Wednesday, August 3, 2016

ಕರಾವಳಿಯ ಕೋರಿ ರೋಟಿಯ ಕರಾಮತ್ತು ವಿಶ್ವವ್ಯಾಪಿಯಾಗಬೇಕಾಗಿದೆ!


ಕರಾವಳಿಯ ಕೋರಿ ರೋಟಿಯ ಕರಾಮತ್ತು ವಿಶ್ವವ್ಯಾಪಿಯಾಗಬೇಕಾಗಿದೆ!

ಬೆಂಗಳೂರಿನಲ್ಲಿನ ಮಂಗಳೂರು ಸ್ಟೋರಿಗೆ ಧಾಳಿಯಿಟ್ಟಾಗ ನೀವು ಅವಶ್ಯವಾಗಿ ಕೊಂಡುಕೊಳ್ಳಬೇಕಾಗಿದ್ದು ಕೋರಿ ರೋಟಿ, ಇದು ನಮ್ಮ ಕರಾವಳಿಯ ಅತೀ ಉನ್ನತವಾದ ಸಿದ್ಧ ಆಹಾರದ ಕೊಡುಗೆ. ಹತ್ತಿರ ಹತ್ತಿರ ಒಂದು ಕಿಲೋಗ್ರಾಮ್ ತೂಗುವ ಈ ಒಣದೋಸೆ ಭಾರೀ ರುಚಿ ಮತ್ತು ವಿಧವಿಧವಾಗಿ ಉಪಯೋಗಿಸಲು ಅನುಕೂಲಕರ, ಬರೇ ೫೦ ರೂಪಾಯಿಗೆ ಸಿಕ್ಕು ಭಾರೀ ಅಗ್ಗ!

ಪಾಶ್ಚಾತ್ಯರಾಗಿದ್ದರೆ, ಈವಾಗಲೇ ಇದನ್ನು ಬ್ರೆಡ್, ಪಿಜ್ಜಾ ಇತ್ಯಾದಿಗಳ ಹಾಗೆ ವಿಶ್ವವ್ಯಾಪಿಯಾಗಿ ಮನೆಮಾತಾಗಿ ಮಾರ್ಪಡಿಸುತ್ತಿದ್ದರು, ಆ ಕೆಲಸ ನಾವು ಕನ್ನಡಿಗರಿಂದ ಇದು ಆಗಬೇಕಾಗಿದೆ, ಆ ಮುನ್ನ, ಕರ್ನಾಟಕದಲ್ಲೇ ಇದು ಮನೆಮಾತಾಗಬೇಕಾಗಿದೆ.

ಒಣಗಿದ ದೋಸೆಯಾಗಿದ್ದು, ಗರಿಗರಿಯಾಗಿ ಕವರಿನಲ್ಲೇ ಉಳಿದಿದ್ದು, ಅಲ್ಲಲ್ಲಿ ಕೆಂಪು ಕೆಂಪಾಗಿ ಹುರಿದಿದ್ದು ಬರಿದೇ ತಿಂಡಿಯಾಗಿ ತಿನ್ನಲು ಅತಿಯೋಗ್ಯ. ಮೊಸರು, ಮಜ್ಜಿಗೆ, ಸಾಂಬಾರ್, ಸಾರಿನ ಜೊತೆಗೂ ತಿನ್ನಬಹುದು. ಮಾಂಸದ ಅಡಿಗೆಯ ಜೊತೆ ಇದು ಈಗಾಗಲೇ ಮನೆ ಮಾತಾಗಿದೆ. ಸಸ್ಯಾಹಾರಕ್ಕೂ ಅತಿಯಾಗಿ ಒಗ್ಗುವ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದಿರುವುದು ದುರದೃಷ್ಟ.

ಈ ಒಣದೋಸೆಯ ಉಪಯೋಗದ ಸುತ್ತ ಇನ್ನೂ ಹೆಚ್ಚಿನ ಕಾಯಕಲ್ಪ ಆಗಬೇಕಾಗಿದೆ. ಇದರ ಉಪ್ಪಿಟ್ಟು, ಒಗ್ಗರಣೆ, ಪಾಸ್ತಾ ಮತ್ತು ಪಾರ್ಮಿಜಿಯಾನಾ ಅಡಿಗೆ ತಯಾರಿ, ಪಾಯಸ, ಚಿತ್ರಾನ್ನ ಹೀಗೆ ನೂರಾರು ಬಗೆಯ ಅಡಿಗೆ ಮಾಡಿ ತೋರಿಸುವತ್ತ ಕಳಕಳಿಯ ಕರೆ.

ಸಧ್ಯಕ್ಕೆ ಬರೇ ಕರಾವಳಿಯಲ್ಲಿ ಗೃಹ ಕೈಗಾರಿಕೆಯಾಗಿರುವ ಈ ತಿಂಡಿ ಇಡೀ ಕರ್ನಾಟಕದ ಆಹಾರ ಮತ್ತು ಉದ್ಯಮವಾಗುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಧ್ಯಕ್ಕೆ ಇದು ಗೃಹ ಕೈಗಾರಿಕೆಯಾಗಿ ಉತ್ಪಾದಿತವಾಗುವ ದೃಶ್ಯ ಸುರುಳಿ ಅಂತರ್ಜಾಲದಲ್ಲಿದ್ದು, ಇಲ್ಲಿ ಅದರ ಕೊಂಡಿಯನ್ನು ಕೊಡಲಾಗಿದೆ, ಇದರ ತಯಾರಿಯ ಸರಳತೆ ಮತ್ತು ಸುಂದರತೆಯನ್ನು ಅವಶ್ಯ ನೋಡಿರಿ.

ಗೃಹ ಕೈಗಾರಿಕೆಯಾಗಿ ಕೋರಿ ರೋಟಿಯ ತಯಾರಿ

ಈ ದೋಸೆಯ ತಯಾರಿಯನ್ನು ಯಾಂತ್ರಿಕತೆಗೆ ಅಳವಡಿಸುವುದು ಸುಲಭ ಸಾಧ್ಯ, ಆ ಮೂಲಕ ಮೈಯ್ಯಾಸ್, ಎಮ್. ಟಿ. ಆರ್. ಅಂತಹವರಿಂದ ಇದು ಬೃಹತ್ ಸಿದ್ಧ ಆಹಾರದ ಉದ್ಯಮವಾಗಿ ಕರ್ನಾಟಕಕ್ಕೆ, ಕೃಮೇಣ ಭಾರತದುದ್ದಕ್ಕೂ ವಾಣಿಜ್ಯ ಮತ್ತು ಆರ್ಥಿಕ ಕ್ರಾಂತಿಯಾಗಿ ಪರಿವರ್ತಿಸುವತ್ತ ನಾವೆಲ್ಲ ಕೈಸೇರಿಸಬೇಕಾಗಿದೆ.

ಆಹಾರದ ಮೇಳಗಳಲ್ಲಿ ಪ್ರಚಾರ, ಇದರಿಂದ ತಯಾರಿಸಿದ ಅನೇಕ ಅಡಿಗೆಗಳ ಪ್ರಚಾರ, ಗೃಹ ಕೈಗಾರಿಕೆಯಾಗಿ ಸರಕಾರ, ಬ್ಯಾಂಕ್, ಸಹಕಾರಿ ಸಂಘಗಳ ಅರ್ಥಿಕ ಮತ್ತು ಇತರ ರೀತಿಯ ಪ್ರೋತ್ಸಾಹ ಮತ್ತು ತರಬೇತಿ, ಮಹಿಳೆಯರ ಸ್ವಸಹಾಯ ಸಂಘಗಳ ಮೂಲಕ ಇದರ ತಯಾರಿಯನ್ನು ಕರ್ನಾಟಕದ ಉದ್ದಕ್ಕೂ ಪಸರಿಸಿ, ಇದರ ಉಪಯೋಗವನ್ನೂ ಕ್ರಾಂತಿಕಾರಿಯಾಗಿ ಹೆಚ್ಚಿಸುವತ್ತ ಸಂಬಂಧಿಸಿದವರೆಲ್ಲಾ ವಾಲಬೇಕಾಗಿದೆ.

ಕೋರಿ ರೋಟಿ, ಬರೇ ಕರಾವಳಿಯ ಅರ್ಘ್ಯ ರತ್ನವಲ್ಲ, ಇಡೀ ಕರ್ನಾಟಕದ, ಭಾರತದ, ವಿಶ್ವದ ಅಮೂಲ್ಯ ಸಿದ್ಧ ಆಹಾರವಾಗಬೇಕಾಗಿದೆ, ಆ ಯೋಗ್ಯತೆ, ಸುಲಲಿತೆ, ರುಚಿ ಮತ್ತು ಅವಕಾಶ ಯಾವತ್ತೂ ಇದ್ದು, ನಾವು ಎಚ್ಚೆತ್ತು ವೈಯಕ್ತಿಕ ಮತ್ತು ಸಾಂಘಿಕವಾದ ಮುಂದಿನ ಹೆಜ್ಜೆಗಳನ್ನು ಇಟ್ಟು ಹೇಗೆ ಸಾಫ್ಟ್ವೇರಿನಿಂದ ಸಾವಿರಾರು ಕೋಟಿ ಆದಾಯ ಹುಟ್ಟಿಸುತ್ತಿದ್ದೇವೋ, ಹಾಗೇ ವಿಶ್ವವ್ಯಾಪಿ ರಫ್ತಿನ ಮೂಲಕ ಕೋರಿ ರೋಟಿಯಿಂದಲೂ ಅಷ್ಟೇ ಹಣಕಾಸಿನ ಉದ್ಯಮದ ಸಾಧ್ಯತೆ ಇದ್ದು ನಮ್ಮ ಜಡತನ ಕೊಡವಿ ಆ ದಿಕ್ಕಿನತ್ತ ಧಾವಿಸಬೇಕಾಗಿದೆ.

ಸಧ್ಯಕ್ಕೆ, ಮಂಗಳೂರು ಸ್ಟೋರುಗಳಿಗೆ ಧಾಳಿ ಇತ್ತು, ಅಲ್ಲಿನ ದಾಸ್ತಾನನ್ನೆಲ್ಲ ಖಾಲಿಮಾಡಿ, ಮನೆಯಲ್ಲಿ ವಿಧವಿಧವಾಗಿ ಉಪಯೋಗಿಸಿ ನನ್ನ ಈ ಮಾತುಗಳಲ್ಲಿ ಮೌಲ್ಯವಿದೆಯೇ ಇಲ್ಲವೇ ಎಂಬುದನ್ನು ಪ್ರತಿಪಾದಿಸಿಬೇಕಾಗಿ ವಿನಂತಿ!

ಮುಂದೆ ಇದರಿಂದ ತಯಾರಿಸಿದ ಬೇರೆ ಬೇರೆ ಖಾದ್ಯಗಳ ಮೆರವಣಿಗೆಯನ್ನು ಶೀಘ್ರದಲ್ಲೇ ನಿರೀಕ್ಷಿಸಿ!

ಕೋರಿ ರೋಟಿ ಬರೇ ಕರಾವಳಿಯದ್ದಲ್ಲ, ಕರ್ನಾಟಕದ್ದೂ ಆಗಿ, ಅಲ್ಲಿಗೇ ನಿಲ್ಲದೇ ವಿಶ್ವವ್ಯಾಪಿಯಾಗುವತ್ತನೀವು ಇದರ ದತ್ತು ತೆಗೆದುಕೊಳ್ಳುವುದು ಆ ಕುರಿತಾಗಿ ಮೊದಲ ಹೆಜ್ಜೆ ಎಂಬುದನ್ನು ಮರೆಯದಿರಿ!
ಮುಖಪುಸ್ತಿಕೆಯಲ್ಲಿ ಕೋರಿ ರೋಟಿಯಿ೦ದ ಸಸ್ಯಾಹಾರಿ ತಿನಿಸುಗಳ ಅಡಿಗೆ

No comments:

Post a Comment