Tuesday, October 11, 2022

ಕಾಂತಾರ ಕಂಡೆ, ನೀವ್‌ ಕೇಣಿ!

 

ಕಾಂತಾರ ಕಂಡೆ, ನೀವ್‌ ಕೇಣಿ!

 

“ಕಾಂತಾರ” ಮನರಂಜನೆಯ ಚಿತ್ರವಾಗಿ ಒಂದು ಪರಿಣಾಮಕಾರಿಯಾದ ಚಿತ್ರ. ಬುದ್ಧಿವಂತಿಕೆಯ ಚಿತ್ರವೂ ಕೂಡಾ. ಹಾಗೆಂದು ಇದೊಂದು ಕಲಾತ್ಮಕ ಚಿತ್ರವೆಂಬ ನಿರೀಕ್ಷೆಯಲ್ಲಿ ನೋಡಹೋಗಬೇಡಿ.

 

ಕಾಂತಾರದ ಪರಿಣಾಮವು ಕಥನದಲ್ಲಿನ ಹದ ಮತ್ತು ಸಂಯಮದ ಮೂಲಕ ಅನಾವರಣಗೊಳ್ಳುತ್ತದೆ.  ದಂತ ಕಥೆಯನ್ನು ಆಧರಿಸಿ ಚಿತ್ರ ಕಥೆ ಗಟ್ಟಿಯಾದ ಚೌಕಟ್ಟನ್ನು ಹೊಂದಿದೆ. ೧೯೭೦ರ ಸುತ್ತಲಿನ ಸಾಮಾಜಿಕ ವಾಸ್ತವನ್ನಾಧರಿಸಿ  ಚಿತ್ರ ಕಥೆ ಇದ್ದರೂ, ಕಥನದ ಓಘ ಮತ್ತು ಧಾಟಿ ಇಂದಿನ ಪ್ರೇಕ್ಷಕನ ಅಭಿರುಚಿಗೆ ಸರಿಯಾಗಿ ಇದೆ. ಸಮಾಜದಲ್ಲಿ ಎಂದಿಗೂ ಎಲ್ಲವೂ ನೆಟ್ಟಗಿರುವುದಿಲ್ಲ. ಈ ನೆಟ್ಟಗಿಲ್ಲದ ವಿಷಯಗಳನ್ನು ಹೇಳುವಲ್ಲಿ ಯಾವುದೇ ಅಳಕು ಇಲ್ಲಿಲ್ಲ, ಅನಾವಶ್ಯಕ ರಾಜಕೀಯದ ಯಾ ಸಿದ್ಧಾಂತಗಳ ತಲೆನೋವೂ ಇಲ್ಲ. ನೋಡುಗನಾಗಿ ನಡೆವ ಘಟನೆಗಳು ಚಿತ್ರಣಗಳು ನಿಮ್ಮನ್ನು ಬಾಧಿಸದೇ ಇರುವುದಿಲ್ಲ. ಎಲ್ಲವೂ ನೆಟ್ಟಗಿಲ್ಲದಿರದಿದ್ದರೂ, ಸಮತೋಲನದ, ಪರಸ್ಪರ ಹೊಂದಾಣಿಕೆಯ ಬದುಕು ಮಾತ್ರ ಬಹು ಮುಖ್ಯ ಎಂಬ ಸಂದೇಶ ನಿಮಗೆ ಉಳಿದು ಹೋಗುವುದು ಈ ಸಿನೆಮಾದ ಯಶಸ್ಸುಗಳಲ್ಲಿ ಒಂದು.  ದಲಿತ-ಬಲಿತ, ಕಾಡು-ನಾಡು, ಸಮುದಾಯ-ಸರಕಾರ, ಸಂಸ್ಕೃತಿ-ನಾಗರಿಕತೆ, ಪರಂಪರೆ-ಬದಲಾವಣೆ, ಮಾನವ ಪ್ರಯತ್ನ-ದೈವ (ಅನೂಹ್ಯ), ಒಳಿತು-ಕೆಡಕು, ಜೀವನೋತ್ಸಾಹ- ನೈತಿಕತೆ, ದಿಕ್ಕಿಲ್ಲದ ಸರಳ ಬದುಕು-ಪರಿವರ್ತನೆಯ ಕರೆ ಈ ಎಲ್ಲ ಸಂಘರ್ಷಗಳ ಸುತ್ತ ದೇಶ ಕಾಲಗಳ ಚಲನೆಯ ಆವಾಂತರಗಳ ಸುತ್ತ ಸಮತೋಲನ ಹಾಗೂ ಹೊಂದಾಣಿಕೆಯತ್ತ ನಮ್ಮ ಸಂವೇದನೆಗಳಿರಲಿ ಎಂಬ ಸಂದೇಶ ಪರಿಣಾಮಕಾರಿಯಾಗಿ ಮುಟ್ಟುವಂತಹದ್ದು. ಈ ಪರಿಣಾಮದ ಮೂಲಕ ನೀವು ಚಿತ್ರಮಂದಿರದಿಂದ ಹೊರ ಬಂದಂತೆ ನಿಮ್ಮನ್ನು ಅಂತರ್ಮುಖಿಯಾಗಿಸುವುದೇ ಈ ಚಿತ್ರದ ಬುದ್ಧಿವಂತಿಕೆಗಳಲ್ಲಿ ಬಹಳ ಮುಖ್ಯವಾದದ್ದು.

 

ಮೊದಲೇ ಹೇಳಿದಂತೆ ಇದೊಂದು ಮನರಂಜನೆಯ ಚಿತ್ರ. ಹಾಗಾಗಿ ಸಾಮಾನ್ಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ಮೋಸವಾಗದಂತೆ ರಂಜನೆ ಇದೆ, ಹಾಸ್ಯ ನವಿರಾಗಿ ಇದೆ.  ಹೊಡೆದಾಟ ನನಗೆ ಅನಗತ್ಯ ಎನಿಸಿದರೂ ಇದು ಬೇಕಿರುವವರಿಗೆ ಸಾಕಷ್ಟು ಇರುವುದೇ ಸಿನೆಮಾ ಎಲ್ಲರ ಮನ ಗೆಲ್ಲುವತ್ತ ಇನ್ನೊಂದು ಬುದ್ಧಿವಂತಿಕೆಯಾಗಿ ಎದ್ದು ಕಾಣುತ್ತದೆ.

 

ಈ ಚಿತ್ರದಲ್ಲಿ ಕಥನದ ಓಘ ಮತ್ತು ಸಮತೋಲನವೇ ಮುಖ್ಯವಾಗುತ್ತದೆ. ಹಾಗಾಗಿ ಕಲಾತ್ಮಕತೆ ಸೊರಗುವುದು ಅನಿವಾರ್ಯ. ನಟರೆಲ್ಲಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ನಾಯಕ ನಟನಾಗಿ ರಿಷಭ್‌ ಶೆಟ್ಟಿ ಹೊಡೆದಾಟಗಳನ್ನು ಬಿಟ್ಟರೆ ಬೇರೆ ಸಮಯದಲ್ಲಿ ಸಾಮಾನ್ಯನಾಗಿ ಕಾಣುವುದೇ ಈ ಸಿನೆಮಾದ ಜೀವಾಳ. ಆದರೆ ಕೊನೆಯ ಹತ್ತು ಹದಿನೈದು ನಿಮಿಷಗಳಲ್ಲಿ ರಿಷಭ್‌ ಶೆಟ್ಟಿ ನಟನಾಗಿ ನಿಮ್ಮ ಗಮನ ಸೆಳೆಯುತ್ತಾರೆ, ಅದೂ ಹೆಚ್ಚಿನ ಕಲಾತ್ಮಕತೆ ಇಲ್ಲದೇ. ಹಾಗಾಗಿ, ರಿಷಭ್‌ ಶೆಟ್ಟಿಯವರು ನಟನಾಗಿ ಗೆದ್ದು, ಚಿತ್ರದ ರೂವಾರಿಯಗಿ ಇನ್ನೂ ಹತ್ತು ಪಟ್ಟು ಹೆಚ್ಚಿಗೆ ಗೆದ್ದಿದ್ದಾರೆ. ಕಲಾತ್ಮಕ ಚಿತ್ರಗಳಲ್ಲಿದ್ದಂತೆ ನಟರಿಗೆ ಅಭಿನಯಕ್ಕೆ ಹೆಚ್ಚು ಅವಕಾಶವನ್ನು ಕಥನ ಮತ್ತು ಕೆಮರಾ ಇಲ್ಲಿ ಕೊಡುವುದೇ ಇಲ್ಲ. ಹಾಗಾಗಿ ಮಾನಸಿ ಸುಧೀರ್‌ ಅಂತಹ ಪ್ರತಿಭಾನ್ವಿತ ನಟಿಯರ ಪೂರ್ಣ ಪ್ರಯತ್ನವಿದ್ದರೂ ಪಾತ್ರ ಸೊರಗುತ್ತದೆ, ಇದು ನಟರ ತಪ್ಪಲ್ಲ, ಆದರೆ ಅವರ ದುರದೃಷ್ಟವೇ. ಆದರೆ ಚಿತ್ರ ಗೆಲ್ಲುವುದರಿಂದ ಎಲ್ಲರೂ ಗೆದ್ದಂತೆ.

 

ಇದೇ ಮಣ್ಣಿನಿಂದ ಇತ್ತೀಚೆಗೆ ಬಂದ “ಅಮ್ಮಚ್ಚಿಯೆಂಬ ನೆನಪು” ಎಂಬ ಸಿನೆಮಾ ಬಲವಾದ ಕಥಾ ಹಂದರವಿದ್ದು ಹೆಚ್ಚು ಕಲಾತ್ಮಕವಾಗಿ ಮೂಡಿಬಂದಿರುವಂತಹದ್ದು. ಆದರೆ, ಕಡಿಮೆ ಕಲಾತ್ಮಕತೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೆಚ್ಚಿನ ಪ್ರೇಕ್ಷಕರನ್ನು ಮುಟ್ಟುವುದೇ ಕಾಂತಾರದ ಹೆಗ್ಗಳಿಕೆ. ಹಾಗಾಗಿಯೇ ಅಲ್ಲಲ್ಲಿ ದೂರು ಬರುವುದು ಸಹಜವೇ. ಕುಂದಗನ್ನಡದ ಉಪಯೋಗ ಕಡಿಮೆ ಇರುವುದು, ಶುರುವಿಗೆ ಹಾಗೂ ಕೊನೆಗೆ ಸಂಸ್ಕತದ ಶ್ಲೋಕಗಳು, ಯಕ್ಷಗಾನವನ್ನು ದುಡಿಸಿಕೊಳ್ಳುವಲ್ಲಿನ ಮಿತಿಗಳು ಇತ್ಯಾದಿಗಳು ದೋಷವಾಗಿ ಕಂಡರೂ, ಸಿನೆಮಾದ ಒಟ್ಟು ಪರಿಣಾಮ, ಸಮತೋಲನ ಹಾಗೂ ಸಮನ್ವಯದಲ್ಲಿ ಸಾಕಷ್ಟು ಸಹಕರಿಸಿವೆ.

 

ಪ್ರಪಂಚದಲ್ಲಿನ ಬೇರೆ ಬೇರೆ ಹಿನ್ನಲೆಯ ಸುಮಾರು ೨೦,೦೦೦ಕ್ಕೂ ಹೆಚ್ಚಿನ ಸಿನೆಮಾಗಳನ್ನು ನೋಡಿ ರೂಢಿಯಾದ ನನಗೆ ಚಿತ್ರಗಳ ಕಥನದ ವಿಭಿನ್ನತೆ, ಅದರ ಉದ್ದೇಶ ಹಾಗೂ ಪರಿಣಾಮ, ಈ ಕುರಿತಾದ ಕಲಾತ್ಮಕತೆ ಇವೆಲ್ಲವೂ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಈ ಚಿತ್ರವು  ಕಲಾತ್ಮಕತೆಯ ಕೊರತೆಗಳಿದ್ದರೂ ಕೂಡಾ ವಿಶ್ವಮಟ್ಟದ್ದಾಗುತ್ತದೆ. ಆದರೆ, ಅದರ ಅರ್ಥ ಅದಕ್ಕೆ ವಿಶ್ವ ಮನ್ನಣೆ ಸಿಗುತ್ತದೆ ಎಂದಲ್ಲ.

 

ಭೂತಾರಾಧನೆಯ ವಿಷಯದಲ್ಲಿ ಹೂಡಿಕೆಯಾದವರಿಗೆ ಈ ಚಿತ್ರ ಸಾಕಷ್ಟು ಸಾರ್ಥಕ್ಯವನ್ನು ಕೊಡುತ್ತದೆ. ಆದರೆ ಭೂತಾರಾಧನೆಯಲ್ಲಿ ನಿಮ್ಮ ನಂಬಿಕೆ ಎಷ್ಟು ಇದೆ, ಇಲ್ಲ ಎಂಬುದು ಏನೇ ಇದ್ದರೂ ಈ ಚಿತ್ರದ ಪರಿಣಾಮ ನಿಮಗೆ ಉಳಿಯುವುದು ಈ ಚಿತ್ರದ ಇನ್ನೊಂದು ಬುದ್ಧಿವಂತಿಕೆ.

 

“ಅಮ್ಮಚ್ಚಿಯೆಂಬ ನೆನಪು” ಸಿನೆಮಾ ಕಲಾತ್ಮಕವಾಗಿದ್ದರೂ ಗಳಿಕೆಯಲ್ಲಿ ಹಾಗೂ ಪ್ರಶಸ್ತಿಯಲ್ಲಿ ಸುದ್ದಿಯಾಗದೇ ಇರುವ ನೆನಪು ಇನ್ನೂ ಮಾಸಿಲ್ಲ. ಇದಕ್ಕೆ ಕಾರಣ, ಪ್ರೇಕ್ಷಕನಿಗೆ ಪರಿಣಾಮ ಒಂದು ಕಡೆಯಾದರೆ, ಪ್ರಶಸ್ತಿಯ ವಿಷಯದಲ್ಲಿ ಬರಬಹುದಾದ ಇತರ ಗಣನೆಗೆಳು ಹಾಗೂ ಸಂಬಂಧಿತ ಲಾಬಿಗಳು.  ಆದರೆ ಕಾಂತಾರವು ಕಲಾತ್ಮಕವಾಗಿ ಸೊರಗಿದ್ದರೂ ಪರಿಣಾಮಕಾರಿಯಾಗಿ ಹೆಚ್ಚಿನ ಗಳಿಕೆ ಹಾಗೂ ಪ್ರಶಸ್ತಿಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಆಸ್ಕರಿಗೆ ಕೂಡಾ ಹೋಗಲಿ ಎಂದು ಆಶಿಸುವೆ, ಆದರೆ ಇದು ಹೋಗಲೇಬೇಕೆಂಬ ಹಠವಿಲ್ಲ.  


ಕಾಂತಾರವು ಕನ್ನಡೇತರ ಕಾಣುಗರಿಗೂ ಒಂದು ಮುಖ್ಯವಾದ ಚಿತ್ರ ಎಂಬುದೇ ನನ್ನ ಕೊನೆಯ ಮಾತು. ಅದಕ್ಕಾಗಿ ಇಂಗ್ಲಿಷಿನಲ್ಲಿ ಇನ್ನೊಂದು ಲೇಖನ ಬರೆದರೂ ಬರೆದೆ.

 

ನಮಸ್ತೆ.

ನಟರಾಜ ಉಪಾಧ್ಯ