Thursday, June 2, 2016
ಅಖಿಲ ಕರ್ನಾಟಕದ ಉದ್ದಗಲಗಳಲ್ಲಿ ಯಕ್ಷಗಾನದ ದಿಗ್ವಿಜಯಕ್ಕೆ ಮತ್ತೆ ಸಹಕರಿಸಿ!
ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ನಾಡಿನ ಸಾಂಸ್ಕೃತಿಕ ಲಾಂಛನ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮೆರೆವ ಪಡುವಲಪಾಯ ಯಕ್ಷಗಾನ ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆ ಊರಿ ದೇಶಾಂತರವೂ ಆಗಿದ್ದು ಸಂತಸದ ವಿಷಯ. ಬಯಲು ಸೀಮೆಯಲ್ಲಿ ಮನೆಮಾತಾಗಿದ್ದ ಮೂಡಲಪಾಯ ಯಕ್ಷಗಾನ ವಿನಾಶದ ಅಂಚಿನಲ್ಲಿರುವುದು ಖೇದಕರ. ಆ ನಿಟ್ಟಿನಲ್ಲಿ ಪಡುವಲಪಾಯ ಯಕ್ಷಗಾನ ಕರ್ನಾಟಕದ ಉದ್ದಗಲಕ್ಕೆ ಹರಡುವುದು ಅನಿವಾರ್ಯ, ಆ ಮೂಲಕ ಮೂಡಲಪಾಯದ ಪುನ:ಶ್ಚೇತನಕ್ಕೂ ಚಾಲನೆ ಸಿಗುವಲ್ಲಿಯೂ ಅದು ಸಹಕರಿಸಲಿ.
ಕರ್ನಾಟಕದ ಮೂಲೆಮೂಲೆಗೆ ಯಕ್ಷಗಾನವನ್ನು ಒಯ್ಯುವುದರಲ್ಲಿ ಪ್ರವಾಸಿ ಯಕ್ಷಗಾನ ಮಂಡಳಿಯ ಪಾತ್ರ ಬಹು ಹಿರಿದು. ಆಯಾ ಊರುಗಳಲ್ಲಿ ನೆಲೆನಿಂತ ಯಕ್ಷಗಾನ ಅಭಿಮಾನಿಗಳ ಸಹಾಯದಲ್ಲಿ ಪ್ರವಾಸಿ ಯಕ್ಷಗಾನದ ಆಟಗಳು ಮೊದಮೊದಲು ನಿಗದಿಯಾಗುವುದಿದ್ದರೂ ಸ್ಥಳೀಯವಾಗಿ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರ ಮತ್ತು ಪೋಷಕರ ನಿರ್ಮಾಣದಲ್ಲಿ ಈ ಆಟಗಳ ಪ್ರಭಾವ ಸಾಕಷ್ಟಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕದ ಉದ್ದಗಲಕ್ಕೂ ಸಾಗಿ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಪ್ರದರ್ಶನ ಕೊಡುತ್ತ ಬಂದಿರುವ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದೆ.
ಉತ್ತಮ ಕಲಾವಿದರನ್ನು ಸೇರಿಸಿಕೊಂಡು ನಿರ್ವಹಣೆಯ ವೆಚ್ಚವನ್ನು ಸರಿತೂಗಿಸಿಕೊಂಡು ಲಾಭದ ಆಸೆಯಿಲ್ಲದೇ ಉಳಿದ ಹಣವನ್ನು ಕಲಾವಿದರಿಗೆ ಹಂಚುವ ಮೂಲಕ ಪ್ರದರ್ಶನದ ಭಾರವನ್ನು ವ್ಯವಸ್ಥಾಪಕರಿಗೆ ಕಡಿಮೆ ಮಾಡಿಸಿ ಹೆಚ್ಚು ಹೆಚ್ಚು ಊರುಗಳಲ್ಲಿ ಹೆಚ್ಚಿನ ಆಟಗಳ ನಿಗದಿ ಮಾಡಿಸುವಲ್ಲಿ ಈ ಮೇಳದವರು ಸಹೃದಯತೆಯಿಂದ ಸಹಕರಿಸುವುದು ಈ ಮೇಳದ ಹೆಗ್ಗಳಿಕೆಗಳಲ್ಲೊಂದು.
ಈ ವರ್ಷವೂ ಶ್ರೀ ಹಾಲಾಡಿ ರಾಘವೇಂದ್ರ ಮೈಯ್ಯ ಮತ್ತು ಶ್ರೀ ಕೋಡಿ ವಿಶ್ವನಾಥ ಗಾಣಿಗರ ಜಂಟಿ ಸಾರಥ್ಯದಲ್ಲಿ ಜುಲೈ ಇಪ್ಪತ್ತರಿಂದ ಈ ಮೇಳದ ತಿರುಗಾಟ ಪ್ರಾರಂಭವಾಗಲಿದೆ. ಕರ್ನಾಟಕದ ಉದ್ದಗಲದಲ್ಲಿ ಯಕ್ಷಗಾನದ ದಿಗ್ವಿಜಯಕ್ಕೆ ಹೊರಟ ಈ ಮೇಳವು ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವ ಮೂಲಕ ಕಾರ್ಯಕ್ರಮದ ಯೋಜನೆಯ ಶ್ರಮ ಮತ್ತು ಖರ್ಚನ್ನು ಕಡಿಮೆ ಮಾಡಿಸುವುದಲ್ಲದೇ ಪ್ರತಿ ದಿನವೂ ಹೊಸಹೊಸ ಊರಿನಲ್ಲಿ ಆಟವು ನಡೆವಂತೆ ಸಹಕರಿಸುವಲ್ಲಿ ಸ್ಥಳೀಯ ವ್ಯವಸ್ಥಾಪಕರು ಮೇಳವನ್ನು ಕೂಡಲೇ ಸಂಪರ್ಕಿಸಬೇಕಾಗಿ ಕೋರಿಕೆ.
ಅಖಂಡ ಕರ್ನಾಟಕದ ಯಕ್ಷಗಾನ ಪ್ರೇಮಿಗಳ ಅಪರಿಮಿತ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಕೃತಜ್ನತಾಪೂರ್ವಕ ನಮನದೊಂದಿಗೆ:
ಶ್ರೀ ಹಾಲಾಡಿ ರಾಘವೇಂದ್ರ ಮೈಯ್ಯ: 9141732977
ಶ್ರೀ ಕೋಡಿ ವಿಶ್ವನಾಥ ಗಾಣಿಗ: 9880895334
Subscribe to:
Post Comments (Atom)


No comments:
Post a Comment