ನನ್ ಬದ್ಕಿನ್ ಮೊತ್ತ ಮದ್ಲಿನ್ ಭಯಂಕರ ಸೋಲ್
Original post: https://www.facebook.com/notes/nataraja-upadhya/%E0%B2%A8%E0%B2%A8%E0%B3%8D-%E0%B2%AC%E0%B2%A6%E0%B3%8D%E0%B2%95%E0%B2%BF%E0%B2%A8%E0%B3%8D-%E0%B2%AE%E0%B3%8A%E0%B2%A4%E0%B3%8D%E0%B2%A4-%E0%B2%AE%E0%B2%A6%E0%B3%8D%E0%B2%B2%E0%B2%BF%E0%B2%A8%E0%B3%8D-%E0%B2%AD%E0%B2%AF%E0%B2%82%E0%B2%95%E0%B2%B0-%E0%B2%B8%E0%B3%8B%E0%B2%B2%E0%B3%8D/10154692869152738
ನಾವ್ ಮಕ್ಳಿಪ್ಪತ್ತಿಗ್ ಎಲ್ಲಾ ಆಟ ಆಡಿತ್ತೆ! ಗೋಲಿ, ಲಗೋರಿ, ಹೊಳಿ ಬದಿ ಪಾವಂಟಿ ಕಾಯ್ ಚೆಂಡ್ ಮಾಡ್ಕಂಡ್ ಹಾಕಿ, ಕುಂಟ್ಬಿಲ್ಲೆ, ಗುಡ್ಡಿ ಹೊಯಿಂಗಿಲ್ ಅಬ್ಬಚ್ಚಿ ಇಟ್ಕಂಡ್ ಹಿಡುದ್ ಇಲ್ಲ ಮಣ್ ಮುಕ್ಸ್ಕಂಡ್ ಮಣ್ ತಿಂಬ್ ಆಟ, ಕಬಡಿ, ಖೋ ಖೋ, ಚೀನಿ ದಾಂಡ್ ಎಲ್ಲ ಬಗಿ ಆಡಿತ್! ಆದ್ರ್ ಭಾರೀ ರುಚಿ ಕೊಟ್ಟದ್ ಕ್ರಿಕೆಟ್ಟೆ!
ನಾವ್ ಮಕ್ಳಿಪ್ಪತ್ತಿಗ್ ಎಲ್ಲಾ ಆಟ ಆಡಿತ್ತೆ! ಗೋಲಿ, ಲಗೋರಿ, ಹೊಳಿ ಬದಿ ಪಾವಂಟಿ ಕಾಯ್ ಚೆಂಡ್ ಮಾಡ್ಕಂಡ್ ಹಾಕಿ, ಕುಂಟ್ಬಿಲ್ಲೆ, ಗುಡ್ಡಿ ಹೊಯಿಂಗಿಲ್ ಅಬ್ಬಚ್ಚಿ ಇಟ್ಕಂಡ್ ಹಿಡುದ್ ಇಲ್ಲ ಮಣ್ ಮುಕ್ಸ್ಕಂಡ್ ಮಣ್ ತಿಂಬ್ ಆಟ, ಕಬಡಿ, ಖೋ ಖೋ, ಚೀನಿ ದಾಂಡ್ ಎಲ್ಲ ಬಗಿ ಆಡಿತ್! ಆದ್ರ್ ಭಾರೀ ರುಚಿ ಕೊಟ್ಟದ್ ಕ್ರಿಕೆಟ್ಟೆ!
ಆಟ್ದಲ್ ಗೆಲುದ್ ಸೋಲುದ್ ಇದ್ದದ್ದೇ! ಸೋತಾಗ್ಲ್ ಸಲ್ಪ ಬ್ಯಾಜಾರ್ವೇ, ಆದರ್ ಮರ್ದಿನ ಮರ್ತ್ ಹೋತ್! ಸೋತ್ರ್ ಕಣ್ಣೀರ್ ಬಪ್ಪು ಆಟ, ಚೀನಿ ದಾಂಡಾಂಗೆ ಗಂಜಿ ಕುಡು ಆಟ, ಇದ್ರಲ್ ಸೋತರೆ, ಕೊನೆಗೇ ಗಂಜಿಕುಡ್ಸುದ್,ಕೆಲಸರಿ ಎಷ್ಟ್ ಗಂಜಿ ಕುಡುದ್ರು ಮುಗುದಿಲ್ಲ, ಕಣ್ಣೀರ್ ಹಾಕ್ಯೆ ಆಟ ಕೈದ್, ಆದ್ರೂ ಮರ್ದಿನ ಮತ್ತೆ ಅದೇ ಆಡುಕೆ ತಯ್ಯಾರ್!
ಆಟದಲ್ ಸೋತ್ರ್ ದೊಡ್ ವಿಷ್ಯ ಅಲ್ಲ, ಆದ್ರ್ ಕ್ರಿಕೆಟ್ಟಲ್ ಸೋತ್ರೆ ಸುಮಾರ್ ದಿನ ಬ್ಯಾಜಾರ್, ಒಬ್ನೇ ಸೋಲುದ್ ಅಲ್ಲಲೇ, ಇಡೀ ತಂಡ ಮಣ್ತಿಂಬುದ್! ಕ್ಯಾಪ್ಟನ್ ಆಯ್ ಸೋತ್ರೆ ಗೋವಿಂದ! ಅದೂ ಅವ ಸ್ಟಾರ್ ಬ್ಯಾಟ್ಸ್ಮನ್ ಆಯಿ ಸೊನ್ನೆ ರನ್ನಿಗೆ ಔಟಾರೆ ಗಂಡಾಂತ್ರ!
ಇವತ್ತಿನ್ ಕತಿ, ನಮ್ ಪಾರಂಪಳ್ಳಿ ಪಡುಕೆರಿದ್ ಗುಡ್ಡಿ ಶಾಲ್ಯಾಗ್ ಆದ್! ನಂಗ್ ಆಗ್ಲಿಗ್ ೭ನೇ ಕ್ಲಾಸ್!
ನಮ್ ಶ್ಯಾಲಿಲ್ ನವೆಂಬರ್ ಹದ್ನಾಲ್ಕಕ್ ಮಕ್ಕಳ ದಿನಾಚರಣಿ ಇರ್ತಿತ್! ಎಲ್ಲ ರೀತಿ ಸ್ಪರ್ಧೆ, ಆಟೋಟ, ಚಿತ್ರ ಕಲೆ, ಹಾಡು, ಉಪನ್ನ್ಯಾಸ, ಚರ್ಚೆ, ವಿನೋದ ಹೀಂಗೆ. ಎಲ್ಲಾ ಮುಗಿಕೆ ಒಂದ್ ವಾರ ಬೇಕ್, ಗಮ್ಮತ್ತೇ ಗಮ್ಮತ್!
ನಮ್ದ್ ಗುಡ್ಡಿ ಶಾಲಿ ಅಂದ್ ಮೇಲ್ ನಾವಾಡುಕ್ ಇಪ್ಪುದ್ ಗುಡ್ಡಿಯೇ! ಕ್ರಿಕೆಟ್ ಆಡುದ್ ಗುಡ್ಡಿ ಮೇಲೇ, ಬ್ಯಾಟ್, ವಿಕೆಟ್, ಬಾಲ್ ಎಲ್ಲ ಶಾಲಿಲೇ ಕೊಡ್ತಿದ್ರ್! ಆದ್ರ್ ನಂಗ್ ಮ್ಯಾಚಿದ್ರ್ ಸ್ಪೆಷಲ್ ಬ್ಯಾಟೇ ಬೇಕಿತ್, ಅದ್ ನಮ್ ಮಧು ಮನಿದ್. ಮಧು ನಮ್ ಮಾಬ್ಲ ಮಾಷ್ಟ್ರ ಮಗ. ನಮ್ ಪ್ರಕಾರ ಮಾಬ್ಲ್ ಮಾಷ್ಟ್ರ್ ಒಬ್ರ್, ಇನ್ನೊಬ್ರ್ ಸದಿ ಮಾಷ್ಟ್ರ್, ಈ ಇಬ್ರ ಮಾಷ್ಟ್ರಂಗ್ ಹಿಂದ್ ಯಾರೂ ಹುಟ್ಟಿಲ್ಲ, ಇನ್ನ್ ಯಾರೂ ಹುಟ್ಟುದಿಲ್ಲ, ಅಷ್ಟ್ ಮೇಲ್ಮಟ್ಟದ್ ಮಾಷ್ಟ್ರ್!
ಈ ಮಾಬ್ಲ್ ಮಾಷ್ಟ್ರ್ ಮನಿಗೆ ಕೆಲ್ಸಕ್ ಶೀನಾಚಾರ್ರು ಮರದ್ ಕೆಲಸಕ್ ಬಂದಾಗ್ಳಿಗ್, ಮಗನಿಗ್ ಒಂದ್ ಮರದಲ್ ಬ್ಯಾಟ್ ಮಾಡ್ಸಿ ಕೊಟ್ರ್ ಕಾಣಿ, ಆ ನಮೂನಿ ಬ್ಯಾಟ್ ನಾ ಮತ್ ಕಾಣ್ಲೇ ಇಲ್ಲ! ದೊಡ್ಡ್ ಬ್ಯಾಟ್, ಆದ್ರ್ ಹಗೂರ ಕಾಣಿ, ಮತ್ತ್ ದೊಡ್ಡವ್ರ ಆಡ್ತ್ರರಲ್ಲ, ಆ ಬ್ಯಾಟಿಗಿಂತ ಒ೦ದ್ ಒಂದೂವರಿ ಇಂಚ್ ಅಗಲ ಜಾಸ್ತಿ ಕಾಣಿ, ಅದ್ ನಮ್ಗ್ ಭಾರೀ ಲಾಭ, ವಿಕೆಟ್ ಹೆಚ್ಚ್ ಅಡ್ಡ ಮಾಡಿ ಇಟ್ಕಂಬಕ್ ಆತ್ತ್, ಹಗುರ ಇಪ್ಕೋಯ್ ತಕ್ಕಂಡ್ ಬೀಸಿರೆ, ಬೀಸಿದಕ್ಕೆ ಬಾಲ್ ಬಿದ್ರೆ ಬೌಂಡರಿ ಇಲ್ಲ ಸಿಕ್ಸರ್ರೇ! ಮತ್ ಹಗುರ್ ಇಪ್ಕೋಯ್ ಹಿಡ್ಕಂಡ್ ಓಡುಕು ಸುಲಭ! ಬ್ಯಾಟ್ ಹಿಡಿ ಹ್ಯಾಂಗ್ ಮಾಡೀರ್ ಅಂತ್ರ್ಯಾ! ಉರೂಟ್, ನಮ್ ಕೈಗ್ ಸರೀ ಆಪಷ್ಟ್ ಉದ್ದ ಮತ್ತ ದಪ್ಪ! ಮಧು ಚೆಂದ, ಅವನಿಗಿಂತ ಅವ್ನ್ ಬ್ಯಾಟ್ ಮತ್ತೂ ಚೆಂದ! ಹಾಂಗಾಯ್, ಕ್ರಿಕೆಟ್ ಆಟಕ್ ಮಧು ಇಲ್ದೀರೂ ಬ್ಯಾಟ್ ಅವ್ನ್ ಮನಿಗ್ ಹೋಯ್ ಬೇಡ್ಕಂಡ್ ತಪ್ಪುದೇ. ಅವ ಕೊಟ್ತಿದ್ದ! ಇಬ್ರ್ ಇಬ್ರ್ ಬ್ಯಾಟ್ಸ್ಮನ್ ಆಡುವಾಗ, ಒಬ್ಬ ಒಂದ್ ರನ್ ತಕ್ಕಂಡ್ ಆ ಬದಿ ಕ್ರೀಸಿಗ್ ಹೋದ್ರೆ, ಈ ಬದಿಯವ ಅವನತ್ರ ಬ್ಯಾಟ್ ಬದಲಾಯಿಸುದೇ, ಅದೇ ಒಂದ್ ಜಾಪ್, ಟಿವಿಲ್ ಬಪ್ಪು ಕ್ರಿಕೆಟ್ಟಲ್ಲೂ ಅಷ್ಟ್ ಜಾಪ್ ಮಾಡುದಿಲ್ಲ! ಅಪ್ರೂಪಕ್ಕೆ ನಮ್ ಸದಾಶಿವ್ ಮಾಣಿ ಹಾಂಗಿದ್ ಪಿಟಿ ಪಿಟಿ ಬ್ಯಾಟ್ಸ್ಮನ್ ಬಂದ್ರೆ ಬರೀ ರಗ್ಳಿ, ಒಂದ್ ಒಂದ್ ರನ್ನಿಗೂ ಬ್ಯಾಟ್ ಬದ್ಲಾಯ್ಸುದ್, ಅದಕ್ಕೆ ನಾವ್ ಹೇಳತ್, "ಹ್ವಾ! ಬ್ಯಾಟ್ ಹೊತ್ತಾಕಿಯೇ ಓಡ್, ನಮ್ಗ್ ಪೂರೈಸುದಿಲ್ಲ!", ಅವ ಹಾಂಗೇ ಮಾಡ್ತಿದ್ದ, ಪಾಪ, ಒಂದೊಂದ್ ಸಾರಿ ನೆನಪ್ ಹೋರೆ, "ಸಾರಿ ಸಾರಿ" ಅಂಬಷ್ಟ್ ಪಾಪ ಅವ. ಪಿಟಿ ಪಿಟಿ ಮಾಡ್ಕಂಡ್ ಔಟಾಗ್ದೇ, ಓಪನಿಂಗಿಗ್ ಬಂದ್ ಲಾಸ್ಟ್ ಬ್ಯಾಟ್ಸ್ಮನ್ ನಾಟ್ ಔಟ್ ಆಯಿ ಇಪ್ಪಲೋರಿಗೆ ಆಡಿ ಹತ್ತರ್ ಮೇಲ್ ರನ್ ಮಾಡ್ದೇ ರಕ್ಷಣಾತ್ಮಕ ಆಡು ಸದಾಶಿವಂಗೂ ಅದೇ ಬ್ಯಾಟ್ ಬೇಕ್!
ನಾ ನಾಲ್ಕನೇ ಕ್ಲಾಸಿಗೆ ಇಪ್ಪತಿಗ್ ಐದನೇ ಕ್ಲಾಸಿನವ್ರ್ ಮೇಲ್ ಒಂದ್ ಮ್ಯಾಚ್ ಆಯ್ತ್, ಅದ್ರಲ್ ನಾವೇ ಗೆದ್ದಿತ್, ನಾ ಒಬ್ನೇ ೪೦ ರನ್ ಮಾಡಿದ್ದೆ, ಒಂದ್ ರೀತಿಲ್ ಮ್ಯಾನ್ ಆಫ್ ದ ಮ್ಯಾಚ್, ಆಗ್ಳಿಗ್ ಹಾಂಗಿದ್ ಬಿರುದು ಇರ್ತ್ ಇರ್ಲಿಲ್ಲ! ನಂಗೇ ಆಶ್ಚರ್ಯ, ಇದ್ ಹ್ಯಾಂಗಾಯ್ತ್ ಅಮಿಗ್, ಕಡಿ ಕಾಂಬ್ಕೆ, ಮಧು ಬ್ಯಾಟೇ ಕಾರಣ, ನಮ್ ಆಟ್ದಲ್ ಎಲ್ಬಿಡಬ್ಲ್ಯೂ ಇರ್ಲಿಲ್ಲ, ಹಾಂಗ್ ಸಲ್ಪ ವಿಕೆಟ್ ಕವರ್ ಜಾಸ್ತಿ ಆದ್ರೆ, ಅಂಪೈರ್ರ್ ಸಲ್ಪ ಹಿಂದ್ ಬಾ ಅಂತ ಅಷ್ಟೇ. ನಾ ಎಂತ ಮಾಡ್ದೆ ಅಂದ್ರೆ, ಒಂದ್ ಕಾಲ್ ಒಂದ್ ವಿಕೆಟ್ಟಿಗ್ ಆಡ್ಡ ಇಟ್ರೆ, ಮಧು ಬ್ಯಾಟಲ್ ಇನ್ನೆರೆಡ್ ವಿಕೆಟ್ಟಿಗ್ ಅಡ್ಡ ಇಟ್ಕಂಡ್ ಸರ್ತ ಬಂದ್ ಬಾಲ್ ಬ್ಯಾಟಿಗೆ ಬಂದ್ ಬೀಳ್ವಾಂಗ್ ಮಾಡ್ಕಂಡ್ ವಾರಿಪೀರಿ ಬಂದ್ ಬಾಲ್ ತೆಗ್ಲಿ ಹಾಕಿ ಹೊಡ್ದ್ ಹಾಂಗ್ ಮಾಡಿದ್, ನಾವ್ ಶೆಟ್ಟಿ ಗೆದ್ದಿಲ್ ಆಡಿದ್ ಆಪ್ಕೋಯ್ ಹೆಚ್ ಬಾಲ್ ಗೆರ್ಚಂಡಿ, ಯಾರ್ಕರ್ ಬರದೇ ನನ್ ಗುಟ್ ಯಾರಿಗೂ ಗೊತ್ತಯ್ಲಿಲ್ಲ! ನಾ ಬೌಲರ್ ಕೂಡಾ ಹೌದ್, ಹಾಂಗಾಯ್ ಈ ಮ್ಯಾಚ್ ಆದ್ ಮೇಲ್ ನಂಗೊಂದ್ "ಆಲ್ರೌಂಡರ್" ಗೌರವವೂ ಇದ್ದಿತ್!
ಮಧು ಕೂಡಾ ಲಾಯಿಕ ಆಡ್ತ, ನಾವಿಬ್ರೂ ಒದುಕ್ ಮುಂದ್, ಅವ ಫಷ್ಟ್, ನಾ ಸೆಕಂಡ್, ಅಪರೂಪಕ್ ನಾ ಫಶ್ಟ್ ಬಂದ್ರೂ ಇನ್ನೊಂದ್ ಸರಿ ಇಲ್ಲ, ಸಣ್ಣಗ್ ಪೈಪೋಟಿ ಅದ್ರೂ ನಾವ್ ಸ್ನೇಹಿತ್ರೇ!
ಸರಿ, ಏಳನೇ ಕ್ಲಾಸ್ನಲ್ ಮಕ್ಕಳ ದಿನಾಚರಣೆಗೆ, ೫, ೬, ಮತ್ತು ೭ ನೇ ಕ್ಲಾಸಿಂದ ಒಳ್ಳೆ ಆಡುವವರ್ ಎರಡ್ ಟೀಮ್ ಮಾಡ್ಸಿ ಮಾಸ್ಟ್ರ ಕ್ರಿಕೆಟ್ ಮ್ಯಾಚ್ ಆಡಿ ಅಂದ್ರ್! ಆಗ್ಲೀಗ್ ಹ್ಯಾಂಗಿತ್ ಅಂದ್ರೆ, ಯಾರ್ ಓದುಕ್ ಮುಂದ್ ಇಪ್ಪೋರೋ ಅವ್ರೇ ಎಲ್ಲದಕ್ಕೂ ನಾಯಕ್ರ್. ಹಾಂಗಾಯ್ ಮಧು ಒಂದ್ ತಂಡಕ್ ನಾ ಒಂದ್ ತಂಡಕ್ ಕ್ಯಾಪ್ಟನ್. ನಮ್ ಮೇಲ್ ಮಾಷ್ಟ್ರಿಗ್ ಎಷ್ಟ್ ನಂಬಿಗಿ ಅಂದ್ರ್ ಅವರ್ ಮ್ಯಾಚಿಗ್ ಬರ್ಲೇ ಇಲ್ಲ, ನೀವಾಡಿ, ಯಾರ್ ಗೆದ್ರ್ ಹೇಳಿ ಸಾಕ್ ಅಂದ್ರ್!
ನಾನು ಮತ್ತು ಮಧು ಅಂದ್ರ್ ಮೇಲ್ ಕೇಣ್ಕಾ, ನಮ್ ತಂಡವೇ ಗೆಲ್ಕ್, ಮತ್ ಉಳ್ದವ್ರೆಲ್ಲಾ ಸೇರಿ ನಮ್ಮಿಬ್ರನ್ನು ಎತ್ತಿ ಕಟ್ಟುದ್, ಮಧುಗ್ವ್ನ್ ಕಡೀರ್ ಹೋಯ್ ಹೇಳುದ್, "ನೀ ಕ್ಲಾಸಲ್ ಫಷ್ಟ್ ಬಪ್ಪುವಾ, ಆ ನಟ್ರಾಜನ್ ತಂಡಕ್ ನಾವ್ ಸೋಲುಹಾಂಗಿಲ್ಲ"! ನನ್ ತಂಡದವ್ರ್ ನಂಗ್ ಹೇಳುದ್, "ಆ ಮಧುಗ್ ಪ್ರತೀ ಸರಿ ಫಷ್ಟ್ ಬಂದ್ ಗರ್ವ ಸಲ್ಪ ಜಾಸ್ತಿ, ನಾವ್ ಗೆದ್ರೆ ಸಲ್ಪ ಇಳಿತ್"! ಒಟ್ಟಾರೆ, ಈ ಮ್ಯಾಚ್ ಭಾರತ ಪಾಕಿಸ್ಥಾನ ರೀತಿ ಆಯ್ತ್, ಎರಡೂ ತಂಡದವರಿಗೆ, ಬೇರೆ ತಂಡದವ್ರ್ ಪಾಕಿಸ್ಥಾನ ಇದ್ದಾಂಗ್!
ನಮಗ್ ಆಡುಕ್ ನಾಲ್ಕ್ ಗಂಟಿಗ್ ಬಿಟ್ರ್, ಒಂದೊಂದೇ ಇನ್ನಿಂಗ್, ನಾವ್ ನಮ್ ತಂಡ ಆರ್ಸ್ಕಂಬದ್, ಮೂರ್ ಕ್ಲಾಸಿಂದ ಒಟ್ಟ್ ೨೨ ಜನ ಆರ್ಸಿ ಮೇಲ್ ಉಳಿದವ್ರೆಲ್ಲಾ ಪ್ರೇಕ್ಷಕರು! ನಂಗ್ ನೆನಪಿದ್ದಂಗ್ ಬಾಬ, ಜಗನ್ನಾಥ, ಗಣೇಶ, ಸದಾಶಿವ, ಅರುಣ, ಉದಯ, ಕೋಟಿ, ಚೆನ್ನಯ್ಯ ಇವ್ರೆಲ್ಲ ಒಳ್ಳೇ ಆಟಗಾರರೇ. ಗಣೇಶ ನನಗ್ ಭಾರೀ ದೋಸ್ತಿ, ಅವ ಕ್ಲಾಸಲ್ ಮೂರನೇ ಬಪ್ಪವ, ಹಾಂಗಾಯ್ ಎರಡನೇ ಬಪ್ಪವಂಗೇ ಹತ್ರ ಆದ. ನಾನೂ ಅವನೂ ಸೇರಿ ಅವರ್ ಮನಿ ಹಾಡಿಲ್ ಯಕ್ಷಗಾನ ಮಾಡಿತ್, ಇಬ್ರೂ ಸೇರಿ ಸೋಡ್ತಿ ಆಟ ಮಾಡಿ ಮಾಷ್ಟ್ರ್ ಹತ್ರ ಸಿಕ್ ಹಾಕಂಬುದೊಳಗೇ ೬೦೦ ಖಾಲಿ ಕಾಗದ ಬೇರೆ ಮಕ್ಕಳ್ ನೋಟ್ ಪುಸ್ತಕದಿಂದ ಒಟ್ ಮಾಡಿತ್!
ಈ ಸೋಡ್ತಿ ಹ್ಯಾಂಗಂದ್ರ್ ಮನಿಲ್ ಬ್ಯಾಡ್ದಿದ್ ಸಾಮಾನ್ ಎಲ್ಲ ಬಹುಮಾನ ಇಡುದ್, ಸೋಡ್ತಿ ಆಡುಕ್ ಒಂದ್ ಖಾಲಿ ಕಾಗದ ಹರ್ದ್ ಕೊಡ್ಕ್! ಎಲ್ಲರ್ ಸೋಡ್ತಿ ಆಡುವಾಗ ಕೆಲವ್ ಚೀಟಿಲ್ ಏನೂ ಬಹುಮಾನ ಇಲ್ಲ ಅಂತ್ ಇರತ್. ನಮ್ದ್ ಅಂಗಡಿ ಇಪ್ಕೋಯ್, ಬ್ಯಾಡಿದ್ ಸಾಮಾನ್ ಸುಮಾರ್ ಸಿಕ್ಕುಕೋಯ್, ನಾ ಎಂತ ಮಾಡ್ಯೆ ಅಂದ್ರೆ, ಆಡಿದವಂಗ್ ಒಂದ್ ಬಹುಮಾನ ಖಾತ್ರಿ ಅಂತ್! ವಯರ್ ತುಂಡ್, ರಾಕೆಟ್ ಮಾಡುಕೆ ರಬ್ಬರ್ ತುಂಡ್, ಹಾಳಾದ್ ಬಲ್ಬ್, ಖಾಲಿಯಾದ್ ಕರಡಿಕೆ, ಸಾಮಾನ್ ಬಂದ ಖಾಲಿ ಡಬ್ಬಿಗಳ್ ಹೀಂಗ್ ನಾ ಮನಿ ಸುಮಾರ್ ಖಾಲಿ ಮಾಡ್ಸಿ ಸ್ವಚ್ಛ ಮಾಡಿದ್ದೆ, ಸುಮಾರ್ ೬೦೦ ಕಾಗದ ನಮ್ ಕೈಸೇರುವಾಗ ಹಂದೆ ಮಾಸ್ಟರಿಗೆ ಗುಮಾನಿ ಬಂತ್, ಕೆಲವ್ರ್ ನೋಟ್ ಪುಸ್ತಕ ವಾರಗಟ್ಲೆ ಊಟ ಮಾಡದಿದ್ದಂಗ್ ತೆಳ್ಳಗ್ ಆಯಿ ಹೋಯ್ತ್! ಗೊತ್ತಾಯ್ ನನ್ನ್ ಕರದ್ ಹೇಳಿರ್, ಇನ್ ಆಡ್ಬಡ ಅಂತ, ಬದುಕಿದೆಯಾ ಬಡ ಜೀವ, ನಮ್ ಯಾಪಾರ ಕ್ಲೋಸ್! ನಾ ಓದುಕ್ ಹುಶಾರ್ ಇಪ್ಪ್ಕೋಯ್ ಹೀಂಗ್, ಇಲ್ದೀರ್, ಎರಡ್ ಬಡಿಗಿ, ಮನಿಯವರ್ನ್ ಕರ್ಕಂಬಾ ಎಲ್ಲಾ ಆತಿತ್ತೋ ಏನೋ! ನಾವ್ ಮುನ್ನೂರ್ ಮುನ್ನೂರ್ ಕಾಗದ ಇಟ್ ಹೊಲ್ಸ್ಕಂಡ್ ಒಳ್ಳೇ ಎರಡ್ ರಫ್ ನೋಟ್ ಪುಸ್ತಕ ಮಾಡ್ಸ್ತ್, ಇನ್ನೂರ್ ಪೇಜ್ ನೋಟ್ ಬುಕ್ಕಿಗಿಂತ ದಪ್ಪ, ನಮ್ಗೆ ದಂಡಯಾತ್ರೆ ವಿಜಯದ್ ಕುಸಿ ಜೀವನದುದ್ದಕ್ಕೂ!
ನಂಗ್ ಈ ಗಣೇಶ ನಮ್ ಪಾರ್ಟಿ ಬರ್ಕಮಿಗೆ, ಆದರೆ ಗಣೇಶ ಬರೀ ಬೌಲಿಂಗ್, ಈ ಜಗನ್ನಾಥ ನನ್ನಂಗೆ ಆಲ್ರೌಂಡರ್, ಜಗನ್ನಾಥನ್ ಕರ್ಕಂಡ್ ಗಣೇಶನ್ ಬೇರೆ ತಂಡಕ್ ಕಳ್ಕಂಡೆ, ಕೋಟಿ ಚೆನ್ನಯ್ಯರಲ್ ಒಬ್ಬ ಆಬದಿ, ಇನ್ನೊಬ್ಬ ಈ ಬದಿ! ಬಾಬ ಬೇಕಿತ್ ನಂಗೆ, ಟಾಸ್ ಕಳ್ಕಂಡ್ ಮೊದ್ಲ್ ಅವ್ರ್ ಕರ್ದ್ ಬಾಬನ್ ಕಳ್ಕಂಡೆ, ಪಿಟಿ ಪಿಟಿ ಸದಾಶಿವ, ಉದಯ ಆಕಡೆ, ಅರುಣ ನಮಗೆ.
ಟಾಸ್ ಗೆದ್ದ ಅವರದ್ ಬ್ಯಾಟಿಂಗ್, ಕತ್ಲಿ ಆದ್ರೆ ಬಾಲ್ ಕಾಂಬುದಿಲ್ಲ ಹಾಂಗಾಯ್! ನಾವ್ ಮಾಡ್ಕಾದ್ ಇಷ್ಟೇ, ಯಾರ್ಕರ್ ಇಲ್ಲ ಗೆರ್ಚಂಡಿ ಬಾಲ್ ಒವರ್ ಹ್ಯಾಂಡಲ್ ಹಾಕ್, ಮ್ಯಾಚ್ ಆಪ್ಕೋಯ್ ವಿಕೆಟ್ ಎಂದಿಗಿಂತ ದೂರ ದೂರ, ಹಾಂಗಾಯ್ ನಮ್ ಎಂದಿನ ಬೌಲಿಂಗ್ ಸಾಕಾಯ್ಲಿಲ್ಲ, ಬಾಬ ಗಟ್ಟಿ ಮೈನವ, ಬ್ಯಾಟ್ ಎತ್ತಿ ಬಾಲ್ ತಾಗಿರೆ ೪ ಅಥವಾ ೬ ರನ್, ಇಲ್ಲ ಬೌಲ್ಡ್. ನಮ್ ಶಕ್ತಿ ಸಾಕಾಗ್ದೇ, ಬಾಬನ್ ಬ್ಯಾಟಿಗೇ ಬಾಲ್ ಸಿಕ್ಕಿ ಹೊಡ್ದ್ ಹೊಡ್ದ್ ಚಚ್ಚಿಯ, ನನ್ ಓವರಿಗೆ ರನ್ ಜಾಸ್ತಿ ಅಂತ ಜಗನ್ನಾಥಂಗ್ ಕೊಟ್ರೆ ಅವನ್ ಬೌಲಿಂಗ್ ಕೂಡ ಲಗಾಡಿ ಹೊಯ್ತ್, ಬಾಬ ಒಬ್ಬನೇ ೩೬ ರನ್ ಮಾಡಿದ, ಮಧು ಕೂಡಾ ಆಡಿದ, ಕೊನೆಗೆ ಸದಾಶಿವ ಪಿಟಿಪಿಟಿ ಮಾಡಿ ಔಟಾಗದೇ ನಮ್ಮನ್ ಹಣ್ಗಾಯಿ ಮಾಡ್ದ, ಅವರ್ ಆಲ್ಔಟ್ ಆಪತಿಗೆ ೭೭ ರನ್, ಸೂರ್ಯ ಕಂತು ಸುರುವಾಯಿತ್!
ನಮ್ಗ್ ಒಂಚೂರ್ ಗೆಲ್ಲುದ್ ಕಷ್ಟವೇ ಅನ್ಸ್ತ್! ಆದ್ರ್ ಹಳೇ ಮ್ಯಾಚಲ್ಲ್ ನಾ ಒಬ್ನೇ ೪೦ ಬಡಿದಿದ್ದನಲ್ಲ, ಜೊತೆಗೆ ಜಗನ್ನಾಥ ೨೦ ಸೇರಿಸಿ ಉಳಿದವರ್ ಅವರ್ ಕಾಣಿಕೆ ಕೊಟ್ರ್ ಸರಿ ಅಂತ ಧೈರ್ಯ, ನಾ ಓಂದ್ ಡೌನಿಗೆ, ಜಗನ್ನಾಥ ಎರಡನೇ ಡೌನಿಗೆ! ಓಪನರ್ ಒಬ್ಬ ಔಟಾದ, ನಾ ಬಂದೆ, ರಕ್ಷಣಾತ್ಮಕ ಆಟ, ಕತ್ತಲಾಪುಕ್ ಸುರು, ಬಾಲ್ ಸರಿ ಕಾಣಿದಿಲ್ಲ, ಆ ಕಡೆ ಕ್ಯಾಪ್ಟನ್ ಮಧು ಬೌಲಿಂಗ್ ಬದಲಾಯಿಸಿ ಗಣೇಶನ್ ತಂದ, ಗಣೇಶನ್ ಬೌಲಿಂಗಲ್ ಬಾಲ್ ಬಪ್ಪುಕಿಂತ ಅವನ್ ಸ್ಟೈಲೇ ಹೆದ್ರಿಕೆ ಹುಟ್ಸುದ್, ನಾ ಅವನ್ ಬಿಟ್ ಬಾಲ್ ಮಾತ್ರ ಹುಡುಕಿ ಕಂಡೆ, ಕತ್ತಲಲ್ ಸರಿ ಕಾಣುದಿಲ್ಲ, ಆದ್ರೂ ಹೊಯಿಗಿ ಗುಡ್ಡಿಲ್ ಅದ್ ಪಿಚ್ ಆಯಿ ಅತ್ ಇತ್ ಖುಷಿ ಬಂದಾಂಗ್ ತಿರ್ಗಿ ಬ್ಯಾಟಿಗೆ ಸಿಕ್ಕುದಿಲ್ಲ, ಇದ್ ಶೆಟ್ಗೆದ್ದಿಲ್ ಆಡಿದಷ್ಟ್ ಸುಲಭ ಇಲ್ಲ ಅನ್ಸ್ತ್. ಒಂದ್ ಬಾಲ್ ಹೀಂಗೇ ಅಡ್ಡ ದಿಡ್ಡ ಬಂದ್ ನಾ ಬೀಸಿದ್ ಬ್ಯಾಟ್ ತಪ್ಸ್ಕಂಡ್ ನನ್ ವಿಕೆಟ್ ಬಿತ್! ನಮ್ ತಂಡದವರೆಲ್ಲ ಗಪ್ಚಿಪ್! ಆದ್ರೂ ಜಗನ್ನಾಥ ಇದ್ನಲ್ಲ, ಅವ ಈಗ ನಲವತ್ ಮಾಡಿರೆ ಸರಿ, ಸರಿ ಬಾಲ್ ಕಂಡ್ ಹೊಡೆ, ಅಂದೆ, ಜಗನ್ನಾಥ ಹೋದವ ಹಾಂಗೆ ಬಂದ, ಗಣೇಶನ್ ಅವ್ನೀಗೆ ಹ್ಯಾಂಗ್ ಅಂತ್ ಗೊತ್ತಿಲ್ಲದ್ ಇನ್ನೊಂದ್ ಗೂಗ್ಲಿ ಹಾಕಿದ್ ಅವನ್ ಬಲಿ ತಕ್ಕಂಡಿತ್, ಮತ್ತೊಬ್ಬ ಹೋಯ್ ಅದೇ ಓವರಿನಲ್ಲ್ ಔಟ್ ಆಯಿ ಗಣೇಶಂಗ್ ಹ್ಯಾಟ್ರಿಕ್ ಸಿಕ್ಕಿತ್, ಬೇರೆ ತಂಡದವ್ರ್ ಹಾರಾಟದಲ್ಲ್ ನಮ್ಮವರ್ ದಂಗ್ ಬಡಿದ್ ನೆಲ ಕಚ್ಚಿದ್ರ್! ಆವತ್ ಗಣೇಶಂಗ್ ನಮ್ ಬಿ ಎಸ್. ಚಂದ್ರಶೇಖರ್ ೧೯೭೧ರಲ್ ಲಾಯ್ಡ್ ಟೆಸ್ಟಿನಲ್ ಮಾಡಿದ್ ಮಂತ್ರಗಾಳಿ ಬೀಸಿತ್, ಅವ ಬಿಟ್ ಬಾಲಿಗೆ ಜಕ್ಣಿ ಹಿಡ್ದ್ ಆ ಬದಿ ಈ ಬದಿ ತಿರ್ಗಿ ಕಡೀಗ್ ಅಡ್ಡಿಂದ್ ಬಂದ್ ವಿಕೆಟ್ ಹಾರ್ಸ್ತಿತ್! ಗಣೇಶ ಒಬ್ಬನೇ ೫ ವಿಕೆಟ್ ತೆಗೆದ, ಅವರ್ ೭೭ ರನ್ನಿಗೆ ನಾವ್ ಬೇಗ ೧೧ ರನ್ ಮಾತ್ರ ಮಾಡಿ ಮಲ್ಕಂತ್, ಬೇಗ ಬೇಗ ಔಟಾದ್ ಕಾರಣ, ಬೆಳ್ಕ್ ಸರಿ ಇಲ್ಲ, ಆಟ ನಾಳಿ ಮುಂದರ್ಸುವಾ ಅಂತ್ ಹೇಳುಕೇ ಚಾನ್ಸ್ ಸಿಕ್ಕ್ಲಿಲ್ಲ!
ಎದುರಾಳಿದ್ ೭೭ ರನ್ ಆದಾಗ್ಳೆ, ನಾವ್ ಗೆಲ್ಲುದ್ ಕಷ್ಟ ಅಂತಿತ್, ಆದ್ರ್ ಈ ರೀತಿ ಹೀನಾಮಾನ ಆಯ್ ಸೋಲತ್ ಅಂತೆಣ್ಸಿರ್ಲಿಲ್ಲ! ಆಟ ಎಲ್ಲ ಆದ್ರ್ ಮೇಲ್ ನಾವೆಲ್ಲ ಒಟ್ಟಿಗೆ ಮನಿಗೋಪತಿಗೆ ಹೆಚ್ ಮಾತ್ಕತಿ ಇಲ್ಲ, ಗೆದ್ದವ್ರೂ ಮಿಣ್ಣಗೆ, ಕಾರಣ ನಾವ್ ಇಷ್ಟ್ ಕಮ್ಮಿಗೆ ಸೋತದ್ ಅವ್ರಿಗೂ ಒಂದ್ ರೀತಿ ಆಶ್ಚರ್ಯ, ಬ್ಯಾಜಾರ್, ಈ ಬಡಪಾಯಿಗಳು ಇಷ್ಟ್ ಕೆಳಮಟ್ಟದಲ್ ಸೋತ್ರಲ್ಲ ಅಂತ ಅವ್ರದ್ದೂ ಮೌನವೃತದ ಸಹಕಾರ! ನಂಗ್ ಒಂದ್ ಬದಿ ಈ ಪಾಟಿ ಸೋತ್ ಶಾಕ್, ಇನ್ನೊಂದ್ ಸೊನ್ನಿ ಹೊಡದ್, ಮತ್ತೊಂದ್ ನಾ ಕೈಬಿಟ್ಟ್ ಗಣೇಶನತ್ರ ಪೆಟ್ ತಿಂದದ್, ಮತ್ ಬಾಬನಿಗೆ ಸರಿ ಯಾರ್ಕರ್ ಬಾಲ್ ಹಾಕುಕೆ ಬಿರಾಂಬ್ರ ಆಹಾರದ್ ತಾಕತ್ ಸಾಕಾಗದೇ ಇದ್ದುದ್, ಆದ್ರೂ ಒಂಚೂರ್ ನನ್ನ ಸ್ನೇಹಿತ ಗಣೇಶನ್ ಬಗ್ಗೆ ಕುಸಿ ಆಯ್ತ್, ಅವಂದೂ ಒಂದ್ ದಿನ ಬಂತಲ್ಲಾ ಅಂತ, ಆದ್ರ್ ಅದ್ ನನ್ನ್ ಬ್ಯಾಜಾರಲ್ ಮುಳುಗಿ ಹೋದ್ ಮತ್ ಮ್ಯಾಲ್ ಬರ್ಲೇ ಇಲ್ಲ!
ಆ ವರ್ಷದ್ ಮಕ್ಕಳ ದಿನಾಚರಣೆಯಲ್ ಬೇರೆ ಬೇರೆ ಬಹುಮಾನ ಗೆದ್ರೂ ಕೂಡಾ, ಮುಖ್ಯವಾಗಿ ನನಗೇ ಮೀಸಿಲಿದ್ದ ಫಾನ್ಸಿಡ್ರೆಸ್ (ಕುಡುಂ ಕುಡುಂ ಹಾಲಕ್ಕಿ ವೇಷ) ಗೆದ್ರೂ ಕೂಡಾ, ಒಂದ್ ಕೊರತೆ ಉಳ್ದೇ ಹೋಯ್ತ್, ಒಬ್ಬ ನಾಯಕನಾಗಿ ನನ್ನ ತಂಡ ಸೋಲುಕೆ ನಾನೇ ಕಾರಣ ಅಂತ! ಈ ಕೊರತೆಯಲ್ಲೇ ನನ್ನ ನಾಯಕತ್ವ ಬದುಕಿನಲ್ಲಿ ಒಂದು ರೀತಿಯಲ್ಲಿ ಕಮರಿಯೇ ಹೋಯಿತ್ ಅಂತ್ ಈಗ ಗೊತ್ತಾತ್!
ಬದುಕಲ್ ಮತ್ ನಾ ಸೋಲು ಸುರು ಮಾಡಿದ್ ಮೂವತ್ ವರ್ಸದ್ ಮ್ಯಾಲೇ! ಅದ್ರಲ್ ಯಾವ್ ಸೋಲಿಗೂ ನಾ ಹೆದ್ರಿನವನಲ್ಲ, ಅದರ್ ಬಗ್ಗೆ ತಲಿಬಿಸಿ ಮಾಡಿದವ ಅಲ್ಲ, ಕಾರಣ ಇಷ್ಟೇ, ಈ ಪಿಟ್ಗೋಸಿ ಕ್ರಿಕೆಟ್ ಮ್ಯಾಚಿನಲ್ ಸೋತ ಅನುಭವಿಸಿದ್ದ್ ಭಾರಕ್ಕೆ ಹೋಲಿಸಿದ್ರೆ, ಉಳಿದವ್ ಯಾವುದು ಕೂಡಾ ಗಣನೆಗೇ ಇಲ್ಲ, ಮತ್ ಈ ಭಾರ ಅನುಭವಿಸಿ ಒಂದ್ ರೀತಿ ನಾ ಜಡ್ ಕಟ್ಟಿ ನಾಯಕನ ಬದ್ಲಿಗೆ ತತ್ವವಾದಿಯೇ ಆಯ್ ಹೋದೆ, ಇಡೀ ಬದ್ಕಿಗೆ.
ಮಕ್ಕಾಳ್ ಕ್ರಿಕೆಟ್ ಮ್ಯಾಚ್ ಆಡುದ್ ನೋಡಿರೆ ನಮ್ಗೆ ಕುಸಾಲ್, ಅವ್ಕೆ ಭಾರತ ಪಾಕಿಸ್ತಾನದ್ ಮಧ್ಯದ್ ಆಟಕ್ಕಿಂತ ದೊಡ್ಡದಿರತ್ ಆ ಪಂದ್ಯ! ಅಲ್ ಏನಾತ್ ಅಂಬುದ್ ಅವರ್ ಬದುಕನ್ನೇ ರೂಪಿಸುವಷ್ಟ್ ಗಾಳ್ಸೋಂಕ್ ಈ ಮಕ್ಳ್ ಕ್ರಿಕೆಟ್ ಪಂದ್ಯದಲ್ ಇರತ್!
ಹಾಂಗಾಯ್ ನಿಮ್ಮಕ್ಳ್ ಕ್ರಿಕೆಟ್ ಮ್ಯಾಚಿಗೆ ಹೋಪ್ ಮದ್ಲ್, ಬಂದ್ ಮ್ಯಾಲ್ ಸಲ್ಪ ಪಿರೀತಿದ್ ಗಮನ ಕೊಡಿ, ಗೆಲ್ಲಿ, ಸೋಲಲಿ, ಅವರಿಗೆ ಸಿಕ್ಕಿದ್ ಪಾಠ ಸರಿ ಇತ್ತ ಕಾಣಿ! ಇಲ್ದೀರ್ ಸರಿ ಮಾಡ್ಸಿ ಕೊಡಿ!
ಅಷ್ಟ್ ಹೇಳುಕ್ ಇಷ್ಟ್ ದೊಡ್ ಕತಿ ಮಾಡಿದ್!
No comments:
Post a Comment