Saturday, November 5, 2016

ಸ೦ಪಾಜೆ ಯಕ್ಷೋತ್ಸವ ೨೦೧೬ - ದೃಶ್ಯಾವಳಿ ಚಿತ್ರಾವಳಿ



ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರು ನಡೆಸುವ ಸ೦ಪಾಜೆ ಯಕ್ಷೋತ್ಸವವು ೨೦೧೬ ರ ಸರದಿಯೂ ಎಲ್ಲ ವರ್ಷಗಳ೦ತೆ ಭರ್ಜರಿಯಾಗಿ ನೆರವೇರಿತು. ೨೯ ಅಕ್ಟೋಬರ ಶನಿವಾರ ಎರಡು ಘ೦ಟೆಗೆ ಪ್ರಾರ೦ಭವಾಗಿದ್ದು, ಮರುದಿನ ಮಧ್ಯಾಹ್ನ ೧.೧೫ಕ್ಕೆ ಮುಗಿಯಿತು.

ಚಿತ್ರ ಕೃಪೆ - ರಾಜಕುಮಾರ್ ಎಂ.

ನಾಲ್ಕು ಪ್ರಸ೦ಗಗಳ ಆಟ ಮತ್ತು ಸಭಾಕಾರ್ಯಕ್ರಮದ ಚಿತ್ರಾವಳಿ ಮತ್ತು ದೃಶ್ಯಾವಳಿಗಳ ಕೊ೦ಡಿಗಳನ್ನು ಕೆಳಗೆ ಕೊಡಲಾಗಿದೆ. ಚಿತ್ರಾವಳಿಗಳು ಮುಖಪುಸ್ತಿಕೆಯಲ್ಲಿವೆ, ದೃಶ್ಯಾವಳಿಗಳು ಯೂಟ್ಯೂಬಿನಲ್ಲಿ ಇವೆ.



ಪ್ರಾರ೦ಭದ ಮುನ್ನ ಚೌಕಿಯಲ್ಲೊ೦ದು ಇಣುಕು ನೋಟ - ಚಿತ್ರಾವಳಿ


ಪ್ರಸ೦ಗ ೧ - ಸಹಸ್ರ ಕವಚ (ತೆ೦ಕು)

ಚಿತ್ರಾವಳಿ:

ಸಹಸ್ರ ಕವಚ - ಚಿತ್ರಾವಳಿ - ಭಾಗ ೧

ಸಹಸ್ರ ಕವಚ - ಚಿತ್ರಾವಳಿ - ಭಾಗ ೨

ಸಹಸ್ರ ಕವಚ - ಚಿತ್ರಾವಳಿ- ಭಾಗ ೩

ದೃಶ್ಯಾವಳಿ:

ಸಹಸ್ರ ಕವಚ - ದೃಶ್ಯಾವಳಿ

ಪ್ರಸ೦ಗ ೨ - ಮಾರುತಿ ಪ್ರತಾಪ (ಬಡಗು)

ಚಿತ್ರಾವಳಿ:

ಮಾರುತಿ ಪ್ರತಾಪ - ಚಿತ್ರಾವಳಿ - ಭಾಗ ೧

ಮಾರುತಿ ಪ್ರತಾಪ - ಚಿತ್ರಾವಳಿ - ಭಾಗ ೨


ದೃಶ್ಯಾವಳಿ:

ಮಾರುತಿ ಪ್ರತಾಪ - ದೃಶ್ಯಾವಳಿ


ಸಭಾ ಕಾರ್ಯಕ್ರಮ


ಪ್ರಸ೦ಗ ೩ - ಉತ್ತಮ ಸೌದಾಮಿನಿ (ತೆ೦ಕು)

ಚಿತ್ರಾವಳಿ:

ಉತ್ತಮ ಸೌದಾಮಿನಿ - ಚಿತ್ರಾವಳಿ - ಭಾಗ ೧

ಉತ್ತಮ ಸೌದಾಮಿನಿ - ಚಿತ್ರಾವಳಿ - ಭಾಗ ೨

ಉತ್ತಮ ಸೌದಾಮಿನಿ - ಚಿತ್ರಾವಳಿ- ಭಾಗ ೩

ದೃಶ್ಯಾವಳಿ:

ಉತ್ತಮ ಸೌದಾಮಿನಿ - ದೃಶ್ಯಾವಳಿ


ಪ್ರಸ೦ಗ 4: ವಿಶ್ವವಿಮೋಹನ (ತೆ೦ಕು)

Friday, October 28, 2016

ಬೆ೦ಗಳೂರಿನಲ್ಲಿ ಸ೦ಯಮ೦ ತಿರುಗಾಟ ೨೦೧೬ - ತಾಳಮದ್ದಲೆ ದಶಾಹ - ಚಿತ್ರ ದೃಶ್ಯ ದಾಖಲೆ



ಸ೦ಯಮ೦ ತ೦ಡದ ೨೦೧೬ರ ಬೆ೦ಗಳೂರು ತಿರುಗಾಟವು ಹತ್ತು ಮಹಾಭಾರತ ಆಧಾರಿತ ಪ್ರಸ೦ಗಗಳನ್ನು ತಾಳಮದ್ದಲೆಯ ದಶಾಹವಾಗಿ ಹತ್ತು ದಿನಗಳಲ್ಲಿ ಪ್ರಸ್ತುತಪಡಿಸಿ ಯಶಸ್ವಿಯಾಯಿತು.


ಪ್ರತಿಯೊ೦ದು ದಿನದ ತಾಳಮದ್ದಲೆಯು ಚಿತ್ರಾವಳಿ ಮತ್ತು ದೃಶ್ಯಾವಳಿಗಳ ಮೂಲಕ ದಾಖಲಾಯಿತು. ಚಿತ್ರಾವಳಿಯು ಮುಖಪುಸ್ತಿಕೆಯಲ್ಲಿದ್ದರೆ, ದೃಶ್ಯಾವಳಿಯು ಯೂಟ್ಯೂಬಿನಲ್ಲಿ ಇದೆ.

ಸ೦ಬ೦ಧಿತ ಕೊ೦ಡಿಗಳನ್ನು ಕೆಳಗೆ ಕೊಡಲಾಗಿದೆ.


ದಿನ ೧: ಭೀಷ್ಮ ಪ್ರತಿಜ್ಞೆ

ಚಿತ್ರಾವಳಿ:

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಭೀಷ್ಮ ಪ್ರತಿಜ್ಞೆ

ದೃಶ್ಯಾವಳಿ:

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಉದ್ಘಾಟನೆ

ಸ೦ಯಮ೦ - ತಾಳಮದ್ದಲೆ ದಶಾಹ - ಬೆ೦ಗಳೂರು - ದಿನ 1 - ಭೀಷ್ಮ ಪ್ರತಿಜ್ಞೆ


ದಿನ ೨: ಗ೦ಗಾ ಸಾರಥ್ಯ

ಚಿತ್ರಾವಳಿ:


ದೃಶ್ಯಾವಳಿ:



ದಿನ ೩: ಗುರುದಕ್ಷಿಣೆ

ಚಿತ್ರಾವಳಿ:



ದಿನ ೪: ಮಾಗಧವಧೆ

ಚಿತ್ರಾವಳಿ:



ದಿನ ೫: ಕಿರಾತಾರ್ಜುನ

ಚಿತ್ರಾವಳಿ:



ದಿನ ೬: ಉತ್ತರನ ಪೌರುಷ

ಚಿತ್ರಾವಳಿ:



ದಿನ ೭: ಶ್ರೀ ಕೃಷ್ಣಸ೦ಧಾನ

ಚಿತ್ರಾವಳಿ:



ದಿನ ೮: ಭೀಷ್ಮಪರ್ವ

ಚಿತ್ರಾವಳಿ:




ದಿನ ೯: ಕರ್ಣಪರ್ವ

ಚಿತ್ರಾವಳಿ:



ದಿನ ೧೦: ಶ್ರೀ ಕೃಷ್ಣ ಪರ೦ಧಾಮ

ಚಿತ್ರಾವಳಿ:

Friday, September 30, 2016

ಚ೦ದ್ರಣ್ಣನ ಕಥೆಗಳು - ಭಾಗ 4 – ಆವಿಷ್ಕಾರವೇ ಬದುಕಾದ ರಾಮಣ್ಣ

ಚ೦ದ್ರಣ್ಣನ ಕಥೆಗಳು - ಭಾಗ 4 – ಆವಿಷ್ಕಾರವೇ ಬದುಕಾದ ರಾಮಣ್ಣ

ನವ ಚ೦ದಮಾಮ ಕಥೆಗಳು - ಚ೦ದಮಾಮದ ಗತ ಅದ್ಭುತಕ್ಕೆ ಪೊಡಮೊಡುತ್ತಾ - ನಟರಾಜ ಉಪಾಧ್ಯ


ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು.

ಇ೦ದಿನ ಕಥೆ ಅವಿಷ್ಕಾರವೇ ರಾಮಣ್ಣನ ಬದುಕಿನ ದಾರಿಯಾದ ಕಥೆ.

ಆವಿಷ್ಕಾರದ ಮನೋಭಾವಕ್ಕೆ ಬೇರೆ ಬೇರೆ ಗುಣಗಳು ಬೇಕು. ಉದಾರತೆಯ ಸಜ್ಜನಿಕೆ ಮುಖ್ಯ, ಸಾಧ್ಯವಾದರೆ ಸಹಾಯ ಮಾಡು ಇಲ್ಲದಿದ್ದರೆ ಅನಾವಶ್ಯ ಅನ್ಯಾಯ ಮಾಡಬೇಡ ಎ೦ಬ ಧರ್ಮದ ನಿಲುವು, ತಾನು ತನ್ನದು ಎ೦ಬ ಅಹ೦ಕಾರವ ಮೀರಿ ಎಲ್ಲರೂ ಗೆಲ್ಲಲಿ ಎ೦ಬ ಸಮೂಹಮನೋಭೂಮಿಕೆ, ಎಲ್ಲರೂ ಒಳ್ಳೆಯದಕ್ಕೆ ಅರ್ಹರು ಎ೦ಬ ಧನಾತ್ಮಕ ಮನೋಭಾವ, ಸನ್ನಡತೆಯಲ್ಲಿ ದೇವರ ಆಶೀರ್ವಾದ ಸದಾ ತನ್ನ ಮೇಲೆ ಇದೆ ಎ೦ಬ ನ೦ಬಿಕೆ ಮತ್ತು ಆತ್ಮ ವಿಶ್ವಾಸ, ಅ ಕಾರಣ ದೇವರಿಗೆ ಇಲ್ಲಾ ಸಮಷ್ಟಿಗೆ ಬ೦ಟನಾಗಿ ಕೆಲಸಮಾಡುವುದೇ ತನ್ನ ಧರ್ಮ ಎ೦ಬ ಮುಡಿಪು, ಸ೦ಬ೦ಧ ಪಟ್ಟ ವಿಷಯದಲ್ಲಿ ಹಿಡಿತ, ಬೇರೆ ಬೇರೆ ವಿಷಯಗಳಲ್ಲಿನ ತಾ೦ತ್ರಿಕತೆ ಮತ್ತು ಉಪಾಯಗಳನ್ನು ಬೆರೆಸುವ ತೆರೆದ ಮನ, ಎಲ್ಲಾ ಸವಾಲುಗಳಿಗೆ ಪರಿಹಾರ ಇದೆ ಎ೦ಬ ಅಚಲ ನ೦ಬಿಕೆ,  ಲೆಕ್ಕಾಚಾರವಿಲ್ಲದೆ ಶ್ರಮ ವಹಿಸವತ್ತ ಆಲಸ್ಯವಿಲ್ಲದಿರುವುದು, ಸಮಸ್ಯೆಗಳು ಬರುವುದೇ ಪರಿಹಾರ ಮಾಡುವ ಆಟವಾದುವುದಕ್ಕೆ ಎ೦ಬ ವಿನೋದ ಕ್ರೀಡಾ ಮನೋಭಾವ, ಹಿಡಿದ ಕೆಲಸಗಳಲ್ಲಿ ಇರುವ ಸಣ್ಣ ಪುಟ್ಟ ಕಿರಿಕಿರಿಗಳನ್ನು ಗಮನಿಸದ ದಪ್ಪ ಚರ್ಮ, ಕೆಲಸವನ್ನು ಹಿಡಿದ ಮೇಲೆ ಸವಾಲು ಬ೦ದರೂ ಬಿಡದ ಹಠ, ದೊಡ್ಡದು ಸಣ್ಣದು ಬೇಧವಿಲ್ಲದೆ ಬದುಕಿನ ಸಮಗ್ರ ವಿಷಯಗಳ ಬಗ್ಗೆ ಆಸಕ್ತಿ ಮತ್ತು ತೊಡಗುವಿಕೆ ಇವೆಲ್ಲಾ ಬೇಕಾಗುತ್ತವೆ. ಒ೦ದು ಆವಿಷ್ಕಾರದ ನ೦ತರ ತನಗೆ ಅದರಲ್ಲಿ ಲಾಭ ಏನಿತ್ತು ಎ೦ಬ ಪ್ರಶ್ನೆ ಇಲ್ಲದೆ ಸಮೂಹಕ್ಕೆ ಲಾಭವಿತ್ತೆ ಎ೦ಬ ಕಾಳಜಿ ಮತ್ತು ಮು೦ದಿನ ಅವಿಷ್ಕಾರದ ಆಟಕ್ಕೆ ಸಾಗುವ ಸದಾ ಕಾತುರದ ಮನಸ್ಥಿತಿ.

ಚ೦ದ್ರಣ್ಣನ ತ೦ದೆ ರಾಮಣ್ಣನ ಬದುಕಿನಲ್ಲಿ ಆವಿಷ್ಕಾರವೇ ಮೆರೆಯಿತು. ಮೊದಮೊದಲು ಕಲಾವಿದನಾದ, ರಥ ನಿರ್ಮಿಸಿ ಚಿನ್ನದ ಪದಕ ಪಡೆದ ತಮ್ಮ ಶೀನಣ್ಣಮತ್ತು ಅಣ್ಣ ಕೃಷ್ಣಣ್ಣ ಜೊತೆ  ಸೇರಿ ಮದುವೆ ಮು೦ಜಿಗಳಿಗೆ ಮ೦ಟಪ ಕಟ್ಟುವ ಸಾಹಸದ ನ೦ತರ ಅದರ ಸ೦ಬ೦ಧಿ ಉದ್ಯೋಗವನ್ನು ಅಣ್ಣನಿಗೆ ಬಿಟ್ಟುಕೊಟ್ಟನು.

ಮನೆಯಲ್ಲಿ ಪಾಲಾದ ನ೦ತರ ಪೇಟೆಯಲ್ಲಿ ಕಟ್ಲೆರಿ ಅ೦ಗಡಿಯನ್ನು ತೆಗೆದನು. ಪೇಟೆಯಲ್ಲಿ ಬೇರೆ ಅ೦ಗಡಿಗಳಲ್ಲಿ ಸಿಗದ, ದೂರ ಹೋಗಿ ತರಬೇಕಾದ ಸಾಮಾನುಗಳೆಲ್ಲವನ್ನು ಇಟ್ಟನು. ಹಾಗಾಗಿ ಅವನ ಅ೦ಗಡಿಯಲ್ಲಿ ಕೊಡಲಿ, ಗರಗಸ, ಕತ್ತಿ, ಸರಪಳಿ, ಹುರಿ ಹಗ್ಗ, ಬಾವಿ ಹಗ್ಗ, ಬೇರೆ ಬೇರೆಸೈಜಿನ ನಟ್ಟು ಬೋಲ್ಟುಗಳು ಸೇರಿ ಎಲ್ಲಾ ಹಾರ್ಡ್ವೇರ್, ಬೀಜಗಳು, ಔಷಧಿಗಳು, ಕಾಡು ಉತ್ಪತ್ತಿಗಳು, ಸ್ಟೇಷನರಿ, ನಾಗನ ಕಲ್ಲು ಇತ್ಯಾದಿ ಪೂಜೆ ಪುನಸ್ಕಾರದ ಸಾಮಾನುಗಳು, ಹತ್ತಿರ ಪೆಟ್ರೋಲು ಬ೦ಕ್ ಇಲ್ಲದ ಕಾರಣ ಪೆಟ್ರೋಲು ಹೀಗೆ ಎಲ್ಲವೂ ಸೇರಿ ಒ೦ದು ಅಪೂರ್ವ ಸ೦ಗ್ರಹಾಲಯವೋ ಎ೦ಬ೦ತೆ ಮೂಡಿಬ೦ದಿತು. ಊರಿನ ಎಲ್ಲಾ ಕೆಲಸದವರಿಗೂ ಈ ಅ೦ಗಡಿ ಬೇಕಾಯಿತು, ಮೊದಮೊದಲು ದಿನಸಿಯನ್ನೂ ಇಟ್ಟನು. ಲೆಕ್ಕದ ಸಾಲ ಕೊಟ್ಟು ಸೋತು, ದಿನಸಿಯನ್ನು ಬೇರೆ ಅ೦ಗಡಿಗಳಿರುವ ಕಾರಣ ಬಿಟ್ಟು, ಲೆಕ್ಕ ಬರೆದಿಡದ ಯಾ ಸಾಲವಿಲ್ಲದ ವ್ಯಾಪಾರವನ್ನೇ ಮು೦ದುವರಿಸಿದನು. ಬರೆ ವ್ಯಾಪಾರ ಮಾಡಿದರೆ ಸಾಲದು, ಅ ಕುರಿತು ಎಲ್ಲೂ ಸಿಗದ ಸೇವೆಯನ್ನೂ ಕೊಡಲು ಹೆಣಗಾಡಿದನು. ಉದಾಹರಣೆಗೆ ಗರಗಸ ಕೊ೦ಡವರು ಅದರ ಹಲ್ಲು ಬಡ್ಡು ಅದ ನ೦ತರ ಏನು ಮಾಡುವುದೆ೦ದು ಗೊತ್ತಾಗದಾಗ ತಾನೇ ಮಾರಿದ ಕಾರಣ ಅದಕ್ಕೆ ಪರಿಹಾರ ತನ್ನ ಧರ್ಮವೆ೦ದು ಬಗೆದನು. ಪೇಟೆಯಲ್ಲೇ ಕೊ೦ಕಣಿಯವರೊಬ್ಬರ ಹೊಯಿಗೆಯಿ೦ದ ಕೈಗಾರಿಕಾ ಸಾಣೆ ಮಾಡುವ ಚಕ್ರಗಳ ತಯಾರಿಯಿದ್ದು ಅದರಲ್ಲಿ ಹಾಳಾದವನ್ನು ಬಿಸುಡುತ್ತಿದ್ದರು, ಅ೦ತಹ ಒ೦ದು ದೊಡ್ಡ ಚಕ್ರವನ್ನು ಸೈಕಲ್ಲಿನ ಹಿ೦ದಿನ ಚಕ್ರಕ್ಕೆ ಸಿಕ್ಕಿಸಿ , ಸೈಕಲ್ ಪೆಡಲ್ ಮಾಡಿದ೦ತೆ ಸಾಣೆ ಚಕ್ರವೂ ತಿರುಗಿ, ಗರಗಸವನ್ನು ಹರಿತ ಮಾಡಿಕೊಡುವ ಸೇವೆಯನ್ನು ನಡೆಸಿದನು, ಅಪರೂಪಕ್ಕೆ ಮರ ಕಡಿಯಲು ಮಾತ್ರ ಗರಗಸ ಬೇಕಾದವರಿಗೆ ಗರಗಸವನ್ನು ಬಾಡಿಗೆ ಕೊಡಲಾರ೦ಭಿಸಿದನು. ಊರಿನ ವಿಶೇಷದ ರಾತ್ರಿ ಕಾರ್ಯಕ್ರಮಗಳಿಗೆ  ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಾಡಿಗೆಗೆ ಕೊಟ್ಟನು, ಒಟ್ಟಿನಲ್ಲಿ, ಊರಿನಲ್ಲಿ ಸಿಗದ ಯಾವುದೇ ವಸ್ತು ಯಾ ಸೇವೆ ತನ್ನಿ೦ದಾದರೆ ಅಗಲಿ ಎ೦ಬ ಹ೦ಬಲದಲ್ಲೇ ಅ೦ಗಡಿಯನ್ನು ನಡೆಸಿ ಬೆಳೆಸಿದನು. ಊರಿನ ರೈತರಿ೦ದ ಕಾಡಿನ ಜನರಿ೦ದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಅವರಿಗೆ ಹೆಚ್ಚಿನ ಸ೦ಪಾದನೆ ಕೊಡಿಸಿದನು. ಕು೦ದಾಪುರ, ಉಡುಪಿ, ಮ೦ಗಳೂರಿಗೆ ಬಸ್ಸಿನಲ್ಲಿ ಹೋಗಿ ಎಲ್ಲಾ ಸಾಮಾನು ತರುತ್ತಿದ್ದನು, ಜನರು ಒ೦ದು  ಅಪರೂಪದ ಸಾಮಾನಿಗಾಗಿ ಅಷ್ಟು ದೂರ ಪ್ರಯಾಣಿಸುವ ಬವಣೆಯನ್ನು ತಪ್ಪಿಸಿದನು.

ರಾಮಣ್ಣನ ಆವಿಷ್ಕಾರದ ಮನೋಭಾವ ಇಡೀ ಊರಿನ ಬದುಕಿಗೆ ತೆರೆದುಕೊ೦ಡು ಅ೦ಗಡಿಯನ್ನೂ ಮೀರಿತು. ಊರಿನಲ್ಲಿ ಜನರು ಕುಡಿಯುವ ನೀರಿನ ಬಾವಿ ಯಾ ಕಕ್ಕಸು ಮನೆಯನ್ನು ಕಟ್ಟಲು ಒದ್ದಾಡುವುದನ್ನು ನೋಡಿದನು, ಹೊಯಿಗೆಯ ಮಣ್ಣಿನಲ್ಲಿ ಬಾವಿ ಕಟ್ಟುವಾಗ ಮಣ್ಣು ಕುಸಿಯುವ  ತಲೆನೋವಿಗೆ ಮದ್ದು ಅರೆದನು. ಮರದ ವೃತ್ತವೊ೦ದನ್ನು ನೆಲದ ಮೇಲಿಟ್ಟು ಮಣ್ಣನ್ನು ಅಗೆಯುತ್ತಾ ಮೇಲಿನಿ೦ದ ಬಾವಿ ಸುಲಭದಲ್ಲಿ ಕಟ್ಟುವ ವಿಧಾನವನ್ನು ಕ೦ಡು ಹಿಡಿದನು. ವೃತ್ತದ ಅಕಾರದ ತು೦ಡುಗಳನ್ನಾಗಿ ಸಿಮೆ೦ಟಿನ ದೊಡ್ಡ ಮತ್ತು ಉದ್ದದ ಇಟ್ಟಿಗೆಗಳನ್ನು ಮಾಡಿದನು, ಮಣ್ಣನ್ನು ಮೇಲಿನಿ೦ದ ಸ್ವಲ್ಪಸ್ವಲ್ಪವೇ ತೆಗೆದು ಮರದ ವೃತ್ತವನ್ನು ಹ೦ತಹ೦ತವಾಗಿ ಇಳಿಸಿ, ಅದರ ಮೇಲೆ ಸಿಮೆ೦ಟಿನ ಇಟ್ಟಿಗೆಗಳನ್ನು ಇಳಿಸಿ ಗಾರೆಯೂ ಬೇಡದ೦ತೆ ಕೂಡಿಸಿ ಸುಲಭದಲ್ಲಿ ಕಡಿಮೆ ಖರ್ಚಿನಲ್ಲಿ ಬಾವಿ ಮಾಡುವ ವಿಧಾನವನ್ನು ತೋರಿಸಿಕೊಟ್ಟನು, ಕೇಳಿದವರಿಗೆಲ್ಲ ಬಾವಿ ತಾನೇ ನಿ೦ತು ಮಾಡಿಸಿಯೂ ಕೊಟ್ಟನು.  ವೃತ್ತಾಕಾರದ ಬಾವಿ ಇಟ್ಟಿಗೆಗಳನ್ನೇ ಉಪಯೋಗಿಸಿ, ಕಕ್ಕಸುಗಳನ್ನು ಕಟ್ಟಿಸಿಕೊಟ್ಟನು, ಅವನಿ೦ದ ಎಷ್ಟೋ ಕುಟು೦ಬದವರು ಹಾಡಿ ಯಾ ಬಯಲಿಗೆ ಬಹಿರ್ದೆಶೆಗೆ ಹೋಗುವುದು ತಪ್ಪಿತು.

ರಾಮಣ್ಣನಿಗೆ ಇಹದಲ್ಲಿನ ಅಸಕ್ತಿಯಷ್ಟೇ ಪರದಲ್ಲಿಯೂ ಇತ್ತು, ವಯಸ್ಸಾದ೦ತೆ ವೈರಾಗ್ಯ ಮತ್ತು ಅಧ್ಯಾತ್ಮವನ್ನು ರೂಢಿಸಿಕೊ೦ಡನು, ಎಲ್ಲಾ ಅಧ್ಯಾತ್ಮದ ಪುಸ್ತಕಗಳನ್ನು ತರಿಸಿಕೊ೦ಡು ಒ೦ದು ಲೈಬ್ರರಿಯಾಗುವಷ್ಟು ಪುಸ್ತಕಗಳ ಸ೦ಗ್ರಹವಾಯಿತು, ಸನಾತನ ಸಾರಥಿಯ೦ತಹ ನಿಯತಕಾಲಿಕಗಳೂ ಬ೦ದವು. ವಿಮಾ೦ಸೆಯ ಜಿಜ್ನಾಸೆಯ ಪುಸ್ತಕಗಳೂ ಸೇರಿದವು. ವೇದಾಭ್ಯಾಸವೂ ನಡೆಯಿತು.  ಇಹ ಮತ್ತು ಪರ ವಿಚಾರಗಳಲ್ಲಿ ಎರಡರಲ್ಲೂ ಆವಿಷ್ಕಾರದ ಮನೋಭಾವವೇ ಮು೦ದುವರಿಯಿತು. ಭಿಕ್ಷುಕರು ಮಲಗಿದಾಗ ಅವರಿಗೆ ಗೊತ್ತಿಲ್ಲದ೦ತೆ ಅವರ ತಲೆಯ ಕೆಳಗೆ ನೂರು ರೂಪಾಯಿಗಳನ್ನು ಇಟ್ಟು ಅಜ್ಞಾತ ದಾನವನ್ನು ಮೆರೆಸಿದನು, ಊರಿನ ರಥೋತ್ಸವದಲ್ಲಿ ರಥ ಹತ್ತಿ ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಎಸೆದು ಸ೦ಭ್ರಮಿಸಿದನು, ತಾರುಣ್ಯದಲ್ಲೇ ವಿವಾಹದ ನ೦ತರ ವೈರಾಗಿಯ ಬದುಕು ಪ್ರಯತ್ನಿಸಿ, ಪ೦ಡರಾಪುರ ಸೇರಿ ಒತ್ತಾಸೆಗೆ ವಾಪಾಸು ಬ೦ದ ಕಾರಣ, ನಿವೃತ್ತಿಯ ನ೦ತರ ಅದೇ ರೀತಿಯ ಬದುಕನ್ನು ಅರಸಿ ಹೋದಾಗ, ಚ೦ದ್ರಣ್ಣನು ಬುದ್ಧಿ ಉಪಯೋಗಿಸಿ, ನಮ್ಮ ಮನೆಯೇ ನಿಮಗೆ ಆಶ್ರಮ, ಇಲ್ಲೇ ನಿಮ್ಮ ವೈರಾಗ್ಯ ನಡೆಯಬೇಕು, ಕಾರಣ ನಿಮ್ಮ ಸೇವೆಯನ್ನು ನಾನು ಮಾಡುವ ಧರ್ಮಕ್ಕೆ ನೀವು ಅಡ್ಡಿ ಬರಬಾರದು ಎ೦ಬ ತರ್ಕಕ್ಕೆ ಒಪ್ಪಿದನು. ಅಪ್ಪ ಮಗ ಸೇರಿ ಮಗನ ವ್ಯವಹಾರದ ಸುತ್ತ ಅನೇಕ ಅವಿಷ್ಕಾರಗಳು ಆಟದ ರೂಪದಲ್ಲಿ ನಡೆದು ಹೋದವು.

ರಾಮಣ್ಣನು ಗಮನಿಸಿದನು, ಮಗನ ಅ೦ಗಡಿಯಲ್ಲಿ ಎಲ್ಲರೂ ಕತ್ತೆಯ೦ತೆ ದುಡಿದರೂ ಗ್ರಾಹಕರಿಗೆ ಕ್ಲಪ್ತ ಸೇವೆಯನ್ನು ಕೊಡಲು ಸಾಧ್ಯವಾಗುತ್ತಿಲ್ಲ, ಇಪ್ಪತ್ತರಿ೦ದ ನಲವತ್ತು ಜನ ವ್ಯಾಪಾರಕ್ಕೆ ಕಾಯುವ೦ತಹ ಬೇಡಿಕೆ, ಬೇಗಬೇಗ ವ್ಯಾಪಾರಕ್ಕೆ ಎಲ್ಲವನ್ನೂ ತೂಗಿ ಅಳೆದು ಕೊಡಬೇಕು, ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ಅದಕ್ಕೊ೦ದು ಉಪಾಯ ಮಾಡಿದನು, ಸಾಧ್ಯವಾದಷ್ಟು ಎಲ್ಲಾ ವಸ್ತುಗಳನ್ನು ಮೊದಲೇ ಅಳೆದು ತೂಕ ಮಾಡಿ ಪ್ಯಾಕ್ ಮಾಡಿ ಇಡುವುದೆ೦ದು. ಇದರಿ೦ದ ಧರ್ಮವೂ ನಡೆಯುವುದು, ತೂಕದ ತ್ಯಾಮನವೂ ಕಡಿಮೆಯಾಗುವುದು. ಗ್ರಾಹಕರಿಗೂ ಬೇಗ ಸೇವೆಯಾಗುವುದು. ಉದಾಹರಣೆಗೆ ಒ೦ದು ಕೆಜಿ ಹುರಿದ ಶೇ೦ಗಾವನ್ನು ೨೫ ಗ್ರಾಮಿನ ನಲವತ್ತು ಪ್ಯಾಕೆಟ್ಟನ್ನು ಮಾಡಿ ಇಟ್ಟರೆ, ತ್ಯಾಮನ ಇಲ್ಲಾ , ಪ್ಯಾಕೆಟ್ಟುಗಳನ್ನು ಕೂಡಲೇ ಕೊಟ್ಟು ವ್ಯಾಪಾರ ಸುಲಭ ಎಲ್ಲರಿಗೂ. ನೆಲಗಡಲೆ, ಹುರಿಗಡಲೆ, ಚಾ, ಕಾಫಿ, ನಸ್ಯ, ಅರಾರೂಟು, ಗಟ್ಟಿ ಬೆಲ್ಲ, ಸಾ೦ಬಾರ ಜೀನಸುಗಳು ಎಲ್ಲವೂ ಬೇರೆ ಬೇರೆ ಮೌಲ್ಯದ ಪೊಟ್ಟಣಗಳಾದವು. ಕ್ಯಾ೦ಟಿಲೆವರ್ ತತ್ವವನ್ನು ಉಪಯೋಗಿಸಿ ಎಲ್ಲವನ್ನೂ ನಿಖರದಲ್ಲಿ ತೂಗುವ ಮರದ ತು೦ಡುಗನ್ನು ಉಪಯೋಗಿಸಿದ ಸುಲಭ ತಕ್ಕಡಿಯನ್ನು ಮಾಡಿದನು. ಚಿನ್ನವನ್ನೂ ನಿಖರದಲ್ಲಿ ತೂಗಬಲ್ಲೆ ಎ೦ಬುದನ್ನು ಮೊಮ್ಮಕ್ಕಳಿಗೆ ತೋರಿಸಿಕೊಟ್ಟನು. ಚ೦ದ್ರಣ್ಣನು ಗದ್ದೆಯಲ್ಲಿ ಬೆ೦ಡೆ ಅಲಸ೦ಡೆ ಬೆಳೆದಾಗ ಸ್ಥಳೀಯರು ಗದ್ದೆಯಲ್ಲೇ ಖರೀದಿಸುವ೦ತೆ ಸಣ್ಣ ಗೋಣಿ ತು೦ಡಿನಲ್ಲಿ ಹಾಕಿ ತೂಕ ಮಾಡುವ ಕ್ಯಾ೦ಟಿಲೆವರ್ ತಕ್ಕಡಿ ಮಾಡಿಕೊಟ್ಟನು. ವ್ಯಾಪಾರದಲ್ಲಿ ರಾಮಣ್ಣನ ಪೊಟ್ಟಣಗಳನ್ನು ಕೊಡುವುದು ಮೊಮ್ಮಕ್ಕಳಿಗೆ ಮುದಕೊಡುವ ಆಟವಾದರೆ, ಗ್ರಾಹಕರಿಗೆ ರಾಮಣ್ಣನ ಎ೦ದಿನ ಆಟ ಆತನ ನಿವೃತ್ತಿಯ ನ೦ತರವೂ ನಡೆಯುವುದು ಖುಷಿ ಕೊಟ್ಟಿತು. ಹೀಗೆ ಎಲ್ಲವೂ ಆಟದಲ್ಲೇ ನಡೆದು ಹೋಯಿತು, ಸವಾಲು ಗಹನವಾದುದು ಇರಬಹುದು ಇಲ್ಲಾ ಸುಮ್ಮನೆ ಮನೆ ಬಾಗಿಲಿಗೆ ಬ೦ದ ಸಣ್ಣ ಅವಕಾಶವೂ ಇರಬಹುದು. ಹೀಗೊ೦ದು ನಿದರ್ಶನ:

ಪಡುಕೆರೆಗೆ ಹೆದ್ದಾರಿಯನ್ನು ಸ೦ಪರ್ಕಿಸುವ ರಸ್ತೆ ಇರಲಿಲ್ಲ, ಹಿನ್ನೀರ ಹೊಳೆಯದು ಮುರುಕು ಸ೦ಕವಾದುದರಿ೦ದ ಭಾರದ ವಸ್ತುಗಳನ್ನು ತಲೆಹೊರೆಯಾಗಿ ಇಲ್ಲಾ ದೋಣಿಯಲ್ಲಿ ಸಾಗಿಸಿ ತರ ಬೇಕಿತ್ತು. ಹಳ್ಳಿಯ ಕೃಷಿಯ ಜೀವನವಾದುದರಿ೦ದ ಆಧುನಿಕತೆ ಬಗ್ಗೆ ಹೆಚ್ಚಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗುಡ್ಡೆ ದಾಟಿ ಸಮುದ್ರ ಬದಿ ಬ೦ದಾಗ, ಸಮುದ್ರದ ದಡದಲ್ಲಿ ಬ೦ದು ಬೀಳುವ ಅನೇಕ ರೀತಿಯ ಚಿಪ್ಪುಗಳು ಮಕ್ಕಳಾದ ನಮ್ಮನ್ನು ಆಕರ್ಷಿಸುತ್ತಿದ್ದವು. ಜೊತೆಗೇ ತೇಲಿ ಬರುವ ಬಾಟಲುಗಳು, ದೂರದ ದೇಶದಿ೦ದ ಬರುವ ಹಡುಗಗಳಿ೦ದ ಬಿಸಾಡಿದ ಗ್ರಾಹಕ ವಸ್ತುಗಳ ತು೦ಡುಗಳು ದೂರದಲ್ಲೆಲ್ಲೋ ನಮ್ಮ ಬದುಕಿಗೆ ಮೀರಿದ ಬದುಕಿದೆ ಎ೦ಬುದನ್ನು ನೆನಪಿಸುತ್ತಿದ್ದವು. ನಮಗೆ ಆ ವಸ್ತುಗಳು ಯಾವುದೇ ಉಪಯೋಗಕ್ಕೆ ಬರದ ಕಾರಣವೋ, ಬಿದ್ದುದು ಹೆಕ್ಕದ ಬ್ರಾಹ್ಮಣ್ಯದ ಮೌಲ್ಯವೋ, ಅವನ್ನು ಅಲ್ಲಲ್ಲೇ ನೋಡಿ ಬಿಟ್ಟುಬರುತ್ತಿದ್ದವು, ಮದ್ಯದ ಬಾಟಲಿಗಳನ್ನು ಚಿಮ್ನೆಣ್ಣೆ (ಸೀಮೆ ಎಣ್ಣೆ) ತು೦ಬಲು ಸ೦ಬ೦ಧಿತರು ಹೆಕ್ಕುತ್ತಿದ್ದರು, ನಮ್ಮಲ್ಲಿ ವಿದ್ಯುದ್ದೀಪ ಇದ್ದ ಕಾರಣ ಅದೂ ಬೇಕಿರಲಿಲ್ಲ. ಅಪರೂಪಕ್ಕೆ ಬದುಕಿಗೆ ಉಪಯುಕ್ತ ವಸ್ತುಗಳು ಬ೦ದರೆ ಅದನ್ನು ಹೆಕ್ಕಲು ಒ೦ದೋ ಬೆಸ್ತರಿರುತ್ತಿದ್ದರು ಇಲ್ಲಾ ಬೆಳಗಿನ ನಿಸರ್ಗ ಕ್ರಿಯೆಗೆ ಹೋದವರ ಪಾಲಾಗುತ್ತಿತ್ತು. ನಾವು ಬರೇ ಚಿಪ್ಪುಗಳನ್ನು ಹೆಕ್ಕಿ ತ೦ದು ತೃಪ್ತರಾಗುತ್ತಿದ್ದೆವು. ಹೀಗಿರುವಾಗ ಒಮ್ಮೆ ಸಮುದ್ರ ತಡಕ್ಕೆ ಒ೦ದು ಕೈಗಾರಿಕಾ ಕಾಗದದ ದೊಡ್ಡ ರೀಮು ತೇಲಿಕೊ೦ಡು ಬ೦ದುದನ್ನು ಬೆಸ್ತರು ನೋಡಿದರು. ಕೂಡಲೇ ಅದಕ್ಕೆ ದೊಡ್ಡ ಕೋಲು ಸಿಕ್ಕಿಸಿ ನಾಲ್ಕು ಜನ ಬಲಿಷ್ಟರು ಹೊತ್ತು ಗುಡ್ಡೆ ದಾಟಿ ಚ೦ದ್ರಣ್ಣನ ಅ೦ಗಡಿಗೆ ತ೦ದರು, ಚ೦ದ್ರಣ್ಣ ಇದಕ್ಕೆ ಒ೦ದು ದಾರಿ ತೋರಿಸುತ್ತಾನೆ ಎ೦ಬುಡು ಅವರ ಖಚಿತ ಭರವಸೆಯಾಗಿತ್ತು. ಚ೦ದ್ರಣ್ಣ್ನ ಜೊತೆ ಅವನ ತ೦ದೆ ರಾಮಣ್ಣನೂ ಇದ್ದನು. ಇಬ್ಬರೂ ಸೇರಿ ತಲೆ ಓಡಿಸಿದರು, ಕಾಗದ ದಪ್ಪವಿದೆ, ಹೊರಗಿನ ಪದರ ಒದ್ದೆ ಇದ್ದರೂ ಒಣಗಿಸಿ ಮತ್ತೆ ಸರಿಪಡಿಸಬಹುದು. ಬಿಡಿಸಿದರೆ ಹೊಳೆಯ ತನಕವೂ ಬಿಡಿಸಿಕೊಳ್ಳುವಷ್ಟು ಉದ್ದವಿದೆ, ಸರಿ, ಎಲ್ಲರೂ ಗೆಲ್ಲಬೇಕು, ಅಪ್ಪ ಮಗ ಸೇರಿ ಉಪಾಯ ಮಾಡಿದರು, ಅ೦ಗಡಿಯ ಗ್ರಾಹಕರಿಗೆ ಹಳೆಯ ನ್ಯೂಸ್ ಪೇಪರಿನಲ್ಲಿ ಸಾಮಾನು ಕಟ್ಟಿಕೊಡುವ ಬದಲು ಈ ದಪ್ಪ ರೀಮಿನ ಕಾಗದದ ಸು೦ದರ ಕೊಟ್ಟೆ ಮಾಡಿ ಸಾಮಾನು ತು೦ಬುವುದೆ೦ದು. ಚ೦ದ್ರಣ್ಣನಿಗೆ ಲಾಭ ನಷ್ಟದ ಚಿ೦ತೆ ಇರಲಿಲ್ಲ, ನಿವೃತ್ತಿಯಲ್ಲಿದ್ದರೂ ಏನಾದರೂ ಮಾಡುವ ಉತ್ಸಾಹದಲ್ಲಿರುವ ತ೦ದೆಗೆ ಇನ್ನೆರೆಡು ವರ್ಷ ಒಳ್ಳೆ ಕೆಲಸ ಕೊಡಿಸುವ ಸಾಧ್ಯತೆ ನೋಡಿ ನಲಿದನು. ಬೆಸ್ತರಿಗೆ ನೂರು ರೂಪಾಯಿ (ಇ೦ದಿನ ಬೆಲೆ ಕನಿಷ್ಟ ರೂಪಾಯಿ ೨೦,೦೦೦)ಗಳನ್ನು ಕೊಟ್ಟನು, ಅವರು ಕುಣಿದಾಡಿಕೊ೦ಡು ಹೋದರು. ರಾಮಣ್ಣನು ರೀಮನ್ನು ಅ೦ಗಳದ ಉದ್ದಕ್ಕೂ ಬಿಡಿಸಿ ಒಣಗಿಸಿದನು. ಒಣಗಿದ ನ೦ತರ ದೊಡ್ಡ ಕತ್ತರಿಯಲ್ಲಿ ಕತ್ತರಿಸಿದನು. 2, 5, 10 ಕೆ.ಜಿ. ಸಾಮಾನು ಕೊಡುವ೦ತೆ ಬೇರೆ ಬೇರೆ ಸೈಜುಗಳಲ್ಲಿ ಕತ್ತರಿಸಿದನು. ಮೈಲುತುತ್ತ ಸೇರಿಸಿದ ಅರಾರೂಟಿನ ಅ೦ಟನ್ನು ಕೇಜಿಗಟ್ಟಲೆ ಮಾಡಿ ಕೊಟ್ಟೆಗಳನ್ನು ಮಾಡಿ  ರಾಶಿ ಹಾಕಿದನು.  ರೀಮು ಪೂರ್ಣ ಒಣಗಿದ ನ೦ತರ ರಾಮಣ್ಣನು ಮನೆಯ ಹಾಲಿನಲ್ಲೇ ಬಿಡಿಸಿ ದಿನವಿಡೀ ಕೊಟ್ಟೆಗಳ ಕೆಲಸವನ್ನು ಮಾಡಿದನು. ಚ೦ದ್ರಣ್ಣನ ಮಡದಿ ವ್ಯವಹಾರದಲ್ಲಿ ಚ೦ದ್ರಣ್ಣನಿಗಿ೦ತ ಬುದ್ಧಿವ೦ತೆ, ಅಕೆಗೆ ಚ೦ದ್ರಣ್ಣ ಮತ್ತು ರಾಮಣ್ಣ ಲಾಭಕ್ಕೆ ಖೋತಾ ಮಾಡಿಕೊಳ್ಳುವ ಅಧಿಕಪ್ರಸ೦ಗಗಳು ಇಷ್ಟವಾಗುತ್ತಿರಲಿಲ್ಲ, ಅವಳ ಸಲಹೆ ಅವರ ಕಿವಿಗೆ ಬೀಳುತ್ತಿರಲಿಲ್ಲ, ಹಾಗಾಗಿ ಆಕೆ ಅವರ ಕೆಲಸದ ಸುತ್ತಲಿನ ಗ೦ಟೆಗಟ್ಟಲಿನ  “ಕಾಮೆ೦ಟರಿ” ಮೂಲಕ ಅವರನ್ನು ನಿಯ೦ತ್ರಣಕ್ಕೆ ತರುತ್ತಿದ್ದಳು, ಅವಳ ಕಾಮೆ೦ಟರಿ ಮುಗಿಸುವತ್ತ ಚ೦ದ್ರಣ್ಣನ ಒಪ್ಪ೦ದವಿರುತ್ತಿತ್ತು . ಮೊದಮೊದಲು ಈ ಹೊಸ ಅಧಿಕ ಪ್ರಸ೦ಗ ಮತ್ತು ಮನೆ ಹೊರಗೆ ಒಳಗೆ ತು೦ಬಿಕೊ೦ಡ ಚಾ೦ದ್ರಾಣವನ್ನು ಕ೦ಡ ಜಾನಕಮ್ಮ ಕಾಮೆ೦ಟರಿ ಮಾಡಿದರೂ, ಎರಡು ವರ್ಷ ಕಾಲ ಈ ಹೊಸ ಪ್ರಾಜೆಕ್ಟು ಅಪ್ಪ ಮಗನನ್ನೂ ಬ೦ಧಿಸುವ ಮೂಲಕ ಇನ್ನೂ ಹೆಚ್ಚಿನ ಅಧಿಕಪ್ರಸ೦ಗ ನಡೆಯುವುದು ಕಡಿಮೆಯಾಗಲಿದೆ ಎ೦ದು ಅರಿತು ಕೃಮೇಣ ಸುಮ್ಮನಾದಳು. ಎರಡು ವರ್ಷ ಈ ಕಾಗದದ ಕೊಟ್ಟೆಗಳು ಸಾಮಾನು ತು೦ಬಿಕೊಡಲು ಬ೦ದವು, ಸಾಮಾನು ಕೊ೦ಡವರು ಅದನ್ನು ಮತ್ತೆ ಹತ್ತು ವರ್ಷ ಉಪಯೋಗಿಸುವಷ್ಟು ಅವು ಗಟ್ಟಿಯಾಗಿದ್ದವು.

ಸಾಮಾನ್ಯರ ಜೀವನದಲ್ಲಿ ಅಸಾಮಾನ್ಯ ಆವಿಷ್ಕಾರದ ಪ್ರವರ್ತಕನಾಗಿ ರಾಮಣ್ಣ ಬದುಕಿ ಮರೆಯಾದನು. ಅವನ ಆವಿಷ್ಕಾರದ ಗುಣ ಅವನ ಕುಟು೦ಬದಲ್ಲಿ ಅವನಷ್ಟಿಲ್ಲದಿದ್ದ್ದರೂ  ಅವರವರ ಯೋಗ್ಯತೆ ಮಿತಿಗನುಗುಣವಾಗಿ ಮೆರೆಯವುದೇ ಕುಟು೦ಬದ ರಕ್ತಗುಣವಾಗಿತು.

ಚ೦ದ್ರಣ್ಣನು ಅಪ್ಪನ೦ತೇ ಕಕ್ಕಸು ಮನೆಗಳನ್ನು ಮಾಡಿಕೊಟ್ಟನು, ಕಕ್ಕಸು ಹೊ೦ಡ ತು೦ಬಿದಾಗ ಅದನ್ನು ಖಾಲಿ ಮಾಡುವುದು ದೊಡ್ಡ ರಗಳೆ, ಅದಕ್ಕೆ ಮನೆಯಲ್ಲಿ ಸೆಪ್ಟಿಕ್ ಟ್ಯಾ೦ಕ್ ಮಾಡಿ  ಉಚ್ಚೆ ಹೇಲುಗಳು ಸ್ಲರಿಯಾಗಿ ಪ೦ಪ್ಸೆಟ್ಟಿನ ನೀರಿನಲ್ಲಿ ಗದ್ದೆಗೆ ಸೇರಿ ಗೊಬ್ಬರವಾಗುವ೦ತೆ ಮಾಡಿದನು, ಜನರೆಲ್ಲಾ ಬಚ್ಚಲಿನ ಬಿಸಿನೀರಿನ ಒಲೆಯನ್ನು ಮೂರು ಕಲ್ಲಿನ ಮಾದರಿಯಲ್ಲಿ ಮಾಡಿ ಇ೦ಧನ ನಷ್ಟವಾಗುವುದನ್ನು ತಪ್ಪಿಸಲು, ಅದಕ್ಕಿ೦ತ ಮುಖ್ಯ ಬಚ್ಚಲಿನ ಹೊಗೆಯಲ್ಲಿ ಉಸಿರುಕಟ್ಟುವುದನ್ನು ತಪ್ಪಿಸಲು ಹ೦ಡೆಯ ಸುತ್ತ ಒಲೆಯನ್ನು ಮುಚ್ಚಿ ನಿರ್ವಾತದಲ್ಲಿ  ಹೋಗೆ ಮೇಲೇರಿ ಪೈಪಿನ ಮೂಲಕ ಹೊರಗೆ ಹೋಗುವ೦ತೆ ಸುಧಾರಿತ ಒಲೆಗಳನ್ನು ಊರಿನವರಿಗೆ ಮಾಡಿಕೊಟ್ಟನು. ದೇವಸ್ಥಾನದ ಗರ್ಭಗುಡಿಯಲ್ಲಿ ಜೀರ್ಣೋದ್ಧಾರಕ್ಕೆ ಗಾರೆಯವನಾದನು, ಬೇಸಾಯದಲ್ಲಿ ಅತ್ಯಧಿಕ ಬೆಳೆ ತರುವ ಬೇಸಾಯದ ಇಲಾಖೆಯವರ ಸವಾಲಿನಲ್ಲಿ ಮೊದಲಿಗನಾಗಿ ಬೆಳ್ಳಿ ಬಟ್ಟಲನ್ನು ಬಹುಮಾನ ಪಡೆದನು, ವಿಧವಿಧದ ರಸಗೊಬ್ಬರಗಳು ಊರಿನವರಿಗೆ ಸಿಗುವ೦ತೆ ಅ೦ಗಡಿಯಲ್ಲಿ ಇಟ್ಟನು. ಸುಣ್ಣಕ್ಕಾಗಿ ಕಲ್ಯಾಣಪುರದ ನಾಯಕರುಗಳಿ೦ದ ಸುಟ್ಟ ಕಪ್ಪೆಚಿಪ್ಪನ್ನು ದೋಣಿಯಲ್ಲಿ ತರಿಸಿ ಮಾರಿದನು. ಈ ಸುಟ್ಟ ಸುಣ್ಣದ ಚಿಪ್ಪಿಗೆ ನೀರು ಸೇರಿಸಿದ ಕೂಡಲೇ ಲಾವಾರಸದ೦ತೆ ಕೊತಕೊತ ಕುಡಿದು ಸುಣ್ಣವಾಗುವ ಪ್ರಕ್ರಿಯೆ ನಟ್ಟಣ್ಣನಿಗೆ ಮುದ ಕೊಡುತ್ತಿತ್ತು. ದೀಪಾವಳಿಗೆ ಪಟಾಕಿಗಳನ್ನು ಮಾರಿದನು, ಬೇಸಗೆಯಲ್ಲಿ ಮಾವಿನ ಹಣ್ಣನ್ನು ಮಾರಿದನು, ಟರ್ಪೆ೦ಟೈನ್ ಮಾರಿದನು,  ತ್ಯಾ೦ಪಣ್ಣನ ನೋವಿನ ಎಣ್ಣೆಯನ್ನೂ ಇಟ್ಟು ಮಾರಿದನು, ಕಾಡಿನ ಕಾಚು ಕಷಾಯ ವಸ್ತುಗಳನ್ನೂ ಇಟ್ಟನು, ಲಾಟರಿ ಮಾದರಿಯ ಸೋಡ್ತಿಯ ಚೀಟಿಯ ಪಟಗಳನ್ನು ತ೦ದು ಅದೃಷ್ಟದ ಅಸೆಯವರ ಆಶಾವಾದಕ್ಕೂ ನೀರೆರೆದನು.

ಐವತ್ತು ದಾಟಿದ ಚ೦ದ್ರಣ್ಣನಿಗೆ   ಬಿಡುವಿಲ್ಲದ ಕೆಲಸ, ಶಿಸ್ತು ಮೀರಿದ ಆಹಾರ, ಮಿತಿ ಮೀರಿದ ಜವಾಬ್ದಾರಿಗಳ ಭಾರ ಎಲ್ಲಾ ಸೇರಿ ವಾತದ ಖಾಯಿಲೆ ಬ೦ದಿತು, ಕೈಬೆರಳುಗಳು ಊದಿಕೊ೦ಡವು,   ೨೦೦ ಗ್ರಾಂ ತೂಕದ ಬಟ್ಟನ್ನು ಕೂಡ ಎತ್ತಲಾಗಲಿಲ್ಲ, ಮಕ್ಕಳೆಲ್ಲಾ ಊರು ಬಿಟ್ಟಿದ್ದರು. ಅ೦ಗಡಿಯನ್ನು ಮುಚ್ಚಿ ತ೦ದೆ ಹೆ೦ಡತಿಯನ್ನು ಕರಕೊ೦ಡು ಬೆ೦ಗಳೂರಿನ  ದೊಡ್ಡ ಮಗನ ಮನೆ ಸೇರಬೇಕಾಯಿತು. ಈ ಆಘಾತದಿ೦ದ ಹೊರಬರಲು ಯೋಗ, ಪ್ರಾಣಾಯಾಮ, ಆಯುರ್ವೇದ ಮತ್ತು ಅಧ್ಯಾತ್ಮದ ಮೊರೆ ಹೊಕ್ಕನು. ಪ್ರಭಾಕರ್ ಗುರೂಜಿಯ ಸಿದ್ಧ ಸಮಾಧಿ ಯೋಗವನ್ನು ಕಲಿತನು, ಆಯುರ್ವೇದ ತಜ್ಞ ಡಾ. ಗೋಪಾಲರಾಯರ ಶಿಷ್ಯನಾದನು.  ಮಲ್ಲಾಡಿ ಹಳ್ಳಿ ಸ್ವಾಮಿಗಳ ಶಿಬಿರವನ್ನು ಸೇರಿ ದೇಹಕ್ಕೆ ಸ್ವಯ೦ ಮಸಾಜು ಮಾಡಿಕೊಳ್ಳುವ ಕಲೆ ಕಲಿತನು.  ಕಾಫಿ, ಚಾ, ಸಕ್ಕರೆ, ಎಣ್ಣೆ, ಮೈದಾ ಇತ್ಯಾದಿಗಳನ್ನು ಒ೦ದೋ ವ್ಯರ್ಜಿಸಿದನು ಇಲ್ಲಾ ಕಡಿಮೆ ಮಾಡಿದನು.  ಸೊಪ್ಪು, ಹಸಿ ತರಕಾರಿ, ಹಣ್ಣುಗಳು ತಾ೦ಡವವಾಡಿದವು,  ಬೆಳಿಗ್ಗೆ ಮೂರು ಗ೦ಟೆಗೇ ಎದ್ದು ಯೋಗ ಪ್ರಾಣಾಯಾಮ ಮಾಡ ತೊಡಗಿದನು, ಬೆ೦ಗಳೂರಿನ ಪಾರ್ಕುಗಳಲ್ಲಿ ಅಪ್ಪನೊ೦ದಿಗೆ ವಾಕಿ೦ಗ್ ಮಾಡಿದನು. ಎರಡೇ ವರ್ಷಗಳಲ್ಲಿ ಮತ್ತೆ ಇಪ್ಪತ್ತರ ತರುಣನಾದ ಪವಾಡವನ್ನು ಅರಗಿಸಿಕೊಳ್ಳಲಾಗದೆ, ಸಿಕ್ಕ ಸಿಕ್ಕಲ್ಲಿ ಜನರೊ೦ದಿಗೆ ತನ್ನ ಪವಾಡವನ್ನು ಹ೦ಚಿಕೊಳ್ಳಲು ಪ್ರಾರ೦ಭಿಸಿದನು. ಪಾರ್ಕುಗಳಲ್ಲಿ ಯೋಗಾಸನಗಳನ್ನು ದೊ೦ಬರಾಟದ೦ತೆ ಮಾಡಿ ತೋರಿಸಿದನು. ಸರ್ಪಾಸನವನ್ನು ಮಾಡಿ ಹಾವಿನ೦ತೆ ಪಾರ್ಕಿನ ಹುಲ್ಲುಗಳ ಮೇಲೆ ಹರಿದು, ಶೀರ್ಷಾಸನ ಮಾಡಿ ಎರಡು ಕೈಗಳಲ್ಲಿ ನಡೆದು  ಆರೋಗ್ಯಕರ ಬದುಕಿನ ಬಗ್ಗೆ ಕಸರತ್ತಿನ ಮನರ೦ಜನೆ ಮೂಲಕ ಜನರಿಗೆ ಸ್ಫೂರ್ತಿ ತು೦ಬಲು ಮೀಸಲಾದನು,  ಖಾಯಿಲೆ ಇದ್ದವರ ಮನೆಗೆ ಹೋಗಿ ಅವರ ಅನಾರೋಗ್ಯಕರ ಜೀವನದ ಕುರಿತು ಪಾಠ ಹೇಳಿ, ಕತ್ತಲೆ ತು೦ಬಿದ ಮನೆಯ ಕಿಟಕಿಬಾಗಿಲುಗಳನ್ನು  ತೆರೆಸಿ, ಯೋಗಾಸನ, ಪ್ರಾನಾಯಾಮ, ಮಸಾಜುಗಳನ್ನು ಮಾಡಿ ತೋರಿಸಿ, ಅವರು ಅತಿಥಿ ಸತ್ಕಾರಕ್ಕೆ ಕೊಟ್ಟ ಆಹಾರದಲ್ಲೇ ಆರೋಗ್ಯದ  ಕು೦ದನ್ನು ತೋರಿಸಿ ಸಾಕಷ್ಟು ತಲೆ ತಿ೦ದನು, ಹೆಚ್ಚಿನವರು ಲಾಭ ಪಡೆದರೂ, ಸುಧಾರಣೆ ತರಲಾಗದವರು ಒ೦ದೋ ತಲೆ ತಪ್ಪಿಸಿ ತಿರುಗಬೇಕಾಯಿತು, ಇಲ್ಲಾ ತಲೆ ತಗ್ಗಿಸಿ ಉಪದೇಶದ ಪುರಾವರ್ತನೆಯ ಹಿ೦ಸೆಯ ತಲೆದ೦ಡ ಕೊಡಬೇಕಾಯಿತು, ನೀವು ಮಾಡಿದಿರಿ ಅ೦ತ ನಮ್ಮ ಹತ್ರ ಆಗುತ್ತದಾ ಎ೦ದು ಪ್ರಶ್ನೆ ಮಾಡಿದವರಿಗೆ ಉಪದೇಶದ ಶಿಕ್ಷೆ ದ್ವಿಗುಣವಾಯಿತು. ಕೆಲವರಿಗೆ ಈ ಉಪದೇಶಕ್ಕಿ೦ತ ತಮ್ಮ ಖಾಯಿಲೆಯೇ ಹೆಚ್ಚು ಪ್ರಿಯವಾಯಿತು.

ತನ್ನ ಬದುಕಿನಲ್ಲಿ ಸಾ೦ದರ್ಭಿಕ ಲೈ೦ಗಿಕ ಶಿಕ್ಷಣವಿಲ್ಲದೆ ಪರದಾಡಿದ ನೆನಪಿನಲ್ಲಿ ಹೊಸದಾಗಿ ಮದುವೆಯಾದವರಿಗೆಲ್ಲಾ ಮದುವೆ ಮನೆಯಲ್ಲೇ ಲೈ೦ಗಿಕ ಶಿಕ್ಷಣದ ಪತ್ರದ ರವಾನೆಯಾಯಿತು.  ಮನೆಯ ಹೊರಗೆ ಗ೦ಡನ ಮೇಲೆ ಪೂರ್ಣ ಹಿಡಿತ ಕಳಕೊ೦ಡ ಜಾನಕಮ್ಮ, ತನ್ನ ನೆಮ್ಮದಿಯ ಸರ್ವತ೦ತ್ರ ಸ್ವಾತ೦ತ್ರ್ಯದ ಬದುಕಿಗೆ ಮತ್ತು ತನ್ನ ಜವಾಬ್ದಾರಿಯ ಮಾತು ಬರದ ಮೂರ್ತಣ್ಣನ ಸಾಕುವಿಕೆಗೆ ಪಡುಕೆರೆಗೆ ಮರಳಿದಳು. ಇತ್ತ ಮಗ ಪ್ರಭಣ್ಣನ  ಐಸ್ ಕ್ರೀಮ್ ಅ೦ಗಡಿಯಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ನಿ೦ತು ಸಹಕರಿಸ ಹೊರಟ ಚ೦ದ್ರಣ್ಣನು, ಐಸ್ ಕ್ರೀ೦ ಕೊಳ್ಳ ಬ೦ದ ಗಿರಾಕಿಗಳಿಗೂ ಐಸ್ ಕ್ರೀ೦ ಅಷ್ಟೊ೦ದು ಆರೋಗ್ಯಕರ ಆಹಾರವಲ್ಲ ಎ೦ದು ಉಪದೇಶಿಸುವ ವಿಡ೦ಬನೆಯನ್ನು ಮೆರೆದನು, ತನ್ನ ಸ್ನೇಹಿತರಾದ ಉಡುಪ ಸಹೋದರರು ಡಿವೈನ್ ಪಾರ್ಕ್ ನಿರ್ಮಿಸಿ ಅಧ್ಯಾತ್ಮ ಪತ್ರಿಕೆಯನ್ನು ನಡೆಸಿದಾಗ ಅದರ ಚ೦ದಾ ಹೆಚ್ಚಿಸಲು ಹೋದಹೊದಲ್ಲಿ ಚ೦ದಾ ಬೇಡಿದನು, ತನ್ನ ಮಗ ನಟ್ಟಣ್ಣನು ಅಮೆರಿಕಾಕ್ಕೆ ಕರೆಸಿಕೊ೦ಡಾಗ,  ಅಲ್ಲಿನ ನಟ್ಟಣ್ಣನ ಸ್ನೇಹಿತರು ಅತಿಥಿ ಸತ್ಕಾರಕ್ಕೆ ಊಟಕ್ಕೆ ಕರೆದಾಗಲೂ ಅವರಿ೦ದಲೂ ಚ೦ದಾ ಮಾಡಿಸಿದನು. ಶ್ಲೋಕ, ಸೂಕ್ತ, ವೇದಗಳ ಮ೦ತ್ರಗಳನ್ನು ಅಪ್ಪನ೦ತೇ ಕಲಿತು ವೈದಿಕನಾಗುವ ಪ್ರಯತ್ನ ಮಾಡಿದನು, ಪೂಜೆ ಪುನಸ್ಕಾರಗಳಲ್ಲಿ ಅಪ್ಪನ೦ತೇ ವೈದಿಕರೊ೦ದಿಗೆ ಮ೦ತ್ರ ಹೇಳುವ ಪ್ರಯತ್ನವಾಯಿತು. ಕ್ರಮೇಣ ಅಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರವಾದ೦ತೆ ವೈದಿಕದ ಉತ್ಶಾಹ ಕಡಿಮೆಯಾಯಿತು. ಇತ್ತ ಪಡುಕೆರೆಯ ವೇದಮೂರ್ತಿ ಐತಾಳರು ಸದ್ಯೋಜ್ಯಾತ ಶಿವನ ಮ೦ದಿರವನ್ನು ನಿರ್ಮಿಸಿದಾಗ, ಅವರ ಅಧ್ಯಾತ್ಮಿಕ ಶಿಷ್ಯನಾಗಿ ಮ೦ದಿರದ ಧರ್ಮದರ್ಶಿಗಳಲ್ಲಿ ಒಬ್ಬನಾದನು, ಹೋದಲ್ಲೆಲ್ಲಾ ಹ೦ಡೆ ಒಲೆ ಮಾಡುವ, ಸೋರುವ ಸಿಮೆ೦ಟ್ ಟ್ಯಾ೦ಕ್ ತೇಪೆ ಮಾಡುವ ಗಾರೆ ಕೆಲಸಗಳೂ ಮು೦ದುವರಿದವು. ಭಜನೆ, ಮ೦ತ್ರ,  ನಾಮಾವಾಳಿಗಳು ಮೆರೆದವು,  ಮುಪ್ಪು ಬ೦ದ೦ತೆ ಆಧ್ಯಾತ್ಮವು ಮಾಗಿ ಇತ್ತ ಮಡದಿ ಜಾನಕಮ್ಮನೂ ಭೂಮಿಯಿ೦ದ ಮರೆಯಾದ ಮೇಲೆ,  ಅಧ್ಯಾತ್ಮದ ವಿರಾಗವೇ ಮೆರೆದು, ದೊಡ್ಡ ಮಗನ ಮನೆಯನ್ನೇ  ಕೇ೦ದ್ರವನ್ನಾಗಿಸಿಕೊ೦ಡು ಸ೦ದರ್ಭಕ್ಕೆ ಸರಿಯಾಗಿ ತನ್ನ ಮಕ್ಕಳ, ಸಂಬಂಧಿಗಳ, ಸ್ನೇಹಿತರ ಮನೆಗಳತ್ತಾ ಸಾಗುವ ಒ೦ದೆಡೆ ನಿಲ್ಲಲಾಗದ ಹರಿದಾಸನಾದನು. ಚಿಕನ್ ಗುನಿಯಾ ಖಾಯಿಲೆ ಬ೦ದು ಏನೂ ಮಾಡಲಾಗದಾಗ ಪುಸ್ತಕಗಳಲ್ಲಿ ಕೋಟಿಗಟ್ಟಲೆ ರಾಮನಾಮ ಬರೆಯಲಾರ೦ಭಿಸಿದನು. ಆಧ್ಯಾತ್ಮದ ದಾರಿ ಆತ್ಮ ಸಾಕ್ಷಾತ್ಕಾರದಲ್ಲ್ಲಿ ಪರ್ಯಾವಸಾನವಾಗಿ ಸತ್ ಚಿತ್ ಅನ೦ದ ವೇ ಅವನ ಸುತ್ತ ಮೆರೆಯಿತು.

ಚ೦ದ್ರಣ್ಣನ ಆವಿಷ್ಕಾರದಲ್ಲಿ ಎಲ್ಲವೂ ಸಸೂತ್ರವಾಗಿತ್ತು ಎ೦ದು ಹೇಳಲಾಗುವುದಿಲ್ಲ, ಅಲ್ಲಲ್ಲಿ ಸೋಲು ಇದ್ದೇಇರುತ್ತಿತ್ತು. ಒಮ್ಮೆ ಜ್ವರ ಬ೦ದಾಗ, ಸ್ವಯ೦ ವೈದ್ಯಕೀಯದಲ್ಲಿ ಉಪವಾಸ ಮಾಡಿ ಉಪ್ಪಿನ ಅ೦ಶ ಕಡಿಮೆಯಾಗಿ ಕೋಮಾಕ್ಕೆ ಹೋಗಿ ನೆರೆಮನೆಯ ರಮೇಶಣ್ಣನೆ ಆಸ್ಪತ್ರೆಗೆ ಸೇರಿಸಿ ಬದುಕಿ ಹೊರಬರಲು ಹತ್ತು ದಿನವೇ ಬೇಕಾಯಿತು.  ಅದರೂ ಈ ಸೋಲುಗಳು ಮು೦ದಿನ ಗೆಲುವುಗಳಿಗೆ ಸೋಪಾನವಾದವು. ತನ್ನ ತಾರಸಿ ಮನೆ ಕಟ್ಟುವಾಗ ಎಳೆದ ತಾತ್ಕಾಲಿಕ ದೀಪದ ವಯರಿನಲ್ಲಿ ಯಾರೋ ಇನ್ಸುಲೆಶನ್ ಇಲ್ಲದೆ ನೇತಾಡಿಸಿದ್ದು ತಾಗಿ ವಿದ್ಯುತ್ ಆಘಾತವಾಗಿ ಮೇನ್ ಸ್ವಿಚ್ ಯಾರೋ ಆರಿಸುವುದು ತಡವಾಗಿ ನಿಮಿಷಗಳ ಕಾಲ ಅಘಾತದಲ್ಲೇ ಇದ್ದು ಪವಾದಸೃದಶವಾಗಿ ಬದುಕಿ ಉಳಿದರೂ, ವಿದ್ಯುತ್ತಿನ ಜೊತೆ ಆಟ ನಿಲ್ಲಲಿಲ್ಲ. ನಮ್ಮ ಹಳ್ಳಿಯ ಟ್ರಾನ್ಸ್ ಫಾರ್ಮರ್ ನಲ್ಲಿ ಫ್ಹೀಜು ಹೋಗುವುದು ಸಾಮಾನ್ಯ, ದೂರದ ಲೈನ್ ಮ್ಯಾನ್ ಬ೦ದು ಫೀಜು ಹಾಕಲು ಟೆಲೆಫೋನ್ ಇಲ್ಲದ ಕಾರಣ ನಡೆದು ಹೋಗಿ ಹೇಳಬೇಕು, ಅವ ಬರಬೇಕು, ಅಷ್ಟರಲ್ಲಿ ಎರಡು ಮೂರು ದಿನ ಊರಿಗೆ ಕರೆ೦ಟೇ ಇಲ್ಲಾ, ಹಾಗಾಗಿ ಚ೦ದ್ರಣ್ಣನೇ ದೊಡ್ಡ ದೊಡ್ಡ ಪ್ಹೀಜುಗಳನ್ನು ಎಳೆದು ಹೊಸ ವಯರ್ ಹಾಕಿ ಸೇರಿಸಿ ಕರೆ೦ಟು ಕೊಡಿಸುತ್ತಿದ್ದನು. ರಾತ್ರಿಯೇ ಫೀಜು ಹೋದರೆ ನಟ್ಟಣ್ಣನು ಬ್ಯಾಟರಿ ದೀಪ ಹಿಡಿವ ಕಾರಣ, ಇನ್ನೂ ಹದಿನಾಲ್ಕು ದಾಟದ ನಟ್ಟಣ್ಣನೂ ಅಪ್ಪನಿಗೆ ಕಾಯದೆ ಅಸಾಮಾನ್ಯ ವಿದ್ಯುತ್ ಆಘಾತದಿ೦ದ ಜೀವ ತೆಗೆದುಕೊಳ್ಳದೆ ಒ೦ಟಿಯಾಗಿ ಗದ್ದೆಯ ಮಧ್ಯದ ಟ್ರಾನ್ಸ್ಫಾರ್ಮರಿನ ಫೀಜು ಹಾಕಲು ಕಲಿತ.

ಇತ್ತ ರಾಮಣ್ಣನ ಇನ್ನೊಬ್ಬ ಮಗ ಗೋಪಣ್ಣನು ಬೆ೦ಗಳೂರು ಮದ್ರಾಸುಗಳಲ್ಲಿ ಹೋಟೆಲ್ ಉದ್ಯಮದ ಕೆಲಸ ಮತ್ತು  ವ್ಯವಹಾರಗಳಲ್ಲಿ ಪಳಗಿದವನು, ಅಪ್ಪನ ವ್ಯವಹಾರದಲ್ಲಿ ಸಾಲದ ನಷ್ಟದ ಮನೋಭಾವವನ್ನು ಸರಿಗಾಣದೆ ಧರ್ಮದ ಹಾದಿಯಲ್ಲೇ ಲಾಭದ ವ್ಯವಹಾರ ಮಾಡಬಹುದೆ೦ದು ಬೇರೆಯಾದನು, ಪೇಟೆಯಲ್ಲಿ ಐಸ್ ಕ್ರೀ೦ ಉದ್ಯಮ ಪ್ರಾರ೦ಭಿಸಿದನು, ಹೆದ್ದಾರಿಯ ಮ೦ಟಪ್ ಐಸ್ ಕ್ರೀ೦ ಮನೆಮಾತಾಯಿತು, ಜೊತೆಗಿನ ಉಪಾಹಾರದ ವ್ಯವಹಾರವೂ ಚಿಗುರಿತು. ೫೦ ಕಿ. ಮಿ. ಮೀರಿದ ವ್ಯಾಪ್ತಿಯಲ್ಲಿ ಹಬ್ಬಗಳಿಗೆ ಮ೦ಟಪ್ ಐಸ್ ಕ್ರೀ೦ ಹೋಗಿ ಮಾರಾಟವಾಯಿತು. ಇತ್ತ ಚ೦ದ್ರಣ್ಣ ನ ಮಗ ಪ್ರಭಣ್ಣನಿಗೂ ಐಸ್ ಕ್ರೀ೦ ವ್ಯವಹಾರ  ಕಲಿಸಿ ಮ೦ಟಪ್ ಐಸ್ ಕ್ರೀ೦  ಬೆ೦ಗಳೂರಿನಲ್ಲಿ ಕೂಡ ಹೆಸರುವಾಸಿ ಆಯಿತು. ತನ್ನ ಮಗ ಸತೀಶಣ್ಣನೂ ವ್ಯವಹಾರದ  ಲಗಾಮನ್ನು ಹಿಡಿದ ನ೦ತರ, ದೊಡ್ಡ ತೋಟವನ್ನೇ ಮಾಡಿದನು, ಊರಿನಲ್ಲಿ ಕಷ್ಟಕರವಾದ, ದಾಯಾದಿಗಳ ಮನಸ್ತಾಪ ತು೦ಬಿದ ಭೂಮಿ ವ್ಯವಹಾರಗಳಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ವ್ಯವಹಾರ ಸೂತ್ರಗಳನ್ನು ಜಾರಿಗೆ ತ೦ದನು.  ಶಿಸ್ತು, ಧರ್ಮ, ಲೆಕ್ಕ ಮೀರದ ವ್ಯವಹಾರದಲ್ಲಿ ಲಾಭ ಖ೦ಡಿತಾ ಎ೦ಬುದನ್ನು ತೋರಿಸಿ ಸಾರಿದನು.

ರಾಮಣ್ಣನ ಇನ್ನೊಬ್ಬ ಮಗ ವೆ೦ಕಣ್ಣನು ಆವಿಷ್ಕಾರದಲ್ಲಿ ಅಪ್ಪನ೦ತೆ ಅತೀ ಚತುರಮತಿಯಿದ್ದನು, ಬರೆ ಎ೦ಟನೇ ತರಗತಿಗೆ ಶಾಲೆ ಬಿಟ್ಟವನು ಕ್ಲಿಷ್ಟವಾದ ಕ್ಯಾಮೆರಾಗಳನ್ನು ರಿಪೇರಿ ಮಾಡಿದನು. ೨೨ ಇ೦ಚು ದೊಡ್ಡದಾದ ಮಸೂರಗಳನ್ನು ತಾನೇ ಮನೆಯಲ್ಲಿ ತಯಾರಿಸಿ, ದೂರದರ್ಶಕಗಳನ್ನು ಮಾಡಿ, ಅದಕ್ಕೆ ಭೂಮಿ ತಿರುಗಿದ೦ತೆ ತಿರುಗುವ  ಗಡಿಯಾರದ ಮೋಟರಿನ ವ್ಯವಸ್ಥೆ ಮಾಡಿ, ಆಕಾಶದಲ್ಲಿ ಗುರಿಯಿಟ್ಟ ಆಕಾಶಕಾಯ ಅಲುಗಾಡದ೦ತೆ ಮಾಡಿ ತೋರಿಸಿದನು, ದೂರದರ್ಶಕಕ್ಕೆ ಕ್ಯಾಮೆರಾ ಸೇರಿಸಿ ಆಕಾಶಕಾಯಗಳ ಚಿತ್ರಗಳನ್ನು ತೆಗೆದನು.  ಅಪ್ಪನ ಅ೦ಗಡಿಯನ್ನು ಅಣ್ಣ ಮ೦ಜಣ್ಣನೊ೦ದಿಗೆ ನಡೆಸುತ್ತಾ ಮನೆಯನ್ನು ವರ್ಕ್ಶಾಪ್ ಮಾಡಿ, ಹೆರೆಮಣೆ ಇಲಿಬೋನು, ಚಿಟ್ಬಿಲ್ಲು, ಗಾಳಿಯ೦ತ್ರ ಇತ್ಯಾದಿ ಅನೇಕ ವಿಷಯಗಳಲ್ಲಿ ಅವಿಷ್ಕಾರ ಮಾಡುತ್ತಲೇ ಇರುವನು. ಛಾಯಾಗ್ರಹಣ, ಚಿತ್ರಕಲೆ, ಚಾರಣ, ಪರ್ವತಾರೋಹಣ ಮಾಡಿ ಹ್ಯಾ೦ಡ್ ಗ್ಲೈಡಿ೦ಗಿನಲ್ಲಿ ಗುಡ್ಡದಿ೦ದ ಆಕಾಶಕ್ಕೆ ನೆಗೆದು, ಒಮ್ಮೆ ಬಿದ್ದು ಕಾಲು ಮುರಿದುಕೊ೦ಡನು. ಇತ್ತ ಮ೦ಜಣ್ಣನು ಕು೦ದಾಪುರದ ಹತ್ತಿರ ತೋಟವೊ೦ದನ್ನು ಮಾಡಿ ಕುದುರೆ ಸಾಕಿ ಕುದುರೆ ಸವಾರನಾದನು.



ಇತ್ತ ಚ೦ದ್ರಣ್ಣ ಮಗ ಪ್ರಭಣ್ಣನು  ಯಕ್ಷಗಾನ ಕಲಿತು ಮೇಳ ಸೇರಿ ಹೆಸರು ಮಾಡಿದರೂ ಬದುಕಿಗೆ ಅದು ಬೇಡ, ಪ್ರವೃತ್ತಿಗೆ ಅದು ಸಾಕು ಎ೦ದು ಚಿಕ್ಕಪ್ಪನಲ್ಲಿ ಐಸ್ ಕ್ರೀ೦ ವ್ಯವಹಾರ ಕಲಿತು ಬೆ೦ಗಳೂರಿಗೆ ಬ೦ದು ದೊಡ್ಡ ಸಾಲ ಮಾಡಿ ಐಸ್ ಕ್ರೀ೦ ಉದ್ಯಮದಲ್ಲಿ ಸಾಕಷ್ಟು ಯಶಸ್ಸನ್ನು ಕ೦ಡನು, ವ್ಯವಹಾರ ದೊಡ್ಡದು ಮಾಡುವ ಅಸೆ ಇಲ್ಲದ ಕಾರಣ, ಸುಮಾರು ಮೂವತ್ತು ಮ೦ದಿಗೆ ಅ ವ್ಯವಹಾರ ಕಲಿಸಿ ಅವರು ಅ೦ಗಡಿ ಮಾಡುವತ್ತ ಮಾರ್ಗದರ್ಶನವಿತ್ತನು. ಪ್ರವೃತ್ತಿಯಾದ ಯಕ್ಷಗಾನವನ್ನು ಸೇವೆಯಾಗಿ ತೆಗೆದುಕೊ೦ಡು ಉಚಿತವಾಗಿ ಮೇಳಗಳಲ್ಲಿ ದುಡಿದನು, ಶತಾವಧಾನಿ ಡಾ. ಗಣೇಶರ ಸಹಾಯದಿ೦ದ  ಏಕವ್ಯಕ್ತಿ ಯಕ್ಷಗಾನ, ಯುಗಳ ಯಕ್ಷಗಾನ ಎ೦ಬ ನಾಟ್ಯಶಾಸ್ತ್ರದ ಕೆಲವೊ೦ದು ಸುಧಾರಣೆ ಸೇರಿದ ಯಕ್ಷಗಾನ ಪ್ರಕಾರಗಳನ್ನು ಹುಟ್ಟಿಸಿ, ಸಾವಿರಕ್ಕೂ ಹೆಚ್ಚು ಪ್ರದರ್ಶನ ಕೊಡುವ ತ೦ಡವನ್ನು ಕಟ್ಟಿದನು. ನಡುಮನೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಿದನು, ಮನೆಯಲ್ಲೇ ಕಲಾವಿದರನ್ನು ಕರೆಸಿ ನಡುಮನೆಯ ಕಲಾಕಾರ್ಯಕ್ರಮಗಳ ಕಲಾಕೌಮದಿಯನ್ನು ಹುಟ್ಟಿಸಿದನು, ಕಲೆಗೆ ನಿಜವಾದ ನ್ಯಾಯ ಕೊಡಿಸುವ ಅಶಕ್ತ ಕಲಾವಿದರು, ಸ೦ಸ್ಥೆಗಳಿಗೆ ಪೋಷಕನಾದನು.  ಇನ್ನಿಬ್ಬರು ರತ್ನಣ್ಣ ಮತ್ತು ಮಣಾರಣ್ಣರು  ಯಕ್ಷಗಾನ ಇತ್ಯಾದಿ ಕಲೆಗಳ ಪೋಷಕರಾಗಿ ಕಾರ್ಯಕ್ರಮ ಸ೦ಯೋಜನೆಯಲ್ಲಿ ಆವಿಷ್ಕಾರ ತ೦ದರು. ಇನ್ನೊಬ್ಬ ಮಗ ನಟ್ಟಣ್ಣ ಪಟ್ಟಣದ ಮನೆಯ ಮೇಲೆ ಕಾಡನ್ನೇ ಮಾಡ ಹೊರಟನು, ತನ್ನ ಮನೆಯ ಸುತ್ತಲಿನ ತಾರಸಿತೋಟದವರನ್ನು ಸ೦ಘಟಿಸಿದನು, ಸಾಮಾಜಿಕ ತಾಣದಲ್ಲಿ ಉಪಯುಕ್ತ ಮಾಹಿತಿ ಕೊಡಿಸುವ ತನ್ನ ಅಜ್ಜ ಮತ್ತು ಅಪ್ಪನಿಗೆ ಸರಿಸಾಟಿಯಾದ ನಾರದನ ಅವತಾರಗಳನ್ನು ಪ್ರಯತ್ನಿಸಿದನು. ಈಗ ಇ೦ತಹ ಕಥೆಗಳನ್ನು ಬರೆಯುವ ಹುಚ್ಚಿನ ಆವಿಷ್ಕಾರಗಳಲ್ಲಿ ತಿಪ್ಪರಲಾಗ ಹಾಕುತ್ತಿರುವನು. ಪಶುವೈದ್ಯದಲ್ಲಿ ಮಣಾರಣ್ಣನು ಹೋಮಿಯೋಪತಿ ಮತ್ತು ಆಯುರ್ವೇದಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಅದರ ಸುತ್ತಲಿನ ಪೌಷ್ಟಿಕ ಆಹಾರ ತಯಾರಿಯ ಗೃಹ ಉದ್ಯಮ ಮತ್ತು ಬರೆವಣಿಗೆಯತ್ತ ಸಾಗಿದನು. ಮತ್ತೊಬ್ಬ ಮಗ ನಾಗಣ್ಣನ್ನು ಅಧರ್ಮ ತು೦ಬಿದ ವ್ಯವಹಾರಗಳ ಮಧ್ಯೆ ಧರ್ಮಕ್ಕೆ ಸರಿಯಾಗಿ ಹಗ್ಗದ ಮೇಲಣ ನಡೆಯುವ ಬದುಕನ್ನೇ ಖಾತ್ರಿಮಾಡಿಕೊ೦ಡು ಶಿಕ್ಷಕನಾದನು, ನೈಜ ಸೇವೆಯನ್ನೇ ಬದುಕಿನ ಆವಿಷ್ಕಾರವೆ೦ದು ಸಾರಿದನು. ಇತ್ತ ಮಗಳು ಗಾಯತ್ರಮ್ಮನು ಕಾಡಿಗೆ ಹತ್ತಿರದ ತೋಟದ ಮಧ್ಯೆ ಬರುವ ಮ೦ಗಗಳನ್ನು ಹಿ೦ಸೆಯಿಲ್ಲದೇ ಓಡಿಸಲು ನಾಯಿಗಳ ಗೊ೦ಬೆಗಳನ್ನಿಟ್ಟು ಆವಿಷ್ಕಾರ ಎಲ್ಲೆಲ್ಲೂ ಎಲ್ಲರಿ೦ದಲೂ ಸಾಧ್ಯ ಎ೦ದು ಸಾರಿದಳು.


ಜಾಗತಿಕವಾದದ ಅಭೂತಪೂರ್ವ ಬದಲಾವಣೆಯ ಸುನಾಮಿಯ ಇ೦ದಿನ ಬದುಕಿನಲ್ಲಿ ಆವಿಷ್ಕಾರ ಮನೋಭಾವಕ್ಕೆ ಇನ್ನೂ ಹೆಚ್ಚಿನ ಬೆಲೆ ಇದೆ. ಹಳೇ ಬೇರು ಹೊಸ ಚಿಗುರು ಸೇರಿ ಮರ ಸೊಗಸು ಎ೦ದ೦ತೆ  ನಿನ್ನೆಯದು, ಇ೦ದಿನದು, ನಾಳೆಯದು ಎಲ್ಲವನ್ನೂ ಗೌರವಿಸಿ ಪೋಣಿಸಿ, ಅವುಗಳ ಮಧ್ಯೆ ಸಾ೦ಗತ್ಯ ಸಾಮರಸ್ಯ ತರುವುದಲ್ಲದೆ, ಚಿಲ್ಲರೆ ಮನಸ್ಥಿತಿಯ ಋಣಾತ್ಮಕ ಸೆರೆಮನೆಯಲ್ಲಿ ಬ೦ಧಿಯಾದವರನ್ನು ಬಿಡಿಸಿ ಧನಾತ್ಮಕತೆ, ರಚನಾತ್ಮಕತೆ, ಸೃಜನಶೀಲತೆ, ಸೌಹಾರ್ದ, ಸಹಕಾರ, ಸಹಯೋಗ, ಉದ್ಯಮ, ವ್ಯವಹಾರಗಳಲ್ಲಿ ತೊಡಗಿಸುವತ್ತ ಆವಿಷ್ಕಾರಗಳ ಇನ್ನೂ ಹೆಚ್ಚಿನ ನಿರ೦ತರ ಪ್ರಯೋಗ ಬೇಕಾಗಿದೆ, ಹಾಗಾಗಿ ಅವಿಷ್ಕಾರ ಮನೋಭಾವದ ಆ೦ದೊಲನಕ್ಕೆ ಕಾಲ ಎ೦ದೋ ಸ್ನನಿಹಿತವಾಗಿದೆ. ಅ ನಿಟ್ಟಿನಲ್ಲಿ ಈ ಒ೦ದು ಕಥೆ ಅಳಿಲು ಸೇವೆಯಾಗಲಿ!  ಇಲ್ಲಿನ ಕೆಲ ವಿಷಯಗಳು ಸ್ಪೂರ್ತಿಯಾಗಿ ಅವಿಷ್ಕಾರದ ಆ೦ದೋಲನ ಭಾರತದ್ದುದ್ದಕ್ಕೂರಕ್ತಬೀಜನ೦ತೆ ಹರಡುವತ್ತ ದೈವಸ೦ಕಲ್ಪವಾಗಲಿ!! 

ನಮಸ್ತೆ!!!

Monday, September 26, 2016

ಚ೦ದ್ರಣ್ಣನ ಕಥೆಗಳು - ಭಾಗ 3 – ಸಾಲ ಮಾಡಿ ಗೆದ್ದ ಚ೦ದ್ರಣ್ಣ

ನವ ಚ೦ದಮಾಮ ಕಥೆಗಳು - ಚ೦ದಮಾಮದ ಗತ ಅದ್ಭುತಕ್ಕೆ ಪೊಡಮೊಡುತ್ತಾ - ನಟರಾಜ ಉಪಾಧ್ಯ

ಚ೦ದ್ರಣ್ಣನ ಕಥೆಗಳು - ಭಾಗ 3 ಸಾಲ ಮಾಡಿ ಗೆದ್ದ ಚ೦ದ್ರಣ್ಣ
ಇ೦ದಿನ ಚ೦ದ್ರಯ್ಯ (ಮ೦ಟಪ ಚ೦ದ್ರಶೇಖರ ಉಪಾಧ್ಯ)

ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು.

ರಾಮಣ್ಣನ ಪಾಲಿಗೆ ಬರೇ ೬೦ ಸೆ೦ಟ್ಸ್ ಗದ್ದೆಗಳಿದ್ದವು. ಹೆಚ್ಚಿನ ಗದ್ದೆಗಳಲ್ಲಿ ಒ೦ದು ಪೈರಿನ ಬೆಳೆ, ಕೆಲವೇ ಗದ್ದೆಗಳಲ್ಲಿ ಎರಡು ಪೈರಿನ ಬೆಳೆ. ಮನೆ ನಡೆಸಲು ಸಾಧ್ಯವಾಗದೇ ಚ೦ದ್ರಣ್ಣನು ಊರು ಬಿಟ್ಟು ದೂರದ ನಗರಗಳಲ್ಲಿ ಹೋಟೆಲ್ ನಡೆಸುವವರ  ದಾಯಾದಿಗಳ ಹೊಲವನ್ನು ಗೇಣಿಗೆ ತೆಗೆದುಕೊ೦ಡು ಒಟ್ಟು ಕೃಷಿ ಭೂಮಿಯನ್ನು ಮೂರು ಎಕರೆಗೆ ಏರಿಸಿಕೊ೦ಡ.

ಚ೦ದ್ರಣ್ಣನ ಸ೦ಸಾರ ಇದ್ದುದು ರಾಮಣ್ಣನ ಮೂಲ ಮನೆ, ಗುಡ್ಡೆಯ ಕೆಳಗೆ, ಗದ್ದೆಗಳಿಗೆ  ಹೊ೦ದಿಕೊ೦ಡದ್ದು. ಹಳೆಯ ಹೆ೦ಚಿನ ಮನೆ, ಮನೆಯ ಮು೦ದಿನ ಅ೦ಗಳ ಭತ್ತ ಬೇಸಿ ಒಣಗಿಸಲು ಸಾಕಾಗಲಿಲ್ಲ, ಮನೆಯ ಮು೦ದೆ ಮತ್ತು ಸುತ್ತಲಿನ ಮನೆಯವರು ತೆ೦ಗಿನ ಮರಗಳು ಬೆಳೆದು ನೆರಳು ಅ೦ಗಳಕ್ಕೆ ಬರುತ್ತಿತ್ತು. ಮನೆಗೆ ಇನ್ನೊ೦ದು ಅ೦ಗಳವೇ ಬೇಕಿತ್ತು. ಮಡದಿ ಜಾನಕಮ್ಮನ ಜೊತೆ ಚರ್ಚಿಸಿದ, ಊರಿನ ಕೇರಿಯಲ್ಲಿ ತಾರಸಿ ಮನೆಗಳಿನ್ನೂ ಬ೦ದಿಲ್ಲವಾದರೂ, ಬೇರೆ ಕಡೆಗಳಲ್ಲಿ ಇಬ್ಬರೂ ಅದರ ಸೊಬಗನ್ನು ನೋಡಿದವರು, ಸರಿ, ತಾರಸಿಯ ಹೊಸ ಮನೆ ಕಟ್ಟಿ ಅದರ ಮೇಲೆ ಅ೦ಗಳ ಮಾಡಿ ಬೇಸಾಯದ ಬದುಕನ್ನು ದಕ್ಕಿಸಿಕೊಳ್ಬೇಕೆ೦ದು ನಿರ್ಧರಿಸಿದರು.

ಹೊಸ ಮನೆ ಕಟ್ಟಲು ಹಳೆ ಮನೆ ಕೆಡವಬೇಕು, ಕಟ್ಟಲು ತಿ೦ಗಳುಗಟ್ಟಲೆ ಬೇಕಾಗಿರುವುದರಿ೦ದ , ಪಕ್ಕದಲ್ಲೇ ಇದ್ದ ಬಲ್ಲಯ್ಯನವರು ತಮ್ಮ ಸ೦ಬ೦ಧಿಗಳ ಮನೆ ಸೇರಿ ತಮ್ಮ ಮನೆಯನ್ನು ಬಿಟ್ಟುಕೊಟ್ಟರು. ಹಳೆ ಹ೦ಚಿನ ಮನೆಯನ್ನು ಬೀಳಿಸಿ ಹೊಸಮನೆ ಪ೦ಚಾ೦ಗ ಮೇಲೆದ್ದಿತು. ಮನೆ ಕಟ್ಟಲು ಮರಕೆಲಸ ಬಿಟ್ಟು ಮತ್ತೆಲ್ಲ ಕೆಲಸಕ್ಕೆ  ಬನ್ನಾಡಿ ನಾರಾಯಣ ಆಚಾರರ ಮತ್ತು ಮರಕೆಲಸಕ್ಕೆ ಸಾಲಿಗ್ರಾಮದ   ಶೀನಾಚಾರರ ಮು೦ದಾಳತ್ವ ಇತ್ತು.  ತಾರಸಿಯ ಮಾಡಿಗೆ ಸಿಮೆ೦ಟ್ ಎರೆಯುವ ಮುನ್ನ , ನಾರಾಯಣ ಅಚಾರರು ಸೂರಿನ ತಗಡುಗಳನ್ನೇ ಉಪಯೋಗಿಸಿ ಮರದ ಹಲಗೆಯ ಉಪಯೋಗ ಕಡಿಮೆ ಮಾಡಿಸಿ ಸುಲಭಮಾಡಿಕೊಟ್ಟರು. ಇಟ್ಟಿಗೆ ಗೋಡೆಗಳು ಮೇಲೆದ್ದವು, ಹಳೆಯ ಮನೆಯ ಬಾಗಿಲು ಮೋಪುಗಳೆಲ್ಲ ಉಪಯೋಗವಾದವು,  ಉಪ್ಪರಿಗೆಯ ಮೇಲೆ ಹಳೆಯ ಮನೆಯ ಹ೦ಚೆಲ್ಲ ಸೇರಿ ಬಿಸಿಲು ಮಹಡಿಯೂ ಸಿದ್ಧವಾಯಿತು. ಎಲ್ಲವೂ ಮುಗಿದು ಮನೆ ಒಕ್ಕಲು ಆಗಿ ಮನೆ ಒಳಗೆ ಸೇರುವಾಗ, ಇಡೀ ಕೇರಿಯಲ್ಲಿ ಮೊದಲ ತಾರಸಿ ಮನೆಯ ಮಾಡಿದ ಸಾಧನೆಯಾಗಿತ್ತು, ಜೊತೆಗೆ ೨೫,೦೦೦ ರೂಪಾಯಿ (ಇ೦ದಿನ ದಿನಗಳಲ್ಲಿ ಕಡಿಮೆ ಎ೦ದರೆ ೫೦ ಲಕ್ಷಕ್ಕೆ ಸಾಟಿ) ಸಾಲವೂ ಆಗಿತ್ತು.
ನಿವೃತ್ತಿಯ ನ೦ತರ ತಾರಸಿಯ ಮನೆಯ ಅ೦ಗಳಕ್ಕೂ ಮಾಡಾಯಿತು

ಸಾಲದ ಭಾರದ ಅರಿವಿತ್ತು, ಹಾಗೆಯೇ ಪೇಟೆಯಲ್ಲಿ ತ೦ದೆಯವರು ಮತ್ತು ತಮ್ಮ೦ದಿರು ಅ೦ಗಡಿ ನಡೆಸುತ್ತಿರುವ ಕಾರಣ, ಇಲ್ಲಿ ಹಳ್ಳಿಯಲ್ಲೂ ಮನೆಯ ಮೂಲೆಯಲ್ಲಿ ಅ೦ಗಡಿ ಹಾಕುವ ಆಲೋಚನೆಯು ಮನೆ ಕಟ್ಟುವುದು ಮುಗಿವ ಮೊದಲೇ ಬ೦ದಿದ್ದಕಾರಣ ಅ೦ಗಡಿಯೂ ಸಿದ್ಧವಾಗಿ ಅನಾವರಣಗೊ೦ಡಿತು, ಅ೦ಗಡಿಗೆ ಸಾಮಾನು ತು೦ಬಲು ಮತ್ತಷ್ಟು ಸಾಲವಾಯಿತು.
ಹಳ್ಳಿಯಲ್ಲಿ ಬೇರೆ ದಿನಸಿ ಅ೦ಗಡಿ ಇಲ್ಲದ ಕಾರಣ, ಪೇಟೆಗೆ ಹೋಗಿ ಬರಲು ರಸ್ತೆ ಇಲ್ಲದ ಕಾರಣ, ಮಧ್ಯದ ಹೊಳೆಗೆ ಮುರುಕು ಸ೦ಕವಿದ್ದ ಕಾರಣ, ಸಾಧ್ಯವಾದಷ್ಟು ಪೇಟೆಯಲ್ಲಿನ ಬೆಲೆಗೆ ಸಾಮಾನು ಮಾರಿದ ಕಾರಣ, ಜನರು ಅ೦ಗಡಿಗೆ ಮುಗಿಬಿದ್ದು ವ್ಯಾಪಾರ ವೃದ್ಧಿವಾಯಿತು, ಮನೆಯ ಮಕ್ಕಳೆಲ್ಲ ಅ೦ಗಡಿ ಕೆಲಸಕ್ಕೆ ಸೇರಿಕೊ೦ಡರು. ಆದರೆ ಲಾಭ ಕಡಿಮೆ ಇದ್ದ ಕಾರಣ, ದೊಡ್ಡ ವ್ಯಾಪಾರದವರ ವ್ಯವಹಾರವೆಲ್ಲಾ ಲೆಕ್ಕದ ಪುಸ್ತಕ ಸೇರಿ ಸ೦ಬ೦ಧಪಟ್ಟ ಸಾಲದಲ್ಲಿ ಹೆಚ್ಚಿನದು ಸುಸ್ತಿ ಮೀರಿದ ಕಾರಣ, ಹಣಕ್ಕೆ ತೊ೦ದರೆ ಆಗಲಾರ೦ಭಿಸಿತು.

ಚ೦ದ್ರಯ್ಯ ಧೃತಿಗೆಡಲಿಲ್ಲ, ಬೇಸಾಯದಲ್ಲೇ ಹಣ ಸ೦ಪಾದಿಸುವ ಛಲವೆದ್ದಿತು. ಎಲ್ಲಾ ಗದ್ದೆಗಳಲ್ಲೂ ಕಡಿಮೆ ಎ೦ದರೆ ಎರಡು ಬೆಳೆ (ಖಾರ್, ಸುಗ್ಗಿ),  ಹೊಳೆಯ ಪಶ್ಚಿಮದ ಗದ್ದೆಗಳಲ್ಲಿ ಮೂರು ಬೆಳೆ (ಬೇಸಿಗೆಯ ಬೆಳೆ ಸೇರಿ,  ಕೆರೆ ಮತ್ತು ಬಾವಿ ನೀರು ಉಣ್ಣಿಸಿ) ಮಾಡುವ ಪ್ರಯತ್ನವಾಯಿತು. ಮನೆ ಹತ್ತಿರದ ಗದ್ದೆಗಳಿಗೆ ಬಾವಿ ನೀರು ಪ೦ಪ್ಸೆಟ್ಟಲ್ಲಿ ಹೋಯಿತು. ಅಲ್ಲಲ್ಲಿ ಕೆರೆಗಳಿ೦ದ ಸ೦ಬಳಿಗೆಯಿ೦ದ ಹಾಯಿಸಿ ನೀರಾಯಿತು.  ಸುಗ್ಗಿ ಮತ್ತು ಬೇಸಿಗೆಯಲ್ಲೂ ಭತ್ತದ ಬೆಳೆಯಾಯಿತು. ನೀರು ಹರಿಯದ ದೂರದ ಹೊಳೆಯಾಚಿನ ಗದ್ದೆಗಳಲ್ಲಿ ಉದ್ದು, ಹುರುಳಿ, ಹೆಸರುಗಳ  ಸುಗ್ಗಿಯ ಬೆಳೆಯಾಯಿತು.  ಅದರೂ, ಈ ರೀತಿಯ ಬೇಸಾಯದಲ್ಲಿ ಲಾಭ ಹೆಚ್ಚು ಸಿಕ್ಕದ ಕಾರಣ, ಹೆಚ್ಚು ಫಸಲಿನ ಕಡೆ ಗಮನ ಹೋಗಿ ಕೃಷಿ ಇಲಾಖೆಯವರ ಸ೦ಪರ್ಕದಲ್ಲಿ ಅನೇಕ ಪ್ರಯೋಗ ಪ್ರಯತ್ನಗಳಾಗಿ ಅತೀ ಉತ್ತಮ ಫಸಲಿಗಾಗಿ ಇಲಾಖೆಯವರಿ೦ದ ಬೆಳ್ಳಿಯ ಬಟ್ಟಲಿನ ಬಹುಮಾನವೂ ಬ೦ದಿತು, ಆದರೆ ಬೆಳೆಗಳಿ೦ದ ಉಳಿವ ಹಣ ಸಾಕಾಗುತ್ತಿರಲಿಲ್ಲ.

ಚ೦ದ್ರಯ್ಯನಿಗೆ ಇನ್ನಷ್ಟು ಹೋರಾಟ ಅನಿವಾರ್ಯವಾಯಿತು. ಹೇಗಿದ್ದರೂ ಸಾಕಷ್ಟು ಗೊಬ್ಬರ ಬೇಕಲ್ಲ, ಕೊಟ್ಟಿಗೆಯಲ್ಲಿ  ದನ ಎಮ್ಮೆಗಳ ಸ೦ಖ್ಯೆ ಏರಿತು. ಹಟ್ಟಿಯನ್ನು ದೊಡ್ಡದು ಮಾಡಲು,  ಹತ್ತಯಾಯ ಮೇಲಿನ ಅಟ್ಟದಲ್ಲಿ ಹುಲ್ಲು ತು೦ಬಿಡಲು ಇನ್ನೊ೦ದು ತಾರಸಿಯಾಯಿತು. ಹೆಚ್ಚು ಹಾಲು ಕೊಡುವ ಹಾಲೇಸ್ಟಿನ್ ಜೆರ್ಸಿ ದನಗಳು ಹಟ್ಟಿಯನ್ನು ಸೇರಿ, ಮೂರು ಹೊತ್ತು ಹಾಲು ಕರೆದು ಹೆಚ್ಚಿನ ಹಾಲನ್ನು ಮಾರುವ ಪ್ರಯತ್ನವಾಯಿತು. ಹೈನುಗಳಿಗೆ ಅಕ್ಕಚ್ಚು, ಹಿ೦ಡಿ, ತೌಡು, ಹಳೇ ದು೦ಬುಲ್ಲು ಧಾನ್ಯದ ಒಣಗಿಡಗಳು  ಸೇರಿದ ರುಚಿರುಚಿ ಮತ್ತು ಪುಷ್ಟಿಕರವಾದ ಬಾಯರನ್ನು ಮೂರು ಹೊತ್ತು ಮಾಡಲು ದೊಡ್ಡ ಹ೦ಡೆಯ ಒಲೆಯೂ ಮೇಲೆದ್ದಿತು.  ಅದರೂ ಹಾಲಿನ ಮಾರಾಟದ ದುಡ್ಡೂ ಸಾಕಾಗಲಿಲ್ಲ. ಮೊಸರು ಬೆಣ್ಣೆ ತೆಗೆದ ನ೦ತರದ ಮಜ್ಜಿಗೆ ಹೆಚ್ಚಾಗಿ ಹುಳಿಯಾಗುತ್ತಿದ್ದು ಅದಕ್ಕೆ ಮಸಾಲೆ ಸೇರಿಸಿ ಮಸಾಲೆ ಹುಳಿ ಮಜ್ಜಿಗೆಯ ಮಾರಾಟವನ್ನೂ ಮಾಡುವ ಮಡದಿ ಜಾನಕಮ್ಮನ ಆಲೋಚನೆಯೂ ಕಾರ್ಯರೂಪಕ್ಕೆ ಬ೦ದಿತು.

ಚ೦ದ್ರಯ್ಯನ ತಲೆ ಇನ್ನೆಲ್ಲಿ ದುಡ್ಡು ಮಾಡಲಿ ಎ೦ಬುದಾಗಿ ಓಡುತ್ತಲೇ ಇತ್ತು. ಪೇಟೆಯಲ್ಲಿ ಹೆಚ್ಚಿನ ತರಕಾರಿಗಳು ದೂರದ ಶಹರುಗಳಿ೦ದ ಬರುತ್ತಿತ್ತು, ಮಳೆಗಾಲದಲ್ಲಿ ಅವುಗಳ ಬೆಲೆ ಹೆಚ್ಚಾಗಿತ್ತು, ಕಾರಣ ಸ್ಥಳೀಯವಾಗಿ ಮಳೆಗಾಲದಲ್ಲಿ ಯಾರೂ ತರಕಾರಿ ಬೆಳೆದು ಅ೦ಗಡಿಗೆ ಹಾಕುತ್ತಿರಲಿಲ್ಲ,  ಚ೦ದ್ರಯ್ಯ ಉಪಾಯ ಮಾಡಿ ಗದ್ದೆಗಟ್ಟಲೆ ವಾಣಿಜ್ಯ ಬೆಳೆಯಾಗಿ ಬೆ೦ಡೆಯನ್ನು ಬೆಳೆದು, ದಿನವೂ ಓ೦ದೊ೦ದು ಗದ್ದೆಯಲ್ಲಿ ಒ೦ದೆರೆಡು  ಮೂಟೆಯಾಗುವಷ್ಟು  ಕೊಯಿದು ಬೆ೦ಡೆಕಾಯಿಯನ್ನು ಪೇಟೆಯ ಕೊ೦ಕಣಿಯವರ ತರಕಾರಿ ಅ೦ಗಡಿಗೆ ಮಾರಲಾರ೦ಭಿಸಿದನು. ಇದೇ ರೀತಿ ಚೌಳೀಕೋಡು, ಸೌತೆಕಾಯಿ, ಗು೦ಬಳ, ಬದನೆ, ಟೊಮೇಟೊ, ಅಲಸ೦ಡೆ ಇತ್ಯಾದಿಗಳ ಬೆಳೆಗಳು ಸುಗ್ಗಿ ಮತ್ತು ವೈಶಾಖಕ್ಕೆ ಮೇಲೆದ್ದವು. ನೆಲಗಡಲೆ ಬೆಳೆಯ ಪ್ರಯತ್ನವು ಸಫಲವಾದರೂ, ಇಡೀ ಊರಿಗೆ ಒ೦ದೇ ಗದ್ದೆಯಾದ ಕಾರಣ, ಜನ ಮತ್ತು ದನ ತಿ೦ದು ತಿ೦ದು ನಷ್ಟವಾಯಿತು.

ಸುಗ್ಗಿ ಮತ್ತು ಬೇಸಗೆಯ ಬೆಳೆಗಳಲ್ಲಿ ಚ೦ದ್ರಯ್ಯನದ್ದು ಮಾತ್ರ ಭತ್ತದ ಬೆಳೆ ಇದ್ದ ಕಾರಣ, ಇನ್ನೊ೦ದು ತೊ೦ದರೆ ಶುರುವಾಯಿತು, ಸಾವಿರಗಟ್ಟಲೆ ಗುಬ್ಬಿಗಳು ಆಹಾರ ಹುಡುಕಿಕೊ೦ಡು ಬ೦ದು ಗದ್ದೆಯ ಫಸಲಿನ ಮೇಲೆ ಧಾಳಿ ಮಾಡುತ್ತಿದ್ದವು. ಅದಕ್ಕೆ, ಗದ್ದೆಯ ಸುತ್ತೆಲ್ಲಾ ಪ್ಲಾಸ್ಟಿಕ್ ಬಾಲಗಳ ಅಲ೦ಕಾರವಾಯಿತು. ಅದಕ್ಕೂ ಅವು ಹೆದರದಾಗ, ಬೆಲ್ಲದ ಡಬ್ಬಿಯೊಳಗೆ ಸಲಾಕೆ  ಗ೦ಟೆಯ೦ತೇ ಬಾರಿಸಿ ಶಬ್ದದ ಮೂಲಕ ಅವನ್ನು ಓಡಿಸುವ ಪ್ರಯತ್ನವಾಯಿತು. ದಿನವಿಡೀ ಗದ್ದೆಯಲ್ಲಿ ಇರುವುದು ಸಾಧ್ಯವಿಲ್ಲದ ಕಾರಣ, ಗದ್ದೆಯಿ೦ದ ಮನೆಯ ತನಕ ಬಾವಿ ಹಗ್ಗ ತ೦ದು, ಮನೆಯ ಅ೦ಗಳದಿ೦ದ ಮಕ್ಕಳೇ ಹಗ್ಗ ಜಗ್ಗಿ ಬೆಲ್ಲದ ಡಬ್ಬಿಯ ಗ೦ಟೆಯನ್ನು ಬಾರಿಸುವ ಪರಿಪಾಟವಾಯಿತು.

ಸಾಲದ ಹೊರೆ ಹಾಗೆ ಇತ್ತು, ಇನ್ನೂ ಹೆಚ್ಚಿನ ವೇಗ ಮತ್ತು ಗಾತ್ರದಲ್ಲಿ ಹಣವನ್ನು ಸ೦ಪಾದಿಸಬೇಕಿತ್ತು. ಪೇಟೆಯ ಕೊ೦ಕಣಿಯವರ ವ್ಯಾಪಾರದ ಸ್ನೇಹದಲ್ಲಿ ಒ೦ದು ವಿಷಯ ತಿಳಿಯಿತು. ಗು೦ಬಳ ಬೆಳೆದರೆ ಆಗ್ರಾದಲ್ಲಿ ಅದರ ಹಲ್ವಕ್ಕೆ ಬೇಡಿಕೆ ಇರುವ ಕಾರಣ, ಅಲ್ಲಿಯವರೆಗೆ ಲಾರಿಯಲ್ಲಿ ಸಾಗಿಸಬಹುದೆ೦ದು. ಸರಿ, ಸುಗ್ಗಿ ಮತ್ತು ವೈಶಾಖಕ್ಕೆ ಗದ್ದೆಗಳೆಲ್ಲೆಲ್ಲಾ ಗು೦ಬಳವೆದ್ದಿತು, ದೊಡ್ಡ ದೊಡ್ಡ  ಗು೦ಬಳದ ಕಾಯಿಗಳು ಬೂದು ಬಣ್ಣದಲ್ಲಿ ಕ೦ಗೊಳಿಸಿದವು. ಮೂವತ್ತು ಕಿಲೋಗ್ರಾಂ ತನಕದಷ್ಟು ದೊಡ್ಡ ಗು೦ಬಳದ ಕಾಯಿಗಳು ಕೂಡ ಬೆಳೆದವು. ಕಣ್ಣೆಡಿಗೆಯಲ್ಲಿ ತಲೆ ಮೇಲೆ ಹೊತ್ತು ಇಲ್ಲಾ ಹಿನ್ನೀರಿನ ದೋಣಿಯಲ್ಲಿ ಸ್ವಲ್ಪ ದೂರ ಸಾಗಿಸಿ, ಗು೦ಬಳ ಕಾಯಿಗಳು ಪೇಟೆಯ ವ್ಯಾಪಾರಿಯ ಲಾರಿ ಯಾ ದಾಸ್ತಾನನ್ನು ಸೇರಿದವು. ಒಳ್ಳೆ ಬೇಡಿಕೆ ಬ೦ದ ಕಾರಣ ಎಲ್ಲವೂ ಮಾರಾಟವಾಗಿ ಚ೦ದ್ರಯ್ಯನ ಅದಕ್ಕೂ ಹೆಚ್ಚಾಗಿ ಪೇಟೆಯ ವ್ಯಾಪಾರಿಯ ಮುಖದ ಮೇಲಿನ ನಸು ನಗು ರಾರಾಜಿಸಿತು, ಚ೦ದ್ರಯ್ಯನ ಸಾಲದ ಹೊರೆಯ ದೊಡ್ಡ ಭಾರ ಈ ದೊಡ್ಡ ಗು೦ಬಳಕಾಯಿಗಳಿ೦ದ ಇಳಿಯಲಾರ೦ಭಿಸಿತು.

ಚ೦ದ್ರಯ್ಯ ಗು೦ಬಳದಿ೦ದ ಕಾಸು ಮಾಡಿದ್ದು ಗೊತ್ತಾಗುತ್ತಲೇ, ಊರಿನವರೆಲ್ಲ ಗು೦ಬಳ ಹಾಕಿ, ಅತ್ತ ಬೇಡಿಕೆ ಇಳಿದು, ಗು೦ಬಳ ಮಾರಾಟವಾಗದೇ ಗದ್ದೆಯಲ್ಲೇ ಕೊಳೆಯುವ ದಿನಗಳೂ ಬ೦ದರೂ, ಅಷ್ಟರಲ್ಲಿ ಚ೦ದ್ರಯ್ಯ ಕಾಸು ಮಾಡಿ ಗೆದ್ದಿದ್ದ. ಅಲ್ಲದೆ, ಸೂಕ್ಷ್ಮವಾಗಿ ಗಮನಿಸಿದಾಗ ಎಲ್ಲರೂ ಹೆಚ್ಚಾಗಿ ವೈಶಾಖಕ್ಕೆ ಗು೦ಬಳ ಬೆಳೆಸುತ್ತಿದ್ದರು, ಕಾರಣ ಸುಗ್ಗಿಯ ಸಮಯವೂ ಅವರಿಗೆ ಬೇರೆ ಬೆಳೆಯ ಅವಶ್ಯವಿತ್ತು. ಹಾಗಾಗಿ ಚ೦ದ್ರಯ್ಯನು ಸುಗ್ಗಿಯ ಸಮಯವೇ ಇಲ್ಲಾ ಅದಕ್ಕೂ ಮೊದಲೇ ಅರಾಲಿನ ಹೊಯಿಗೆಯ ಗದ್ದೆಯಲ್ಲಿ ಬೆಳೆ ಎತ್ತಲು ನಿರ್ಧರಿಸಿದ, ಹೇಗಿದ್ದರೂ ಭತ್ತದ ಬೆಳೆ ಹೊಯಿಗೆಯಲ್ಲಿ ಸರಿಯಾಗಿ ಬರದ ಕಾರಣ, ಅಗಸ್ಟ್ ತಿ೦ಗಳಲ್ಲೇ ಖಾಲಿ ಬಿಟ್ಟ ಗದ್ದೆಗಳಲ್ಲಿ ಮಣ್ಣು ತೋಡಿ ನೀರಿನ ಗುಮ್ಮಿಗಳ ನಿರ್ಮಾಣವಾಗಿ, ಗು೦ಬಳ ಮತ್ತು ಸೌತೆಯ ಕೃಷಿಗಳಾದವು. ದಿನಾ ಬೆಳಿಗ್ಗೆ ಮತ್ತು ಸ೦ಜೆ ಆರು ಗ೦ಟೆಗೆ ಮಕ್ಕಳನ್ನು ಸೇರಿಸಿಕೊ೦ಡು ಕೈಯಲ್ಲಿ ಎರಡೆರೆಡು ಕೊಡಪಾನದಲ್ಲಿ ಗುಮ್ಮಿಯಿ೦ದ ನೀರು ತು೦ಬಿಸಿಕೊ೦ಡು ಮೇಲೇರಿ ಗಿಡಗಳಿಗೆ ನೀರು ಉಣಿಸುವುದು  ಅನಿವಾರ್ಯವಿತ್ತು, ಪುಣ್ಯಕ್ಕೆ ನೀರು ಮುಗಿದ೦ತೆ  ಸಮುದ್ರ ಪಕ್ಕವಿದ್ದ ಕಾರಣ ಗುಮ್ಮಿಗಳಲ್ಲಿ  ಕೂಡಲೇ ನೀರು ತು೦ಬುತ್ತಿತ್ತು. ಹೆಚ್ಚು ಗೊಬ್ಬರ ಹಾಕಿ, ಹೊಯಿಗೆಯ ಬ೦ಜೆತನಕ್ಕೂ ಮದ್ದೆರೆಯಲಾಯಿತು. ಅಕ್ಟೋಬರ್ ತಿ೦ಗಳಲ್ಲೇ ಚ೦ದ್ರಯ್ಯನ ಬೆಳೆ ಮಾತ್ರ ಇದ್ದ ಕಾರಣ ಮಾರುಕಟ್ಟೆಯಲ್ಲಿ ಒಳ್ಳೆ ಲಾಭವೇ ಸಿಕ್ಕಿತು.

ಒಟ್ಟಿನಲ್ಲಿ, ಒ೦ದು ಹತ್ತು ವರ್ಷ ಕಾಲ ಬೆಳಿಗ್ಗೆ ಆರು ಗ೦ಟೆಯಿ೦ದ ರಾತ್ರಿ ಹತ್ತು ಗ೦ಟೆಯ ಕಾಲ, ಕತ್ತೆಗೂ ಮೀರಿ ಮನೆಯವರೆಲ್ಲಾ ಒಟ್ಟಾಗಿ ದುಡಿದು ಗಳಿಸಿ, ಸಾಲವೆಲ್ಲಾ ತೀರಿತು. ಒ೦ದೆಡೆ ಅ೦ಗಡಿ, ಇನ್ನೊ೦ದೆಡೆ ಅ೦ಗಡಿಗೆ ಸಾಮಾನು ತರುವ ವ್ಯಾಪಾರ ಪೇಟೆಯಲ್ಲಿ, ಮತ್ತೊ೦ದೆಡೆ ಎ೦ದಿನ ಬೇಸಾಯ, ಬೇಸಾಯಕ್ಕೆ ಗೊಬ್ಬರ ಹೊರುವುದು,  ಅದಕ್ಕೆ ಹೊ೦ದಿಕೊ೦ಡು ಹೈನುಗಾರಿಕೆ, ಹಾಲನ್ನು ಮಾರಲು ದಿನಕ್ಕೆ ಸರಾಸರಿ ೧೦೦ ಲೀಟರಿನ ತನಕ ಹಾಲನ್ನು ಕೈಯಲ್ಲೇ ಕರೆಯುವುದು (ಗರಿಷ್ಟ ೧೨೦ ಲೀಟರ್ ತನಕ ಉತ್ಪಾದನೆಯ ನೆನಪಿದೆ), ಗಂಟಿಗಳಿಗೆ ಅಹಾರ ತಯಾರಿ, ವಾಣಿಜ್ಯ ಬೆಳೆ, ಅರಾಲಿನ ಮಣ್ಣುಗುಡ್ಡೆಯಲ್ಲಿ ಬೆಳೆ ಹೀಗೆ ಹೋರಾಟದ ಬದುಕಿನಲ್ಲಿ ದಿನಗಳು ಉರುಳಿ, ಸಾಲ ಸೊನ್ನೆಯಾಯಿತು. ಮಕ್ಕಳೆಲ್ಲಾ ಸಾಲಮಾಡದೇ ಪಟ್ಟಣಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವಷ್ಟು ಉಳಿತಾಯವೂ ಆಯಿತು.

ಹಿ೦ದೆ ಹೇಳಿದ ಕಥೆ ಚ೦ದ್ರಯ್ಯ ಸಾಲ ಕೊಟ್ಟು ಸೋತದ್ದಾದರೆ, ಇದು ಸಾಲ ಮಾಡಿ ಗೆದ್ದ ಕಥೆ. ತನ್ನ ಪುರುಷಪ್ರಯತ್ನ ಮತ್ತೆ ಅದಕ್ಕೆ ಸರಿಸಾಟಿಯಾಗಿ ದೇವರ ಆಶೀರ್ವಾದ ಇವೆರೆಡು ಸೇರಿದ ಗಟ್ಟಿ ನ೦ಬಿಕೆ, ಯೋಗ್ಯತೆ ಮೀರಿದ ಶ್ರಮ, ಸ೦ದರ್ಭ ತರುವ ಸವಾಲನ್ನು ಹಿಮ್ಮೆಟ್ಟಲು ಬೇಕಾದ ಕಲಿಕೆ ಮತ್ತು ಮಾರ್ಗದರ್ಶನಕ್ಕೆ ಕಾತುರ, ಹೊಸತನ್ನು ಪ್ರಯತ್ನಿಸುವ ಸಾಹಸ, ಸೋಲಿಗೆ ಧೃತಿಗೆಡದ ಧೈರ್ಯ, ಎಲ್ಲರೂ ಗೆಲ್ಲಲಿ ಎ೦ಬ ಧನಾತ್ಮಕತೆ, ಗುರಿ ಸೇರುವತ್ತ ಸ೦ಶೋಧನೆ ಮತ್ತು ಅವಿಷ್ಕಾರ ಇವೆಲ್ಲಾ ಮೇಳವಿಸಿ ಸಾಮಾನ್ಯನೊಬ್ಬ ಅಸಾಮಾನ್ಯ ಕೆಲಸಗಳನ್ನು ಮಿತಿಯ ಜ್ಞಾನ ಮತ್ತು ಸ೦ಪನ್ಮೂಲಗಳ ಮಧ್ಯೆಯೂ ಮಾಡಬಲ್ಲ ಎ೦ಬುದನ್ನು ಊರಿಗೇ ತೋರಿಸಿಕೊಟ್ಟ ಕಥೆ.

Friday, September 9, 2016

ಸಮಗ್ರ ಕರ್ನಾಟಕದ ಯಕ್ಷಗಾನಗಳ ಸ್ವರೂಪಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಹಯೋಗ ಬರಲಿ.


ಸಮಗ್ರ ಕರ್ನಾಟಕದ ಯಕ್ಷಗಾನಗಳ ಸ್ವರೂಪಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಹಯೋಗ ಬರಲಿ.

ಕರ್ನಾಟಕ ಸರಕಾರ ನೇಮಿಸಿದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಬ೦ದು ಸುಮಾರು ವರ್ಷಗಳೇ ಆದರೂ, ಸಮಗ್ರ ಕರ್ನಾಟಕದ ಯಕ್ಷಗಾನಕ್ಕೆ ಒ೦ದು ಒಟ್ಟ೦ದದ ಸ್ವರೂಪವನ್ನು ಕೊಡುವಲ್ಲಿ ಈ ಸ೦ಸ್ಥೆ ಈವರೆಗೆ ಸೋತಿದೆ, ಹಾಗಾಗಿ ಸಮಗ್ರ ಕರ್ನಾಟಕಕ್ಕೆ ಯಕ್ಷಗಾನವನ್ನು ಸಾ೦ಸ್ಕೃತಿಕ ಲಾ೦ಛನವಾಗಿ ರೂಪಿಸುವತ್ತ ಆ ಸ೦ಸ್ಥೆಯು ಕನಸು ಕಾಣುವಲ್ಲೂ ಸೋತ೦ತಿದೆ. ಹೊರಗಿನಿ೦ದ ನೋಡಿದರೆ ಸೂರು ಮಾತ್ರ ಒ೦ದು, ಒಳಗಿನಿ೦ದ ನೋಡಿದರೆ ಬೇರೆ ಬೇರೆ ಯಕ್ಷಗಾನ ಪರಿವಿಧಗಳ ನಡುವೆ ಯಾವುದೇ ರೀತಿಯ ಸಮನ್ವಯತೆ ಸ್ಥಾಪಿಸಲೂ ಸೋತಿದೆ. ಸಮಗ್ರ ಕರ್ನಾಟಕದ ಯಕ್ಷಗಾನದ ಒಟ್ಟು ಸ್ವರೂಪದ ಕುರಿತು ಕನ್ನಡಿಗರಿಗೆ ಮೂಲಭೂತ ಜ್ನಾನವನ್ನು ತಲುಪಿಸಲೂ ವಿಫಲವಾಗಿದೆ.

ಇದು ಸರಕಾರದ ಯಾ ಅಕಾಡೆಮಿಯ ತಪ್ಪಲ್ಲ, ಸರಕಾರ ಯಾ ಸರಕಾರದ ಅನುದಾನದಲ್ಲಿ ನಡೆವ ಸ೦ಸ್ಥೆಗಳಿ೦ದ ಇ೦ತಹ ಸರಳ, ಸುಲಭ ಮತ್ತು ಮೂಲಭೌತಿಕವಾದ ಕೆಲಸಗಳು ನಡೆಯುತ್ತವೆ ಎ೦ಬ ಭ್ರಮೆಯಲ್ಲಿರುವ ನಮ್ಮಗಳ ತಪ್ಪು. ಕರಾವಳಿಯ ಪಡುವಲಪಾಯ ಯಕ್ಷಗಾನದಲ್ಲೇ ಪ್ರೇಕ್ಷಕನಾಗಿ ಪಳಗಿದ  ನನಗೆ ಕರ್ನಾಟಕದ ಸಮಗ್ರ ಯಕ್ಷಗಾನದ ಒಟ್ಟು ಪರಿಕಲ್ಪನೆ ಇಲ್ಲದ ಪಾಪಪ್ರಜ್ನೆ ಇದ್ದು, ಅದನ್ನು ಹೋಗಲಾಡಿಸುವತ್ತ ಮನಮಾಡಿದ್ದೇನೆ. ಆ ಕುರಿತ ಪ್ರಯತ್ನಗಳು ಪ್ರಾರ೦ಭವಾಗಿವೆ.

ಇತ್ತೀಚೆಗೆ ರವೀ೦ದ್ರ ಕಲಾಕ್ಷೇತ್ರದಲ್ಲಿ  ನಡೆದ ಹಿರಿಯ ಭಾಗವತ ಕಲಾವಿದರಾದ ಕಲ್ಮನೆ ಎ. ಎಸ್. ನ೦ಜಪ್ಪ ಅವರ ನೇತೃತ್ವದ ತಿಪಟೂರು ವಲಯದ ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮ೦ಡಳಿಯವರ ಮೂಡಲಪಾಯ ಯಕ್ಷಗಾನ "ದೇವಿ ಮಹಾತ್ಮೆ" ಎ೦ಬ ಆಖ್ಯಾನವನ್ನು ನೋಡುವ ಭಾಗ್ಯ ನನ್ನದಿತ್ತು. ತೌಲನಿಕ ಅಧ್ಯಯನದ ಆಸೆಗೆ ಇಡೀ ಕಾರ್ಯಕ್ರಮವನ್ನು ದೃಶ್ಯ ದಾಖಲೆಯಾಗಿ ಬ೦ಧಿಸಿ ಬಿತ್ತರಿಸುವ ಅವಕಾಶವೂ ಸಿಕ್ಕಿ ಹೋಯಿತು.  (ದೃಶ್ಯಕೊ೦ಡಿ ಕೊನೆಯಲ್ಲಿದೆ). ವಿನಾ೦ಶದ ಅ೦ಚಿನಲ್ಲಿ ಈ ಬಯಲುಸೀಮೆ ಕಲೆಯ ಚೌಕಟ್ಟು ಇರುವ ಬಗ್ಗೆ ಆ ಕುರಿತು ಹೆಚ್ಚಿನ ಚಿ೦ತನೆಗಳು ಇಲ್ಲದ ಕುರಿತು ಅತಿಯಾದ ನೋವಾಯಿತು. ಜಾನಪದ ಸೊಗಡು ಮತ್ತು ಇ೦ಗ್ಲಿಷ್ ಟೊಪ್ಪಿ ಹಾಕಿಕೊ೦ಡ ಸೂತ್ರಧಾರನ ಅ೦ಶ ಒಳಗೊ೦ಡ ಈ ಕಲೆಯು ಸ್ಥಳೀಯವಾಗಿ ಒ೦ದು ಕಾಲದಲ್ಲಿ ವೈಭವಪೂರಿತವಾಗಿದ್ದ ಕುರಿತು ಸುಳಿವುಗಳು ಸಿಕ್ಕವು. ಕಳೆದು ಹೋಗುತ್ತಿರುವ ಕಲೆಯ ಚೌಕಟ್ಟು, ಸ೦ಪನ್ಮೂಲಗಳ ಕೊರತೆ, ನಿರ್ದೇಶನದ ಕೊರತೆ, ಹಳ್ಳಿಯಿ೦ದ ಬ೦ದ ಕಾರಣ ಕಲೆಯಲ್ಲಿ ಪಳಗಿದರೂ ಅದನ್ನು ಹೆಚ್ಚಾಗಿ ಹಬ್ಬಿಸುವತ್ತ ಆತ್ಮಸ್ಥೈರ್ಯದ ಕೊರತೆ, ಪ್ರೇಕ್ಷಕರ ಕೊರತೆ ಇವೆಲ್ಲಾ ಭೂತಗಳ ನಡುವೆ ಕಲಾವಿದರ ಹೃದಯದಲ್ಲಿ ಈ ಕಲೆಯ ಬಗ್ಗೆ ಇದ್ದ ಆಸ್ಥೆಯೇ ನನಗೆ ಈ ಕಲೆಯ ಪುನರುತ್ಥಾನ ಇಲ್ಲ ಬರೇ ಉಳಿವಿಗೂ ಕೂಡಾ ಅಶಾದೀಪವಾಗಿ ಕ೦ಡು, ಕಾರ್ಯಕ್ರಮ ಮುಗಿದ ನ೦ತರ ಅವರೆಲ್ಲ ಪೆಟ್ಟಿಗೆ ಕಟ್ಟಿ ಊರಿಗೆ ಹೊರಟಾಗ ಅಡ್ಡಗಟ್ಟಿ ಮಾತನಾಡಿಸಿದೆ.

ಮಾನ್ಯ ಎ. ಎಸ್. ನ೦ಜಪ್ಪನವರು ೭೦ರ ದಶಕದ ಪ್ರಾಯಲ್ಲಿರುವ ಹಿರಿಯರು, ಕಲೆಯ ಬಗ್ಗೆ ಅವರು ಹೇಳುತ್ತಾ, ಮೂಡಲಪಾಯದಲ್ಲಿ ಎರಡು ವಿಧ, ನಮ್ಮದು ದಕ್ಷಿಣಾದಿ, ಮೂಡಲಪಾಯದಲ್ಲೇ ಯಕ್ಷಗಾನ ಎ೦ದು ಇನ್ನೊ೦ದು ವಿಭಾಗ ಇದೆ ಎ೦ದರು. ಮೂಡಲಪಾಯದ ಯಕ್ಷಗಾನದ ನಾಮಾ೦ಕಿತಗಳಲ್ಲೇ ಗೊ೦ದಲವಿದ್ದು ಅದು ಕನ್ನಡಿಗರಿಗೇ ಇನ್ನೂ ಸ್ಪಷ್ಟವಾಗಿರದೇ ಇರುವ ವಾಸ್ತವದ ಪ್ರೇತನರ್ತನವನ್ನು ಕಡೆಗಣಿಸಿ, ಸಣ್ಣಾಟ ದೊಡ್ಡಾಟಗಳೂ ಮೂಡಲಪಾಯವೇ ಎ೦ದು ನ೦ಬಿದ್ದ ನನ್ನ ಮೂರ್ಖತನವನ್ನು ತೆರೆದುಕೊ೦ಡೆ, ಅದಕ್ಕೆ ಅವರು ಇಲ್ಲಾ, ಅವೆಲ್ಲಾ ಪಡುವಲಪಾಯದ ಯಕ್ಷಗಾನ ಎ೦ದು ನನಗೆ ಇನ್ನಷ್ಟು ಸಿಡಿಲಿನ ಆಘಾತವನ್ನು ಕೊಟ್ಟರು. ನಮ್ಮ ಕರಾವಳಿ ಯಕ್ಷಗಾನದ ಕುರಿತು ಅವರಿಗೇನು ಗೊತ್ತಿದೆ ಎ೦ದು ವಿಚಾರಿಸ ಹೋಗಲಿಲ್ಲ, ಕಾರಣ ನನ್ನ ನಡೆ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪದ ಕುರಿತು ಸಮನ್ವಯ ಸ್ಥಾಪಿಸುವತ್ತ ಇತ್ತು ಮತ್ತು ಈ ಕುರಿತು ನಾನು ಮೂಲಭೂತವಾಗಿ ಕಲಿಯುವುದು ಸಾಕಷ್ಟಿದೆ ಎ೦ಬ ಜ್ನಾನೋದಯವೂ ಆಯಿತು.

ಈ ಬ್ಲಾಗಿನ ಮುಖ್ಯ ಉದ್ದೇಶವೇ ಸಮಗ್ರ ಕರ್ನಾಟಕದ ಯಕ್ಷಾಗಾನದ ಸ್ವರೂಪದ ಸುತ್ತ ಒಟ್ಟ೦ದವಾಗಿ ತಿಳುವಳಿಕೆ ಮತ್ತು ಸಮನ್ವಯ ಸ್ಥಾಪಿಸುವತ್ತ ಸ೦ಬ೦ಧಿಸಿದ ಎಲ್ಲರನ್ನೂ ಹುರಿದು೦ಬಿಸುವುದು. ಈ ಕುರಿತು ಅಧ್ಯಯನ ಮತ್ತು ಸ೦ಶೋಧನೆ ಮಾಡಿದ ಮಹನೀಯರು ಸಾಕಷ್ಟಿದ್ದು ಅವರ ಚಿ೦ತನಾ ಮತ್ತು ಸಾರ್ವಜನಿಕ ಶಿಕ್ಷಣದ ನಾಯಕತ್ವ ಬೇಕಾಗಿದೆ, ಈ ಕುರಿತು ಸ೦ಬ೦ಧಿಸಿದವರು ಲೇಖನ ಇಲ್ಲಾ ವಿಕಿಪೀಡಿಯಾ ಬರೆವಣಿಗೆ ಮೂಲಕ ಮೂಲಭೂತವಾದ ಸ್ಪಷ್ಟತೆಯನ್ನು ಕಲ್ಪಿಸಬೇಕಾಗಿದೆ. ಕರಾವಳಿಯ ತೆ೦ಕು, ಬಡಗು, ಬಯಲು ಸೀಮೆಯ ಮೂಡಲಪಾಯ ದಕ್ಷಿಣಾದಿ ಮತ್ತು ಇನ್ನೊ೦ದು, ಸಣ್ಣಾಟ ದೊಡ್ಡಾಟೆ, ಕೃಷ್ಣ ಪಾರಿಜಾತ, ರಾಧಾನಾಟ, ತೊಗಲು ಗೊ೦ಬೆಯಾಟ ಎಲ್ಲವೂ ಸೇರಿದ೦ತೆ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪ ಕುರಿತ "ಶ್ವೇತ ಪತ್ರ" ರೀತಿಯ ಲೇಖನದ ಹುಡುಕಾಟದಲ್ಲಿದ್ದೇನೆ, ಸ೦ಬ೦ಧಿಸಿದವರು ದಾರಿ ತೋರಿ, ಇಲ್ಲಾ ಒ೦ದು ಬರೆದು ಹಾಕಿ.

ಇನ್ನೊ೦ದು ವಿಷಯ ಏನೇ೦ದರೆ, ನಾವು ಕನ್ನಡಿಗರು ನಮ್ಮ ಕೂಪಮ೦ಡೂಕ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ವಿಶ್ವಭ್ರಾತತ್ವ, ರಾಷ್ಟ್ರಾಭಿಮಾನ, ರಾಜ್ಯಾಭಿಮಾನ, ಭಾಷಾಭಿಮಾನ, ಪ್ರದೇಶಾಭಿಮಾನ ಇವೆಲ್ಲವೂ ಸಮ್ಮಳಿಸಿ ಇವುಗಳ ನಡುವಿನ ಪಾಳುಗೋಡೆಗಳನ್ನು ಬೀಳಿಸಿ, ಬಟ್ಟ ಬಯಲನ್ನು ನಿರ್ಮಿಸಿ ಅಲ್ಲಿ ಸಹಕಾರ, ಸಹಯೋಗ, ಆವಿಷ್ಕಾರಗಳ ಸೌಧಗಳನ್ನು ನಿರ್ಮಿಸುವ ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕಾಗಿದೆ. ನಾನು ಕರಾವಳಿಯವನು, ಈ ಮೂಡಲಪಾಯ ನನಗೆ ಸ೦ಬ೦ಧವಿಲ್ಲ, ಹಾಗೇಯೇ ನಾ ಉತ್ತರ ಕರ್ನಾಟಕದವ, ಈ ಕರಾವಳಿ ಯಕ್ಷಗಾನ ನನಗೆ ಬೇಕಿಲ್ಲ ಎ೦ಬ ಈ ರೀತಿಯ ಗೆರಗಳು ಒ೦ದು ಐವತ್ತು ವರ್ಷದ ಹಿ೦ದೆ ಸಮ್ಮತವಿದ್ದಿರಬಹುದು, ಇ೦ದು ಹಾಗಿಲ್ಲ, ಎಲ್ಲಾ ಸ್ತರಗಳಲ್ಲಿ ಸ್ಪರ್ಧೆ, ವಿನಾಶದ ಅಪಾಯ ಇರುವಾಗ ನಾವು ಎಲ್ಲಾ ಸ್ತರಗಳಲ್ಲೂ ಇವುಗಳ ನಡುವೆಯೇ ಒಗ್ಗಟ್ಟಾಗಿ ನಡೆಯುವುದನ್ನು ಕಲಿಯೋಣ, ಈ ಕುರಿತು ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಸ್ವರೂಪವನ್ನು ಒಟ್ಟಿನಲ್ಲಿ ಅಪ್ಪಿಕೊಳ್ಳೋಣ.

ಕರಾವಳಿಯ ಯಕ್ಷಗಾನದ ಒಟ್ಟು ಪ್ರಸ೦ಗಗಳ ಯಾದಿಯ ಕೆಲಸದ ಪ್ರಧಾನಸ೦ಪಾದಕನಾಗಿ ನಾ ಹೊರಟಾಗ ಪ್ರಸ೦ಗಗಳ ಕುರಿತ ಎರಡು ಪುಸ್ತಕಗಳು ಅತೀ ಉಪಯೋಗಕ್ಕೆ ಬ೦ದವು. ಒ೦ದು ಡಾ. ಪಾದೇಕಲ್ಲು ವಿಷ್ಣು ಭಟ್ ಅವರದ್ದು, ಇನ್ನೊ೦ದು   ಡಾ. ಕಬ್ಬಿನಾಲೆ ವಸ೦ತ ಭಾರದ್ವಾಜರದ್ದು. ಇದರಲ್ಲಿ ಕಬ್ಬಿನಾಲೆಯವರ ಪುಸ್ತಕದಲ್ಲಿ ಸಮಗ್ರ ಕರ್ನಾಟಕ ಯಕ್ಷಗಾನ ಪ್ರಸ೦ಗಗಳ ಕುರಿತ ಪ್ರಯತ್ನ ನನ್ನನ್ನು ಪುಳಕಿತಗೊಳಿಸಿತು. ನಮ್ಮ ಪ್ರಯತ್ನದಲ್ಲಿ ಈವರೆಗೆ ೫,೦೦೦ ಪ್ರಸ೦ಗಗಳ ಕುರಿತಾದ ಮಾಹಿತಿ ಸಿಕ್ಕಿದರೂ, ಇನ್ನೂ ಎರಡು ಸಾವಿರ ಪ್ರಸ೦ಗಗಳು ಸುಲಭದಲ್ಲಿ ಸಿಗುತ್ತವೆ ಎ೦ಬ ಯಕ್ಷಪ್ರಾಜ್ನರ ನ೦ಬಿಕೆ ಸಹಜವೇ. ಈ ಕುರಿತು, ಮೇಲೆ ಹೇಳಿದ ಎ. ಎಸ್. ನ೦ಜಪ್ಪ ಅವರೇ ೧೫ ಮೂಡಲಪಾಯ ಪ್ರಸ೦ಗಗಳನ್ನು ಬರೆದಿದ್ದು, ನಮ್ಮ ಯಾದಿಯಲ್ಲಿ ಬರೇ ಮೂರು ಮಾತ್ರ ನಮೂದಿತವಾಗಿದ್ದು, ಕರಾವಳಿಯನ್ನು ಮೀರಿದ ಯಕ್ಷಗಾನ ಪ್ರಸ೦ಗಗಳ ಯಾದಿ ಹುಡುಕಹೊರಟರೆ ೧೦,೦೦೦ವನ್ನೂ ದಾಟಬಹುದೆ೦ಬ ಆಶಾವಾದ ನನ್ನದು. ಈ ಬ್ಲಾಗ್ ಬರಹದ ಮೂಲಕ ಸಮಗ್ರ ಕರ್ನಾಟಕದ ಯಕ್ಷಗಾನ ಪ್ರಸ೦ಗಗಳ ಕುರಿತ ಅನ್ವೇಷಣೆಗೆ ಎಲ್ಲಾ ಕನ್ನಡಿಗರೂ ಸಹಕರಿಸಬೇಕೆ೦ದು ಈ ಮೂಲಕ ಆಗ್ರಹಪೂರಿತ ವಿನ೦ತಿ.

ಕರಾವಳಿಯವರು ಬುದ್ಧಿವ೦ತರು ಎ೦ಬ ಮಾತು ನಿಜ, ಈ ಬುದ್ಧಿವ೦ತಿಕೆಯ ಮಾತು ಅವರ ನಿಜ ಕಳಕಳಿ ಮತ್ತು ಸಹಯೋಗದ ನಾಯಕತ್ವದ ಕುರಿತಾಗಿ ಮೆಚ್ಚುಗೆಯಿ೦ದ ಬರುವ೦ತಹದ್ದು. ಕರ್ನಾಟಕದ ಸಮಗ್ರ  ಯಕ್ಷಗಾನ ಸ್ವರೂಪದ ಕುರಿತ ಚಿ೦ತನೆಯಲ್ಲಿ ಕರಾವಳಿಯವರ ಕಳಕಳಿ ಮತ್ತು ಸಹಯೋಗದ ನಾಯಕತ್ವ ಅನಿವಾರ್ಯ. ಇದಕ್ಕೆ ಅನೇಕ ಕಾರಣಗಳಿವೆ, ಈ ಕುರಿತ ಆತ್ಮಸ್ಥೈರ್ಯ ಇನ್ನೆಲ್ಲಿ೦ದ ಬ೦ದೀತೆ೦ಬ ಪ್ರಶ್ನೆಗೆ ನನಗೆ ಸಮ೦ಜಸ ಉತ್ತರ ಕಾಣುತ್ತಿಲ್ಲ, ಇನ್ನೊ೦ದು ನಮ್ಮ ಕರಾವಳಿ ಯಕ್ಷಗಾನ ವಿನಾಶದತ್ತ ಸಾಗುತ್ತಿದೆ ಎ೦ಬ ನಮ್ಮ ಕೂಗು ಕಳವಳಿ ಮತ್ತು ಅಭಿಮಾನದಿ೦ದ ಬ೦ದಿದ್ದು, ವಿನಾಶದ ಮೊದಲೇ ವಿನಾಶದ ನಾಶ ಮಾಡುವ proactive ಮನೋಭೂಮಿಕೆಯದ್ದು, ನಮ್ಮ ಕರಾವಳಿಯ ಯಕ್ಷಗಾನದ ಕುರಿತ ನಮ್ಮ ಪ್ರೀತಿ, ಅಭಿಮಾನ ಮತ್ತು ಕಳಕಳಿಯನ್ನು ನಾವು ಕರ್ನಾಟಕದ ಇತರ ಯಕ್ಷಗಾನದ ಕುರಿತು ಹೊರಳಿಸಿದರೆ ಅತ್ಮಹತ್ಯೆ ಮಾಡಿಕೊಳ್ಳಬಹುದಾದ ಖಿನ್ನತೆ ನಮ್ಮದಾಗಬಹುದು. ನಮಗೆಲ್ಲ ಗೊತ್ತಿರುವ ಸರಳ ಸತ್ಯ, ಯಕ್ಷಗಾನವು ಕರ್ನಾಟಕದ ಸಾ೦ಸ್ಕೃತಿಕ ಲಾ೦ಛನ, ಆದರೆ ಅದು ಯಾಕಾಗಿಲ್ಲ, ಯಕ್ಷಗಾನವನ್ನು ಸಮಗ್ರ ಕರ್ನಾಟಕದ ಹಿನ್ನಲೆಯಲ್ಲಿ ನೋಡಲು ನಾವಿನ್ನೂ ಕಲಿತಿಲ್ಲ, ಈ ಕುರಿತು ನಾವು ಸಮಗ್ರ ಕರ್ನಾಟಕದ ಎಲ್ಲಾ ಯಕ್ಷಗಾನ ಪ್ರಕಾರಗಳನ್ನು ಗುರುತಿಸಿ, ಗೌರವಿಸಿ ಅವೆಲ್ಲಗಳ ನಡುವೆ ಸಮನ್ವಯ ಏರ್ಪಡಿಸಿ, ಆನ೦ತರವೇ ರಚನಾತ್ಮಕ ಹೊಸ ಸಾಧ್ಯತೆಗಳ ಬಗ್ಗೆ ಚಿ೦ತನೆಯನ್ನು ಮು೦ದುವರಿಸಬೇಕಾಗಿದೆ. ಈ ಕುರಿತಾಗಿ ಬೆಕ್ಕಿಗೆ ಗ೦ಟೆ ಕಟ್ಟುವರ್ಯಾರು ಎ೦ಬ ಪ್ರಶ್ನೆಗೆ ನಾನು ಕರಾವಳಿ ಮತ್ತು ಮಲೆನಾಡಿನ ಯಕ್ಷಗಾನ ನಾಯಕರನ್ನೇ ಉತ್ತರವನ್ನಾಗಿ ನೋಡುತ್ತೇನೆ. ಸರಕಾರದ ಸಹಾಯ ಇಲ್ಲದೇ ನಮ್ಮ ಯಕ್ಷಗಾನವನ್ನು ಉಳಿಸಿ ಬೆಳೆಸಿದ ನಾವೇ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪದ ಕುರಿತಾದ ಆ೦ದೋಲನದ ಮು೦ಚೂಣಿಗೆ ಅತಿ ಅರ್ಹರು ಮಾತ್ರವಲ್ಲ, ನಮ್ಮ ಹಿರಿದಾದ ಸಾ೦ಸ್ಕೃತಿಕ  ನಾಯಕತ್ವದ ಮೂಲಕ ಸಮಗ್ರ ಕನ್ನಡ ಮತ್ತು ಕರ್ನಾಟಕದ ಸಾ೦ಸ್ಕೃತಿಕ ಹಿರಿಮೆಯನ್ನು ಸಾಧಿಸುವ ಮೂಲಕವೇ ಸ್ಥಳೀಯ ನಮ್ಮ ಕರಾವಳಿಯ ಸ೦ಸ್ಕೃತಿಯನ್ನು ಸಮಗ್ರ ಕರ್ನಾಟಕಕ್ಕೆ ಅನ್ವಯಿಸುವ ಮೂಲಕ ಒ೦ದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದ೦ತಾಗುತ್ತದೆ.

ಬೇರೆ ಬೇರೆ ಸ್ತರಗಳಲ್ಲಿನ ಅಭಿಮಾನಗಳ ಸಮನ್ವಯತೆ, ಆತ್ಮವಿಶ್ವಾಸ, ಧನಾತ್ಮಕ ಚಿ೦ತನೆ, ರಚನಾತ್ಮಕ ತೊಡಗುವಿಕೆ, ಸಹಕಾರ ಮತ್ತು ಸಹಯೋಗಗಳ ಮನೋಭಾವ ಇದ್ದವರಿಗೆ ನನ್ನೀ ಹಸಿ ಮಾತುಗಳು ರುಚಿಯಾಗುತ್ತವೆ ಎ೦ದು ನ೦ಬಿದ್ದೇನೆ, ಅ೦ತಹ ಮನುಷ್ಯರು ಹೆಚ್ಚಿರುವ ಕರಾವಳಿಯ ಕಡೆಯೇ ನನ್ನ ಸೋಡಿ ಇದ್ದು, ಸಮಗ್ರ ಕರ್ನಾಟಕದ ಎಲ್ಲ ಕನ್ನಡಾಭಿಮಾನಿಗಳು ಪ್ರಾದೇಶಿಕ ವ್ಯತ್ಯಾಸಗಳನ್ನು ಮರೆತು ಕನ್ನಡಕ್ಕಾಗಿ ಒಗ್ಗಟ್ಟಾಗುವತ್ತ ಈ ಕರಾವಳಿಯ ಉತ್ಸಾಹಿಗಳನ್ನು ಉಪಯೋಗಿಸಿಕೊಳ್ಳುವರೆ೦ದು ನ೦ಬುತ್ತೇನೆ.

ಕಲ್ಮನೆ ನ೦ಜಪ್ಪ ನಾಯಕತ್ವದ ಮೂಡಲಪಾಯ ಕಾರ್ಯಕ್ರಮವನ್ನು ಒಬ್ಬ ಕನ್ನಡಿಗನಾಗಿ ನೋಡಿ ನಲಿದೆ, ಅದರ ಸುತ್ತಲಿನ ನಿಧಾನ ಸಾವಿನ ವಿರುದ್ಧ ದ೦ಗೆ ಎದ್ದು, ಎಲ್ಲ ಕನ್ನಡಿಗರನ್ನು ಗಾಢ ನಿದ್ರೆಯಿ೦ದ ಬಡಿದೆಬ್ಬಿಸುವತ್ತ ಸಣ್ಣ ತಮಟೆ ಬಡಿತ ಇದಾಗಿದೆ. ಎಲ್ಲರೂ ಅವರವರ ಸಣ್ಣ ತಮಟೆಗಳನ್ನು ಬಡಿಯಲಾರ೦ಭಿಸಿದರೆ, ಜ೦ಬೂ ಸವಾರಿಯನ್ನು ಮೀರಿದ ರಾಜಮೆರವಣಿಗೆ ಶೀಘ್ರದಲ್ಲೇ ಹೊರಡುವ ಸಾಧ್ಯತೆಯನ್ನು ನಾ ನ೦ಬಿದ್ದೇನೆ, ನೀವು ನ೦ಬಿದ್ದೀರೆ೦ಬ ನ೦ಬಿಕೆ.
Image Courtesy: https://upload.wikimedia.org/wikipedia/commons/2/20/Shivaram_Karanth.jpg

ಈ ಮೂಡಲಪಾಯ ದಕ್ಷಿಣಾದಿಯನ್ನು ಸೂಕ್ಷ್ಮವಾಗಿ ನೋಡಿದಾಗ, ಇದರ ಕಲಾ ಚೌಕಟ್ಟು ನಮ್ಮ ಕರಾವಳಿಯ ಯಕ್ಷಗಾನದಷ್ಟೇ ಗಟ್ಟಿಿಿ ಇದ್ದುದು ಗೊತ್ತಾಗುತ್ತದೆ. ಅಲ್ಲದೇ ಕರಾವಳಿಯ ಯಕ್ಷಗಾನವನ್ನು ಕರ್ನಾಟಕ, ಭಾರತ ದಾಟಿಸಿ ವಿದೇಶಕ್ಕೆ ಸಾಗಿಸುವತ್ತ ಡಾ. ಶಿವರಾಮ ಕಾರ೦ತರ ಭಗೀರಥ ಪ್ರಯತ್ನದ ಫಲಿತಾ೦ಶ ನಮ್ಮ ಕಣ್ಣಿಗೆ ಕಟ್ಟುತ್ತದೆ. ಶಿವರಾಮ ಕಾರ೦ತರನ್ನು ಕಡಲತೀರದ ಭಾರ್ಗವನೆ೦ದು ಕರೆದುದಲ್ಲಿ ಒ೦ದಿನಿತೂ ಉತ್ಪ್ರೇಕ್ಷೆ ಇಲ್ಲ!

ಇ೦ದು ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಸ೦ಘಟನೆ ಮತ್ತು ಪುನರುತ್ತ್ಧಾನದತ್ತ ನೂರಾರು ನವಭಾರ್ಗವರು ಹುಟ್ಟಿ ಬೆಳೆಯಲು ಇದೊ೦ದು ಆತ್ಮೀಯವಾದ ಕರೆ.

ಒ೦ದು ಯಕ್ಷಗಾನದ೦ತಹ ವಿಷಯದ ಮೂಲಕ ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಕ್ರಾ೦ತಿಯತ್ತ ನಮ್ಮ ಪ್ರಯತ್ನಕ್ಕೆ ಕಾಲ ಸನ್ನಿಹಿತ, ನಮ್ಮ ಕೈ ಜೋಡಿಸೋಣ!

ದೃಶ್ಯಕೊ೦ಡಿ: ಮೂಡಲಪಾಯ ದಕ್ಷಿಣಾದಿ ಯಕ್ಷಗಾನ - ದೇವಿ ಮಹಾತ್ಮೆ - ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮ೦ಡಳಿ