Original post: https://www.facebook.com/notes/nataraja-upadhya/%E0%B2%95%E0%B3%81%E0%B2%82%E0%B2%9C%E0%B2%BF-%E0%B2%B8%E0%B2%BE%E0%B2%AF%E0%B2%BF%E0%B2%AC%E0%B3%8D%E0%B2%B0%E0%B3%8D-%E0%B2%95%E0%B2%A5%E0%B2%BF/10154683835672738
ನಮ್ಮೂರ್ ಪಾರಂಪಳ್ಳಿ ಪಡುಕೆರಿ, ಒಂದ್ ಬದಿ ಸಮುದ್ರ, ಇನ್ನೊಂದ್ ಬದಿ ಹಿನ್ನೀರ್ ಹೊಳಿ, ಹಂಗಾರ್ಕಟ್ಟಿ ಬದಿ ಕೋಡಿಲ್ ಸೀತಾ ನದಿ ಬಂದ್ ಸೇರುದ್ ಅಳಿವಿಯಿಂದ ಬರು ಹಿನ್ನೀರ್ ಹೊಳಿ, ಸಮುದ್ರ ಬದಿ ಗದ್ದಿ, ಗದ್ದಿ ಆದ್ ಮೇಲ್ ಫಿಶರಿಸ್ ರಸ್ತಿ, ಅದಾದ್ ಮೇಲ್ ಹೊಯಿಂಗಿ ಗುಡ್ಡಿ (ಹೊಯಿಂಗಿ ಅಷ್ಟೂ ಎಲ್ಲರೂ ಸೇರಿ ಕೇರಳಕ್ ಮಾರ್ಕಂಡ್ ತಿನ್ಕಂಡ್ ಈಗ ಗುಡ್ಡಿ ಇಲ್ಲ), ಗುಡ್ಡಿ ಕೆಳಗ್ ಕೇರಿ, ಕೇರಿ ದಾಟಿ ಗದ್ದಿ, ಗದ್ದಿ ದಾಟಿ ಹಿನ್ನೀರ್ ಹೊಳಿ, ಅದಕ್ ಒಂದ್ ಮುರ್ಕ್ ಸಂಕ ಇದ್ದದ್ ಹೋಯ್ ಈಗ ಬ್ರಿಜ್ ರಸ್ತಿ. ಅದಾದ್ ಮೇಲ್ ಮತ್ತ್ ಗದ್ದಿ, ಚೂಂಚ್ ಮನಿ, ವಿಷ್ಣುಮೂರ್ತಿ ದೇವ್ಸ್ಥಾನ, ಮತ್ ಗದ್ದಿ, ಕಡಿಗ್ ಸಾಲಿಗ್ರಾಮ್ ಪ್ಯಾಟಿ, ಇದ್ ನಮ್ಮೂರ್!
ಕುಂಜಿ ಸಾಯಿಬ ನಮ್ಮೂರ್ನವನಲ್ಲ, ಪಕ್ಕದ್ ಕೋಡಿ ಕನ್ಯಾನದವ! ಹ್ವಾಯ್! ಪೆಟ್ ಒಂದ್ ತುಂಡ್ ಎರಡ್ ಅಂಬಾಂಗ್ ಒಂದೇ ಸರಿ ಸಾಯಿಬರ್ ಹೋಯ್ ಸಾಯಿಬ ಹೇಂಗಾಯ್ತ್ ಕೇಂಬ್ರ್ಯಾ! ಎಲ್ಲರೂ ಅವನ್ ಹಾಂಗೇ ಕರ್ದ್ರ್, ಅಪರೂಪಕ್ ಒಬ್ಬೊಬ್ಬರ್ ಎದ್ರ್ ಸಿಕ್ಕಿಯಾಗ್ "ಸಾಯಿಬ್ರ" ಅಂತ ಕರ್ದಿರ್, ಸಲಿಗೆ ಪ್ರೀತಿಗ್, ಗೌರವಕ್ಕಲ್ಲ!
ಕುಂಜಿ ಸಾಯಿಬ್ರ ಕಾಂಬಕ್ ಹ್ಯಾಂಗಿದ್ರ್ ಎಂದ್ ಹೇಳುದಾರೆ, ಫಕೀರಂಗ್ ೫೦ ವರ್ಷ್ ಮೀಯದೇ ಇದ್ರ್ ಎಂತ ಆತ್ ಹಾಂಗಿತ್. ಮೈ ಕಪ್, ಬಟ್ಟಿ ಕಪ್, ಅವರ್ ಜೊತಿಗೆ ಹೋಪ್ ಅವರ್ ಸಂಸಾರ (ಗೋಣಿ ಚೀಲದೊಳಗ್ ಇಪ್ಪುದ್) ಎಲ್ಲಾ ಕಪ್, ಅವರ್ ಕೊಡಿ ಕಪ್, ಚಪ್ಪ್ಲಿ ಕಪ್, ಗಡ್ಡ ತಲಿ ಕೂದ್ಲ್ ಬಿಳಿ ಇದ್ದದ್ ಕಪ್ಪ್, ತಲಿಗ್ ಕಟ್ಕಂಡ್ ಸಾಯಿಬ್ರ ರುಮಾಲ್ ಸತಿ ಕಪ್!
ನಂಗ್ ಇವ್ರ ಹ್ಯಾಂಗ್ ಲಾಯಿಕ್ ಗೊತ್ತಿತ್ ಕೇಂತ್ರ್ಯಾ! ನಮ್ಮನಿಲ್ ಒಂದ್ ದಿನಸಿ ಅಂಗಡಿ ಇತ್ತೇ, ನಾನೂ ಕೆಲ್ಸಕ್ಕಿದ್ದೆ. ನಮ್ಮ್ ಅಂಗ್ಡಿ ಕತಿ ಬ್ಯಾರೆ ಧಾರಾವಾಹಿ ಆಯ್ ಬರೆತೆ ಆಯ್ತಾ!
ನಮ್ ಸಾಯ್ಬ್ರ ಬಂದ್ರ್ ಅವರ್ ಸಂಸಾರ ಎಲ್ಲ ಹರಡ್ಕಂಡ್ ಕೂತ್ಕಕಂತಿದ್ರ್, ಅವರದ್ ಯಾಪಾರ ಇತ್! ಹತ್ ಪೈಸ್ ಸಕ್ರಿ, ಐದ್ ಪೈಸ್ ಉಪ್, ನಾಕಾಣಿ ಚುಮ್ನೆಣ್ಣಿ, ಹತ್ ಪೈಸ್ ಬೆಲ್ಲ, ಹತ್ ಪೈಸ್ ಚಾಪುಡಿ, ಹತ್ ಪೈಸ್ ತೆಂಗಿನೆಣ್ಣಿ ಹೀಂಗೆ! ನಮ್ಮಪ್ಪಯ್ಯಂಗ್ ಅವನ್ ಕಂಡ್ರೆ ಸ್ವಲ್ಪ ಪಿರೀತಿ, ಪಾಪ ಎಂಥೇಳಿ ಹೆಚ್ಚೆಚ್ಚ್ ಮಾಡಿ ಕೊಡ್ತಿದ್ರ್! ಅವರ್ ಇಲ್ದಾಗ್ಳಿಗ್ ನಮ್ದೇ ದರ್ಬಾರ್, ನಮ್ಗ್ ಸ್ವಲ್ಪ ಅವನ್ ಬಾಯಿಗ್ ಕೋಲ್ ಹಾಕುದ್ ಅಂದ್ರೆ ಖುಸಿ, ಎಲ್ಲರಿಗ್ ಕೊಟ್ಟಾಂಗ್ ಸರೀ ತೂಕ ಮಾಡಿ ಕೊಡದ್, ಅವ ಮರ್ಕುದ್, ನಿಮ್ ಅಪ್ಪಯ್ಯ ಇದ್ದಿದ್ರ್ ಹೆಚ್ ಕೊಡ್ತ್ರ್, ನಾವ್ ಅವ್ನಿಗೆ ತಕ್ಕಡಿ ಮುಳ್ ತೋರ್ಸಿ ಸರಿ ಇತ್ ಅಮ್ಬುದ್, ಅವ್ ಪಾಪ, ಈ ಮಕ್ಕಳ್ ಕಟ್ಕಂಡ್ ಉದ್ಧಾರ ಆದಾಂಗ್ ಅಂಬ್ ಮುಖ ಮಾಡುದು, ನಮ್ಗ್ ಮಂಗನಾಡಿಸಿದ್ ಕುಸಿ!
ಕುಂಜಿ ಸಾಯಿಬ ಮೀಯುದೇ ಇಲ್ಲ, ಸಾಯಿಬ್ರ್ ಆಪ್ಕೋಗಿ ಕೆಳಗಿನ್ ಜಾಗ ಅಂಚೂರ್ ಮೀಯ್ತನೋ ಏನೋ, ಕಾಣ್ಲಿಲ್ಲ, ಅದೂ ಹೇಳುಕ್ ಆತ್ತಿಲ್ಲ, ಹಾಂಗಾಯ್ ಅವ ಬಂದ್ ಹೋಪಲೊರಿಗ್ ಒಂದ್ ರೀತಿ ಘಮ್ ವಾಸ್ನೆ, ನಂಗ್ ವಾಸ್ನಿ ತಕಂಡ್ ತಕಂಡ್, ಪೆಟ್ರೋಲ್ ವಾಸ್ನಿ ಅಭ್ಯಾಸ ಆದಾಂಗ್ ಮೈಗ್ ಹಿಡ್ದ್ ಹೋಯಿತ್, ನಮ್ಮಮ್ಮ ಒಳಗಿಂದ್ ಬೈಯ್ತಾ ಇತ್ರ್! ಮಳಿ ಬಂದ್ರ್ ಅಂತೂ ಜಾಸ್ತಿ ವಾಸ್ನಿ, ಎಲ್ಲಾ ಸಂಸಾರ ಎಲ್ಲಾ ವದ್ದಿ, ಮಳಿ ಬಪ್ಕೋಯ್ ಅವನ್ ಸರಂಜಾಮು ಅಂಗಳ ಬಿಟ್ ಅಂಗಡಿ ಚಾವಡಿಗೇ ಬತ್ತ್, ಅಲ್ಲಿಂದ್ ವಾಸ್ನಿ ನಮ್ಮ್ ಅಂಗಡಿ ಬಾಗ್ಲಿಂದ್ ಮನಿಯೊಳ್ಗೂ ಸೀದಾ ಬತ್, ನಮ್ಮ್ ಅಮ್ಮ ಬಯ್ಯುದ್ ಅಷ್ಟೇ, ಅವನ್ ಸಂಸಾರಕ್ಕ್ ಒಂದ್ ದಿನವೂ ತೊಂದ್ರಿ ಕೊಟ್ಟದ್ ಇಲ್ಲ! ಈ ಬದಿ ಅಮ್ಮ ಮಣಮಣ ಮನಿಯೊಳ್ಗಿಂದ ಬಯ್ತಾ ಇತ್ರ, ಅವ ತಲಿ ಕೆಳ್ಗ್ ಹಾಕಂಡ್ ಸಂಸಾರ ಎಲ್ಲಾ ಸೇರ್ಸ್ತಾ ಇರ್ತಾ, ಅವ್ನಿಗೆ ಅಮ್ಮ ಬಯ್ಯುದ್ ಜೋಗುಳ ಹಾಡಿಯಾಂಗ್ ಇರತ್, ನಮ್ಮ್ ಅಮ್ಮಂಗ್ ಒಂದ್ ಅರ್ಧ ಗಂಟಿ ಬಯ್ದ್ ಒಂದ್ ರೀತಿ ದಿನದ್ ಜಂಜಡದ್ ಟೆನ್ಷನ್ ಎಲ್ಲಾ ಹೋಯ್ ಒಂದ್ ರೀತಿ ನೆಮ್ಮದಿ! ಇಷ್ಟೆಲ್ಲಾ ಬಯ್ಸ್ಕಂಡೂ ಅಮ್ಮ ಹೊರಬಂದಾಗ್ಳಿಗ್ ಏನಾರೂ ಕೊಡಿ ಅಂತ, ಸಣ್ಣ್ ನಗಿ ಇರತ್! ಅಮ್ಮನೂ ಇನ್ನಷ್ಟ್ ಬಯ್ದ್ ಏನಾರೂ ಕೊಡ್ತ್ಲ್, ಮಜ್ಜಿಗಿ (ಲೋಟ ಅವಂದೇ), ಅಪರೂಪಕ್ ಚಕ್ಕುಲಿ ಕೋಡ್ಬಳಿ (ಹಬ್ಬದ್, ಅವ ನೆನಪ್ ಮಾಡ್ತಾ), ಹೀಂಗೆ!
ಕುಂಜಿ ಸಾಯಿಬ ನಮ್ಮಂಗ್ಡಿಗ್ ಬಂದ್ರ್ ಗಡಿಬಿಡಿಲ್ ಬತ್ತೇ ಇಲ್ಲ, ಕಮ್ಮಿ ಅಂದ್ರ್ ಮೂರ್ ಗೆಂಟಿಯಾರೂ ಇರ್ತ! ಒಂದ್ ಗೆಂಟಿ ಸಂಸಾರ ಹರಡೂಕೆ, ಇನ್ನೊಂದ್ ಗೆಂಟಿ ಯಾಪಾರಕ್, ಮತ್ತೊಂದ್ ಗಂಟಿ ಸಂಸಾರ ಕಟ್ಟಿ ವಾಪಾಸ್ ಇಡುಕೆ, ಹಾಂಗಾಯ್, ಅವ ಬಂದಾಗ ಗಿರಾಕಿ ಇದ್ರೆ, ಎಲ್ಲ ಹೋಪ್ಕೆ ಕಾಯ್ತಾ, ನಮ್ಗೂ ಅದೇ ಸರಿ, ಅವನ್ ಯಾಪಾರ ಎಲ್ಲರ ಯಾಪಾರದ ಜೊತಿಗೆ ಆತಿಲ್ಲ, ಉದಾಹರಣಿಗೆ ನಾಕಾಣಿ ಚಿಮ್ನೆಣ್ಣೆ ಕೊಡ್ಕ್ ಅಂತ್ ಮಾಡಿ, ಅವ್ನ್ ಬಾಟ್ಲಿಗೆ ಕುಣೀಲ್ ಇಟ್ ಹಾಕಿರೆ, ಕೊಡ್ಸಿ ಕೊಡ್ಸಿ ಒಂದ್ ಹುಂಡ್ ಇಲ್ದಾಂಗ್ ಹಾಕ್, ನಮ್ ಮಕ್ಳ್ ಕರ್ಕರಿ ಬ್ಯಾಡ ಅಂಥೇಳಿ, ದೊಡ್ಡ್ ಕುಣ್ತಿಲ್ ಹಾಕಿ ಕೊಡಿ, ನಾನೇ ಹಾಕ್ಕಂತೆ ಅಂತ, ನಾವೂ ಹಾಂಗೆ ಮಾಡ್ತಿತ್ ಅವ್ನ ರಗ್ಳಿ ಬ್ಯಾಡ ಅಂತ! ತೆಂಗಿನೆಣ್ಣಿನೂ ಹಾಂಗೆ ಕುಣ್ತಿಗೆಗೆ ಹಾಕಿ ಕೊಟ್ರೆ, ಅವ ಎಲ್ಲಾ ಬಗ್ಸಿ ಮೇಲ್ ಕೈಬೆರಳ್ ಹಾಕಿ ತಲಿ ಮೈ ಹಚ್ಕಂಬುದ್ ಕಂಡ್ ನಮ್ ಕುಣ್ತಿ ಕೊಳಿ ಅದ್ ಹೇಸ್ಗಿ ಆಯಿ ತೊಳು ಕೆಲ್ಸ್ ನಮ್ದ್, ಹಾಂಗೆ ಬೇರೆಯವ್ರಿಗ್ ಅದ್ರಲ್ಲೆ ಎಣ್ಣೆ ಹಾಕಿ ಕೊಟ್ ಯಾಪಾರ ಮಾಡ್ರೆ ಹೇಸ್ಗಿ ಅಲ್ದ ಮಾರ್ರೆ!
ಅವ್ನ ಗೋಣಿ ಚೀಲದ ಸಂಸಾರ ಹರಡ್ಕಾಂಡಗ್ಲಿಗೆ ಒ೦ದ್ ಇಪ್ಪತೈದ್ ಚೀಲ ಹೊರ ಬತ್ ಮಾರ್ರೆ!, ಕೆಲ್ವ್ ಚೀಲ ಅಂಗ್ಳದಾಗ್ ಹೊರಡ್ಕೂ ಶುರು ಮಾಡ್ತೋ, ಮೊದಲ್ ಸಲ ಕಂಡವ್ರಿಗ್, ಇದೆಂತ ಭೂತ ಅಂಧೇಳಿ ಹೆದ್ರಿಕಿ ಆಪುದೇ, ನಮ್ಗ್ ಕಂಡ್ ಅಭ್ಯಾಸ! ಅವ ಆ ಚೀಲ್ ಬಿಚ್ಚಿ, ಸಣ್ಣ್ ತೂತಲ್ ಒಂದ್ ಕುತ್ಗಿ ಹೊರ್ಗ್ ಬಂದ್ ಮತ್ ಕಟ್ಟಿಯಾಗ್ಲಿಗೆ ಗೊತ್ ಅದ್ ಅವನ್ ಸಂಚಾರಿ ಕೋಳಿಗೂಡ್ ಅಂತ, ಆ ಕೋಳಿನ್ ಕಾಂಬ್ಕೆ ಎಡಿಯ, ಅವ್ನಿಗೇ ಸರಿ ತಿಮ್ಬ್ಕ್ ಇಲ್ಲ, ಅದ್ಕ ಅವ ಎಂತ ಹಾಕುದೂ ಇಲ್ಲ, ಕಡ್ಡಿ ಕಡ್ಡಿ ಆಯ್ ಇತ್ತೋ! ಅವ ಅದನ್ ಕೋಳಿ ಸಾಕೋರ್ ಹತ್ರ ಬೇಡ್ಕಂಡ್ ತಕಂಬುದ್ ಕಾಣತ್, ಅವನ್ ಹತ್ರ ಕೋಳಿ ಸಾಕಿ ಮರಿ ಮಾಡ್ಕುಕ್ ಆತ್ತೇ ಇಲ್ಲ! ಅವನ್ ಗುಡ್ಸ್ಲ್ ಕಾಣ್ಲಿಲ್ಲ, ಕೋಡಿಲ್ ಇತ್ತಲ್ಲ, ಅಲ್ಲಿಯವರಿಗೆ ಹೋಯ್ ಕಾಂಬುಕ್ ಆಯಿಲ್ಲ, ಅಂಗ್ಡಿಲ್ ಕಟ್ಟಿ ಹಾಕಿರ್ ಕಾಣಿ, ಕೆಲ್ಸ ಸಮಾ ಇತ್ ಹಾಂಗಾಯ್! ಬಹುಶ: ಹಗ್ಗದಲ್ ಕಟ್ಟಿ ಹಾಕ್ತಾ ಅಮಿಗ್, ಅವ್ ಹೊಯಿಂಗಿಲ್ ಇಪ್ಪು ಹುಳ ತಿಂದ್ಕಂಡ್ ಉಳ್ದ್ ಗಾಳಿ ಕುಡ್ಕಂಡ್ ಇದ್ದೋ, ಹಾಂಗೆ ಹಸಿವಾಯ್ ಸತ್ತೇ ಹೋದ್ರ್, ಅವ ಅಡ್ಗಿ ಮಾಡ್ಕಂಡ್ ತಿಂದ್ಕಂಡ್ ಮತ್ತೊಂದ್ ಕೋಳಿ ಬೇಡ್ತಾ ಕಾಣತ್! ಅಕಸ್ಮಾತ್ ಅವ್ನ್ ಅವ ಮನಿ ಹತ್ರ ಬಿಟ್ರೆ ಅವ್ ಏನೂ ವಾಪಾಸ್ ಬತ್ತಿಲ್ಲ, ಒಡ್ಕೋಂಡ್ ಹೋಯ್ ನರಿ ಬಾಯ್ಗಾರೂ ಸಿಕ್ಕಿ ಆತ್ಮಹತ್ಯಿ ಮಾಡ್ಕಂಡೇ ಸಿದ್ಧ ಅವ್! ಹಾಂಗಿತ್ ಅವ್ಗಳ್ ಕತಿ!
ಚಿಮ್ನೆಣ್ಣಿ ಮತ್ ತೆಂಗಿನೆಣ್ಣಿ ಬಿಟ್ ಮತ್ತೆಲ್ಲ ಅವ ಒಂದ್ ಕಪ್ ಬಟ್ಟಿಲ್ ಕಟ್ಟಿ ಕಟ್ಟಿ ಗಂಟ್ ಮಾಡಿ ಇಡ್ಕಂತ, ಹಾಂಗಾಯ್ ಒ೦ದ್ ಗಂಟಿ ಬೇಕ್! ನಾವ್ ಕೊಡು ಸಕ್ರಿ ಬೆಳ್ಳಗ್ ಇದ್ರೆ, ಅವನ್ ಅದ್ ಕಟ್ಕಂಬ್ ಬಟ್ಟಿ ಕ..ಪ್ ಇದ್, ಮಳ್ಗಾಲ್ದಲ್ ಅವನ್ ಉಪ್ಪಿನ್ ಚೀಲದಲ್ ನೀರ್ ಹುಂಡ್ ಹುಂಡ್ ಆಯಿ ಕಪ್ಪಗೆ ಹೊರ ಬಪ್ಪುದು ಕಂಡಿದೆ, ಒಂದ್ ರೀತಿ ನಮ್ಗೆ ಬ್ಯಾರೆ ಲೋಕ ಪ್ರಾಪ್ತಿ! (surrealistic)! ನಾನಂತೂ ಗಿರಾಕಿ ಇಲ್ದಿರ್ ಮುಂಗಟ್ಟಿ ಮೇಲ್ ಗಲ್ಲಕ್ ಕೈಕೊಟ್ಕಂಡ್ ನಿತ್ಕಂಡ್ ಅವ್ನ ವ್ಯವಹಾರ ನೋಡ್ತಾ ನಿತ್ಕಂಬದ್, ನಾವ್ ಕಾಣ್ತಾ ನಿತ್ಕಂಡ್ರೆ, ಅವ್ನೂ ಒಂದ್ ಪ್ಲೇಟ್ ಹಾಕ್ತಾ, ಏನಾರೂ ಕೊಡಿ ಅಂತ! ಅವ್ನಿಗೂ ನಿಯತ್ ಇತ್, ಮಾರುದ್ ಯಾವ್ದೂ ಬೇಡಿ ತಕಂಬುದಿಲ್ಲ, ತಕ್ಕಡಿ ಅಂಚೂರ್ ಈ ಬದಿ ಬರ್ಲಿ ಎಂಬುದ್ ಬಿಟ್ರೆ! ನಮ್ಗೂ ಅವ್ನಿಗೆ ಹಳೀ ಬಟ್ಟಿ, ನಮ್ಮಪ್ಪಯ್ಯಂದ್ ಇಲ್ಲ ಅಜ್ಜಯ್ಯಂದ್ ಕೊಟ್ರೆ ಗಮ್ಮತ್, ಕೊಡುವಾಗ್ ಬಿಳೀ ಇರತ್, ಒಂದೇ ವಾರ್ದಾಗ್ ಅದೆಲ್ಲಾ ಕಪ್ಪಾಯ್ ನಾವ್ ಕೊಟ್ಟದ್ದ ಬಟ್ಟಿ ಅಂತ ಹೇಳುಕ್ ಆತಿಲ್ಲಾ, ಸೂಕ್ಷ್ಮಾಗ್ ಕಾಣ್ಕ್! ಅದೇ ಒಂದ್ ಗಮ್ಮತ್!
ನಾ ದೊಡ್ಡವ್ನ್ ಆದಂಗೆ ನನಗೂ ಅವ್ನಿಗೂ ಸರಿ ಹೋಪು ಸುರುವಾಯ್ತ್, ಅವ ಅಪ್ಪಯ್ಯ ಹೆಚ್ಚ್ ಕೊಡ್ತ್ರ್ ಎಂಬ ರಾಗ ನಿಂತೋಪ್ ಸುರುವಾಯಿತ್, ನೀವೆ ಹೆಚ್ಚ್ ಕೊಡಿ ಎಂದ್ ನನಗೆ ಮಾಲಿಶ್ ಹಾಕು ಸುರು ಮಾಡ್ಯ, ಅಂಗ್ಡಿ ಅಪ್ಪಂದ್ ನಂದಲ್ಲ, ಅದ್ ನಂಬ್ಕಂಡ್ ಮುಂದ್ ನಾನಿಲ್ಲ, ಅಪ್ಪ ಕೊಡುವಷ್ಟೇ ಕೊಡು ಸುರು ಮಾಡ್ಯೆ! ಅವ್ನಿಗೂ ಒಂದ್ ಬದಿ ನೆಮ್ಮದಿ, ನಮ್ಮಪ್ಪಂಗ್ ಕಾದ್ರೆ ಸುಖ ಇಲ್ಲ, ಅವ್ರೋ, ಸುಮಾರು ಹರಬಿನವರ್, ಒಂದೋ ಗದ್ದಿ ಬದಿ, ಇಲ್ಲಾ ಪ್ಯಾಟಿ ಬದಿ, ಅವ್ನಿಗ್ ಸಿಕ್ಕೂದ್ ಕಮ್ಮಿ ಆಯ್ತ್, ನಾನ್ ಕುಂಜಿ ಸಾಯಿಬನ್ ಸುಧಾರ್ಸಿಯೇ ಕಳ್ಸ್ತಿದ್ದೆ.
ಕುಂಜಿ ಸಾಯಿಬಂಗೂ ನಮ್ ಅಂಗಡಿಗೆ ಬಂದ್ರೆ ಸರ್ಕಿಟಿಗೆ ಹೋದಾಂಗ್, ಈಗಿನವ್ರ್ ಮಾಲ್ ಕಾಂಬುಕ್ ಹೋದಂಗ್, ನಮ್ಮಂಗ್ಡಿಗೆ ಬಂದವ್ರ್ ಬೀಡಿ ಸಿಗರೇಟ್ ತಕ್ಕಂಡ್ ಸೇದುವಾಗ ಅವರ್ ಹತ್ರ ಸಲಿಗಿ ಇದ್ರೆ ಬೇಡ್ತಾ, ಅವ್ನಿಗ್ ಸಿಕ್ಕತ್. ಕಿವಿಲ್ ಸಿಕ್ಸ್ಕಂತಾ, ಅಪರೂಪಕ್ ಮಳಿಗಾಲ್ ಚಳಿಗೆ ಒಂದ್ಸರ್ ನಮ್ ಅಂಗ್ಡಿ ಬದೀಲೆ ಸೇದಿ ನಮ್ಮಮ್ಮನ್ ಹತ್ರ ಬೈಸ್ಕಂಡ್ ಮತ್ ಸೇದಿಲ್ಲ, ನಮ್ಮಮ್ಮನೂ ಹಾಂಗೆ ಅವ್ನಿಗ್ ಮಾತ್ರ ಸೇದಿದಕ್ ಬೈದಿದ್, ಬೇರೆಯವ್ರಿಗ್ ಎಲ್ಲ ಸಣ್ಣಕ್ ಗೊಣ ಗೊಣ ಅಷ್ಟೇ! ನಾನೋ, ಎಲ್ಲರೂ ಸೇದಿದ್ ನನ್ನ್ ಹೊಟ್ಟಿಯೊಳ್ಗ್ ಹೋಯ್ದ್ ಲೆಕ್ಕ ಹಾಕಿರೆ ಇನ್ನ್ ನಾನ್ ಜನ್ಮಕ್ ಸೇದುದ್ ಬ್ಯಾಡ, ಅಷ್ಟ್ ಎಂಜ್ಲ ಹೊಗಿ ಕುಡ್ದಿದ್ದೆ, ಮತ್ ನಾನೆ ಸೇದುದೂ ಬೇಕಾಯ್ಲಿಲ್ಲ, ನಾನೂ ಗಂಡ್ಸ್ ಅಂತ್ ತೋರ್ಸ್ಕಂಬ್ಕ್ ಸೇದಿದ್ ಬಿಟ್ಟ್ರೆ!
ಕುಂಜಿ ಸಾಯಿಬಂದ್ ಸಣ್ ಅಡ್ಗಿಯೂ ಆತಿತ್, ನಮ್ ಅಂಗ್ಡಿ ಬುಡದಲ್ಲೇ, ಒಂದೋ ಅವ್ಲಕ್ಕಿ ಉಪ್ಕರಿ, ಇಲ್ಲ ಮುಂಡಕ್ಕಿ ಉಪ್ಕರಿ. ಅವ್ಲಕ್ಕಿಗೆ ಬೆಲ್ಲ ಇಲ್ಲಾ ಸಕ್ರಿ, ಮಂಡಕ್ಕಿಗೆ ಎಣ್ಣಿ ಮತ್ ನೀರುಳ್ಳ್ಳಿ, ಅದನ್ ತಯಾರ್ಸಿ, ಸಲ್ಪ ತಿಂದ್ ಉಳುದ್ ಕಟ್ಕಂಡ್ ಹೋತಿದ್ದ!
ನನ್ ಪ್ರಕಾರ ಅವ ಫಕೀರ ಆಯಿ ಹೋದವ! ಹ್ಯಾಂಗ್ ಅಂತ್ ಯಾರೂ ಹೇಳಿಯವ್ರ್ ಇಲ್ಲ, ಅವ್ನಿಗೆ ಮದಿ ಆಯಿ ಹೆಣ್ತಿ ಕಳ್ಕಂಡನಾ ಇಲ್ಲ ಅಪ್ಪ ಅಮ್ಮ ಸಣ್ದಾಗ್ಲಿಗೇ ಕಳಂಡ್ ಭಿಕಾರಿ ಆದ್ನಾ ಗೊತ್ತಿಲ್ಲ, ಅವ್ನ್ ತಲಿ ಸರೀ ಇತ್, ಎಪ್ಪತ್ ವಯಸ್ಸಿನ ಮೇಲೂ ಭಿಕಾರಿಯಾಗಿ ಬದುಕಿ ಗಟ್ಟಿ ಇದ್ದ, ಒಳ್ಳೆಯವನೇ ಇದ್ದ, ಏನೂ ಕದ್ ಕಂಪ್ಲೈಂಟ್ ಒಂದೂ ಕೇಂಡ್ ನೆನಪಿಲ್ಲ, ಯರ್ಯಾರ್ ಮನೆಲ್ ವಿಶೇಷ ಊಟ ಇದ್ರ್ ಬೇಡ್ಕಂಡ್ ಬಂದ್ ನಿಂತವ ಅಲ್ಲ, ಬೇರೆ ದಿನವೂ ಯಾರ್ ಯಾರ್ ಮನಿ ಅಂಗಳ್ಕ್ ಹೋದವ್ನ್ ಅಲ್ಲ, ಹಾಂಗಾಯ್ ನಮ್ ಅಂಗಡಿ ಅಂಗ್ಳವೇ ಅವ್ನಿಗ್ ಜನ್ರ್ ಸಮ್ಪರ್ಕಕ್ ಲಾಯಿಕ್ ಆತಿತ್! ಮಳ್ಗಾಲ್ದ್ ಚಳಿಗ್ ನೆಲ್ಗಡ್ಲಿ, ಹೊರ್ಗಡ್ಲಿ, ಮುಂಡಕ್ಕಿ ತಕಂಡ್ ತಿಂಬುವರ್ ಅವ್ನಿಗೂ ಚೂರ್ ಕೊಡ್ತಿದ್ರ್!
ಅಪರೂಪಕ್ ಪ್ಯಾಟಿಗೆ ಹೋಪಾಗ್ ಎದ್ರ್ ಸಿಕ್ಕಿದ್ರೆ, ಸಣ್ಣದ್ ಸ್ನೇಹದ್ ನಗಿ ನಾ ಕೊಡುವಷ್ಟ್ ಅವ ಹತ್ರ ಆದ, ಅವನೂ ನನ್ನ್ ಕಂಡ್ ನಗಿ ಇಲ್ಲ ಅಂಬಾಂಗ್ ಒಂದ್ ನಗಿ ಕೊಟ್ ಹೋತಿದ್ದ, ಅಂದ್ರೆ ನನ್ ಕಣ್ಣಿಗ್ ಕಣ್ ಸೇರ್ಸ್ತಿದ್ದ ಅಷ್ಟೇ!
ಅವನ್ ಜಾತಿಯವರ್ ಅವನ್ ಬಗ್ಗೆ ನಮ್ ಅಂಗಡಿ ಎದ್ರ್ ಏನೂ ಮಾತಾಡಿದ್ ನೆನಪಿಲ್ಲ, ಅವ್ರೇನಾದ್ರ್ ಮಸೀದಿ ಹತ್ರ ಅವ್ನಿಗ್ ದಾನ ಧರ್ಮ ಮಾಡಿಕ್ಕೂ ಸಾಕು, ಇಲ್ಲಾ ಇವನೇ ಮಸೀದಿ ಹತ್ರ ಹೋಗ್ದೇ ತಾನ್ ಆರ್ಸ್ಕಂಡದ್ದೇ ತನ್ ಪ್ರಪಂಚ ಅಂತ ಬೊಳುವಟ್ಟಿಯಾಗಿ ತಿರ್ಗ್ತಾ ಕೊಟ್ಟದ್ ಮಾತ್ರಾ ತಿಂತಾ ಒಂದ್ ರೀತಿ ಒಳ್ಳೆ ಫಕೀರ್ನಾಗಿಯೇ ಬದುಕಿದ ಧೀರನೂ ಇರ್ಬಹುದು!
ನಾ ಮುಂದ್ ಓದುಕ್ ಊರ್ ಬಿಟ್ಟೆ, ಪಾಪ, ಅವ ಎಲ್ಲ್ ಹ್ಯಾಂಗ್ ಸತ್ತ ಕೇಣ್ಲೇ ಇಲ್ಲ, ಯಾರು ಹೇಳ್ಲು ಇಲ್ಲ, ಖಾಯಿಲಿ ಏನಾರು ಬಂತ, ಸುಲಭದಲ್ ಸತ್ ಅಂಬುದ್ ಒಂದ್ ಚಿಂತಿ ಇದ್ದಿತ್. ನಮ್ ಸಾಯಿಬ್ರ ಬಗಿಯವ್ರ ಅವ್ನ್ ಹುಗುದ್ ಹಾಕಿರ್ ಅಂಬ್ ನಂಬಿಗಿ, ಅವನ್ ಸಂಸಾರನ್ನೂ ಹುಗ್ದ್ ಹಾಕೀರ, ಇಲ್ಲಾ ಕೋಳಿ ಪೀಳಿ ಬಿಡ್ಸಿ ಇಲ್ಲಾ ಹಾಂಗೆಯೆ ಅವನ್ ಗುಡ್ಸ್ಲ್ ಸೇರಿಸಿ ಬೆಂಕಿ ಹಾಕಿರಾ ಗೊತ್ತಿಲ್ಲ!
ನಂಗ್ ಮಾತ್ರ ಕುಂಜಿ ಸಾಯಿಬ್ರಿಂದ ಕೊಟ್ಟದ್ದಕ್ಕಿಂತ ಸಿಕ್ಕಿದ್ದೇ ಜಾಸ್ತಿ, ನಮ್ಮೂರಲ್ ಒಂದ್ ಮಾತಿತ್, ಬದ್ಕಿದ್ರೆ ಗಂಜಿ ತಿಂದ್ಕಂಡ್ರಾದ್ರು ಉಳ್ಕಂತೆ ಅ೦ತ, ನನ್ನ ಆತ್ಮ ವಿಸ್ವಾಸು ಹ್ಯಾಂಗಿದ್ ಅಂದ್ರ್ ಕುಂಜಿ ಸಾಯಿಬನಾಗ್ ಬೊಳುವಟ್ಟಿ ಆಯ್ ತಿರ್ಗಿ ಆದ್ರೂ ಬದ್ಕಂತೆ ಅ೦ತ! ನಮ್ ಹೆಣ್ತಿ ಮಕ್ಳ್ ಹಾಂಗಾಪುಕೆ ಬಿಡುದಿಲ್ಲ ಎಂಬುದ್ ಬೇರೆ ಮಾತ್!

ಕುನ್ನಿ ಸಾಯ್ಬನ ಕಥೆ ಬಹಳ ಚೆನ್ನಾಗಿಯೇ ಬರೆದಿದ್ದಿರಿ. ಆತ ಅದೆಸ್ಟು ವರುಷಗಳವರೆಗೆ ಹೀಗೆಯೇ ಬೇಡಿದ್ದಾನೋ ಗೊತ್ತಿಲ್ಲ. ಅದೆ ರೀತಿ ಒಬ್ಬರು ಬ್ಯಾರಿಗಳೂ ಬೇಡಲು ಬರುತ್ತಿದ್ದದು ನನಗೆ ನೆನಪು ಒಮ್ಮೆ ನಾನು ನಮ್ಮ ಚಿಕ್ಕಮ್ಮನ ಮನೆಯಿಂದ,ಚಿಕ್ಕಪೈಯ್ಯ ಸತ್ತು ಹೋದದ್ದಕ್ಕೆ ಹೊಸ ಧೋತಿಯನ್ನ ತೆಗೆದುಕೊಂಡು ಬಂದಿದ್ದೆ. ಆಗ ಇಬ್ಬರಲ್ಲಿ ಒಬ್ಬ ಬ್ಯಾರಿ, ಒಡೇರೆ ಕಫನ್ನಿಗೆ ಹಾಕಲು ಏನಾದರೂ ಬಟ್ತೆಯಿದ್ದರೆ ಕೊಡಿರಲ್ಲಾ ಎಂದಿದ್ದ. ಅಪ್ಪನಿಗೂ ಕಾಯದೆ ಸೀದಾ ಒಳಗೋಡಿ ಚಿಕ್ಕಪಯ್ಯನ ಪ್ರಸಾದವಾಗಿ ಸಿಕ್ಕಿರುವ ಹೊಸ ಧೋತಿಯನ್ನ ತೆಗೆದುಕೊಂಡು ಬಂದಿದ್ದೆ ಅವನ ಕೈಗೆ ಹಾಕಿದೆ. ಇದನ್ನ ನೋಡಿದ ನಮ್ಮ ಅಪ್ಪೈಯ್ಯ ಶಹಭಾಷ ಸುರೇಂದ್ರ, ಆ ದೇವ್ರು ನಿನಗೆ ಕಂಡಿತ ಒಳ್ಳೇದನ್ನೇ ಮಾಡುತ್ತಾನೆ ಅಂದರು. ಇದು ಯಾಕೆಂದ್ರೆ ನನು ಹೊಸದೆಂದು ಕೂಡಾ ನೋಡದೆಯೇ ಆ ವೇಸ್ಟಿಯನ್ನ ಅವನಿಗೆ ಕೊಟ್ತಿದ್ದೆ. ಇದೊಮ್ದು ಹೆಗ್ಗಳಿಕ್ಯಲ್ಲ. ಅವರ ಮಾತು ನಿಜ ಅಂತ ಈಗ ನನಗೆ ಅನ್ನಿಸುತ್ತೆ. ಇದೊಂದು ಹೆಗ್ಗಳಿಕೆ ಅಲ್ಲ.ನಟರಾಜ ಉಪಾಧ್ಯರೆ ಕಥೆ ಓದಿ ಈ ಒಂದು ಅನುಭವವನ್ನ ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕೆಂದು ಅನ್ನಿಸಿತು ಅಸ್ಟೆ.
ReplyDelete