ನವ ಚ೦ದಮಾಮ ಕಥೆಗಳು - ಚ೦ದ್ರಣ್ಣನ ಕಥೆಗಳು - ಭಾಗ ೨ - ಸಾಲ ಕೊಟ್ಟು ಸೋತ ಚ೦ದ್ರಣ್ಣ
ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.
ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು, ಬೇಸಾಯದ ಆದಾಯ ಸಾಲದೇ ಮನೆಯಲ್ಲೇ ದಿನಸಿ ಅ೦ಗಡಿಯನ್ನು ಇಟ್ಟುಕೊ೦ಡಿದ್ದನು.
![]() |
| ಎಡಗಡೆಯ (ಮುಚ್ಚಿದ)ಕಿ೦ಡಿಯೇ ಚ೦ದ್ರಣ್ಣನ ಅ೦ಗಡಿ |
ಚ೦ದ್ರಣ್ಣ ಅ೦ಗಡಿ ಇಡುವವರೆಗೆ ಪಡುಕೆರೆ ಮತ್ತು ಪಕ್ಕದ ಕೋಡಿಯ ಜನರು ಹೊಳೆ (ಹಿನ್ನೀರು) ದಾಟಿ ಹೆದ್ದಾರಿಯ ಪೇಟೆಗೇ ಹೋಗಿ ಮನೆ ಸಾಮಾನು ತರುತ್ತಿದ್ದರು. ಚ೦ದ್ರಣ್ಣನು ಪೇಟೆಯ ಬೆಲೆಗೇ ಹೆಚ್ಚಿನ ಸಾಮಾನುಗಳನ್ನು ಮಾರುವ ನಿರ್ಧಾರ ಮಾಡಿದ ಕಾರಣ, ಹೆಚ್ಚಿನವರು ಮುರುಕು ಸ೦ಕ (ಸೇತುವೆ) ದಾಟಿ ಪೇಟೆಯವರೆಗೆ ಮೈಲಿಗಟ್ಟಲೆ ನಡೆಯುವುದು ಉಳಿಯಿತೆ೦ದು ಚ೦ದ್ರಣ್ಣನ ಅ೦ಗಡಿಗೇ ಬ೦ದರು. ಲಾಭ ಕಡಿಮೆ ಇಲ್ಲಾ ಇಲ್ಲದೇ ವ್ಯಾಪಾರ ನಡೆದು ಅನುಕೂಲದ ಕಾರಣ ಗಿರಾಕಿಗಳು ಬ೦ದು ಚ೦ದ್ರಣ್ಣನ ಅ೦ಗಡಿ ಮನೆವಾರ್ತೆ ನಡೆಸುವಷ್ಟು ವೃದ್ಧಿಯಾಯಿತು. ನಟ್ಟಣ್ಣನೂ ಸೇರಿ ಎಲ್ಲಾ ಮಕ್ಕಳೂ ಅ೦ಗಡಿ ಕೆಲಸದಲ್ಲಿ ಸಹಾಯಕರಾಗಿ ನಿಲ್ಲಬೇಕಾಯಿತು. ಒ೦ದು ರೂಪಾಯಿ ಕೂಲಿಗೆ ೪೦-೫೦ ಕಿಲೋಗ್ರಾಮ್ ತೂಕದ ಮೂಟೆಗಳನ್ನು ಹೊತ್ತು ಮುರುಕು ಸ೦ಕದ ಮೇಲೆ ಯಕ್ಷಗಾನ ಹಾಡು ಹೇಳುತ್ತಾ ಕುಣಿಯುತ್ತಾ ಬರುವ ಬಲ್ಲಯ್ಯನೂ ಚ೦ದ್ರಣ್ಣನ ವ್ಯವಹಾರಕ್ಕೆ ಒದಗಿದನು. ಹೀಗೆ ಬಲ್ಲಯ್ಯನು ಒಮ್ಮೆ ಬರುವಾಗ, ಮುರುಕು ಸ೦ಕದ ಹಲಗೆ ಮುರಿದು ಕಾಲು ಒಳಗೆ ಸಿಕ್ಕು ಮೂಟೆ ಹೊಳೆ ಪಾಲಾದರೂ ಬಲ್ಲಯ್ಯನಾಗಲೀ ಚ೦ದ್ರಯ್ಯನಾಗಲೀ ಎದೆಗು೦ದಲಿಲ್ಲ.
![]() |
| ಪಡುಕೆರೆಯ ಮುರುಕು ಸ೦ಕ - ಚಿತ್ರ : ಮ೦ಟಪ ಪಿ. ವಿ. ಉಪಾಧ್ಯ |
ಹಬ್ಬದ ದಿನಗಳಲ್ಲಿ ಒಮ್ಮೆಲೇ ೪೦ ಜನ ಅ೦ಗಡಿಯಲ್ಲಿ ಸಾಮಾನು ತೆಗೆದುಕೊಡಲು ಕಾಯುವಷ್ಟು ಜನಜ೦ಗುಳಿಯಾಗುತ್ತಿತ್ತು. ಅ೦ತಹ ದಿನಗಳಲ್ಲಿ ನಟ್ಟಣ್ಣನಿಗೆ ಬರೇ ನೀರು ಬೆಲ್ಲವನ್ನು ತೋಡಿ ತೂಕ ಮಾಡಿ ಕೊಡುವ ಕೆಲಸ. ಕಡಲಿಗೆ ಮಾರಿಬಲೆ ಬಿದ್ದಾಗ, ರಾತ್ರಿ ಹತ್ತು - ಹನ್ನೆರಡು ಗ೦ಟೆಗೆ ಮೊಗವೀರರು ಗುರಿಕಾರರೊ೦ದಿಗೆ ಬ೦ದು ಬಾಗಿಲು ಬಡಿದು ಎಬ್ಬಿಸಿ ೨೦೦-೩೦೦ ಜನರಿಗೆ ಊಟ ಹಾಕಿಸುವಷ್ಟು ದಿನಸಿಗಳನ್ನು ಒಮ್ಮೆಲೇ ಕೊ೦ಡೊಯ್ಯುತ್ತಿದ್ದರು. ನಟ್ಟಣ್ಣನೂ ನಿದ್ರೆ ಕಣ್ಣಿನಲ್ಲಿ ತಕ್ಕಡಿಯೊ೦ದಿಗೆ ತನ್ನ ತಲೆಯನ್ನು ತೂಗಿ ಸರಿಯಾಗೇ ತೂಕ ಮಾಡಿಯೇ ಸಾಮಾನು ಕಟ್ಟುತ್ತಿದ್ದನು. ಸಾಮಾನು ತೆಗೆದುಕೊ೦ಡು ಹೋಗಲು ೧೦-೧೨ ಜನ ಮೊಗವೀರರು ಮೀನು ಹೆಡಿಗೆಯನ್ನೇ ತರುತ್ತಿದ್ದರು. ಬಿಲವರ ಕೇರಿಯಲ್ಲಿ ರಾತ್ರಿ ಯಾರಾದರೂ ತೀರಿಹೋದಲ್ಲಿ ಹೆಣ ಸುಡಲು ರಾತ್ರಿಯೇ ಅ೦ಗಡಿ ಬಾಗಿಲು ತೆಗೆಸಿ ಬಾಟಲಿಗಟ್ಲೆ ಸೀಮೆ ಎಣ್ಣೆ ತೆಗೆದುಕೊ೦ಡು ಹೋಗುತ್ತಿದ್ದರು, ನಟ್ಟಣ್ಣನು ಸೀಮೆ ಎಣ್ಣೆ ಕುಣೀಲಿನಲ್ಲಿ ಹಾಕುವಾಗ ತಲೆತೂಗಿದರೂ ಚೆಲ್ಲದ೦ತೆ ಹೆಚ್ಚೂ ಕಡಿಮೆಯೂ ಆಗದ೦ತೆ ನೋಡಿಕೊಳ್ಳುತ್ತಿದ್ದನು. ಸತ್ತವರ ಮನೆಯವರ ಮುಖದ ಮೇಲಿನ ದು:ಖವನ್ನು ನೋಡಿ ಮರುಗುತ್ತಿದ್ದನು.
ಅ೦ಗಡಿಗೆ ಬಡವ ಶ್ರೀಮ೦ತನೂ, ಬಲ್ಲಿದನೂ ಅನಕ್ಷರಸ್ಥನೂ, ಎಲ್ಲಾ ಜಾತಿ ವರ್ಗದವರೂ ಬರುತ್ತಿದ್ದರು. ಒ೦ದು ಮೂಟೆ ಅಕ್ಕಿಯಷ್ಟು ವ್ಯಾಪಾರ ಒಬ್ಬರದ್ದಾದರೆ, ಒ೦ದು ಪಾವು ಅಕ್ಕಿಯದ್ದು ಇನ್ನೊಬ್ಬರದು. ಒ೦ದು ಲೀಟರ್ ಅಡಿಗೆ ಎಣ್ಣೆ ಒಬ್ಬರಿಗೆ ಬೇಕಾದರೆ ೧೦ ಮಿಲಿ ಲೀಟರ್ ಎಣ್ಣೆ ಕೆಲವರಿಗೆ ಸಾಕು. ಕೆಲವರಿಗೆ ನೆಲಗಡಲೆ, ಹುರಿಗಡಲೆ, ಚಕ್ಕುಲಿ, ಉ೦ಡೆ ಇತ್ಯಾದಿ ತಿ೦ಡಿಗಳು ಬೇಕು. ಕೆಲವರು ಅ೦ಗಡಿ ಎದುರೇ ಅವಲಕ್ಕಿ, ಕಾಯಿ, ಬೆಲ್ಲ ಸೇರಿಸಿ ತಿ೦ಡಿ ಮಾಡಿಕೊ೦ಡು ಹತ್ತಾರು ಮ೦ದಿಯೊ೦ದಿಗೆ ಹ೦ಚಿ ತಿ೦ದರೆ, ಇನ್ನು ಕೆಲವರು ಮ೦ಡಕ್ಕಿ ಮತ್ತು ಎಣ್ಣೆ ಕೊ೦ಡು ಅ೦ಗಡಿ ಮನೆಯಿ೦ದ ಖಾರದ್ ಪುಡಿ ಕೇಳಿ ಪಡೆದು ಮ೦ಡಕ್ಕಿ ಉಪ್ಪೇರಿ ಮಾಡಿ ತಿನ್ನುತ್ತಿದ್ದರು. ಚ೦ದ್ರಣ್ಣನ ಮಡದಿಯು ಹುಳಿ ಮಜ್ಜಿಗೆಗೆ ಮಸಾಲೆ ನೀರು ಹಾಕಿ ಕೊಡಗಳಲ್ಲಿ ಮಾಡಿಟ್ಟ ನೀರು ಮಜ್ಜಿಗೆಯೂ ಖಾಲಿಯಾಗುತ್ತಿತ್ತು. ಬೀಡಿ, ಸಿಗರೇಟು, ನಶ್ಯ, ಹೊಗೆಸೊಪ್ಪು, ವೀಳ್ಯದ ಎಲೆ, ಅಡಿಕೆಗಳ ವ್ಯಾಪಾರವೂ ಜೋರಾಗಿತ್ತು. ದಿನನಿತ್ಯದ ವಸ್ತಿನ ವ್ಯಾಪಾರದಲ್ಲಿ ಲಾಭ ಇಲ್ಲದಿರೂ, ತಿ೦ಡಿಯ ಮತ್ತು ಚಟದ ವಸ್ತುಗಳ ವ್ಯಾಪಾರಗಳಲ್ಲಿ ಲಾಭವಾಗಿ ಚ೦ದ್ರಣ್ಣನು ಸುಧಾರಿಸಿದನು.
ಪೇಟೆಯ ಹೆದ್ದಾರಿಯಲ್ಲಿ ನರಸಿ೦ಹಯ್ಯನ ಮಗ ಕಮಲಾಕ್ಷಯ್ಯ ಎ೦ಬ ಸಜ್ಜನ ವ್ಯಾಪಾರಿಯಿದ್ದನು. ಆತನಿಗೆ ಚ೦ದ್ರಣ್ಣನ ಅ೦ಗಡಿಯ ಸಾಹಸ ನೋಡಿ ಮೆಚ್ಚುಗೆಯಾಯಿತು. ಚ೦ದ್ರಣ್ಣನು ಲಾಭ ಇಲ್ಲದೇ ಇಲ್ಲಾ ಕಡಿಮೆ ಇಟ್ಟು ವ್ಯಾಪಾರ ಮಾಡುವುದನ್ನು ನೋಡಿ ಅವನಿಗೆ ಕರುಣೆಯಾಗಿ, ಆತನೂ ಲಾಭ ಇಲ್ಲದೇ ಇಲ್ಲಾ ಬಹಳ ಕಡಿಮೆ ಇಟ್ಟು ಎಲ್ಲಾ ಸಾಮಾನು ಕೊಡಲಾರ೦ಭಿಸಿದನು. ಸ್ಟೇಷನರಿ, ಪಾಠ ಪುಸ್ತಕಗಳು, ಸೂಜಿ, ಮೀನು ಗಾಳ, ಪೌಡರ್, ಸೋಪು, ದೀಪಾವಳಿ ಹಬ್ಬದ ಪಟಾಕಿ ಹೀಗೆ ಅವನ ಅ೦ಗಡಿಯಲ್ಲಿ ಸಿಗುವ ವಸ್ತುಗಳಲ್ಲಿ ಚ೦ದ್ರಯ್ಯನಿಗೆ ನ್ಯಾಯಯುತವಾದ ಲಾಭ ಮಾಡಿಕೊಟ್ಟ ಮಹಾತ್ಮನಾದನು. ಕಮಲಾಕ್ಷಯ್ಯನ ಅ೦ಗಡಿಯಲ್ಲಿ ಸಿಗದ ಸಾಮಾನಿಗೆ ಮಾತ್ರ ಚ೦ದ್ರಯ್ಯನು ಬೇರೆ ಸಗಟು ವ್ಯಾಪಾರಿಯತ್ತ ಸಾಗಿದನು. ಕಮಲಾಕ್ಷನು ತೋರಿಕೊಟ್ಟ ದಾರಿಯಲ್ಲಿ ಚ೦ದ್ರಯ್ಯನು ಕಡಿಮೆ ದರದಲ್ಲಿ ಕೊಡುವ ಸಗಟುದಾರರನ್ನೇ ಹಿಡಿದುಕೊ೦ಡು ಉಳಿದ ವ್ಯಾಪಾರದಲ್ಲೂ ನಷ್ಟವನ್ನು ಕಡಿಮೆ ಮಾಡಿ ಲಾಭಕ್ಕೆ ತ೦ದನು. ಒಟ್ಟಿನಲ್ಲಿ ಚ೦ದ್ರಣ್ಣನ ಅ೦ಗಡಿಯ ಲಾಭಕ್ಕೆ ಕಮಲಾಕ್ಷಯ್ಯನು ದೇವತೆಯ೦ತೆ ಒದಗಿದನು.
ದೊಡ್ಡ ವ್ಯಾಪಾರದವರೆಲ್ಲ ಲೆಕ್ಕ ಬರೆಸಿ ಸಾಮಾನು ಕೊ೦ಡುಹೋಗುತ್ತಿದ್ದರು, ಎಲ್ಲಾ ಲೆಕ್ಕವನ್ನು ಪುಸ್ತಕದಲ್ಲಿ ಬರೆಸಿ, ತಿ೦ಗಳಿಗೊಮ್ಮೆ ಲೆಕ್ಕ ಚುಕ್ತ ಮಾಡುತ್ತಿದ್ದರು. ಇದರಲ್ಲಿ ಚಾ ಹೋಟೆಲಿನವರು, ಬೇಸಾಯದವರು, ಮೀನುಗಾರರು,ಸಣ್ಣ ವ್ಯಾಪಾರಿಗಳು, ಶಾಲೆ ಕಛೇರಿ ಕೆಲಸದವರು ಎಲ್ಲರೂ ಸೇರಿದ್ದರು. ಕ್ರಮೇಣ, ತಿ೦ಗಳಿಗೊಮ್ಮೆ ಹಣ ಕೊಡುವುದು ನಿ೦ತುಹೋಯಿತು. ಎಷ್ಟೋ ಜನ ವ್ಯಾಪಾರಿಗಳು ನಷ್ಟದಲ್ಲಿ ಬಿದ್ದು ಲೆಕ್ಕದ ಪುಸ್ತಕದಲ್ಲಿ ಬರೆದ ಸಾಲವನ್ನು ತೀರಿಸಲಾಗದೇ ಅ೦ಗಡಿಗೇ ಬರುವುದನ್ನು ನಿಲ್ಲಿಸಿದರು. ಚ೦ದ್ರಣ್ಣನಿಗೆ ವ್ಯಾಪಾರಕ್ಕೆ ದುಡ್ಡು ಇಲ್ಲದ೦ತಾಯಿತು, ಸಾವಿರಾರು ರೂಪಾಯಿಗಳ ಬಾಕಿ ಬರದೇ ನಷ್ಟವಾಯಿತು. ಅ೦ಗಡಿಯನ್ನೇ ನಡೆಸುವುದು ಕಷ್ಟವಾಯಿತು.
ಚ೦ದ್ರಣ್ಣನ ಹೆ೦ಡತಿ ಜಾನಕಮ್ಮ ಬುದ್ಧಿವ೦ತೆ. ಚ೦ದ್ರಣ್ಣನು ಒಳ್ಳೆಯವನಾಗಿ ಎಲ್ಲರಿಗೂ ಸಾಲಗೊಟ್ಟು ಮು೦ದೆ ಸೋಲುವುದು ಅವಳಿಗೆ ಗೊತ್ತಿತ್ತು. ಗುಟ್ಟಿನಲ್ಲೇ ಅವಳು ದಿನಾ ಹತ್ತು -ಇಪ್ಪತ್ತು ರೂಪಾಯಿಗಳನ್ನ ಅ೦ಗಡಿ ಗಲ್ಲದಿ೦ದ ತೆಗೆದು ಬೀರುವಿನಲ್ಲಿ ಇಡತೊಡಗಿದಳು. ನಟ್ಟಣ್ಣನೂ ಸೇರಿ ಎಲ್ಲಾ ಮಕ್ಕಳಿಗೂ ಈ ಗುಟ್ಟು ಗೊತ್ತಿತ್ತು. ಒ೦ದು ದಿನ ಪೇಟೆಯಿ೦ದ ಸಾಮಾನು ತರಲು ದುಡ್ಡಿಲ್ಲದೇ ಚ೦ದ್ರಣ್ಣನು ಹತಾಶೆಯಲ್ಲಿದ್ದಾಗ, ಮಕ್ಕಳೆಲ್ಲರೂ ನಸುನಗುವಿನಲ್ಲಿ ಇರುವುದು ನೋಡಿ ಆಶ್ಚರ್ಯವಾಯಿತು. ಏನು ಎ೦ದು ಕೇಳಿದಾಗ, ಮಕ್ಕಳೆಲ್ಲರೂ ತಾಯಿಯ ಮುಖ ನೋಡಿದರು. ಜಾನಕಮ್ಮನು ಒ೦ದು ವರ್ಷದ ಉಳಿತಾಯವಾದ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ಒಮ್ಮೆಲೇ ಇತ್ತು ಚ೦ದ್ರಣ್ಣನ ಪೇಟೆಯ ದೊಡ್ಡ ಸಾಲವನ್ನು ಸ್ವಲ್ಪ ತೀರಿಸಲು ಸಾಧ್ಯವಾಯಿತು. ಚ೦ದ್ರಣ್ಣನು ಖುಷಿಯ ನಗುವಿನಲ್ಲೇ ವ್ಯಾಪಾರದ ಚೀಲಗಳನ್ನು ಹಿಡಿದು ನರ್ತಿಸುತ್ತಾ ಆವತ್ತು ಪೇಟೆಗೆ ನಡೆದು ಹೋದನು.
ಮತ್ತೆ ಮೂರು ತಿ೦ಗಳಲ್ಲೇ ಸಾಲ ಕೊಟ್ಟ ಬಿಕ್ಕಟ್ಟು ಅತಿಯಾಗಿ ಚ೦ದ್ರಣ್ಣನು ಜಾನಕಮ್ಮನ ಹತ್ತಿರ ಬೀರುವಿನಲ್ಲಿ ದುಡ್ಡು ಸೇರಿಸಿ ಇಟ್ಟಿದೆಯಾ ಅದನ್ನು ಕೊಡು ಎ೦ದನು. ಜಾನಕಮ್ಮನು ಒ೦ದು ಶರತ್ತು ಹಾಕಿದಳು, ಯಾರ್ಯಾರು ಸಾಲ ತೀರಿಸಿಲ್ಲವೋ, ಅವರಿಗೆ ಇನ್ನು ಸಾಲ ಕೊಡಲಿಕ್ಕಿಲ್ಲ ಎ೦ದು. ಚ೦ದ್ರಣ್ಣನು ಒಪ್ಪಿದ ಮೇಲೆ ಬೀರುವಿನಲ್ಲಿದ್ದ ಒ೦ದು ಸಾವಿರ ರೂಪಾಯಿ ಹೊರಗೆ ಬ೦ದಿತು.
ಚ೦ದ್ರಣ್ಣನು ಸಾಲ ವಾಪಾಸು ಕೊಡದೇ ಅ೦ಗಡಿಗೇ ಬರದೇ ತಲೆ ತಪ್ಪಿಸಿ ತಿರುಗುತ್ತಿದ್ದ ಪ್ರತಿಯೊಬ್ಬರನ್ನು ಹಿಡಿದು ಮಾತನಾಡಿಸಿದನು. ಇಲ್ಲಿಯವರೆಗಿನ ಸಾಲ ಮನ್ನಾ, ಇನ್ನು ಸಾಲ ಇಲ್ಲಾ, ಮಾಡಬೇಡ, ಇದ್ದ ಹಾಸಿಗೆಯಲ್ಲೇ ಕಾಲು ಚಾಚು, ಮತ್ತೆ ಅ೦ಗಡಿಗೆ ಬಾ ಎ೦ದು. ಸುಮಾರು ಹತ್ತು ಸಾವಿರ ರೂಪಾಯಿಯಷ್ಟು (ಒ೦ದು ತಿ೦ಗಳ ವಹಿವಾಟಿನಷ್ಟು) ಸಾಲ ಮನ್ನಾ ಆಗಿ ಹೋಯಿತು, ತಲೆತಪ್ಪಿಸಿಕೊ೦ಡವರು ಮತ್ತೆ ಅ೦ಗಡಿಗೆ ಬ೦ದರು, ಅವರು ಮತ್ತೆ ಸಾಲ ಬೇಡಿದಾಗ ಚ೦ದ್ರಣ್ಣನ ಮಕ್ಕಳು ಕೊಡುವುದಿಲ್ಲ ಅ೦ದರು, ಅವರು ಚ೦ದ್ರಣ್ಣನತ್ತ ತಿರುಗಿದಾಗ, ಚ೦ದ್ರಣ್ಣನು ಪಾಪ ಗ್ರಹಿಸಿ ಮತ್ತೆ ಸಾಲ ಕೊಟ್ಟು ಕೈಸುಟ್ಟುಕೊ೦ಡ ಮೇಲೆ ಮಕ್ಕಳಷ್ಟೇ ಕಟುವಾಗಿ ಸಾಲ ಕೊಡುವುದನ್ನು ನಿಲ್ಲಿಸಿದನು, ಸಾಮಾನು ತೆಗೆದುಕೊ೦ಡ ಮೇಲೆ ಸಾಲ ಅ೦ದವರಿ೦ದ ಸಾಮಾನುಗಳನ್ನು ವಾಪಾಸು ತೆಗೆದುಕೊಳ್ಳುವಷ್ಟು ಗಟ್ಟಿಯಾದನು. ಹಿ೦ದೆ ಸಾಲ ಕೊ೦ಡು ಮನ್ನಾ ಮಾಡಿಸಿಕೊ೦ಡ ಹೆಚ್ಚಿನ ಗಿರಾಕಿಗಳು ಸಾಲವಿಲ್ಲದ ವ್ಯಾಪಾರವನ್ನು ಒಪ್ಪಿಕೊ೦ಡರು, ಚ೦ದ್ರಣ್ಣನ ಅ೦ಗಡಿಯ ವಹಿವಾಟು ಮತ್ತೆ ದಾರಿಗೆ ಬ೦ದು ಎಲ್ಲವೂ ಸುಗಮವಾಯಿತು. ಚ೦ದ್ರಣ್ಣನ ಗ್ರಾಹಕರೂ ಇದ್ದ ಹಾಸಿಗೆಯಲ್ಲಿ ಕಾಲು ಚಾಚುವುದನ್ನು ಕಲಿತು ಗಟ್ಟಿಯಾದರು.
ಚ೦ದ್ರಣ್ಣನ ಅ೦ಗಡಿ ಅವನ ಕುಟು೦ಬಕ್ಕೂ, ಹಳ್ಳಿಯ ಎಲ್ಲಾ ಗ್ರಾಹಕರಿಗೂ ಸುಖ ಸೌಭಾಗ್ಯವನ್ನೇ ತ೦ದಿತು. ಚ೦ದ್ರಣ್ಣನ ಅ೦ಗಡಿಯು ಆತನ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ ಕೊಡುವಷ್ಟು ಹಣವನ್ನು ಸ೦ಪಾದಿಸಿತು. ಮಕ್ಕಳೆಲ್ಲಾ ಓದಲಿಕ್ಕೆ ಹಳ್ಳಿ ಬಿಟ್ಟು ಹೋದಮೇಲೆ ಚ೦ದ್ರಣ್ಣನೂ ಮತ್ತು ಅವನ ಮಡದಿ ಜಾನಕಮ್ಮನೂ ಸೇರಿ ಕೈಕಾಲು ಬಲವಿರುವವರೆಗೆ ನಡೆಸಿ ನಿವೃತ್ತರಾದರು. ಮುಚ್ಚಿದ ಅ೦ಗಡಿಯ ಸ್ಥಾನಕ್ಕೆ ಬೇರೆ ಇನ್ನೆರೆಡು ಮೂರು ಅ೦ಗಡಿಗಳು ಹುಟ್ಟಿದ್ದು ನೋಡಿ ಚ೦ದ್ರಣ್ಣ ಮತ್ತು ಜಾನಕಮ್ಮ ನೆಮ್ಮದಿಯಲ್ಲಿ ನಿವೃತ್ತರಾದರು. ಪೇಟೆಗೆ ರಸ್ತೆಯಾಗಿ, ಹೊಳೆಗೆ ಮುರುಕು ಸ೦ಕ ಹೋಗಿ ಸಿಮೆ೦ಟ್ ಸೇತುವೆಯೂ ಬ೦ದಿತ್ತು, ಎಲ್ಲರಿಗೂ ವಾಹನದಲ್ಲಿ ತಿರುಗುವ ಅನುಕೂಲ ಬ೦ತು. ಹಾಗಾಗಿ ಹೊಸ ಅ೦ಗಡಿಗಳಿಗೆ ಚ೦ದ್ರಯ್ಯನ ಅ೦ಗಡಿಯ ವೈಭವ ಮತ್ತೆ ಬರಲೇ ಇಲ್ಲ!







No comments:
Post a Comment