Sunday, April 10, 2016
ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ - ಪಾ.ನ.ಉ. ೦೦೦೧ - ಅಸಾಮಾನ್ಯ ಭವಿಷ್ಕಕ್ಕೊಂದು ಸಾಧಾರಣ ಮುನ್ನುಡಿ
ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ
ಅತ್ತ ಕಾರವಾರದಿಂದ ಇತ್ತ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ತನಕ ಪೂರ್ವದಲಿ ಪಷ್ಚಿಮ ಘಟ್ಟದ ತನಕ ಹಬ್ಬಿರುವ ನಾಡೇ ಪರಶುರಾಮ ಸೃಷ್ಟಿ ಎನ್ನಿಸಿಕೊಳ್ಳುತ್ತದೆ.
ಈ ನಾಡು ಭುವಿಗಿಳಿದ ಸ್ವರ್ಗ. ಕಡಲು, ಹೊಯಿಗೆ ಕಲ್ಲುಗಳ ಗುಡ್ಡ, ಹೊಲ, ಹಾಡಿ, ತೋಟ, ಹೊಳೆ ಹಿನ್ನೀರು ನದಿಗಳು, ಕಾಡುಗಳು, ನೀರಿನ ಝರಿಗಳು, ಅಳಿವೆ, ಕುದುರು ಬೆಂಗ್ರೆಗಳು ಹೀಗೆ ಭೂರಮೆಯ ಸೌಂದರ್ಯವೇ ಸಾಕು ಸ್ವರ್ಗ ಎನಿಸಲು. ಸಾವಿರ ದಾಟುವ ದೇವಸ್ಥಾನಗಳು ಲಕ್ಷ ದಾಟುವ ದೈವ ಸ್ಥಾನಗಳು ಇಲ್ಲಿನ ದೈವಿಕ ಶಕ್ತಿಯ ಜಾಗ್ರತೆಗೆ ಸದಾ ಸಹಕರಿಸಿದರೆ, ಅದಕ್ಕೆ ಇಂಬು ಕೊಡುವ ಇಗರ್ಜಿಗಳು, ಮಸೀದಿಗಳು ಇಲ್ಲಿನ ಬದುಕಿನ ವೈವಿಧ್ಯಕ್ಕೆ ನಾಂದಿ ಹಾಡಿವೆ. ಎಂದಿಗೂ ನಡೆಯುವ ದೈವಾರಾಧನೆ ಜೊತೆಗೆ ಸಾಂಸ್ಕೃತಿಕವಾಗಿ ಬಡಗು ಮತ್ತು ತೆಂಕು ಯಕ್ಷಗಾನ ವಿಜೃಂಭಿಸಿ ಅಭೂತಪೂರ್ವ ನಿತ್ಯೋತ್ಸವವನ್ನು ಶತಮಾನಗಳಿಂದ ನಡೆಸಿಕೊಂಡು ಬರುತ್ತಿವೆ. ಶಾಸ್ತ್ರೀಯ ಸಂಗೀತ ಈ ಮಣ್ಣಿನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುತ್ತಿದೆ. ಕೃಷಿ, ಹೈನುಗಾರಿಕೆ, ಗಣಿಗಾರಿಕೆ, ಕೈಗಾರಿಕೆ, ಬಂದರು, ಸಾಫ್ಟ್ವೇರ್, ಆಯಾತ ನಿರ್ಯಾತಗಳು, ಮುಂಬೈ, ಗಲ್ಫ್, ಅಮೆರಿಕಾ ಜೊತೆಗಿನ ಸಂಬಂಧಗಳು ಸೇರಿ ವಾಣಿಜ್ಯವು ವಿಜೃಂಭಿಸಿದರೆ ಪ್ರವಾಸೋದ್ಯಮವು ಉಡಾವಣೆಯ ಮೈದಾನಕ್ಕೆ ಬಂದು ನಿಂತಿದೆ. ಹಳೆಯದು ಹೊಸದರ ನಡುವೆ ಸಂಘರ್ಷ, ಸಹಯೋಗ, ಹೊಂದಾಣಿಕೆಗಳು ಒಟ್ಟಿಗೇ ಮೇಳವಿಸಿದೆ.
ಈ ನಾಡಿನಲ್ಲಿ ಸಾಕಷ್ಟು ಅಸಾಮಾನ್ಯ ವ್ಯಕ್ತಿಗಳು ಬಂದು ಹೋದರು. ಕದಂಬರು, ವಿಜಯನಗರದ ಸಾಮಂತರು, ರಾಣಿ ಅಬ್ಬಕ್ಕ, ಕೋಟಿ ಚೆನ್ನಯ್ಯರು, ಮಧ್ವಾಚಾರ್ಯ ಮತ್ತು ವಾದಿರಾಜರಂತಹ ಶಿಷ್ಯ ಪರಂಪರೆಯವರು, ಕನಕ ಪುರಂದರಾದಿ ಸಂಚಾರಿ ಹರಿದಾಸರು, ಮುದ್ದಣ ಪಾರ್ತಿಸುಬ್ಬ ಹೊಸ್ತೋಟರಂತಹ ಪ್ರತಿಭಾವಂತರು, ಕಡಲ ತೀರದ ಭಾರ್ಗವನಾಗಿ ಶಿವರಾಮ ಕಾರಂತರು, ಅವರಿಗೆ ಸ್ಫೂರ್ತಿಯಾದ ಗೋವಿಂದ ಪೈಗಳು, ಪಂಜೆ ಮಂಗೇಶರಾಯರು, ಮೊನ್ನೆ ಮೊನ್ನೆ ಕಣ್ಮರೆಯಾದ ಕಯ್ಯಾರ ಕಿಂಚಣ್ಣ ರೈಗಳು, ಅನೇಕ ಅಸಾಮಾನ್ಯ ಕಲಾವಿದರುಗಳು ಮತ್ತು ಬರಹಗಾರರು, ಮಣಿಪಾಲವನ್ನು ಸೃಷ್ಟಿಸಿದ ಪೈಗಳು, ಈಗ ರಾಷ್ಟ್ರೀಕರಣವಾಗಿ ಮೆರೆಯುತ್ತಿರುವ ಬ್ಯಾಂಕುಗಳನ್ನು ಸೃಷ್ಟಿಸಿದ ಮುತ್ಸದ್ದಿಗಳು, ಆಧುನಿಕ ಭಾರತದತ್ತ ಈ ನೆಲವನ್ನು ಜೋಡಿಸಲು ಶ್ರಮಿಸಿದ ಮಲ್ಯರು ಇತ್ಯಾದಿ ಇಲ್ಲಿ ನಾನು ಹೇಳಿದಕ್ಕಿಂತ ಬಿಟ್ಟದ್ದೇ ಜಾಸ್ತಿ!
ಇಂದಿನದು ಅಂತರ್ಜಾಲ ಮತ್ತು ಸಾಮಾಜಿಕ ತಾಣದ ಯುಗ. ಜನಸಾಮಾನ್ಯನಿಗೆ ಅಭೂತಪೂರ್ವವಾದ ಅಭಿವ್ಯಕ್ತಿ ಸ್ವಾತಂತ್ರ್ಯ! ಇರುವವರ ಮತ್ತು ಇಲ್ಲದಿರುವವರ ನಡುವಿನ ಕಂದಕ ಈ ಮೂಲಕ ಕಿರಿದಾಗುತ್ತಿರುವುದು ಒಂದಾದರೆ, ಇಲ್ಲದಿರುವವರ ಸಾಮಾನ್ಯ ಬದುಕಿನ ಶ್ರೀಮಂತಿಕೆ ಹೆಚ್ಚಿನ ಪ್ರಯತ್ನವಿಲ್ಲದೇ ಈ ಮಾಧ್ಯಮಗಳ ಮೂಲಕ ಹೆಚ್ಚುವಲ್ಲಿ ಅಪೂರ್ವ ಅವಕಾಶ. ಈ ಮಣ್ಣಿನ, ಈ ಮಣ್ಣಿನಿಂದ ಹುಟ್ಟಿ ದೇಶ ವಿದೇಶಗಳ ಮೂಲೆಮೂಲೆಗಳಿಗೆ ಹೋದ ಇಲ್ಲಿನವರ ನಡುವಿನ ಸಂಪರ್ಕ, ಸಹಯೋಗ, ಆವಿಷ್ಕಾರ ಸಾಧ್ಯತೆಗಳು ಗಗನವನ್ನು ಮುಟ್ಟುತ್ತಿವೆ. ಭಾರತ ವರ್ಷ ಮತ್ತು ಜಾಗತಿಕ ವಿದ್ಯಮಾನಗಳಲ್ಲಿ ಪರಶುರಾಮ ಸೃಷ್ಟಿಯು ಅಭೂತಪೂರ್ವ ನಾಯಕತ್ವ ಮತ್ತು ಸೃಜನಶೀಲತೆ ತರುವಲ್ಲಿ, ಇಲ್ಲಿನ ಅಪೂರ್ವತೆ, ಸಹೃದಯತೆ, ವಿಶ್ವಮಾನವತೆ, ವಾಣಿಜ್ಯೋದ್ಯಮ ಮನೋಭಾವ ಇತ್ಯಾದಿ ತಾಂಡವದ ತಾರಕಕ್ಕೆ ಏರುವತ್ತ, ಇಲ್ಲಿನ ಜನಸಾಮಾನ್ಯರ ಆತ್ಮವಿಶ್ವಾಸ, ಅಭಿವ್ಯಕ್ತಿ, ಸಾಧನೆ ಮತ್ತು ಸಹಯೋಗದ ಮನೋಭಾವ, ಬದುಕಿನ ಧ್ಯೇಯೋದ್ದೇಶಗಳು ಹೆಚ್ಚುವಲ್ಲಿ ಈ ಹೊಸ ಮಾಧ್ಯಮಗಳು ಅತೀ ಸಹಕಾರಿ. ಹಿಂದಿನ ಮತ್ತು ಮುಂದಿನ ನಡುವಿನ ಎಂದಿನ ಅತಿರೇಕದ ವೇಗದ ಬದಲಾವಣೆಯ ಓಟದಲ್ಲಿ ನಮ್ಮ ಗಟ್ಟಿತನದ ಅಭಿವ್ಯಕ್ತಿಗಳು ನಮ್ಮನ್ನು ಉಳಿಸಿ ಬೆಳೆಸುವುದಲ್ಲದೇ ಬದಲಾವಣೆಯ ಓಟದಲ್ಲಿನ ಅನಿವಾರ್ಯತೆಯ ಪರಿವರ್ತನೆಯ ಕಹಿಯನ್ನು ಹಾಗಲಕಾಯಿ ರುಚಿಯಂತೆ ಉಣಬಡಿಸಲು ಸಹಕಾರಿ.
ಆ ಕಾರಣವೇ, ಇದೊಂದು ಅಭೂತಪೂರ್ವವಾದ ಯೋಜನೆಗೆ ಹೇತು, ಸಾಮಾನ್ಯರಿಂದ ಸಾಮಾನ್ಯವಾಗಿ ಪ್ರಾರಂಭವಾಗುವ ಅಭಿವ್ಯಕ್ತಿಗಳು ಇಲ್ಲಿ ಬಂದು ಸೇರಲಿವೆ. ಈ ಅಭಿವ್ಯಕ್ತಿಗಳು ಕ್ರಮೇಣ ಅಸಾಮಾನ್ಯತೆಯ ತಾರಕಕ್ಕೆ ಮುಟ್ಟಲಿವೆ. ಕನ್ನಡ, ತುಳು, ಕೊಂಕಣಿ, ಆಂಗ್ಲ, ಸಂಸ್ಕೃತ, ಹಿಂದಿ, ಮಲೆಯಾಳ ಎಲ್ಲಾ ಭಾಷೆಗಳಲ್ಲಿ ಈ ಅಭಿವ್ಯಕ್ತಿಗಳು ಹರಿದು ಬಂದು ಸೇರಲಿ. ಈ ಅಭಿವ್ಯಕ್ತಿಗಳ ಮೂಲಕ ಇಲ್ಲಿನ ತಾಂಡವದ ತಾರಕದ ಎಂದಿನ ನೃತ್ಯೋತ್ಸವಕ್ಕೆ ಹೊಸ ಇಂಬು ಸಿಗಲಿ, ಈ ನಾಡಿನ ಸೃಷ್ಟಿಕರ್ತ್ರ ಪರಶುರಾಮರಿಗೆ "ನಿತ್ಯೋತ್ಸವ"ವೇ ಎಂಬಂತೆ ವಿಜ್ರಂಭಿಸಲಿ. ಕಡಲ ತೀರದ ಭಾರ್ಗವನೆನಿಸಿದ ಕಾರಂತರನ್ನು ಮೀರಿಸುವ ಹೊಸ ಭಾರ್ಗವರು ಸಾವಿರ ಸಾವಿರವಾಗಿ ಎಲ್ಲಾ ಕ್ಷೇತ್ರಗಳಿಂದಲೂ ಹುಟ್ಟಿ ಬರಲಿ.
ನಿಮ್ಮ ಮಣ್ಣಿನ, ಕೇರಿಯ, ಊರಿನ, ಬದುಕಿನ ಸತ್ವಯುತವಾದ, ನಿಮಗೆ ಮತ್ತು ಇತರರಿಗೆ ಬೆಳಕನ್ನು ಕೊಟ್ಟ, ಸ್ಫೂರ್ತಿಯ ಬುಗ್ಗೆಯಾದ ಅನುಭವ, ಕಲ್ಪನೆ ಸೇರಿದ ಕಥನಗಳು, ಎಲ್ಲ ರೀತಿಯ ಬರಹಗಳು ನಿಮ್ಮ ಪೇಜುಗಳಲ್ಲಿ ನಿತ್ಯವೂ ಹರಿದು ಬರಲಿ. ಈ ಸಹಯೋಗಕ್ಕಾಗಿ, "ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ" ಎಂಬ ತಲೆಬರಹದಿಂದ ಮೂಡಿ ಬರಲಿ. ನಿಮ್ಮ ಬರೆವಣಿಗೆ ಸಾವಿರಕ್ಕೂ ಮೀರುವುದರಿಂದ, ಕ್ರಮಸಂಖ್ಯೆಯನ್ನು ನಮೂದಿಸಿ.
ಉದಾಹರಣೆಗೆ, ಈ ಮುನ್ನುಡಿಯು ಈ ರೀತಿಯಾಗಿ ನಮೂದಿಸಲ್ಪಡುತ್ತದೆ.
ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ - ಪಾ.ನ.ಉ. ೦೦೦೧ - ಅಸಾಮಾನ್ಯ ಭವಿಷ್ಕಕ್ಕೊಂದು ಸಾಧಾರಣ ಮುನ್ನುಡಿ
ನಿಮ್ಮ ಬರಹಗಳು ನಿಮ್ಮ ಪೇಜುಗಳಲ್ಲಿ ರಾರಾಜಿಸುವುದಲ್ಲದೇ ಈ ಬ್ಲಾಗಿನಲ್ಲೂ ಸೇರಿಕೊಳ್ಳಬಹುದು. ಆ ಕುರಿತು ಈ ಸಂಪರ್ಕಕ್ಕೆ ಬರಹ ಇಲ್ಲಾ ಬರಹದ ಕೊಂಡಿಯನ್ನು ಕಳಿಸುತ್ತಿರಿ.
ಈ ನಿತ್ಯೋತ್ಸವದ ಹುಟ್ಟು, ಬೆಳವಣಿಗೆ, ಸಂಘಟನೆ, ಅಭಿವ್ಯಕ್ತಿ, ಶ್ರವಣ, ವೀಕ್ಷಣೆಗೆ ಸಹಕರಿಸುವ ಎಲ್ಲಾ ವಿಶ್ವಬಂಧುಗಳಿಗೆ ಪ್ರೀತಿ ಸ್ನೇಹ ಗೌರವಗಳ ಪ್ರಣಾಮಗಳು!
Subscribe to:
Post Comments (Atom)

No comments:
Post a Comment