ಪ್ರೇಮದ ನಿತ್ಯೋತ್ಸವಕ್ಕೊಂದು ಕರೆಯೋಲೆ!
ಆದರ್ಶದ
ದಾರಿದೀಪವು
ಸಾಧನೆಯ
ಹಾದಿಗೆ
ಕರೆತಂದರೂ
ದಾರಿ ದುರ್ಗಮ
ಏಳು ಬೀಳು
ಅಪಘಾತ ಗಾಯ
ಖಂಡಿತ
ಒಪ್ಪು ತಪ್ಪುಗಳ
ನಡುವೆ
ಮೌಲ್ಯಗಳ ಗೊಂದಲ
ಬೊಗಳುವವರು
ಕಾಲೆಳೆವರು
ಎದೆಗೆ ಬೆನ್ನಿಗೆ
ಚೂರಿ ಹಾಕುವರನೇಕ
ಭೀತಿ ಗೊಂದಲ
ಸಂಶಯ ಅಧೀರತೆ
ತುಂಬಿ ರಾಜಿನಾಮೆಯ
ಅಂಟು ಕಾಲಿಗಂಟಿ
ಮುಂದಡಿ ಹಿಂದಡಿ
ಇಡಲಾಗದ
ಬಯಲಿನ
ಬೆರ್ಚಪ್ಪನಂತೆ
ಜೀವಚ್ಛವ
ಬದುಕು ದುರ್ಭರ
ಕರಾಳ ಕತ್ತಲಲೂ
ಮಿನುಗುತಿದೆ
ನನ್ನ ನಿನ್ನೊಳಗಿನ
ಪ್ರೀತಿಯ ನಂದಾದೀಪ
ಧನಾತ್ಮಕ ಚಿಂತನೆಯ
ಎಣ್ಣೆಯಲದು ಬೆಳಗಲು
ನಂಬಿಕೆಯ ಬತ್ತಿ
ಹೊಸೆಯಲೇಬೇಕು
ಪ್ರೀತಿಯ
ಬೆಳಕಕಲೊಂದಾಗಿ
ಮುಂದಡಿ ಇಡೋಣ
ದಿನದಿನದ ವ್ಯವಹಾರವು
ಅನ್ಯೋನ್ಯ ಸಂಬಂಧದ
ಹೆಮ್ಮರವಾಗಲು
ಸ್ನೇಹದ ಸಾರ
ಸೋರೋಣ
ಪವಿತ್ರ ಪ್ರೇಮವು
ಹಣ್ಣಾಗಿ ಕೈಸೇರಲು
ಸಾಧಾರಣ ನಡೆಯೇ
ನೃತ್ಯದ ಲೀಲೆಯಾಗಿ
ನಿರಂತರ
ನಿತ್ಯೋತ್ಸವ
ಸುತ್ತಲಿನ ಮೆರವಣಿಗೆ
ಮೈಲುಗಟ್ಟಲೆ ಮೀರಿ
ಮೆರೆಯಲು
ಸೇವೆಯೆಂಬ
ಪಲ್ಲಕಿಯನೇರಿ
ಸಾಗರಿಕೆ ಅಭಿವ್ಯಕ್ತಿಯ
ಕೂಡಲು
ಮದುವೆಯ ದಿಬ್ಬಣಕೆ
ಭಾಜಾಭಜಂತ್ರಿ
ಮೊಳಗಲು
ಆಶಾವಾದದ
ಗರ್ನಾಲಿನಲಿ
ಪೈಶಾಚಿಕ
ಪಿಡುಗಗಳು
ಪರಾರಿ
ನಾ ನಡೆವ ದಾರಿಯೇ
ಸಾಫಲ್ಯದ ಸೋಪಾನವಾಗಿ
ಸಾಧನೆಯ ಸಾಹಸವು
ಹಿಡಿಕಡ್ಡಿಯಷ್ಟು
ಹಗುರವಾಗಿ
ಸುತ್ತ ಸೇರಿದ
ಸೋತು ನಲುಗಿ
ದೈನ್ಯತೆ ತುಂಬಿದ
ಬಾಡಿದ ಕಣ್ಣುಗಳಲಿ
ಬಣ್ಣಗಳು ಚಿತ್ತಾರವಾಗಿ
ಮಿಂಚಲು
ಮೆರವಣಿಗೆಯು
ಮರಿಗಳಾಗಿ
ದಿಬ್ಬಣಗಳು
ಅನಂತವಾಗಲಿ

No comments:
Post a Comment