Friday, August 13, 2021

ಉದಯವಾಗಲಿ ನಮ್ಮ ಚೆಲುವ ಭಾರ್ಗವನಾಡು!



ಆಗಸ್ಟ್‌ ೧೪, ೨೦೨೧


ಉದಯವಾಗಲಿ ನಮ್ಮ ಚೆಲುವ ಭಾರ್ಗವನಾಡು!

 

ಹಿನ್ನೆಲೆ:

ನಾನು ಉಡುಪಿ ಜಿಲ್ಲೆಯ, ಈಗ ಬ್ರಹ್ಮಾವರ ತಾಲೂಕಿನ, ಮೊದಲು ಕುಂದಾಪುರ ತಾಲೂಕಿನ, ಕೋಟದ ಹತ್ತಿರದ ಪಾರಂಪಳ್ಳಿಯವನು. ಕೋಟ ಕುಂದಾಪುರದ ಅಚ್ಛ ಕನ್ನಡವಾದ ಕುಂದಗನ್ನಡದ ಸಂಸ್ಕೃತಿಯಲ್ಲಿ ಅಲ್ಪಸಂಖ್ಯಾತನಾಗಿಯೇ ಬೆಳೆದು ಹದನಾಗಿ, ವಿಶ್ವಮಾನವತ್ವ, ರಾಷ್ಟ್ರೀಯತೆ, ಬಹುತ್ವ ಹಾಗೂ ಪ್ರಜಾಪ್ರಭುತ್ವಗಳನ್ನು ಒಪ್ಪಿಕೊಂಡವನು. ಈಗಿನ ಕರ್ನಾಟಕ ಎಲ್ಲಾ ಸ್ಥಳೀಯ ಸಂಸ್ಕೃತಿಗಳನ್ನು ಪ್ರೀತಿಸುವವನು. ಮುಖ್ಯವಾಗಿ ಕರ್ನಾಟಕದ ಹೊರಗೆ ಹೋಗಿರುವ ಕಾಸರಗೋಡಿನವರ ಕನ್ನಡ ಪ್ರೀತಿಗೆ ಶರಣಾದವನು. ಅಲ್ಲಿನ ಕನ್ನಡದವರ ದು:ಸ್ಥಿತಿ ಬಗ್ಗೆ ಉಳಿದ ಕನ್ನಡಿಗರ ಉದಾಸೀನದಿಂದ ಕಳವಳಗೊಂಡವನು.  ಅಲ್ಲಿನವರ ಪರವಾಗಿ, ಹೆಚ್ಚಾಗಿ ತಣ್ಣಗೇ ಇರುವ ನನ್ನ ರಕ್ತ ಬಿಸಿಯಾಗಿ ಕುದಿಯುದನ್ನು ಗಮನಿಸಿ ಚಡಪಡಿಸಿದವನು. ಇತ್ತೀಚೆಗೆ ಕರೋನಾ ವಿಷಯದಲ್ಲಿ ನಡೆದ ಗಡಿ ದಿಗ್ಭಂದನದ ಕಾರಣ ಕೇರಳ ರಾಜ್ಯಕ್ಕೆ ಸೇರಿದ ಕಾರಣಕ್ಕೆ ಕನ್ನಡವನ್ನು ಆರಾಧಿಸುವ, ಮಂಗಳೂರಿನೊಂದಿಗೆ ಹಾರ್ದಿಕ ಸಂಬಂಧ ಇಟ್ಟುಕೊಂಡಿರುವ ಈ ಕಾಸರಗೋಡಿನ ಬಾಂಧವರು ಮತ್ತಷ್ಟು ಕಿರುಕಳಕ್ಕೆ ಒಳಗಾಗಿರುವದನ್ನು ಗಮನಿಸಿ ನೊಂದವನು. ಕನ್ನಡದವರ ಉದಾಸೀನ ಪ್ರವತ್ತಿಗೆ ನಾ ಶರಣಾಗಿ, ಆಯಾ ಪ್ರದೇಶದ ಜನರು ಸಹಾಯಕ್ಕೆ ಕಾಯದೇ, ತಮ್ಮ ಆಶಯಗಳ ಹಿಂದೆ ಬಿದ್ದು ಜಯಶಾಲಿಯಾಗುವುದೇ ವಿಹಿತವೆಂಬ ತರ್ಕಕ್ಕೆ ಒಳಗಾದವನು. ಬೆಂಗಳೂರಿಗೆ ವಲಸೆಗೆ ಬಂದು ನೆಲೆ ನಿಲ್ಲುವ ಮುನ್ನ ನಾನು ಬಿಟ್ಟು ಬಂದ ಕರಾವಳಿಯ ಸಂಸ್ಕೃತಿಯ ಸುತ್ತ ನನ್ನ ಸಂಬಂಧವನ್ನು ಉಳಿಸಿ ಬೆಳೆಸುವತ್ತ ಸುಮಾರು ಐದಾರು ವರ್ಷಗಳ ಹಿಂದೆಯೇ “ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ” ಎಂಬ ಬ್ಲಾಗನ್ನು ಬರೆಯುತ್ತಾ ಹೋದವನು. (https://parushuramasrushtikathana.blogspot.com/2016/04/blog-post.html). 

ಹಾಗಾಗಿ ಕಾಸರಗೋಡಿನ ಕನ್ನಡದವರ ಬವಣೆಯ ಸುತ್ತ ಚಿಂತಿಸುತ್ತಾ ಈ ಕರಾವಳಿಯ ಸದಾಚೇತನವಾದ ಭಾರ್ಗವರ ಮೊರೆ ಹೋಗಿ ಪರಿಹಾರವೊಂದನ ಕಂಡುಕೊಂಡು ಹಂಚಿಕೊಳ್ಳಲು ಇಷ್ಟಪಡುವೆನು. ಇದರಲ್ಲಿ ಬಲಿಷ್ಟವಾದ ರಾಷ್ಟ್ರವನ್ನು ಕಟ್ಟುವತ್ತ ಬುದ್ಧಿವಂತಿಕೆಯ ಹಾಗೂ ಸಹೃದಯ ಸಹಯೋಗಗಗಳನ್ನು ಹುಟ್ಟಿಸುವತ್ತ ನನ್ನ ವೈಯಕ್ತಿಕ ಹಾಗೂ ಸಾಂಘಿಕ ಸೃಜನಶೀಲತೆಯನ್ನು ಅರ್ಪಿಸುವುದನ್ನು ಬಿಟ್ಟರೆ ಬೇರೆ ಯಾವುದೇ  ನನ್ನದಾದ ಸ್ವಾರ್ಥವಿಲ್ಲ. ವಿದೇಶದಲ್ಲಿ ಕೆಲಸದಲ್ಲಿದ್ದಾಗ ವಿದೇಶದಲ್ಲೇ ಹುಟ್ಟಿದ  ನಮ್ಮ ಮಕ್ಕಳು ವಿದೇಶದಲ್ಲಾಗಲಿ, ಇಲ್ಲಾಗಲಿ, ಎಲ್ಲೇ ಆಗಲಿ ನೆಲೆಯಾಗಲಿ, ವಿಶ್ವಪ್ರಜೆಯಾಗಿ ಬೆಳಗಲಿ ಎಂಬ ರೀತಿಯಲ್ಲಿ ಬೆಳೆಸುತ್ತಾ ವಿಶ್ವಪ್ರಜೆಯಾಗಿ ಮೊದಲು ನನ್ನನ್ನು ನಾ ಗುರುತಿಸಿಕೊಳ್ಳುವವನು. ಕನ್ನಡ ಮತ್ತು ಕರ್ನಾಟಕವನ್ನು ಪ್ರೀತಿಸವವನು, ಭಾರತವು ಬಲಿಷ್ಟವಾಗುವ ಸದಾ ಕನಸಿನಲ್ಲಿರುವವನು.

 

ಯಾಕೆ ಈ ಭಾರ್ಗವನಾಡು?


ಈ ಭಾರ್ಗವನಾಡು ಭಾರತದ ಅತೀ ವಿಶಿಷ್ಟ ಪ್ರದೇಶಗಳಲ್ಲೊಂದು. ಕರಾವಳಿಗೆ ತಾಗಿಕೊಂಡಿರುವ ಈ ಪ್ರದೇಶ ಸಾಂಸ್ಕೃತಿಕವಾಗಿ ಅತೀ ಶ್ರೀಮಂತ; ನೈಸರ್ಗಿಕವಾಗಿ ಅತೀ ಜೀವಂತ;  ಭಾಷೆ, ಜಾತಿ, ಮತ, ಧರ್ಮಗಳ ಆಧಾರದಲ್ಲಿ ಅನೇಕ ಸಾಂಸ್ಕೃತಿಕ ವಾಹಿನಿಗಳ ಮಧ್ಯೆಯೂ ಬಹುತ್ವದಲ್ಲಿ ಏಕತ್ವದ ವಿವೇಕವನ್ನು ಪ್ರತಿಪಾದಿಸುವ ಪ್ರಜ್ಞಾವಂತರ ಬೀಡು; ಯಕ್ಷಗಾನದಂತಹ ಶ್ರೀಮಂತ ಕಲೆ ಮತ್ತಿತರ ಅಭಿವ್ಯಕ್ತಿಗಳ ಮೂಲಕ ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಕುಂದಗನ್ನಡ, ಸಿದ್ಧಿ/ಹಾಲಕ್ಕಿ, ಕೊರಗ, ಕೊಡವ, ಮಲೆಯಾಳಿ ಇತ್ಯಾದಿ ಭಾಷೆಗಳ ನಡುವೆಯೂ ಕನ್ನಡವನ್ನು ಅತಿಯಾಗಿ ಪೋಷಿಸುವ ಮತ್ತು ಪ್ರೀತಿಸುವ ನೆಲ. ಬುದ್ಧಿವಂತಿಕೆ, ವಿದ್ವತ್ತು, ವ್ಯವಹಾರ, ಕ್ಷಾತ್ರ, ಸಹಯೋಗ, ಉದ್ಯಮ, ಕೃಷಿ, ಕಾಡು, ಪ್ರವಾಸೋದ್ಯಮ, ಆಸ್ತಿಕತೆ, ಧರ್ಮ, ರಾಷ್ಟ್ರೀಯತೆ, ಶಿಕ್ಷಣ, ಮೀನುಗಾರಿಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನೂ ಆವಿಷ್ಕಾರಗಳನ್ನೂ ಕೊಡುತ್ತಾ ಹೋಗಿ ಬಲಿಷ್ಟ ಭಾರತವನ್ನು ಕಟ್ಟುವತ್ತ ಮುಂಚೂಣಿಯಲ್ಲಿರಬಹುದಾದ ಜನಾಂಗ. ಅವರಿಗೆ ಪ್ರತ್ಯೇಕ ರಾಜ್ಯದ ಪರಿಕಲ್ಪನೆ ಅರ್ಥವತ್ತಾದುದು. ಆದರೆ ಈ ಪ್ರತ್ಯೇಕತೆ ಅವರನ್ನು  ಹೆಚ್ಚಿನ ನಾಯಕತ್ವ ಹಾಗೂ ಸಾಧನೆಗೆ ದೂಡಬೇಕೆ ಹೊರತು ಸಂಕುಚಿತಗೊಳಿಸುವತ್ತ ಅಲ್ಲ. ಹಾಗಾಗಿ ಬಹುತ್ತ ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಈಗ ಅವಗಣೆಗೆ ಒಳಗಾದ ಎಲ್ಲಾ ಉಪಸಂಸ್ಕೃತಿಯ ವಾಹಿನಿಗಳನ್ನು ಸೇರಿಸಿಕೊಂಡು ಒಂದು ಭವ್ಯವಾದ ನಾಡು ಅರಳಿದರೆ, ಬರೇ ಭಾರತ ದೇಶಕ್ಕಲ್ಲ, ನೆರೆಯ ಎಲ್ಲಾ ರಾಜ್ಯಗಳಿಗೂ ತನ್ನ ಕೊಡುಗೆಯನ್ನು ಈ ನವನಾಡು ಹೆಚ್ಚಿಸುತ್ತಾ ಹೋಗುತ್ತದೆ, ವಿದೇಶಗಳೊಂದಿಗಿನ ಸಹಯೋಗವೂ ಹೆಚ್ಚುತ್ತದೆ.

 

ಭಾರ್ಗವನಾಡಿಗೆ ಸೇರುವ ಪ್ರದೇಶಗಳು ಯಾವುವು:

ಪುರಾಣ ಯಾ ಇತಿಹಾಸದ ಆಧಾರದಲ್ಲಿ ಪರಶುರಾಮ ಕ್ಷೇತ್ರವೆಂದೆಣಿಸಿಕೊಂಡಿರುವ ಕಾರವಾರದಿಂದ ಕಾಸರಗೋಡಿನ ತನಕದ ಕರಾವಳಿ ಭಾರ್ಗವನಾಡಿನ ಜೀವನಾಡಿಯಾದರೆ, ಕರಾವಳಿಯ ಸಂಸ್ಕೃತಿ ಪ್ರಾಬಲ್ಯದ ಪಶ್ಚಿಮಘಟ್ಟದ ಪ್ರದೇಶಗಳೂ ಇಲ್ಲಿ ಸೇರಬಹುದು. ಉಪಸಂಸ್ಕೃತಿಯಿಂದ ಅವಜ್ಞೆಗೆ ಒಳಗಾದ ಕನ್ನಡ ಮೂಲದ ಕೊಡಗು ಕೂಡಾ  ಸೇರಬಹುದು. ಇತ್ತ ಪಶ್ಚಿ‍ಮಘಟ್ಟದ ಸಕಲೇಶಪುರ, ಕೊಪ್ಪ, ಶ್ರೀಂಗೇರಿ, ಹೊಸನಗರ, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಹಳಿಯಾಳ, ಬನವಾಸಿ ಇತ್ಯಾದಿಗಳು ಸೇರುವುದು ಇಲ್ಲಾ ಕರ್ನಾಟಕದಲ್ಲೇ ಉಳಿದು ಬಿಡುವುದು, ಆಯಾ ಪ್ರದೇಶದ ಜನರ ಪ್ರಜಾಪ್ರಭುತ್ವದ ಆಯ್ಕೆಗೇ ಬಿಡುವುದು ವಿಹಿತ. ಅದೇ ರೀತಿಯಲ್ಲಿ ಗಡಿನಾಡ ಕೆಲವು ಪ್ರದೇಶಗಳು ಸೇರುವಾಗ, ಮಲಯಾಳಂ ಪ್ರಾಬಲ್ಯದ ಕಾಸರಗೋಡಿನ ಕೆಲವು ಹೋಬಳಿಗಳು ಕೇರಳದಲ್ಲೇ ಉಳಿಯವತ್ತ, ಗೋವಾದೊಂದಿಗೆ ಹೆಚ್ಚು ಗುರುತಿಸಿಕೊಳ್ಳುವ ಕಾರವಾರದಂತಹ ಪ್ರದೇಶವು ಗೋವಾದೊಂದಿಗೆ ಸೇರಿಕೊಳ್ಳಬೇಕೆ ಇತ್ಯಾದಿ ನಿರ್ಧಾರಗಳು ಆಯಾ ಸ್ಥಳೀಯ ಮತದಾನಗಳ ಮೂಲಕ ನಿರ್ಧರಿತವಾಗುವುದು ವಿಹಿತ. ಒಟ್ಟಿನಲ್ಲಿ ಭಾರ್ಗವ ನಾಡಿನ ಉದಯದ ಪ್ರಕ್ರಿಯೆಯು ಅಖಿಲ ಭಾರತ ಮಟ್ಟದಲ್ಲಿ ಬಹುತ್ವದಲ್ಲಿ ಏಕತೆ, ಹಾಗೂ ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಮೆರೆಸುವ ಹೊಸ ಕ್ರಾಂತಿಕಾರೀ ಹೆಜ್ಜೆಯಾಗಿ ಭಾರತನ್ನು ಇನ್ನಷ್ಟು ಬಲಪಡಿಸಲಿ.

 

ಭಾರ್ಗವನಾಡಿನ ರಾಜಧಾನಿ ಯಾವುದು?

 ಮಂಗಳೂರು ಆರ್ಥಿಕತೆ ಹಾಗೂ ಉದ್ಯಮ ದೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದರೂ ಸಾಂಸ್ಕೃತಿಕ ರಾಜಧಾನಿಯಾಗಿರುವ ಉಡುಪಿ ಮಹಾನಗರವು ರಾಜಧಾನಿಯಾಗುವುದು ಸೂಕ್ತ, ಆ ಮೂಲಕ ತುಳುವಿನ ಪ್ರಾಬಲ್ಯದ ಜೊತೆಗೆ ಕನ್ನಡದ ಪ್ರಾಬಲ್ಯದ ಸಮತೋಲನ ಸಾಧ್ಯ. ಹಾಗೂ ಅನೇಕ ಉಪಸಂಸ್ಕೃತಿಗಳ ಸಮರ್ಥ ಪ್ರಾತಿನಿಧ್ಯದ ವೇದಿಕೆ ನಿರ್ಮಾಣ ಸಾಧ್ಯ. ಕುಂಜಾರುಗಿರಿಯಲ್ಲಿರುವ ಅಪರೂಪದ ಪರಶುರಾಮ ದೇವಸ್ಥಾನವೂ ನಾಡಿನ ಒಂದು ಸಂಕೇತವಾಗಿ ಬೆಳೆಯಲು ಸಾಧ್ಯ. ಪಶ್ಚಿಮಘಟ್ಟದ ಎಲ್ಲಾ ಪ್ರದೇಶಗಳ ಪ್ರಾತಿನಿಧ್ಯ ಸುಲಭ ಸಾಧ್ಯ.

 

ಭಾರ್ಗವನಾಡಿನ ಉದಯದ ಮೂಲಕ ಸ್ಥಳೀಯರಿಗೆ ಹೇಗೆ ಲಾಭ:

ಸಮುದ್ರ, ಕಾಡು, ಕೃಷಿಭೂಮಿ, ನದಿ ಇತ್ಯಾದಿ ನೈಸರ್ಗಿಕ ಸಂಪತ್ತುಗಳನ್ನು ಉಳಿಸಿ ಬೆಳೆಸುವತ್ತ ಸಾರ್ವಭೌಮತ್ವ

ಪ್ರವಾಸೋದ್ಯಮವನ್ನು ವಿಶ್ವ ದರ್ಜೆಗೆ ಕೊಂಡೊಯ್ಯುವುದು

ಯಕ್ಷಗಾನ, ಅನೇಕ ಭಾಷಾ ಪ್ರಾಧಿಕಾರ, ಭೂತಾರಾಧನೆ ಮುಂತಾದ ಸಾಂಸ್ಕೃತಿಕ ವಾಹಿನಿಗಳ ಮೂಲಕ ದೇಶದ ಸಾಂಸ್ಕೃತಿಕ ರಾಜಧಾನಿಯಾಗಿ ಹೊರಹೊಮ್ಮಿಕೆ

ಮೀನುಗಾರಿಕೆ, ಕೃಷಿ, ಕಾಡು ಉತ್ಪನ್ನಗಳ ಸುತ್ತಲಿನ ಸಾಂಪ್ರದಾಯಿಕ ಉದ್ಯಮಗಳ ಏಳಿಗೆಗೆ ಹೆಚ್ಚಿದ ಮಹತ್ವ

ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಆದಿವಾಸಿ ಇತ್ಯಾದಿ ಧರ್ಮ ಯಾ ಜೀವನ ಕ್ರಮ ಆಧಾರಿತ, ಅನೇಕ ಮತ ಜಾತಿ ಆಧಾರಿತ ಉಪಸಂಸ್ಕೃತಿಗಳ ಮಧ್ಯೆ ಹೆಚ್ಚಿನ ಸಂಸರ್ಗ ಹಾಗೂ ಸಹಯೋಗದತ್ತ ಹೆಜ್ಜೆಯಿಡುವತ್ತ ಸ್ಥಳೀಯ ನಾಯಕತ್ವ

ದೇಶದ ಶೈಕ್ಷಣಿಕ ರಾಜಧಾನಿಯಾಗಿ ಹೊರಹೊಮ್ಮಿಕೆ

ಕಾಸರಗೋಡು, ಕೊಡವ, ಸಿದ್ಧಿ, ಹಾಲಕ್ಕಿ, ಕೊರಗ, ಕುಂದಕನ್ನಡ, ಹವ್ಯಕ ಮುಂತಾದ ಅವಗಣಗೆ ಒಳಗಾದ ಉಪಸಂಸ್ಕೃತಿಗಳ ಪುನರುತ್ಥಾನ

ಪರುಶರಾಮ, ರಾಣಿ ಅಬ್ಬಕ್ಕ ದೇವಿ, ಕೋಟಿ ಚೆನ್ನಯ, ಕೊರಗಜ್ಜ, ಕದಂಬ ಮುಂತಾದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯ ಸ್ಫೂರ್ತಿಯ ಸುತ್ತ ನವ ರಾಷ್ಟ್ರ ನಿರ್ಮಾಣದತ್ತ ಈ ಪ್ರದೇಶದವರ ಮಾದರಿ ನಡೆವಳಿಕೆಯು ಹೊಸ ಸಾಧ್ಯತೆಗಳತ್ತ ಚಾಚಿಕೊಳ್ಳುವುದು.

ಎಲ್ಲಾ ನೆರೆ ರಾಜ್ಯಗಳೊಂದಿಗೆ ಹೆಚ್ಚಿದ ಸ್ನೇಹ, ಸಹಯೋಗ, ವ್ಯವಹಾರ ಇತ್ಯಾದಿ

ಗಲ್ಫ್‌ ದೇಶಗಳು, ಅಮೇರಿಕಾ, ಯುರೋಪ್‌, ಜಪಾನ್‌ ಇತ್ಯಾದಿ ದೇಶಗಳು ಸೇರಿದಂತೆ ಹೆಚ್ಚಿದ ವಿದೇಶೀ ವ್ಯವಹಾರ

GDPಯಲ್ಲಿ ವಾರ್ಷಿಕ ೨೦% ಏಳಿಗೆಯಂತಹ ಅಸಾಧ್ಯ ಸಾಧನೆಗಳನ್ನು ಮಾಡಿ ತೋರಿಸುವತ್ತ ಉದ್ಯಮಶೀಲತೆಯ ಹೊಸ ಸಾಹಸದ ಅನಾವರಣ

ಉತ್ತರಕನ್ನಡವನ್ನು ದಕ್ಷಿಣಕನ್ನಡವಾಗಿಸುವುದು, ದಕ್ಷಿಣಕನ್ನಡವನ್ನು ಉತ್ತರಕನ್ನಡವಾಗಿಸುವುದು ಈ ರೀತಿಯ ಆಶಯಗಳೊಂದಿಗೆ ಎಲ್ಲಾ ಭಾಗಗಳಲ್ಲಿ ಉತ್ಪಾದನೆ ಹಾಗೂ ಏಳಿಗೆಯನ್ನು ಹೆಚ್ಚಿಸುವುದು.

ಇನ್ನೂ ಅನೇಕ…

 

ಭಾರ್ಗವನಾಡಿನ ಉದಯದ ಮೂಲಕ ಭಾರತಕ್ಕೆ ಹೇಗೆ ಲಾಭ:

ಭಾರತದ ವ್ಯಾವಹಾರಿಕ ಕೇಂದ್ರ, ಔದ್ಯಮಿಕ ಕೇಂದ್ರ, ಪ್ರವಾಸೋದ್ಯಮ ಕೇಂದ್ರ,  ಸಾಂಸ್ಕೃತಿಕ ಕೇಂದ್ರವಾಗಿ ಭಾರ್ಗವನಾಡು ಹೊರಹೊಮ್ಮುವ ಮೂಲಕ ಭಾರತಾದ್ಯಂತ ಹೆಚ್ಚುವ   GDP, ಉದ್ಯಮ, ಏಳಿಗೆ, ಸ್ಫೂರ್ತಿ, ನಾಯಕತ್ವ

ವಿದೇಶೀ ಸಹಯೋಗದಲ್ಲಿ ಹೆಚ್ಚಳ

ರಾಷ್ಟ್ರ ನಿರ್ಮಾಣದತ್ತ ಇಲ್ಲಿಂದ ಹುಟ್ಟುವ ಸ್ಫೂರ್ತಿ, ನಾಯಕತ್ವ ಇಡೀ ದೇಶಕ್ಕೆ ಪಸರಿಸುವತ್ತ ಸಹಕಾರ

ಬಹುತ್ವದಲ್ಲಿ ಏಕತೆ, ಪ್ರಜಾಪ್ರಭುತ್ವದಲ್ಲಿ ಸುಧಾರಣೆ ಈ ಎರಡು ಮುಖ್ಯ ವಿಷಯಗಳ ಸುತ್ತ ಈ ಪ್ರದೇಶದ ಸೃಜನಶೀಲತೆ, ಪ್ರಾಯೋಗಿಕತೆ, ನಾಯಕತ್ವದ ಮೂಲಕ ಇಡೀ ದೇಶಕ್ಕೆ ಹೆಚ್ಚಿದ ಲಾಭ

ಇಲ್ಲಿನವರು ಈಗಾಗಲೇ ವಲಸೆ ಹೋಗಿ ಬೆಳೆಸುತ್ತಿರುವ ಮುಂಬೈ, ಬೆಂಗಳೂರು, ಹೈದರಾಬಾದ್‌, ಚೆನ್ನೈ, ಅಮೆರಿಕಾ, ಗಲ್ಪ್‌, ಸಿಂಗಾಪುರ, ಆಸ್ಟ್ರೇಲಿಯಾ, ಯೂರೋಪ್ ಮುಂತಾದ ಅನೇಕ ಪ್ರದೇಶಗಳ ಸುತ್ತ ಹೆಚ್ಚುವ ಸಹಯೋಗ ಹಾಗೂ ಸಂಸರ್ಗದ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ನವ ನಾಯಕತ್ವದತ್ತ ಹೆಚ್ಚಿನ ಕುಮ್ಮಕ್ಕು

ಇನ್ನೂ ಅನೇಕ....

 

ಮುಂದಿನ ಹೆಜ್ಜೆಗಳು:

ಇದೊಂದು ಸಧ್ಯಕ್ಕೆ ಕನಸಿನ ಮಾತಷ್ಟೇ. ಈ ಆಶಯದತ್ತ ಕಾಳನ್ನು ಹಚ್ಚಿಸುವ, ಜೊಳ್ಳನ್ನು ಹೋಗಲಾಡಿಸುವತ್ತ ಪ್ರಾಜ್ಞರ, ರಾಜತಾಂತ್ರಿಕರ, ನಾಯಕರ ಸಂಗಮವಾಗಲಿ, ಪ್ರಜಾಪ್ರಭುತ್ವದ ನೆಲೆಯಲ್ಲಿ ಮುಂದಿನ ಹೆಜ್ಜೆಗಳು ಅರಳಲಿ.

ಪರಶುರಾಮ ಕ್ಷೇತ್ರದ ಜನರು ಕನಿಷ್ಟ ೫೦ ಶೇಕಡಾ ಮತಗಳ ಮೂಲಕ ಈ ನಾಡಿನ ಉದಯವನ್ನು ಬೆಂಬಲಿಸುವುದಾದರೆ ಮಾತ್ರ ಈ ಪ್ರಕ್ರಿಯೆ ನಡೆಯಲಿ

ಗಡಿನಾಡ ಹೋಬಳಿಯ ಜನ ಮತದಾನದ ಮೂಲಕ ತಾವು ಯಾವ ರಾಜ್ಯಕ್ಕೆ ಸೇರಬೇಕೆಂಬ ನಿರ್ಧಾರ ಅವರೇ ಮಾಡಿಕೊಳ್ಳಲಿ.

ಎಲ್ಲಾ ಉಪಸಂಸ್ಕೃತಿಗಳ, ಪ್ರಾದೇಶಿಕವಾದ ಜನಾಂಗದವರು ಭಾರ್ಗವನಾಡಿನ ಯಶಸ್ಸು ಹೇಗೆ win-win ರೀತಿಯಲ್ಲಿ ತಮಗೂ ಲಾಭವಾಗುವಂತೆ, ಸಮಷ್ಟಿಗೆ ಲಾಭವಾಗುವಂತೆ ಎಲ್ಲಾ ಕಡೆಗಳ ಪ್ರಾತಿನಿಧ್ಯದ ಮೂಲಕ ಹೆಚ್ಚಿನ ಚಿಂತನೆ, ಕ್ರಿಯಾಶೀಲತೆ ಮೊಳಗಲಿ.

 

ಹೇಳಿಕೆ: 

ಈ ಕನಸಿನ ಮಾತಿನ ಮೂಲಕ ನನ್ನ ಕೊಡುಗೆ ಇಲ್ಲಿಗೇ ಮುಗಿಯುತ್ತದೆ. ಬೆಂಗಳೂರಿನವನಾದ ನಾನು ಕರ್ನಾಟಕದಲ್ಲೇ ಉಳಿಯುವೆ, ಆದರೆ ನಮ್ಮವರೇ ಆದ ಭಾರ್ಗವನಾಡಿನವರು ಬೇರೆಯಾಗಲಿ ಇಲ್ಲಾ ಹೀಗೆಯೇ ಇರಲಿ, ಅವರೊಂದಿಗೆ ಸದಾ ಗುರುತಿಸಿಕೊಳ್ಳುವೆ, ರಾಷ್ಟ್ರವಾದಿಯಾಗಿ, ವಿಶ್ವಮಾನವನಾಗಿ ಬೆಳೆಯುವತ್ತಲೇ ನನ್ನದಾದ ವೈಯಕ್ತಿಕ ಆಶಯ ಮುಂದುವರಿಯತ್ತದೆ. ಬಹುತ್ವದಲ್ಲಿ ಏಕತ್ವ, ಪ್ರಜಾಪ್ರಭುತ್ವಗಳ ಪ್ರತಿಪಾದಕನಾಗಿ ಒಡೆಯುವನಾಗದೇ ಕಟ್ಟುವವನಾಗುತ್ತೇನೆ, ಕಟ್ಟುವುದು ಬಲವಾಗುವುದಿದ್ದರೆ ಮಾತ್ರ ತಾತ್ಕಾಲಿಕವಾಗಿ ಒಡೆಯುವುದನ್ನು ಪರಿಗಣಿಸುತ್ತೇನೆ.

 

ಕಾಸರಗೋಡಿನ ಕನ್ನಡಿಗರ ಕಣ್ಣೀರ ಸುತ್ತ ಈ ರೀತಿಯ ಕನಸಿನ ಮೂಲಕ ಧನಾತ್ಮಕವಾದ ಹೊಸ ಆಶಯಗಳ ಮೂಲಕ ನನ್ನ ಸಹಾನುಭೂತಿ ಮತ್ತು ಸ್ನೇಹವನ್ನು ಪ್ರಕಟಪಡಿಸುತ್ತಾ ಈ ನನ್ನ ಪುಟ್ಟ ಸೃಜನಶೀಲ ಆಲೋಚನಾ ಪ್ರಯತ್ನವನ್ನು ಅವರಿಗೆ ಪ್ರೀತಿ ಗೌರವಗಳಿಂದ ಅರ್ಪಿಸುವೆ.

 

ನಮಸ್ತೆ

ನಟರಾಜ ಉಪಾಧ್ಯ    

2 comments:

  1. Tulunad region matra bete state āvad Kundapura bodanda Karnataka’g serad bakida Udupi Mangalore Bokka Kasargod Tulunad state d ippad Tulu Konkani Malayalam & Kannada official languages āvad Pudar Tulunad andh matra ippodu

    ReplyDelete
  2. ಇದು ಹಗಲುಗನಸು. ನಾಡನ್ನು ಒಡೆಯಲು ಶಂಕರಾಚಾರ್ಯರ ಹುಟದಟೂರಿನ ಅನುಯಾಯಿಗಳೂ ಕೇರಳವನ್ನೊಡೆಯಲು ಬಿಡಲಾರರು.ಸಂಪತ್ಭರಿತ ನಾಡನ್ನು ವಿಭಜಿಸಲು ಭಾರ್ಗವ ನಾಡ ಗಡಿ ಹೊರಗಿನ ರಾಜ್ಯದ ಹಾಲಿ ಆಡಳಿತಾರೂಢಿಗಳು ರಾಜಕೀಯ ದುರೀಣರು ಇರೋ ತನಕ ಕಷ್ಟದ ಮಾತು. ಸುಮ್ನೆ ಕಾಲಹರಣವಷ್ಟೆ. ತಮ್ಮ ಕಾಳಜಿಯನ್ನು ಮಾತ್ರ ಮೆಚ್ಚೋಣವಷ್ಟೆ.

    ReplyDelete