ಉಂಟು. ಅವರೂ ರೇಕಿ ಮಾಸ್ಟರ್ ಕೂಡಾ. ಅವರು ಅಕ್ಯೂಪ್ರೆಸರ್ ಪ್ರೇಕ್ಟೀಷನರ್ ಕೂಡ. ಅವರಲ್ಲಿಯೂ ಅಪ್ಪನ ಥರಾ ಕಥೆ, ಕವನ, ನಾಟಕ ಬರೆಯುವ ಕಲೆಯೂ ಇದೆ!. ಅವರೂ ಕೂಡ ಕರ್ಣಾಟಕ ಸಂಘದ ಕಾರ್ಯದರ್ಷಿಗಳಾಗಿ ರಾಜಕೋಟ್, ಅಹ್ಮೆದಾಬಾದ್, ಸೂರತ್ ಹಾಗೂ ಕೋಲ್ಕತ್ತದಲ್ಲಿ ಸುಮಾರು ೧೨ ವರುಷಗಳ ಕಾಲ ಕೆಲಸವನ್ನ ಮಾಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುವಲ್ಲಿ , ಡೈರೆಕ್ಟ ಮತ್ತು ಏಕ್ಟ್ ಹಾಗೂ ಪಾರ್ಟಿಸಿಪೇಟ್ ಮಾಡುವಲ್ಲಿ ಬಹಳ ಹೆಸರನ್ನ ಗಳಿಸಿದ್ದರು. ಇವರ ಇನ್ನೊಂದು ವಿಶೇಷತೆ ಏನೆಂದರೆ ಹವ್ಯಾಸಿ ಜ್ಯೋತಿಷಿಯಾಗಿ, ಜನಶ್ರೀ ಟಿ.ವಿ ಹಾಗೂ ಈ.ಟಿವಿ. ಕಲರ್ಸ್ ಕನ್ನಡ ಚಾನಲ್ನಲ್ಲಿ ಬಂದಿರುತ್ತಾರೆ. ವರ್ಷ ಭವಿಷ್ಯ ೨೦೧೬ನ್ನ, ತಾರೀಕು ೩೦/೧೨/೨೦೧೫ ರಂದು ಸಂಜೆ ೬ ಗಂಟೆಯಿಂದ ೭ ಗಂಟೆಯವರೆಗೆ ಈ.ಟೀವಿ ಕಲರ್ಸ್ ಕನ್ನಡದಲ್ಲಿ ಕೊಟ್ಟಿದ್ದರು. ಹೀಗೆ ಮಾತಿನಲ್ಲಿ, ಕಲೆಯಲ್ಲಿ, ಸಂಗೀತದಲ್ಲಿ, ಭಜನೆಯಲ್ಲಿ, ಚೂರ್ಣಿಕದಲ್ಲಿ, ನಾಟಕದಲ್ಲಿ, ಕಥೆಯಲ್ಲಿ ಎಲ್ಲಾ ತರದ ಕಾರ್ಯಕ್ರಮಗಳಲ್ಲಿ ಇವರು ತಮ್ಮ ತಂದೆಯವರ ಹೆಸರನ್ನ ಜನಗಳ ಬಾಯಿಯಲ್ಲಿ ಪುನರುಚ್ಚರಿಸುವ ಹಾಗೆ ಮಾಡಿರುವುದು, ಇದೊಂದು ಗೋಡ್ ಗಿಫ಼್ಟೇ ಸರಿ. ಹೆಗ್ಗಳಿಕೆ ಅಲ್ಲ, ವಿಚಾರವನ್ನ ಬೇರವರಿಗೆ ತಿಳಿಸುವಿಕೆ ಮತ್ತು ಅರುಹುವಿಕೆ!. ಅಹಂಕಾರ ಅಲ್ಲ ಮತ್ತು ಬೇಕೂ ಇಲ್ಲ!, ಹಾಗೂ ಅವರಲ್ಲಿ ಕೊಂಚವೂ ಇಲ್ಲ. ಅವ್ರು ಬರೇ ನೆಲದ ಮೇಲೂ ಮಲಗಲು ಕಲಿತಿದ್ದರು ಹಾಗೂ ಮಲಗುತ್ತಾರೆ. ದಿಂಬು ಕೊಟ್ಟರೂ ಮಲಗುತ್ತಾರೆ, ಇಲ್ಲಾಂದರೂ ಮಲಗುತ್ತಾರೆ. ನಡೆದು ಹೋಗಲೂ ಗೊತ್ತಿದೆ. ಕಾರನ್ನ ಡ್ರೈವ್ ಮಾಡಿ ಸಂಚರಿಸಲೂ ಗೊತ್ತಿದೆ. ಯಾವ ಕೆಲಸಕ್ಕೂ ಸೈ. ಅಳುಕಿಲ್ಲ, ಭಯವಂತೂ ಮೊದಲೇ ಇಲ್ಲ! ಮತ್ತೇ ಇದ್ದದನ್ನ ಇದ್ದ ಹಾಗೇ ಹೇಳುವಂತಹ ಪ್ರಚಂಡವಾದ ಧೈರ್ಯವೂ ಅವರಲ್ಲಿ ಇದೆ. ಒಂದು ರೀತಿಯ ಕ್ರಾಂತಿಕಾರಿ ವ್ಯಕ್ತಿ. ಇವರೊಬ್ಬರು ಅಜಾತ ಶತ್ರುಗಳೆಂದರೆ ತಪ್ಪಾಗದು.ಕಾರಣ ಇಸ್ಟೇ. ಇವರು ಯಾರೊಬ್ಬರಿಗೂ ಹಾಳನ್ನ ಮಾಡಿದವರಲ್ಲ. ಇಸ್ಟರವರೆಗೆ ಸುಮಾರು ೮೦೦೦ ಜನರಿಗೆ ಪುಕ್ಕಟೆಯಾಗಿ ಜಾತಕವನ್ನ ಹೇಳಿದ್ದಾರೆಂದರೆ ನೀವುಗಳು ನಂಬುತ್ತೀರಾ?. ಇವರು ಒಂದು ೮ ಮದುವೆಗಳನ್ನೂ ಮಾಡಿದ್ದಾರೆ. ಒಂದು ಪೈಸಾ ತೆಗೆದುಕೊಳ್ಳಲಿಲ್ಲ. ಆದರೆ ಕೆಲವರಿಗೆ ಕ್ರತಜ್ನತೆಯೇ ಇಲ್ಲ!. ಒಂದು ಥೇಂಕ್ಸ್ ಕೂಡಾ ಇಲ್ಲ!. ಅದಿರಲಿ, ಆ ಮದುವೆಗೆ ಆಮಂತ್ರಣವನ್ನ ಕೊಡಲೂ ಗೊತ್ತಿಲ್ಲ!. ಕೆಲವೊಂದು ಬಾರಿ ಅನ್ನಿಸುತ್ತದೆ. ಈ ಜನರಿಗೆ ಉಪಕಾರವನ್ನ ಮಾಡಬೇಕೇ? ಅವರ ಮಕ್ಕಳು ಮದುವೆ ಆಗದೇ ಹಾಗೆಯೇ ಕೊಳೆಯಲೀ ಅನ್ನುವ ಮನೋಭಾವನೆಯೂ ನನ್ನಲ್ಲಿ ಬರುತ್ತದೆ. ಇರಲಿ. ಈ ಸೇವೆಗೆ ನನಗೆ ಮಾತ್ರ ಹೆಸರೂ ಮತ್ತು ನೆಮ್ಮದಿಯನ್ನೂ ಕೊಟ್ಟಿದೆ ಎಂದರೆ ಅದು ಸುಳ್ಳಲ್ಲ!. ಅಂದರೆ , ಈ ಮಟ್ಟಿಗೆ ನಮ್ಮ ತಂದೆಯವರ ರಕ್ತ ಸಂಚಾರ ನನ್ನ ದೇಹದಲ್ಲಿಯೂ ಹರಿಯುತ್ತದೆ ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ ಈ ಮೂಲಕ ಅರಹುವಿಕೆ. ಅಸ್ಟೆ, ಮತ್ತು ಅವರಲ್ಲಿಯೂ ಇದೆ ಅನ್ನಿ. ಏನೇ ಇರಲಿ, ಜನಗಳ ಪ್ರೀತಿಯ ಸದಿಯ, ಸದಿಯ ಮಾಸ್ತರೆನಿಸಿಕೊಂಡರು. ಕೋಟ ಹದಿನಾಲ್ಕು ಜನರಲ್ಲಿ ಬಹಳ ಹೆಸರನ್ನ ತೆಗೆದುಕೊಂಡರು. ಯಾವುದೇ ಸಮಾರಂಭದಲ್ಲಿ ಇವರದ್ದೇ ಉಪಚಾರವಿರುತ್ತಿತ್ತು. ಇವರದ್ದೇ ಕಣ್ಣಿನ ಹದ. ಅದು ಎಸ್ಟರ ವರೆಗೆಂದರೆ, ಊಟಕ್ಕೆ ೨೦೦ ಜನರೇ ಬರಲಿ ಇಲ್ಲಾ ೧೦೦೦ ಜನರೇ ಬರಲಿ, ಆ ಸದೀ ಮಾಸ್ತರನ್ನ ಕರೀರಪ್ಪ ಅನ್ನುತ್ತಿದ್ದರು. ಅವರು ಹೇಳಿದ ಮೇಲೆ ಸೈ. ಬೇರೆ ಯೋಚಿಸಬೇಕಿಲ್ಲ ಅನ್ನುವಸ್ಟು ಇವರ ಕಣ್ಣೀನ ಅಂದಾಜು. ಕಡಿಗೆ ಪಲ್ಯಕ್ಕೆ ೨ ಅಥವಾ ೪ ಕಡಿಗೆ ಬೇಕಿತ್ತೆಂದರೆ ಅದು ಅಸ್ಟೇ ಸಾಕಿತ್ತು! ಸೌತೇ ಕಾಯಿ ೨೫ ಕತ್ತರಿಸು ಹುಳಿ ಹೋಳು ಮಾಡಲು ಹೇಳಿದರೆಂದರೆ ಅದು ಬ್ರಾಹ್ಮಣರ ಊಟ ಮುಗಿದು, ಶೂದ್ರರಿಗೂ ಹಂಚಲು ಸಾಕಾಗುತ್ತಿತ್ತು! ಇನ್ನೊಂದು ವಿಶೇಷವೇನೆಂದರೆ ಮದುವೆಯನ್ನ ಕೂಡಾ ಇವರು ಮಾಡಿಸುತ್ತಿದ್ದರು. (ಇದು ಶ್ರಿ ಸುರೇಂದ್ರ ಉಪಾಧ್ಯರಲ್ಲಿಯೂ ಬಂದಿದೆ. ಅವರು ಈವರೆಗೆ ಸುಮಾರು ೮ ಮದುವೆಗಳನ್ನ ಮಾಡಿಸಿದ್ದಾರೆ. ಒಂದು ವೇಸ್ಟಿ ಇಲ್ಲ, ಒಂದು ಗೌರವ ಇಲ್ಲ ಹಾಗೂ ದಕ್ಷಿಣೆ ಇಲ್ಲ. ಅದೊಂದು ಸಮಾಜ ಸೇವೆ ಮಾತ್ರ!) ಇಲ್ಲಿ ನನಗೆ ನೆನಪು ಆಗುವುದು ಅಪ್ಪೈಯ್ಯ ಮಾಡಿದಂತಹ ಈ ಕೆಳಗಿನ ಸ್ವಾರಸ್ಯಕರವಾದ ಮದುವೆ!
ಒಂದೊಮ್ಮೆ ಇವರು ಎಡಬೆಟ್ಟಿನ ನಮ್ಮ ಅಜ್ಜೈಯ್ಯನ (ನಮ್ಮ ಅಮ್ಮನ ಅಪ್ಪಉಪ್ಪಿನಕುದ್ರೂ ಅನಂತೈಯ್ಯ ಐತಾಳರು) ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಅರ್ಧ ಊಟದಲ್ಲಿ ಇವರಿಗೆ ಉಪ್ಪುಂದಕ್ಕೆ ಕರೆ ಬಂದಿತು. ಅದೇನೆಂದರೆ "ಉಪ್ಪುಂದ ಶ್ರೀಯುತರಾದ .............ಹೊಳ್ಳರು (ಈಗ ಅವರು ಇಲ್ಲ) ಒಂದು ಬಿಳೀ ವೇಸ್ಟಿಯನ್ನ ಹೊದೆದುಕೊಂಡು, ಕವುಂಚ್ ಮಲಗಿದ್ದರಂತೆ. ನೀವು ಬರಬೇಕಂತೆ" ಅಂತ. ತಟ್ಟನೆ ಕೈ ತೊಳೆದು ಉಪ್ಪುಂದಕ್ಕೆ ಹೊರಟರು. ಅದು ಎಡಬೆಟ್ಟಿನಿಂದ ಸುಮಾರು ೩೦ ಕಿಲೋ ಮೀಟರ್ ದೂರದಲ್ಲಿತ್ತು. ಅಲ್ಲಿಗೆ ಹೋಗಿ ನೋಡಿದಾವಾಗ, ಅವರು ಮಾತನಾಡುವುದೇ ಇಲ್ಲ. ಅವರ ಹೆಂಡತಿ ನೋಡಿ ಅವರು ಹೆಣ್ಣನ್ನ ನೋಡಿ ಬಂದು ಹೀಗೆಯೇ ಮಲಗಿದ್ದರು. ನೀವೇ ಈಗ ಅವರನ್ನ ಮಾತನಾಡಿಸಿ ಎಬ್ಬಿಸಿ ಅಂತ ಗೋಳಾಡಿದರು. ಅದು ಮತ್ತೇನಿಲ್ಲ. ಮಾಸ್ಟ್ರ ಕೃಷ್ಣ ಉಪಾಧ್ಯರ ಎರಡನೆ ಮಗಳನ್ನ ಇವರ ಮಗನಿಗೆ ನಮ್ಮ ಅಪ್ಪಯ್ಯನೇ ಮಾಸ್ಟ್ರು ಮನೆ ಹೆಬ್ಬಾಗಿಲಿನಲ್ಲಿ ತೋರಿಸಿದ್ದರು. ಅವಳು ಮಾಸ್ಟ್ರು ತರ ಬಹಳ ಬೆಳ್ಳಗೆ. ಆದರೆ ಈ ............. ಹೊಳ್ಳರ ಅಭಿಪ್ರಾಯದಂತೆ, ಸದೀ ಮಾಸ್ತರು ಹುಡುಗಿಗೆ ಪೌಡರ್ ಹಾಕಿ ತೋರಿಸಿದ್ರು ಅಂತ ಆಪಾದನೆ. ನಮ್ಮ ಅಪ್ಪಯ್ಯನಿಗೆ ತಡೆಯಲಾಗಿಲ್ಲ. ಹೋಯ್, ಹೊಳ್ಳರೇ, ನನ್ನ ಹೆಸರು ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಬಹಳ ಪ್ರಸಿದ್ಧಿ. ನಾನು ನಿಮಗೆ ಹಾಗೆ ಮಾಡುವವನಲ್ಲ. ನಿಮಗೆ ಶಾಂತಿಯಾಗಬೇಕೆಂದರೆ, ನಾನು ಇನ್ನೊಮ್ಮೆ ಹುಡುಗಿಯನ್ನ ತೋರಿಸುವೆ. ಬನ್ನಿ ಅಂತ ಮರು ದಿನಕ್ಕೇ ಮುಹೂರ್ತವನ್ನ ಇಟ್ಟರು. ಸರೀ ಎಲ್ಲರೂ ಬಂದರು. ಎಲ್ಲರೂ ಮಾಸ್ಟ್ರು ಮನೆ ಹೆಬ್ಬಾಗಿಲಿನಲ್ಲಿ ಕುಳಿತಿದ್ದರು. ಆವಾಗ, ನಮ್ಮ ಅಪ್ಪಯ್ಯ, ಮಗಾ "......." ಅಂತ ಹೆಸರನ್ನ ಹೇಳಿ ಬಾವಿ ಕಟ್ಟೆಗೆ ಹೋಗಿ ಸೋಪಿನಲ್ಲಿ ಕಾಣುವ ಹಾಗೆ ಮುಖವನ್ನ ತೊಳೆದುಕೊಂಡು ಸೀದಾ ಹೆಬ್ಬಾಗಿಲಿಗೇ ಬಾ ಎಂದು ಎಲ್ಲರ ಎದಿರಿನಲ್ಲಿಯೇ ಗಟ್ಟಿಯಾಗಿ ಕೂಗಿ ಹೇಳಿದರು. ಅವಳು ಹಾಗೆಯೇ ಮಾಡಿ, ಹೆಬ್ಬಾಗಿಲಿಗೆ ಬಂದು ಕುಳಿತದ್ದು ನೋಡಿ , ಪಾಪ ................. ಹೊಳ್ಳರಿಗೆ ಬಹಳ ನಾಚಿಕೆ ಆಯಿತು. ನಮ್ಮ ಅಪ್ಪೈಯ್ಯನವರಲ್ಲಿ ಕ್ಷಮೆ ಕೇಳಿ, ಕೊನೆಗೆ ಉಪ್ಪುಂದದ ಗಂಡೀನ ಮನೆಯ ದಿಬ್ಬಣ ಮಾಸ್ಟ್ರು ಮನೆ ಮದುವೆಗೆ ನಮ್ಮ ಮನೆಯಿಂದಲೇ ಹೊರಡುವ ಹಾಗೆ ಆಯಿತು!. ಹೀಗೆ ಹಲವಾರು ವಿಚಿತ್ರಗಳನ್ನೂ ನಮ್ಮ ಅಪ್ಪಯ್ಯ ಎದಿರಿಸಿದ್ದರು.
ಇನ್ನೊಂದು ಇವರ ಎರಡನೇ ಮಗಳ ಮದುವೆಯ ವಿಚಾರವಾಗಿಯೇ ನಡೆಯಿತು. ಅದೇನೆಂದರೆ, ಗಂಡು ೩೧ ಹೆಣ್ಣುಗಳನ್ನ ನೋಡಿ ಬಿಟ್ಟಿರುವುದು ಇವರಿಗೆ ತಿಳಿಯಿತು. ಗಂಡಿಗೆ ಕೆಲಸವೇನೆಂದರೆ ಕರೀಂ ನಗರದ ಹೋಟೆಲ್ಲಿನಲ್ಲಿ ಸಪ್ಪ್ಲೈ ಮಾಡಿಕೊಂಡಿರುವ ಅಥವಾ ಕೇಶಿಯರ್ ಆಗಿ ಕೆಲಸವನ್ನ ಮಾಡುತ್ತಿದ್ದರು. ಹುಡುಗಿಯನ್ನ ಸಾಲಿಗ್ರಾಮದಲ್ಲಿರುವ ಬಳೆಗಾರನ ಅಂಗಡಿಯ ಮುಂದೆ ತೋರಿಸುವ ಯೋಜನೆಯನ್ನ ಮಾಡಿಕೊಂಡಿದ್ದರು. ಆದರೆ ಈ ಮುಂಚೆ ಗಂಡಿಗೆ ನಮ್ಮ ಅಪ್ಪೈಯ್ಯ, ಅರ್ಧ ಗಂಟೆ ಭಾಷಣವನ್ನ ಬಿಗಿದರು. ಅದರಲ್ಲಿ ಮುಖ್ಯವಾದದ್ದೇನೆಂದರೆ, ಹೋಯ್, ನೀವು ಬರೀ ಹುಳಿಯಾವ್ಲಕ್ಕಿ, ಉಪ್ಪಿಟ್ಟು ತಿನ್ನುತ್ತಾ ಹೋದಲ್ಲಿ, ಹುಡುಗಿಯರನ್ನ ನೋಡುತ್ತಾ ಹೋದಲ್ಲಿ ಅವರ ತಂದೆ-ತಾಯಿಯರ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಿದ್ದೀರಾ? ಅಲ್ಲಾ ನೀವು ನನ್ನ ಹುಡುಗಿಯನ್ನ ಮದುವೆ ಮಾಡ್ಬೇಕೆಂದು ನಾನು ಹೇಳುವುದಿಲ್ಲ! ಅಂತ ಇವರ ಭಾಷಣವನ್ನ ಮುಗಿಸಿದ್ದರು. ಇವರ ಮಾತನ್ನ ಕೇಳಿ ಅವರು ಕೊನೆಯಲ್ಲಿ, ನನ್ನ ಅಕ್ಕನನ್ನೇ ಒಪ್ಪಿ ಮದುವೆಯಾದರು. ಆ ಮೇಲೆ, ನಮ್ಮ ಅಪ್ಪಯ್ಯನೇ ಹಣವನ್ನ (ರೂ.೨೫೦೦.೦೦) ಹಾಕಿ ಮಹಾರಾಸ್ಟ್ರದಲ್ಲಿ ಹೋಟೇಲನ್ನ ಇಟ್ಟುಕೊಡಲು ಕಾರಣೀಭೂತರಾದರೆನ್ನಿ!. ಇದಕ್ಕೂ ಸದೀ ಮಾಸ್ತರ ಕಥೆಗೂ ಏನು ಸಂಬಂಧವೆಂದು ಕೇಳಿದಲ್ಲಿ, ನಾನು ಹೇಳುವುದು ಇಸ್ಟೆ. ನಮ್ಮ ಅಪ್ಪಯ್ಯ ಮಾಡಿರುವ ಕೆಸವೆಲ್ಲಾ ಹಾಗೆಯೇ. ಬಹಳ ಯೋಚಿಸಿಯೇ ಮಾಡುತ್ತಿದ್ದರು. ಇವತ್ತಿಗೂ ಯಾವ ಮದುವೆಯೂ ಸದೀ ಮಾಸ್ಟ್ರೂ ಮಾಡೀ ಹಾಳಾಯಿತೆನ್ನುವ ಅಪವಾದ ಇಡೀ ಊರಿನಲ್ಲಿಯೇ ಇಲ್ಲ. ಉಲ್ಟಾ ಉದ್ಧಾರವೇ ಆಗಿದೆ ಅನ್ನಿ!.
ಇನ್ನೊಂದು ಮದುವೆಯ ಕಥೆ ಇಲ್ಲಿ ಹೇಳಲೇ ಬೇಕು. ಇದು ನಮ್ಮ ಕಟ್ಟಿದೇವರ ಪೂಜೆಯನ್ನ ಮಾಡುತ್ತಿರುವಂತಹ ಶ್ರೀಯುತರಾದ ಸಣ್ಣಯ್ಯ ಉಪಾಧ್ಯರ ಎರಡನೇ ಪುತ್ರಿಯ ಮದುವೆ. ಅವರಿಗೆ ಮದುವೆ ಸ್ವಲ್ಪ ಲೇಟ್ ಆಗಿತ್ತೆಂದರೆ ಅದು, ಇವತ್ತಿನ ಕಾಲಕ್ಕೆ ಲೇಟ್ ಅಲ್ಲವೇ ಅಲ್ಲ. ಆದರೆ ವಿಚಿತ್ರ್ವೇನೆಂದರೆ ನಮ್ಮ ಕಟ್ಟಿದೇವರಲ್ಲಿ ನಡೆಯುತ್ತಿರುವಂತಹ ದೈವ ಪೂಜೆಯಲ್ಲಿ ಇಡೀ ಒಂದು ದೊಡ್ಡ ತಾಮ್ರದ ಚಂಬು ತಣ್ಣೀರನ್ನ ಗಟಗಟನೆ ಕುಡಿಯುತ್ತಿದ್ದಳು. ಅವಳಿಗೆ ಕೆಲವೊಮ್ಮೆ ಜನಗಳನ್ನ ನೋಡಿದಲ್ಲಿ ದರ್ಷನದ ತರಹ ಬರ್ತಿತ್ತು!. ಒಂದು ವಿಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಳು!. ಅದನ್ನ ನಮ್ಮ ಅಪ್ಪಯ್ಯ ನೋಡಿ, ಸಣ್ಣಾ, ಈ ಹುಡುಗಿಗೆ ಮದುವೆ ಮಾಡು. ಎಲ್ಲಾ ಸರಿ ಹೋಗುತ್ತೆ ಅಂದರು. ಆದರೆ ತಿಳಿದವರು ಇವಳಿಗೆ ಗಂಡನ್ನ ಕೊಡುತ್ತಿರಲಿಲ್ಲ. ಅದಕ್ಕಾಗಿ ಬಹಳ ದೂರ ಹೋಗಬೇಕಿತ್ತು. ಸರಿ. ಅಲ್ತಾರದ ಹತ್ತಿರ( ಮೂಡಿನೂರು) ಒಬ್ಬ ಗಂಡು ಇರುವುದು ಇವರುಗಳಿಗೆ ತಿಳಿಯುತು. ಆ ಹುಡುಗನನ್ನ ನೋಡಲು, ನಮ್ಮ ಅಪ್ಪನೇ ಸೈಕಲ್ ತೆಗೆದುಕೊಂಡು ಹೋಗಿ ನೋಡಿಕೊಂಡು ಇವರ ರೆಕಮೆಂಡೇಷನ್ನನ್ನ ಕೊಟ್ಟರು.ಹಾಗೆ ಹೋದಾವಾಗ, ಅಲ್ಲಿಯೇ ಹತ್ತಿರ ಇರುವ ಹೊಳೆಯಲ್ಲಿ ಸೈಕಲ್ಲೂ ಬಿದ್ದು, ಇವರೂ ಕೂಡ ಬಿದ್ದು ಗಾಯವನ್ನ ಮಾಡಿಕೊಂಡರಂತೆ! ಸರಿ ಆ ಹುಡುಗಿಗೆ ಮದುವೆ ಆಯಿತು. ಆದ ಮೇಲೆ ಎಲ್ಲಾ ಕಾಹಿಲೆಗಳು ಸರಿ ಹೋಗಿ ಈಗ ಅವಳು ಮೂರು ಹೆಣ್ಣು ಮಕ್ಕಳ ತಾಯಿ. ಇಬ್ಬರು ವಿದೇಶದಲ್ಲಿದ್ದರೆ ಒಬ್ಬಳು ಇಲ್ಲಿಯೇ ಇರುವಳು. ಎಲ್ಲಾ ಇಂಜಿನೀರ್ಸ್. ಇನ್ನೇನು ಬೇಕಪ್ಪಾ? ಇದನ್ನೆಲ್ಲಾ ಯಾತಕ್ಕೆ ನಿಮಗೆ ಹೇಳುತ್ತಿದ್ದೇನೆಂದರೆ, ನಮ್ಮ ಅಪ್ಪೈಯ್ಯನೂ ಮದುವೆಯನ್ನ ಮಾಡಲು ಎಸ್ಟೊಂದು ಕಸ್ಟವನ್ನ ಪಡುತ್ತಿದ್ದರೂ ಅಂತ, ಅಸ್ಟೆ.
ಮತ್ತೊಂದು ಇಂಟರೆಸ್ಟಿಂಗ್ ಕಥೆ ನಮ್ಮ ಗ್ರಾಮದ ಪಟೇಲರ ಮನೆಯಲ್ಲಿ ನಡೆಯಿತು. ಅವರು ಒಂದು ಹುಬ್ಬಳ್ಳೀ ಎಮ್ಮೆಯನ್ನ ಕಟ್ಟಿದ್ದರು. ಅದು ಒಳ್ಳೇ ೧೦ ಸಿದ್ದೆಗಿಂತ ಹೆಚ್ಚಿಗೆ ಹಾಲನ್ನ ಕೊಡೂತ್ತಿರುವ ಎಮ್ಮೆ. ಆದರೆ ಬೆಳಿಗ್ಗೆ ಕರೆಯಲು ಹೋದಾವಾಗ, ಒಂದು ಸಿದ್ದೆ ಹಾಲು ಕೂಡಾ ಇರುತ್ತಿರಲಿಲ್ಲ!. ಅವರಿಗೆ ತಲೆ ಬಿಸಿ ಆಯಿತು. ಆವಾಗಿನ ಕಾಲದಲ್ಲಿ ಸುಮಾರು ರೂಪಾಯಿ ೪೦೦ ಕೊಟ್ಟು ತೆಗೆದುಕೊಂಡು ಬಂದಂತಹ ಎಮ್ಮೆ. ಅದನ್ನ ನಮ್ಮ ಈ ಸದೀ ಮಾಸ್ತರ ಹತ್ತಿರ ಹೇಳಿದರು. ಆಗ ನಮ್ಮ ಅಪ್ಪಯ್ಯ, ನೋಡೂ ಮಾಬ್ಲಾ ( ಪಟೇಲರ ಎರಡ್ನೇ ಪ್ರಾಧ್ಯಾಪಕ ಮಗ), ನೀನು ಬೆಳಿಗ್ಗೆ ೩ ಗಂಟೆಗೆದ್ದು ಹಟ್ಟಿಯನ್ನ ಕಾಯ್ಬೇಕು. ಯಾರಾದರೂ ಎಮ್ಮೆ ಕರೆಯಲು ಬರಬಹುದು. ನಾಳೆ ಈ ಕೆಲಸವನ್ನ ಮಾಡ್ಬೇಕು ಅಂತ ಹೇಳಿದರು. ಸರಿ ಇವರ ಮಾತಿನಂತೆ, ಮಾಬ್ಲ ಉಪಾಧ್ಯರು (ಈಗ ಅವರಿಲ್ಲ) ಬೆಳಿಗ್ಗೆ ೩ ಗಂಟೆಗೆ ಹಟ್ಟಿಯಲ್ಲಿ ಯಾರಿಗೂ ಕಾಣದ ಹಾಗೆ ಅಡುಗಿ ಕುಳಿತಿದ್ದರು. ಸರಿಯಾಗಿ ೩.೩೦ ಕ್ಕೆ ಒಂದು ದಪ್ಪದ ಹೆಂಗಸು ಬಂದು ಎಮ್ಮೆ ಕರೆಯಲು ಕುಳಿತಿತು. ಥಟ್ಟನೆ ಎದ್ದು ಹೋಗಿ ರೆಟ್ಟೆಗೆ ಕೈ ಹಾಕಿ ಹಿಡಿದು ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕರ ಸಮಕ್ಷಮದಲ್ಲಿ ಒಂದು ಬೆತ್ತದಿಂದ ಛಡೀ ಏಟನ್ನ ಕೊಡುತ್ತಿದ್ದರು. ಆ ಮೇಲೆ ಅವರ ಹೆಸರ್ ಕಳ್ಳೀ .....ಯಮ್ಮ ಅಂತಲೇ ಆಯಿತು. ಅದು ಬಿಡಿ. ಆದರೆ ಈ ಸದೀ ಮಾಸ್ತರ ಚಾಣಕ್ಯನ ಬುದ್ಧಿಯಿಂದಾಗಿ, ಇವರ ಮನೆ ಎಮ್ಮೆಯು ಮುಂದಿನ ದಿನಗಳಲ್ಲಿ ೧೧ ಸಿದ್ದೆ ಹಾಲನ್ನ ಕೊಡುವಂತಾಯಿತು. ಆವತ್ತಿನಿಂದ ಊರ ಪಟೇಲರಿಗೂ ನಮ್ಮ ಅಪ್ಪಯ್ಯನಿಗೂ ಎಲ್ಲಿಲ್ಲದ ನಂಟು.
ಇಲ್ಲಿ ನಿಮಗೆಲ್ಲಾ ಅವರ ಸಮಕಾಲೀನ ವ್ಯಕ್ತಿಗಳ ಹೆಸರನ್ನ ಕೊಡಬೇಕೆಂದಿರುವೆ ಹಾಗೂ ಇವರಿಗೆ ಸಮಾಜದಲ್ಲಿ ಸ್ಥಾನ, ಮಾನ ಕೊಟ್ಟಂತಹ ಗಣ್ಯರಿಗೆ ಒಂದು ಧನ್ಯವಾದಗಳನ್ನ ಹೇಳಬೇಕೆಂದಿರುವೆ.
ಸಣ್ಣಯ್ಯ ಉಪಾಧ್ಯರು, ಪಾತ್ರಿ ವಿಷ್ಣುಮೂರ್ತಿ ಉಪಾಧ್ಯರು, ಪಟೇಲರ ಮನೆ ಗೋವಿಂದ ಉಪಾಧ್ಯರು, ಪಟೇಲ ಪರಮೇಷ್ವರ ಉಪಾಧ್ಯರು, ಮಾಸ್ಟ್ರು ಮನೆ ಕೃಷ್ಣ ಉಪಾಧ್ಯರು, ಎಂಕ್ಟೈಯ್ಯನ ಮನೆ ಕೃಷ್ಣ ಉಪಾಧ್ಯರು, ಮೀಸೆ ಶೀನ ಉಪಾಧ್ಯರು, ಅನಂತೈಯ್ಯ ಮಾಸ್ತರು, ತೆಂಕಿನ ಕೇರಿ ಗಣಪಯ್ಯ ಉಪಾಧ್ಯರು, ಅಂತಣ್ಣ ಉಪಾಧ್ಯರು, ಪಟೇಲರ ಮನೆ ವಾಸ ಉಪಾಧ್ಯರು, ಮಂಟಪ ಕಿಸ್ಟುಪಾಧ್ಯರು, ಅಂಗಡೀ ರಾಮ ಉಪಾಧ್ಯರು, ಶೇಶಾದ್ರಿಪುರ ನಾರಾಯಣ ಉಪಾಧ್ಯರು, ಮಂಟಪ ಶೀನ ಉಪಾಧ್ಯರು, ತೋಂಟಕೇರಿ ಸದಾಶಿವ ಉಪಾಧ್ಯರು, ಪಾರಂಪಳ್ಳಿ ರಾಮ ಭಟ್ಟರು, ಪಾರಂಪಳ್ಳಿ ಅನಂತಯ್ಯ ಉಪಾಧ್ಯರು, ಪಾರಂಪಳ್ಳಿ ವಾಸುದೇವ ಉಪಾಧ್ಯರು, ವೈಟ್ರು ಕಿಟ್ಟು ಉಪಾಧ್ಯರು, ಪೋಸ್ಟ್ ಮಾಸ್ಟರ್ ಶಂಕ್ರ ಮಧ್ಯಸ್ಥರು, ಜನ್ನ ಮಧ್ಯಸ್ಥರು, ವೆಂಕಪ್ಪಯ್ಯ ಮಧ್ಯಸ್ಥರು, ಪಾರಂಪಳ್ಳಿ ಯಜ್ನ ಮಯ್ಯರು, ರಾಮಚಂದ್ರ ಹೇರ್ಳೆಯವರು, ಸೂರ್ಯನಾರಾಯಣ ಹೇರ್ಳೆಯವರು, ಬಚ್ಚ ಭಟ್ಟರು, ಕಿಟ್ಟ ಭಟ್ಟರು, ಜನ್ನ ಭಟ್ಟರು, ವೀಣಾ ರಾಮಚಂದ್ರ ಐತಾಳರು, ಅಡುಗೇ ವಿಷ್ಣುಮೂರ್ತಿ ಐತಾಳರು, ಹೊಸಮನೆ ವಿಷ್ಣುಮೂರ್ತಿ ಉಪಾಧ್ಯರು, ಗುಂಡ್ಮೀ ಸೋಮಯ್ಯ ಮೈಯರು, ಗುಂಡ್ಮೀ ನರಸಿಂಹ ಮೈಯ್ಯರು, ಗುಂಡ್ಮಿ ಶಂಕ್ರ ಉಪಾಧ್ಯರು, ಗುಂಡ್ಮಿ ಲಕ್ಷ್ಮೀನಾರಾಯಣ ಉಪಾಧ್ಯರು, ಕನ್ಯಾಣ ತಮ್ಮಯ್ಯ ಐತಾಳರು, ವಾಸಯ್ಯ ಐತಾಳರು, ಮೋಟ್ ಕಿಸ್ಟೈತಾಳರು, ಮಾಸ್ತರು ಯಜ್ನ ಐತಾಳರು, ಕೋಡಿ ಶಿವೈ ನಾವಡರು, ಕೋಡಿ ಶಿವ್ರಾಮ ನಾವಡರು, ದೋಣಮ್ಮನ ಮನೆ ಲಕ್ಷ್ಮಿನಾರಾಯಣ ಉಪಾಧ್ಯರು (ಇವರು ನಮ್ಮ ಅಪ್ಪನಿಗೆ ಮಾವನಾಗ ಬೇಕು.) ಕೋಡಿ ವೆಂಕ್ಟ್ರಮಣ ಉಪಾಧ್ಯರು, ಕೋಡೀ ಶೇಷಪ್ಪ ಉಪಾಧ್ಯರು (ಇವರ ಮೆನ್ಯಲ್ಲಿಯೇ ಅಪ್ಪೈಯ್ಯನು ಎರಡು ವರ್ಷಗಳ ಕಾಲ ತ್ಮ್ಮ ಬಾಲ್ಯವನ್ನ ಕಳೆದಿದ್ದರು. )ಕೋಡಿ ಉಡುಪರು, ಕೋಡಿ ಮಾಧವ ಕಾರಂತರು ಹಾಗೂ ನರಸಿಂಹ ಕಾರಂತರು, ಕೋಡಿ ಶೇಶಪ್ಪ ಉಪಾಧ್ಯರು, ಚಿತ್ರಪಾಡಿ ಗಣಪಯ್ಯ ಐತಾಳರು, ಬಾಳಕುದ್ರು ರಾಮ ಹೊಳ್ಳರು, ಚಿತ್ರಪಾಡಿ ಪರಮೇಷ್ವರ ಉರಾಳರು, ಯಜ್ನ ಉರಾಳರು, ಸಣ್ಣ ಉರಾಳರು, ಕಾರ್ಕಡ ಗಂಗಾಧರ ಐತಾಳರು, ಕಾರ್ಕಡ ಮಹಾಬಲ ನಕ್ಷತ್ರಿಗಳು ಹಾಗೂ ಭಜನೆಯ ಮಹಾಬಲ ಉಪಾಧ್ಯರು, ಎಡಬೆಟ್ಟು ಲಕ್ಷ್ಮೀನಾರಾಯಣ ಐತಾಳರು, ನಾರಾಯಣ ಹೊಳ್ಳರು, ಮುಂಡಾಸ್ ಹೇರ್ಳೆಯವರು ಹೀಗೆ ಹೇಳುತ್ತಾ ಹೋದಲ್ಲೀ ಈ ಪಟ್ಟಿ ಉದ್ದವಾಗಿ ಹೋಗುತ್ತೆ. ಇನ್ನು ಸೆಕೆಂಡ ಜನರೇಷನ್ನಿನವರು ಬಹಳ ಮಂದಿ ಇದ್ದಾರೆ ಬಿಡಿ.
ಇವರುಗಳಿಗೆ ನಮ್ಮ ಧನ್ಯವಾದಗಳನ್ನ ಹೇಳಲೇ ಬೇಕು. ಇವರುಗಳು ಯಾರೆಂದರೆ, ಮುಖ್ಯವಾಗಿ
೧. ಕೋಡೀ ನರಸಿಂಹ ಉಪಾಧ್ಯರು, ನಮ್ಮ ಅಪ್ಪಯ್ಯನನ್ನ ಬಾಲ್ಯದಲ್ಲಿ ಸಾಕಿದವರು.
೨. ಪಡುಕೆರೆ ಕೃಷ್ಣ ಉಪಾಧ್ಯರು, ನಮ್ಮ ಅಪ್ಪಯ್ಯನಿಗೆ ಗುಡ್ಡೀ ಶಾಲೆಯಲ್ಲಿ ಕೆಲಸವನ್ನ ಕೊಟ್ಟು ಸದಿಯನನ್ನ ಸದೀ ಮಾಸ್ತರ್ ಆಗಿ ಮಾಡಿದ್ದಕ್ಕೆ.
೩. ನಮ್ಮ ಅಣ್ಣ ಹಾಗೂ ಅಕ್ಕ ತಂಗಿಯರಿಗೆ. ಬೆಳಿಗ್ಗೆ, ಸಾಯಂಕಾಲ ಶಾಲೆ ಬಿಟ್ಟಾಗ ಗದ್ದೆಗಳಲ್ಲಿ ಗೊಬ್ರ ಹಾಗೂ ಶ್ಯಟ್ಟಿಯನ್ನ ಹೊತ್ತೂ, ಗದ್ದೆಗಳಲ್ಲಿ ಬಿತ್ತಿ, ನೆಟ್ಟಿ ನೆಡುವಲ್ಲಿ, ಕೊಯ್ಲನ್ನ ಕೊಯ್ಯುವಲ್ಲಿ, ಮನೆ ಕೆಲಸಗಳನ್ನ ಮಾಡುವಲ್ಲಿ, ಮುಡಿ ಕಟ್ಟುವಲ್ಲಿ, ತಿರಿ ಕಟ್ಟುವಲ್ಲಿ, ಹೋಟೆಲ್ ಹಾಗೂ ಅಂಗಡಿಯಲ್ಲಿ ಕೆಲಸವನ್ನ ಮಾಡಿ ಹಣ ಸಂಪಾದನೆಯನ್ನ ಮಾಡಿ ಅಪ್ಪಯ್ಯನಿಗೆ ತಮಗಾದಸ್ಟು ಹಣವನ್ನ ಕೊಟ್ಟು ಮಾನಸಿಕ ಸ್ಥಿರತೆಯನ್ನ ಕಾಪಾಡುವಲ್ಲಿ.
೪. ಊರವರಿಗೆ ನಮ್ಮ ಅಪ್ಪಯ್ಯನಿಗೆ ಸಾಕಸ್ಟು ಗೌರವ ನೀಡುವಲ್ಲಿ ಸಹಾಯವನ್ನ ಮಾಡಿದ್ದಕ್ಕೆ.
೫. ಗುಂಡ್ಮೀ ಸೋಮೈಯ್ಯ ಮೈಯರಿಗೆ, ಅವರು ನಮ್ಮ ಅಪ್ಪೈಯ್ಯನಿಗೆ ಬೆಂಗಾವಲಾಗಿ ನಿಂತದ್ದಕ್ಕೇ
೬. ಇನ್ನು ಕೇರಿಯ ಮಂದಿಗೆ, ಮಹಾಬಲ ಮಾಸ್ಟ್ರಿಗೆ ಮತ್ತು ಉಳಿದ ವ್ಯಕ್ತಿಗಳಿಗೆ ಮತ್ತು ಗಣ್ಯರಿಗೆ.
ಓಹೋ, ಕಥೆ ಬಹಳ ಹೆಚ್ಚಾಯ್ತು. ನಾನಿಲ್ಲಿಗೇ ನಿಲ್ಲಿಸುತ್ತೇನಪ್ಪಾ ಆಯ್ತಾ? ಬೈಯ್ಬೇಡಿ ನನ್ನನ್ನ. ಏನು ಇವನ್ ಅಪ್ಪನೊಬ್ಬನೇ ಸೈಯಾ ಊರಿನಲ್ಲಿ, ಬೇರವರಿಗೂ ಅಪ್ಪ ಇಲ್ಲ್ವಾ ಅಂತ. ನೀವೂ ಬರೀರಪ್ಪಾ, ಯಾರ್ಬೇಡಾ ಅಂದ್ರೂ? ಇಲ್ಲಾಂದ್ರೇ ನಟ್ರಾಜ ಉಪಾಧ್ಯರಿಗೆ ಹೇಳಿ, ಅವ್ರಿಗೊಳ್ಳೇ ಉಮ್ಮಸ್ ಉಂಟ್ ಕಂಡ್ರಿಯಾ. ಬಿಡ್ಬೇಡಿ. ಅವ್ರನ್ನ ಹಿಡ್ಕೊಳ್ಳೀ. ಈ ಕಥೆಯನ್ನ ಓಡಿದ ಎಲ್ಲರಿಗೂ ಸದಿಯ ಮಾಸ್ತರ ಕಿರೀ ಮಗನು ಮೊದಲೇ ಮಾಡುವ ಧನ್ಯವಾದಗಳು.
ಬರೆದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
ಸದೀ ಮಾಸ್ತರ ಕಿರೀ ಮಗ.
೦೨/೦೪/೨೦೧೬