Wednesday, June 1, 2016

ದೊಡ್ಡಾಟದೊಳಗಣ ಸಣ್ಣಾಟ


Image courtesy:
https://s-media-cache-ak0.pinimg.com/236x/72/6e/4b/726e4b6d7d537498de325b54d8955a23.jpg

ದೊಡ್ಡಾಟದೊಳಗಣ ಸಣ್ಣಾಟ

ಮೊಗೆದಷ್ಟೂ
ಆಳವಾಗುತ್ತಾ ಹೋಗಿ
ಮತ್ತಷ್ಟು ನೀರು ತುಂಬುವ
ಕೆರೆಯಂತೆ ಈ ಬದುಕು
ಹಾಗೇ ಬಿಟ್ಟರೆ ಬರೀ ಬರಡು

ದಡ ಮತ್ತು ತಳದ
ನಡುವೆ ಸ್ತರಗಳಲಿ
ಹರಡಿದೆ ವಿಧವಿಧದ
ಲೋಕಗಳು
ಅಲ್ಲಲ್ಲಿ ಇರಲು ಅಲ್ಲಲ್ಲೇ ಸಲ್ಲು
ಒಂದೆಡೆ ನಿಂತರೆ ನಿಲ್ಲು
ಇಲ್ಲಾ ಎಲ್ಲೆಡೆ ನಡೆದಾಡು

ಕೆರೆಯೊಳಗಿನ
ಕತ್ತಲೆಯ ಆಳಕ್ಕೆ
ಕೊನೆಯಿಲ್ಲ
ದಡದಾಚೆಯ ದಿಗಂತ
ಅಷ್ಟ ದಿಕ್ಕುಗಳಲ್ಲೂ
ಅನಂತ

ಕೈಗೆಟಕದೇ
ಬಾಯ್ತೆರೆದ ಬಾನು
ನಿತ್ಯ ನೃತ್ಯದ
ನಿರಂತರ ಸಂಗಾತಿ
ರವಿ ಶಶಿ ವರುಣರನಿತ್ತು
ಸಲಹುವ ತಾಯಿ
ಕೊನೆಯಿಲ್ಲದ ಕಲ್ಪನೆಯ
ಕೂಸುಗಳನ್ನಿತ್ತು
ಕಾಡುವ ಮಾಯಾವಿ

ಹುಟ್ಟಿದೆ, ಸಾಯಲಿಕ್ಕಿದೆ
ಹುಟ್ಟು ಸಾವಿನ ನಡುವೆ
ನಾನೇನೂ ಮಾಡಬಲ್ಲೆ
ಏನ ಏಕೆ ಮಾಡಲಿ
ಎಂಬ ಪ್ರಶ್ನೆಗೆ ಉತ್ತರ
ಎಲ್ಲವೂ, ಇಲ್ಲಾ ಏನಿಲ್ಲವೂ

ಊಟ ಓಟ ಕಾಟಗಳ
ನಡುವೆ ನನ್ನಿರುವೇ
ಒಂದು ಸವಾಲು
ಮರೆತುಹೋಗಿದೆ
ಮುದಕೊಡುವ
ನನ್ನಾಟವು

ನಾ ಎಷ್ಟೇೆ
ಎಳೆದರೂ
ಬೆಳೆದರೂ
ಮುಗಿಯದು
ಈ ಮೈದಾನವು
ಆಟಕೆ ಮೀರದೆ
ಮೇಯುವುದೇ
ಮೊದಲ ವಿಧಾನವು

ಸೋಲುಗೆಲುವು
ಕೂಡಿಸಿ ತೂಗಿಸಿ
ಆಟದಲೇ
ಸಾಗಿದರೆ
ಕೈಗೆಟುಕುವುದು
ನವನವೀನ ಸವಾಲು

ಅನಂತ ನಿರಂತರವ
ಒಡಲಿನಲಿ ತುಂಬಿದ
ಭಗವಂತನ ಅನುಭೂತಿ
ನನ್ನೊಡಲಲಿರಲು
ಕ್ಷಣಿಕದ ಕುನ್ನಿಯ ಮಿತಿಯ
ನಾನು ನನ್ನಲ್ಲೇ ಕರಗಿ
ಉಳಿವುದೇ ಎಲ್ಲದರ
ಅಳಿವು ಉಳಿವು ಬೆಳವಿಗೆ
ಸಾಕ್ಷಿಯಾಗಿ ಸಲ್ಲುವ ಸೇವೆಯು!

ಅನಂತದಲಿ ಶೂನ್ಯ
ಶೂನ್ಯದಲಿ ಅನಂತ
ಕ್ಷಣಿಕದಲಿ ನಿರಂತರ
ನಿರಂತರದಲಿ ಕ್ಷಣಿಕ
ಬೆಳಕಲ್ಲಿ ತುಂಬಿದ ಕತ್ತಲು
ಕಾರ್ಗತ್ತಲಲೂ ಬೆಳಗುವ ಬೆಳಕು

ವೈರುಧ್ಯಗಳು ಕೂಡಿ
ಕರಗಿ ಉಳಿವುದೇ
ಬಿಂದುವಾದರೂ
ಸಾಗರದಲೊಂದಾಗಿ
ಮೆರೆವ ಮಹತ್ತರವು!

No comments:

Post a Comment